ಪೆಗಾಸಸ್ ಗೂಢಚರ್ಯೆ ಬಗ್ಗೆ ಒಕ್ಕೂಟ ಸರ್ಕಾರ ಉತ್ತರ ನೀಡಬೇಕೆಂದು ಆಗ್ರಹಿಸಿ ಪ್ರತಿಪಕ್ಷಗಳು ಸಂಸತ್ ಕಲಾಪಕ್ಕೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸುತ್ತಿವೆ. ಹೀಗಿರುವಾಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪೆಗಾಸಸ್ ವಿವಾದವು ಸಮಸ್ಯೆಯಲ್ಲ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.
ಪೆಗಾಸಸ್ ಸ್ಪೈವೇರ್ ಹಗರಣವು ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಜುಲೈ 19 ರಂದು ಆರಂಭವಾದ ಮುಂಗಾರು ಅಧಿವೇಶನದಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಕೋಲಾಹಲಕ್ಕೆ ಕಾರಣವಾಗಿದೆ. ಐಟಿ ಸಚಿವ ಅಶ್ವಿನಿ ವೈಷ್ಣವ್ ಉಭಯ ಸದನಗಳಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಆದರೆ, ಅವರ ಉತ್ತರದಿಂದ ಸಮಾಧಾನಗೊಳ್ಳದ ವಿರೋಧ ಪಕ್ಷಗಳು ನಿರ್ದಿಷ್ಟ ಉತ್ತರಗಳನ್ನು ಕೋರುತ್ತಿದ್ದಾರೆ.
ಗದ್ದಲ ಮತ್ತು ಪ್ರತಿಭಟನೆಯಿಂದಾಗಿ ಲೋಕಸಭೆಯ ಇಂದಿನ ದಿನದ ಕಲಾಪವನ್ನು ಮುಂದೂಡಲಾಯಿತು, ಪ್ರಶ್ನೋತ್ತರ ಸಮಯದಲ್ಲಿ ಮಾತನಾಡುವಾಗ ಸದನವನ್ನು ನಡೆಸಲು ಅವಕಾಶ ನೀಡುವಂತೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಪ್ರತಿಭಟನಾ ನಿರತ ಸದಸ್ಯರನ್ನು ಒತ್ತಾಯಿಸಿದ್ದರು.
ಇದನ್ನೂ ಓದಿ: ಪೆಗಾಸಸ್: ಐಟಿ ಮತ್ತು ಗೃಹ ಸಚಿವಾಲಯದ ಅಧಿಕಾರಿಗಳನ್ನು ಪ್ರಶ್ನಿಸಲಿರುವ ಶಶಿ ತರೂರ್ ನೇತೃತ್ವದ ಸ್ಥಾಯಿ ಸಮಿತಿ
“ಭಾರತದ ಜನರಿಗೆ ನೇರವಾಗಿ ಸಂಬಂಧಿಸಿದ ಹಲವು ಸಮಸ್ಯೆಗಳಿವೆ. ಅವುಗಳ ಕುರಿತು ಸರ್ಕಾರವು ಚರ್ಚೆಗೆ ಸಿದ್ಧವಾಗಿದೆ” ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಇನ್ನು, ಪೆಗಾಸಸ್ ಗೂಢಚಾರ ತಂತ್ರಾಂಶ ಬಳಸಿ ರಾಜಕಾರಣಿಗಳು, ಪತ್ರಕರ್ತರು ಮತ್ತು ಇತರರ ಫೋನ್ ಟ್ಯಾಪಿಂಗ್ ಸಂಬಂಧಿಸಿದ ಆರೋಪಗಳ ಬಗ್ಗೆ ಮಾಹಿತಿ ತಂತ್ರಜ್ಞಾನದ ಸಂಸದೀಯ ಸಮಿತಿಯು ಸರ್ಕಾರಿ ಅಧಿಕಾರಿಗಳನ್ನು ಪ್ರಶ್ನಿಸಲಿದೆ ಎಂದು ಸಮಿತಿಯ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಖಂಡ ಶಶಿ ತರೂರ್ ಹೇಳಿದ್ದಾರೆ.
ಪೆಗಾಸಸ್ ಪಟ್ಟಿಯಲ್ಲಿ ರಾಹುಲ್ ಗಾಂಧಿ, ಇಬ್ಬರು ಒಕ್ಕೂಟ ಸರ್ಕಾರದ ಸಚಿವರಾದ ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ರೈಲ್ವೆ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್, ಮಾಜಿ ಸಿಬಿಐ ಮುಖ್ಯಸ್ಥ, ಉದ್ಯಮಿ ಅನಿಲ್ ಅಂಬಾನಿ ಮತ್ತು ಕನಿಷ್ಠ 40 ಪತ್ರಕರ್ತರು ಸೇರಿದಂತೆ ಪ್ರತಿಪಕ್ಷ ನಾಯಕರು ಇದ್ದಾರೆ.
ಇದನ್ನೂ ಓದಿ: ಪೆಗಾಸಸ್ ಹಗರಣ: ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಸುಪ್ರೀಂ ಮೆಟ್ಟಿಲೇರಿದ ಹಿರಿಯ ಪತ್ರಕರ್ತರು



‘ಪೆಗಾಸಿಸ್ ಗೂಢಚರ್ಯೆ ಸಮಸ್ಯೆ ಅಲ್ಲ’ ಎಂದ ಪ್ರಹ್ಲಾದ ಜೋಶಿಯವರ ಮಾತಿನ ಅರ್ಥ ಏನು? ಗೂಢಚರ್ಯೆ ಅಲ್ಲದಿದ್ದರೆ, ಒಳಗಿನವರ ಕರಾಮತ್ತು ಎಂದು ಒಪ್ಪಿಕೊಂಡಂತೆ ಅಲ್ಲವೇ? ಮತ್ತು, ಈ ಕರಾಮತ್ತಿಗೆ ಸರ್ಕಾರದ ಒಪ್ಪಿಗೆ ಇರಬೇಕು ಅಲ್ಲವೇ? ಅಂದರೆ, ಏನೋ ಮುಚ್ಚಿಡುವ ಪ್ರಯತ್ನ ಮಾಡುತ್ತಿರುವಿರಲ್ಲವೇ?