Homeಕರ್ನಾಟಕ'ಒಂದು ಪೈಸೆ ಪರಿಹಾರ ನೀಡಿಲ್ಲ; ಕನ್ನಡಿಗರ ಬಗ್ಗೆ ನಿಮಗೆ ಯಾಕಿಷ್ಟು ದ್ವೇಷ..'; ಅಮಿತ್ ಶಾ ಮುಂದೆ...

‘ಒಂದು ಪೈಸೆ ಪರಿಹಾರ ನೀಡಿಲ್ಲ; ಕನ್ನಡಿಗರ ಬಗ್ಗೆ ನಿಮಗೆ ಯಾಕಿಷ್ಟು ದ್ವೇಷ..’; ಅಮಿತ್ ಶಾ ಮುಂದೆ ಸರಣಿ ಪ್ರಶ್ನೆಗಳನ್ನಿಟ್ಟ ಸಿಎಂ

- Advertisement -
- Advertisement -

ಲೋಕಸಭಾ ಚುನಾವಣಾ ತಯಾರಿಗಾಗಿ ಬೆಂಗಳೂರಿಗೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತಗೆದುಕೊಂಡಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು, ಬರ ಪರಿಹಾರದ ಕುರಿತು ಸರಣಿ ಪ್ರಶ್ನೆಗಳನ್ನಿಟ್ಟಿದ್ದಾರೆ.

ಈ ಕುರಿತು ತಮ್ಮ ಹೇಳಿಕೆ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ, ‘ಗೃಹ ಸಚಿವರಾದ ಅಮಿತ್ ಶಾ ಅವರೇ, ನೀವು ಕರ್ನಾಟಕಕ್ಕೆ ಬರುವುದು ಕನ್ನಡಿಗರಿಗೆ ಕೊಡುವುದಕ್ಕೋ, ಕಿತ್ತುಕೊಳ್ಳುವುದಕ್ಕೋ? ಕರ್ನಾಟಕದ ಶಾಂತಿ, ನೆಮ್ಮದಿ ಮತ್ತು ಸೌಹಾರ್ದತೆಯನ್ನು ಉಳಿಸುವುದಕ್ಕೋ, ಕೆಡಿಸುವುದಕ್ಕೋ? ನೀವು ಕರ್ನಾಟಕಕ್ಕೆ ಕಾಲಿಟ್ಟಾಗೆಲ್ಲ ಕನ್ನಡಿಗರ ಮನಸ್ಸಿನಲ್ಲಿ ಇಂತಹದ್ದೊಂದು ಪ್ರಶ್ನೆ ಹುಟ್ಟಿಕೊಳ್ಳಲು ನೀವೇ ಕಾರಣವಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

‘ಮಳೆ ಕೊರತೆಯಿಂದಾಗಿ ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಅಂದಾಜು ₹33,770 ಕೋಟಿಯಷ್ಟು ನಷ್ಟವಾಗಿದೆಯೆಂದು ರಾಜ್ಯ ಸರ್ಕಾರ ಸಮೀಕ್ಷೆ ನಡೆಸಿ ಅಂದಾಜು ಮಾಡಿತ್ತು. ಇದರಲ್ಲಿ ಕನಿಷ್ಠ ₹17,901 ಕೋಟಿ ಪರಿಹಾರವನ್ನಾದರೂ ನೀಡಬೇಕೆಂಬುದು ಕರ್ನಾಟಕದ ಬೇಡಿಕೆ. ಇದಕ್ಕಾಗಿ ಪತ್ರದ ಮೇಲೆ ಪತ್ರ ಬರೆದೆವು, ಪ್ರಧಾನಿಯವರ ಜೊತೆ ಬರಪರಿಹಾರ ನೀಡುವ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರಾದ ನಿಮ್ಮನ್ನೂ ಭೇಟಿಯಾದೆವು. ಈ ವರೆಗೆ ಒಂದು ಪೈಸೆ ಪರಿಹಾರ ನೀಡಿಲ್ಲ. ಕರ್ನಾಟಕ-ಕನ್ನಡಿಗರ ಬಗ್ಗೆ ಯಾಕೆ ನಿಮಗೆ ಇಷ್ಟು ದ್ವೇಷ’ ಎಂದು ಹೇಳಿದ್ದಾರೆ.

