ಸಾರಾ ಅಬೂಬಕ್ಕರ್ ನಿರ್ಗಮಿಸಿದ್ದಾರೆ. 86 ವರ್ಷಗಳ ತುಂಬು ಜೀವನವನ್ನು ತಮ್ಮ ಪ್ರಾಮಾಣಿಕ ಕ್ರಿಯಾಶೀಲ ಬದುಕಿನಿಂದ ಸಾರ್ಥಕಗೊಳಿಸಿದ್ದಾರೆ. ಸಾರಾ ಅವರ ಬರವಣಿಗೆಯನ್ನು ಕನ್ನಡಿಗರಿಗೆ ಪರಿಚಯಿಸಿದ್ದು ಲಂಕೇಶ್. ಅದು ಎಂಬತ್ತರ ದಶಕದ ಆರಂಭ. ಲಂಕೇಶ್ ಪತ್ರಿಕೆ ಕನ್ನಡದ ಸಾಂಸ್ಕೃತಿಕ ಲೋಕದ ಒಂದು ಘಟನೆಯಾಗಿ ಬರಹಗಾರರು ಮತ್ತು ಓದುಗರಲ್ಲಿ ಸಂಚಲವನ್ನೇ ಉಂಟುಮಾಡಿತ್ತು. ಹೊಸ ಸಂವೇದನೆಗೆ ಕಾರಣವಾಗಿತ್ತು. ಹೊಸ ಜನಾಂಗದ ತರುಣರು ಮತ್ತು ತಾಯಿಯರು ತಮ್ಮ ಅಂತರಂಗವನ್ನು ಹೇಳಿಕೊಳ್ಳುವಂತೆ ಲಂಕೇಶ್ ಬರವಣಿಗೆ ಪ್ರಚೋದಿಸಿತ್ತು. ಆ ಸಮಯದಲ್ಲಿಯೇ ಕರಾವಳಿಯಲ್ಲಿ ಕೋಮುವಾದಿ ಶಕ್ತಿಗಳು ತಲೆಎತ್ತಿ ಜನರ ನೆಮ್ಮದಿಯ ಬದುಕಿಗೆ ಗಂಡಾಂತರ ತಂದಿದ್ದವು. ಜನರ ಸಹಬಾಳ್ವೆಯನ್ನು ಕದಡಿ ಪ್ರತ್ಯೇಕಿಸುವಂತಹ ಮನೆಹಾಳು ಕೆಲಸಗಳು ಆರಂಭಗೊಂಡಿದ್ದವು. ಅಂತಹ ಸಮಯದಲ್ಲಿ ಒಬ್ಬ ಮುಸ್ಲಿಂ ಹೆಣ್ಣುಮಗಳಿಂದ ಪತ್ರವೊಂದು ಲಂಕೇಶರಿಗೆ ಬಂದಿತ್ತು. ಆ ಪತ್ರದಲ್ಲವರು ’ನನ್ನ ಸಹೋದರನೊಬ್ಬ ಸೈನ್ಯದಲ್ಲಿದ್ದು ಈ ದೇಶ ಕಾಯುತ್ತಿದ್ದಾನೆ ಆದರೂ ನಮ್ಮನ್ನಿಲ್ಲಿ ದೇಶದ್ರೋಹಿಗಳು ಎಂಬಂತೆ ಮೂದಲಿಸುತ್ತಿದ್ದಾರೆ. ನಾವು ಹೇಗೆ ಸಹಿಸಿಕೊಳ್ಳಬೇಕು ಮತ್ತು ಪ್ರತಿಕ್ರಿಯಿಸಬೇಕು’ ಎಂದು ಬರೆದುಕೊಂಡಿದ್ದರು. ಇದಕ್ಕೆ ಉತ್ತರವಾಗಿ ಲಂಕೇಶರು ನೀವು ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ; ನಮ್ಮಲ್ಲಿ ಬರೆಯಿರಿ ಎಂದು ಉತ್ತರಿಸಿದರು. ಅಂದಿನಿಂದ ಸಾರಾ ಅಬೂಬಕ್ಕರ್ ನಿರಂತರವಾಗಿ ಲಂಕೇಶ್ ಪತ್ರಿಕೆಗೆ ಬರೆಯತೊಡಗಿದರು.
