Homeಚಳವಳಿಹಕ್ಕುಪತ್ರ ನೀಡಿ, ತುಂಡು ಭೂಮಿ ಉಳಿಸಿಕೊಡಿ: ಸಿಎಂಗೆ ಮನವಿ ಸಲ್ಲಿಸಲು ಪಾದಯಾತ್ರೆ ಹೊರಟ ಮಂಡ್ಯದ ಶ್ರಮಿಕರು

ಹಕ್ಕುಪತ್ರ ನೀಡಿ, ತುಂಡು ಭೂಮಿ ಉಳಿಸಿಕೊಡಿ: ಸಿಎಂಗೆ ಮನವಿ ಸಲ್ಲಿಸಲು ಪಾದಯಾತ್ರೆ ಹೊರಟ ಮಂಡ್ಯದ ಶ್ರಮಿಕರು

ರಾಜ್ಯದ ಮುಖ್ಯಮಂತ್ರಿಯವರೆ, ಶ್ರೀಮಂತರ ಹೆಲಿಪ್ಯಾಡ್‌ಗೆ ಶಂಕುಸ್ಥಾಪನೆ ಮಾಡುತ್ತಿದ್ದೀರಿ, ಬಡವರ ಮನೆಗಳಿಗೆ ಯಾವಾಗ ಶಂಕು ಸ್ಥಾಪನೆ ಮಾಡುತ್ತೀರಿ? ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.

- Advertisement -
- Advertisement -

ಮಂಡ್ಯ ನಗರವನ್ನು ಕಟ್ಟಿದ, ಅದನ್ನು ಪ್ರತಿನಿತ್ಯ ಸ್ವಚ್ಛವಾಗಿಡುತ್ತಿರುವ ಶ್ರಮಿಕ ನಿವಾಸಿಗಳು ಕಳೆದ 5 ದಿನಗಳಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಇಂತಹ ನೂರಾರು ಹೋರಾಟಗಳನ್ನು ಮಾಡಿದರೂ ಅವರಿಗೆ ಹಕ್ಕುಪತ್ರಗಳು ಸಿಕ್ಕಿಲ್ಲ. ಅಲ್ಲದೆ ಅವರು ವಾಸಿಸುತ್ತಿರುವ ತುಂಡು ಭೂಮಿಯನ್ನು ಆಕ್ರಮಿಸಿಕೊಳ್ಳಲು ಹಲವಾರು ಜನ ಹೊಂಚು ಹಾಕುತ್ತಿದ್ದಾರೆ. ಇದರಿಂದ ಆತಂಕಿತಗೊಂಡಿರುವ ಅಲ್ಲಿನ ಶ್ರಮಿಕ ನಿವಾಸಿಗಳು ಈಗ ನೇರವಾಗಿ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ, ತಮ್ಮ ಸಂಕಷ್ಟ ಹೇಳಿಕೊಳ್ಳಲು ಪಾದಯಾತ್ರೆ ಹೊರಟಿದ್ದಾರೆ. ರಾಜ್ಯದ ಮುಖ್ಯಮಂತ್ರಿಯವರೆ, ಶ್ರೀಮಂತರ ಹೆಲಿಪ್ಯಾಡ್‌ಗೆ ಶಂಕುಸ್ಥಾಪನೆ ಮಾಡುತ್ತಿದ್ದೀರಿ…. ಬಡವರ ಮನೆಗಳಿಗೆ ಯಾವಾಗ ಶಂಕು ಸ್ಥಾಪನೆ ಮಾಡುತ್ತೀರಿ? ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.

ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಹಲವಾರು ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿದ ಶ್ರಮಿಕ ನಿವಾಸಿಗಳು ಅಲ್ಲೆ ಪಕ್ಕದಲ್ಲಿ, ಸುತ್ತಾ ಮುತ್ತಾ ನೂರಾರು ವರ್ಷಗಳಿಂದ ವಾಸವಾಗಿದ್ದಾರೆ. ಆರ್‌ಟಿಓ ಕಚೇರಿ ಎದುರು 80 ಕುಟುಂಬಗಳು ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಾ ಬಂದಿದ್ದಾರೆ. ಕಾಳಪ್ಪ ಬಡಾವಣೆ ಎಂದು ಹೆಸರು ಇಟ್ಟುಕೊಂಡಿರುವ ಇಲ್ಲಿನ ಶ್ರಮಿಕರು ಬಹುತೇಕ ಪೌರಕಾರ್ಮಿಕ ಕೆಲಸ ಮಾಡುತ್ತಾರೆ. ಅಲ್ಲದೆ ದಿನಗೂಲಿ ಕಾರ್ಮಿಕರಾಗಿ, ಮೂಟೆಹೊರುವ ಕಾರ್ಮಿಕರಾಗಿ, ಮನೆಕಟ್ಟುವವರಾಗಿ, ಮನೆಕೆಲಸಕ್ಕೆ ನೆರವಾಗುವವರಾಗಿ ಹತ್ತುಹಲವು ರೀತಿಗಳಲ್ಲಿ ಈ ನಗರವನ್ನು ಸ್ವಚ್ಛವಾಗಿಡುತ್ತಿದ್ದಾರೆ. ಅವರ ಹಕ್ಕೊತ್ತಾಯ ಒಂದೇ. ಅದು ಅವರು 50 ವರ್ಷಗಳಿಂದ ವಾಸಿಸುತ್ತಿರುವ ಜಾಗವನ್ನು ಸ್ಲಂ ಎಂದು ಘೋಷಿಸಿ ಅವರಿಗೆ ಹಕ್ಕುಪತ್ರ ನೀಡಬೇಕು. ಸರ್ಕಾರ ಮನೆಗಳನ್ನು ಕಟ್ಟಿಕೊಡಬೇಕು ಎಂಬುದಾಗಿದೆ.

ಈ ವಿಚಾರದಲ್ಲಿ ಹಲವಾರು ಹೋರಾಟಗಳು ನಡೆದು 2007ರಲ್ಲಿ ಈ ಪ್ರದೇಶವನ್ನು ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಸ್ಲಂ ಎಂದು ಘೋಷಣೆ ಮಾಡಲಾಗಿತ್ತು. ಸರ್ಕಾರ ವಾಂಬೆ ಯೋಜನೆಯಡಿಯಲ್ಲಿ 80 ಮನೆಗಳನ್ನು ನಿರ್ಮಾಣ ಮಾಡಿಕೊಡಲು ಕಾಮಗಾರಿ ಪ್ರಾರಂಭಿಸಿತ್ತು. ಆದರೆ, ಪಟ್ಟಭದ್ರ ಹಿತಾಸಕ್ತಿಗಳು ಆ ಜಾಗವನ್ನು ಲಪಟಾಯಿಸಲು ಹುನ್ನಾರ ಮಾಡಿ ಅಲ್ಲಿನ ಜನರಿಗೆ ಹಕ್ಕುಪತ್ರಗಳು ಸಿಗದ ಹಾಗೆ ನೋಡಿಕೊಂಡಿದ್ದಾರೆ. ಇದರಿಂದಾಗಿ ಅಲ್ಲಿಯ ನಿವಾಸಿಗಳಿಗೆ ಹಕ್ಕು ಪತ್ರಗಳು ಇಲ್ಲದೆ, ಯಾವ ಯೋಜನೆಯ ಅಡಿಯಲ್ಲೂ ವಸತಿಯನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮನೆಗಳೆ ಇಲ್ಲ ಎಂದ ಮೇಲೆ ಮೂಲಭೂತ ಸೌಲಭ್ಯಗಳು ದೂರದ ಮಾತು.

