ನೂತನ ಸಂಸತ್ ಭವನ ನಿರ್ಮಾಣಕ್ಕೆ ಕಾರ್ಯಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಅಡಿಗಲ್ಲು ಹಾಕಿದ್ದಾರೆ. ಇಂಡಿಯಾ ಗೇಟ್ ಬಳಿ ದೆಹಲಿಯ ಹೃದಯಭಾಗದಲ್ಲಿ ಹೊಸ ಸಂಸತ್ ಕಟ್ಟಡದ ಭೂಮಿಪೂಜೆಯನ್ನು ನೆರವೇರಿಸಿರುವ ಪ್ರಧಾನಿ ಮೋದಿ, ನಂತರ ಅಡಿಗಲ್ಲು ಹಾಕಿದ್ದಾರೆ.
ಸಂಸತ್ತಿನ ಹೊಸ ಕಟ್ಟಡವು 20,000 ಕೋಟಿ ರೂಪಾಯಿಗಳ ಸೆಂಟ್ರಲ್ ವಿಸ್ತಾ ಯೋಜನೆಯ ಪ್ರಮುಖ ಭಾಗವಾಗಿದೆ. ತ್ರಿಕೋನ ಆಕಾರದಲ್ಲಿ ನಿರ್ಮಾಣವಾಗಲಿರುವ ಸಂಸತ್ ಭವನದ ಜತೆಗೆ ಕೇಂದ್ರೀಯ ಸಚಿವಾಲಯಗಳು ಮತ್ತು ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ 3 ಕಿ.ಮೀ ಉದ್ದದ ರಾಜ್‌ಪತ್ ಮಾರ್ಗವನ್ನು ಪುನರುಜ್ಜೀವನಗೊಳಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಭೂಮಿ ಪೂಜೆ ಸಮಾರಂಭವು ಮಧ್ಯಾಹ್ನ 12:55 ಕ್ಕೆ ನಡೆಯಿತು. ಮಧ್ಯಾಹ್ನ 1 ಗಂಟೆಗೆ ಸಂಸತ್ ಭವನಕ್ಕೆ ಅಡಿಪಾಯ ಹಾಕಲಾಗಿದೆ.
ಆದರೆ, ಪ್ರಧಾನಿಯವರೇ ಅಡಿಗಲ್ಲು ಹಾಕಿದರು ಕೂಡ ಸಂಸತ್ ಭವನದ ನಿರ್ಮಾಣವನ್ನು ತಕ್ಷಣ ಪ್ರಾರಂಭಿಸಲು ಸಾಧ್ಯವಿಲ್ಲ. ಏಕೆಂದರೆ, ಈ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ಇನ್ನು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದೆ.
ಇದನ್ನೂ ಓದಿ: ಸೆಂಟ್ರಲ್ ವಿಸ್ತಾ ಹೊಸ ಸಂಸತ್ ಭವನಕ್ಕೆ ಡಿಸೆಂಬರ್‌ನಲ್ಲಿ ಪ್ರಧಾನಿಯಿಂದ ಅಡಿಪಾಯ!
ಉದ್ದೇಶಿತ ನಾಲ್ಕು ಅಂತಸ್ತಿನ ಕಟ್ಟಡವು 64,500 ಚದರ ಮೀಟರ್ ವಿಸ್ತೀರ್ಣದಲ್ಲಿದ್ದು, ಅಂದಾಜು 971 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಆಗಸ್ಟ್ 2022 ರಲ್ಲಿ ದೇಶದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ ನಿರ್ಮಾಣವು ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಇತ್ತ, ದೆಹಲಿಯಲ್ಲಿ ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದರಿಂದ ದೆಹಲಿಯ ಗಡಿಯಲ್ಲಿ ಟ್ರಾಫಿಕ್ ಜಾಮ್‌ಗಳು ಮುಂದುವರೆದಿವೆ. ನಿನ್ನೆ ಕೇಂದ್ರ ಸರ್ಕಾರ ಕಳುಹಿಸಿದ್ದ ವಿವಾದಿತ ಕೃಷಿ ಕಾನೂನುಗಳ ಬದಲಾವಣೆಯ ಪ್ರಸ್ತಾಪವನ್ನು ರೈತರು ನಿರಾಕರಿಸಿದ್ದಾರೆ.
