Homeಕರ್ನಾಟಕದಲಿತ ಸಂಘಟನೆಗಳ ಐಕ್ಯತೆ ಕುರಿತು ಎದ್ದಿರುವ ಪ್ರಶ್ನೆಗಳ ಸುತ್ತ...

ದಲಿತ ಸಂಘಟನೆಗಳ ಐಕ್ಯತೆ ಕುರಿತು ಎದ್ದಿರುವ ಪ್ರಶ್ನೆಗಳ ಸುತ್ತ…

ದಲಿತ ಸಂಘಟನೆಗಳ ಐಕ್ಯತಾ ಸಮಾವೇಶದ ಕುರಿತು ಎದ್ದಿರುವ ತಕರಾರುಗಳ ಕುರಿತು ದಲಿತ ಹೋರಾಟಗಾರರಾದ ಬಿ.ಆರ್‌.ಭಾಸ್ಕರ್‌ ಪ್ರಸಾದ್, ರವಿಕುಮಾರ್‌ ನೀಹ, ಕೊಟ್ಟ ಶಂಕರ್‌ ಮಾತನಾಡಿದ್ದಾರೆ

- Advertisement -
- Advertisement -

ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ರವರ 66ನೇ ಪರಿನಿಬ್ಬಾಣ ದಿನದ ಅಂಗವಾಗಿ ಬೆಂಗಳೂರಿನ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಡಿಸೆಂಬರ್‌ 6ರಂದು (ನಾಳೆ) ‘ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ’ ವತಿಯಿಂದ ಹಮ್ಮಿಕೊಳ್ಳಲಾಗಿರುವ ‘ದಲಿತ ಸಾಂಸ್ಕೃತಿಕ ಪ್ರತಿರೋಧ- ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶ’ದ ಕುರಿತು ಹಲವಾರು ಪ್ರಶ್ನೆಗಳು ಎದ್ದಿವೆ. ಸಮಾವೇಶದ ಕುರಿತು ಒಂದು ಸಂಚಲನವಂತೂ ಉಂಟಾಗಿದ್ದು, ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮುನ್ನೆಡೆಯಬೇಕು ಎಂಬ ಆಶಯಗಳು ವ್ಯಕ್ತವಾಗುತ್ತಿವೆ.