ಸಾರಾ ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿದ್ದು ’ಚಂದ್ರಗಿರಿ ತೀರದಲಿ’ ಎಂಬ ಪುಟ್ಟ ಕಾದಂಬರಿ. ಆವರೆಗೆ ನಮಗೆ ಅಪರಿಚಿತವಾಗಿದ್ದ ಮುಸ್ಲಿಂ ಲೋಕದ ಹೆಣ್ಣು ಮಕ್ಕಳ ವಿವರ ತಿಳಿದದ್ದೇ ’ಚಂದ್ರಗಿರಿ ತೀರದಲ್ಲಿ’ ಎಂಬ ಧಾರವಾಹಿಯಿಂದ. ಬರವಣಿಗೆಯಲ್ಲಿನ ಪ್ರಾಮಾಣಿಕತೆ ಹೇಗಿರಬೇಕೆಂಬುದನ್ನು ಸಾರಾ ತೋರಿಸಿದ್ದರು. ಸೈಕಲ್ ಶಾಪು, ಗುಜರಿ ಅಂಗಡಿಗಳಲ್ಲಿನ ಬಡವರ ಮದುವೆ ಸಂಬಂಧಗಳು, ಕೊಡುಕೊಳ್ಳುವಿಕೆ ಮತ್ತು ವ್ಯವಹಾರಗಳು, ಅದರ ಪರಿಣಾಮ, ಮಹಿಳೆಯರ ಅತಂತ್ರ ಬದುಕು ಇವೆಲ್ಲಾ ಲೇಖಕಿಯಿಂದ ಯಾವ ಉತ್ಪ್ರೇಕ್ಷಿತ ಪದಪುಂಜಗಳಿಲ್ಲದೆ ಅನಾವರಣಗೊಂಡು ಮನಸ್ಸನ್ನು ಕಲಕಿದ್ದವು. ಸಾಮಾನ್ಯವಾಗಿ ಧಾರವಾಹಿಗಳನ್ನು ಓದುವವರೆಲ್ಲಾ ಆಗ ’ಚಂದ್ರಗಿರಿ ತೀರದಲ್ಲಿ’ ಕಾದು ಓದಿದ್ದರು. ಇನ್ನೆರಡು ವರ್ಷ ಕಳೆದರೆ ನಲವತ್ತು ವರ್ಷ ತುಂಬುವ ಆ ಕಾದಂಬರಿ ಇನ್ನೂ ಓದುಗರ ಮನಸ್ಸಿನಲ್ಲಿ ಉಳಿದಿರುವುದಕ್ಕೆ ಕಾರಣ ಅದರ ತಾಜಾತನ ಮತ್ತು ಪ್ರಾಮಾಣಿಕ ಅಭಿವ್ಯಕ್ತಿಯಾಗಿದೆ. ಆ ನಂತರ ಸಾರ ನಿರಂತರವಾಗಿ ಬರೆದರು. ಮುಸ್ಲಿಂ ಮಹಿಳೆಯರ ಬದುಕು ಮತ್ತು ಸ್ಥಿತಿಗತಿಗಳನ್ನು ಅನಾವರಣ ಮಾಡಿದರು. ಬರೆದಂತೆ ಬದುಕಿದ ಮಹಿಳೆಯಾಗಿದ್ದರು. ಅವರ ದನಿ ಮತಾಂಧರಿಗೆ ಸಿಟ್ಟು ತಂದಿದ್ದವು. ಆ ಸಮಯದಲ್ಲಿ ಮಂಗಳೂರಿನಲ್ಲಿ ನಡೆದ ಸಭೆಯೊಂದರಲ್ಲಿ ಕುರ್ಚಿಯನ್ನು ಅವರ ಮೇಲೆ ಎಸೆದು ಗಲಭೆ ಎಬ್ಬಿಸಿದರು. ಇದರಿಂದೇನೂ ಅಂಜದ ಸಾರಾ, ’ನಾನು ಸತ್ಯವನ್ನು ಹೇಳುತ್ತೇನೆ, ಅದನ್ನೇ ಬರೆಯುತ್ತೇನೆ’ ಎಂದು ಕೂಗಿದರು. ಆಗ ಲಂಕೇಶ್, ಸಾರ ಅವರಿಗೆ ಧೈರ್ಯ ತುಂಬಿ, ’ಸಾರಾ ಅವರು ಮುಸ್ಲಿಂ ಸಂಪ್ರದಾಯಗಳನ್ನು ಪಾಲಿಸುತ್ತಿರುವವರು. ಅವರೆಂದೂ ಸಂಪ್ರದಾಯವನ್ನು ಬಿಟ್ಟವರಲ್ಲ. ಸಮಯಕ್ಕೆ ಸರಿಯಾಗಿ ಪ್ರಾರ್ಥನೆ ಮಾಡುವ ಮಹಿಳೆ. ಅಂಥವರನ್ನು ಸಹಿಸಿಕೊಳ್ಳಲಾಗದ ನಿಮಗೆ ಕೆಟ್ಟ ದಿನಗಳಿವೆ’ ಎಂದು ಟೀಕಿಸಿದ್ದರು. ಸಾಮಾನ್ಯವಾಗಿ ತಮ್ಮ ಅಭಿಪ್ರಾಯಗಳಿಗೆ ಉಗ್ರ ಪ್ರತಿಭಟನೆ ಬಂದರೆ ತಮ್ಮ ಅಭಿವ್ಯಕ್ತಿ ಶೈಲಿಯನ್ನ ಮೆತ್ತಗಾಗಿಸಿಕೊಳ್ಳುತ್ತಾರೆ ಇಲ್ಲ ಬದಲಿಸಿಕೊಳ್ಳುತ್ತಾರೆ. ಆದರೆ ಸಾರಾ ಹಾಗಾಗಲಿಲ್ಲ ಬದುಕಿನ ಕಡೆಯವರೆಗೂ ಅಭಿವ್ಯಕ್ತಿ ಪ್ರಾಮಾಣಿಕವಾಗಿಯೇ ಇತ್ತು.
