HomeUncategorizedಹೊಸ ಮುಖ್ಯಮಂತ್ರಿ ಒಕ್ಕೂಟ ತತ್ವದ ಆದರ್ಶಕ್ಕೆ ಆಗ್ರಹಿಸಿ ನಿಲ್ಲಲಿ

ಹೊಸ ಮುಖ್ಯಮಂತ್ರಿ ಒಕ್ಕೂಟ ತತ್ವದ ಆದರ್ಶಕ್ಕೆ ಆಗ್ರಹಿಸಿ ನಿಲ್ಲಲಿ

- Advertisement -
- Advertisement -

ಕರ್ನಾಟಕವು ಏಕೀಕರಣಗೊಂಡ ನಂತರ 19 ಮುಖ್ಯಮಂತ್ರಿಗಳನ್ನು ಕಂಡಿದೆ. ಈಗ 20ನೇ ಮುಖ್ಯಮಂತ್ರಿಯಾಗಿ ಕರ್ನಾಟಕ ಸರ್ಕಾರವನ್ನು ಮುನ್ನಡೆಸಲು ಬಸವರಾಜ್ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿಯಾಗಲು ಇದೇನು ಹಿತಕರ ಕಾಲಘಟ್ಟವಲ್ಲ. ಒಂದು ಕಡೆ ದೇಶ ಮತ್ತು ರಾಜ್ಯಗಳೆರಡರ ಆರ್ಥಿಕತೆ ಗಣನೀಯವಾಗಿ ಕುಸಿದಿದೆ. ಕೊರೊನಾ ಸಾಂಕ್ರಾಮಿಕ ಮಧ್ಯಮ ಮತ್ತು ಬಡಮಧ್ಯಮ ವರ್ಗದ ಜನರನ್ನು ಕಂಗೆಡಿಸಿದೆ. ಇಷ್ಟು ಸಾಲದು ಎಂಬಂತೆ ’ಭಿನ್ನ’ವಾದ ಬಿಜೆಪಿ ಪಕ್ಷದಲ್ಲಿ ಇರುವ ಆಂತರಿಕ ಭಿನ್ನಮತ ಹೊಸ ಮುಖ್ಯಮಂತ್ರಿಯವರ ಆಯ್ಕೆಯಿಂದ ಶಮನವಾಗುತ್ತದೆ ಎಂಬ ಯಾವ ಭರವಸೆಗಳೂ ಗೋಚರಿಸುತ್ತಿಲ್ಲ. ’ಹಳೆಯ’ ಆರ್‌ಎಸ್‌ಎಸ್ ಕಟ್ಟಾಳು ಯಡಿಯೂರಪ್ಪನವರನ್ನೇ ಇಳಿಸಲು ಪ್ರಯತ್ನಿಸಿದ ’ಹೊಸ’ ನಮೂನೆಯ ಆರ್‌ಎಸ್‌ಎಸ್‌ಗಳು, ಆರ್‌ಎಸ್‌ಎಸ್ ಮೂಲದವರಲ್ಲದ ವಲಸಿಗ ಬೊಮ್ಮಾಯಿ ಅವರನ್ನು ಎಷ್ಟು ಸುಸೂತ್ರವಾಗಿ ಕೆಲಸ ಮಾಡಲು ಬಿಡುತ್ತಾರೆ ಎಂದು ನೋಡುವಷ್ಟರಲ್ಲಿಯೇ ಬಹುಶಃ ಉಳಿದ ಒಂದೂ ಮುಕ್ಕಾಲು ವರ್ಷ ಕಳೆದುಹೋಗಬಹುದು. ಅಷ್ಟು ಹೊತ್ತಿಗೆ ಕರ್ನಾಟಕದ ಪಾಡೇನು ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟ. ಹಾಗಾಗದೆ ಇರಲಿ ಎಂದು ಸದ್ಯಕ್ಕೆ ಪ್ರಾರ್ಥಿಸೋಣ.