ದಲಿತರ ಐಕ್ಯತೆ ಎಂದು ಹೇಳಲಾಗುತ್ತಿದ್ದರೂ ಮಾದಿಗ ಸಮುದಾಯವನ್ನು ಕಡೆಗಣಿಸಲಾಗಿದೆ, ಹಲವು ನಾಯಕರ ಜೊತೆ ಮಾತುಕತೆ ನಡೆದಿಲ್ಲ, ಇದು ಬಲಗೈ (ಹೊಲೆಯ) ಸಮುದಾಯದ ಶಕ್ತಿಪ್ರದರ್ಶನವಾಗಿ ಮೇಲುನೋಟಕ್ಕೆ ಕಾಣುತ್ತಿದೆ. ಎಡಗೈ (ಮಾದಿಗ) ಸಮುದಾಯವು ಸುಮಾರು ಮೂರು ದಶಕಗಳ ಕಾಲ ನಡೆಸಿರುವ ಒಳಮೀಸಲಾತಿ ಹೋರಾಟದ ಕುರಿತು ಯಾವುದೇ ನಿಲುವನ್ನು ಐಕ್ಯತಾ ಸಮಾವೇಶದ ಸಂಘಟಕರು ವ್ಯಕ್ತಪಡಿಸುತ್ತಿಲ್ಲ. ಕಾಂಗ್ರೆಸ್‌ ಪಕ್ಷಕ್ಕೆ ಈ ಕಾರ್ಯಕ್ರಮದಿಂದ ಅನುಕೂಲವಾಗುತ್ತದೆ. ಬಿಎಸ್‌ಪಿಯಂತಹ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ದಲಿತ ಮುಖಂಡರನ್ನು ಕೈಬಿಡಲಾಗಿದೆ. ಇತ್ಯಾದಿ ಪ್ರಶ್ನೆಗಳು ಎದ್ದಿವೆ. ಸಮಾವೇಶ ಜರುಗಲು ಕೆಲವೇ ಗಂಟೆಗಳಿದ್ದು, ಆಗಿರುವ ತಪ್ಪುಗಳನ್ನು ಸರಿಪಡಿಸಲು ಈಗಲೂ ಕಾಲ ಮಿಂಚಿಲ್ಲ ಎಂಬ ಮಾತುಗಳನ್ನು ಆಕ್ಷೇಪ ಎತ್ತುತ್ತಿರುವ ದಲಿತ ಮುಖಂಡರು ಆಡುತ್ತಿದ್ದಾರೆ. ಮಹತ್ವದ ಕಾರ್ಯಕ್ರಮವು ಅಂತಿಮವಾಗಿ ತನ್ನ ಉದ್ದೇಶವನ್ನು ಸಾಧಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ದಲಿತ ಸಂಘರ್ಷ ಸಮಿತಿ (ದಸಂಸ) ಹುಟ್ಟಿಕೊಂಡಾಗ- ಸಂಘಟನೆಯೊಳಗೆ ಈ ನಮೂನೆಯ ಹೊಲೆಯ, ಮಾದಿಗ ಎಂಬ ಚರ್ಚೆಗಳಿರಲಿಲ್ಲ. ಜನಮಾನಸದಲ್ಲಿ ಹೊಲೆ, ಮಾದಿಗ ಭಿನ್ನತೆಗಳಿದ್ದರೂ ದಸಂಸ ನಾಯಕತ್ವದಲ್ಲಿ ಇರಲಿಲ್ಲ” ಎನ್ನುವವರಿದ್ದಾರೆ. ಪ್ರೊ.ಬಿ.ಕೃಷ್ಣಪ್ಪ ಅವರು ದಸಂಸದ ಮೊದಲ ಸಂಚಾಲಕರಾಗಿದ್ದರು. ಕೃಷ್ಣಪ್ಪ ಅವರನ್ನು ದಲಿತ ನಾಯಕರನ್ನಾಗಿ ಗುರುತಿಸಲಾಯಿತೇ ಹೊರತು, ಅವರನ್ನು ಮಾದಿಗರೆಂದು ಯಾರೂ ನೋಡಲಿಲ್ಲ. ಹೊಲೆಯ ಮಾದಿಗರನ್ನೂ ಒಳಗೊಂಡಂತೆ ಎಲ್ಲ ಅಸಹಾಯಕ ಸಮುದಾಯಗಳ ಧ್ವನಿಯಾಗಿ ಪ್ರೊ.ಕೃಷ್ಣಪ್ಪ ಹೊಮ್ಮಿದ್ದರು. ಹೀಗಿದ್ದ ದಸಂಸ ರಾಜಕೀಯ ಹಿಸಾಸಕ್ತಿಗಳಿಂದಾಗಿ ಕಾಲನಂತರದಲ್ಲಿ ಒಡೆದು ಹೋಯಿತು. ಒಬ್ಬರ ಮುಖವನ್ನು ಇನ್ನೊಬ್ಬರು ನೋಡಲಾಗದಷ್ಟು, ಒಂದೇ ವೇದಿಕೆಯಲ್ಲಿ ಕುಳಿತುಕೊಳ್ಳಲಾಗದಷ್ಟು ಒಡೆದು ಹೋಗಿದ್ದವರು ಈಗ ಒಂದಾಗುತ್ತಿದ್ದಾರೆ.

