ಪಾಕಿಸ್ತಾನದ ಸಂಸತ್ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಯಾವುದೇ ಪಕ್ಷ ಬಹುಮತ ಪಡೆಯದ ಹಿನ್ನೆಲೆ ಅಂತಂತ್ರ ಸ್ಥಿತಿ ನಿರ್ಮಾಣವಾಗಿದೆ. ಈ ಬೆನ್ನಲ್ಲೇ ವಿವಿಧ ಪಕ್ಷಗಳು ಸರ್ಕಾರ ರಚನೆಯ ಕಸರತ್ತು ಆರಂಭಿಸಿವೆ.
ಮಾಜಿ ಪ್ರಧಾನಿಗಳಾದ ನವಾಝ್ ಶರೀಫ್ ಮತ್ತು ಅವರ ಸಹೋದರ ಶೆಹಬಾಝ್ ಷರೀಫ್ ಅವರ ಪಕ್ಷ, ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಝ್ (ಪಿಎಂಎಲ್-ಎನ್), ಮತ್ತು ಬಿಲಾವಲ್ ಭುಟ್ಟೋ ಜರ್ದಾರಿ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಕೇಂದ್ರ ಮತ್ತು ಪಂಜಾಬ್‌ನಲ್ಲಿ ಸಮ್ಮಿಶ್ರ ಸರ್ಕಾರ ರಚಿಸಲು ಒಪ್ಪಿಕೊಂಡಿವೆ ಎಂದು ಜಿಯೋ ಟಿವಿ ಶನಿವಾರ ವರದಿ ಮಾಡಿದೆ.
ಈ ನಡುವೆ, 2023ರ ಮೇ 9 ರಂದು ಸೇನಾ ನೆಲೆಗಳ ಮೇಲಿನ ದಾಳಿಗೆ ಸಂಬಂಧಿಸಿದ 12 ಪ್ರಕರಣಗಳಲ್ಲಿ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಶನಿವಾರ ಜಾಮೀನು ನೀಡಲಾಗಿದೆ. ಸರ್ಕಾರ ರಚಿಸಲು ನಮ್ಮ ಪಕ್ಷಕ್ಕೆ ಆಹ್ವಾನ ನೀಡಲಾಗಿದೆ ಎಂದು ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ನಾಯಕರು ಹೇಳಿಕೊಂಡಿದ್ದಾರೆ.
ಪಾಕಿಸ್ತಾನ ಸಂಸತ್‌ನ 265 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಸರಳ ಬಹುಮತಕ್ಕೆ ಯಾವುದೇ ಪಕ್ಷಕ್ಕೆ 133 ಸ್ಥಾನಗಳ ಅಗತ್ಯವಿದೆ. ಉಗ್ರರ ದಾಳಿ ಮತ್ತು ಚುನಾವಣಾ ಅಕ್ರಮ ಆರೋಪಗಳ ನಡುವೆ ಪಾಕಿಸ್ತಾನದಲ್ಲಿ ಗುರುವಾರ ಸಂಜೆ 5 ಗಂಟೆಗೆ ಮತದಾನ ಮುಕ್ತಾಯಗೊಂಡಿದೆ. ಸಂಸತ್ತಿನ ಚುನಾವಣೆಯ ನಂತರ, ಹೊಸದಾಗಿ ಆಯ್ಕೆಯಾದ ಸಂಸದರು ಪ್ರಧಾನಿಯನ್ನು ಆಯ್ಕೆ ಮಾಡುತ್ತಾರೆ. ಯಾವುದೇ ಪಕ್ಷವು ಬಹುಮತ ಪಡೆಯದಿದ್ದರೆ, ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಪಡೆದಿರುವ ಪಕ್ಷ ಸಮ್ಮಿಶ್ರ ಸರ್ಕಾರ ರಚಿಸಬಹುದು.
ಸರ್ಕಾರ ರಚಿಸುವ ಸಲುವಾಗಿ ಪಿಪಿಪಿ, ಜೆಯುಐ-ಎಫ್, ಎಂಕ್ಯೂಎಂ, ಪಿಎಂಎಲ್-ಕ್ಯೂ ಮತ್ತು ಐಪಿಪಿ ಪಕ್ಷಗಳೊಂದಿಗೆ ಪಿಡಿಎಂ (ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್‌ಮೆಂಟ್) ಶೈಲಿಯ ಮೈತ್ರಿಕೂಟ ರಚಿಸುವ ಸುಳಿವನ್ನು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಝ್ (ಪಿಎಂಎಲ್-ಎನ್) ನಾಯಕ ನವಾಝ್ ಶರೀಫ್ ನೀಡಿದ್ದಾರೆ. ಆದರೆ, ಸ್ವತಂತ್ರ ಅಭ್ಯರ್ಥಿಗಳ ಕುರಿತು ಅವರು ಏನು ಹೇಳಿಲ್ಲ.