‘ಒಂದು ವಾರದೊಳಗೆ ಉನ್ನತಾಧಿಕಾರ ಸಮಿತಿಯ ಸಭೆ ಕರೆಯುತ್ತೇನೆ ಎಂದು ಕಳೆದ ಸೆಪ್ಟೆಂಬರ್‌ನಲ್ಲಿ ನೀವು ನನಗೆ ಆಶ್ವಾಸನೆ ಕೊಟ್ಟಿದ್ದೀರಿ. ವಾರ ಕಳೆದು ತಿಂಗಳುಗಳ ಮೇಲೆ ತಿಂಗಳುಗಳು ಕಳೆದುಹೋಯಿತು. ಇಲ್ಲಿಯವರೆಗೆ ನೀವು ಸಭೆಯನ್ನೂ ಕರೆದಿಲ್ಲ, ಬರಪರಿಹಾರವನ್ನೂ ನೀಡಿಲ್ಲ ಯಾಕೆ’ ಎಂದಿದ್ದಾರೆ.

‘ಈ ಅನ್ಯಾಯ ಇದೇ ಮೊದಲ ಸಲವೇನಲ್ಲ, 2017ರಲ್ಲಿಯೂ ಕರ್ನಾಟಕದಲ್ಲಿ ಬರಗಾಲ ಬಂದಿತ್ತು. ಇದರಿಂದಾಗಿ ಅಂದಾಜು ₹30,000 ಕೋಟಿಯಷ್ಟು ನಷ್ಟ ಉಂಟಾಗಿತ್ತು. ಆಗ ಕೇಂದ್ರ ಸರ್ಕಾರ ನೀಡಿದ್ದು ಕೇವಲ ₹1,435 ಕೋಟಿ ಪರಿಹಾರ. ಅದೇ ವರ್ಷ ಮಹಾರಾಷ್ಟ್ರಕ್ಕೆ ₹8,195 ಕೋಟಿ ಮತ್ತು ಗುಜರಾತ್‌ಗೆ ₹3,894 ಕೋಟಿ ಪರಿಹಾರ ನೀಡಲಾಗಿತ್ತು. 2019ರಲ್ಲಿ ರಾಜ್ಯದಲ್ಲಿ ಬಿಜೆಪಿ ಪಕ್ಷದ್ದೇ ಸರ್ಕಾರವಿದ್ದಾಗಲೂ ಅತಿವೃಷ್ಟಿಯಿಂದಾಗಿರುವ ಹಾನಿಗೆ ಪರಿಹಾರ ನೀಡದೆ ಸತಾಯಿಸಿದ್ದೀರಿ. ಕನ್ನಡಿಗರು ನಿಮಗೆ ಏನು ಅನ್ಯಾಯ ಮಾಡಿದ್ದಾರೆ. ಬಿಜೆಪಿಯನ್ನು ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಅವಕಾಶ ನೀಡದಿರುವುದೇ ಅಪರಾಧವಾಗಿ ಹೋಯಿತೇ’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