ಇದನ್ನೂ ಓದಿರಿ: ಡಿ.6ಕ್ಕೆ ದಲಿತ ಸಾಂಸ್ಕೃತಿಕ ಪ್ರತಿರೋಧ: ಟ್ವಿಟರ್‌ನಲ್ಲಿ ಗಮನ ಸೆಳೆದ ಅಭಿಯಾನ

ತಕರಾರುಗಳಿಗೆ ಸಂಬಂಧಿಸಿದಂತೆ ಹಲವು ದಲಿತ ಚಿಂತಕರನ್ನು ‘ನಾನುಗೌರಿ.ಕಾಂ’ ಮಾತನಾಡಿಸಿದೆ. “ಚಾಲನಾ ಸಮಿತಿಯೊಳಗೆ ಮಾದಿಗ ನಾಯಕರಿದ್ದಾರೆ. ಎನ್‌.ವೆಂಕಟೇಶ್‌ ಮತ್ತು ಎನ್‌.ಮುನಿಸ್ವಾಮಿಯಂತಹ ಮಾದಿಗ ಹಿನ್ನೆಲೆಯ ನಾಯಕರು ದಸಂಸಕ್ಕೆ ನೀಡಿರುವ ಕೊಡುಗೆಯನ್ನು ತಿಳಿಯದೆ ಕೆಲವರು ಮಾತನಾಡುತ್ತಿದ್ದಾರೆ. ಈ ಇಬ್ಬರೂ ಸಮಸ್ತ ದಲಿತ ನಾಯಕರಾಗಿ ಹೊಮ್ಮಿದ್ದಾರೆ. ಎನ್‌.ವೆಂಕಟೇಶ್‌ ಅವರು ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ. ದಸಂಸ ಅವರನ್ನು ಮಾದಿಗರನ್ನಾಗಿ ಗುರುತಿಸಿಲ್ಲ, ದಲಿತ ನಾಯಕರನ್ನಾಗಿ ಗುರುತಿಸಿದೆ. ಆದರೆ ದಸಂಸ ಬಣಗಳಲ್ಲಿ ಮಾದಿಗ ಜನಾಂಗದ ನಾಯಕತ್ವ ಕಡಿಮೆ ಇದೆ ಎಂಬುದು ಅಷ್ಟೇ ನಿಜ. ಮುಂದಿನ ದಿನಗಳಲ್ಲಿ ಯಾರ್‍ಯಾರೂ ಬಂದು ಸೇರುತ್ತಾರೋ ಅವರನ್ನೆಲ್ಲ ಒಳಗೊಳ್ಳುವುದಾಗಿ ಚಾಲನಾ ಸಮಿತಿ ಹೇಳುತ್ತಿದೆ” ಎಂದು ಸಮಿತಿಯೊಂದಿಗೆ ನಿಕಟವಾಗಿರುವವರು ಹೇಳುತ್ತಿದ್ದಾರೆ.

“ಸಂಚಾಲನಾ ಸಮಿತಿಯು ಆತುರಾತುರವಾಗಿ ನಿರ್ಧಾರಗಳನ್ನು ತೆಗೆದುಕೊಂಡಂತೆ ಕಾಣುತ್ತಿದೆ. ಎಲ್ಲ ಒಡಕುಗಳನ್ನು ಮೀರಿ ಒಂದಾಗುತ್ತೇವೆ ಎಂದಾದರೆ ಕೆಲವು ಹಿರಿಯ ನಾಯಕರು ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲವೇಕೆ? ಕೆಲವು ಹಿರಿಯ ನಾಯಕರನ್ನು ಸಂಪರ್ಕಿಸಿಲ್ಲ ಎನ್ನಲಾಗುತ್ತಿದೆ ಏತಕ್ಕೆ? ಈ ಮಟ್ಟದಲ್ಲಿ ಸಮಾವೇಶ ಬಿರುಸುಪಡೆಯುತ್ತದೆ ಎಂದು ಚಾಲನಾ ಸಮಿತಿಗೆ ಊಹಿಸಿರಲಿಲ್ಲವೇ? ಡಿಎಸ್‌ಎಸ್‌ ಒಂದಾಗುತ್ತಿದೆ, ನಾವೆಲ್ಲ ಹೋಗಬೇಕು ಎಂದು ಇಡೀ ನಾಡಿನ ದಲಿತರು ಭಾವಿಸುತ್ತಿರುವುದನ್ನು ಚಾಲನಾ ಸಮಿತಿ ಅಂದಾಜಿಸಿರಲಿಲ್ಲವೇ? ಇಡೀ ದಲಿತ ಸಮುದಾಯದ ಮಕ್ಕಳಿಗೆ ಅನ್ಯಾಯವಾಗುತ್ತಿರುವ ಕಾಲಘಟ್ಟದಲ್ಲಿ ಈ ರೀತಿಯ ಆಕ್ಷೇಪಗಳು ಚಳವಳಿಗೆ ಹಿನ್ನೆಡೆಯನ್ನು ತರಬಲ್ಲದು ಎಂಬುದನ್ನು ಚಿಂತಿಸಬೇಕಾಲ್ಲವೇ?” ಎಂಬ ಪ್ರಶ್ನೆಗಳನ್ನು ದಲಿತ ಚಳವಳಿಯ ಆಗುಹೋಗುಗಳನ್ನು ಬಲ್ಲ ಚಿಂತಕರು ಕೇಳುತ್ತಿದ್ದಾರೆ.

