Homeಅಂಕಣಗಳುಬಹುಜನ ಭಾರತ; ದಲಿತ ಬರೆಹಗಳ ಹೊರದಬ್ಬಿದ ದೆಹಲಿ ವಿವಿ

ಬಹುಜನ ಭಾರತ; ದಲಿತ ಬರೆಹಗಳ ಹೊರದಬ್ಬಿದ ದೆಹಲಿ ವಿವಿ

- Advertisement -
- Advertisement -

ದುಪ್ಪಟ್ಟು ದಮನಕ್ಕೆ ತುತ್ತಾಗುವ ದಲಿತ ಆದಿವಾಸಿ ಹೆಣ್ಣುಮಕ್ಕಳು ಮತ್ತು ಅವರ ಸಂಘರ್ಷಗಳ ಕುರಿತ ’ಸಂಗಟಿ’, ’ಕೈಮಾರು’, ’ಎನ್ ಒಡಲ್ ಹಾಗೂ ’ದೋಪ್ದಿ’ ಕೃತಿಗಳನ್ನು ದೆಹಲಿ ವಿಶ್ವವಿದ್ಯಾಲಯ ತನ್ನ ಪಠ್ಯಕ್ರಮದಿಂದ ಹೊರಹಾಕಿದೆ.

ನೂರಾರು ತಲೆಮಾರುಗಳಿಂದ ಜಾತಿಪದ್ಧತಿಯ ಕ್ರೌರ್ಯದಡಿ ನಜ್ಜುಗುಜ್ಜಾಗಿರುವ ದಲಿತರ ಬದುಕು ಬವಣೆ ಅಸ್ಮಿತೆಗಳ ಕುರಿತ ಬರೆಹಗಳನ್ನು ಅದುಮಿ ಅದೃಶ್ಯಗೊಳಿಸಿ ತಿಪ್ಪೆ ಸಾರಿಸಿ ರಂಗೋಲಿ ಇಡುವ ಈ ಹುನ್ನಾರಕ್ಕೆ ಭಾರೀ ಪ್ರತಿಭಟನೆ ವ್ಯಕ್ತವಾಗಿದೆ.

ತಮಿಳು ದಲಿತ ಲೇಖಕಿಯರಾದ ಬಾಮಾ, ಸುಕೃತಾರಿಣಿ ಮತ್ತು ಆದಿವಾಸಿ ಭಾರತದ ಕತ್ತಲ ಲೋಕದ ಮೇಲೆ ಬೆಳಕು ಚೆಲ್ಲಿದ ಪ್ರಖ್ಯಾತ ಬಂಗಾಳಿ ಲೇಖಕಿ ಮಹಾಶ್ವೇತಾದೇವಿ ಅವರ ಕೃತಿಗಳನ್ನು ಪುನಃ ಪಠ್ಯಕ್ರಮಕ್ಕೆ ಸೇರಿಸುವಂತೆ ಸಾಹಿತಿಗಳು, ಕಲಾವಿದರು, ಸಂಘಟನೆಗಳು ಆಗ್ರಹಿಸಿವೆ.

ಭಾರತದ ಗತ ಮತ್ತು ವರ್ತಮಾನದ ಸಂಕೀರ್ಣವೂ ಭೇದಭಾವ ಭರಿತವೂ ಆದ ಸಾಮಾಜಿಕ-ಸಾಂಸ್ಕೃತಿಕ ವಾಸ್ತವಗಳನ್ನು ಬಿಂಬಿಸುವ ಈ ಕೃತಿಗಳನ್ನು ವಿದ್ಯಾರ್ಥಿಗಳು ಓದುವುದು ಅತ್ಯಗತ್ಯ. ಜಾತಿ ದಬ್ಬಾಳಿಕೆಯು ಬಗೆಬಗೆಯ ಗಂಡಾಳಿಕೆಯೊಂದಿಗೆ ಶಾಮೀಲಾಗಿ ಲಿಂಗಾಧಾರಿತ ದಮನ-ದಬ್ಬಾಳಿಕೆಯಲ್ಲಿ ತೊಡಗಿರುವ ಕೃತ್ಯವನ್ನು ಪದರಪದರಾಗಿ ಹೇಳುವ ಕೃತಿಗಳಿವು ಎಂದು ರೊಮಿಲಾ ಥಾಪರ್, ರಾಮಚಂದ್ರ ಗುಹಾ, ಜಿ.ಎನ್.ದೇವಿ, ಅರುಂಧತಿ ರಾಯ್, ಪೆರುಮಾಳ್ ಮುರುಗನ್, ಎ.ಮಂಗೈ, ಊರ್ವಶಿ ಬುಟಾಲಿಯ, ಆನಂದ ಪಟವರ್ಧನ್, ನಂದಿತಾ ದಾಸ್, ಶರ್ಮಿಲಾ ಟಾಗೋರ್, ಶಬಾನಾ ಅಜ್ಮಿ ಮುಂತಾದವರು ಪ್ರತಿಪಾದಿಸಿದ್ದಾರೆ.

