Homeಮುಖಪುಟತ್ರಿಮೂರ್ತಿ ಎಂಬ ಕನ್ನಡಿ

ತ್ರಿಮೂರ್ತಿ ಎಂಬ ಕನ್ನಡಿ

- Advertisement -
- Advertisement -

ತನ್ನ ಬದುಕಿನುದ್ದಕ್ಕೂ ಸಾಮಾಜಿಕ ಹೋರಾಟದಲ್ಲಿ ತೊಡಗಿಸಿಕೊಂಡು, ಮೈಮನಸ್ಸುಗಳ ತುಂಬಾ ಕನಸುಗಳನ್ನು ಹೊತ್ತು ತಿರುಗುತ್ತಿದ್ದ ಗೆಳೆಯ ತ್ರಿಮೂರ್ತಿ ಕಣ್ಮರೆಯಾಗಿ ತಿಂಗಳಾಗಿದೆ. ಈ ನಡುವೆ ನಾವು ಬದುಕುತ್ತಿರುವ ಸಮಾಜ ಹಲವು ಹೊರಳುಗಳಿಗೆ ಪಕ್ಕಾಗಿ ಲೆಕ್ಕವಿಟ್ಟುಕೊಳ್ಳಲಾಗದಷ್ಟು ಬದಲಾಗಿದೆ. ಅಡುಗೆಗಾಗಿ ಬಳಸುವ ಗ್ಯಾಸ್ ಬೆಲೆ ಮತ್ತೊಮ್ಮೆ ಜಾಸ್ತಿಯಾಗಿದೆ; ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳು, ದಲಿತರ ಮೇಲಿನ ದೌರ್ಜನ್ಯಗಳು ಸಮಾಜದ ಕುರುಡು, ಕಿವುಡನ್ನು ಎತ್ತಿ ತೋರಿಸುತ್ತಿವೆ. ತ್ರಿಮೂರ್ತಿ ಹೋದ ದಿನದಿಂದ ಈದಿನದವರೆಗೂ ಅವನು ಇದಕ್ಕೆಲ್ಲಾ ಹೇಗೆ ಪ್ರತಿಕ್ರಿಯಿಸುತ್ತಿದ್ದ ಎನ್ನುವ ಲೆಕ್ಕಾಚಾರ ಮನಸ್ಸಿನಲ್ಲಿ ಸುಳಿದು, ತನ್ನ ಅಷ್ಟಗಲ ನಗುವಿಗೆ ಕೆನ್ನೆ ಮೇಲೆ ಇನ್ವೈಟೆಡ್ ಕಾಮಾ ಹಾಕುತ್ತಿದ್ದ ಅವನ ಮುಖ ನೆನಪಾಗಿ ಪಿಚ್ಚೆನಿಸುತ್ತದೆ. ಮತ್ತೆ ಆ ಕ್ಷಣಗಳೆಲ್ಲಾ ಎದೆಯಲ್ಲಿ ಆತಂಕದ ಬೀಜ ನೆಟ್ಟ ಅನುಭವಗಳಾಗಿ ಮಾರ್ಪಾಡಾಗುತ್ತವೆ.