ಸಮಾವೇಶದ ವಿಚಾರವಾಗಿ ಎದ್ದಿರುವ ಮತ್ತೊಂದು ಮುಖ್ಯ ತಕರಾರು- ‘ಒಳಮೀಸಲಾತಿ’ಗೆ ಸಂಬಂಧಿಸಿದ್ದು. “ಒಳಮೀಸಲಾತಿ ವಿಚಾರವಾಗಿ ಸಮಾವೇಶದ ಸಂಘಟಕರು ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ. ಅದರ ಸೂಚನೆಗಳು ದೊರೆತ್ತಿಲ್ಲ” ಎಂದು ಆಕ್ಷೇಪ ಎತ್ತಲಾಗಿದೆ. ಸಮಾವೇಶದ ಚಾಲನಾ ಸಮಿತಿಯ ಚಟುವಟಿಕೆಗಳನ್ನು ಹತ್ತಿರದಿಂದ ಬಲ್ಲವರು, “ನಾಳೆ ನಡೆಯುವ ಸಮಾವೇಶ ಕೈಗೊಳ್ಳುವ ಹಕ್ಕೊತ್ತಾಯಗಳಲ್ಲಿ ಒಳಮೀಸಲಾತಿ ಪರವಾದ ಘೋಷಣೆ ಇದ್ದೇ ಇರುತ್ತದೆ” ಎಂದು ‘ನಾನುಗೌರಿ.ಕಾಂ’ಗೆ ತಿಳಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಸಫಲವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಬಿಜೆಪಿ ಒಳಮೀಸಲಾತಿಯ ಆಸೆ ತೋರಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಚುನಾವಣೆ ಹೊಸ್ತಿಲಲ್ಲಿ ಸಮುದಾಯವನ್ನು ದಿಕ್ಕುತಪ್ಪಿಸುವ ಎಲ್ಲ ಸಾಧ್ಯತೆಯ ಕುರಿತು ಚರ್ಚೆಗಳಾಗುತ್ತಿವೆ. ಈ ದಿಕ್ಕಿನಲ್ಲಿ ದಲಿತ ಐಕ್ಯತಾ ಸಮಾವೇಶ ಎಚ್ಚರಿಕೆ ವಹಿಸುವುದೇ ಎಂಬುದು ಸದ್ಯದ ಕುತೂಹಲ.

ಈಗ ದಸಂಸದ 12 ಬಣಗಳು ಒಂದಾಗುತ್ತಿವೆ. 1993ರಲ್ಲಿ ಡಿಎಸ್‌ಎಸ್‌ ಬಣಗಳಲ್ಲಿ ಒಡಕು ಮೂಡಿತು. ಈ ಒಡಕಿಗೆ ಹೊಲೆಯ, ಮಾದಿಗ ವಿಚಾರ ಕಾರಣವಾಗಿರಲಿಲ್ಲ. ರಾಜಕೀಯ ಹಿತಾಸಕ್ತಿಯೇ ಇದಕ್ಕೆ ಮುಖ್ಯವಾಗಿತ್ತು. ಬಿಎಸ್‌ಪಿಯನ್ನು ಬೆಂಬಲಿಸಬೇಕೋ- ಜನತಾ ದಳವನ್ನು ಬೆಂಬಲಿಸಬೇಕೋ ಎಂಬ ರಾಜಕೀಯ ಹಿತಾಸಕ್ತಿಗಳ ನಡುವೆ ದಸಂಸ ಒಡೆದು ಹೋಯಿತು. ಇದೇ ಸಮಯದಲ್ಲಿ ಆಂಧ್ರಪ್ರದೇಶದಲ್ಲಿ ಮಾದಿಗ ದಂಡೋರದ ಒಳ ಮೀಸಲಾತಿ ಹೋರಾಟ ಬಿರುಸಾಯಿತು. ಡಿಎಸ್‌ಎಸ್‌ ಶಕ್ತಿಯಾಗಿದ್ದ ಮಾದಿಗ ಸಮುದಾಯ- ಒಳಮೀಸಲಾತಿ ಚರ್ಚೆಯನ್ನು ಮುನ್ನೆಲೆಗೆ ತಂದಿತು. ಆದರೆ ಡಿಎಸ್‌ಎಸ್‌ ಈ ವಿಚಾರವಾಗಿ ಗಟ್ಟಿಯಾದ ನಿಲುವು ತಾಳಲಿಲ್ಲ. ಮಾದಿಗರು ಸಮುದಾಯ ಆನಂತರದಲ್ಲಿ ಮಾದಿಗ ದಂಡೋರದ ಜೊತೆ ಹೆಚ್ಚಿನದಾಗಿ ಗುರುತಿಸಿಕೊಳ್ಳಲಾರಂಭಿಸಿತು. ಹೀಗಿರುವ ಎನ್‌.ವೆಂಕಟೇಶ್‌, ಎನ್‌.ಮುನಿಸ್ವಾಮಿಯಂತಹ ಮಾದಿಗ ನಾಯಕರು ದಸಂಸ ಜೊತೆ ಉಳಿದುಕೊಂಡಿದ್ದು ಇತಿಹಾಸ.

