Homeಅಂಕಣಗಳುಮಂಪರು: ಸ್ತ್ರೀಸಂವೇದನೆ ಹಾಗೂ ಮೈಮನಗಳ ಉಭಯ ಸಂಕಟ

ಮಂಪರು: ಸ್ತ್ರೀಸಂವೇದನೆ ಹಾಗೂ ಮೈಮನಗಳ ಉಭಯ ಸಂಕಟ

- Advertisement -
- Advertisement -

ಚೀಮನಹಳ್ಳಿ ರಮೇಶಬಾಬು ಅವರ ’ಮಂಪರು’ ಕೃತಿಯು ಕನ್ನಡ ಕಾದಂಬರಿ ಪ್ರಕಾರದ ಸಾಧ್ಯತೆಗಳನ್ನು ಸಮರ್ಥವಾಗಿ ದುಡಿಸಿಕೊಂಡಿದೆ. ಆಧುನಿಕತೆಯ ಫಲವಾಗಿರುವ ಮಹಾನಗರದ ಔದ್ಯೋಗಿಕ ಜೀವನ ಹಾಗೂ ಅದರ ತತ್ಫಲವಾಗಿ ಅಸ್ತವ್ಯಸ್ತಗೊಳ್ಳುವ ವೈಯಕ್ತಿಕ ಬದುಕಿನ ವ್ಯಾಪಾರಗಳನ್ನು ಕಟ್ಟಿಕೊಡುವುದನ್ನು ಈ ಕಾದಂಬರಿಯು ತನ್ನ ವಸ್ತು-ವಿನ್ಯಾಸವನ್ನಾಗಿ ರೂಪಿಸಿಕೊಂಡಿದೆ. ಇದು ಹೆಣ್ಣೊಬ್ಬಳು ಹಳ್ಳಿಯಿಂದ ಬಂದು ಬೆಂಗಳೂರಿನಂತಹ ಮಹಾನಗರದಲ್ಲಿ ಕಾರ್ಪೊರೇಟ್ ಕಂಪನಿಯೊಂದರಲ್ಲಿ ಉದ್ಯೋಗದ ಮೂಲಕ ತನ್ನ ಅಸ್ತಿತ್ವ ಹಾಗೂ ಅಸ್ಮಿತೆಯನ್ನು ಕಂಡುಕೊಳ್ಳುವಾಗ ಎದುರಾಗುವ ಸಂಘರ್ಷಗಳ ಕಥನವಾಗಿದೆ. ನಮ್ಮ ಸಮಾಜದಲ್ಲಿ ಹೆಣ್ಣಾಗಿರುವ ಕಾರಣಕ್ಕಾಗಿಯೇ ಆಕೆಯ ಆಯ್ಕೆ ಮತ್ತು ಸ್ವಾತಂತ್ರ್ಯದ ಹರಣದ ನಡುವೆಯೂ ನಡೆಯುವ ಮೈಮನಗಳ ಲೈಂಗಿಕ ತುಡಿತಗಳನ್ನು ಈ ಕಾದಂಬರಿಯು ಪರಿಣಾಮಕಾರಿಯಾಗಿ ಚಿತ್ರಿಸಿದೆ. ಇಡೀ ಕಥನವನ್ನು ಬಹುತೇಕವಾಗಿ ಮಹಿಳಾ ಕಣ್ಣೋಟದಿಂದ ರೂಪಿಸಿರುವುದರಿಂದ ಗಂಡು ಲೋಕದ ಅಹಮ್ಮಿಕೆಗಳನ್ನು ತಲೆಕೆಳಗು ಮಾಡಿ ನೋಡಲು ಸಾಧ್ಯವಾಗಿದೆ.