ಈ ಪಠ್ಯಗಳೊಂದಿಗೆ ಸಂವಾದಿಸಿ ಕಲಿಯುವುದು ಸ್ವತಂತ್ರ ಭಾರತದ ವಿದ್ಯಾರ್ಥಿಗಳ ಹಕ್ಕು. ಉತ್ತಮ ಮತ್ತು ಸಮಾನ ಜಗತ್ತು ರೂಪುಗೊಳ್ಳುವ ಬಗೆಯಾದರೂ ಎಂತು? ಪರದೆ ಎಳೆದು ಮುಚ್ಚಿಹಾಕುವ ಈ ಭಯ ಯಾತಕ್ಕಾಗಿ ಎಂದು ಅವರು ಪ್ರಶ್ನಿಸಿದ್ದಾರೆ.

ಮಹಾಶ್ವೇತಾದೇವಿ

ಬಾಮಾ ಮತ್ತು ಸುಕೃತಾರಿಣಿ ನಮ್ಮ ನಡುವೆ ಜೀವಿಸಿರುವ ಲೇಖಕಿಯರು. ಅವರು ಚಿತ್ರಿಸಿರುವ ಬದುಕು ಬವಣೆ ಅತ್ಯಂತ ಸಮಕಾಲೀನ. ಅದರ ಮೇಲೆ ಪರದೆ ಎಳೆಯುವುದೇಕೆ? ಏನು ಹೆದರಿಕೆ? ದಶಕಗಳಿಂದ ಬಹುತೇಕ ಮೇಲ್ವರ್ಗದ ಲೇಖಕರ ಕೃತಿಗಳನ್ನೇ ಪಠ್ಯಕ್ರಮದಲ್ಲಿ ತುರುಕುತ್ತ ಬರಲಾಗಿದೆ. ದಲಿತ ಬಹುಜನರ ಬದುಕು ಬವಣೆಗಳನ್ನು ಅದೃಶ್ಯವಾಗಿಸಲಾಗಿದೆ ಎಂಬುದು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಆಕ್ರೋಶ.

ಮಹಾಶ್ವೇತಾ ಅವರ ದೋಪ್ದಿ ಸಣ್ಣಕತೆ ಅದರ ಬಹುಮೂಲ್ಯ ಅಕೆಡಮಿಕ್ ಪ್ರಸ್ತುತತೆಯ ಕಾರಣದಿಂದಾಗಿಯೇ 1999ರಿಂದ ಪಠ್ಯಕ್ರಮದಲ್ಲಿ ಉಳಿದು ಬಂದಿದೆ. ಭಾರತದ ಸೇನೆಯನ್ನು ಕೆಟ್ಟ ಬೆಳಕಿನಲ್ಲಿ ಚಿತ್ರಿಸಲಾಗಿದೆಯೆಂಬುದು ಅದನ್ನು ತೆಗೆದು ಹಾಕಲು ದೆಹಲಿ ವಿಶ್ವವಿದ್ಯಾಲಯ ನೀಡಿರುವ ಕಾರಣ.