‘ಕರಾವಳಿಯ ರೈತರೇ ಕಟ್ಟಿ ಬೆಳೆಸಿದ್ದ ವಿಜಯಾ ಬ್ಯಾಂಕನ್ನು ನುಂಗಿದ್ದು ಗುಜರಾತಿನ ಬರೋಡಾ ಬ್ಯಾಂಕ್. ಕಾಂಗ್ರೆಸ್ ನಾಯಕರ ಪ್ರಯತ್ನದಿಂದ ನಿರ್ಮಾಣಗೊಂಡಿದ್ದ ಬಂದರು ಮತ್ತು ವಿಮಾನನಿಲ್ದಾಣಗಳನ್ನು ನಮ್ಮಿಂದ ಕಿತ್ತುಕೊಂಡದ್ದು ಗುಜರಾರ್‌ನ ಉದ್ಯಮಿ ಅದಾನಿ. ಗುಜರಾತಿಗಳಿಗೆ ಕನ್ನಡಿಗರು ಶತ್ರುಗಳಾ?
ನಮ್ಮ ರೈತರೇ ಕಟ್ಟಿರುವ ಕರ್ನಾಟಕದ ಹೆಮ್ಮೆಯ ಕೆಎಂಎಫ್ ಅನ್ನು ಗುಜರಾತ್‌ನ ಅಮುಲ್ ಜೊತೆ ವಿಲೀನಗೊಳಿಸಲು ಹೂಡಿದ್ದ ಸಂಚನ್ನು ಕನ್ನಡಿಗರು ಮರೆತಿಲ್ಲ. ರಾಜ್ಯದಲ್ಲಿ ಆ ಕಾಲದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ನೆರವಿನಿಂದ ಒಂದಷ್ಟು ದಿನ ನಂದಿನಿ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಮಾಯಮಾಡಿ ಅಮುಲ್ ಉತ್ಪನ್ನಗಳು ಎಲ್ಲೆಲ್ಲೂ ರಾರಾಜಿಸುವಂತೆ ಮಾಡಿದ್ದು ನೀವೇ ಅಲ್ಲವೇ? ನಮ್ಮ ನಂದಿನಿಯನ್ನು ಉಳಿಸಲು ಕರ್ನಾಟಕದಾದ್ಯಂತ ಸ್ವಾಭಿಮಾನಿ ಕನ್ನಡಿಗರು ಎದ್ದು ನಿಂತಾಗ ಬೇರೆ ದಾರಿ ಕಾಣದೆ ನಿಮ್ಮ ದುರಾಲೋಚನೆಯನ್ನು ಕೈಬಿಟ್ಟದ್ದು ನಿಜ ಅಲ್ಲವೇ’ ಎಂದು ಅವರು ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಗೃಹ ಸಚಿವ ಅಮಿತ್ ಶಹಾ ಅವರೇ, ಕರ್ನಾಟಕದಲ್ಲಿ ಮತಕೇಳುವ ಮೊದಲು ಕನ್ನಡಿಗ ಮತದಾರರ ಪ್ರಶ್ನೆಗಳಿಗೆ ಉತ್ತರಿಸಿ. ಜಗತ್ತಿನ ಯಾವ ಭಾಷೆಗೂ ನಮ್ಮ ವಿರೋಧ ಇಲ್ಲ. ಆದರೆ ಕನ್ನಡದ ನೆಲದಲ್ಲಿ ಕನ್ನಡ ಭಾಷೆಗೆ ಮೊದಲ ಪೂಜೆ ಸಲ್ಲಬೇಕೆನ್ನುವುದು ಮಾತ್ರ ಕನ್ನಡಿಗರ ನಿಲುವು. ಕನ್ನಡ ಧ್ವಜವನ್ನು ರೂಪಿಸಿ ಅಂಗೀಕಾರಕ್ಕಾಗಿ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಕಳಿಸಿ ಆರು ವರ್ಷಗಳಾಗುತ್ತಾ ಬಂದರೂ ಇಲ್ಲಿಯ ವರೆಗೆ ಅದಕ್ಕೆ ಅನುಮೋದನೆ ನೀಡಿಲ್ಲ. ಕನ್ನಡ ಧ್ವಜದ ಬಗ್ಗೆ ಯಾಕೆ ನಿಮ್ಮ ವಿರೋಧ? ಉತ್ತರ ಕೊಡಿ’ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

‘ಹಿಂದಿ ಎನ್ನುವುದು ರಾಷ್ಟ್ರಭಾಷೆ ಎನ್ನುವ ಸುಳ್ಳನ್ನು ಮತ್ತೆ ಮತ್ತೆ ಹೇಳಿ ಆ ಭಾಷೆಯನ್ನು ಕನ್ನಡಿಗರ ಮೇಲೆ ಹೇರುತ್ತಿರುವುದು ಯಾಕೆ? ಹಿಂದಿ ರಾಷ್ಟ್ರಭಾಷೆ ಎನ್ನುವುದನ್ನು ಸಂವಿಧಾನ ಹೇಳಿದೆಯೇ? ಹೇಳಿದ್ದರೆ ಸಂವಿಧಾನದ ಯಾವ ಪರಿಚ್ಚೇದಲ್ಲಿ ಹೇಳಲಾಗಿದೆ? ದಯವಿಟ್ಟು ಅದನ್ನು ಕನ್ನಡಿಗರ ಮುಂದೆ ತೆರೆದಿಡಿ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆಯ ಆಧಾರದಲ್ಲಿ ಮತಕೇಳುವ ವಿಶ್ವಾಸ ನಿಮಗೆ ಇಲ್ಲ. ಮಾಡಿರುವ ತಪ್ಪುಗಳನ್ನು ಒಪ್ಪಿಕೊಳ್ಳುವ ಸಹೃದಯತೆಯೂ ನಿಮಗೆ ಇಲ್ಲ. ರಾಜಕೀಯ ಲಾಭಕ್ಕಾಗಿ ಸಮಾಜದ ಶಾಂತಿ-ಸೌಹಾರ್ದತೆಯನ್ನು ಕೆಡಿಸಬಾರದೆಂಬ ಒಳ್ಳೆಯತನದ ವಿವೇಕವೂ ನಿಮಗೆ ಇಲ್ಲ. ನೀವು ನೀಡಿರುವ ಸಲಹೆಯಂತೆಯೇ ತಾವು ಗಲಭೆ ನಡೆಸುತ್ತಿರುವುದಾಗಿ ಮೈಸೂರಿನ ಮಾಜಿ ಸಂಸದನೊಬ್ಬ ಬಹಿರಂಗ ಹೇಳಿಕೆ ನೀಡಿದ್ದಾನೆ. ನೀವು ಹೋದಲ್ಲಿ ಬಂದಲ್ಲಿ ಗಲಭೆ ನಡೆದು ಶಾಂತಿ ಭಂಗವಾಗುತ್ತಿರುವುದಕ್ಕೆ ಇದೇ ಕಾರಣವೇ” ಎಂದು ಪ್ರಶ್ನಿಸಿದ್ದಾರೆ.