ಕರ್ನಾಟಕದ ಪ್ರಬಲ ಸಮುದಾಯವೊಂದರಲ್ಲಿ ಹುಟ್ಟಿದ ತ್ರಿಮೂರ್ತಿ ತನ್ನ ಸಾವಿನ ಕ್ಷಣದವರೆಗೂ ನೊಂದವರೊಂದಿಗೆ ಬದುಕಿದವನು. ಅಂದರೆ, ನೆಲದ ಕಾರುಣ್ಯವನ್ನು ಕರುಳೊಳಗಿಟ್ಟುಕೊಂಡು ಉಂಡ ತುತ್ತಿಗೆ ಲೆಕ್ಕ ಬರೆದಿಕ್ಕುವ ಹಾಗೂ ಈ ನೆಲದ ದನಿಗೆ ಮೈಯ್ಯಾನಿಸಿ ಬದುಕುವ ಕಸುವು ಕಟ್ಟಿಕೊಂಡವನು. ಬಿಎ ಓದುವಾಗಿಂದ ಹೋರಾಟದ ಬದುಕಿಗೆ ಬಿದ್ದು, ದಲಿತ, ರೈತ, ಮಹಿಳಾ, ಕಾರ್ಮಿಕ, ಅಲ್ಪಸಂಖ್ಯಾತ ಹೋರಾಟಗಳಲ್ಲಿ ಕಂಠಮಟ್ಟ ಕೆಲಸ ಮಾಡಿ ಹೆಸರಿಗೆ ಹಾತೊರೆಯದೆ, ಉಸಿರಿಗೆ ಅರ್ಥ ತಂದವನು. ದಲಿತ- ದಮನಿತರ ಹೋರಾಟ ಕುರಿತ ನಿಖರ ತಿಳಿವಳಿಕೆ, ಬಾಬಾಸಾಹೇಬ್ ಅಂಬೇಡ್ಕರರ ನೋಟಕ್ರಮದ ಆಲೋಚನಾ ವಿಧಾನ ತ್ರಿಮೂರ್ತಿಯನ್ನು ಕೊಂಚ ನಿಷ್ಠುರ ವ್ಯಕ್ತಿಯನ್ನಾಗಿ ರೂಪಿಸಿದ್ದವು. ತನ್ನ ಸುತ್ತಲಿನ ಎಲ್ಲಾ ವಿದ್ಯಮಾನಗಳಿಗೆ ಸಾವಧಾನವಾಗಿ ಸ್ಪಂದಿಸುತ್ತಿದ್ದುದಲ್ಲದೆ, ಕಾರ್ಯಪ್ರವೃತ್ತಿಯಿಂದ ವರ್ತಿಸುವ ಬದ್ಧತೆಯನ್ನು ರೂಢಿಸಿಕೊಂಡಿದ್ದವನು. ಹಲವರಂತೆ ಹಲವು ರೀತಿಯಲ್ಲಿ ಮಾತನಾಡಿ ಮುಗಿಸದೆ, ಮುಂದೆ ಮಾಡಬೇಕಾದ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಿ ಸಂಬಂಧಪಟ್ಟವರ ಮುಂದೆ ಮಂಡಿಸಿ ತನ್ನ ಪಾಲಿನ ಕರ್ತವ್ಯಕ್ಕಾಗಿ ಕಾಯುತ್ತಿದ್ದವನು.

ವಿದ್ಯಾರ್ಥಿ ದೆಸೆಯಲ್ಲಿ ಕರ್ನಾಟಕ ವಿಮೋಚನಾ ರಂಗದ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ತ್ರಿಮೂರ್ತಿ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಓದಿದವನು. ತನ್ನ ಊರಿನ ಆಸ್ತಿ, ಜಾತಿಗಳ ಪ್ರಭಾವಗಳನ್ನು ಕಡೆಗಣಿಸಿ ನೊಂದವರ ಜೊತೆಯಲ್ಲಿ ಹೆಜ್ಜೆ ಹಾಕಿದ್ದಲ್ಲದೆ, ದನಿಯಿಲ್ಲದವರ ದನಿಯಾಗಲು ಹಾತೊರೆಯುತ್ತಿದ್ದನು. ಕರ್ನಾಟಕ ಕೋಮು ಸೌಹಾರ್ದ ವೇದಿಕೆ ರೂಪಿಸಿದ ಎಲ್ಲಾ ಹೋರಾಟಗಳ ಜೊತೆಗೇ ಸಾಗಿದ ತ್ರಿಮೂರ್ತಿ, ಅಂಬೇಡ್ಕರ್ ಓದು, ಸಂವಿಧಾನದ ತಿಳಿವಳಿಕೆ, ಕನ್ನಡ ಸಾಹಿತ್ಯ ಮೊದಲಾದ ವಿಷಯಗಳ ಕುರಿತು ಆಳವಾಗಿ ಅಧ್ಯಯನಕ್ಕೆ ತೊಡಗಿದ್ದವನು.

ಇಷ್ಟೆಲ್ಲಾ ಸಹಜ ಹೋರಾಟಗಾರನಂತೆ ಬದುಕು ಸಾಗಿಸುತ್ತಿದ್ದ ತ್ರಿಮೂರ್ತಿ ಯಾರೊಟ್ಟಿಗೂ ತನ್ನ ಮನಸ್ಸಿನ ದುಗುಡಗಳನ್ನು ಹೇಳಿಕೊಳ್ಳುತ್ತಿರಲಿಲ್ಲ. ಸದಾ ಅಂತರ್ಮುಖಿಯಾಗಿದ್ದವನು ಕಳೆದ ಹತ್ತು ವರ್ಷಗಳಲ್ಲಿ ಹಲವು ಬದಲಾವಣೆಗಳನ್ನು ಮೈಗೂಡಿಸಿಕೊಂಡಿದ್ದ. ಪ್ರೇಮ ಪದ್ಯಗಳನ್ನೂ ಬರೆಯಲು ಪ್ರಾರಂಭಿಸಿ ನಮಗೆಲ್ಲಾ ಆಶ್ಚರ್ಯ ಉಂಟುಮಾಡಿದ್ದ.