ನಾವು ಸ್ವತಂತ್ರ ಅಭ್ಯರ್ಥಿಗಳನ್ನೂ ಸೇರಿಸಿಕೊಂಡು ಕೇಂದ್ರ ಮತ್ತು ಪಂಜಾಬ್‌ನಲ್ಲಿ ಸರ್ಕಾರ ರಚಿಸುತ್ತೇವೆ ಎಂದು ನವಾಝ್ ಶರೀಫ್ ಅವರ ಸಂಬಂಧಿ ಇಸಾಖ್ ದಾರ್ ಹೇಳಿದ್ದಾಗಿ ಡಾನ್ ವರದಿ ಮಾಡಿದೆ.
ಮತ್ತೊಂದೆಡೆ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಬ್ಯಾರಿಸ್ಟರ್ ಗೋಹರ್ ಅಲಿ ಖಾನ್ ಅವರು ಕೇಂದ್ರದಲ್ಲಿ ನಮಗೆ ಹೆಚ್ಚಿನ ಸ್ಥಾನ ಬಂದಿದೆ. ಅಧ್ಯಕ್ಷ ಆರಿಫ್ ಅಲ್ವಿ ನಮ್ಮ ಪಕ್ಷವನ್ನು ಸರ್ಕಾರ ರಚಿಸಲು ಆಹ್ವಾನಿಸಲಿದ್ದಾರೆ ಎಂದು ಹೇಳಿರುವುದಾಗಿ ಜಿಯೋಟಿವಿ ಉಲ್ಲೇಖಿಸಿದೆ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಶನಿವಾರ “ವಿಜಯ ಭಾಷಣ” ಮಾಡಿದ್ದಾರೆ. ಏಕೆಂದರೆ, ಅವರ ಪಕ್ಷ ಬೆಂಬಲಿಸಿದ್ದ ಸ್ವತಂತ್ರ ಅಭ್ಯರ್ಥಿಗಳು ಚುನಾವಣಾ ಫಲಿತಾಂಶಗಳಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ತಮ್ಮ ಪಕ್ಷವಾದ ಪಿಟಿಐ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಿದ್ದು ಕೇಂದ್ರದಲ್ಲಿ ಸರ್ಕಾರ ರಚಿಸಲು ಪ್ರಯತ್ನಿಸಲಿದೆ ಎಂದು ಖಾನ್ ಅವರ ಹಿರಿಯ ಸಹಾಯಕ ಹೇಳಿರುವುದಾಗಿ ಶನಿವಾರ ರಾಯಿಟರ್ಸ್ ವರದಿ ಮಾಡಿದೆ.
ಅಲ್-ಜಝೀರಾ ವರದಿಯ ಪ್ರಕಾರ, ಚುನಾವಣೆ ನಡೆದಿರುವ 265 ಸ್ಥಾನಗಳ ಪೈಕಿ 10 ಸ್ಥಾನಗಳ ಫಲಿತಾಂಶ ಇನ್ನೂ ಬಂದಿಲ್ಲ. ಮತದಾನ ಮುಗಿದು ಸುಮಾರು 48 ಗಂಟೆಗಳು ಕಳೆದಿವೆ.
ಅಂತಿಮ ಫಲಿತಾಂಶವನ್ನು ಇಂದು ಮಧ್ಯರಾತ್ರಿಯೊಳಗೆ ಪ್ರಕಟಿಸುವಂತೆ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದೆ. ಇಲ್ಲದಿದ್ದರೆ ಫಲಿತಾಂಶ ಬಾಕಿಯಿರುವ ಪ್ರದೇಶಗಳಲ್ಲಿ ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತದೆ ಎಚ್ಚರಿಸಿದೆ.
ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಯ ಕುರಿತು ಕಾಶ್ಮೀರದ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ಅಧ್ಯಕ್ಷ ಗುಲಾಂ ನಬಿ ಆಜಾದ್ ಅವರು ಪ್ರತಿಕ್ರಿಯಿಸಿದ್ದು, “ದೇಶಗಳ ನಡುವಿನ ಉದ್ವಿಗ್ನತೆಗೆ ಪಾಕಿಸ್ತಾನವೇ ಕಾರಣ. ಆದರೆ, ಅಲ್ಲಿನ ನಾಗರಿಕರು ಮುಗ್ಧರು. ನಮ್ಮ ಹಣೆಬರಹದಲ್ಲಿ ಪ್ರಜಾಪ್ರಭುತ್ವವಿತ್ತು. ಅವರ ಹಣೆಬರಹದಲ್ಲಿ ಸರ್ವಾಧಿಕಾರಿಗಳಿದ್ದರು. ಅಲ್ಲಿನ ಸರ್ಕಾರಗಳನ್ನು ಸೇನೆ ನಡೆಸುತ್ತಿದೆ” ಎಂದಿದ್ದಾರೆ.
ಇದನ್ನೂ ಓದಿ : ಲೋಕಸಭೆ ಚುನಾವಣೆ: ಅಸಂವಿಧಾನಿಕ ‘CAA’ ಅಬ್ಬರ


