Homeಕರ್ನಾಟಕ‘ಗೌರಿ’ ಸಾಕ್ಷ್ಯಚಿತ್ರ: "ದಡ ದಡ, ಒಂದಲ್ಲ ಎರಡಲ್ಲ... ಸಾಲಾಗಿ ಏಳು, ತೂರಿದ್ದು ಗೌರಿಗೆ, ತಾಕಿದ್ದು ನಮ್ಮೆದೆಗೆ..."

‘ಗೌರಿ’ ಸಾಕ್ಷ್ಯಚಿತ್ರ: “ದಡ ದಡ, ಒಂದಲ್ಲ ಎರಡಲ್ಲ… ಸಾಲಾಗಿ ಏಳು, ತೂರಿದ್ದು ಗೌರಿಗೆ, ತಾಕಿದ್ದು ನಮ್ಮೆದೆಗೆ…”

- Advertisement -
- Advertisement -

ಹಾವೇರಿಯಲ್ಲಿ ಆಯೋಜನೆಯಾಗಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ’ನ್ಯಾಯಪಥ’ ವಾರಪತ್ರಿಕೆಯನ್ನು ಹಂಚುತ್ತಿದ್ದಾಗ ಅರವತ್ತು ದಾಟಿದ ವ್ಯಕ್ತಿಯೊಬ್ಬರು ಎದುರಾದರು. “ಗೌರಿಯವರ ಸಂಪಾದಕೀಯ ಬರಹಗಳ ’ಕಂಡದ್ದು ಕಂಡಹಾಗೆ’ ಒಂದು ಸಂಪುಟ ಮಾತ್ರ ನನ್ನ ಬಳಿ ಇದೆ, ಇನ್ನೊಂದಿಲ್ಲ. ಗೌರಿ ಹತ್ಯೆಯಾದ ಬಳಿಕ ಆಕೆಯ ಬರಹಗಳನ್ನು ಓದಲಾರಂಭಿಸಿದೆ. ಗೌರಿ ಎಂದರೆ ಏನು, ಆಕೆಯ ಬದುಕು ಎಂತಹ ದಿಟ್ಟತನದ್ದು ಎಂಬುದನ್ನು ತಿಳಿದು ಕಣ್ಣೀರು ಹಾಕಿದ್ದೇನೆ, ನಿಜಕ್ಕೂ ಈ ನಾಡಿಗೆ ದೊಡ್ಡ ನಷ್ಟ” ಎಂದು ಮರುಗಿದರು. ನಿಜ, ಗೌರಿಯ ಬಗ್ಗೆ ತಿಳಿದುಕೊಂಡಷ್ಟೂ, ಅವರು ನಂಬಿದ್ದ ಮತ್ತು ನಂಬಿದ್ದಂತೆ ನಡೆದ ರೀತಿಯ ಕುರಿತು ಅತೀವ ಗೌರವ ಹುಟ್ಟುತ್ತದೆ.

ಪೇಪರ್ ಸ್ಟಾಲ್, ಟೀ ಸ್ಟಾಲ್, ತರಕಾರಿ ಅಂಗಡಿ, ಕಟ್ಟಿಂಗ್ ಶಾಪ್, ಸಿನಿಮಾ ಮಾಲ್, ಸಂತೆ, ಜಾತ್ರೆ- ಹೀಗೆ ಎಲ್ಲಾದರೂ ಸಿಕ್ಕ ಅಪರಿಚಿತರಲ್ಲಿ “ಗೌರಿ ಲಂಕೇಶ್ ಜತೆಗೆ ಕೆಲಸ ಮಾಡುತ್ತಿದ್ದ ಟೀಮ್‌ನಲ್ಲಿ ಕೆಲಸ ಮಾಡುತ್ತಿರುವೆ” ಎಂದು ಪರಿಚಯ ಮಾಡಿಕೊಂಡ ತಕ್ಷಣ, “ಗೌರಿ ಲಂಕೇಶ್ ಕೊಂದರಲ್ಲ, ಅವರು ಸಿಕ್ಕರಾ? ಕೊಲೆ ಮಾಡಿದ್ದು ಏತಕ್ಕೆ? ಕೊಲೆಗಡುಕರಿಗೆ ಶಿಕ್ಷೆಯಾಯಿತಾ?”- ಎಂದು ಸಾಕಷ್ಟು ಜನ ಕೇಳಿದ್ದಾರೆ. ಗೌರಿ ಸಾವಿನ ನಂತರ ಜನಪದವಾಗಿಬಿಟ್ಟಿದ್ದಾರೆ, ದಂತಕತೆಯಾಗಿದ್ದಾರೆ. ಹತ್ಯೆಯಾದ ಗೌರಿ, ಅನೇಕರ ಹೃದಯದಲ್ಲಿ ಮರುಹುಟ್ಟು ಪಡೆದಿದ್ದಾರೆ.