‘ಮಾನ್ಯ ಅಮಿತ್ ಶಾ ಅವರೇ, ಕರ್ನಾಟಕಕ್ಕೆ ಅನ್ಯಾಯ ಮಾಡಬೇಡಿ, ಕನ್ನಡಿಗರಿಗೆ ದ್ರೋಹ ಎಸಗಬೇಡಿ, ಕನ್ನಡ ಭಾಷೆಯನ್ನು ತುಳಿಯಲು ಹೋಗಬೇಡಿ, ರಾಜ್ಯದ ಶಾಂತಿ ಮತ್ತು ನೆಮ್ಮದಿಯನ್ನು ಕೆಡಿಸಲು ಹೋಗಬೇಡಿ. ನಿಮ್ಮ ಸರ್ಕಾರದ ಸಾಧನೆಯನ್ನು ಜನತೆಯ ಮುಂದಿಟ್ಟು ಮತಯಾಚನೆ ಮಾಡಿ. ಇದರಿಂದ ಗೌರವದ ಸೋಲನ್ನಾದರೂ ಪಡೆಯಬಹುದು. ಇದರ ಹೊರತಾಗಿ ಅಡ್ಡಮಾರ್ಗದ ಮೂಲಕ ಚುನಾವಣೆಯನ್ನು ಎದುರಿಸಲು ಹೊರಟರೆ ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶವೇ ಲೋಕಸಭಾ ಚುನಾವಣೆಯಲ್ಲಿ ಪುನರಾವರ್ತನೆಯಾಗುವುದು ಖಂಡಿತ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ; ದೆಹಲಿ ಅಬಕಾರಿ ನೀತಿ ಪ್ರಕರಣ: ಎಎಪಿ ನಾಯಕ ಸಂಜಯ್ ಸಿಂಗ್ ಜಾಮೀನು ನೀಡಿದ ಸುಪ್ರೀಂಕೋರ್ಟ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಗಳ ವಿಚ್ಛೇದನ: ಸಿಹಿ ಹಂಚಿ, ಮೆರವಣಿಗೆಯಲ್ಲಿ ಆಕೆಯನ್ನು ಮನೆಗೆ ಕರೆತಂದ ನೀವೃತ್ತ ನ್ಯಾಯಾದೀಶ ಮತ್ತು ಕುಟುಂಬ

ಮೀರತ್: ಕೌಟುಂಬಿಕ ನ್ಯಾಯಾಲಯದಲ್ಲಿ ಮಗಳ ವಿಚ್ಛೇದನ ಅಂತಿಮವಾದ ನಂತರ ಆಕೆಯನ್ನು ಡೋಲು, ನೃತ್ಯಗಳ ಮೆರವಣಿಗೆಯಲ್ಲಿ ಸಂಭ್ರಮದಿಂದ ತಂದೆ ಮನೆಗೆ ಕರೆತಂದ ಘಟನೆ ಮೀರನ್ ನಲ್ಲಿ ನಡೆದಿದೆ.  ಪೋಷಕರ ಬೆಂಬಲದ ಅಪರೂಪದ ಮತ್ತು ಹೃದಯಸ್ಪರ್ಶಿ ಪ್ರದರ್ಶನದಲ್ಲಿ,...