ಹಾಗೆಯೇ ಮತ್ತೊಬ್ಬರ ಮನನೋಯಿಸಬಾರದೆಂಬ ಕಾರಣ ನೀಡಿ ದಲಿತ ಲೇಖಕಿಯರ ಕೃತಿಗಳನ್ನು ಹೊರದಬ್ಬಲಾಗಿದೆ. ಹಿಂದುತ್ವ ಪಾರಮ್ಯದ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಕಟ್ಟಲು ತಿಪ್ಪೆ ಸಾರಿಸಲಾಗುತ್ತಿರುವ ಕಾರ್ಯಸೂಚಿಯ ಭಾಗವಿದು. ಬಡತನವನ್ನು ನಿವಾರಿಸುವ ಕಾರ್ಯವೆಂದು ಹೇಳಿ ಬಡವರನ್ನೇ ನಿವಾರಿಸಲು ಹೊರಟಂತೆ. ದಲಿತ ಆದಿವಾಸಿ ಸಮುದಾಯಗಳ ಮೇಲೆ ಈಗಲೂ ಜರುಗಿರುವ ದಮನ ದೌರ್ಜನ್ಯಗಳನ್ನು ನಿವಾರಿಸುವ ಪ್ರಾಮಾಣಿಕ ಪ್ರಯತ್ನಗಳು ನಡೆಯಬೇಕು. ಆ ದೌರ್ಜನ್ಯಗಳನ್ನು ಮರೆಮಾಚಿ ಅವರ ಅಸ್ಮಿತೆಯನ್ನು ಇಲ್ಲವಾಗಿಸುವುದು ಪರಮ ಕ್ರೂರ ಕೃತ್ಯ. ಜನಸಮುದಾಯಗಳನ್ನು ಅಂಚಿಗೆ ತಳ್ಳಿ ಹುಗಿದುಹಾಕುವ ಇಂತಹ ಕೃತ್ಯಗಳಿಂದ ದೇಶವನ್ನು ಕಟ್ಟುವುದು ಸಾಧ್ಯವಿಲ್ಲ. ತೆಗೆದುಹಾಕಲಾಗಿರುವ ಪಠ್ಯಪುಸ್ತಕಗಳಲ್ಲಿ ಚಿತ್ರಿತವಾಗಿರುವ ಸ್ಥಿತಿಗಿಂತಲೂ ಭೀಕರ ಭೀಭತ್ಸಗಳು ಇಂದಿನ ಭಾರತದಲ್ಲಿ ನಿತ್ಯ ಜರುಗುತ್ತಲೇ ಇರುವುದು ಇಲ್ಲಿನ ಕ್ರೂರ ವಾಸ್ತವ.

ಸುಕೃತಾರಿಣಿ

ಆದಿವಾಸಿಗಳ ಅಕ್ಕ-ಅಮ್ಮನೆಂದೇ ಪ್ರೀತಿಯಿಂದ ಕರೆಯಿಸಿಕೊಂಡವರು ದಿವಂಗತ ಮಹಾಶ್ವೇತಾದೇವಿ. ’ದೋಪ್ದಿ’ (ದ್ರೌಪದಿ) ಅವರ ಬಹುಚರ್ಚಿತ ಸಣ್ಣ ಕತೆ. ಅದರ ಕಥಾನಾಯಕಿಯ ಹೆಸರು ದೋಪ್ದಿ. 70ರ ದಶಕದ ಪಶ್ಚಿಮ ಬಂಗಾಳದ ’ಸಜ್ಜನ ಕ್ರಾಂತಿಕಾರಿ’ಗಳೆಂದು ಕರೆಯಲಾದ ನಕ್ಸಲೀಯರ ಬೆಂಬಲಿಗ ಆದಿವಾಸಿ ದಂಪತಿಗಳ ಹೆಸರು ದೋಪ್ತಿ ಮತ್ತು ದುಲ್ನಾ ಮಾಝೀ. ’ಸಜ್ಜನ ಕ್ರಾಂತಿಕಾರಿ’ಗಳಿಗೆ ಗುಪ್ತ ಮಾಹಿತಿ ಒದಗಿಸುವ ಪತಿಪತ್ನಿ. ಆದಿವಾಸಿಗಳ ವಿರುದ್ಧ ದೌರ್ಜನ್ಯಗಳನ್ನು ಎಸಗಿದ ಬಲಿಷ್ಠ ಜಾತಿಯ ಭೂಮಾಲೀಕ ಸೂರ್ಯಕಾಂತ ಸಾಹುವಿನ ಹತ್ಯೆ ಸಂಬಂಧ ಇವರನ್ನು ಬಂಧಿಸಲಾಗುತ್ತದೆ. ದ್ರೌಪದಿಯನ್ನು ಚಿತ್ರಹಿಂಸೆ ಮತ್ತು ಅತ್ಯಾಚಾರಕ್ಕೆ ಗುರಿ ಮಾಡಲಾಗುತ್ತದೆ. ತನ್ನ ಸಹಚರರ ಹೆಸರು ವಿವರಗಳನ್ನು ಆಕೆ ಬಿಟ್ಟುಕೊಡುವುದಿಲ್ಲ.