ಕೋಮುವಾದಿಗಳು ಗೌರಿಯ ಬಗ್ಗೆ ಎಷ್ಟೇ ಅಪಪ್ರಚಾರ ಮಾಡಿದರೂ ಗೌರಿ ಈ ನಾಡಿನ ಸೌಹಾರ್ದತೆಗಾಗಿ, ನೆಮ್ಮದಿಗಾಗಿ, ಶಾಂತಿಗಾಗಿ ದಣಿದ ಜೀವವೆಂಬುದನ್ನು ಚರಿತ್ರೆಯ ಪುಟಗಳಿಂದ ಅಳಿಸಿ ಹಾಕಲು ಸಾಧ್ಯವಿಲ್ಲ. ಅವರ ಚಿಂತನೆ ಮತ್ತು ಬದುಕನ್ನು ದಾಖಲೀಕರಿಸುವ ಪ್ರಯತ್ನಗಳು ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಲೇ ಇವೆ.

ನಮ್ಮದೇ ನೆಲದ ಮುಖ್ಯವಾಹಿನಿ ದೃಶ್ಯ ಮಾಧ್ಯಮಗಳು ಗೌರಿಯವರ ವ್ಯಕ್ತಿತ್ವದ ಬಗ್ಗೆ ಸಶಕ್ತವಾಗಿ ದಾಖಲಿಸುವ ಕೆಲಸ ಮಾಡಿವೆಯೇ? ಅದನ್ನು ಜನಸಾಮಾನ್ಯರಿಗೆ ತಲುಪಿಸಿವೆಯೇ? ಎಂದು ಕೇಳಿದರೆ ಉತ್ತರ ಅಸ್ಪಷ್ಟ. ಜನಸಮೂಹಕ್ಕೆ ಸುಲಭವಾಗಿ ತಲುಪಬಲ್ಲ, ಪ್ರಭಾವಿಸಬಲ್ಲ ದೃಶ್ಯ ಮಾಧ್ಯಮದ ಮೂಲಕ ಗೌರಿಯವರ ಹೋರಾಟದ ಬದುಕನ್ನು ಹೆಚ್ಚುಹೆಚ್ಚು ದಾಖಲಿಸಬೇಕಾಗಿದೆ. ಅಂತಹದ್ದೊಂದು ವಿನೂತನ ಮತ್ತು ಹೃದಯಸ್ಪರ್ಶಿ ಪ್ರಯೋಗವನ್ನು ಗೌರಿಯವರ ತಂಗಿ ಕವಿತಾ ಲಂಕೇಶ್ ಮಾಡಿದ್ದಾರೆ.

ಇಶಾ ಲಂಕೇಶ್ ಪ್ರೊಡಕ್ಷನ್‌ನಿಂದ ನಿರ್ಮಾಣವಾಗಿರುವ, ತನ್ನ ಸಹೋದರಿ ಗೌರಿಯ ಬಗ್ಗೆ ಕವಿತಾ ಲಂಕೇಶ್ ನಿರ್ದೇಶಿಸಿರುವ ’ಗೌರಿ’ ಸಾಕ್ಷ್ಯಚಿತ್ರ- ಗೌರಿಯವರ ಬದುಕು, ಹೋರಾಟ, ದಿಟ್ಟ ಪತ್ರಿಕೋದ್ಯಮ ಹಾಗೂ ಅವರ ಹತ್ಯೆಯ ಕುರಿತು ಬೆಳಕು ಚೆಲ್ಲುತ್ತದೆ. ಸಾಮಾನ್ಯ ಜನಕ್ಕೆ ಗೌರಿಯವರ ವ್ಯಕ್ತಿತ್ವವನ್ನು ಪರಿಣಾಮಕಾರಿಯಾಗಿ ಪರಿಚಯಿಸಿಕೊಡುತ್ತದೆ.

ಅಪರೂಪದ ದೃಶ್ಯಗಳನ್ನು ಒಳಗೊಂಡಿರುವ ಈ ಸಾಕ್ಷ್ಯಚಿತ್ರಕ್ಕೆ 2022ರ ಟೊರೊಂಟೊ ವುಮೆನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬೆಸ್ಟ್ ಹ್ಯೂಮನ್ ರೈಟ್ಸ್ ಪ್ರಶಸ್ತಿಯೂ ದೊರತಿದೆ. ಕಳೆದ ಜನವರಿ 29ರಂದು ಗೌರಿ ಜನ್ಮದಿನದ ಅಂಗವಾಗಿ ಬೆಂಗಳೂರಿನಲ್ಲಿ ಈ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ನಮ್ಮೆಲ್ಲರ ಭಾವಕೋಶದೊಳಗಿರುವ ಗೌರಿ, ಕಣ್ಣಾಲಿಗಳಲ್ಲಿ ಹೊರಬರುವುದಕ್ಕೆ ಈ ಸಾಕ್ಷ್ಯಚಿತ್ರ ಕಾರಣವಾಯಿತು. ಪ್ರದರ್ಶನ ಮುಗಿದ ಬಳಿಕ ಗಾಢ ಮೌನ ಆವರಿಸಿತ್ತು.

