ಮೇ 9 ಮತ್ತು 10ರ ನಡುವೆ ರಾತ್ರಿ ಭಾರತದ ಜಮ್ಮು ಕಾಶ್ಮೀರದಿಂದ ಗುಜರಾತ್‌ವರೆಗಿನ ವಿಮಾನ ನಿಲ್ದಾಣ, ಸೇನಾ ನೆಲೆಗಳು ಸೇರಿದಂತೆ 26 ಪ್ರಮುಖ ಸ್ಥಳಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿಗಳ ಮೂಲಕ ದಾಳಿ ನಡೆಸಲು ಪಾಕಿಸ್ತಾನ ಯತ್ನಿಸಿದೆ. ಎಲ್ಲಾ ಪ್ರಯತ್ನಗಳನ್ನು ನಮ್ಮ ಸಶಸ್ತ್ರ ಪಡೆಗಳು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಿವೆ ಎಂದು ಭಾರತೀಯ ಸೇನೆ ತಿಳಿಸಿದೆ.
ಇಂದು (ಮೇ.10) ಮತ್ತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಪಾಕಿಸ್ತಾನ ಮೇ.9-10 ನಡುವೆ ರಾತ್ರಿ ಭಾರತದ ಮೇಲೆ ದಾಳಿ ಮಾಡಲು ವಿಫಲ ಯತ್ನ ನಡೆಸಿರುವ ಬಗ್ಗೆ ಮಾಹಿತಿ ಹಂಚಿಕೊಂಡರು.
ಜಮ್ಮು ಕಾಶ್ಮೀರದ ಶ್ರೀನಗರ, ಅವಂತಿಪೊರ ಮತ್ತು ಉಧಮ್‌ಪುರ ವಾಯುನೆಲೆಗಳಲ್ಲಿರುವ ಆಸ್ಪತ್ರೆಗಳು ಮತ್ತು ಶಾಲಾ ಆವರಣಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ದಾಳಿ ನಡೆಸಿದೆ. ಇದು ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವ ಅವರ ಬೇಜವಾಬ್ದಾರಿ ಪ್ರವೃತ್ತಿಯನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ ಎಂದು ಕರ್ನಲ್ ಸೋಫಿಯಾ ಖುರೇಷಿ ಹೇಳಿದರು.
ಬಾರಾಮುಲ್ಲಾ, ಶ್ರೀನಗರ, ಅವಂತಿಪೊರ, ನಗ್ರೋಟಾ, ಜಮ್ಮು, ಫಿರೋಝ್‌ಪುರ, ಪಠಾಣ್‌ಕೋಟ್, ಫಾಝಿಲ್ಕಾ, ಲಾಲಗರ್ ಜಟ್ಟಾ, ಜೈಸಲ್ಮೇರ್, ಬಾರ್ಮರ್, ಭುಜ್, ಕುರ್ಬೆಟ್, ಲಖಿ ನಲಾ ಸೇರಿದಂತೆ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿ ಪಾಕಿಸ್ತಾನ ದಾಳಿ ಮಾಡಿದೆ ಎಂದು ಖುರೇಷಿ ತಿಳಿಸಿದರು.
ಶನಿವಾರ ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಪಾಕಿಸ್ತಾನ ಹಾರಿಸಿದ ಹಲವು ಡ್ರೋನ್‌ಗಳನ್ನು ಪಂಜಾಬ್‌ನ ಅಮೃತಸರ ಬಳಿ ತಡೆ ಹಿಡಿಯಲಾಗಿದೆ. ಈ ಮೂಲಕ ದಾಳಿ ಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಹೇಳಿದರು.
