Homeಮುಖಪುಟ’ಮಹಾನಾಯಕ’ನಿಗೆ ಒಂದು ವರ್ಷ: ಧಾರಾವಾಹಿಯನ್ನು ಜನ ಅಪ್ಪಿಕೊಂಡ ಬಗೆ...

’ಮಹಾನಾಯಕ’ನಿಗೆ ಒಂದು ವರ್ಷ: ಧಾರಾವಾಹಿಯನ್ನು ಜನ ಅಪ್ಪಿಕೊಂಡ ಬಗೆ…

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಗಳಾಗಿದ್ದ ಸುಶೀಲ್ ಕುಮಾರ್ ಶಿಂಧೆ ಅವರ ಮಗಳು ಉದ್ಯಮಿ ಸ್ಮೃತಿ ಸುಶೀಲ್ ಶಿಂಧೆ ತಮ್ಮ ಸೋಬೋ ಫಿಲಂಸ್ ಪ್ರೊಡಕ್ಷನ್ಸ್ ನಡಿ`ಏಕ್ ಮಹಾನಾಯಕ’ ನಿರ್ಮಿಸುತ್ತಿದ್ದಾರೆ

- Advertisement -

ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ `ಏಕ್ ಮಹಾನಾಯಕ್’ ಕನ್ನಡಕ್ಕೆ ಡಬ್ ಆಗಿ ಝೀ ಕನ್ನಡ ವಾಹಿನಿಯಲ್ಲಿ ಜುಲೈ 4, 2020 ರಿಂದ ಪ್ರಸಾರವಾಗುತ್ತಿದೆ. ಈ `ಮಹಾನಾಯಕ’ ಒಂದು ಬಗೆಯ ಟ್ರೆಂಡ್ ಸೃಷ್ಠಿಸಿತು. ಡಾ.ಬಾಬಾ ಸಾಹೇಬ ಅಂಬೇಡ್ಕರರ ಜನಪ್ರಿಯ ಮಾದರಿಯಾಗಿ`ಮಹಾನಾಯಕ’ ಹೊಸ ನುಡಿಗಟ್ಟಾಗಿ ವಿಸ್ತರಿಸತೊಡಗಿತು. ವಿಶೇಷವಾಗಿ ದಲಿತ ಕೆಳಜಾತಿಗಳ ಹೊಸ ತಲೆಮಾರಿಗೆ `ಮಹಾನಾಯಕ’ ಹೆಚ್ಚು ಆಪ್ತವಾದ ಗುರುತಾಯಿತು.

`ಮಹಾನಾಯಕ’ ಎನ್ನುವುದು ಶಬ್ದಶಃ ಎಲ್ಲಾ ನಾಯಕರಿಗಿಂತ ಮಿಗಿಲಾದ ನಾಯಕ ಎಂಬ ಅರ್ಥವನ್ನು ಧ್ವನಿಸುತ್ತದೆ. ಇದೊಂದು ಸಿನಿಮೀಯ ಹೀರೋಯಿಸಮ್ ಮಾದರಿಯ ನುಡಿಗಟ್ಟು. ಬಹುಶಃ ಈ ಸಂಗತಿಯೂ ಕೂಡ `ಮಹಾನಾಯಕ’ ಹೆಚ್ಚು ಪರಿಣಾಮ ಬೀರಿರಲಿಕ್ಕೆ ಕಾರಣವಾಗಿದೆ. ಹೀಗಾಗಿಯೇ ಈಚೆಗೆ ಬೆಳಗಾವಿ ಶಾಸಕ ರಮೇಶ್ ಜಾರಕಿಹೊಳೆ ಅವರ ಸಿಡಿ ವಿವಾದದಲ್ಲಿ ಮಾಧ್ಯಮಗಳು ಡಿ.ಕೆ.ಶಿವಕುಮಾರ್ ಅವರನ್ನು `ಮಹಾನಾಯಕ’ ಎಂದು ಬಳಸಿದ್ದನ್ನು ವಿರೋಧಿಸಿ, ಅಶ್ಲೀಲ ಪ್ರಕರಣದಲ್ಲಿ `ಮಹಾನಾಯಕ’ ಪದ ಬಳಸಿ ಅಂಬೇಡ್ಕರರನ್ನು ಅವಮಾನಿಸುತ್ತಿದ್ದಾರೆ ಎನ್ನಲಾಯಿತು. ಮಾಜಿ ಶಾಸಕರಾದ ಹೆಚ್.ಸಿ. ಮಹಾದೇವಪ್ಪ ಅವರು `ಅಂಬೇಡ್ಕರ್ ಹೊರತಾಗಿ ಯಾರೂ ಮಾಹಾನಾಯಕರಲ್ಲ’ ಎಂದು ಪತ್ರಿಕಾ ಹೇಳಿಕೆ ಕೊಟ್ಟರು. ಈ ಬೆಳವಣಿಗೆಗಳನ್ನು ಗಮನಿಸಿದರೆ, ಇದೀಗ `ಮಹಾನಾಯಕ’ ನುಡಿಗಟ್ಟು ಅಂಬೇಡ್ಕರ್ ಎನ್ನುವುದರ ಅನ್ವರ್ಥವಾಗಿದೆ.

ನಾನು ಜುಲೈ 4 ರಂದು ಕನ್ನಡದಲ್ಲಿ ಮಹಾನಾಯಕ ಧಾರಾವಾಹಿ ಆರಂಭವಾದ ದಿನ ನನ್ನ ಫೇಸ್‍ಬುಕ್ ಪೇಜಲ್ಲಿ ಒಂದು ಮನವಿ ಮಾಡಿದ್ದೆ, ಆ ಮನವಿ ಹೀಗಿದೆ: ‘ಇಂದು (4.7.2020) ಸಂಜೆ 6 ರಿಂದ 7 ಕ್ಕೆ `ಮಹಾನಾಯಕ: ಡಾ.ಬಾಬಾಸಾಹೇಬ ಅಂಬೇಡ್ಕರ್’ ಧಾರಾವಾಹಿ ಹಿಂದಿಯಿಂದ ಕನ್ನಡಕ್ಕೆ ಡಬ್ ಆಗಿ ಝೀ ಚಾನಲ್ಲಿನಲ್ಲಿ ಪ್ರಸಾರವಾಗುತ್ತಿದೆ. ಇಷ್ಟು ದೊಡ್ಡ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಅವರ ಧಾರಾವಾಹಿ ಹಿಂದಿಯಲ್ಲಿ ಬರುತ್ತಿರುವುದು ಇದೆ ಮೊದಲು. 250 ಕಂತುಗಳಲ್ಲಿ ಬರಲಿದೆ. ಹಿಂದಿಯಲ್ಲಿ ಡಿಸೆಂಬರ್ 2019 ರಿಂದ 170 ಕಂತು ಪ್ರಸಾರವಾಗಿದೆ. ಧಾರ್ಮಿಕ ಭಾವನೆಯನ್ನು ಉದ್ಧೀಪಿಸುವ ಮಹಾಭಾರತ-ರಾಮಾಯಣಕ್ಕಿಂತ, ಭಯ ಮತ್ತು ಮೌಢ್ಯವನ್ನು ಬಿತ್ತುವ ದೇವರು-ದೆವ್ವಗಳ ಧಾರಾವಾಹಿಗಳಿಗಿಂತ, ಮಧ್ಯಮವರ್ಗದ ಕೊಳ್ಳುಬಾಕ ಸಂಸ್ಕೃತಿಯನ್ನು ಹೆಚ್ಚಿಸುವ ಕೌಟುಂಬಿಕ ಧಾರವಾಹಿಗಳಿಗಿಂತಲೂ ಮಹಾನಾಯಕ ಧಾರವಾಹಿ ಸಾವಿರ ಪಾಲು ಮೇಲು. ಈ ಅರ್ಥದಲ್ಲಿ ಇದೊಂದು ಸ್ವಾಗತಾರ್ಹ ಬೆಳವಣಿಗೆ. ಅಂತೆಯೇ ಮಾರುಕಟ್ಟೆಯ ಲೆಕ್ಕಾಚಾರವೂ ಇಲ್ಲಿದೆ. ಅಂದರೆ ಇಷ್ಟು ದೊಡ್ಡಮಟ್ಟದಲ್ಲಿ ಬಂಡವಾಳ ಹೂಡಿ ಧಾರಾವಾಹಿ ರೂಪಿಸುವಾಗ ಅಂಬೇಡ್ಕರ್ ಅವರನ್ನು ಆರಾಧಿಸುವ, ಗೌರವಿಸುವ, ಅನುಸರಿಸುವ ದೊಡ್ಡಮಟ್ಟದ ಜನಸಂಖ್ಯೆ ಭಾರತದಲ್ಲಿದೆ ಎನ್ನುವುದು ಕೂಡ ಈ ಧಾರಾವಾಹಿ ನಿರ್ಮಾಣದ ಹಿಂದಿದೆ. ಹಾಗಾಗಿ ಇದೊಂದು ಪಾಸಿಟಿವ್ ಬೆಳವಣಿಗೆ. ಅಂದರೆ ಅಂಬೇಡ್ಕರ್ ಹಿಂದೆ ಭಾರತದಲ್ಲಿ ಬಹು ದೊಡ್ಡ ಸಂಖ್ಯೆಯ ಜನರಿದ್ದಾರೆ ಎನ್ನುವುದನ್ನು ಈ ಧಾರಾವಾಹಿ ಸಾಂಕೇತಿಸುತ್ತಿದೆ.

