ಇತ್ತೀಚೆಗೆ ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ರವರು ನಮ್ಮ ರಾಜ್ಯದ ಮಗಳೊಬ್ಬಳು ದೇಶದ ಮೊದಲ ಪ್ರಜೆಯಾಗಲಿರುವುದರಿಂದ ನಾವು ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುರವರನ್ನು ಬೆಂಬಲಿಸುವುದಾಗಿ ಘೋಷಿಸಿದರು. ಆದಿವಾಸಿ ಜನರ ಅಭಿವೃದ್ದಿಗಾಗಿ ಅವರಿಗೆ ಮತಹಾಕುವುದಾಗಿ ತಿಳಿಸಿದರು. ಆದರೆ ಅದೇ ಸಂದರ್ಭದಲ್ಲಿ ರಾಜ್ಯದ ಸಂಬಲ್‌ಪುರದ ಸ್ಲಂ ಅನ್ನು ಏಕಾಏಕಿ ತೆರವುಗೊಳಿಸಿ 1200ಕ್ಕೂ ಹೆಚ್ಚು ಆದಿವಾಸಿ-ದಲಿತರನ್ನು ಜನರನ್ನು ಬೀದಿಗೆ ತಳ್ಳಿದ್ದಾರೆ. ಇದು ಅವರ ಅಭಿವೃದ್ದಿ ಮಾದರಿಯಾಗಿದೆ.
ರಾಜ್ಯದ ಸಂಬಲ್ಪುರದಲ್ಲಿನ ಘುಂಘುಟಿಪಾರ ಸ್ಲಂನಲ್ಲಿ 400 ವರ್ಷಗಳಿಂದ 250ಕ್ಕೂ ಹೆಚ್ಚು ದಲಿತ-ಆದಿವಾಸಿ ಕುಟುಂಬಗಳು ವಾಸಿಸುತ್ತಿವೆ. 200ಕ್ಕೂ ಹೆಚ್ಚು ಶಾಲೆಗೆ ಹೋಗುವ ಮಕ್ಕಳೊಂದಿಗೆ 1200 ಜನರು ಇಲ್ಲಿ ವಾಸವಿದ್ದು, ಬಹುತೇಕರು ದಲಿತರಾಗಿದ್ದಾರೆ. ದಿನಗೂಲಿ ಕೆಲಸ ಮಾಡಿ ಜೀವನ ಸಾಗಿಸುವ ಈ ಜನರು ಯಾರಿಗೂ ತೊಂದರೆ ಕೊಟ್ಟಿದ್ದಿಲ್ಲ. ಆದರೆ ಸ್ಲಂನಿಂದ ಸ್ವಲ್ಪ ದೂರದಲ್ಲಿರುವ ಸಮಲೇಶ್ವರಿ ದೇವಾಲಯ ವಿಸ್ತರಣೆಯ ಭಾಗವಾಗಿ ಒಂದಷ್ಟು ಅಭಿವೃದ್ದಿ ಕಾರ್ಯಕ್ರಮಗಳನ್ನು ಸರ್ಕಾರ ಯೋಜಿಸಿದೆ. ಅದಕ್ಕಾಗಿ ಸ್ಲಂ ಅನ್ನು ತೆರವುಗೊಳಿಸುತ್ತಿದೆ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದು, ಹೋರಾಟಕ್ಕೆ ಮುಂದಾಗಿದ್ದಾರೆ.
ದೇವಾಯಲಯವನ್ನು ಸುಂದರಗೊಳಿಸುವುದಕ್ಕಾಗಿ ಸರ್ಕಾರ ನಮ್ಮನ್ನು ಎತ್ತಂಗಡಿ ಮಾಡುತ್ತಿದೆ. ಇದಕ್ಕಾಗಿ ನಮಗೆ ಮುಂಚಿತವಾಗಿ ಯಾವುದೇ ನೋಟಿಸ್, ನೀಡಿಲ್ಲ. ಸಮರ್ಪಕ ಪುನರ್ವಸತಿ ಕಲ್ಪಿಸುತ್ತಿಲ್ಲ. ದೇವಾಲಯದ ಇತರ ಬದಿಗಳಲ್ಲಿರುವ ಮನೆಗಳನ್ನು ಮುಟ್ಟದೆ ನಮ್ಮನ್ನು ಮಾತ್ರ ಇಲ್ಲಿಂದ ತೆರವುಗೊಳಿಸುವುದು ಯಾವ ನ್ಯಾಯ? ನಾವು ಇಲ್ಲಿಯೇ ಸುತ್ತ-ಮುತ್ತಾ ದಿನಗೂಲಿ ಮಾಡುತ್ತಿದ್ದೇವೆ. ಈಗ ನಮ್ಮನ್ನು ನಗರದಿಂದ ದೂರಕ್ಕೆ ತಳ್ಳಿದರೆ ಏನು ಮಾಡುವುದು? ಬಡವರಾದ ನಮ್ಮನ್ನೆ ಗುರಿಯಾಗಿಸುವುದು ಏಕೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
As per the directive of the Govt. Of Odisha, 450 yr old Dalit slum of Ghunghuti Para, Sambalpur is being demolished for the beautification of a temple.