“ಜಿಂಕೆಯ ಕಣ್ಣೆಂದೆ ಅಲ್ಲವೆಂದಳು
ಹವಳದ ತುಟಿಯೆಂದೆ ಸುಳ್ಳೆಂದಳು
ಸೋತು ನಿಂತವನ ನೋಡಿ
ಮಾತಾಡು ತಲೆಯಿಂದಲ್ಲ
ಹೃದಯದಿಂದ ಎಂದಳು”

– ಈ ಪದ್ಯ ತ್ರಿಮೂರ್ತಿ ತನ್ನೊಳಗಿನ ಗಂಡುಪ್ರಜ್ಞೆಯನ್ನು ಕೊಂದುಕೊಂಡು ಮನುಷ್ಯನಾಗುವ ಪ್ರಯೋಗ. ಗಂಡು ಎನ್ನುವುದು ಒಂದು ರೋಗವೆಂದೇ ನಂಬಿದ್ದ ಅವನು ’ಪ್ರೇಮ’ ಗಂಡನ್ನು ಮನುಷ್ಯತ್ವದ ಕಡೆಗೆ ಕೊಂಡೊಯ್ಯುತ್ತದೆ ಎಂಬುದನ್ನು ಅರಿತಿದ್ದ. ಇದ್ದಕ್ಕಿದ್ದಂತೆ ಇಂಥಾ ಪದ್ಯಗಳನ್ನು ವಾಟ್ಸಪ್ ಮಾಡಿ ಅಚ್ಚರಿ ಮೂಡಿಸುತ್ತಿದ್ದ.

“ನೂರಾರು ಮನಸುಗಳು ದುಡಿತಾವೆ ನೋವಿಗೆ ಮದ್ದನ್ನು ಅರಿತಾವೆ” ಎಂದು ಬರೆದ. ದುಡಿಮೆ ಮತ್ತು ಅರಿಮೆ ಅಥವಾ ಅರಿಯುವಿಕೆಯನ್ನು ಕೂಡಿಸಿ ಪದ್ಯ ಕಟ್ಟಲು ಪ್ರಯತ್ನಿಸಿದ್ದ ತ್ರಿಮೂರ್ತಿಗೆ ನಿಸ್ಸಂದೇಹವಾಗಿ ಕನ್ನಡ ಕಾವ್ಯದ ಆಳದ ತಿಳಿವಳಿಕೆಯಿತ್ತು.

“ಹಿಡಿ ಅಕ್ಕಿ ತಿನ್ನುವಾ ಬಾಯಿದೋ
ದುಡಿದುಣ್ಣಲು ಬಯಸುತಿದೆ.
ನನ್ನದಲ್ಲದ್ದು ನನಗೆ
ಕಾಲಕಸ ತಿಳಿದಿರಲಿ”

ಮೇಲುನೋಟಕ್ಕೆ ಹೊಸ ಕವಿಯ ಆರಂಭದ ನುಡಿಗಳಂತೆ ಕಾಣುವ ಈ ಪದ್ಯಗಳು ಭಾರತದಂತಹ ಪರಿಸರದಲ್ಲಿ ಬದುಕುವ ವ್ಯಕ್ತಿಗಳ ಹೃದಯದ ಎಕ್ಸರೇಗಳಂತೆ ಭಾಸವಾಗುತ್ತವೆ. ತ್ರಿಮೂರ್ತಿ ಅಂತಹ ಎಲ್ಲಾ ಹೃದಯಗಳ ಎಕ್ಸರೇ ಆಗಿದ್ದವನು.