ಅಂದರೆ ಅಂಬೇಡ್ಕರರ ಬಹುದೊಡ್ಡ ಪರಿವಾರವನ್ನು ಟಿ.ಆರ್.ಪಿ ಸಂಖ್ಯೆಗಳನ್ನಾಗಿಸುವ ಝೀ ಸಂಸ್ಥೆಯ ವ್ಯವಹಾರಿಕ ಲೆಕ್ಕಾಚಾರಗಳನ್ನು ಬುಡಮೇಲಾಗಬೇಕಿದೆ. ಕೆಲವು ಮಿತಿಗಳ ಮಧ್ಯೆಯೂ ಅಂಬೇಡ್ಕರ್ ಅಪಾರ ಜನರನ್ನು ಸೆಳೆಯುವ ಜನಪ್ರಿಯ ಪ್ರಭಾವಿ ಮಾಧ್ಯಮಗಳನ್ನು ಆವರಿಸುವ ಅಗತ್ಯವಿದೆ. ರಾಮಾಯಣ ಮಹಾಭಾರತಗಳು ಜನರಲ್ಲಿ ನೆಲೆಗೊಂಡದ್ದೂ ಹೀಗೆಯೆ. ಹಾಗಾಗಿ ಅಂಬೇಡ್ಕರ್ ಧಾರಾವಾಹಿ ಈಗಿನ ಮಕ್ಕಳ ಮನಸ್ಸಲ್ಲಿ ಬಾಬಾಸಾಹೇಬರನ್ನು ನೆಲೆಗೊಳಿಸಲು ಸಹಕಾರಿಯಾಗಬಲ್ಲದು. ಬೇಡದ್ದನ್ನೆಲ್ಲಾ ನೋಡಿ ಟಿಆರ್‌ಪಿ ಹೆಚ್ಚಿಸುವ ನಾವುಗಳು, ಮಹಾನಾಯಕ ಧಾರಾವಾಹಿ ಯ ಟಿಆರ್‌ಪಿ ಹೆಚ್ಚಿಸಿದರೆ ಅಂಬೇಡ್ಕರ್ ಬಗೆಗೆ ಮತ್ತಷ್ಟು ಕಾರ್ಯಕ್ರಮಗಳು ರೂಪುಗೊಳ್ಳಲು ಪರೋಕ್ಷವಾಗಿ ಬೇಡಿಕೆ ಹೆಚ್ಚಿಸಿದಂತೆ.

ಅಂಬೇಡ್ಕರ್ ಅವರ ಜೀವನದ ಬಗೆಗೆ ಒಂದು ಜನಪ್ರಿಯ ಮಾದರಿಯ ಕತೆಯನ್ನು ಧಾರಾವಾಹಿ ಒಳಗೊಂಡಿದೆ. ಅಂಬೇಡ್ಕರ್ ಅವರ ಪ್ರಖರ ಚಿಂತನೆಗಳನ್ನು, ವಾಗ್ವಾದಗಳನ್ನು, ಆಳದ ಸಿಟ್ಟು ಆಕ್ರೋಶವನ್ನೂ ದೃಶ್ಯರೂಪಕ್ಕೆ ತರುವುದು ಕಷ್ಟ. ಅವರ ಕೆಂಡದಂತಹ ಮಾತುಗಳನ್ನು ತಾಳುವ ಶಕ್ತಿ ಟಿವಿ ಧಾರಾವಾಹಿ ಗಳಿಗೆ ಖಂಡಿತಾ ಇಲ್ಲ. ಹಾಗಾಗಿ ನಾವು ಬಾಬಾಸಾಹೇಬರ ಬರಹಗಳನ್ನು ಓದಿಯೇ ನಮ್ಮ ಅರಿವನ್ನು ಹೆಚ್ಚಿಸಿಕೊಳ್ಳಬೇಕು. ಅಂಬೇಡ್ಕರ್ ಧಾರವಾಹಿ ಅವರ ಪ್ರಖರ ಚಿಂತನೆಯನ್ನು ಓದಲು ಪ್ರೇರೇಪಿಸಬೇಕು. ಇದರಿಂದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದ ಅಂಬೇಡ್ಕರ್ ಸಂಪುಟಗಳು ಖಾಲಿಯಾದರೆ, ಮರುಮುದ್ರಣಕ್ಕೆ ಒತ್ತಡ ಹೆಚ್ಚಾದರೆ ಈ ಧಾರಾವಾಹಿ ಪರಿಣಾಮ ಬೀರಿದೆ ಎಂದರ್ಥ ಎನ್ನುವುದು ನನ್ನ ಮನವಿಯಾಗಿತ್ತು.

`ಏಕ್ ಮಹಾನಾಯಕ್’ ಇಂಡಿಯಾದಲ್ಲಿ ಪೂರ್ಣ ಪ್ರಮಾಣದಲ್ಲಿ ಅಂಬೇಡ್ಕರ್ ಜೀವನ ಚರಿತ್ರೆಯನ್ನು ಒಳಗೊಂಡ ಮೊದಲ ಹಿಂದಿ ಧಾರಾವಾಹಿ. ಇದು 2019 ಡಿಸೆಂಬರ್ 17 ರಂದು ಶುರುವಾಯಿತು. ಇತಿಹಾಸಕಾರ ಪ್ರೊ.ಹರಿನರ್ಕೆ ಹೇಳುವಂತೆ, `ಮರಾಠಿಯ ಬಾಲಚಂದ್ರ ಫಡ್ಕೆ ಅವರ ಪುಸ್ತಕ `ಅಂಬೇಡ್ಕರ್’ ಜೀವನ ಚರಿತ್ರೆಯನ್ನು ಆಧರಿಸಿ ಈ ಧಾರಾವಾಹಿಯನ್ನು ದೃಶ್ಯರೂಪಕ್ಕೆ ತರಲಾಗಿದೆ. ಇದರಲ್ಲಿ ಮುಖ್ಯವಾಗಿ ಮಹಿಳಾ ಸಬಲೀಕರಣ, ರೈತರ ಚಳವಳಿ, ಕಾರ್ಮಿಕರ ಹೋರಾಟವನ್ನು ಕೇಂದ್ರೀಕರಿಸಲಾಗಿದೆ. ಈ ಧಾರವಾಹಿಯಲ್ಲಿ ಮಧ್ಯಮವರ್ಗ, ಮಹಿಳೆಯರು, ಗ್ರಾಮೀಣಭಾಗದ ಜನರು, ಕಾರ್ಮಿಕರನ್ನು ಒಳಗೊಂಡಂತೆ ಬೇರೆ ಬೇರೆ ಮೇಲ್ಜಾತಿಯ ಸಮುದಾಯಗಳಾದ ಬ್ರಾಹ್ಮಣರು, ಜಾಟರು ಮೊದಲಾದವರೂ ಸಹ ಕೂತು ನೋಡುವಂತೆ ರೂಪಿಸಲಾಗಿದೆ. ಇವತ್ತಿನ ರಾಜಕಾರಣಿಗಳು, ಚಳವಳಿಗಾರರು ಅಂಬೇಡ್ಕರ್ ಕನಸಿನ ಶಿಕ್ಷಣ ಸಂಘಟನೆ ಹೋರಾಟದ ಮುಖ್ಯ ಬಿತ್ತಿಯನ್ನು ಅರ್ಥಮಾಡಿಕೊಳ್ಳಬೇಕಿದೆ’ ಎನ್ನುತ್ತಾರೆ.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಗಳಾಗಿದ್ದ ಸುಶೀಲ್ ಕುಮಾರ್ ಶಿಂಧೆ ಅವರ ಮಗಳು ಉದ್ಯಮಿ ಸ್ಮೃತಿ ಸುಶೀಲ್ ಶಿಂಧೆ ತಮ್ಮ ಸೋಬೋ ಫಿಲಂಸ್ ಪ್ರೊಡಕ್ಷನ್ಸ್ ನಡಿ`ಏಕ್ ಮಹಾನಾಯಕ’ ನಿರ್ದೇಶಕರು ಇಮ್ತಿಯಾಜ್ ಪಂಜಾಬಿ, ಕಥೆ ಶಾಂತಿಭೂಷಣ್ ಅಂಬೇಡ್ಕರರ ಇಂಗ್ಲೀಷ್ ಬರಹಗಳ ಸಂಪಾದಕರಾಗಿ ಕೆಲಸ ಮಾಡಿದ್ದ ಇತಿಹಾಸಕಾರ ಹರಿ ನರ್ಕೆ ಅವರು ಮಾರ್ಗದರ್ಶನ ಮಾಡಿದ್ದಾರೆ.