’ಮಂಪರು’ ಕಾದಂಬರಿಯನ್ನು ಅದರ ಹೆಣಿಗೆಯ ದೃಷ್ಟಿಯಿಂದ ಗಮನಿಸುವುದಾದರೆ ಹಲವು ಆಯಾಮಗಳಿಂದ ಓದುಗರ ಮನಸ್ಸನ್ನು ಕಾಡುತ್ತದೆ. ಸೃಜನಶೀಲ ಕೃತಿಗಳ ರಚನೆಯಲ್ಲಿ ನೆನಪುಗಳ ಪಾತ್ರ ತುಂಬಾ ಮುಖ್ಯವಾಗಿರುತ್ತದೆ. ಈ ಕೃತಿಯನ್ನು ಸುಮನ ಎಂಬ ಮಹಿಳಾ ಪಾತ್ರವನ್ನು ಆಕೆಯ ನೆನಪುಗಳ ಮೂಲಕವೇ ಕಟ್ಟಲಾಗಿದೆ. ಸ್ತ್ರೀಸಂವೇದನೆಯ ನೆಲೆಗಟ್ಟಿನಿಂದ ಇದು ಮಹತ್ವದ ಕೃತಿಯಾಗಿದೆ. ಭಾಷಿಕ ನಿರೂಪಣೆಯ ನಿಟ್ಟಿನಿಂದ ನೋಡಿದರೆ ಇದರಲ್ಲಿ ಮೂರು ಪದರುಗಳಿವೆ. 1. ಕೃತಿಯ ವಸ್ತು, ಆಶಯಕ್ಕೆ ಅನುಗುಣವಾಗಿ ನಿರೂಪಣೆಯ ಭಾಷೆಯು ವಿನೂತನವಾಗಿದೆ. ಈ ಹೊಸ ಭಾಷಿಕ ವಿನ್ಯಾಸದಿಂದ ಪಾತ್ರಗಳ ಮನೋವ್ಯಾಪಾರಗಳು ಹಾಗೂ ಪ್ರಜ್ಞಾ ಪಾತಳಿಗಳು ಉಜ್ವಲವಾಗಿ ಬೆಳಗುವಂತಾಗಿದೆ. 2. ಸುಮನಳ ಮುಖಾಂತರ ಕಾದಂಬರಿಯು ಮಹಾನಗರ ಮತ್ತು ಹಳ್ಳಿಯ ನಡುವೆ ನಂಟನ್ನು ಸಾಧಿಸುತ್ತದೆ. ಕಾದಂಬರಿಯು ಗ್ರಾಮೀಣ ಜಗತ್ತಿನ ವಿವರಗಳನ್ನು ನೀಡುವಾಗ ಕೋಲಾರದ ಚಿಂತಾಮಣಿ ಸೀಮೆಯ ಭಾಷೆಯಲ್ಲಿ ನಿರೂಪಿತವಾಗಿದೆ. ಸುಮನಳ ತಾಯಿ ಮಾತನಾಡುವಾಗ ಅಪ್ಪಟ ಗ್ರಾಮ್ಯ ಭಾಷೆಯಲ್ಲಿ ಮಾತನಾಡುತ್ತಾರೆ. ಅಲ್ಲಾಭಕ್ಷಿಯ ಮಾತುಗಳಲ್ಲಿ ಉರ್ದುಗನ್ನಡ ಭಾಷೆಯು ಬಹುತ್ವಕ್ಕೆ ಸಾಕ್ಷಿಯಾಗಿದೆ. 3. ಈ ಕೃತಿಯಲ್ಲಿ ಬರುವ ಅನಾಮಿಕ ಭಿಕ್ಷುಕನೊಬ್ಬ ತೆಲುಗು ತತ್ವಪದಗಳನ್ನು ಹಾಡುತ್ತಿರುತ್ತಾನೆ. ಶ್ರಮಿಕ ಸಮುದಾಯಗಳ ಆಧ್ಯಾತ್ಮಿಕ ಜೀವಾಳವಾಗಿದ್ದ ಈ ತತ್ವಪದ ಪರಂಪರೆಯನ್ನು ಕಾದಂಬರಿಯು ತನ್ನ ಭಿತ್ತಿಯಲ್ಲಿ ಐಕ್ಯಗೊಂಡಿದೆ. ಹೀಗೆ ’ಮಂಪರು’ ಕಾದಂಬರಿಯು ಭಾಷಿಕವಾಗಿ, ಸಾಹಿತ್ಯಿಕವಾಗಿ, ಪ್ರಾದೇಶಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಹಲವು ಆಯಾಮಗಳೊಂದಿಗೆ ತಳುಕು ಹಾಕಿಕೊಂಡಿದೆ.