ಹೋಗುವ ಮೊದಲು ನಾಲ್ಕೈದು ತಿಂಗಳು ಕಾಣೆಯಾಗಿದ್ದವನು ದಲಿತ ಸಂಘರ್ಷ ಸಮಿತಿಗಳ ಐಕ್ಯತಾ ಒಕ್ಕೂಟ ಹಮ್ಮಿಕೊಂಡಿದ್ದ ’ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶ’ದ ಪ್ರಚಾರಕ್ಕಾಗಿ ನಾವು ಮಾಡಿದ್ದ ವಾಟ್ಸಾಪ್ ಗ್ರೂಪಿಗೆ ಬಂದ. ಬಂದವನೇ ನಮ್ಮೆಲ್ಲರ ಕೆಲಸಗಳನ್ನು ಒಬ್ಬನೇ ಮಾಡಿದ. ಸೋಷಿಯಲ್ ಮೀಡಿಯಾಗೆಂದು ತಂಡ ಸಿದ್ಧಪಡಿಸಿದ ಪೋಸ್ಟರ್ ಮತ್ತು ವಿಡಿಯೋಗಳನ್ನು ಹಗಲಿರುಳೆನ್ನದೆ, ಯಾವುದೇ ಬೇಸರವಿಲ್ಲದೆ ಶೇರ್ ಮಾಡಿದ. ನಾವು ಮಾಡಿದ ವಾಟ್ಸಪ್ ಗ್ರೂಪುಗಳಲ್ಲಿ ಯಾರಾದರೂ ಪ್ರಶ್ನೆಗಳನ್ನು ಎತ್ತಿದರೆ ನಮ್ಮ ಗಮನಕ್ಕೆ ತಂದು ಅದಕ್ಕೆ ತಕ್ಷಣವೇ ಉತ್ತರಿಸುವಂತೆ ಒತ್ತಡ ಹಾಕುತ್ತಿದ್ದ. ಫೇಸ್‌ಬುಕ್ಕಿನಲ್ಲಿ ಕೆಲವರು ಸಮಾವೇಶದ ವಿರುದ್ಧ ಬರೆದಾಗ ನೊಂದುಕೊಂಡು ಅವರನ್ನೆಲ್ಲಾ ಕರೆದು ಮಾತಾಡೋಣ ಎಂದ. ಸಮಾವೇಶದ ದಿನ ವಿಮಾನನಿಲ್ದಾಣದಿಂದ ರಮಾಬಾಯಿಯವರನ್ನು ಕರೆತರುವ ಹಾಗು ಕರೆದುಕೊಂಡು ಹೋಗಿ ಬಿಡುವ ಕೆಲಸವಹಿಸಿಕೊಂಡ. ಆ ಕೆಲಸಗಳ ನಡುವೆ ಬಾಬಾಸಾಹೇಬರ ಫೋಟೋ ಇದ್ದ ಅಂಗಿ ಹಾಕಿಕೊಂಡು ಬಿಸಿಲಲ್ಲಿ ಬೇಯುತ್ತಾ ಸಮಾವೇಶದ ಕಂಟೆಂಟ್ ಕೆಲಸ ನಿರ್ವಹಿಸಿದ.

ನಾವೆಲ್ಲಾ ಮಾತನಾಡುವ ಆದರ್ಶದಂತೆಯೇ ಬದುಕಲು ಪ್ರಯತ್ನಸುತ್ತಿದ್ದ ತ್ರಿಮೂರ್ತಿ ಅದೆಲ್ಲಿ ಸೋತ ಎಂದು ಯೋಚಿಸಲುತೊಡಗಿದರೆ ಉತ್ತರ ಸುಲಭವಲ್ಲ. ಅಥವಾ ಸಾವನ್ನು ಸೋಲು ಎಂದುಕೊಳ್ಳುವ ನಮಗೆ ಸಾಮಾಜಿಕ ಬದುಕನ್ನು, ವೈಯಕ್ತಿಕ ಬದುಕನ್ನು ಅರ್ಥಮಾಡಿಕೊಳ್ಳುವ ತರಬೇತಿಯ ಕೊರತೆಯಿರಬಹುದು. ನೆನ್ನೆ ಮೊನ್ನೆ ನಮ್ಮ ಜೊತೆ ಇದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಕಣ್ಮರೆಯಾದನಲ್ಲಾ ಎಂಬ ಆಘಾತ ನಮ್ಮೊಳಗೆ ಅಸಂಬದ್ಧ ತಾತ್ವಿಕ ಜಿಜ್ಞಾಸೆಗಳನ್ನು ಹುಟ್ಟುಹಾಕಬಹುದು. ಅಥವಾ ಸಾವು ಸುಲಭ ಬದುಕು ಕಷ್ಟ ಎಂಬ ಷರಾ ಬರೆದು ’ಈ ಕೆಟ್ಟ ಜಗತ್ತಿನಲ್ಲಿ ಇದ್ದು ನೋಯುವುದಕ್ಕಿಂತ ಎದ್ದು ಹೋಗುವುದೇ ಮೇಲು’ ಎಂದುಕೊಂಡು ಬದುಕಿಸಿಕೊಳ್ಳಲಾಗದ ನಮ್ಮ ಅಸಹಾಯಕತೆಗೆ ತಾತ್ವಿಕತೆಯ ಮಾಸ್ಕ್ ಹಾಕಿಬಿಡಬಹುದು. ಆದರೆ, ಇದರೆಲ್ಲದರಾಚೆಗೆ ತ್ರಿಮೂರ್ತಿ ಇಲ್ಲ ಎಂಬ ಸತ್ಯ ಅದೆಷ್ಟು ಭಯಂಕರವಾದ ಸತ್ಯವನ್ನು ನಮ್ಮೆದೆಗೆ ಎಸೆಯುತ್ತದೆಂದರೆ, ನಮ್ಮಗಳ ಜೀವಂತಿಕೆಯ ಮೇಲೆ ಗುಮಾನಿ ಹುಟ್ಟಿಸುವಷ್ಟು.