ಟಿವಿ ಕಾರ್ಯಕ್ರಮದ ನಿರ್ದೇಶಕರಾದ ಸ್ಮೃತಿ ಶಿಂಧೆ, ’ತಂಡವನ್ನು ಆಯ್ಕೆ ಮಾಡುವಾಗ ಅಥವಾ ಧಾರವಾಹಿ ನಿರ್ಮಿಸುವಾಗ ಯಾವುದೇ ನಿರ್ದಿಷ್ಟ ಜಾತಿ ಅಥವಾ ಧರ್ಮದ ಮೇಲೆ ಕೇಂದ್ರೀಕರಿಸಲಿಲ್ಲ. ನಮ್ಮ ತಂಡವು ಈ ಧಾರಾವಾಹಿಗೆ ನ್ಯಾಯ ಒದಗಿಸಬಲ್ಲ ವ್ಯಕ್ತಿಗಳನ್ನು ಮಾತ್ರ ಒಳಗೊಂಡಿದೆ, ಇದರಲ್ಲಿ ದಲಿತ ಅಥವಾ ಬ್ರಾಹ್ಮಣ ಎನ್ನುವುದು ಮುಖ್ಯವಲ್ಲ’ ಎನ್ನುತ್ತಾರೆ.

May be a cartoon of 2 people, people standing and text that says "ZEEಕನ್ನಡ ಒಂದು ವರ್ಷ ಪೂರೈಸಿದ ಮಹಾನಾಯಕ ಡಾ. ಬಿ.ಆರ್ ಅಂಬೇಡ್ಕರ್ ಸೋಮ ಶುಕ್ರ ಸಂಜೆ 6ಕ್ಕೆ YEAR"

ಕರ್ನಾಟಕದ ಸಂದರ್ಭದಲ್ಲಿ ಮಹಾನಾಯಕ ಧಾರಾವಾಹಿ ಕೆಲವು ಅನಿರೀಕ್ಷಿತ ಪರಿಣಾಮಗಳನ್ನು ಬೀರಿತು. ಈ ಪರಿಣಾಮ ಬಹುರೂಪಿಯಾಗಿದೆ. ಮುಖ್ಯವಾಗಿ ಮಹಾನಾಯಕ ಧಾರಾವಾಹಿಯಲ್ಲಿ `ಭೀಮರಾವ್’ ಜನನದ ಸಂದರ್ಭದಲ್ಲಿ ಬಿಜಾಪುರ ಗುಲ್ಬರ್ಗಾ ಕಡೆಗಳಲ್ಲಿ ತಾಯಂದಿರು ಟಿವಿಗೆ ಪೂಜೆ ಮಾಡಿ ಹಾರ ಹಾಕಿ ಆರತಿ ಬೆಳಗಿ ತಮ್ಮ ತಮ್ಮ ಮನೆಗಳಿಗೆ ಭೀಮರಾವ್‌ರನ್ನು ಬರಮಾಡಿಕೊಂಡರು. ಆ ದಿನ ಯುವಜನತೆ ಪಟಾಕಿ ಸಿಡಿಸಿ ಸಂಭ್ರಮಿಸುವ ಘಟನೆಗಳು ನಡೆದವು. ಮುಖ್ಯವಾಗಿ ಮಹಾನಾಯಕ ಪ್ಲೆಕ್ಸ್ ಹಾಕಿಸಿ ಆಯಾ ಊರುಗಳಲ್ಲಿ ಧಾರಾವಾಹಿಯನ್ನು ಪ್ರಸಾರ ಮಾಡುವ ಝೀ ಟಿವಿಗೆ ಅಭಿನಂದನೆಗಳನ್ನು ಸಲ್ಲಿಸತೊಡಗಿದರು. ಹೀಗೆ ಪ್ಲೆಕ್ಸ್ ಉದ್ಘಾಟನೆ ಮಾಡುವಾಗ ಆಯಾ ಭಾಗದ ಚಿಂತಕರನ್ನು ಕರೆಯಿಸಿ ಅಂಬೇಡ್ಕರ್ ಅವರ ಬಗೆಗೆ ಭಾಷಣಗಳನ್ನು ಮಾಡಿಸಿದರು.

ಕೊಳ್ಳೇಗಾಲದ ಮುಸ್ಲೀಂ ಸಮುದಾಯದ ಮುಖಂಡರು ಮಹಾನಾಯಕ ಪ್ಲೆಕ್ಸ್ ಕಟ್ಟಿ ಧಾರಾವಾಹಿಗೆ ಶುಭ ಕೋರಿದರು. ನಂಜನಗೂಡು ತಾಲೂಕಿನ ಹರತಲೆ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಮುಂದಾಳುಗಳು ಮಹಾನಾಯಕ ಪ್ಲೆಕ್ಸ್ ಕಟ್ಟಿ ಶುಭ ಕೋರಿದ್ದರು. ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ದೇವರ ಗೋನಾಳ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರುಗಳಾದ ದೊಡ್ಡ ದೇಸಾಯಿ ಮತ್ತು ಸಣ್ಣ ದೇಸಾಯಿ ಅವರ ನೇತೃತ್ವದಲ್ಲಿ ಅದ್ದೂರಿಯಾದ ಭವ್ಯ ಮೆರವಣಿಗೆ ಮಾಡಿ ಮಹಾನಾಯಕ ಅಂಬೇಡ್ಕರರಿಗೆ ಗೌರವ ಸಲ್ಲಿಸಿದ್ದಾರೆ. ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಧುಪದಾಳದಲ್ಲಿ ಮಹಾನಾಯಕ ಬ್ಯಾನರಿಗೆ ಹಾಲು ತುಪ್ಪದ ಅಭಿಷೇಕ ಮಾಡಿದ್ದರು. ನೀಲಿಯ ತಿಲಕ ಹಚ್ಚುವುದು ಚಾಲ್ತಿಗೆ ಬಂತು. ಒಟ್ಟಾರೆ ಇಡೀ ಕರ್ನಾಟಕದಾದ್ಯಾಂತ ಗ್ರಾಮ ನಗರ ಪಟ್ಟಣಗಳಲ್ಲಿ `ಮಹಾನಾಯಕ’ ಪ್ಲೆಕ್ಸ್ ಗಳು ತಲೆಎತ್ತಿದವು.