ಕಾದಂಬರಿಯ ಮುಖ್ಯ ಪಾತ್ರವಾಗಿರುವ ಸುಮನ ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾಳೆ. ಆಕೆಯ ಬಾಸ್ ಲೈಂಗಿಕ ಕ್ರಿಯೆಗೆ ಆಹ್ವಾನಿಸುತ್ತಾನೆ. ಈ ಅನಪೇಕ್ಷಿತ ಆಹ್ವಾನದ ಕಿರಿಕಿರಿಯಿಂದ ರೋಸಿಹೋಗುವ ಸುಮನ ಸ್ವ-ಸಾಂತ್ವನಕ್ಕಾಗಿ ಸದಾ ನಶೆಯ ಮತ್ತೇರಿಸುವ ವೈನು ಹಾಗೂ ಅನಾಮಧೇಯ ತಿರುಕನೊಬ್ಬ ಹಾಡುವ ತತ್ವಪದಗಳಿಗೆ ಮೊರೆಹೋಗುತ್ತಾಳೆ. ಸದ್ಯದ ಪರಿಸ್ಥಿತಿಯನ್ನು ನಿಭಾಯಿಸುವುದರಲ್ಲಿ ಸುಮನಳಿಗೆ ಎರಡು ಬಗೆಯ ದ್ವಂದ್ವಗಳು ತಲೆದೋರುತ್ತವೆ. ಮೊದಲನೆಯದಾಗಿ, ಸುಮನ ತನ್ನ ಲೈಂಗಿಕ ಕಾಮನೆ ಎಂಬ ಬಿಸಿ ತುಪ್ಪವನ್ನು ನುಂಗಿಕೊಂಡು ಸ್ವ-ನಿಯಂತ್ರಣದಲ್ಲಿರಲು ಸಾಧ್ಯವಾಗದ ಹತಾಶೆಯ ಮನಸ್ಥಿತಿಯಲ್ಲಿರುವುದು; ಅದನ್ನು ಹೊರಗೆ ಉಗುಳಿ ನಿರುಮ್ಮಳವಾಗಿಯೂ ಇರಲಾಗದ ಉಭಯ ಸಂಕಟಕ್ಕೆ ತುತ್ತಾಗುವುದು. ತನ್ನ ಊರಿನ ’ಮೇಲ್ಜಾತಿ’ಯ ರತ್ನಾಕರನೆಂಬ ಹುಡುಗನಿಂದ ಒಮ್ಮೆ ಲೈಂಗಿಕ ಸಮಾಗಮ ಅನುಭವಿಸಿದ ಮೇಲೆ, ಸುಮನ ಈ ನೆನಪಿನಿಂದ ಹೊರಬರಲಾಗದೆ ಬದುಕಿನುದ್ದಕ್ಕೂ ಪರಿತಪಿಸುತ್ತಾಳೆ. ಜಾತಿಯ ಕಾರಣಕ್ಕಾಗಿ ಮದುವೆಯೂ ಆಗದೇ ಒಂಟಿಯಾಗಿಯೇ ತನ್ನ ಮೈಮನಗಳ ತೃಷೆಯ ದ್ವಂದ್ವದಲ್ಲಿ ಬಿದ್ದು ಒದ್ದಾಡುತ್ತಾಳೆ. ಎರಡನೆಯದಾಗಿ, ಬಾಲ್ಯದಲ್ಲಿ ತನ್ನ ತಂದೆಯು ಮನೆಬಿಟ್ಟು ಹೋಗಿರುವ ಕಾರಣವು ಸುಮನಳ ಮನಸ್ಸನ್ನು ತೀವ್ರವಾಗಿ ಕಾಡುತ್ತದೆ; ಇದರ ಜೊತೆಯಲ್ಲಿ ಪ್ರಿಯಕರನಿಂದಲೂ ನಿರಾಕರಿಸಲ್ಪಟ್ಟು ಗೊಂದಲಕ್ಕೆ ಬೀಳುತ್ತಾಳೆ; ತನ್ನ ತಾಯಿಯಿಂದಲೂ ದೂರವಾಗುತ್ತಾಳೆ; ಈಗ ಆಕೆಗೆ ಉಳಿಯುವ ಆಯ್ಕೆಯೆಂದರೆ ಪುರುಷ ಪ್ರಧಾನ ವ್ಯವಸ್ಥೆಯ ಮೌಲ್ಯಗಳನ್ನು ಒಪ್ಪಿಕೊಂಡು ಬಲಿಪಶುವಾಗಿ ಜೀವನ ನಡೆಸುವುದು. ಇಲ್ಲವಾದರೆ ಇದರಿಂದ ಹೊರಬರಲು ಸಂಘರ್ಷ ನಡೆಸುವುದು. ಸಂಘರ್ಷವೇ ಸುಮನಳ ಆಯ್ಕೆಯಾಗಿ ನಿಲ್ಲುತ್ತದೆ. ಈ ಹೋರಾಟದ ಪಯಣದಲ್ಲಿ ಆಕೆಯ ಮಾನಸಿಕ ತೊಳಲಾಟ, ಲೈಂಗಿಕ ನಿಯಂತ್ರಣದ ವಿಫಲ ಪ್ರಯತ್ನಗಳು ಈ ಕಾದಂಬರಿಯ ಪ್ರಧಾನ ಭೂಮಿಕೆಯಾಗುತ್ತದೆ.