ಜಾತಿ ಹೆಸರಿರುವ ಸಂಘಟನೆಯನ್ನು, ಪಕ್ಷಗಳ ಜೊತೆ ಗುರುತಿಸಿಕೊಂಡ ಸಂಘಟನೆಗಳನ್ನು ಒಳಗೆ ಸೇರಿಸಿಕೊಳ್ಳುವುದಿಲ್ಲ ಎಂಬ ಡಿಎಸ್‌ಎಸ್ ನಿಲುವೇ ಸದ್ಯದ ಬಿಕ್ಕಟ್ಟಿಗೆ ಕಾರಣ ಎನ್ನಲಾಗುತ್ತಿದೆ. ಬಲಗೈ ಸಮುದಾಯದ ಸಂಘಟನೆಯಾದ ಛಲವಾದಿ ಮಹಾಸಭಾ ಮತ್ತು ಎಡಗೈ ಸಮುದಾಯದ ಮಾದಿಗ ದಂಡೋರವನ್ನು ದಸಂಸದ ಒಳಗೊಳ್ಳುತ್ತಿಲ್ಲ. ಆದರೆ ಈ ವಿಚಾರವಾಗಿ ದಸಂಸ ಗಂಭೀರವಾಗಿ ಯೋಚಿಸಬೇಕಾಗಿದೆ. “ದಲಿತ ಅಸ್ಮಿತೆಯೊಳಗೆ ಸೇರಿಕೊಂಡು ಹೋರಾಟ ಮಾಡೋಣ ಎಂಬುದು ದಸಂಸದ ನಿಲುವು. ಆದರೆ ದಸಂಸ ಒಳಮೀಸಲಾತಿ ವಿರುದ್ಧವಿದೆ ಎಂಬುದು ಸುಳ್ಳು. ದಸಂಸದ ಯಾವುದೇ ನಾಯಕರು ಬಹಿರಂಗವಾಗಿ ಒಳಮೀಸಲಾತಿಯನ್ನು ವಿರೋಧಿಸಿ ಮಾತನಾಡಿಲ್ಲ. ಒಳ ಮೀಸಲಾತಿ ವಿರೋಧವಿದ್ದವರು ಸಮಾವೇಶದಲ್ಲಿ ಭಾಗಿಯಾಗುತ್ತಿದ್ದಾರೆಂಬ ಕಾರಣಕ್ಕೆ, ಈ ಸಮಾವೇಶ ಒಳಮೀಸಲಾತಿಗೆ ವಿರುದ್ಧವಿದೆ ಎಂಬುದು ತಪ್ಪು ಕಲ್ಪನೆ” ಎನ್ನುತ್ತಾರೆ ದಲಿತ ಚಿಂತಕ ಸಾಕ್ಯ ಸಮಗಾರ.

ಒಳಮೀಸಲಾತಿಗೆ ಬೆಂಬಲಿಸಿದರೆ ನಾವೆಲ್ಲ ಜೊತೆಗಿರುತ್ತೇವೆ: ರವಿಕುಮಾರ್‌ ನೀಹ

“ಒಳಮೀಸಲಾತಿ ವಿಚಾರವಾಗಿ ಸಮಾವೇಶದ ಸಂಘಟಕರು ತಕ್ಷಣವೇ ಬೆಂಬಲ ವ್ಯಕ್ತಪಡಿಸಿದರೂ ನಾಳೆಯ ಸಮಾವೇಶಕ್ಕೆ ಮಾದಿಗ ಸಮುದಾಯ ಒಕ್ಕೊರಲಿನಿಂದ ನಿಲ್ಲುತ್ತದೆ” ಎನ್ನುತ್ತಾರೆ ದಲಿತ ಹೋರಾಟಗಾರ ರವಿಕುಮಾರ್‌ ನೀಹ.