ಹೀಗೆ ದಲಿತ ಕೆಳಜಾತಿಯ ಯುವ ಸಮುದಾಯ ಮಹಾನಾಯಕ ಪ್ಲೆಕ್ಸ್ ಕಟ್ಟುವುದರ ಬಗೆಗೂ ಮೇಲ್ಜಾತಿಗಳಲ್ಲಿ ಅಸಹನೆ ವ್ಯಕ್ತವಾಯಿತು. ಹಾಸನ ಜಿಲ್ಲೆ ಆಲೂರು ತಾಲೂಕಿನ ಪೋಲೀಸ್ ಠಾಣೆಯಿಂದ ತಾಲೂಕು ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದು `ಆಲೂರು ತಾಲೂಕಿನಾದ್ಯಾಂತ ಬ್ಯಾನರುಗಳನ್ನು ಅನಧಿಕೃತವಾಗಿ ಕಟ್ಟಿದ್ದಾರೆ, ಕಾನೂನು ಸುವ್ಯವಸ್ಥೆಗೆ ದಕ್ಕೆ ಉಂಟಾಗುತ್ತದೆ ಅದರಲ್ಲೂ ಮಹಾನಾಯಕ ಬ್ಯಾನರುಗಳನ್ನು ತೆರವುಗೊಳಿಸಿ’ ಎಂದು ಆದೇಶಿಸಲಾಗಿತ್ತು. ಅಲ್ಲಿನ ದಲಿತ ಸಂಘಟನೆಗಳು ಈ ಆದೇಶದ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಿದವು. ಇದೇ ಹಾಸನ ತಾಲೂಕಿನ ಸಂಕೇನಹಳ್ಳಿಯಲ್ಲಿ ಮಹಾನಾಯಕ ಫ್ಲೆಕ್ಸ್ ಹಾಕುವ ವೇಳೆ `ನಾವು ಅವರ ಮುಖ ನೋಡಲ್ಲ ಪ್ಲೆಕ್ಸ್ ಹಾಕಬೇಡಿ’ ಎಂದು ಮೇಲ್ಜಾತಿ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಳು. ಇಲ್ಲಿಯೂ ದಲಿತ ಯುವಕರು ಈ ಮಹಿಳೆಯ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಿದಾಗ, ಆ ಮಹಿಳೆ ಮಹಾನಾಯಕ ಫ್ಲೆಕ್ಸಿಗೆ ಹಾರ ಹಾಕಿ ಬಹಿರಂಗವಾಗಿ ಕ್ಷಮೆಯಾಚಿಸಿದರು (18 ಮಾರ್ಚ್ 2021).

ಇದು ಇಷ್ಟಕ್ಕೆ ಮುಗಿಯಲಿಲ್ಲ. ಮಹಾನಾಯಕ ಧಾರಾವಾಹಿ ನಿಲ್ಲಿಸುವಂತೆ ಜೀವ ಬೆದರಿಕೆ ಒಡ್ಡಿ ಅನಾಮದೇಯ ಕರೆ ಮಾಡಿದ್ದಾಗಿ ಜೀವಾಹಿನಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖ್ಯಸ್ಥ ರಾಘವೇಂದ್ರ ಹುಣಸೂರ್ ಅವರು ಟ್ವೀಟ್ ಮಾಡಿದರು. ಇದು ವೈರಲ್ ಆಯಿತು. ದೊಡ್ಡಮಟ್ಟದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ರಾಘವೇಂದ್ರ ಹುಣಸೂರ್ ಅವರನ್ನು ಬೆಂಬಲಿಸಿ ಪೋಸ್ಟ್‌ಗಳನ್ನು ಹಾಕಲಾಯಿತು.

ಡಿಜಿಟಲ್ ಪ್ಲಾಟ್ ಫಾರಂನಲ್ಲಿ ಮಹಾನಾಯಕ ಹೆಸರಿನ ಹಲವು ಸ್ಪೇಸ್‍ಗಳು ಶುರುವಾದವು. ಮಹಾನಾಯಕ ಹೆಸರಿನ ಕೆಲವು ಫೇಸ್‍ಬುಕ್ ಪೇಜ್‍ಗಳು ಹುಟ್ಟಿಕೊಂಡವು. ಮಹಾನಾಯಕ ಡಾಟ್ ಇನ್ ವೆಬ್ ಸೈಟ್ ಕೂಡ ಚಾಲನೆಯಾಗಿದೆ. ಆನೇಕಲ್ ತಾಲೂಕಿನ ಡಾ.ಕೆ.ಮುನಿವೆಂಕಟಪ್ಪ ಅವರು `ಮಹಾನಾಯಕ ವಾಯ್ಸ್’ ಎನ್ನುವ ಯೂಟ್ಯೂಬ್ ಚಾನಲ್ ಆರಂಭಿಸಿದರು.

2020 ರ ಝೀ ಕನ್ನಡ ಕುಟುಂಬ ‌ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಚಿತ್ರನಟ ಯಶ್ `ಅಂತಹ ಮಹಾನ್ ವ್ಯಕ್ತಿಯ ಬಗೆಗೆ ಸೀರಿಯಲ್ ಮಾಡಿ ಸಣ್ಣಪುಟ್ಟ ತೊಂದರೆಗಳು ಬಂದಾಗ ಹೆದರಿಬಿಟ್ಟರೆ ಆ ವ್ಯಕ್ತಿ ಬದುಕಿಗೆ ಅರ್ಥನೆ ಇರಲ್ಲ. ಅಂಬೇಡ್ಕರ್‌ ಅವರು ಯಾವುದೇ ಒಂದು ವರ್ಗಕ್ಕೆ ಸೀಮಿತವಲ್ಲ, ಆ ತರಹ ಲೇಬಲ್ ಮಾಡಬಾರದು’ ಎಂದರು. ಹಂಸಲೇಖ ಅವರು `ತ್ರೇತಾಯುಗದಲ್ಲಿ ರಾಮ, ದ್ವಾಪರದಲ್ಲಿ ಶ್ರೀಕೃಷ್ಣ, ಕಲಿಯುಗದಲ್ಲಿ ಜೈಭೀಮ್’ ಎಂದರು. ಮುಂದುವರಿದು `ಬುದ್ಧ ಈ ದೇಶದಲ್ಲಿ ಒಂದು ದೊಡ್ಡ ಕ್ರೀಡಾಂಗಣ ಕಟ್ಟಿದ ಎಲ್ಲರೂ ಸಮವಾಗಿ ಆಟ ಆಡಲಿ ಅಂತ, ಬಸವಣ್ಣ ಯಾವ ಆಟ ಆಡಬೇಕು ಅಂತ ಪಿಕ್ಸ್ ಮಾಡಿದ, ಅಂಬೇಡ್ಕರ್ ಬಂದು ಆಡಿ ತೋರಿಸಿ ಕಾನೂನು ಬರೆದುಕೊಟ್ಟು ಹೋದರು’ ಎಂದು ವ್ಯಾಖ್ಯಾನಿಸಿದರು. ಈ ಹೇಳಿಕೆಯ ಹಂಸಲೇಖ ಅವರ ವೀಡಿಯೋ ವ್ಯಾಪಕವಾಗಿ ಹಂಚಿಕೆಯಾಯಿತು.

ಮಹಾನಾಯಕ ಧಾರಾವಾಹಿ ಟಿಆರ್‌ಪಿಯು 4.7 ರಿಂದ ಆರಂಭವಾಗಿ 7 ತನಕ ಮುಟ್ಟಿತ್ತು. ಕೆಲವು ಕಡೆಗಳಲ್ಲಿ ಸಾರ್ವಜನಿಕ ಸಭೆಗಳಲ್ಲಿ ಮಹಾನಾಯಕ ಧಾರವಾಹಿ ಪ್ರಸಾರ ಮಾಡಿ ಜನರು ನೋಡುವಂತೆ ವ್ಯವಸ್ಥೆ ಮಾಡಲಾಯಿತು. ಮಹಾನಾಯಕ ಟ್ರ್ಯಾಕ್ ಸಾಂಗ್ ಮೊಬೈಲ್ ಕಾಲರ್ ಟ್ಯೂನ್ ಆಗಿ ಹೆಚ್ಚು ಜನಪ್ರಿಯವಾಯಿತು.
`ಮಹಾನಾಯಕ’ ಹೆಸರಿನಡಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ಕೆಲವು ಯುವಕರು ವ್ಯಾಪಾರ ವಹಿವಾಟನ್ನು ಶುರುಮಾಡಿದರು. ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ ಗದಗ ಜಿಲ್ಲೆಯ ಹೊಂಬಳ ಗ್ರಾಮದ ಯುವಕನೊಬ್ಬ ಮಹಾನಾಯಕ ಹೆಸರಿನಡಿ ಚಿಕ್ಕ ಹೋಟೆಲ್ ಪ್ರಾರಂಭಿಸಿದ್ದಾರೆ. ಹಾಸನ ಜಿಲ್ಲೆಯ ಅರಕಲಗೋಡು ತಾಲೂಕಿನ ಕೊಣನೂರು ಪಟ್ಟಣದ ಎಫ್.ಆರ್ ರಸ್ತೆಯಲ್ಲಿ ಸಾಮ್ರಾಟ್ ವಿನೋದ್ ಅಂಬೇಡ್ಕರ್ ಎನ್ನುವವರು `ಮಹಾನಾಯಕ ಪೇಂಟ್ಸ್ ಅಂಡ್ ಹಾರ್ಡವೇರ್’ ಅಂಗಡಿಯನ್ನು ತೆರೆದು `ಈ ದಿನ ನಾನು ಈ ಅಂಗಡಿಯನ್ನು ತೆರೆಯುವಷ್ಟು ಶಕ್ತನಾಗಿದ್ದೇನೆಂದರೆ ಅದಕ್ಕೆ ಬಾಬಾ ಸಾಹೇಬ ಅಂಬೇಡ್ಕರ್ ಅವರೇ ಕಾರಣ, ಹಾಗಾಗಿ ಅವರ ಜೀವನ ಚರಿತ್ರೆಯ ಬಗ್ಗೆ ಝೀ ವಾಹಿನಿ ಪ್ರಸಾರ ಮಾಡುತ್ತಿರುವ ಮಹಾನಾಯಕ ಎನ್ನುವ ಧಾರಾವಾಹಿ ಯ ಹೆಸರನ್ನು ಬಹಳ ಪ್ರೀತಿ ಮತ್ತು ಗೌರವ ಹೆಮ್ಮೆಯಿಂದ ಮಹಾನಾಯಕ ಎಂದು ಹೆಸರು ಇಟ್ಟಿದ್ದೇನೆ’ ಎಂದು ಅವರ ಫೇಸ್‍ಬುಕ್ ಪೇಜಲ್ಲಿ ಹೇಳಿಕೊಂಡಿದ್ದರು.