ದಶಕದ ಹಿಂದೆ ಗೆಳೆಯ ಪ್ರಶಾಂತ ಇಂಥದ್ದೇ ನಿರ್ಧಾರ ಮಾಡಿದಾಗ, ಗೆಳೆಯ ಎನ್.ಕೆ.ಹನುಮಂತಯ್ಯ ಹೀಗೇ ಎದ್ದು ಹೋದಾಗ ಅಕ್ಷರಶಃ ಅದುರಿಹೋಗಿದ್ದ ನನ್ನ ದೇಹ ಮತ್ತು ಮನಸ್ಸು ತ್ರಿಮೂರ್ತಿಯ ಸಾವಿನಿಂದ ಜಡ್ಡುಗಟ್ಟಿದಂತೆನಿಸಿ ಭಯವಾಗುತ್ತದೆ. ಅವನ ಗೈರುಹಾಜರಿಯನ್ನು ನನ್ನ ಸುತ್ತಲಿನ ಯಾರಿಗೂ ಸಹಿಸಲಾಗುತ್ತಿಲ್ಲ. ದಲಿತ ಸಂಘಟನೆಗಳ ಒಗ್ಗಟ್ಟು, ಕೋಮುವಾದದ ವಿರುದ್ಧದ ಜನರ ಸಿಟ್ಟು ಅವನನ್ನು ಉಳಿಸಬೇಕಿತ್ತು. ಅದು ಅವನ ಕನಸಾಗಿತ್ತು. ಹೊರಗೆ ಕನ್ನಡಿಯ ಹೊತ್ತು ಓಡಾಡುತ್ತಿದ್ದ ತ್ರಿಮೂರ್ತಿ ಆ ಕನ್ನಡಿಯೊಳಗೇ ಲಯವಾಗಿಬಿಟ್ಟ. ಆ ಕನ್ನಡಿಗಳೀಗ ನಮ್ಮನ್ನು ಪ್ರತಿಬಿಂಬಿಸುತ್ತಿವೆ. ಮತ್ತೆ ಅವನೇ ಬರೆದ ಸಾಲುಗಳು ಚುಚ್ಚುತ್ತಿವೆ:

“ಆ ವಾದ ಈ ವಾದ
ಸಿದ್ಧಾಂತ ಮುಗ್ದಾಂತ ಅಂತಾವೆ
ಮಕ್ ಮಕ ನೋಡ್ಕಂಡು
ಉರ್ಕಂತಾವೆ..
ಬೆನ್ ಬೆನ್‌ಗೆ ಚೂರಿನಾ
ಇರ್ಕಂತಾವೆ…”

“ಸತ್ಯವ ಹೇಳಿ ಸಿಕ್ಕಿಬಿದ್ದಿದ್ದೇನೆ
ಮನದೊಳಗೆ..
ಮುದವಿದೆ, ಭೀತಿಯಿದೆ
ಜಗದ ಹಳದಿಗಣ್ಣುಗಳ ಬಗ್ಗೆ ಭಯವಿದೆ
ಮನಸಿನಾಟವ ಹೃದಯ ಒಪ್ಪುತ್ತಿಲ್ಲ
ನಿಜವೇನೆಂದು ತಿಳಿಯುತ್ತಿಲ್ಲ”

ಹುಲಿಕುಂಟೆ ಮೂರ್ತಿ
ಕನ್ನಡ ಪಾಧ್ಯಾಪಕರು, ಬೆಂಗಳೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...