ಅರಸು ಕುರನ್ಗರಾಯ: ಮರೆತ ದಾರಿಗಳನ್ನು ಕೂಡಿಸುವ ಕೊಂಡಿ
ರವಿಕುಮಾರ್‌ ನೀಹ

“ಒಂದೇ ಸಮುದಾಯವಷ್ಟೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ? ದಲಿತ ಸಂಘಟನೆಗಳ ಐಕ್ಯತೆ ಎಂದ ಮೇಲೆ ಎಲ್ಲರನ್ನೂ ಒಳಗೊಳ್ಳಬೇಕು. ಎಚ್‌.ಗೋವಿಂದಯ್ಯ, ಸಿ.ಕೆ.ಮಹೇಶ್‌ ಥರದ ಹೋರಾಟಗಾರರು ಸಮಾವೇಶದ ಭಾಗವಾಗಿಲ್ಲ. ಅವರ ಜೊತೆ ಮಾತನಾಡಿಲ್ಲ. ದಸಂಸದ ಮೊದಲ ಸಂಚಾಲಕರಾದ ಪ್ರೊ.ಬಿ.ಕೃಷ್ಣಪ್ಪ ಅವರ ಹೆಸರನ್ನೇ ಕಡೆಗಣಿಸಿದ್ದು ಕಂಡುಬಂದಿತ್ತು. ಇಂತಹ ಲೋಪಗಳಾಗದಂತೆ ಎಚ್ಚರಿಕೆ ವಹಿಸಬೇಕಿತ್ತು” ಎಂದು ತಿಳಿಸಿದರು.

“ದಸಂಸ ಒಡೆದು ಹೋಗಿದ್ದು ಏತಕ್ಕೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಮಾದಿಗರು ಬಿಜೆಪಿಯನ್ನು ಬೆಂಬಲಿಸುತ್ತಾರೆಂದು ದೂರಲಾಗುತ್ತದೆ. ವಿ.ಶ್ರೀನಿವಾಸ್‌ ಪ್ರಸಾದ್‌, ಶಿವರಾಮ್ ಥರದವರು ಬಿಜೆಪಿಯಲ್ಲಿ ಇಲ್ಲವಾ? ಮಾದಿಗರನ್ನಷ್ಟೇ ಬಿಜೆಪಿಯ ಪರ ಎಂದು ಬಿಂಬಿಸುವ ಹುನ್ನಾರವೇನು? ಈ ಸಮಾವೇಶವು ಎಲ್ಲರನ್ನು ಒಳಗೊಳ್ಳುವ ಆರಂಭಿಕ ಹೆಜ್ಜೆ ಎನ್ನುತ್ತಿದ್ದಾರೆ. ದಶಕದಿಂದಲೂ ಇದೇ ಮಾತುಗಳನ್ನು ಆಡುತ್ತಿದ್ದಾರೆ” ಎಂದು ವಿಷಾದಿಸಿದರು.

ಇದನ್ನೂ ಓದಿರಿ: “ದಸಂಸ ಹುಟ್ಟಿದ್ದೇ ಒಂದು ಸಾಂಸ್ಕೃತಿಕ ಚಳವಳಿಯಾಗಿ; ಸಂದರ್ಭ ಐಕ್ಯತೆಗೆ ಕರೆಕೊಟ್ಟಿದೆ”

“ಒಳಮೀಸಲಾತಿಗಾಗಿ ಐಕ್ಯತಾ ಸಮಾವೇಶ ಎಂದುಬಿಟ್ಟರೆ ಸಾಕು ಮಾದಿಗರೆಲ್ಲರೂ ಬಂದು ಸೇರುತ್ತಾರೆ. ಒಳಮೀಸಲಾತಿಗೆ ಬೆಂಬಲ ವ್ಯಕ್ತಪಡಿಸುವುದಾದರೆ ಸಮಾವೇಶದೊಂದಿಗೆ ನಾವೆಲ್ಲರೂ ಇರುತ್ತೇವೆ. ಈ ಕುರಿತು ನಿಲುವು ತಾಳದಿದ್ದರೆ ದಲಿತರಲ್ಲಿನ ಬಿರುಕು ಮತ್ತಷ್ಟು ಹೆಚ್ಚಾಗುತ್ತದೆ. ಒಂದಾಗುವ ಅವಕಾಶವನ್ನು ತಪ್ಪಿಸಿಕೊಂಡರೆ ತಲೆಮಾರುಗಳಿಗೆ ಅನ್ಯಾಯವಾಗುತ್ತದೆ” ಎಂದು ಎಚ್ಚರಿಸಿದರು.