ಎಸ್ ಆರ್ ಬೊಮ್ಮಾಯಿ ಪ್ರಕರಣ ನೀಡಿದ ಕೊಡುಗೆ ನೆನಪಿರಲಿ

ಇಂದಿನ ಸಂದರ್ಭದಲ್ಲಿ ಒಕ್ಕೂಟ ಸರ್ಕಾರದ ಜೊತೆಗೆ ಸೆಣೆಸಿ ರಾಜ್ಯದ ಹಿತ ಕಾಯ್ದುಕೊಳ್ಳುವ ಧೈರ್ಯವನ್ನು ಮಾಡುವ ಯಾವುದೇ ಬಿಜೆಪಿ ರಾಜ್ಯ ಸರ್ಕಾರ ಇರುವುದಕ್ಕೆ ಸಾಧ್ಯವಿಲ್ಲ. ಅದು ತಮಗೆ ನ್ಯಾಯಬದ್ಧವಾಗಿ ಸಿಗಬೇಕಿರುವ ಜಿಎಸ್‌ಟಿ ಬಾಕಿ ಕೇಳುವುದಕ್ಕೆ ಇರಲಿ ಅಥವಾ ಸದ್ಯದ ಕೊರೊನಾ ಸನ್ನಿವೇಶದಲ್ಲಿ ತುರ್ತಾಗಿ ಸಿಗಬೇಕಿರುವ ಲಸಿಕೆಗೆ ಆಗ್ರಹ ಮಾಡುವುದಕ್ಕಾದರೂ ಇರಲಿ. ಆದರೆ ಬಸವರಾಜ ಬೊಮ್ಮಾಯಿಯವರ ತಂದೆ ಎಸ್ ಆರ್ ಬೊಮ್ಮಾಯಿಯವರ ಸರ್ಕಾರವನ್ನು ಅಂದಿನ ಕಾಂಗ್ರೆಸ್ ಆಡಳಿತದ ಒಕ್ಕೂಟ ಸರ್ಕಾರ ವಜಾ ಮಾಡಿದ ನಂತರ, ಎಸ್ ಆರ್ ಬೊಮ್ಮಾಯಿಯವರು ಸುಪ್ರೀಂ ಕೋರ್ಟ್‌ಗೆ ತೆರಳಿ, ಒಕ್ಕೂಟ ತತ್ವದ ವ್ಯಾಖ್ಯಾನವನ್ನು ನೆನಪಿಸುವುದಕ್ಕೆ ಕಾರಣೀಭೂತರಾದವರು. ಇದು ಬಸವರಾಜ್ ಬೊಮ್ಮಾಯಿಯವರಿಗೆ ಹೆಚ್ಚು ನೆನಪಿರುವ ಸಾಧ್ಯತೆ ಇದೆ. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಒಕ್ಕೂಟ ಸರ್ಕಾರದ ಅಡಿಯಾಳಲ್ಲ, ಬದಲಿಗೆ ರಾಜ್ಯ ಒಕ್ಕೂಟ ತತ್ವದಲ್ಲಿ ಸರ್ವ ಸ್ವತಂತ್ರ ಸಾರ್ವಭೌಮ ಎಂಬುದನ್ನು ನೆನಪಿಟ್ಟುಕೊಂಡು ಆಡಳಿತ ನಡೆಸಲಿ ಎಂಬುದು ಕೂಡ ಆರು ಕೋಟಿಗೂ ಮೀರಿದ ಕರ್ನಾಟಕದ ನಾಗರಿಕರ ಆಗ್ರಹ.