ದೋಪ್ದಿಯ ಲೈಂಗಿಕ ಅಂಗಾಂಗಗಳು ಅತ್ಯಾಚಾರ ಮತ್ತು ಅಮಾನುಷ ಚಿತ್ರಹಿಂಸೆಯಿಂದ ಜರ್ಝರಿತಗೊಂಡಿರುತ್ತವೆ. ಕೈಕಾಲುಗಳ ಅಗಲಿಸಿ ಕಟ್ಟಿಹಾಕಿ ಇರುಳೆಲ್ಲ ಆಕೆಯ ’ಒಡಲನ್ನು ಸೀಳಲಾಗಿರುತ್ತದೆ’. ಯಾತನೆಯಿಂದ ಮೂರ್ಛೆ ಮತ್ತು ಎಚ್ಚರಗಳ ನಡುವೆ ಜೀಕುತ್ತ ಕಣ್ತೆರೆದಾಗ ಸಾವಿರ ಚಂದ್ರ ಸೂರ್ಯರು ಕಣ್ಣ ಮುಂದೆ ಗರಗರನೆ ತಿರುಗಿದಂತೆ… ಒಂದರ ನಂತರ ಮತ್ತೊಂದರಂತೆ ರಕ್ತಮಾಂಸದ ಜೀವಂತ ದಂಡಗಳು ಆಕೆಯನ್ನು ಬಗೆಯುತ್ತಲೇ ಇರುತ್ತವೆ.

ರಕ್ತಸಿಕ್ತ ಬೆತ್ತಲು ದೇಹದ ಆಕೆಯನ್ನು ಬೆಳಕು ಹರಿದ ನಂತರ ಸೇನಾಧಿಕಾರಿಯ ಮುಂದೆ ಹಾಜರುಪಡಿಸಲಾಗುತ್ತದೆ. ಪುರುಷಾಧಿಪತ್ಯವು ಹೆಣ್ಣಿನ ಮೇಲೆ ಹೇರಿರುವ ಲಜ್ಜೆಯ ಒಜ್ಜೆಯನ್ನು ತಿರಸ್ಕರಿಸುವ ದೋಪ್ದಿ ಅದಮ್ಯವಾಗಿ ಗಹಗಹಿಸುತ್ತಾಳೆ. ಮುರಿಯದ ಮನೋಬಲ ಆಕೆಯದು. ಅತ್ಯಾಚಾರವನ್ನು ಮತ್ತು ಬೆತ್ತಲನ್ನು ಹೆಣ್ಣನ್ನು ಪಳಗಿಸಲು ಬಳಸುವ ಪುರುಷನಿರ್ಮಿತಿಗೆ ಪ್ರತಿಯಾಗಿ ಅದೇ ಬೆತ್ತಲನ್ನು, ತಿರಸ್ಕಾರಭರಿತ ನಗೆಯೊಂದಿಗೆ ಹರಿತ ಹತಾರಿನಂತೆ ಝಳಪಿಸುತ್ತಾಳೆ.

ಜಾತಿಪದ್ಧತಿ, ಹಿಂದುತ್ವ, ಮೂಲಭೂತವಾದವನ್ನು ವಿರೋಧಿಸುವ ಲೇಖಕರ ಕೃತಿಗಳನ್ನು ಪಠ್ಯಕ್ರಮಗಳಿಂದ ತೆಗೆದುಹಾಕುವುದು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯ ಸಂಗತಿ. ಸುಕೃತಾರಿಣಿ ಅವರ ’ಕೈಮಾರು’ ಕೃತಿ ಮಲಬಾಚುವ ದಲಿತ ಹೆಣ್ಣುಮಕ್ಕಳ ಬವಣೆಯನ್ನು ಕುರಿತದ್ದು. ನಮ್ಮ ದೇಶ ಬಾಹ್ಯಾಕಾಶಕ್ಕೆ ಮಾನವರನ್ನು ಕಳಿಸುವಷ್ಟು ಪ್ರಗತಿ ಸಾಧಿಸಿದೆ, ಆದರೆ ಮನುಷ್ಯರ ಮಲವನ್ನು ದಲಿತ ಕುಲದ ಮನುಷ್ಯರು ಬಾಚುವ ಹೇಯ ಕೆಲಸವನ್ನು ಇನ್ನೂ ಮುಂದುವರೆಸಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ ಸುಕೃತಾರಿಣಿ. ಅವರು ಜಾತಿ ಅಸಮಾನತೆಗಳಿಲ್ಲದ ಸಮಾಜವೆಂದು ಭಾರತೀಯ ಸಮಾಜವನ್ನು ಜಗತ್ತಿಗೆ ತೋರಿಸಲು ಬಯಸುತ್ತಾರೆ. ಆದರೆ ಜಾತಿ ಅಸಮಾನತೆಗಳು ಈಗಲೂ ತುಂಬಿತುಳುಕಿವೆಯೆಂದು ನಮ್ಮ ಸಾಹಿತ್ಯ ಕೃತಿಗಳ ಮೂಲಕ ನಾವು ಸಾರುತ್ತಿದ್ದೇವೆ. ಅವರು ಇಂತಹ ಕೃತಿಗಳ ಕೊರಳಪಟ್ಟಿ ಹಿಡಿದು ಪಠ್ಯಕ್ರಮದಿಂದ ಆಚೆಗೆ ದಬ್ಬುವುದು ಸ್ವಾಭಾವಿಕವಲ್ಲವೇ ಎಂದು ಪ್ರಶ್ನಿಸುತ್ತಾರೆ.