ತಪ್ಪುಗಳನ್ನು ತಿದ್ದಿಕೊಳ್ಳಲು ಈಗಲೂ ಕಾಲ ಮಿಂಚಿಲ್ಲ: ಬಿ.ಆರ್‌.ಭಾಸ್ಕರ್‌ ಪ್ರಸಾದ್‌

“ದಲಿತರ ಐಕ್ಯತಾ ಸಮಾವೇಶದ ವಿಚಾರದಲ್ಲಿ ಆಗಿರುವ ತಪ್ಪುಗಳನ್ನು ತಿದ್ದಿಕೊಳ್ಳಲು ಈಗಲೂ ಕಾಲ ಮಿಂಚಿಲ್ಲ” ಎನ್ನುತ್ತಾರೆ ಎಸ್‌.ಡಿ.ಪಿ.ಐ ಹಾಗೂ ದಲಿತ ಮುಖಂಡರಾದ ಬಿ.ಆರ್‌.ಭಾಸ್ಕರ್‌ ಪ್ರಸಾದ್.

“ಮಾದಿಗ ಸಮುದಾಯದ ಪ್ರಶ್ನೆಯಷ್ಟೇ ಅಲ್ಲ. ಇತರ ರಾಜಕೀಯ ಪಕ್ಷಗಳ ಜೊತೆಗೆ ಗುರುತಿಸಿಕೊಂಡಿರುವ ದಲಿತರನ್ನು ಹೊರಗಿಡುವ ಕೆಲಸವಾಗಿದೆ. ಬಿಎಸ್‌ಪಿ ಜೊತೆ ಗುರುತಿಸಿಕೊಂಡಿರುವ ಹೊಲೆಯ ಅಥವಾ ಮಾದಿಗರನ್ನೂ ಇಲ್ಲಿ ಒಳಗೊಳ್ಳುತ್ತಿಲ್ಲ. ಕೃಷ್ಣಮೂರ್ತಿ, ಮಾರಸಂದ್ರ ಮುನಿಯಪ್ಪ, ಹ.ರ.ಮಹೇಶ್‌, ಹರಿರಾಮ್‌ ಥರದ ಮುಖಂಡರನ್ನು ಸೇರಿಸಿಕೊಂಡಿಲ್ಲ. ಎಸ್‌ಡಿಪಿಐನಲ್ಲಿ ಇರುವ ಕಾರಣಕ್ಕೆ ನಮ್ಮಂಥವರನ್ನು ಕರೆದಿಲ್ಲ. ರಾಜಕೀಯ ನಿಲುವುಗಳನ್ನು ಸಮಾವೇಶದ ಸಂಘಟಕರು ಸ್ಪಷ್ಟಪಡಿಸಬೇಕಿತ್ತು” ಎಂದು ಅಭಿಪ್ರಾಯಪಟ್ಟರು.

B R Bhaskar Prasad (@BRBhaskarPrasa1) / Twitter
ಬಿ.ಆರ್‌.ಭಾಸ್ಕರ್‌ ಪ್ರಸಾದ್

“ಹಿರಿಯ ಸಾಹಿತಿ ದೇವನೂರ ಮಹಾದೇವ ಅವರನ್ನು ಆಹ್ವಾನ ಮಾಡಿರುವುದು ಸಂತೋಷದ ವಿಷಯ. ಅದೇ ರೀತಿಯಲ್ಲಿ ಪ್ರಖರ ಚಿಂತಕರಾದ ಎಚ್.ಗೋವಿಂದಯ್ಯನವರನ್ನು ಕರೆಯಬೇಕಿತ್ತು. ಈ ಎಲ್ಲ ಹಿರಿಯರ ಹೋರಾಟದ ಫಲವಾಗಿ ನಾವೆಲ್ಲ ಅಸ್ತಿತ್ವ ಕಂಡುಕೊಂಡಿದ್ದೇವೆ. ಈಗಲೂ ಕಾಲಮಿಂಚಿಲ್ಲ. ತಿದ್ದಿಕೊಳ್ಳಲು ಸಮಯವಿದೆ. ದೇವನೂರರು ಮೈಸೂರಿನಿಂದ ಬರುತ್ತಾ ಗೋವಿಂದಯ್ಯನವರನ್ನು ಜೊತೆಯಲ್ಲಿ ಕರೆತರಬೇಕು” ಎಂದು ಆಗ್ರಹಿಸಿದರು.