ಹಾಗೆಯೇ ಸ್ಕೂಟರ್, ಬೈಕ್, ಕಾರು ಮೊದಲಾದ ವಾಹನಗಳ ಮೇಲೆ ಮಹಾನಾಯಕ ಸ್ಟಿಕ್ಕರ್ ಅಂಟಿಸಿಕೊಂಡು ಬೆಂಬಲಿಸಿದರು. ಹಾಸನದ ಆಲೂರಿನ ಮಹಾಭೋದಿ ಚಾರಿಟಬಲ್ ಟ್ರಸ್ಟ್‍ನ ಶ್ರೀ ಶಿವಾನಂದ್ ಅವರು ಪ್ರಕಟಿಸಿದ `ಮಹಾನಾಯಕ’ ದಿನಚರಿ, ಬಾಬಾ ಸಾಹೇಬರ ಚಳವಳಿಯ ದಿನಚರಿಯಂತೆ ಆಯಾ ತಿಂಗಳ ಮುಖ್ಯ ಘಟನೆಗಳನ್ನು ಜೋಡಿಸಿದ್ದಾರೆ. 20 ಸಾವಿರ ಕ್ಯಾಲೆಂಡರ್ ಮುದ್ರಿಸಿ 50 ರೂಪಾಯಿಗೆ ಒಂದರಂತೆ ಮಾರಾಟ ಮಾಡಿದ್ದರು. ಡಿ.ವಿ. ನಾರಾಯಣಸ್ವಾಮಿ ಅವರ ನಾಯಕತ್ವದಲ್ಲಿ ಮಹಾನಾಯಕ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಸೇನೆ (ರಿ) ಸಂಘಟನೆ ಹುಟ್ಟಿಕೊಂಡಿತು.
ಮಹಾನಾಯಕ ಧಾರಾವಾಹಿಯನ್ನು ಆಧರಿಸಿ ಕೆಲವು ಮೌಖಿಕ ಹಾಡುಗಳೂ ಹುಟ್ಟಿಕೊಂಡವು. ಉತ್ತರ ಕರ್ನಾಟಕದ ನಿಂಗಣ್ಣ ಗುಡ್ಡದ್ ಎನ್ನುವವರು ಧಾರಾವಾಹಿ ನಿಲ್ಲಿಸಿ ಎಂದ ಬೆದರಿಕೆಯ ಹಿನ್ನೆಲೆಯಲ್ಲಿ ಹಾಡು ಕಟ್ಟಿ ಬೆಂಬಲ ಸೂಚಿಸಿದರು. ಅಂತೆಯೇ ಯುವಕರನ್ನು ಸೆಳೆಯುವ ಡಿಜಿ ಸಾಂಗ್ ಒಂದನ್ನು ಲಿಂಗಸಗೂರಿನ ಹೃದಯಸಂಗಮ ರೆಕಾರ್ಡಿಂಗ್ ಸ್ಟುಡಿಯೋದ ಹುಸ್ಸೇನ್ ಸಾಬ್ ಎನ್ನುವವರು ಬರೆದಿದ್ದಾರೆ.

ಮಹಾನಾಯಕ ಸೀರಿಯಲ್ಲಿನ ಟೈಟಲ್ ಸಾಂಗ್‍ಗೆ ಡಾನ್ಸ್ ಮಾಡುವ ಹತ್ತಾರು ನೃತ್ಯ ಸಂಯೋಜನೆಗಳು ರೂಪುಗೊಂಡವು. ಇದರಲ್ಲಿ ಡೈನಾಮಿಕ್ ಡ್ರೀಮ್ಸ್ ಡಾನ್ಸ್ ಅಕಾಡೆಮಿ ಬಾಗಲಕೋಟೆಯ ತಂಡ ಹೆಚ್ಚು ಜನಪ್ರಿಯವಾಯಿತು. ಮೈತ್ರಿ ಮತ್ತು ನಿತ್ಯ ಎನ್ನುವ ಇಬ್ಬರು ಹುಡುಗಿಯರು ಮಹಾನಾಯಕ ಹಾಡಿಗೆ ಭಿನ್ನವಾದ ನೃತ್ಯಸಂಯೋಜನೆ ಮಾಡಿದ್ದರು. ಹಾವೇರಿ ತಾಲೂಕಿನ ನೆಗಳೂರಿನ ಮಂಜುಳಾ ಫಕ್ಕೀರೇಶ್ ಕೊಪ್ಪದ್ ಅವರು ಹಾಡಿದ `ಅಂಬೇಡ್ಕರರ ಜೀವನ ಕತೆಯ ಹೇಳುತೇನೆ ಕೇಳ್ರಿ’ ಎನ್ನುವ ಹಾಡು ಜನಪ್ರಿಯವಾಗಿತ್ತು.

ಮಹಾನಾಯಕ ಟ್ರ್ಯಾಕ್ ಸಾಂಗ್ `ರಾಷ್ಟ್ರ ಸಂವಿಧಾನಕ್ಕೆ ನೀನೇ ಶಿಲ್ಪಿಯು’ ಚಿಕ್ಕ ಚಿಕ್ಕ ಮಕ್ಕಳನ್ನು ಆಕರ್ಷಿಸಿತು. ನನ್ನ ಮಕ್ಕಳಾದ ನಿಹಾರಿಕಾ ಶ್ರೇಯನ್ ಗಿಟಾರ್ ಬಾರಿಸುತ್ತಾ ಟ್ರ್ಯಾಕ್ ಸಾಂಗನ್ನು ಹಾಡಿದರು. ಈ ಟ್ರ್ಯಾಕ್ ಸಾಂಗ್ ಹಾಡಿದ ಅಶ್ವಿನ್ ಶರ್ಮ ಅವರನ್ನು ಕರೆಸಿ ಕೆಲವು ಊರುಗಳಲ್ಲಿ ಕಾರ್ಯಕ್ರಮ ಆಯೋಜಿಸಿದರು. ಅಫಜಲಪುರ ತಾಲೂಕಿನ ಘತ್ತರಗಿ ಗ್ರಾಮದಲ್ಲಿ ಮಹಾನಾಯಕ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿಗಳು ನಡೆದವು. ಧಾರಾವಾಹಿ ಶುರುವಾದಾಗ ಆಯಾ ಎಪಿಸೋಡಿನ ಕತೆಯನ್ನು ವಿಮರ್ಶಿಸುವ ಪ್ರಯತ್ನಗಳು ನಡೆದವು. ಅದರಲ್ಲಿ ರಘೋತ್ತಮ ಹೋಬ ಮೊದಲಾದವರು ಆಯಾ ಎಪಿಸೋಡಿನ ಚರ್ಚೆಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಜೀವಂತವಾಗಿಟ್ಟರು. ಶಿವಮೊಗ್ಗ ಭಾಗದ ಸಾಹಿತಿ ಶಿಕ್ಷಕ ರಾಜೇಂದ್ರ ಬುರಡಿಕಟ್ಟಿ ಅವರು ಮಹಾನಾಯಕ ಪ್ರಶ್ನೋತ್ತರಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ ಬಹುಮಾನ ಹಂಚಿದರು.