“ನೀನು ನಿಜವಾಗಿಯೂ ಅಂಬೇಡ್ಕರ್ ಮಗಳಾ ಎಂದು ತಿಳಿಯಲು ನಾವು ನಿನ್ನ ಡಿಎನ್‌ಎ ಟೆಸ್ಟ್ ಮಾಡುತ್ತೇವೆ” ದೆಹಲಿ ಸಭೆಯಲ್ಲಿ ದಲಿತ ಟ್ರಾನ್ಸ್ ಹೋರಾಟಗಾರ್ತಿ ಗ್ರೇಸ್ ಬಾನುಗೆ ಜಾತಿ ನಿಂದನೆ ಆರೋಪ

ಕೇಂದ್ರ ಸರ್ಕಾರದ ವಿವಾದಾತ್ಮಕ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026ರ ವಿರುದ್ಧ ಕಳೆದ ಕೆಲ ವಾರಗಳಿಂದ ಇಡೀ ಟ್ರಾನ್ಸ್‌ಜೆಂಡರ್ ಮತ್ತು ಪ್ರಗತಿಪರ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಶುಕ್ರವಾರ...

‘ಮೋದಿ ಕ್ರಿಶ್ಚಿಯನ್ ಸಂಸ್ಥೆಗಳಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ’: ಎಫ್‌ಸಿಆರ್‌ಎ ತಿದ್ದುಪಡಿ ಕುರಿತು ಮಲ್ಲಿಕಾರ್ಜುನ ಖರ್ಗೆ

ಇಡುಕ್ಕಿ (ಕೇರಳ): ಸಾರ್ವಜನಿಕ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಕ್ರಿಶ್ಚಿಯನ್ ಸಂಸ್ಥೆಗಳು, ಎನ್‌ಜಿಒಗಳು ಮತ್ತು ನಾಗರಿಕ ಸಮಾಜದ ಮೇಲೆ ದಾಳಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಎಫ್‌ಸಿಆರ್‌ಎ (ವಿದೇಶಿ ದೇಣಿಗೆ...

ವೈದ್ಯಕೀಯ, ತಾಂತ್ರಿಕ ಶಿಕ್ಷಣದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಿಸಿದ ಒಡಿಶಾ ಸರ್ಕಾರ, ಒಬಿಸಿ ವಿದ್ಯಾರ್ಥಿಗಳಿಗೆ ಹೊಸ ಕೋಟಾ

ಮಹತ್ವದ ನಿರ್ಧಾರ ಕೈಗೊಂಡಿರುವ ಒಡಿಶಾ ಸರ್ಕಾರ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಇತರ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಕೋರ್ಸ್‌ಗಳಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ), ಪರಿಶಿಷ್ಟ ಜಾತಿ (ಎಸ್‌ಸಿ) ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಗಣನೀಯವಾಗಿ ಹೆಚ್ಚಿಸಿದೆ....

ಶಾಲಾ ವಾರ್ಷಿಕೋತ್ಸವದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದ 6 ಮಕ್ಕಳು, ತಡರಾತ್ರಿ ಹೊತ್ತಿಗೆ ಶವವಾದರು : ಮಹಾರಾಷ್ಟ್ರದಲ್ಲೊಂದು ಹೃದಯ ವಿದ್ರಾವಕ ಘಟನೆ

ಶಾಲಾ ವಾರ್ಷಿಕೋತ್ಸವದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದ ಆರು ಮಂದಿ ಮಕ್ಕಳು, ತಡ ರಾತ್ರಿ ಹೊತ್ತಿಗೆ ಶವವಾದ ಹೃದಯ ವಿದ್ರಾವಕ ಘಟನೆಯೊಂದು ಮಹಾರಾಷ್ಟ್ರದ ದಿಂಡೋರಿಯಲ್ಲಿ ಶುಕ್ರವಾರ (ಏ.3) ನಡೆದಿದೆ. ನಾಸಿಕ್‌ ನಗರದಿಂದ 20 ಕಿಲೋ...