ಇದನ್ನೂ ಓದಿ: ಪುಸ್ತಕ ವಿಮರ್ಶೆ; ಉಪ್ಪುಚ್ಚಿ ಮುಳ್ಳು: ಅಂತಃಕರಣಕ್ಕೆ ಕಿವಿಯಾದ ಕತೆಗಳು

ಚೀಮನಹಳ್ಳಿ ರಮೇಶಬಾಬು ಈ ಕಾದಂಬರಿಯನ್ನು ’ಮನುಷ್ಯ ಸಂಕುಲದ ಏಳಿಗೆಗಾಗಿಯೇ ಪ್ರಾಣವನ್ನು ತೇಯುತ್ತಿರುವ ಎಲ್ಲ ಪ್ರಾಣಿಗಳಿಗೆ…’ ಅರ್ಪಿಸಿದ್ದಾರೆ. ಜೀವಸಂಕುಲ ಎಂದಾಕ್ಷಣ ಮನುಷ್ಯನೇ ಕೇಂದ್ರವಾಗಿರುತ್ತಾನೆ; ನಿಸರ್ಗ, ಪರಿಸರ, ಪ್ರಾಣಿ, ಪಕ್ಷಿ, ಸೂಕ್ಷ್ಮಾತಿಸೂಕ್ಷ್ಮ ಜೀವಿಗಳು ಈ ಮಾನವ ಕೇಂದ್ರಿತ ನೆಲೆಯಿಂದ ಹೊರಗೆ ಉಳಿಯುವಂತೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ’ಮಂಪರು’ ಕೃತಿಯು ’ಜೀವ ಕೇಂದ್ರಿತ’ ನೆಲೆಯ ನಿಲುವುಗಳಿಂದ ಗಮನ ಸೆಳೆಯುತ್ತದೆ. ರಾಜೀವ, ತಾರಾನಾಥ್, ನಮಿತ, ಅರವಿಂದ, ಸುಮನ-ಇವರೆಲ್ಲರೂ ಟ್ರಾನ್ಸ್‌ಜೆನಿಕ್ ಇಲಿಗಳ ಮೇಲೆ ಔಷಧಿಗಳ ಪ್ರಯೋಗ ನಡೆಸುವ ಕಂಪನಿಯಲ್ಲಿ ಉದ್ಯೋಗಿಗಳಾಗಿದ್ದಾರೆ. ಕ್ಯಾನ್ಸರ್‌ದಂತಹ ಮಾರಕ ಕಾಯಿಲೆಗಳನ್ನು ಗುಣಪಡಿಸುವ ಸಂಶೋಧನೆಯಲ್ಲಿ ನಿರತವಾಗಿರುವ ಈ ಕಂಪನಿಯು ಟ್ರಾನ್ಸಜೆನಿಕ್ ಇಲಿಗಳ ಮೇಲೆ ನಡೆಸುವ ಪ್ರಯೋಗವು ಅತ್ಯಂತ ಅಮಾನುಷವಾಗಿರುತ್ತದೆ. ಇಲ್ಲಿ ಅನಿಮಲ್ ಎಥಿಕ್ಸ್ ಬಗ್ಗೆ ಮಾತನಾಡುವ ರಾಜೀವ ಉದ್ಯೋಗವನ್ನು ಕಳೆದುಕೊಳ್ಳಬೇಕಾಗುತ್ತದೆ. ಇಲಿಗಳ ಮೇಲಿನ ಅಮಾನವೀಯ ಪ್ರಯೋಗವು, ಸುಮನಳಿಗೆ ತನ್ನ ದೇಹ ಮತ್ತು ಮನಸ್ಸಿನ ಮೇಲೆಯೇ ಪ್ರಯೋಗ ನಡೆಯುತ್ತಿರುವಂತೆ ತೀವ್ರವಾದ ಮಾನಸಿಕ ಕ್ಷೆಭೆಯನ್ನು ಅನುಭವಿಸುವಂತೆ ಮಾಡುತ್ತದೆ. ಪುಟ್ಟ ಇಲಿಮರಿಗಳು ತಮ್ಮ ತಾಯಿಯಿಂದ ಬೇರ್ಪಡಿಸಿದಾಗ ವಿಲವಿಲ ಒದ್ದಾಡುತ್ತವೆ; ಇದೇ ರೀತಿಯಲ್ಲಿ ಸುಮನ ತನ್ನ ತಾಯಿ, ಊರು, ಪ್ರಿಯಕರನಿಂದ ದೂರವಾದಾಗ ಅನಾಥಪ್ರಜ್ಞೆಯಿಂದ ನರಳುತ್ತಾಳೆ.