ಕನ್ನಡದಲ್ಲಿ ಜನಪ್ರಿಯ ಮಾದರಿಯ ಸಾಮಾನ್ಯ ಜನರ ಪ್ರತಿಕ್ರಿಯೆಗಳು ಬರಲು ಶುರುವಾದಾಗ, ನಿಧಾನಕ್ಕೆ ಸಾಂಸ್ಕೃತಿಕ ವಲಯದ ಚಿಂತಕರೂ ಪ್ರತಿಕ್ರಿಯಿಸಲು ಶುರುಮಾಡಿದರು. ಮುಖ್ಯವಾಗಿ ಆದಿಮ ಕೊಟಗಾನಳ್ಳಿ ರಾಮಯ್ಯ ಅವರ ಪ್ರತಿಕ್ರಿಯೆ ಸೂಕ್ಷ್ಮವಾಗಿದೆ, ’ಈಗ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಧಾರಾವಾಹಿ ಅಂಬೇಡ್ಕರ್ ಅವರ ಕೃತಕ ಜೀವನ ಚರಿತ್ರೆ. ಅಲ್ಲಿ ನಿಜವಾದ ಅಂಬೇಡ್ಕರ್ ಇಲ್ಲ. ಹಥ್ರಾಸ್‍ನ ಹೆಣ್ಣುಮಗಳ ಹೆಣ ನಮ್ಮ ಕಣ್ಣಮುಂದಿದ್ದರೂ ಮಹಾನಾಯಕನ ಫ್ಲೆಕ್ಸುಗಳು ಊರೆಲ್ಲಾ ವಿಜೃಂಭಿಸಿರುವ ವಿದ್ಯಮಾನ ನಮ್ಮ ಕಣ್ಣ ಮುಂದಿದೆ. ಪ್ರಜ್ವಲಿಸುವ ಪ್ಲೆಕ್ಸ್‍ಗಳಲ್ಲಿ ಅಂಬೇಡ್ಕರ್ ಇಲ್ಲ. ಇದೇ ಪ್ಲೆಕ್ಸ್‍ಗಳನ್ನು ಹೊದ್ದುಕೊಂಡು ಸೂರಾಗಿಸಿಕೊಂಡವರು ಹೇಳುತ್ತಿರುವ ಕಣ್ಣೀರಿನ ಕತೆಗಳಲ್ಲಿ ಅಂಬೇಡ್ಕರ್ ಇದ್ದಾರೆ’ (ಫೇಸ್‍ಬುಕ್, ನವೆಂಬರ್ 25, 2020) ಎಂದಿದ್ದಾರೆ.

ಜನಪದ ಕಲಾವಿದರಾದ ಪಿಚ್ಚಳ್ಳಿ ಶ್ರೀನಿವಾಸ ಅವರು `ಇಂದಿನಿಂದ ಝೀ ಟಿವಿಯಲ್ಲಿ ಬಾಬಾ ಸಾಹೇಬರ ಹಿಂದಿ ಸೀರಿಯಲ್ ಕನ್ನಡದಲ್ಲಿ ಬರುತ್ತಿದೆ ಅಂತ ದಲಿತರು ಎದ್ದು ಬಿದ್ದು ತಮ್ಮ ಜಾಲತಾಣಗಳಲ್ಲಿ ಜಾಹೀರಾತು ಮೇಲೆ ಜಾಹೀರಾತು ಕೊಡುತ್ತಿದ್ದಾರೆ ಸಂತೋಷ. ಕೊನೆಗೆ ಈ ಟಿವಿಯವರು ಬಾಬಸಾಹೇಬರನ್ನ ಅಂಬೇಡ್ಕರ್ ರಾವ್, ಅಂಬೇಡ್ಕರ್ ಶರ್ಮ, ಅಂಬೇಡ್ಕರ್ ಜೋಶಿ, ಅಂಬೇಡ್ಕರ್ ಹೆಗ್ಗಡೆಯನ್ನಾಗಿ ಮಾಡದಿದ್ರೆ ಅದೇ ನಮ್ಮ ಪುಣ್ಯ. ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಸಮಾಧಾನದಿಂದ ವೀಕ್ಷಿಸಿ,ಶುಭವಾಗಲಿ’ ಎಂದಿದ್ದರು. ಈ ಇಬ್ಬರ ಹೇಳಿಕೆಯು ಜನಪ್ರಿಯ ಸಂಸ್ಕೃತಿಯು ಹುಟ್ಟಿಸಬಹುದಾದ ಹುಸಿ ಭ್ರಮೆಯ ಬಗ್ಗೆಗಿನ ಆತಂಕವನ್ನು ಒಳಗೊಂಡಿದೆ.

ಅಂತೆಯೇ ಹೊಸ ತಲೆಮಾರಿನ ಸಂಶೋಧಕ ವಿ.ಎಲ್.ನರಸಿಂಹಮೂರ್ತಿ ಅವರು `ಮಹಾನಾಯಕ’ ಧಾರಾವಾಹಿಯಿಂದಾಗಿ ಇಷ್ಟು ದಿನ ದಲಿತರಿಗೆ ಮಾತ್ರ ಗೊತ್ತಿದ್ದ ಅಂಬೇಡ್ಕರ್ ಈಗ ಮೇಲು ಜಾತಿಯವರಿಗೂ ತಲುಪುತ್ತಿದ್ದಾರೆ ಅನ್ನೊ ಸಮರ್ಥನೆಗಳು ಎಲ್ಲೆಡೆ ಕೇಳಿ ಬರ್ತಾ ಇದಾವೆ. ಸರಿಯಪ್ಪ, ಇಷ್ಟು ದಿನ ಮೇಲುಜಾತಿಗಳಿಗೆ ಅಂಬೇಡ್ಕರ್ ಅವರು ಪಟ್ಟ ಕಷ್ಟ, ಅವರು ಮಾಡಿದ ಹೋರಾಟ, ಈ ದೇಶಕ್ಕೆ ಅವರು ಕೊಟ್ಟ ಕೊಡುಗೆಯ ಮಹತ್ವ ಗೊತ್ತಾಗಿರಲಿಲ್ಲ, ಈಗ ಗೊತ್ತಾಗಿದೆ ಅಂತ ಇಟ್ಟುಕೊಳ್ಳೋಣ. ಈಗ ಈ ಮಹಾನಾಯಕ ಧಾರವಾಹಿ ನೊಡಿದ ಎಷ್ಟು ಜನ ಮೇಲುಜಾತಿಯವರು ಅಸ್ಪೃಶ್ಯತೆ ಆಚರಣೆ ನಿಲ್ಲಿಸಿದಾರೆ..? ಎಷ್ಟು ಜನ ತಮ್ಮ ಮನೆಗಳ ಒಳಕ್ಕೆ ದಲಿತರನ್ನ ಬಿಟ್ಟುಕೊಂಡು ಊಟ ಹಾಕೊದಿರಲಿ ಕನಿಷ್ಠ ಒಂದು ಲೋಟ ನೀರು ಕೊಟ್ಟು ಮಾನವೀಯರಾಗಿದ್ದಾರೆ..? ಅವರ ಮನೆಗಳಿಗೆ ಕರೆಯೋಕೆ ಆಗಿಲ್ವಾ? ಆಯ್ತಪ್ಪ ಕನಿಷ್ಠ ದಲಿತರ ಮನೆಗಳಿಗೆ ಹೋಗಿ ದಲಿತರ ಕೈಯಿಂದ ಎಷ್ಟು ಜನ ಮೇಲುಜಾತಿಯವರು ಒಂದು ಲೋಟ ನೀರು ಕುಡಿದಿದ್ದಾರೆ? ಎಷ್ಟು ಹಳ್ಳಿಗಳಲ್ಲಿ ದಲಿತರಿಗೆ ಇಲ್ಲಿವರೆಗೆ ಮುಚ್ಚಿರುವ ಹೋಟೆಲ್, ದೇವಸ್ಥಾನಗಳ ಬಾಗಿಲುಗಳು ತೆರೆದಿದಾವೆ? ಇವೆಲ್ಲ ಇರಲಿ, ಈ ಮಹಾನಾಯಕನ ಜಾತ್ರೆಗಳ ಸಂಭ್ರಮದ ನಡುವೆಯೂ ಮೊನ್ನೆ ತಾನೆ ಮೈಸೂರು ಜಿಲ್ಲೆಯಲ್ಲಿ ದಲಿತರಿಗೆ ಕ್ಷೌರ ಮಾಡಿದ ಕ್ಷೌರಿಕನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ-ಇದು ನಿಜವಾದ ಭಾರತ’ ಎನ್ನುತ್ತಾರೆ. ಇದು ಮಹಾನಾಯಕ ಹುಟ್ಟಿಸಿದ ಅಬ್ಬರದ ಜನಪ್ರಿಯ ಪ್ರಚಾರದ ಮಧ್ಯೆ ಇಂತಹ ಸೂಕ್ಷ್ಮ ಪ್ರಶ್ನೆಗಳನ್ನು ಎತ್ತುವುದು ಸಾಮಾಜಿಕ ಜವಾಬ್ದಾರಿಯಾಗಿದೆ.