ನಮ್ಮೆಲ್ಲರ ಇಷ್ಟದ ಲೇಖಕಿಯಾದ ಸಾರಾ ಅವರನ್ನು ಲಂಕೇಶ್ ಪತ್ರಿಕೆ ಇಪ್ಪತ್ತು ವರ್ಷ ತುಂಬಿದ ಸಮಾರಂಭಕ್ಕೆ ಕರೆಸಬೇಕೆಂದು ಆಲೋಚಿಸಿದೆವು. ಅದರಂತೆ 1999ರ ಡಿಸೆಂಬರ್ 6ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಸಭೆ ಏರ್ಪಡಿಸಲಾಯಿತು. ಸಾರಾ ಅವರಿಗೆ ಫೋನ್ ಮಾಡಲಾಗಿ ಒಪ್ಪಿಕೊಂಡು ಬರುವುದಾಗಿ ಹೇಳಿದರು. ಆಹ್ವಾನ ಪತ್ರಿಕೆ ಪ್ರಿಂಟ್ ಹಾಕಿಸಿಕೊಂಡು ಬರುವುದಾಗಿ ಲಂಕೇಶರಿಗೆ ತೋರಲು ಹೋದರೆ, ಅವರು ರೇಗಿ “ಅದೇನಯ್ಯ ಡಿಸೆಂಬರ್ ಆರಿಗೆ ಗಂಟು ಬಿದ್ದಿದ್ದೀರಿ. ಬೇರೆ ದಿನಾಂಕ ಗೊತ್ತು ಮಾಡು” ಎಂದರು. ನಾನು ಮುಂದಿನ ಹದಿನಾಲ್ಕನೇ ತಾರೀಕು ನಿಗದಿ ಮಾಡುವ ಗಡಿಬಿಡಿಯಲ್ಲಿ ಕಾರ್ಯಕ್ರಮ ಮುಂದೆ ಹೋದದ್ದನ್ನು ಸಾರ ಅವರಿಗೆ ತಿಳಿಸಲಿಲ್ಲ. ಆದರೆ ಸಾರಾ ಆರನೇ ತಾರೀಕು ಶಿವಮೊಗ್ಗಕ್ಕೆ ಬಂದು ಕುವೆಂಪು ರಂಗಮಂದಿರಕ್ಕೆ ಹೋಗಿದ್ದಾರೆ. ಅಲ್ಲಿ ಯಾರೂ ಇರದಿದ್ದನ್ನು ಕಂಡು, ಕಡೆಗೆ ಇಲಾಖೆ ನಿರ್ದೇಶಕನ ಛೇಂಬರಿಗೆ ಹೋಗಿ ಕೇಳಿದಾಗ ಅವರು, ’ಈ ದಿನ ಯಾವ ಸಮಾರಂಭವೂ ಇಲ್ಲ’ ಎಂದಿದ್ದಾರೆ. ಸಾರಾ ವಾಪಸು ಹೊರಟುಹೋಗಿದ್ದಾರೆ. ಇದನ್ನು ನನ್ನ ಗಮನಕ್ಕೆ ನಿರ್ದೇಶಕರು ತಂದಾಗ, ನಾನು ಕ್ಷಮೆ ಯಾಚಿಸಲು ಫೋನ್ ಮಾಡಿ ಮಾತಾಡಿದೆ. ಆದರೆ ಸಾರಾ, ’ನಾನು ಅಲ್ಲಿ ಬಂದೇ ಇಲ್ಲ’ ಎಂದರು. ನನ್ನ ಅಜಾಗರೂಕತೆಯಿಂದ ನನಗೆ ನೋವಾಗಬಾರದೆಂದು ನಾನಲ್ಲಿಗೆ ಬಂದೇ ಇಲ್ಲವೆಂದು ವಾದಿಸಿದರು. ಅದು ಅವರ ಶ್ರೇಷ್ಠ ಗುಣ. ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ನಡೆದುಕೊಂಡು ಅದನ್ನು ತಮ್ಮ ಬದುಕಿನುದ್ದಕ್ಕೂ ವ್ರತದಂತೆ ಪಾಲಿಸಿದ ಸಾರಾ ಈ ನಾಡು ತಲುಪಿರುವ ಸ್ಥಿತಿ ನೆನಸಿಕೊಂಡು ಕೊರಗುವಂತಾಗಿದ್ದರು.