ಗೌರಿಯವರ ಒಡನಾಡಿಗಳು, ಚಿಂತಕರು, ಹೋರಾಟಗಾರರು, ಸಹದ್ಯೋಗಿಗಳು, ಸರ್ಕಾರದ ಪ್ರತಿನಿಧಿಗಳು, ತನಿಖಾ ಅಧಿಕಾರಿಗಳು, ಪತ್ರಕರ್ತರು, ಸಂಬಂಧಿಕರು- ಹೀಗೆ ಮೊದಲಾದವರ ಅಭಿಪ್ರಾಯಗಳನ್ನು ಈ ಸಾಕ್ಷ್ಯಚಿತ್ರ ದಾಖಲಿಸಿದೆ. ಇಂಗ್ಲಿಷ್ ಪತ್ರಿಕೋದ್ಯಮದಲ್ಲಿದ್ದ ಗೌರಿ, ತನ್ನ ತಂದೆಯ ಮರಣದ ನಂತರ ಕನ್ನಡ ಪತ್ರಿಕೋದ್ಯಮಕ್ಕೆ ಕಾಲಿಟ್ಟರು; ಸವಾಲುಗಳನ್ನು ಎದುರಿಸಿದರು. ಲಂಕೇಶ್ ಪತ್ರಿಕೆಯ ಜವಾಬ್ದಾರಿಯಿಂದ ಹೊರಬಂದು ಗೌರಿ ಲಂಕೇಶ್ ಪತ್ರಿಕೆ ಆರಂಭಿಸಿದರು. ಸರ್ಕಾರಗಳನ್ನು ದಿಟ್ಟವಾಗಿ ಪ್ರಶ್ನಿಸಿ ಎದುರು ಹಾಕಿಕೊಂಡರು. ಸಾಕ್ಷ್ಯಚಿತ್ರದಲ್ಲಿ ಮಾತನಾಡಿರುವ ಲೇಖಕಿ ಎಂ.ಎಸ್.ಆಶಾದೇವಿ ಹೇಳುತ್ತಾರೆ: “ಗೌರಿ, ತನ್ನ ತಂದೆಯಾದ ಲಂಕೇಶ ಅವರ ಮುಂದುವರಿಕೆಯಲ್ಲ, ಲಂಕೇಶ್ ಅವರ ಬೆಳವಣಿಗೆ”. ನಿಜ, ಲಂಕೇಶ್ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ, ಆಕ್ಟಿವಿಸ್ಟ್-ಜರ್ನಲಿಸ್ಟ್ ಆದರು. ಚಳವಳಿಗಳ ಭಾಗವಾದರು. ಸಂಪಾದಕೀಯ ಬರಹಗಳಲ್ಲಿ ತಮ್ಮ ನಿಲುವುಗಳನ್ನು ದಿಟ್ಟವಾಗಿ ವ್ಯಕ್ತಪಡಿಸಿದರು.

ಎಂ.ಎಸ್ ಆಶಾದೇವಿ

ಕೋಮು ಸೌಹಾರ್ದದ ಬಗ್ಗೆ ಗೌರಿಯವರು ಆಡಿದ್ದ ಮಾತುಗಳ ಮೂಲಕ ಈ ಸಾಕ್ಷ್ಯಚಿತ್ರ ಆರಂಭವಾಗುತ್ತದೆ. ಕೊನೆ ಗಳಿಗೆಯವರಿಗೆ ತಾವು ನಂಬಿದ್ದ ವಿಚಾರಗಳಿಗೆ ಬದ್ಧರಾಗಿ ಬದುಕಿದ ಜೀವ ಗೌರಿ. ಸಂಘಪರಿವಾರ ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿ ದರ್ಗಾದ ಸುತ್ತ ಕೋಮು ವಿಷಮತೆಯನ್ನು ಹುಟ್ಟಿಹಾಕಿದ ನಂತರದಲ್ಲಿ ಮಾಡಲಾದ ಸತ್ಯಶೋಧಕ ವರದಿಯಲ್ಲಿ ಗೌರಿ ಮುಂಚೂಣಿಯಲ್ಲಿದ್ದರು. ಬಾಬಾಬುಡನ್‌ಗಿರಿ ದರ್ಗಾಕ್ಕೆ ಭೇಟಿ ನೀಡಿದರು. ಅಳಿ ತಪ್ಪಿದ ಸೌಹಾರ್ದತೆಯನ್ನು ಮರುಸ್ಥಾಪಿಸಲು ಪ್ರಯತ್ನಪಟ್ಟರು. ಆ ಸಮಯದಲ್ಲಿ ಗೌರಿಯವರ ಮೇಲೆ ಸಂಘಪರಿವಾರದ ದುರುಳರು ಮಾಡಿದ ದಾಳಿಯ ದೃಶ್ಯಾವಳಿಗಳು (ದೀಪು ಅವರು ಚಿತ್ರಿಸಿದ್ದ ಫುಟೇಜ್‌ಗಳು) ಕರ್ನಾಟಕದಲ್ಲಿ ಕೋಮು ವಿಷಬೀಜ ಬಿತ್ತಿದ ಸನ್ನಿವೇಶವನ್ನು ಪರಿಣಾಮಕಾರಿಯಾಗಿ ಹಿಡಿದಿಡುತ್ತದೆ.