ಕೌಬೆಲ್ಟ್ ಹಿಂದುತ್ವ ರಾಜ್ಯದಲ್ಲಿ ನಡೆಯುವುದಿಲ್ಲ ಎಂಬ ಎಚ್ಚರಿಕೆ ಜಾಗೃತವಾಗಿರಲಿ

ಬಸವರಾಜ್ ಬೊಮ್ಮಾಯಿಯವರ ಆಯ್ಕೆಗೂ ಮುನ್ನ ಅತಿ ಹೆಚ್ಚು ಚರ್ಚೆಯಲ್ಲಿದ್ದ ಸಂಗತಿ ಕರ್ನಾಟಕದಲ್ಲಿ ಹಿಂದುತ್ವವನ್ನು ಉಚ್ಛ್ರಾಯ ಸ್ಥಿತಿಗೆ ತಲುಪಿಸುವ ಹಾರ್ಡ್‌ಕೋರ್ ಹಿಂದುತ್ವವಾದಿಗೆ ಮುಖ್ಯಮಂತ್ರಿ ಗಾದಿ ಒಲಿಯಲಿದೆ ಎಂಬ ಸುದ್ದಿ. ಹಿಂದುತ್ವ ಹಾರ್ಡ್ ಆಗಿರಲಿ ಅಥವಾ ಮೆತ್ತಗೆ ಮೃದುವಾಗಿರಲಿ ಅದು ಅಪಾಯಕಾರಿ ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ಕರ್ನಾಟಕದ ಮಟ್ಟಿಗೆ, ಇನ್ನೆಲ್ಲಾ ಬಿಟ್ಟು ದಿನಾಲು ೨೪ ಗಂಟೆ ಕೋಮು ವಿಷ ಕಾರಲು ಶಕ್ತಿ ಇದ್ದ ಹತ್ತಾರು ಸಚಿವರು ಹಿಂದಕ್ಕೆ ಸರಿದಿದ್ದಾರೆ ಎಂದರೆ ಬಿಜೆಪಿಯ ಹೈಕಮಾಂಡ್ ಮತ್ತು ಆರ್‌ಎಸ್‌ಎಸ್ ಥಿಂಕ್ ಟ್ಯಾಂಕ್‌ಗೆ ಕರ್ನಾಟಕದಲ್ಲಿರುವ ಪ್ರತಿರೋಧ ತುಸುವಾದರೂ ಅರ್ಥವಾಗಿರಲಿಕ್ಕೆ ಸಾಕು. ಇಲ್ಲಿ ಜಾತಿ ಐಡೆಂಟಿಟಿ ಸಂಘ ಪರಿವಾರ ಪ್ರತಿಪಾದಿಸುವ ’ನಾವೆಲ್ಲರೂ ಹಿಂದೂ ನಾವೆಲ್ಲರೂ ಒಂದು’ ಹಿಂದುತ್ವ ಸಿದ್ಧಾಂತಕ್ಕಿಂತ ಬಲಶಾಲಿಯಾಗಿದೆ ಎಂಬುದು ಒಂದು ಮಟ್ಟಿಗಿನ ನಿಜ ಸಂಗತಿಯಾದರೂ, ಅದನ್ನು ಮೀರಿದ ಒಂದು ಪ್ರಜ್ಞೆಯೂ ಕನ್ನಡಿಗರಲ್ಲಿ ಇದೆ ಅನ್ನುವುದೂ ನಿಜ. ಬಸವಣ್ಣ, ನಾಲ್ವಡಿ, ಕುವೆಂಪು, ಬಿ ಕೃಷ್ಣಪ್ಪ, ಬಿ ಬಸವಲಿಂಗಪ್ಪ ಆದಿಯಾಗಿ ಹಲವು ಧೀಮಂತರು ಕಟ್ಟಿಕೊಟ್ಟಿರುವ ಸಾಂಸ್ಕೃತಿಕ-ರಾಜಕೀಯ ಎಚ್ಚರಿಕೆಯ ಪರಂಪರೆಯೂ ಜನರ ಸ್ಮೃತಿಯಲ್ಲಿ ಎಲ್ಲೋ ಅಡಕವಾಗಿದೆ. ಅದು ಆಗಾಗ ಜಾಗೃತವಾಗುವುದಕ್ಕೂ ಸಾಧ್ಯತೆ ಇದೆ ಎನ್ನುವ ಎಚ್ಚರಿಕೆ ಹೊಸ ಮುಖ್ಯಮಂತ್ರಿಗಳಿಗೆ ಇರಲಿ. ಎಲ್ಲ ಸಮುದಾಯಗಳನ್ನು ಒಳಗೊಳ್ಳುವ ಬಹುತ್ವದ ರಾಜಕಾರಣವನ್ನು ಅವರು ಮರೆಯದಿರಲಿ.