ಕೇರಳ: ಕೊಲ್ಲಂನಲ್ಲಿ ಟಿವಿ ಚಾನೆಲ್ ಕಚೇರಿ ಮೇಲೆ ಸ್ಫೋಟಕ ವಸ್ತು ಎಸೆತ

ಕೊಲ್ಲಂ: ಇಲ್ಲಿನ ಟಿವಿ ಚಾನೆಲ್ ಒಂದರ ಕಚೇರಿಯ ಮೇಲೆ ಭಾನುವಾರ ಬೆಳಿಗ್ಗೆ ಸ್ಫೋಟಕ ವಸ್ತು ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆ ಪ್ರದೇಶ ಮತ್ತು ಚಾನೆಲ್ ಕಚೇರಿಯ ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು...

ಹತ್ಯೆಯಾದ ಇರಾನ್ ಕಮಾಂಡರ್ ಖಾಸಿಮ್ ಸುಲೈಮಾನಿ ಅವರ ಸೊಸೆ, ಮೊಮ್ಮಗಳನ್ನು ಬಂಧಿಸಿದ ಅಮೆರಿಕ

ನವದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಶುಕ್ರವಾರ ತಮ್ಮ ಶಾಶ್ವತ ನಿವಾಸಿ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನ ದಿವಂಗತ ನಾಯಕ ಖಾಸಿಮ್ ಸೊಲೈಮಾನಿ ಅವರ...

ಇರಾನ್ ಮೇಲೆ ಬೃಹತ್ ದಾಳಿ: ಹಲವು ಉನ್ನತ ನಾಯಕರನ್ನು ಕೊಲ್ಲಲಾಗಿದೆ ಎಂದು ವಿಡಿಯೋ ಹಂಚಿಕೊಂಡ ಟ್ರಂಪ್

ಟೆಹ್ರಾನ್ ಮೇಲೆ ನಡೆದ ದಾಳಿಯ ವೀಡಿಯೊವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದು, ಹಲವಾರು ಇರಾನ್ ಮಿಲಿಟರಿ ನಾಯಕರ ಸಾವಿಗೆ ಅದು ಕಾರಣ ಎಂದು ಹೇಳಿಕೊಂಡಿದ್ದಾರೆ. "ಟೆಹ್ರಾನ್‌ನಲ್ಲಿ ನಡೆದ ಈ ಬೃಹತ್ ದಾಳಿಯೊಂದಿಗೆ, ಇರಾನ್‌ನ...

ಅಸ್ಸಾಂ ಚುನಾವಣೆ : ನುಸುಳುಕೋರರಿಂದ ಯುವ ಕಲ್ಯಾಣಕ್ಕೆ ವರಸೆ ಬದಲಿಸಿದ ಬಿಜೆಪಿ

ಅಸ್ಸಾಂ ವಿಧಾನಸಭಾ ಚುನಾವಣೆಗೆ ನಾಲ್ಕು ದಿನಗಳು ಬಾಕಿ ಇರುವಾಗ ಬಿಜೆಪಿ ತನ್ನ ಪ್ರಚಾರದ ವರಸೆಯನ್ನು ಬದಲಿಸಿಕೊಂಡಿದೆ. ನುಸುಳುಕೋರರನ್ನು ಹೊರಹಾಕುತ್ತೇವೆ, ಅಕ್ರಮ ವಲಸೆಗೆ ಕಡಿವಾಣ ಹಾಕುತ್ತೇವೆಂದು ಅಬ್ಬರಿಸುತ್ತಿದ್ದ ಬಿಜೆಪಿಗರು, ಈಗ ನುಸುಳಕೋರರ ವಿಷಯವನ್ನು ಬದಿಗೊತ್ತಿದ್ದಾರೆ....

ಕುಡಿದ ಮತ್ತಿನಲ್ಲಿ ಕಾರು ಚಾಲನೆ: ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ 19ವರ್ಷದ ಯುವಕ ಸಾವು 

ಬೆಂಗಳೂರು: ಕುಡಿದ ಮತ್ತಿನಲ್ಲಿ ಹದಿಹರೆಯದ ಯುವಕನೊಬ್ಬ ಚಲಾಯಿಸುತ್ತಿದ್ದ ಕಾರು, 19 ವರ್ಷದ ಯುವಕನ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಮಲ್ಲೇಶಪಾಳ್ಯದ ಮಾರುತಿನಗರದ 10 ನೇ ಮುಖ್ಯ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ...