ಭಾರತದ ಚಲನಚಿತ್ರ ನಿರ್ಮಾಪಕಿ ಪಾಯಲ್ ಕಪಾಡಿಯಾ ಅವರ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಸಿನಿಮಾಗೆ 2024ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ‘ಗ್ರ್ಯಾಂಡ್ ಪ್ರಿಕ್ಸ್’ ಪ್ರಶಸ್ತಿ ದೊರೆತಿದೆ. ಕಳೆದ 30 ವರ್ಷಗಳಲ್ಲಿ ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಸಿನಿಮಾವಾಗಿ ಇತಿಹಾಸ ಬರೆದಿದೆ.
ಪಾಯಲ್ ಅವರ ಈ ಐತಿಹಾಸಿಕ ಗೆಲುವು, ಅವರ ವೈಯುಕ್ತಿವಲ್ಲ. ಈ ಗೆಲುವು ‘ಮುಕ್ತ ಅಭಿವ್ಯಕ್ತಿ’ಯ ಮಹತ್ವವನ್ನು ಸಾರಿದೆ. ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್‌ಟಿಐಐ) ಯ ಹಳೆಯ ವಿದ್ಯಾರ್ಥಿಯಾಗಿರುವ ಪಾಯಲ್ ಅವರು, ಈ ಹಿಂದೆ ಅಶಿಸ್ತಿನ ಆರೋಪದ ಮೇಲೆ ಸಂಸ್ಥೆಯಿಂದ ದಂಡನಾತ್ಮಕ ಕ್ರಮಗಳನ್ನು ಎದುರಿಸಿದ್ದರು. ಆದರೆ, ಈಗ ಪಾಯಲ್ ಅವರಿಂದಲೇ ಸಂಸ್ಥೆ ಹೆಮ್ಮೆ ಪಡುವಂತೆ ಆಗಿದೆ.
2015ರಲ್ಲಿ ನಟ ಗಜೇಂದ್ರ ಚೌಹಾಣ್ ಅವರನ್ನು ಎಫ್‌ಟಿಐಐ ಅಧ್ಯಕ್ಷರನ್ನಾಗಿ ನೇಮಿಸುವುದನ್ನು ವಿರೋಧಿಸಿದ ವಿದ್ಯಾರ್ಥಿಗಳಲ್ಲಿ ಪಾಯಲ್ ಕೂಡ ಒಬ್ಬರು. ಹಿಂದಿ ಚಲನಚಿತ್ರೋದ್ಯಮದ ನಟ ಮತ್ತು ಭಾರತೀಯ ಜನತಾ ಪಕ್ಷದ ಸದಸ್ಯರಾದ ಚೌಹಾಣ್ ಅವರು, ಭಾರತೀಯ ಚಿತ್ರರಂಗಕ್ಕೆ ಪ್ರಸಿದ್ಧ ನಿರ್ದೇಶಕರು, ನಟರು ಮತ್ತು ತಂತ್ರಜ್ಞರನ್ನು ಸಮರ್ಪಿಸಿದ ಮಹತ್ವದ ಸಂಸ್ಥೆ ಎಫ್‌ಟಿಐಐಯನ್ನು ಮುನ್ನಡೆಸುವ ಅರ್ಹತೆಗಳನ್ನು ಹೊಂದಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಭಟಿಸಿದ್ದರು.
India is proud of Payal Kapadia for her historic feat of winning the Grand Prix at the 77th Cannes Film Festival for her work ‘All We Imagine as Light’. An alumnus of FTII, her remarkable talent continues to shine on the global stage, giving a glimpse of the rich creativity in… pic.twitter.com/aMJbsbmNoE
— Narendra Modi (@narendramodi) May 26, 2024
ವಿದ್ಯಾರ್ಥಿಗಳ ಗುಂಪು 2015 ರಲ್ಲಿ ಜೂನ್ ಮತ್ತು ಅಕ್ಟೋಬರ್ ನಡುವೆ 139 ದಿನಗಳ ಕಾಲ ಪ್ರತಿಭಟನೆ ನಡೆಸಿತ್ತು. ಪ್ರತಿಭಟನಾ ನಿರತರು ಆಗಿನ ಎಫ್‌ಟಿಐಐ ನಿರ್ದೇಶಕ ಪ್ರಶಾಂತ್ ಪತ್ರಾಭೆ ಅವರ ಕಚೇರಿಗೆ ಮುತ್ತಿಗೆ ಕೂಡ ಹಾಕಿದ್ದರು. ಈ ಸಂಬಂಧ ಪುಣೆ ಪೊಲೀಸರು ಅನೇಕ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಿದ್ದರು. ಎಫ್‌ಟಿಐಐ ಆಡಳಿತವು ಕಪಾಡಿಯಾ ಸೇರಿದಂತೆ ಎಂಟು ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡಿತ್ತು. ಅವರ ವಿದ್ಯಾರ್ಥಿವೇತನವನ್ನು ಕಡಿತಗೊಳಿಸಿತ್ತು ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಲು ಸಹಾಯ ಮಾಡುವ ವಿದೇಶಿ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಅವರನ್ನು ನಿಷೇಧಿಸಿತ್ತು.
2017 ಕಿರುಚಿತ್ರ ‘ಆಫ್ಟರ್‌ನೂನ್ ಕ್ಲೌಡ್ಸ್’ ಕೇನ್ಸ್‌ನ ಸಿನೆಫೋಂಡೇಶನ್ ವಿಭಾಗಕ್ಕೆ ಆಯ್ಕೆಯಾಗುವ ಮೂಲಕ ಕಪಾಡಿಯ ಅವರು ಜಾಗತಿಕ ಚಲನಚಿತ್ರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಎಫ್‌ಟಿಐಐನ ಮೂರನೇ ವರ್ಷದ ವಿದ್ಯಾರ್ಥಿನಿಯಾಗಿದ್ದ ಕಪಾಡಿಯ ಅವರಿಗೆ ಕೇನ್ಸ್ ಪ್ರಯಾಣವನ್ನು ಪ್ರಾಯೋಜಿಸಿತ್ತು. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, “ಕಪಾಡಿಯಾ ತನ್ನ ನಡವಳಿಕೆಯಲ್ಲಿ ಶಿಸ್ತುಬದ್ಧವಾಗಿರುವುದನ್ನು ಗಮನಿಸಿದ” ಎಫ್‌ಟಿಐಐ ಈ ನಿರ್ಧಾರವನ್ನು ತೆಗೆದುಕೊಂಡಿತ್ತು.
ಆ ಬಳಿಕ ಕಪಾಡಿಯ ಯಶಸ್ಸಿನ ಮೆಟ್ಟಿಲೇರಲು ಪ್ರಾರಂಭಿಸಿದರು. 2019 ರಲ್ಲಿ, ಅವರು ‘ಎ ನೈಟ್ ಆಫ್ ನೋಯಿಂಗ್ ನಥಿಂಗ್’ ಎಂಬ ಸಾಕ್ಷ್ಯಚಿತ್ರವನ್ನು ಪೂರ್ಣಗೊಳಿಸಿದರು. ಇದು 2021ರ ಕೇನ್ಸ್ ಚಲನಚಿತ್ರೋತ್ಸವದ ಡೈರೆಕ್ಟರ್ಸ್ ಫೋರ್ಟ್‌ನೈಟ್ ಸೈಡ್-ಬಾರ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿತ್ತು. ಅಲ್ಲಿ ‘ಗೋಲ್ಡನ್ ಐ’ ಪ್ರಶಸ್ತಿ ಗೆದ್ದುಕೊಂಡಿತ್ತು.
ಎಫ್‌ಟಿಐಐನ ಇತರ ಪ್ರತಿಭೆಗಳೂ ಅ ವರ್ಷ ಕೇನ್ಸ್‌ನಲ್ಲಿ ಮಿಂಚಿದ್ದರು. ವಿದ್ಯಾರ್ಥಿ ಚಲನಚಿತ್ರ ವಿಭಾಗದಲ್ಲಿ ಎಫ್‌ಟಿಐಐ ವಿದ್ಯಾರ್ಥಿ ಚಿದಾನಂದ್ ಎಸ್ ನಾಯಕ್ ಅವರ ‘ಸನ್ ಫ್ಲವರ್ಸ್ ವೇರ್ ಫಸ್ಟ್ ಒನ್ಸ್ ಟು ನೋ’ ಮತ್ತು ಮೈಸಮ್ ಅಲಿಯ ‘ರಿಟ್ರೀಟ್’ ಪ್ರಶಸ್ತಿ ಪಡೆದಿತ್ತು. (ಅಲಿ ಕಪಾಡಿಯಾ ಅವರ ಬ್ಯಾಚ್ ಮೇಟ್ ಆಗಿದ್ದರು) ಎಫ್‌ಟಿಐಐನ ಹಳೆ ವಿದ್ಯಾರ್ಥಿ ಸಂತೋಷ್ ಶಿವನ್ ಅವರು ‘ಪಿಯರೆ ಆಂಜೆನಿಯಕ್ಸ್ ಟ್ರಿಬ್ಯೂಟ್’ನೊಂದಿಗೆ ಸಿನಿಮಾಟೋಗ್ರಫಿಗೆ ನೀಡಿದ ಕೊಡುಗೆಗಳಿಗಾಗಿ ಗೌರವಿಸಲ್ಪಟ್ಟಿದ್ದರು.
It is a moment of pride for FTII as its Alumni create history at Cannes.
As we witness a phenomenal year for Indian Cinema at 77th Cannes Film Festival, FTII cherishes the glorious achievements of its Alumni at this Mega International Stage of Cinema.#cannes2024 #cannesawards pic.twitter.com/3fFURhzuSK
— FTII (@FTIIOfficial) May 26, 2024
ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್ ಹಿಂದುತ್ವವಾದಿಗಳ ಪ್ರಮುಖ ಗುರಿಯಾಗಿದೆ. ಜನವರಿಯಲ್ಲಿ, ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ವೇಳೆ ಹಿಂದುತ್ವ ಬೆಂಬಲಿಗರು ಕ್ಯಾಂಪಸ್‌ಗೆ ನುಗ್ಗಿ 1992 ರ ಬಾಬ್ರಿ ಮಸೀದಿ ಧ್ವಂಸವನ್ನು ನೆನಪಿಸುವ ಪೋಸ್ಟರ್ ಅನ್ನು ಹರಿದು ಹಾಕಿದ್ದರು. ಆಗ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಪೋಸ್ಟರ್ ಅಂಟಿಸಿದ್ದ ಏಳು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಪಾಯಲ್ ಅವರ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಸಿನಿಮಾ. ಪ್ರಭಾ ಎಂಬ ನರ್ಸ್ ಕಥೆಯನ್ನು ಒಳಗೊಂಡಿದೆ. ಭಾವನೆಗಳ ಸುತ್ತ ಕಥೆ ಸಾಗುತ್ತದೆ. ಪ್ರತಿಭಟಿಸಿದ ಕಾರಣಕ್ಕೆ ಸಂಸ್ಥೆಯ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದ ಪಾಯಲ್, ತನ್ನ ಪ್ರತಿಭೆಯ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ.
ವಿದ್ಯಾರ್ಥಿಗಳು ಅನ್ಯಾಯ ಖಂಡಿಸಿ ಪ್ರತಿಭಟಿಸುವಾಗ, ಅವರ ಅಭಿವ್ಯಕ್ತಿಯ ಹಕ್ಕನ್ನು ಮೊಟಕುಗೊಳಿಸಿ ದೇಶದ್ರೋಹಿಯ ಪಟ್ಟ ಕಟ್ಟಿದ ಮತ್ತು ಕಟ್ಟುತ್ತಿರುವ, ಎಫ್‌ಟಿಐಐ ದೇಶದ್ರೋಹಿಗಳ ತಾಣವಾಗುತ್ತಿದೆ ಎಂದು ನರೇಟಿವ್ ತೇಲಿ ಬಿಡುವ ಶಕ್ತಿಗಳಿಗೆ ಪಾಯಲ್ ಗೆಲುವು ಉತ್ತರ ಕೊಟ್ಟಿದೆ.
ಭಾರತದ ಪ್ರಖ್ಯಾತ ಚಲನಚಿತ್ರ ಶಾಲೆಯು ಕಠಿಣ ತರಬೇತಿ ಪಡೆದ ಮುಕ್ತ ಮನಸ್ಸಿನ ಮತ್ತು ಸಾಹಸಮಯ ಚಲನಚಿತ್ರ ನಿರ್ಮಾಪಕರ ಖ್ಯಾತಿಯನ್ನು ಉಳಿಸಿಕೊಂಡಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ತಮ್ಮ ಸಾಂವಿಧಾನಿಕ ಅಭಿವ್ಯಕ್ತಿಯನ್ನು ಎತ್ತಿ ಹಿಡಿದರೆ ದೇಶದ್ರೋಹಿಯ ಪಟ್ಟ ಕಟ್ಟುವ ಸಂದಿಗ್ಧ ಪರಿಸ್ಥಿತಿಯಲ್ಲಿ, ಇಲ್ಲ ತಮ್ಮ ಮುಕ್ತ ಅಭಿವ್ಯಕ್ತಿಯ ಮೂಲಕವೇ ಅವರು ದೇಶಕ್ಕೆ ಕೀರ್ತಿ ತರಬಲ್ಲರು ಮತ್ತು ಎಫಟಿಐಐನಂತಹ ಸಂಸ್ಥೆಗಳಲ್ಲಿ ಮುಕ್ತ ಅಭಿವ್ಯಕ್ತಿ ಎಷ್ಟು ಮುಖ್ಯ ಎಂಬುವುದನ್ನು ಪಾಯಲ್ ಗೆಲುವು ಸಾರಿ ಹೇಳಿದೆ.
ಇದನ್ನೂ ಓದಿ : ಕಾನ್ ಚಿತ್ರೋತ್ಸವ: ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ಗಾಗಿ ಪ್ರಶಸ್ತಿ ಪಡೆದ ನಿರ್ಮಾಪಕಿ ಪಾಯಲ್ ಕಪಾಡಿಯಾ