`ಜಾತಿ ಅವಹೇಳನದ ವಿರುದ್ಧ ಬೀದಿಗಿಳಿದು ಹೋರಾಡುತ್ತಿದ್ದ ನಾವು, ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನಗಾಥೆಯನ್ನು ಕುರಿತ `ಮಹಾನಾಯಕ ಧಾರಾವಾಹಿಯಲ್ಲಿ ಜಾತಿಯ ಅವಹೇಳನವನ್ನು ತೀವ್ರವಾಗಿ ಅಭಿವ್ಯಕ್ತಿಸುತ್ತಿರುವ ಪ್ರಶ್ನೆಯನ್ನು ಹೇಗೆ ಎದುರಾಗಬೇಕೋ ತಿಳಿಯದಾಗಿದೆ’ ಎಂದು ಸಂಸ್ಕೃತಿ ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಅವರು ತಮ್ಮ ಫೇಸ್‍ಬುಕ್ ಪೇಜಲ್ಲಿ ಬರೆದುಕೊಳ್ಳುತ್ತಾರೆ.

ಈ ಮೇಲಿನ ಮೂರು ಅಭಿಪ್ರಾಯಗಳು ಜನಪ್ರಿಯ ಸಂಸ್ಕೃತಿ ಹುಟ್ಟಿಸುವ ಭ್ರಮೆ ಮತ್ತು ವೈರುಧ್ಯಗಳನ್ನು ಎದುರುಗೊಂಡಿವೆ. 2020 ರ ಅಕ್ಟೋಬರ್ 14 ರಂದು ನಂಜನಗೂಡು ತಾಲೂಕು ಮೈಸೂರು ಜಿಲ್ಲೆಯ ಮಾಡ್ರಾಳ್ಳಿಯಲ್ಲಿ ಮಾತನಾಡಿದ ಪತ್ರಕರ್ತ ಕೆ.ದೀಪಕ್ ಅವರು `ಝೀ ಟಿವಿಯವರಿಗೆ ಕಮರ್ಶಿಯಲ್-ಪ್ಲೆಕ್ಸ್ ಹಾಕೋವರಿಗೆ ಎಮೋಷನಲ್’ ಎನ್ನುತ್ತಾರೆ.

ಇಡೀ ದೇಶದಾದ್ಯಾಂತ ದಲಿತರ ಮೇಲಿನ ದೌರ್ಜನ್ಯಗಳು, ಹಿಂಸೆಗಳು ನಡೆಯುತ್ತಿವೆ. ಪ್ರತಿವರ್ಷ ಸರಕಾರವೆ ಬಿಡುಗಡೆ ಮಾಡುವ ಎನ್.ಸಿ.ಆರ್.ಬಿ ವರದಿಗಳು ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಈ ಬಗೆಯ ಎಲ್ಲಾ ದಲಿತ ಶೋಷಣೆಯ ಘಟನೆಗಳಿಗೆ ಕಿವುಡಾದ ಟಿವಿ ಚಾನಲ್‍ಗಳು ಅಂಬೇಡ್ಕರ್ ಅವರ ಜೀವನದಲ್ಲಿ ಮಾತ್ರ ಶೋಷಣೆಯಿತ್ತು ಎಂದು ಅತಿರಂಜಿಸಿ ತೋರಿಸುವುದು ಕೂಡ ಒಂದು ಸಾಂಸ್ಕೃತಿಕ ರಾಜಕಾರಣ. ಇದನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕು. ಮಹಾನಾಯಕ ಧಾರವಾಹಿಯ ಪ್ರಸಾರದ ಕಾರಣಕ್ಕೆ ಟಿವಿ ಚಾನಲ್ಲಿಗೆ ಶುಭಕೋರಿದ ಇದೇ ಜನರು ದಲಿತ ಸಮುದಾಯದ ಮೇಲೆ ಮೇಲ್ಜಾತಿ, ಮೇಲ್ವರ್ಗದ ಜನರು ನಡೆಸುವ ದಿನನಿತ್ಯದ ದೌರ್ಜನ್ಯ, ಶೋಷಣೆ ಹಿಂಸೆಗಳನ್ನು ಯಾಕೆ ತೋರಿಸುತ್ತಿಲ್ಲ ಎಂದು ಧಿಕ್ಕಾರವಿರುವ ಪೋಷ್ಟರ್‌ ಹಾಕಿರಲಿಲ್ಲ ಎನ್ನುವುದನ್ನು ಗಮನಿಸಬೇಕು.

ಹೀಗೆ ಮಹಾನಾಯಕ ಜನಪ್ರಿಯ ನೆಲೆಯಲ್ಲಿ ಪ್ರಚಾರ ಪಡೆಯಿತು. ಆದರೆ ಪ್ರಜ್ಞಾವಂತರು, ಅಂಬೇಡ್ಕರ್ ಚಿಂತನೆಯಲ್ಲಿ ನಂಬಿಕೆ ಇಟ್ಟವರು ಈ ಪರಿಣಾಮಗಳನ್ನು ಸರಿಯಾದ ದಾರಿಯಲ್ಲಿ ಬಳಸುವ ಕೆಲಸ ಮಾಡಿದ್ದು ಕಡಿಮೆ. ಈ ಟ್ರಂಡ್‍ನ್ನು ಫಾಲೋ ಮಾಡುವ ಕೆಲಸಗಳು ಆಗಬೇಕಿತ್ತು. ಈ ನೆಲೆಯಲ್ಲಿ ನಾನು ನನ್ನ ಯೂಟ್ಯೂಬ್ ಚಾನಲ್ಲಿನಲ್ಲಿ ಅಂಬೇಡ್ಕರ್ ಬರಹಗಳನ್ನು ಬೇರೆ ಬೇರೆಯವರಿಂದ ಓದಿಸಿ ಆಡಿಯೋ ಮಾಡಿ ಅಪ್ಲೋಡ್ ಮಾಡತೊಡಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂತು. ಈ ಸರಣಿಯಲ್ಲಿ ಅನೇಕರು ಮೊದಲ ಬಾರಿಗೆ ಅಂಬೇಡ್ಕರ್ ಓದಿಗೆ ಪ್ರವೇಶ ಪಡೆದರು. ಈ ಸರಣಿ ಇದೀಗ 242 ಕಂತನ್ನು ಪೂರೈಸಿದೆ. 4,900 ರಷ್ಟು ಚಂದಾದಾರರು, ಐದೂವರೆ ಲಕ್ಷ ಬಾರಿ ಕೇಳುವಿಕೆ ಸಾಧ್ಯವಾಗಿದೆ. ಈ ಸರಣಿಯಲ್ಲಿ ಕನಿಷ್ಠ 100 ಗಂಟೆಯ ಆಡಿಯೋ ಆರ್ಕೈವ್ ಮಾಡುವ ಉದ್ದೇಶವಿದೆ.