ಬಾಮಾ

’ಕರುಕ್ಕು’ ಬರೆದ ಬಾಮಾ ತಮ್ಮ ’ಸಂಗಟಿ’ ಕೃತಿಯನ್ನು ತೆಗೆದು ಹಾಕಿರುವ ಕುರಿತು ಕೆಂಡಾಮಂಡಲ ಆಗಿದ್ದಾರೆ. ತಮ್ಮ ಈ ಸಿಟ್ಟು ಮುಂದೆ ಬರೆಯಲಿರುವ ಕೃತಿಗಳಲ್ಲಿ ಪ್ರತಿಫಲಿಸಲಿದೆ ಎಂದಿದ್ದಾರೆ. ಜಾತಿ ದೌರ್ಜನ್ಯಗಳು ಮತ್ತು ತಾರತಮ್ಯಗಳನ್ನು ಎದುರಿಸಿ ನಿಲ್ಲುವ ದಲಿತ ಹೆಣ್ಣುಮಕ್ಕಳ ಕತೆ ’ಸಂಗಟಿ’.

ಎರಡು ಸಾವಿರ ವರ್ಷಗಳಿಂದ ನಮ್ಮನ್ನು ಹೊಲಗೇರಿಗಳಿಗೆ ದಬ್ಬಲಾಗಿದೆ. ನಮ್ಮ ಚರಿತ್ರೆಗಳನ್ನು ಬರೆಯಲು ಬಿಟ್ಟಿಲ್ಲ. ಈ ಸರ್ಕಾರ ನಮ್ಮ ಕೊರಳು ಅದುಮತೊಡಗಿದೆ. ಆದರೇನಂತೆ, ನಾವು ಕೂಗದೆ ಬಿಡುವುದಿಲ್ಲ ಎಂದಿದ್ದಾರೆ.

’ಕರುಕ್ಕು’ ಇಂದು ಜಗತ್ತಿನ ಅನೇಕ ವಿಶ್ವವಿದ್ಯಾಲಯಗಳ ಸಾಹಿತ್ಯ ಪಠ್ಯ ಪಟ್ಟಿಯಲ್ಲಿ ಸೇರಿಹೋಗಿದೆ. ಭಾರತೀಯ ಭಾಷೆಗಳು ಮಾತ್ರವಲ್ಲದೆ, ಇಂಗ್ಲಿಷ್ ಸೇರಿದಂತೆ ಜಗತ್ತಿನ ಅನೇಕ ಭಾಷೆಗಳಿಗೆ ತರ್ಜುಮೆಯಾಗಿದೆ. ಪ್ರಶಸ್ತಿಗಳು ಸಮ್ಮಾನಗಳನ್ನು ಗಳಿಸಿಕೊಂಡಿದೆ. ರೂಢಿಗತ ವ್ಯಾಖ್ಯೆಗಳಿಗೆ ದಕ್ಕದ ಮೌಖಿಕ ನಿರೂಪಣೆ ’ಕರುಕ್ಕು’. ಸಾಮಾಜಿಕ-ಸಾಂಸ್ಕೃತಿಕ ಭೂಗೋಳಶಾಸ್ತ್ರವನ್ನು ತಲೆಕೆಳಗು ಮಾಡಿದ ಬರೆಹ. ಸಾಹಿತ್ಯದಲ್ಲಿ ಸೌಂದರ್ಯಪ್ರಜ್ಞೆ ಕುರಿತ ಕಲ್ಪನೆಯನ್ನು ಮುರಿದುಕಟ್ಟಿದ ಕೃತಿ.

