ಹರಿಯಾಣದ ಗುರ್‌ಗಾಂವ್‌ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಇಂದು (ನ.12) ಕೂಡ ಸೆಕ್ಟರ್ 12A ರಲ್ಲಿ ಮುಸ್ಲಿಂ ಸಮುದಾಯದವರು ನಮಾಜ್ ಮಾಡುವುದಕ್ಕೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.
ನಮಾಜ್ ಸ್ಥಳವನ್ನು ಬೆಳಗ್ಗೆಯಿಂದಲೇ ಆಕ್ರಮಿಸಿಕೊಂಡಿರುವ ಹಿಂದೂ ಪರ ಸಂಘಟನೆಯ ಸದಸ್ಯರು ಇದನ್ನು ವಾಲಿಬಾಲ್ ಅಂಕಣ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಅಲ್ಲಿಯೇ ಕುಳಿತು ಪ್ರಾರ್ಥನೆ ನಡೆಯದಂತೆ ತಡೆದಿದ್ದಾರೆ.
ಕಳೆದ ವಾರ ನಮಾಜ್ ಮುಗಿಸಿದ ಮೇಲೆ ಆ ಸ್ಥಳದಲ್ಲಿ ಹಸುವಿನ ಬೆರಣಿಯನ್ನು ಸಾಲು ಸಾಲಾಗಿ ಹರಡಲಾಗಿತ್ತು. ಬಲಪಂಥೀಯ ಗುಂಪುಗಳು ನಮಾಜ್ ಸ್ಥಳದ ಮೇಲೆ ಸಗಣಿ ಹರಡಿ ಪೂಜೆ ನಡೆಸಿದ್ದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಕಳೆದ ಹಲವಾರು ವಾರಗಳಿಂದ ಈ ಸ್ಥಳಗಳಲ್ಲಿ ಪ್ರತಿಭಟನೆ ಮತ್ತು ಬೆದರಿಕೆ ನೀಡುವ ಘಟನೆಗಳು ನಡೆದ ನಂತರ ಮುಸ್ಲಿಂ ಸಂಘಟನೆಗಳು ಇಂದು ಈ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.
2018 ರಲ್ಲಿ ಇದೇ ರೀತಿಯ ಘರ್ಷಣೆಗಳ ನಂತರ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಒಪ್ಪಂದದ ನಂತರ ನಮಾಜ್ ಮಾಡಲು ನಿಯೋಜಿಸಲಾಗಿದ್ದ 29 ಸ್ಥಳಗಳಲ್ಲಿ ಸೆಕ್ಟರ್ 12A ಕೂಡ ಒಂದು ನಮಾಜ್ ಸ್ಥಳವಾಗಿದೆ.
ಇನ್ನು ನವೆಂಬರ್ 3 ರಂದು ಗುರುಗ್ರಾಮ್ ಆಡಳಿತವು ಮುಸ್ಲಿಮರಿಗೆ ನಮಾಜ್ ಮಾಡಲು ಗೊತ್ತುಪಡಿಸಿದ 37 ಸ್ಥಳಗಳ ಪೈಕಿ ಎಂಟರಲ್ಲಿ ಸ್ಥಳೀಯರ ವಿರೋಧದಿಂದ ಅನುಮತಿ ವಾಪಸ್ ಪಡೆದಿತ್ತು. ಗುರುಗ್ರಾಮ್ ಜಿಲ್ಲಾಡಳಿತದ ಅಧಿಕೃತ ಹೇಳಿಕೆಯ ಪ್ರಕಾರ, ಸ್ಥಳೀಯ ಜನರು ಮತ್ತು ಆರ್‌ಡಬ್ಲ್ಯೂಎಯಿಂದ ಆಕ್ಷೇಪಣೆ ಬಂದಿರುವ ಕಾರಣ ಅನುಮತಿಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿತ್ತು.
ಸೆಕ್ಟರ್ 49 ರಲ್ಲಿ ಬೆಂಗಾಲಿ ಬಸ್ತಿ, ಡಿಎಲ್‌ಎಫ್ ಹಂತ -3 ರ ವಿ ಬ್ಲಾಕ್, ಸೂರತ್ ನಗರ ಹಂತ -1, ಖೇರ್ಕಿ ಮಜ್ರಾ ಗ್ರಾಮದ ಹೊರವಲಯ, ದ್ವಾರಕಾ ಎಕ್ಸ್‌ಪ್ರೆಸ್‌ವೇ ಬಳಿಯ ದೌಲತಾಬಾದ್ ಗ್ರಾಮದ ಹೊರವಲಯ, ಸೆಕ್ಟರ್ 68 ರ ರಾಮಗಢ ಗ್ರಾಮದ ಬಳಿ, ಡಿಎಲ್‌ಎಫ್ ಸ್ಕ್ವೇರ್ ಟವರ್ ಬಳಿ ಮತ್ತು ರಾಂಪುರ ಗ್ರಾಮದಿಂದ ನಖ್ರೋಲಾ ರಸ್ತೆ. ಈ ಎಂಟು ಸ್ಥಳಗಳಲ್ಲಿ ನಮಾಜ್ ಮಾಡುವಂತಿಲ್ಲ ಎಂದು ಆದೇಶಿಸಿತ್ತು.
ನಮಾಜ್ ನಡೆಸುವು ಸ್ಥಳಗಳು ಮತ್ತು ಭವಿಷ್ಯದಲ್ಲಿ ನಮಾಜ್ ಮಾಡಲು ಸ್ಥಳಗಳನ್ನು ಗುರುತಿಸಲು ಉಪವಿಭಾಗೀಯ ಮ್ಯಾಜಿಸ್ಟ್ರೇಟ್, ಸಹಾಯಕ ಪೊಲೀಸ್ ಆಯುಕ್ತರು, ಧಾರ್ಮಿಕ ಸಂಘಟನೆಗಳು ಮತ್ತು ಸಿವಿಲ್ ಸೊಸೈಟಿ ಗುಂಪುಗಳ ಸದಸ್ಯರನ್ನೊಳಗೊಂಡ ಸಮಿತಿಯನ್ನು ಗುರುಗ್ರಾಮ್ ಡೆಪ್ಯುಟಿ ಕಮಿಷನರ್ ಯಶ್ ಗರ್ಗ್ ಅವರು ರಚಿಸಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಇದನ್ನೂ ಓದಿ: ದೆಹಲಿ: ಸ್ಥಳೀಯರ ವಿರೋಧದಿಂದ ನಮಾಜ್‌ಗೆ ನಿಗದಿಪಡಿಸಿದ್ದ 8 ಸ್ಥಳಗಳ ಅನುಮತಿ ವಾಪಸ್