ಸುಮನಳ ಪಾತ್ರವು ಕಾದಂಬರಿಯ ತುಂಬ ಆವರಿಸಿಕೊಂಡಿರುವುದರಿಂದ ಓದುಗರ ಮನಸ್ಸನ್ನು ಕೂಡ ಆಕೆಯ ರೋದನ ಆವರಿಸಿಕೊಳ್ಳುತ್ತದೆ. ಹೆಣ್ಣಿನ ಇರುವಿಕೆಯನ್ನು ರೂಪಿಸುವ ಕುಟುಂಬ ಹಾಗೂ ಹೆಣ್ಣಿನ ಸ್ವಾತಂತ್ರ್ಯ, ಆಯ್ಕೆ, ಅಭಿರುಚಿಗಳನ್ನು ದಮನಿಸುವ ವೈವಾಹಿಕ ಸಂಸ್ಥೆಗಳನ್ನು ಈ ಕಾದಂಬರಿಯು ಅಗ್ನಿ ಪರೀಕ್ಷೆಗೆ ಒಡ್ಡುತ್ತದೆ. ಸುಮನ ಮೊದಲು ರತ್ನಾಕರನನ್ನು ಲೈಂಗಿಕವಾಗಿ ಕೂಡಿದ ಮೇಲೆ ಆ ನೆನಪಿನ ಅಲೆಗಳಲ್ಲಿ ಕೊಚ್ಚಿಹೋಗುತ್ತಾಳೆ. ಒಮ್ಮೆ ರಾತ್ರಿ ಉದ್ಯಾನವನದಲ್ಲಿ ಕುಳಿತಿದ್ದಾಗ ಅನಾಮಿಕನೊಬ್ಬನನ್ನು ಅಪ್ಪಿಕೊಳ್ಳಲು ಪ್ರಯತ್ನಿಸುತ್ತಾಳೆ. ರಾಜೀವನನ್ನು ಇಷ್ಟಪಡುವುದು ಕೂಡ ಆತ ರತ್ನಾಕರನಂತೆಯೇ ಇದ್ದಾನೆಂದು ಸುಮನ ತನ್ನನ್ನು ತಾನು ನಂಬಿಸಿಕೊಳ್ಳುವುದರಿಂದ; ರಾಜೀವನನ್ನು ಲೈಂಗಿಕವಾಗಿ ಕೂಡಿದಾಗ ರತ್ನಾಕರನ ನೆನಪಿನಿಂದಲೇ ರಮಿಸುತ್ತಾಳೆ; ಆತ ಕೂಡ ತನ್ನ ಬಾಲ್ಯದ ಗೆಳತಿಯ ನೆನಪಿನಿಂದ ಕೂಡುತ್ತಾನೆ. ಇಲ್ಲಿ ಗಂಡು-ಹೆಣ್ಣುಗಳು ಲೈಂಗಿಕ ಭೋಗದಲ್ಲಿ ಪರಸ್ಪರ ನಿಷ್ಠರಾಗದಿರುವ ಬಗ್ಗೆ ಕಾದಂಬರಿಯು ಹಲವು ನೈತಿಕ ಪ್ರಶ್ನೆಗಳ ಕಡೆಗೆ ಬೆರಳು ತೋರಿಸುತ್ತದೆ.