ಅಶ್ಲೀಲ ಮಾತುಗಳು ಬಾಮಾ ಪಾತ್ರಗಳಿಗೆ ಸಾರ್ವಜನಿಕದಲ್ಲೂ ಬಲು ಸಲೀಸು. ಅದಕ್ಕೆ ಉದಾರವಾದಿ, ಸಹೃದಯೀ ಓದುಗರು ಮತ್ತು ವಿಮರ್ಶಕರು ಕೂಡ ಹುಬ್ಬು ಗಂಟಿಕ್ಕಿದ್ದರು.

ತಮ್ಮ ಅನುಭವ ವಲಯದ ಜನರನ್ನು ಅಚ್ಚ ಅವರಿರುವಂತೆಯೇ, ಅವರು ಅನುದಿನದ ಬದುಕಿನಲ್ಲಿ ನಡೆದು ನುಡಿದಂತೆಯೇ ಚಿತ್ರಿಸಿರುವುದಾಗಿಯೂ, ಅದನ್ನು ತಿದ್ದಿತೀಡಿ ಒಪ್ಪಓರಣಗೊಳಿಸುವ ಗೊಡವೆಗೆ ಹೋಗಿಲ್ಲವೆಂದೂ ಹೇಳುತ್ತಾರೆ ಬಾಮಾ. ಇಂತಹ ವಾಸ್ತವಿಕ ಚಿತ್ರಣ ಓದುಗರಿಗೆ ಕಿರಿಕಿರಿ ಉಂಟುಮಾಡಿದರೆ, ವ್ಯಗ್ರಗೊಳಿಸಿದರೆ ಅದು ಬರೆಹಗಾರ್ತಿಯ ತಪ್ಪೇ?

ತಮಿಳಿನ ಸಶಕ್ತ ದಲಿತ ಕವಿ ಎನ್.ಡಿ.ರಾಜಕುಮಾರ್ ಕವಿತೆಯೊಂದರ ಈ ಸಾಲುಗಳ ನೋಡಿ-

ನನ್ನ ಜಾತಿ ಸಮುದಾಯಗಳಿಗೆ ಸೇರದ ಇತರೆ ಓದುಗರು ಇದನ್ನು ಓದಿದಾಗ
ತಲೆಸುತ್ತು ಬಂದೀತು ಅವರಿಗೆ,
ನಗಾರಿಯಾಗಿ ಬಡಿದುಕೊಂಡೀತು ಗುಂಡಿಗೆ, ಅತಿಯಾಗಿ ಹೆಚ್ಚೀತು ಆವೇಗ,
ಕಡು ಕೆಂಪೇರಿ ಬೆಂದು ನೊಂದಾವು ಕಣ್ಣುಗಳು ಚುಚ್ಚಿ ಚುಚ್ಚಿ,
ಅಷ್ಟೇ ಅಲ್ಲ, ಕಲಿತದ್ದನ್ನೆಲ್ಲ ಮರೆತು ಹೊಸತಾಗಿ ಕಲಿಯುವರು ಅವರು ಮತ್ತೆ ಮತ್ತೆ…


ಇದನ್ನೂ ಓದಿ: ಸಂದರ್ಶನ; ಶೈಕ್ಷಣಿಕ ಮಂಡಳಿಗಳಲ್ಲಿ ರಾಜಕೀಯ ಹಸ್ತಕ್ಷೇಪ ನಿಲ್ಲಬೇಕು: ಡಾ. ವಿ.ಪಿ.ನಿರಂಜನಾರಾಧ್ಯ

ಇದನ್ನೂ ಓದಿ: ಪಠ್ಯಪುಸ್ತಕಗಳಿಗೂ ಪ್ರತಿಕ್ರಾಂತಿ; ಪಕ್ಷರಾಜಕೀಯಕ್ಕೆ ನೈಜ ಶಿಕ್ಷಣದ ಬಲಿ

ಇದನ್ನೂ ಓದಿ: ಮಹಾಶ್ವೇತಾದೇವಿ ಸೇರಿದಂತೆ ಹಲವು ದಲಿತ ಲೇಖಕರ ಪಠ್ಯ ಕೈಬಿಟ್ಟ ದೆಹಲಿ ವಿವಿ: ಭುಗಿಲೆದ್ದ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...