On 12 July Dalit-Adivasi led orgs. undertook a massive 8km padayatra to fight for their right to housing & livelihood 1/n pic.twitter.com/R31KrBPw5x— Pri | پرینکا (@PriyankaSamy) July 19, 2022
ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಜಂಬರ ಮೊಹಾಂತಿ ಅವರು ಈ ಕುರಿತು ಪ್ರತಿಕ್ರಿಯಿಸಿ, “ದುರ್ಗಪಾಲಿ ಪ್ರದೇಶದಲ್ಲಿ ಜಿಲ್ಲಾಡಳಿತವು ಈಗಾಗಲೇ ಹೊಸ ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದರೂ, ಸ್ಲಂ ನಿವಾಸಿಗಳು ಕೆಲಸ ಮಾಡುವ ಸ್ಥಳದಿಂದ ದೂರವಿರುವುದರಿಂದ ಅಲ್ಲಿಗೆ ಸ್ಥಳಾಂತರಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಪ್ರಸ್ತುತ ಪ್ರಸ್ತಾವನೆಯ ಪ್ರಕಾರ, AWAS ಯೋಜನೆಯಡಿಯಲ್ಲಿ 3 ಲಕ್ಷ ರೂಪಾಯಿಗಳ ಸಹಾಯದ ಜೊತೆಗೆ ಪ್ರತಿ ಮನೆಗೆ 75,000 ರೂ. ನೀಡಲು ನಾವು ನಿರ್ಧಿರಿಸಿದ್ದೇವೆ” ಎಂದಿದ್ದಾರೆ.
ಬಲವಂತವಾಗಿ ತೆರವು ಕಾರ್ಯಾಚರಣೆ ನಡೆಸುತ್ತಿರುವುದರ ವಿರುದ್ಧ ದಲಿತ-ಆದಿವಾಸಿ ಸಂಘಟನೆಗಳು ಜುಲೈ 12ರಿಂದಲೂ ಹೋರಾಟ ನಡೆಸುತ್ತಿದ್ದಾರೆ. ಅಧಿಕಾರಿಗಳು ಸ್ಪಂದಿಸದಿದ್ದಾಗ ಸಿಎಂ ಮನೆ ಕಡೆಗೆ ಪಾದಯಾತ್ರೆ ಆರಂಭಿಸಿದ್ದಾರೆ. ಅಂಬೇಡ್ಕರ್, ಜ್ಯೋತಿ ಬಾ ಫುಲೆ, ಸಾವಿತ್ರಿ ಬಾ ಫುಲೆಯವರ ಫೋಟೊಗಳನ್ನು ಹಿಡಿದು ಜೈಭೀಮ್ ಘೋಷಣೆ ಕೂಗುತ್ತಾ ಪಾದಯಾತ್ರೆ ಮುಂದುವರೆದಿದೆ. ಈ ಬಡಜನರ ಹೋರಾಟಕ್ಕೆ ಹಲವು ಸಂಘಟನೆಗಳು ಕೈಜೋಡಿಸಿವೆ.
CM Naveen Patnaik's Samalei Plan was announced for the development of the famous Samaleshwari temple but there's no proper announcement for resettlement, rehabilitation and compensation for the Dalit slum dwellers of Ghughuti Para. pic.twitter.com/YLIfGMU4US
— Pri | پرینکا (@PriyankaSamy) July 19, 2022
ಇದು ಒರಿಸ್ಸಾ ಮಾತ್ರವಲ್ಲದೆ ಇಡೀ ದೇಶದಲ್ಲಿನ ಬಡವರ ಪರಿಸ್ಥಿತಿ ಇದೆ ಆಗಿದೆ. ಪೌರಕಾರ್ಮಿಕರಾಗಿ, ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತ ಸ್ಲಂಗಳಲ್ಲಿ ವಾಸಿಸುತ್ತಿರುವ ಜನರಿಗೆ ಸ್ವಂತ ಮನೆ ಎಂಬುದು ಕನಸಾಗಿದೆ. ನಗರದ ಮಧ್ಯಭಾಗದಲ್ಲಿ ಶತಮಾನಗಳಿಂದ ದುಡಿಯುತ್ತಿದ್ದರೂ ಅವರಿಗೆ ಸೌಲಭ್ಯ ಒದಗಿಸದ ಸರ್ಕಾರ ಬೆಲೆ ಬಾಳುವ ಆ ಜಾಗ ಕಬಳಿಸಲು ಅವರನ್ನು ದೂರಕ್ಕೆ ಎತ್ತಂಗಡಿ ಮಾಡುತ್ತಿವೆ. ಈ ಕುರಿತು ನಡೆಯುತ್ತಿರುವ ಹೋರಾಟಗಳನ್ನು ದಮನ ಮಾಡುತ್ತಿವೆ. ಇದು ದೇಶದ ಕ್ರೂರ ವಾಸ್ತವವಾಗಿದೆ. ಆದರೂ ಆ ಬಡಜನರು ತಮ್ಮ ನ್ಯಾಯಯುತ ಹಕ್ಕಿಗಾಗಿ ದನಿ ಎತ್ತುತ್ತಲೇ ಇದ್ದಾರೆ.
ಇದನ್ನೂ ಓದಿ: ಹಕ್ಕುಪತ್ರ ನೀಡಿ, ತುಂಡು ಭೂಮಿ ಉಳಿಸಿಕೊಡಿ: ಸಿಎಂಗೆ ಮನವಿ ಸಲ್ಲಿಸಲು ಪಾದಯಾತ್ರೆ ಹೊರಟ ಮಂಡ್ಯದ ಶ್ರಮಿಕರು