ಈಗ ಅದೇ ಜಾಗದಲ್ಲಿ ಹಲವು ನೌಕರರ ಸಂಘಟನೆಗಳು ತಮ್ಮ ಕಚೇರಿಗಳನ್ನು ಸ್ಥಾಪಿಸಿಕೊಳ್ಳಲು ಮುಂದಾಗಿವೆ. ಶ್ರಮಿಕನಿವಾಸಿಗಳು ಬಳಸುತ್ತಿದ್ದ ಶೌಚಾಲಯವನ್ನು ಕೆಡವಿಹಾಕಿವೆ. ಇದರಿಂದ ಆತಂಕಿತರಾಗಿರುವ ಅಲ್ಲಿನ ನಿವಾಸಿಗಳು ಮಂಡ್ಯದ ಇತರ ಶ್ರಮಿಕ ನಿವಾಸಿಗಳ ಜೊತೆಗೂಡಿ ಹೋರಾಟ ಆರಂಭಿಸಿದ್ದಾರೆ. ಕಾಳಪ್ಪ ಬಡಾವಣೆಯನ್ನು ಸ್ಲಂ ಎಂದು ಅಂತಿಮ ಡಿಕ್ಲೆರೇಶನ್ ಕೂಡಲೇ ಹೊರಡಿಸಬೇಕು ಮತ್ತು ಹಕ್ಕು ಪತ್ರ ಒದಗಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರೂ ಜಿಲ್ಲಾಧಿಕಾರಿಯಾಗಲಿ, ಇತರ ಅಧಿಕಾರಿಗಳಾಗಲಿ ಸ್ಪಂದಿಸಿಲ್ಲ. ಹಾಗಾಗಿ ಜುಲೈ 21 ರಂದು ಜಿಲ್ಲೆ ಕೆ.ಆರ್‌ ಪೇಟೆಯಲ್ಲಿ ಹೆಲಿಪ್ಯಾಡ್ ಉದ್ಘಾಟನೆ ಮಾಡಲು ಆಗಮಿಸುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಹೇಳಿಕೊಳ್ಳಲು ಸ್ಲಂ ನಿವಾಸಿಗಳು ಮುಂದಾಗಿದ್ದಾರೆ. ಅದಕ್ಕಾಗಿ ಕೆ.ಆರ್‌ ಪೇಟೆ ಪಾದಯಾತ್ರೆ ಆರಂಭಿಸಿದ್ದಾರೆ.

ಮಂಡ್ಯ ಜಿಲ್ಲಾ ಶ್ರಮಿಕನಗರ ನಿವಾಸಿಗಳ ಒಕ್ಕೂಟ, ಕರ್ನಾಟಕ ಜನಶಕ್ತಿ ಹಾಗೂ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಪಾದಯಾತ್ರೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜುರವರು, “ಈ ನಮ್ಮ ತುಂಡು ಭೂಮಿಯನ್ನು ಉಳಿಸಿಕೊಳ್ಳಲು ಕಳೆದ 20 ವರ್ಷಗಳಿಂದ ಹೋರಾಡುತ್ತಿದ್ದೇವೆ. 2007ರಲ್ಲಿಯೇ ಸ್ಲಂ ಎಂದು ಘೋಷಿಸಿದರೂ ಹಕ್ಕುಪತ್ರ ನೀಡದೆ ನಮ್ಮನ್ನು ವಂಚಿಸಲಾಗುತ್ತಿದೆ. ಮಂಡ್ಯದ ಪ್ರತಿ ಸ್ಲಂನಲ್ಲಿಯೂ ಇದೇ ಸಮಸ್ಯೆ ಎದುರಿಸಲಾಗುತ್ತಿದೆ. ಭೂಗಳ್ಳಲು ನೂರಾರು ಎಕರೆ ನುಂಗುತ್ತಿದ್ದಾರೆ. ಆದರೆ ಇಲ್ಲಿ ನಮಗೆ ಅಂಗೈ ಅಗಲ ಜಾಗ ನೀಡುತ್ತಿಲ್ಲ. ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ನಮಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಈಗ ನಮ್ಮ ಭೂಮಿಯನ್ನು ಬೇರೆಯವರು ಕಬಳಿಸಲು ಬರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ಲಂ ಎಂದು ಅಂತಿಮ ಘೋಷಣೆ ಮಾಡದೆ ಅನ್ಯಾಯ ಮಾಡಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಮಂಡ್ಯದ ಎಲ್ಲಾ ಸ್ಲಂ ನಿವಾಸಿಗಳು ಮತ್ತು ಕಾಳಪ್ಪ ಬಡಾವಣೆಯ ನಿವಾಸಿಗಳು ಈಗ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ನೋಡಲು ಕೆ.ಆರ್ ಪೇಟೆಗೆ ಪಾದಯಾತ್ರೆ ಹೊರಡುತ್ತಿದ್ದೇವೆ. ನಮ್ಮ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ. ಒಂದು ವೇಳೆ ನಮಗೆ ಹಕ್ಕುಪತ್ರಗಳು ಸಿಗದಿದ್ದರೆ ಮಂಡ್ಯದ 23 ಸ್ಲಂ ಜನರು ಒಟ್ಟುಗೂಡಿ ಮುಂದಿನ ಎಲ್ಲಾ ಚುನಾವಣೆಗಳನ್ನು ಬಹಿಷ್ಕಾರ ಹಾಕುತ್ತೇವೆ” ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಮಂಡ್ಯ: ನೆತ್ತಿಯ ಮೇಲಿನ ಸೂರಿಗಾಗಿ, ಭೂಮಿಯ ಹಕ್ಕಿಗಾಗಿ ಶ್ರಮಿಕರ ಪಟ್ಟುಬಿಡದ ಹೋರಾಟ