ಲಂಕೇಶ್ ಪತ್ರಿಕೆ ಮುಖಾಂತರ ಬರವಣಿಗೆಯ ಉತ್ತುಂಗಕ್ಕೇರಿದ ಒಂದು ಡಜನ್ ಮಹಿಳಾ ಲೇಖಕಿಯರ ಪೈಕಿ ಲಂಕೇಶರ ಮತ್ತು ಲಂಕೇಶ್ ಪತ್ರಿಕೆಯ ಸಿದ್ಧಾಂತಗಳಿಗೆ ಚ್ಯುತಿಬಾರದಂತೆ ಬದುಕಿದ ವಿರಳ ಮಹಿಳೆ ಸಾರಾ. ಕಳೆದ 8ನೇ ತಾರೀಕಿನಂದು ಬೆಂಗಳೂರಲ್ಲಿ ನಡೆದ ಜನಸಾಹಿತ್ಯ ಸಮಾವೇಶದ ಅಂಗಳದಲ್ಲಿ ಹಲವಾರು ಕಲಾವಿದರು ತಮ್ಮ ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸಿದ್ರು. ಒಬ್ಬ ಕಲಾವಿದರು (ಅವರ ಚಿತ್ರವನ್ನೇ ದಿಟ್ಟಿಸುತ್ತಾ ಕಲಾವಿದರ ಹೆಸರನ್ನು ಗಮನಿಸುವುದನ್ನೇ ಮರೆತೆ) ಅತ್ಯಂತ ಕಡಿಮೆ ಗೆರೆಯಲ್ಲಿ ಸಾರ ಅವರ ದುಂಡದ ಮುಖವನ್ನು ಚಿತ್ರಿಸಿದ್ದರು. ಅಲ್ಲೇ ಬೊಳುವಾರು ಚಿತ್ರವೂ ಇತ್ತು. ಅದು ಎಂದಿನಂತೆ ದಿಗ್ಭ್ರಮೆಯ ನೋಟದಲ್ಲಿತ್ತು. ಆದರೆ ಅತ್ಯಂತ ಕಡಿಮೆ ರೇಖೆಗಳಲ್ಲಿ ಸಾರಾ ಅವರ ಚಿತ್ರ ಬಿಡಿಸಿದ್ದ ಬಗೆಯನ್ನು ಮೆಚ್ಚಿಕೊಂಡ ನಾನು ನಟರಾಜ್ ಹುಳಿಯಾರ್‌ರನ್ನು ಕರೆದು ಆ ಚಿತ್ರ ತೋರಿಸಿದೆ. ಅವರೂ ಮೆಚ್ಚಿಕೊಂಡರು. ಮಹಿಳಾ ಲೋಕದ ಸಮಸ್ಯೆಗಳನ್ನ ತಮ್ಮ ಗಂಭೀರ ಮುಖದಲ್ಲಿ ಪ್ರತಿಬಿಂಬಿಸುತ್ತಿದ್ದ ಸಾರಾ ತುಂಬ ಆತಂಕದಿಂದಲೇ ನಿರ್ಗಮಿಸಿದ್ದಾರೆ. ಆದರೆ ಜನಸಾಹಿತ್ಯ ಸಮಾವೇಶದಲ್ಲಿ ಕಂಡ ಹಲವಾರು ಮುಸ್ಲಿಂ ತರುಣಿಯರು ಸಾರಾ ಅವರ ಸ್ಥಾನ ತುಂಬಲಿದ್ದಾರೆ. ಹಾಗಾಗಿ ನಿಮ್ಮ ಬದುಕು ಸಾರ್ಥಕವಾಗಿದೆ, ಹೋಗಿ ಬನ್ನಿ ಸಾರಾ ಅನ್ನಬಹುದು.