“ಮನುಷ್ಯ ಸಹಜ ತಪ್ಪುಗಳಾಗಿವೆ. ಅವುಗಳನ್ನು ತಿದ್ದಿಕೊಳ್ಳಬೇಕು. ಒಂದು ವೇಳೆ ಹಿರಿಯರು ತಪ್ಪು ಮಾಡಿ ಹಾಗೆಯೇ ಬಿಟ್ಟುಹೋದರೆ ಆನಂತರದ ಯುವ ತಲೆಮಾರಿನ ಮೇಲೆ ಕೆಟ್ಟ ಪರಿಣಾಮಗಳು ಬೀರುತ್ತವೆ. ಈಗಾಗಲೇ ಹೊಲೆಯ- ಮಾದಿಗ ಎಂದು ಯುವಕರು ಕಿತ್ತಾಡುತ್ತಿದ್ದಾರೆ. ಈಗ ಎದ್ದಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು” ಎಂದು ಮನವಿ ಮಾಡಿದರು.

ವೇದಿಕೆಯಲ್ಲೇ ಸ್ಪಷ್ಟಪಡಿಸಿದರೆ ಮುಗಿಯುತ್ತದೆ: ಕೊಟ್ಟ ಶಂಕರ್‌‌

ತುಮಕೂರು ಜಿಲ್ಲೆಯ ದಲಿತ ಮುಖಂಡರಾದ ಕೊಟ್ಟ ಶಂಕರ್‌ ಮಾತನಾಡಿ, “ಈ ರೀತಿಯ ತಪ್ಪುಗಳಾಗಿರುವ ಕುರಿತು ನಾನು ಪ್ರಸ್ತಾಪ ಮಾಡಿದ್ದೆ. ಯುವಜನರು ಕೇಳುತ್ತಿರುವ ಪ್ರಶ್ನೆ ಸರಿಯಾಗಿದೆ. ದಸಂಸ ಸಂಸ್ಥಾಪಕರಲ್ಲಿ ಒಬ್ಬರಾದ ಎಚ್.ಗೋವಿಂದಯ್ಯ, ಗುರುಮೂರ್ತಿ ಥರದ ನಾಯಕರನ್ನು ಒಳಗೊಂಡಿಲ್ಲ ಎಂಬ ತಕರಾರು ಸರಿ ಇದೆ. ಆದರೆ ಈ ಅನೇಕ ಸವಾಲುಗಳಿರುವ ಈ ಕಾಲದಲ್ಲಿ ಸಾರ್ವಜನಿಕವಾಗಿ ಕಿತ್ತಾಡಬಾರದಿತ್ತು. ಒಳಮೀಸಲಾತಿ ವಿಚಾರವಾಗಿ ವೇದಿಕೆಯಲ್ಲೇ ಸ್ಪಷ್ಟನೆ ನೀಡಿಬಿಟ್ಟರೆ ಸಮಸ್ಯೆ ಬಗೆಹರಿಯುತ್ತದೆ. ಮುಂದಿನ ದಿನಗಳಲ್ಲಿ ನಿಜವಾದ ಐಕ್ಯತೆ ಸಾಧ್ಯವಾಗುತ್ತದೆ. ಬಿಜೆಪಿ, ಆರ್‌ಎಸ್‌ಎಸ್‌ ಸಿದ್ಧಾಂತವನ್ನು ಮಣಿಸಬೇಕೆಂಬುದು ನಮ್ಮೆಲ್ಲರ ಗುರಿಯಾಗಿದೆ. ಇದರಲ್ಲಿ ಯಾರ ತಕರಾರೂಗಳೂ ಇಲ್ಲ. ಸದ್ಯಕ್ಕೆ ನಮ್ಮ ನಡುವಿನ ಗೊಂದಲಗಳನ್ನು ಬಗೆಹರಿಸಿಕೊಳ್ಳಬೇಕಾಗಿದೆ” ಎಂದರು.

May be an image of one or more people and beard
ಕೊಟ್ಟ ಶಂಕರ್‌
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...