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಕುಮಾರ್ ಸಮತಳರವರು ಮಾತನಾಡಿ, “ಮಂಡ್ಯದ ಸ್ಲಂ ಜನರಿಗೆ ಹಕ್ಕುಪತ್ರ ಸಿಗಬೇಕೆಂದು ಇದುವರೆಗೂ ನೂರಾರು ಬಾರಿ ಮನವಿ ಪತ್ರಗಳನ್ನು ನೀಡಲಾಗಿದೆ. ಆದರೆ ಸರ್ಕಾರ ಸ್ಪಂದಿಸುತ್ತಿಲ್ಲ. ಇದರಿಂದಾಗಿ ಸ್ಲಂ ಜನರು ಮೂಲಭೂತ ಸೌಲಭ್ಯಗಳಿಲ್ಲದೆ ತೊಂದರೆಯಲ್ಲಿದ್ದಾರೆ. ಹಾಗಾಗಿ ರಾಜ್ಯದ ಮುಖ್ಯಮಂತ್ರಿಗಳನ್ನು ನೋಡಲು ಹೊರಟಿದ್ದೇವೆ. ಅವರು ಪತ್ರಿಕೆಗಳಲ್ಲಿ ಜನರಿಗೆ ಮನೆ ನೀಡಿದ್ದೇವೆ ಎಂದು ಪುಟಗಟ್ಟಲೇ ಜಾಹೀರಾತು ನೀಡುತ್ತಿದ್ದಾರೆ. ಆದರೆ ನಮಗೆ ಮನೆ ಇರಲಿ, ಹಕ್ಕುಪತ್ರಗಳೇ ಸಿಕ್ಕಿಲ್ಲ. ಹಾಗಾಗಿ ಮಂಡ್ಯದ ಎಲ್ಲಾ ಸ್ಲಂ ಜನರು ಪಾದಯಾತ್ರೆ ಹೊರಟಿದ್ದೇವೆ” ಎಂದರು.

ಮಂಡ್ಯದಲ್ಲಿ ಕೇವಲ ಆರ್‌ಟಿಓ ಕಾಳಪ್ಪ ಬಡಾವಣೆ ಮಾತ್ರವಲ್ಲದೆ ಕಾಳಿಕಾಂಭ, ನ್ಯೂ ತಮಿಳು ಕಾಲನಿ, ಹಾಲಹಳ್ಳಿ ಸ್ಲಂ ಬೋರ್ಡ್ ಮುಂತಾದ ಬಹುತೇಕ ಶ್ರಮಿಕ ನಗರಗಳಲ್ಲಿ ಜನರನ್ನು ವಂಚಿಸುವ ಕೆಲಸ ನಿರಂತರವಾಗಿ ನಡೆದಿದೆ. ಅಲ್ಲಿನ ಜನರಿಗೂ ಸಹ ಹಕ್ಕುಪತ್ರ, ಮನೆಗಳು ಸಿಕ್ಕಿಲ್ಲ. ಈವರೆಗೂ ಅದನ್ನು ಸರಿಪಡಿಸುವ ಕೆಲಸವನ್ನು ನಗರಸಭಾ ಸದಸ್ಯರಾಗಲೀ ಇನ್ನಿತರ ಜನಪ್ರತಿನಿಧಿಗಳಾಗಲೀ ಮುತುವರ್ಜಿ ವಹಿಸಿ ಮಾಡಿಲ್ಲ. ಈ ಎಲ್ಲಾ ವಿಚಾರಗಳನ್ನು ಸಿಎಂ ಗಮನಕ್ಕೆ ತರಲಾಗುತ್ತದೆ ಎಂದು ಅವರು ತಿಳಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌ | Naanu Gauri

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌

0
ದೇಶದ ತುಂಬ ಹರಡಿರುವ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ ಎಂದು ಸ್ವರಾಜ್ ಪಕ್ಷದ ಮುಖ್ಯಸ್ಥ, ರೈತ ಹೋರಾಟಗಾರ ಯೋಗೇಂದ್ರ ಯಾದವ್‌ ಬುಧವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ. ಅವರು ‘ಕರ್ನಾಟಕದ ಜನ ಯಾಕೆ...