ಹರಿಯಾಣಕ್ಕೆ ಹೋಗುವ ಮತ್ತು ಅಲ್ಲಿಂದ ಪ್ರಯಾಣಿಸುವ ಪ್ರಯಾಣಿಕರು ದೌರಾಲಾ, ಕಪಶೇರಾ, ಬದುಸರೈ, ರಾಜೋಕ್ರಿ ಎನ್ಎಚ್ -8, ಬಿಜ್ವಾಸನ್, ಪಾಲಂ ವಿಹಾರ್ ಮತ್ತು ದುಂಡಾಹೇರಾ ಗಡಿಗಳಲ್ಲಿ ಒಂದೇ ಮಾರ್ಗ ಬಳಸಬಹುದು ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಡಿಸೆಂಬರ್ 12 ರಿಂದ ದೆಹಲಿ-ಜೈಪುರ ಹೆದ್ದಾರಿಯನ್ನು ನಿರ್ಬಂಧಿಸುವುದಾಗಿ ರೈತ ಸಂಘಗಳು ಎಚ್ಚರಿಸಿವೆ. ಜೊತೆಗೆ ನರೇಂದ್ರ ಮೋದಿ ಸರ್ಕಾರ ಉತ್ತೇಜನ ನೀಡುತ್ತಿರುವ ಅಂಬಾನಿಯ ರಿಲೆಯನ್ಸ್ ಉತ್ಪನ್ನಗಳ ವಿರುದ್ಧ ಕರೆ ನೀಡಿದ್ದ ಬಾಯ್ಕಾಟ್ ಅಭಿಯಾನಕ್ಕೆ ದೇಶಾದ್ಯಂತ ಭಾರಿ ಬೆಂಬಲ ವ್ಯಕ್ತವಾಗಿದೆ.
ದೇಶದ ಅನ್ನದಾತರು ರಸ್ತೆಗೆ ಬಂದು ನ್ಯಾಯಕ್ಕಾಗಿ ಆಗ್ರಹಿಸುತ್ತಿರುವಾಗ, ಹಸಿವು, ಬಡತನ ದೇಶದಲ್ಲಿ ತಾಂಡವವಾಡುತ್ತಿರುವಾಗ ನೂತನ ಭವನಕ್ಕೆ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿರುವ ಕುರಿತು ಆಕ್ರೋಶ ಕೂಡ ವ್ಯಕ್ತವಾಗಿದೆ.
ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು, ’ಹೊಸ ಸಂಸತ್ ಭವನದ ಶುಭಾಷಯಗಳು!!
ಎಲ್ಲಾ ರಾಜಕೀಯ ಮುಖಂಡರಿಗೆ ಮತ್ತು ವಿಶೇಷವಾಗಿ ಸರ್ಕಾರಕ್ಕೆ ನಾಚಿಕೆಯಾಗಬೇಕು. ಸುಪ್ರೀಂ ಕೋರ್ಟ್ ನಿಷೇಧಿಸಿದ ನಂತರವೂ ಉದ್ಘಾಟನೆ ಮಾಡುವವರಿಗೆ ನಾಚಿಕೆಯಾಗಬೇಕು’ ಎಂದಿದ್ದಾರೆ.
नया संसद भवन मुबारक हो!! Shame to all political leaders and specially Govt. who is going to inaugurate even after supreme court banned!! #नयासंसदभवन pic.twitter.com/bRY5ku2Qu8
— Harison@Happy (@Harison15917535) December 10, 2020