ಕುದುರೆಮುಖವನ್ನು ರಾಷ್ಟ್ರೀಯ ಉದ್ಯಾನವೆಂದು ಘೋಷಿಸಿದಾಗ ಆದಿವಾಸಿಗಳು ಕಂಗಾಲಾದರು. ಮೂಲ ನಿವಾಸಿಗಳನ್ನು ಕಾಡಿನಿಂದ ಒಕ್ಕಲೆಬ್ಬಿಸಿದಾಗ ನಕ್ಸಲ್ ಹೋರಾಟ ಬಲವಾಯಿತು. ಆದಿವಾಸಿಗಳನ್ನು, ನಕ್ಸಲ್ ಹೋರಾಟಗಾರರನ್ನು ಭೇಟಿಯಾಗಿ ಸಂಭಾಷಣೆ ನಡೆಸಿದ ಆ ಕಾಲದ ಅಪರೂಪದ ದೃಶ್ಯಗಳು ಈ ಸಾಕ್ಷ್ಯಚಿತ್ರದಲ್ಲಿವೆ. ಶಾಂತಿಗಾಗಿ ಶ್ರಮಿಸಿದ ಗೌರಿಯವರ ಹೋರಾಟ ಪರಿಣಾಮಕಾರಿಯಾಗಿ ದಾಖಲಾಗಿದೆ.

ಸಾಕೇತ್ ರಾಜನ್ ಹತರಾದ ಬಳಿಕ ನಕ್ಸಲ್ ಹೋರಾಟಗಾರರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನಕ್ಕೆ ಗೌರಿ ಕೈಹಾಕಿದರು. ಒಳ್ಳೆಯ ಆಶಯಕ್ಕಾಗಿ ನಡೆಯುತ್ತಿರುವ ಚಳವಳಿ ನಾಡಿನೊಳಗೆ ಇರಬೇಕೆಂದು ಆಶಿಸಿದಾಗ, ನಕ್ಸಲ್ ಹೋರಾಟಗಾರರು, “ಸರ್ಕಾರದ ಶರಣಾಗತಿ ನೀತಿ”ಯಲ್ಲಿನ ದೋಷಪೂರಿತ ಷರತ್ತುಗಳನ್ನು ಒಪ್ಪಲಿಲ್ಲ. ಆದರೆ ಎಚ್.ಎಸ್.ದೊರೆಸ್ವಾಮಿ, ಗೌರಿ ಲಂಕೇಶ್ ಮೊದಲಾದವರ ಪ್ರಯತ್ನದ ಫಲವಾಗಿ ಸರ್ಕಾರ ತನ್ನ ಶರಣಾಗತಿ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿತು.

ಕೊಡಗಿನ ದಿಡ್ಡಳ್ಳಿಯಲ್ಲಿ ಆದಿವಾಸಿಗಳ ಗುಡಿಸಲುಗಳನ್ನು ಧ್ವಂಸ ಮಾಡಿದ ಪ್ರಭುತ್ವ, ಆ ಜನರನ್ನು ಕಾಡಿನಿಂದ ಒಕ್ಕಲೆಬ್ಬಿಸಿತು. ತಲ್ಲಣಿಸುವ ಜೀವವಾದ ಗೌರಿ, ಅಲ್ಲಿಗೆ ದೌಡಾಯಿಸಿದರು. ದಿಡ್ಡಳ್ಳಿಯಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಲಾಯಿತು. ಸರ್ಕಾರ ನೊಂದವರ ಕೂಗನ್ನು ಆಲಿಸಿವಂತೆ ಆಯಿತು. ಮಾತುಕತೆಗಳು ನಡೆದವು. ಈ ಹೋರಾಟದ ಫಲವಾಗಿ ಈಗ ಪುನರ್ವಸತಿಯಾಗಿದೆ. ಅಲ್ಲಿನ ಆದಿವಾಸಿಗಳು ಕೊಂಚ ಉಸಿರಾಡುವಂತಾಗಿದೆ.

ಶಿವಸುಂದರ್

ಬಾಬಾ ಬುಡನ್‌ಗಿರಿ ದರ್ಗಾ ಹೋರಾಟದಿಂದ ಹಿಡಿದು, ವಿದ್ಯಾರ್ಥಿಗಳ ಹೋರಾಟಗಳವರೆಗೂ ಗೌರಿ ದಣಿದರು, ದುಡಿದರು. ಹೊಸ ತಲೆಮಾರಿನ ಕನ್ಹಯ್ಯ ಕುಮಾರ್, ಜಿಗ್ನೇಶ್ ಮೇವಾನಿ, ಉಮರ್ ಖಾಲಿದ್ ಥರದ ಯುವಕರು ಕೈಗೆತ್ತಿಕೊಂಡ ಪ್ರಜಾಸತ್ತಾತ್ಮಕ ಹೋರಾಟಗಳನ್ನು ಗೌರಿ ಬೆಂಬಲಿಸಿದರು. ಕನ್ಹಯ್ಯನವರನ್ನು ತನ್ನ ಕಂದ ಎಂದರು. ಇದೆಲ್ಲವನ್ನೂ ’ಗೌರಿ’ ಸಾಕ್ಷ್ಯಚಿತ್ರ ಮನಮಿಡಿಯುವಂತೆ ಚಿತ್ರಿಸಿದೆ.