ಚೀಮನಹಳ್ಳಿ ರಮೇಶಬಾಬು

ಚೀಮನಹಳ್ಳಿ ರಮೇಶಬಾಬು ಅವರು ಕಾದಂಬರಿಯ ಕೊನೆಕೊನೆಯಲ್ಲಿ ಸಿನಿಮೀಯ ಹಾಗೂ ನಾಟಕೀಯ ತಿರುವುಗಳನ್ನು ಕಲ್ಪಿಸಿದ್ದಾರೆ. ಕಣ್ಣಿಗೆ ಕಟ್ಟುವ ಚಿತ್ರಕ ಭಾಷೆಯು ಓದುಗರನ್ನು ತನ್ನೊಳಗೆ ಸೆಳೆದುಬಿಡುತ್ತದೆ. ಆದರೆ ಭಾಷಿಕ ನಿರೂಪಣೆಯಲ್ಲಿ ಅನೇಕ ಕಡೆಗಳಲ್ಲಿ ಕಾದಂಬರಿಕಾರ ನುಸುಳಿಕೊಂಡು ನೇರಾನೇರವಾಗಿ ಕೆಲವು ತಾತ್ವಿಕ ಪ್ರಶ್ನೆಗಳನ್ನು ಎಸೆಯುತ್ತ ಹೋಗುತ್ತಾನೆ. ಕೃತಿಯನ್ನು ಓದುವಾಗ ಈ ಪ್ರಶ್ನೆಗಳು ಕೊಂಚ ಕಿರಿಕಿರಿಯನ್ನು ಉಂಟುಮಾಡುತ್ತವೆ. ಸುಮನ ನೋಡುವ ರಸ್ತೆಬದಿಯಲ್ಲಿರುವ ಅನಾಮಧೇಯ ಭಿಕ್ಷುಕನ ಜೋಪಡಿಯನ್ನು ಆಗಾಗ ಕಲಾತ್ಮಕವೆಂದು ಪ್ರಶಂಸಿಸುವುದು ಸಮಂಜಸ ಅನ್ನಿಸುವುದಿಲ್ಲ. ಇನ್ನು ಕಾದಂಬರಿಯ ತುಂಬ ಹರಡಿಕೊಂಡಿರುವ ತೆಲುಗು ತತ್ವಪದಗಳು ದ್ವಿಭಾಷಿಕರಲ್ಲದವರಿಗೆ ಅಷ್ಟು ಆಪ್ತ ಅನ್ನಿಸದೇ ಹೋಗಬಹುದು. ಇಂತಹ ಸಣ್ಣಪುಟ್ಟ ಓರೆಕೋರೆಗಳ ನಡುವೆಯೂ ಇದೊಂದು ಓದಲೇಬೇಕಾದ ಕೃತಿಯಾಗಿದೆ.