ಮಹಾನಾಯಕ ಧಾರಾವಾಹಿಯ ಪರಿಣಾಮವಾಗಿ ಆರಂಭದಲ್ಲಿ ಪ್ಲೆಕ್ಸ್ ಕಟ್ಟಿ ಸಂಭ್ರಮಿಸಿದ ಯುವಪಡೆ ಮತ್ತೆ ಕಾಣೆಯಾಯಿತು. ಅಂಬೇಡ್ಕರ್ ಅವರ ಚಿಂತನೆಯಲ್ಲಿ ಕೃಷಿ ಮತ್ತು ಕೃಷಿಕರ ಬಗ್ಗೆ ಅಪಾರ ಕನಸುಗಳಿವೆ. ಆದರೆ ದೆಹಲಿಯ ರೈತ ಹೋರಾಟವನ್ನು ಬೆಂಬಲಿಸಿ ಯಾವ ಯುವಕರೂ ಫಾಲೋಅಪ್ ಮಾಡಲಿಲ್ಲ. ಅಂತೆಯೇ ಮಹಾನಾಯಕ ಪರಿಣಾಮ ಸಂಘಟನಾತ್ಮಕ ನೆಲೆಯಲ್ಲಿ ಹೆಚ್ಚು ಪರಿಣಾಮ ಬೀರಬೇಕಿತ್ತು. ಪ್ಲೆಕ್ಸ್ ಕಟ್ಟಿದ ಆಯಾ ಭಾಗದ ಯುವಕರೆಲ್ಲರೂ `ಮಹಾನಾಯಕ ಯುವಕ-ಯುವತಿಯರ ಸಂಘ’ ಎಂದು ಸಂಘ ಕಟ್ಟಿಕೊಂಡು, ನಿರಂತರವಾಗಿ ದಲಿತ ಕೆಳಜಾತಿಗಳ ಪರವಾದ ಹಕ್ಕೊತ್ತಾಯಗಳಿಗಾಗಿ ಧ್ವನಿ ಎತ್ತುವ ವೇದಿಕೆಗಳಾಗಬೇಕಿತ್ತು, ಆಯಾ ಭಾಗದಲ್ಲಿ ಲಾಕ್ಡೌನ್ ಸಮಯದಲ್ಲಿ ಮಕ್ಕಳಿಗೆ ಟೂಷನ್ ಹೇಳಿಕೊಡುವ, ಪದವೀಧರರನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸುವ ಮುಂತಾದ ಕ್ರಿಯಾಶೀಲ ಚಟುವಟಿಕೆಗಳನ್ನು ರೂಪಿಸುವ ವೇದಿಕೆಗಳಾಗಬೇಕಿತ್ತು, ಆಗ ಮಹಾನಾಯಕ ಪರಿಣಾಮದ ಸ್ವರೂಪ ಬೇರೆಯಾಗಿರುತ್ತಿತ್ತು.

ಮಹಾನಾಯಕ ಪ್ಲೆಕ್ಸ್ ಕಟ್ಟಿದ್ದರಲ್ಲಿ ದಲಿತ ಕೆಳಜಾತಿಯ ಮಹಿಳೆಯರ ಪಾಲ್ಗೊಳ್ಳುವಿಕೆ ಇಲ್ಲವೆ ಇಲ್ಲ. ಬಾಬಾ ಸಾಹೇಬರು ಮಹಿಳಾ ಹಕ್ಕು ಮತ್ತು ಸ್ವಾತಂತ್ರ್ಯಕ್ಕಾಗಿ ನಿರಂತರವಾಗಿ ಹೋರಾಡಿದವರು. ಹಿಂದೂ ಕೋಡ್ ಬಿಲ್ ಜಾರಿಯಾಗಲಿಲ್ಲ ಎಂದು ಮಂತ್ರಿ ಪದವಿಗೆ ರಾಜಿನಾಮೆ ಕೊಟ್ಟವರು. ಆದರೆ ನನ್ನ ಗಮನಕ್ಕೆ ಬಂದಂತೆ ಒಂದೇ ಒಂದು ಮಹಿಳಾ ಸಂಘಟನೆ ಮಹಾನಾಯಕ ಫ್ಲೆಕ್ಸ್ ಕಟ್ಟಿ ಅಂಬೇಡ್ಕರರ ಬಗೆಗೆ ಚರ್ಚೆ ಸಂವಾದಗಳನ್ನು ನಡೆಸಿದ್ದು ಕಾಣಲಿಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಮಹಾನಾಯಕ ಪ್ಲೆಕ್ಸ್ ಕಟ್ಟುವ ಕಾರ್ಯಕ್ರಮದಲ್ಲಿಯೂ ಮಹಿಳೆಯರ ಪಾಲ್ಗೊಳ್ಳುವಿಕೆ ಶೂನ್ಯವಾಗಿದೆ.

ಹೀಗೆ ಮಹಾನಾಯಕ ಧಾರಾವಾಹಿ ಬೀರಿದ ಪರಿಣಾಮ ಬಹುತೇಕ ಸಾಮಾಜಿಕ ಜಾಲತಾಣ ಮತ್ತು ಸುದ್ದಿಮಾದ್ಯಮಗಳಲ್ಲಿ ಕಾಣಿಸಿಕೊಳ್ಳುವ ಮೇಲ್ಪದರದ ನೆಲೆ ಹೆಚ್ಚಾಯಿತು. ಪ್ಲೆಕ್ಸ್ ಕಟ್ಟಿದ ಹುಡುಗರು ಏನಾದರೂ ಕ್ರಿಯಾಶೀಲ ಕೆಲಸಗಳಲ್ಲಿ ತೊಡಗಿಕೊಂಡರೆ? ಸಂಘಟನೆ ಕಟ್ಟಿದರೆ, ಶಿಕ್ಷಣಕ್ಕಾಗಿ ಏನಾದರೂ ಚಟುವಟಿಕೆಗಳನ್ನು ಮಾಡಿದರೇ ಎನ್ನುವ ಪ್ರಶ್ನೆಗಳನ್ನು ಹಾಕಿಕೊಂಡರೆ ಈ ಪರಿಣಾಮ ತೀರಾ ತೆಳುವಾದದ್ದು ಅನ್ನಿಸುತ್ತದೆ. ಅಂತೆಯೇ ಇಂತಹ ಜನಪ್ರಿಯ ಸಂಸ್ಕೃತಿಯನ್ನು ಸಾಹಿತಿ ಚಿಂತಕರು ಪ್ರಜ್ಞಾವಂತರು ಲಘುವಾಗಿ ನೋಡಿ ಇಂತಹ ಪರಿಣಾಮಗಳನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ದಲಿತ ಕೆಳಜಾತಿ ಯುವಕ ಯುವತಿಯರನ್ನು ಪ್ರೇರೇಪಿಸುವ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ. ಅಂಬೇಡ್ಕರರು ಹೊಸ ತಲೆಮಾರಿನಲ್ಲಿ ನೆಲೆಗೊಳ್ಳಲು `ಮಹಾನಾಯಕ’ ಒಂದು ಗುರುತಾಗಿದೆ. ಈ ಪರಿಣಾಮವನ್ನು ಬಳಸಿಕೊಂಡು ಧೀರ್ಘಕಾಲೀನ ಫಲಕೊಡುವ ಕೆಲಸಗಳನ್ನು ಇನ್ನಾದರೂ ಕೈಗೊಳ್ಳಲು ಸಾಧ್ಯವಿದೆ.

– ಅರುಣ್ ಜೋಳದಕೂಡ್ಲಿಗಿ


ಇದನ್ನೂ ಓದಿ: ಅಂಬೇಡ್ಕರ್ ಜೀವನಾಧಾರಿತ “ಮಹಾನಾಯಕ” ಧಾರಾವಾಹಿ ನಿಲ್ಲಿಸುವಂತೆ ಬೆದರಿಕೆ: ರಾಘವೇಂದ್ರ ಹುಣಸೂರು

ಅರುಣ್ ಜೋಳದಕೂಡ್ಲಿಗಿ
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

ಯಾವುದೇ ಭಾಷೆಯ ಮೂಲ ಉದ್ದೇಶ ಸಂವಹನ. ಸಂವಹನದ ಉದ್ದೇಶದಿಂದ ಬಳಸಲಾಗುವ ಯಾವುದೇ ಭಾಷೆಗಳಲ್ಲಿ ಮೇಲು ಕೀಳು ಎಂಬ ಭಾವವೇ ನಿಕೃಷ್ಟವಾದದ್ದು. ಜಗತ್ತಿನ ಮೂಲೆ ಮೂಲೆಗಳಲ್ಲಿ ಮನುಷ್ಯರು ಬಳಸುವ ಎಲ್ಲಾ ಭಾಷೆಗಳಿಗೂ ತನ್ನದೇ ಆದ...
Wordpress Social Share Plugin powered by Ultimatelysocial