ಪತ್ರಿಕೆಯ ಕುರಿತು ಗೌರಿ ಒಮ್ಮೆ ಹೇಳಿದ್ದನ್ನು ಲೇಖಕಿ ಕೆ.ಷರೀಫಾ ಅವರು ನೆನೆಯುತ್ತಾ, “ಷರೀಫಾ, ಎಲ್‌ಐಸಿಯ ಹಣ ಬಂದಿದೆ, ನನ್ನ ಕಚೇರಿ ಸಿಬ್ಬಂದಿಗಳಿಗೆ ಹಣವನ್ನು ಹಂಚಿ, ಪತ್ರಿಕೆ ಮುಚ್ಚಬೇಕೆಂದಿದ್ದೇನೆ ಎಂದಿದ್ದಳು”- ಎನ್ನುತ್ತಾ ಗದ್ಗದಿತರಾಗುತ್ತಾರೆ. ಅದನ್ನು ತೆರೆಯ ಮೇಲೆ ನೋಡಿ, ಪ್ರೇಕ್ಷಕರೂ ಭಾವುಕರಾಗಿಬಿಡುತ್ತಾರೆ.

ಚಿಂತಕ ಶಿವಸುಂದರ್ ಅವರು ಗೌರಿ ಜೊತೆಗಿನ ಒಡನಾಟಗಳನ್ನು ಮೆಲುಕು ಹಾಕುತ್ತಾ, “ಸಾಕಷ್ಟು ಸಲ ಆಕೆಯೊಂದಿಗೆ ಜಗಳವಾಡಿದ್ದಿದೆ. ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದೆವು. ನಿಮ್ಮ ನಿಲುವು ಸರಿಯಲ್ಲ ಎಂದು ಹೇಳಿದ ಬಹುತೇಕ ಸಂದರ್ಭದಲ್ಲಿ ಅದನ್ನು ಒಪ್ಪಿಕೊಂಡಿದ್ದುಂಟು” ಎಂದು ನೆನೆಯುತ್ತಾರೆ.

ಇದನ್ನೂ ಓದಿ: ಕವಿತಾ ಲಂಕೇಶ್‌ ನಿರ್ದೇಶನದ “ಗೌರಿ” ಸಾಕ್ಷ್ಯಚಿತ್ರಕ್ಕೆ ಬೆಸ್ಟ್ ಹ್ಯೂಮನ್ ರೈಟ್ಸ್ ಪ್ರಶಸ್ತಿ

ಗೌರಿಯವರ ಪತ್ರಿಕೆಯಲ್ಲಿ ಕೆಲಸ ಮಾಡಿದ ಗಿರೀಶ್ ತಾಳಿಕೋಟೆ ಹೀಗೆ ನೆನೆಯುತ್ತಾರೆ: “ಪ್ರತಿ ಸಂಚಿಕೆಯು ಮುಗಿದ ಬಳಿಕ ನಮ್ಮೆಲ್ಲರಿಗೂ ಮೇಡಂ ಥ್ಯಾಂಕ್ಸ್ ಹೇಳುತ್ತಿದ್ದರು. ನಾವು ಸಂಬಳ ತೆಗೆದುಕೊಳ್ಳುತ್ತೇವೆ, ಹಾಗಿದ್ದರೂ ಏಕೆ ಈ ಥ್ಯಾಂಕ್ಸ್ ಹೇಳುತ್ತೀರಿ?- ಎಂದು ಕೇಳಿದ್ದೆ. ನಿಮ್ಮ ಕೆಲಸಕ್ಕೆ ನಾನು ಸಂಬಳ ಕೊಡಬಹುದು, ಆದರೆ ನಿಮ್ಮ ಕಮಿಟ್‌ಮೆಂಟ್‌ಗಲ್ಲ ಎಂದಿದ್ದರು”.

ಈಗ ಸಂಸ್ಕೃತಿ ಸಚಿವರಾಗಿರುವ ಸುನಿಲ್‌ಕುಮಾರ್ ಮತ್ತು ಇವರ ವಿರುದ್ಧ ಚುನಾವಣೆಗೆ ನಿಲ್ಲುತ್ತೇನೆಂದು ಘೋಷಿಸಿಕೊಂಡಿರುವ ಪ್ರಮೋದ್ ಮುತಾಲಿಕ್- ಆ ಕಾಲದಲ್ಲಿ ಕೋಮು ಸೌಹಾರ್ದತೆಯನ್ನು ಕದಡಲು ಆಡಿದ ಮಾತುಗಳ ವಿಡಿಯೊ ಫುಟೇಜ್‌ಗಳನ್ನೂ ಸಾಕ್ಷ್ಯಚಿತ್ರ ಒಳಗೊಂಡಿದೆ. ಗೋವಾ ಮತ್ತು ಮಹಾರಾಷ್ಟ್ರದವರೆಗೆ ಗೌರಿ ಹಂತಕರ ಜಾಲ ಹಬ್ಬಿರುವುದನ್ನು ತೆರೆದಿಡಲಾಗಿದೆ. ಅಂತಿಮವಾಗಿ ಗೌರಿ ಹತ್ಯೆಯಲ್ಲಿ ಹದಿನೆಂಟು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ನಡೆಯುತ್ತಿದೆ.

ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಗೌರಿ ಒಡನಾಡಿಗಳಾದ ವಿ.ಎಸ್.ಶ್ರೀಧರ್, ನೂರ್ ಶ್ರೀಧರ್, ಶಿವಸುಂದರ್, ಕೆ.ಎಲ್.ಅಶೋಕ್, ಪತ್ರಕರ್ತರಾದ ಆದಿತ್ಯ ಭಾರದ್ವಾಜ್, ದಿನೇಶ್ ಅಮಿನ್‌ಮಟ್ಟು, ಪಿ.ಸಾಯಿನಾಥ್, ವಿದ್ಯಾರ್ಥಿ ನಾಯಕರಾದ ಕನ್ಹಯ್ಯಕುಮಾರ್, ಜಿಗ್ನೇಶ್ ಮೇವಾನಿ, ಗೌರಿಯವರ ತಾಯಿ ಇಂದಿರಾ ಲಂಕೇಶ್, ಸಹೋದರಿ ಕವಿತಾ ಲಂಕೇಶ್ ಮತ್ತು ಅವರ ಮಗಳಾದ ಇಶಾ ಲಂಕೇಶ್, ಗೌರಿ ಹತ್ಯೆಯ ವಿಚಾರಣೆಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಬಾಲನ್ ಮೊದಲಾದವರ ಅಭಿಪ್ರಾಯಗಳನ್ನು ಸಾಕ್ಷ್ಯಚಿತ್ರ ದಾಖಲಿಸಿದೆ. ಗೌರಿ ಮೊಮೊರಿಯಲ್ ಟ್ರಸ್ಟ್‌ನ ಕಾರ್ಯದರ್ಶಿಯಾದ ದೀಪು ಅವರು ಈ ಸಾಕ್ಷ್ಯಚಿತ್ರ ಮೂಡಿಬರಲು ಸಾಕಷ್ಟು ಸಲಹೆ, ಸೂಚನೆಗಳನ್ನು ನೀಡಿದ್ದನ್ನು ಕವಿತಾ ಲಂಕೇಶ್ ಕಾರ್ಯಕ್ರಮದಲ್ಲಿ ಮನದುಂಬಿ ನೆನೆದರು. ದೀಪು ಅವರು ಸಾಕ್ಷ್ಯಚಿತ್ರದ ಛಾಯಾಗ್ರಾಹಕರಾಗಿಯೂ ಭಾಗಿಯಾಗಿದ್ದಾರೆ.

ಈ ಸಾಕ್ಷ್ಯಚಿತ್ರವನ್ನು ನೋಡಿದ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಸಾಕ್ಷ್ಯಚಿತ್ರ ಎಲ್ಲಿ ಲಭ್ಯವಿದೆ ಎಂದು ಆಸಕ್ತರು ಕೇಳುತ್ತಿದ್ದಾರೆ. ಆದಷ್ಟು ಬೇಗ ಇದು ಸಾರ್ವಜನಿಕವಾಗಿ ಲಭ್ಯವಾಗಿ, ಹೆಚ್ಚು ಹೆಚ್ಚು ಕಾಲೇಜುಗಳಲ್ಲಿ ಇದು ಪ್ರದರ್ಶನ ಕಾಣಬೇಕಿದೆ. ಆ ನಿಟ್ಟಿನಲ್ಲಿ ಯುವಕರು ಗೌರಿಯ ದಿಟ್ಟತನದ ಬಗ್ಗೆ, ಆ ದಿಟ್ಟತನ ಎದುರಿಸಿದ ಸವಾಲುಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಒಂದು ಗಂಟೆಯ ಈ ಸಾಕ್ಷ್ಯಚಿತ್ರ ನಮ್ಮ ಹೊಸ ತಲೆಮಾರಿನಲ್ಲಿ ಅರಿವಿನ ದೀಪ ಹಚ್ಚುತ್ತದೆ, ನಾವು ಕಳೆದುಕೊಂಡಿದ್ದು ಅನರ್ಘ್ಯ ರತ್ನವೆಂಬುದನ್ನು ನೆನೆಸುತ್ತದೆ, ಗೌರಿ ನಂಬಿದ್ದ ಪ್ರಜಾಸತ್ತಾತ್ಮಕ, ಸಂವಿಧಾತ್ಮಕ ಮೌಲ್ಯಗಳ ಉಳಿವು ಅಗತ್ಯ ಎಂಬುದನ್ನು ಮನವರಿಕೆ ಮಾಡಿಕೊಡುತ್ತದೆ. ಅದರ ಜೊತೆಗೆ ಕರ್ನಾಟಕದಲ್ಲಿ ಕೋಮುವಾದ ಬೆಳೆದ ಸಂದರ್ಭದ ಒಂದು ದಾಖಲೆಯಾಗಿಯೂ ಈ ಸಾಕ್ಷ್ಯಚಿತ್ರ ಮಹತ್ವದ್ದಾಗಿದೆ. ಅದರ ಸುತ್ತ ಹುಟ್ಟಿದ ಹೋರಾಟಗಳ ನೆನಪಿನ ದಾಖಲೆಯಾಗಿಯೂ ಕೂಡ!

