ಗುರುವಾರ ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ಮೋದಿ ಪ್ರತ್ಯುತ್ತರ ನೀಡಲು ಆರಂಭಿಸುತ್ತಿದ್ದಂತೆಯೇ ಪ್ರತಿಪಕ್ಷಗಳು ‘ಮೋದಿ-ಅದಾನಿ ಭಾಯಿ-ಭಾಯಿ’ ಎಂಬ ಘೋಷಣೆಗಳನ್ನು ಕೂಗಲಾರಂಭಿಸಿದರು.
ಅದಾನಿ ಕಂಪನಿ ವಿರುದ್ಧದ ಆರೋಪಗಳ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಒತ್ತಾಯಿಸಿ ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ವಿರೋಧ ಪಕ್ಷದ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸಿದ್ದು, ”ಅವರು ನಮ್ಮ ವಿರುದ್ಧ ಮಾತನಾಡಿದಷ್ಟು ಬಿಜೆಪಿ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲು ಸಹಾಯವಾಗುತ್ತದೆ” ಎಂದು ಹೇಳಿದರು. ಮುಂದುವರಿದು, ”ನಾನು ಈ ಸಂಸದರಿಗೆ (ವಿರೋಧ ಪಕ್ಷಗಳ ಸಂಸದರಿಗೆ) ಹೇಳಲು ಬಯಸುತ್ತೇನೆ, ನೀವು ಹೆಚ್ಚು ಕೆಸರು ಎರಚಿದಷ್ಟು ಕಮಲವು ಉತ್ತಮವಾಗಿ ಅರಳುತ್ತದೆ” ಎಂದು ಹೇಳಿದರು.
ಇದನ್ನೂ ಓದಿ: ರಾಜ್ಯಸಭಾ ಕಡತದಿಂದ ಮೋದಿ ವಿರುದ್ಧದ ತಮ್ಮ ಹೇಳಿಕೆ ತಗೆದಿದ್ದಕ್ಕೆ ಖರ್ಗೆ ಆಕ್ಷೇಪ
ಬುಧವಾರ, ಲೋಕಸಭೆಯಲ್ಲಿ ಭಾರತದ ರಾಷ್ಟ್ರಪತಿಯನ್ನು ಅವಮಾನಿಸಿದ್ದಕ್ಕಾಗಿ ಮತ್ತು ಕೆಲವು ನಾಯಕರು ಪರಿಶಿಷ್ಟ ಪಂಗಡಗಳ ವಿರುದ್ಧ ದ್ವೇಷವನ್ನು ಪ್ರದರ್ಶಿಸಿದರು ಎಂದು ವಿರೋಧ ಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.
ಶತಮಾನಕ್ಕೊಮ್ಮೆ ಸಂಭವಿಸುವ ಸಾಂಕ್ರಾಮಿಕ ಮತ್ತು ಸಂಘರ್ಷಗಳಿಂದಾಗಿ ಜಗತ್ತಿನಾದ್ಯಂತ ಅಸ್ಥಿರತೆ ಉಂಟಾಗಿದೆ. ಈ ಮಧ್ಯೆ ಜಗತ್ತು, ಭಾರತವನ್ನು ಭರವಸೆಯಿಂದ ನೋಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತವು ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂದು ಪ್ರಧಾನಿ ಹೇಳಿದರು.
”ಆದರೆ ಹತಾಶೆಯಲ್ಲಿ ಕುತ್ತಿಗೆಯ ಆಳದಲ್ಲಿರುವ ಕೆಲವರು ಭಾರತದ ಬೆಳವಣಿಗೆಯ ಕಥೆಯನ್ನು ಒಪ್ಪಿಕೊಳ್ಳುತ್ತಿಲ್ಲ. ಅವರು 140 ಕೋಟಿ ಭಾರತೀಯರ ಸಾಧನೆಗಳನ್ನು ನೋಡಲು ಸಾಧ್ಯವಿಲ್ಲ” ಎಂದು ಮೋದಿ ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಂಡು ಹೇಳಿದರು.
ಪ್ರಧಾನಿ ಭಾಷಣದ ವೇಳೆ ಪ್ರತಿಪಕ್ಷಗಳು ಮಾತ್ರ ‘ಮೋದಿ-ಅದಾನಿ ಭಾಯಿ-ಭಾಯಿ’ ಎಂಬ ಘೋಷಣೆಗಳನ್ನು ಕೂಗುತ್ತಲೇ ಇದ್ದರು. ಅದಾನಿ ವಿರುದ್ಧ ತನಿಖೆ ನಡೆಸುವಂತೆ ಪ್ರತಿಪಕ್ಷಗಳು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದರೂ ಪ್ರಧಾನಿ ಮೋದಿಯವರು ಮಾತ್ರ ಅವರ ಮಾತುಗಳಿಗೆ ಉತ್ತರ ನೀಡದೆ ಎಂದಿನಂತೆ ವಿಪಕ್ಷಗಳ ವಿರುದ್ಧ ಭಾಷಣ ಮುಂದುವರೆಸಿದರು.