PC: Mangalorean.com

ಭ್ರಷ್ಟಾಚಾರ ತಗ್ಗಲಿ; ಆಡಳಿತದಲ್ಲಿ ಹೊಸ ಹುರುಪು, ಪಾರದರ್ಶಕತೆ ಮತ್ತು ಚಾಕಚಕ್ಯತೆ ಇರಲಿ

ಭ್ರಷ್ಟಾಚಾರ ಕೊನೆಗೊಳಿಸುವ ಸರ್ಕಾರ ನೋಡಲು ಕರ್ನಾಟಕ ಜನತೆಗೆ ಯೋಗ ಯಾವಾಗ ಕೂಡಿಬರುತ್ತದೋ ತಿಳಿದಿಲ್ಲ. ಆದರೆ ಹಿಂದಿನ ಸರ್ಕಾರಕ್ಕಿಂತಲೂ ಉತ್ತಮ ಆಡಳಿತ ನಡೆಸಿ ಎಂದು ಹೊಸ ಸರ್ಕಾರ ಬಂದಾಗ ಕೇಳಿಕೊಳ್ಳುವುದನ್ನಾದರೂ ಮಾಡಬಹುದೇನೋ! ಉದಾಹರಣೆಗೆ ಶಿಕ್ಷಣ ಸಚಿವಾಲಯವನ್ನೇ ನೋಡಿ. ಕಳೆದ ಒಂದೂವರೆ ವರ್ಷಗಳಿಂದ ಕೊರೊನಾ ಸಾಂಕ್ರಾಮಿಕದಿಂದ ಲಕ್ಷಾಂತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಕೆಲಸಗಳಿಗೆ ಹೋಗುವಂತಾಗಿದೆ. ಆ ಮಕ್ಕಳ ಶಿಕ್ಷಣಕ್ಕೆ ಪರಿಹಾರ ಸಿಗುವಂತಹ ಒಂದು ಆರೋಗ್ಯಕರ ನೀತಿಯನ್ನು ಸೃಷ್ಟಿಸಲು ಶಿಕ್ಷಣ ಇಲಾಖೆಗೆ ಸಾಧ್ಯವಾಗಿಲ್ಲ. ಪರೀಕ್ಷೆಗಳನ್ನು ನಡೆಸುವುದೇ ಸಾಧನೆ ಎಂಬಂತೆ ನಡೆದುಕೊಳ್ಳುವ ಶಿಕ್ಷಣ ಸಚಿವರು ಹೆಸರಿಗೆ ದಕ್ಷರು ಮತ್ತು ಸಜ್ಜನರು. ಡಿಜಿಟಲ್ ಡಿವೈಡ್‌ನಿಂದ ಬಡಮಕ್ಕಳಿಗೆ ಆಗಿರುವ ಸಮಸ್ಯೆಯ ಬಗ್ಗೆ ಒಂದು ಪರಿಹಾರವನ್ನೂ ಈ ಸಚಿವರು ಸೂಚಿಸಿರುವ ಉದಾಹರಣೆಯಿಲ್ಲ. ಹಲವಾರು ಶಿಕ್ಷಣ ತಜ್ಞರನ್ನು ಒಳಗೊಂಡಿರುವ ಕರ್ನಾಟಕದಲ್ಲಿ ಸಲಹೆಗೇನೂ ಬರವಿರಲಿಲ್ಲ ಅಲ್ಲವೇ?

ಇದು ಒಂದು ಇಲಾಖೆಯ ಉದಾಹರಣೆಯಾದರೆ ಕೃಷಿ, ಕಾರ್ಮಿಕ, ಆರೋಗ್ಯ, ವಸತಿ, ಸಾರಿಗೆ ಹೀಗೆ ಯಾವ ಇಲಾಖೆಯನ್ನೂ ತೆಗೆದುಕೊಂಡರೂ ಸಮಸ್ಯೆಗಳ ಆಗರವಾಗಿದೆ. ಸಾಮಾನ್ಯ ಜನರ ಸಮಸ್ಯೆಗೆ ಮಿಡಿಯುವವರಿಲ್ಲದೆ ಆಡಳಿತ ಕುಂಟುವುದನ್ನೂ ನಿಲ್ಲಿಸಿ ಮಕಾಡೆ ಮಲಗಿದೆ. ಹೊಸ ಸಚಿವ ಸಂಪುಟ ಈ ಕೊರತೆಗಳನ್ನು ನೀಗಿಸುವ ನಿಟ್ಟಿನಲ್ಲಿ ತಮಗೆ ಸಿಕ್ಕಿರುವ ಈ ಸಣ್ಣ ಆದರೆ ಸವಾಲಿನ ಸಮಯದಲ್ಲಿ ಕೆಲಸ ಮಾಡುವಂತಾಗಲಿ. ಇದಕ್ಕೆ ನೂತನ ಮುಖ್ಯಮಂತ್ರಿಗಳು ಸ್ಪೂರ್ತಿಯಾಗಿ,
ಆದರ್ಶಪ್ರಾಯವಾಗಿ ಕೆಲಸ ಮಾಡಿ ರಾಜ್ಯವನ್ನು ಮುನ್ನಡೆಸಲಿ.


ಇದನ್ನೂ ಓದಿ: ಯಡಿಯೂರಪ್ಪ ಪದಚ್ಯುತಿ; ದುಃಖಕ್ಕೂ ಸಂಭ್ರಮಕ್ಕೂ ಯೋಗ್ಯವಲ್ಲದ ಬದಲಾವಣೆ

ಇದನ್ನೂ ಓದಿ: ಸರ್ವಾಧಿಕಾರದ ಧೋರಣೆಗೆ ವಿರುದ್ಧವಾಗಿ ಪ್ರಜಾಸತ್ತಾತ್ಮಕ ಮೌಲ್ಯಗಳ ’ಸರ್‌ಪಟ್ಟ ಪರಂಪರೈ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...