’ಗೌರಿ’ ಸಾಕ್ಷ್ಯಚಿತ್ರ ನೋಡುನೋಡುತ್ತಾ ಕಿಕ್ಕಿರಿದು ತುಂಬಿದ್ದ ಸಭಾಂಗಣ ಸ್ತಬ್ಧವಾಯಿತು. ನಮ್ಮ ಭಾವಕೋಶದೊಳಗೆ ಅವಿತಿರುವ ಗೌರಿ ಕಣ್ಣೀರಾಗಿ ಹೊರಬಂದರು. ಇಂಥದ್ದೊಂದು ಸಾಕ್ಷ್ಯಚಿತ್ರ ನೀಡಿದ ಹೋರಾಟದ ಎಲ್ಲ ಜೀವಗಳಿಗೆ ಮತ್ತು ಪ್ರಮುಖವಾಗಿ ಕವಿತಾ ಅವರಿಗೆ ಶರಣು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿರುವುದಾಗಿ ಆರೋಪ: ಆಕೆ ತನ್ನನ್ನು ತಾನು ವಿವಸ್ತ್ರಗೊಳಿಸಿಕೊಂಡಿದ್ದಾಳೆ ಎಂದ ಪೊಲೀಸ್ ಕಮಿಷನರ್

ಹುಬ್ಬಳ್ಳಿ: ಪೊಲೀಸ್ ವ್ಯಾನ್ ಒಳಗೆ ಪೂರ್ಣ ಬಟ್ಟೆಯಿಲ್ಲದೆ ಮಹಿಳೆಯೊಬ್ಬರ ವಿಡಿಯೋ ವೈರಲ್ ಆದ ನಂತರ, ಬಿಜೆಪಿ ನಾಯಕರು ಪೊಲೀಸರು ಅವಳನ್ನು ಬಂಧಿಸುವಾಗ ಆಕೆಯ ಬಟ್ಟೆಗಳನ್ನು ಬಿಚ್ಚಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜನವರಿ 5...

ಬಿಜೆಪಿಯೊಂದಿಗೆ ಕೈಜೋಡಿಸಿದ ಗೌಡರೊಂದಿಗಿನ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿದ ಕೇರಳ ಜೆಡಿಎಸ್; ಹೊಸ ಪಕ್ಷದೊಂದಿಗೆ ವಿಲೀನ

ಜನತಾ ದಳ (ಜಾತ್ಯತೀತ) ದ ಕೇರಳ ಘಟಕವು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದ ರಾಷ್ಟ್ರೀಯ ನಾಯಕತ್ವದೊಂದಿಗೆ ಸಂಬಂಧವನ್ನು ಕಡಿದುಕೊಂಡು ಹೊಸ ರಾಜಕೀಯ ಪಕ್ಷದೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದೆ. ಈ ನಿರ್ಧಾರದ ಕುರಿತು ಶೀಘ್ರದಲ್ಲೇ ಅಧಿಕೃತ...

‘ಚೀನಾ, ರಷ್ಯಾ, ಕ್ಯೂಬಾ, ಇರಾನ್‌ಗಳನ್ನು ಹೊರಗಿಡಿ’: ವೆನೆಜುವೆಲಾಗೆ ಟ್ರಂಪ್ ತಂಡದ ಹೊಸ ತೈಲ ಎಚ್ಚರಿಕೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವೆನೆಜುವೆಲಾದ ಮಧ್ಯಂತರ ಅಧ್ಯಕ್ಷ ಡೆಲ್ಸಿ ರೊಡ್ರಿಗಸ್ ನೇತೃತ್ವದ ಹೊಸ ಆಡಳಿತಕ್ಕೆ ಚೀನಾ, ರಷ್ಯಾ, ಇರಾನ್ ಮತ್ತು ಕ್ಯೂಬಾ ಜೊತೆಗಿನ ಆರ್ಥಿಕ ಸಂಬಂಧಗಳನ್ನು "ಕಿತ್ತುಹಾಕಬೇಕು" ಮತ್ತು "ಕಡಿತಗೊಳಿಸಬೇಕು" ಎಂದು...

ದೆಹಲಿ ಫೈಜ್-ಎ-ಇಲಾಹಿ ಮಸೀದಿ ಬಳಿ ತೆರವು ಕಾರ್ಯಾಚರಣೆಗೆ ಸ್ಥಳೀಯರಿಂದ ವಿರೋಧ, ಉದ್ವಿಗ್ನತೆ; ಅಶ್ರುವಾಯು ಪ್ರಯೋಗ, 10 ಜನರ ಬಂಧನ

ದೆಹಲಿಯ ತುರ್ಕಮನ್ ಗೇಟ್-ರಾಮ್ಲೀಲಾ ಮೈದಾನ ಪ್ರದೇಶದಲ್ಲಿರುವ ಶತಮಾನಗಳಷ್ಟು ಹಳೆಯದಾದ ಫೈಜ್-ಎ-ಇಲಾಹಿ ಮಸೀದಿಯ ಬಳಿ ಬುಧವಾರ ಮುಂಜಾನೆ ನಡೆದ ತೆರವು ಕಾರ್ಯಾಚರಣೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಆ ನಂತರ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ, ಇದು...