ಪ್ರಮುಖವಾಗಿ ಭಾರತೀಯ ವಾಯುನೆಲೆಗಳನ್ನು ಪಾಕಿಸ್ತಾನ ಗುರಿಯಾಗಿಸಿಕೊಂಡಿತ್ತು. ಆದರೆ ಸೀಮಿತ ಹಾನಿ ಮಾತ್ರ ಸಂಭವಿಸಿದೆ. ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಭಾರೀ ಗುಂಡಿನ ದಾಳಿ ನಡೆದ ಬಗ್ಗೆ ವರದಿಯಾಗಿದೆ. ಇದು ಈ ಪ್ರದೇಶದಲ್ಲಿ ಹೆಚ್ಚಿದ ಉದ್ವಿಗ್ನತೆಯನ್ನು ಸೂಚಿಸುತ್ತದೆ. ಜನವಸತಿ ಪ್ರದೇಶಗಳು ಮತ್ತು ಮಿಲಿಟರಿ ಮೂಲಸೌಕರ್ಯಗಳನ್ನು ಗುರಿಯಾಗಿಸಲು ಪಾಕಿಸ್ತಾನ ಡ್ರೋನ್‌ಗಳು, ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳು ಮತ್ತು ಯುದ್ಧ ವಿಮಾನಗಳನ್ನು ಬಳಸಿದೆ ಎಂದು ಖುರೇಷಿ ತಿಳಿಸಿದರು.
ಉಧಮ್‌ಪುರ, ಪಠಾಣ್‌ಕೋಟ್, ಆದಮ್‌ಪುರ, ಭುಜ್‌ನಲ್ಲಿ ಭಾರತೀಯ ವಾಯುನೆಲೆಗಳನ್ನು ಗುರಿಯಾಗಿಸಿ ಪಾಕಿಸ್ತಾನ ದಾಳಿ ನಡೆಸಿದೆ ಎಂದು ವಿವರಿಸಿದರು.
ಪಾಕಿಸ್ತಾನದ ದಾಳಿಗೆ ಭಾರತೀಯ ಪಡೆಗಳು ಪ್ರತಿದಾಳಿ ನಡೆಸಿವೆ. ಆದರೂ, ಉಧಮ್‌ಪುರ, ಪಠಾಣ್‌ಕೋಟ್, ಆದಮ್‌ಪುರ, ಭುಜ್ ಮತ್ತು ಬಟಿಂಡಾದಲ್ಲಿನ ವಾಯುನೆಲೆಗಳು ಹಾನಿಗೊಳಗಾಗಿವೆ ಮತ್ತು ಅಲ್ಲಿನ ಸಿಬ್ಬಂದಿ ಗಾಯಗೊಂಡಿದ್ದಾರೆ. ಪಂಜಾಬ್‌ನ ವಾಯುನೆಲೆಯನ್ನು ಗುರಿಯಾಗಿಸಿ ಪಾಕಿಸ್ತಾನ ಬೆಳಗಿನ ಜಾವ 1:40ಕ್ಕೆ ಅತಿ ವೇಗದ ಕ್ಷಿಪಣಿಯನ್ನು ಉಡಾಯಿಸಿತ್ತು. ಶ್ರೀನಗರ, ಅವಂತಿಪೊರ ಮತ್ತು ಉಧಮ್‌ಪುರದಲ್ಲಿನ ವಾಯುನೆಲೆಗಳಲ್ಲಿನ ಆಸ್ಪತ್ರೆಗಳು ಮತ್ತು ಶಾಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಪಾಕಿಸ್ತಾನದ ಈ ಕ್ರಮವನ್ನು ಬಲವಾಗಿ ಖಂಡಿಸುತ್ತೇವೆ ಎಂದು ಸೋಫಿಯಾ ಖುರೇಷಿ ಹೇಳಿದರು.
ಪಾಕಿಸ್ತಾನದ ಕ್ರಮಗಳಿಗೆ ಸೂಕ್ತ ಪ್ರತ್ಯುತ್ತರವಾಗಿ ಭಾರತವು ಅಲ್ಲಿನ ಸುಮಾರು ಆರು ವಾಯುನೆಲೆಗಳ ಮೇಲೆ ದಾಳಿ ನಡೆಸಿದೆ. ಮುರಿಯದ್ ವಾಯುನೆಲೆ, ರಫೀಕಿ ವಾಯುನೆಲೆ, ನೂರ್ ಖಾನ್ (ಚಕ್ಲಾಲಾ) ವಾಯುನೆಲೆ, ರಹಿಮ್ಯಾರ್, ಸುಕ್ಕೂರ್ (ಭೋಲಾರಿ) ಮತ್ತು ಚುನಿಯನ್ ವಾಯುನೆಲೆಗಳನ್ನು ಭಾರತ ಗುರಿಯಾಗಿಸಿದೆ ಎಂದು ಖುರೇಷಿ ತಿಳಿಸಿದರು.