ಈಗ ಮತ್ತೆ ಕನ್ನಡದಲ್ಲಿ ಕಾದಂಬರಿಗಳಿಗೆ ಸುಗ್ಗಿಯ ಕಾಲ ಸನ್ನಿಹಿತವಾದಂತೆ ತೋರುತ್ತಿದೆ. ನಾವು ಬದುಕುತ್ತಿರುವ ಕಾಲಮಾನ ಮತ್ತು ಯುಗಮಾನಗಳು ಕಾದಂಬರಿಗಳ ಒಳಜಗತ್ತನ್ನು ರೂಪಿಸುತ್ತಿರುತ್ತವೆ. ಯಾವುದೇ ಕಾದಂಬರಿಕಾರರು ತಮ್ಮ ಕಾಲಮಾನದ ಬಿಕ್ಕಟ್ಟುಗಳನ್ನು ಹಾಗೂ ಅವು ತಂದೊಡ್ಡುತ್ತಿರುವ ಪರಿಣಾಮಗಳಿಂದ ತಪ್ಪಿಸಿಕೊಳ್ಳಲಾರರು. ಆದರೆ ಬಹಳಷ್ಟು ಕಾದಂಬರಿಕಾರರು ತಾವು ಆಯ್ದುಕೊಳ್ಳುವ ವಸ್ತು-ವಿನ್ಯಾಸಗಳಿಗೆ ತಕ್ಕ ಭಾಷೆ, ಶೈಲಿ, ನಿರೂಪಣೆಗಳ ಹೊಸ ಸವಾಲುಗಳನ್ನು ಎದುರಿಸದೇ ಹೋಗುವ ಸಾಧ್ಯತೆಗಳು ಇದ್ದೇ ಇರುತ್ತವೆ. ಹೊಸ ತಲೆಮಾರಿನ ಕೆಲವೇ ಕೆಲವು ಲೇಖಕರು ಹೊಸ ಸವಾಲುಗಳನ್ನು ಧೈರ್ಯದಿಂದ ಎದುರುಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚೀಮನಹಳ್ಳಿ ರಮೇಶಬಾಬು ಅವರ ಹೊಸ ಕಾದಂಬರಿ ’ಮಂಪರು’ ವಿನೂತನ ನುಡಿಗಟ್ಟು, ಕುತೂಹಲಕಾರಿ ನಿರೂಪಣೆ, ವಸ್ತು ವೈವಿಧ್ಯತೆ ಹಾಗೂ ಜಟಿಲವಾಗುತ್ತಿರುವ ಮನುಷ್ಯ ಸಂಬಂಧಗಳ ದೃಷ್ಟಿಯಿಂದ ಗಮನಾರ್ಹವಾಗಿದೆ.

ಡಾ. ಸುಭಾಷ್ ರಾಜಮಾನೆ

ಡಾ. ಸುಭಾಷ್ ರಾಜಮಾನೆ
ಕನ್ನಡ, ಇಂಗ್ಲಿಷ್, ಮರಾಠಿ ಭಾಷೆಗಳನ್ನು ಬಲ್ಲ ಸುಭಾಷ್, ಸಿನಿಮಾ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಹಾಗೂ ಅನುವಾದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತವಾಗಿ ಬೆಂಗಳೂರಿನ ಆರ್.ಸಿ. ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...