ಮೋದಿ, ಶಾ ವಿರುದ್ಧ ಘೋಷಣೆ ಆರೋಪ: ತನ್ನದೇ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಮನವಿ ಮಾಡಿದ ಜೆಎನ್‌ಯು ಆಡಳಿತ ಮಂಡಳಿ

ಸೋಮವಾರ ರಾತ್ರಿ ವಿದ್ಯಾರ್ಥಿಗಳ ಗುಂಪೊಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ಆ ಘೋಷಣೆಗಳು "ಪ್ರಚೋದನಕಾರಿ, ಪ್ರಚೋದನಕಾರಿ ಮತ್ತು ಗೌರವಾನ್ವಿತ ಸುಪ್ರೀಂ ಕೋರ್ಟ್‌ನ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎಸ್‌ಐಟಿ ತನಿಖೆ ಪಕ್ಷಪಾತದಿಂದ ಕೂಡಿದೆ ಎಂಬ ವಿಪಕ್ಷಗಳ ಆರೋಪ ತಿರಸ್ಕರಿಸಿದ ಕೇರಳ ಹೈಕೋರ್ಟ್

ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದ ತನಿಖೆಯು ಪಕ್ಷಪಾತದಿಂದ ಕೂಡಿದೆ ಅಥವಾ ಸರ್ಕಾರದ ಒತ್ತಡದಲ್ಲಿದೆ ಎಂಬ ವಿರೋಧ ಪಕ್ಷದ ಆರೋಪಗಳನ್ನು ತಿರಸ್ಕರಿಸಿರುವ ಕೇರಳ ಹೈಕೋರ್ಟ್, ಪ್ರಸ್ತುತ ನಡೆಯುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಯ...

ಆರ್‌ಎಸ್‌ಎಸ್ ಕುರಿತ ಹೇಳಿಕೆ: ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ನಲಪಾಡ್‌ಗೆ ಕೋರ್ಟ್ ನೋಟಿಸ್

ಬೆಂಗಳೂರು: ಆರ್‌ಎಸ್‌ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಾನನಷ್ಟ ಮೊಕದ್ದಮೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್ ಮತ್ತು ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಗೆ ಸಂಸದ/ಶಾಸಕರ...

‘ನಾನು ಹಿಂದೂ ಅಲ್ಲ, ಮನುಷ್ಯ’: ಎಸ್‌ಪಿ ನಾಯಕ ಶಿವರಾಜ್ ಸಿಂಗ್ ಯಾದವ್ ಹೇಳಿಕೆ ತಿರುಚಿ ವಿವಾದ ಸೃಷ್ಟಿಸಿದ ಬಿಜೆಪಿ ಬೆಂಬಲಿಗರು

ಸಮಾಜವಾದಿ ಪಕ್ಷದ ನಾಯಕ, ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಆಪ್ತ ಸಹಾಯಕ ಹಾಗೂ ಉತ್ತರ ಪ್ರದೇಶದ ಫಿರೋಜಾಬಾದ್‌ನ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ್ ಸಿಂಗ್ ಯಾದವ್ ‘ನಾನು ಹಿಂದೂ ಅಲ್ಲ, ನಾನು...

ಛತ್ತೀಸ್‌ಗಢ : ಎಂಟು ಮಂದಿ ಬಂಗಾಳಿ ಮುಸ್ಲಿಂ ವಲಸೆ ಕಾರ್ಮಿಕರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ; ವರದಿ

ಛತ್ತೀಸ್‌ಗಢದ ರಾಯ್‌ಪುರದಲ್ಲಿ ಭಾನುವಾರ (ಜ.4) ಬಜರಂಗದಳ ಕಾರ್ಯಕರ್ತರು ಎಂಟು ಮಂದಿ ಬಂಗಾಳಿ ಮಾತನಾಡುವ ಮುಸ್ಲಿಂ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದು, ಒಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರಾಯ್‌ಪುರ ಜಿಲ್ಲೆಯ ಕಟೋವಾಲಿ...

‘ಉಮರ್ ಮತ್ತು ಶಾರ್ಜಿಲ್ ಜಾಮೀನು ನಿರಾಕರಣೆ’: ಶಾಸಕಾಂಗ, ನ್ಯಾಯಾಂಗದ ಕಾರ್ಯವೈಖರಿಯಲ್ಲಿನ ವೈರುಧ್ಯಗಳಿಗೆ ಉದಾಹರಣೆ: ಶ್ರೀಪಾದ್ ಭಟ್

ಇಂಡಿಯನ್ ಎಕ್ಸ್ಪ್ರೆಸ್ ನಲ್ಲಿನ ವರದಿಯ ಪ್ರಕಾರ ಈ ಪ್ರಕರಣದ ವಿಚಾರಣೆಯಲ್ಲಿರುವ ಮುಖ್ಯ ಪ್ರಶ್ನೆ: ಬಂಧನವಾಗಿ ಐದು ವರ್ಷಗಳಾದರೂ ಸಹ ಇನ್ನೂ ವಿಚಾರಣೆ ಆರಂಭವಾಗಿಲ್ಲ. ದೀರ್ಘಕಾಲದ ಜೈಲುವಾಸವನ್ನು ಭಯೋತ್ಪಾದಕ ವಿರೋಧಿ ಕಾನೂನಿನ ಅಡಿಯಲ್ಲಿ ಸಮರ್ಥಿಸಬಹುದೇ?...