Homeಕರ್ನಾಟಕಬರಿದೇ ಬಾರಿಸದಿರು ತಂಬೂರಿ

ಬರಿದೇ ಬಾರಿಸದಿರು ತಂಬೂರಿ

- Advertisement -
- Advertisement -

‘ಪ್ರಜಾವಾಣಿ ಚರ್ಚೆ’ ಅಂಕಣ (ಪ್ರವಾ ಡಿಸೆಂಬರ್ 4, 2021: https://www.prajavani.net/op-ed/discussion/standup-comedy-munawar-faruqui-kunal-kamra-shows-cancelled-freedom-of-expression-prakash-belavadi-889556.html), ಇಲ್ಲಿ ಪ್ರಕಾಶ್ ಬೆಳವಾಡಿ ಅವರು ಬರೆದಿರುವ ಲೇಖನದಲ್ಲಿ ಮೂಲಭೂತವಾದ ಕುತರ್ಕ-ಅಪತರ್ಕವಿದೆ.  

2014ರಂದು ಮೈಸೂರಿನಲ್ಲಿ ನಡೆದ ಸಭೆಯೊಂದರಲ್ಲಿ, ನಟ ಮಾಸ್ಟರ್ ಹಿರಣ್ಣಯ್ಯನವರು ಸೋನಿಯಾ ಗಾಂಧಿ ಮತ್ತು ಅಂದಿನ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಗಳನ್ನು ಕುರಿತು ಅವಹೇಳನಕಾರಿಯಾದ ಕೆಲವು ಮಾತಾಡಿದರು; ಹಾಗೆ ಮಾಡುವಾಗ ತಾನು ಎಂಥ ಮಾತು ಆಡುತ್ತಿದ್ದೇನೆ (ಅರ್ಥಾತ್ ತನ್ನ ಮಾತಿನ ವೈಖರಿ ಎಂಥದು) ಅನ್ನುವುದರ ಅರಿವು ಅವರಿಗಿಲ್ಲವಾಗಿತ್ತು; ಸಭೆ ಮುಗಿದು, ಹಿರಣ್ಣಯ್ಯನವರು ಅಲ್ಲಿಂದ ತೆರೆಳಿಮೇಲೆ, ಅವರ ಮಾತಿನಿಂದ ರೊಚ್ಚಿಗೆದ್ದ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಆ ಕಲಾಪ ನಡೆದ ಸ್ಥಳಕ್ಕೆ ಹೋಗಿ ದಾಂಧಲೆ ಎಬ್ಬಿಸಿದರು ಎಂದು ಬೆಳವಾಡಿಯವರು ಹೇಳುತ್ತಾರೆ.

ಆವತ್ತು ಆ ಕಾಂಗ್ರೆಸ್‍ ಕಾರ್ಯಕರ್ತರು ಅಲ್ಲಿ ನಡೆಸಿದ್ದು ಪುಂಡಾಟಿಕೆಯೇ ಹೌದು ಅನ್ನುವುದನ್ನು ನಾನೂ ಒಪ್ಪುತ್ತೇನೆ. ಆದರೆ ಅದು ಪುಂಡಾಟಿಕೆ ಅಷ್ಟೇ ಆಗಿತ್ತು, ಅರ್ಥಾತ್, ಆ ದಾಂಧಲೆ ಶುದ್ಧಾಂಗವಾಗಿ ಕಾನೂನು ಮತ್ತು ಸಾಮಾಜಿಕ ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆ ಆಗಿತ್ತು ಅನ್ನುವುದು ನನ್ನ ಅಭಿಪ್ರಾಯ. ಯಾಕೆಂದರೆ ಆ ರಂಪಾಟ ಅಂಕೆಯಿಲ್ಲದ  ಕೆಲವು ಪುಂಡರಿಂದ ಆಯಿತು ಅನ್ನುವುದು ಬೆಳವಾಡಿ ಅವರ ಲೇಖನದಿಂದಲೇ ಸ್ಪಷ್ಟವಾಗುತ್ತದೆ.

ಹಿರಣ್ಣಯ್ಯನವರ ಭಾಷಣದ ವಿಷಯದಲ್ಲಿ ನಡೆದ ಆ ಪುಂಡಾಟಿಕೆ ಒಂದು ಬಿಡಿ-ಅಲಾಯಿದವಾದ ಪ್ರಕರಣ. ಅಂಥವು ನಮ್ಮಲ್ಲಿ ಆಗುತ್ತಿರುತ್ತವೆ, ನಿಜವೇ. ಆದರೆ ಅಂಥ ಪ್ರಕರಣಗಳ ಹಿಂದೆ ಮಹಾಯೋಜನೆಯೊಂದು ಇರುವುದಿಲ್ಲ. ಅವುಗಳಿಗೆ, ಬಹುತೇಕ, ಸರಕಾರ ಮತ್ತು ಸರಕಾರವು ಪೋಷಿಸುವ ಹಲವು ಅಧಿಕೃತ, ಅನಧಿಕೃತ ಶಕ್ತಿ ಮತ್ತು ಸಂಘಟನೆಗಳ ಕುಮ್ಮಕ್ಕಿರುವುದಿಲ್ಲ. ಆದರೂ ಅಂಥ ಯಾವುದೇ ದಾಂಧಲೆಯು ಅಕ್ಷಮ್ಯವಾದದ್ದೇ ಸರಿ. ಅಂಥದನ್ನು ಮಾಡಿದವರ ಮೇಲೆ, ಮಾಡಿಸಿದವರ ಮೇಲೆ ಬಿಗಿಯಾದ ಕಾನೂನು ಪಾಲನೆಯ ಕ್ರಮವಾಗಬೇಕು ಅನ್ನುವುದರಲ್ಲಿ ಎರಡು ಮಾತಿಲ್ಲ.

ಆದರೆ ಮುನವ್ವರ್ ಫಾರೂಕಿಯವರೂ ಸೇರಿದಂತೆ ಅನೇಕಾನೇಕ ವ್ಯಕ್ತಿಗಳ ಮೇಲೆಯಲ್ಲದೆ, ಅನೇಕ ಸಂಘಟನೆಗಳು, ಜನಸಮುದಾಯಗಳು ಮತ್ತು ಸಮೂಹಗಳ ಮೇಲೆ ಈಗ್ಗೆ ಹಲವು ವರ್ಷಗಳಿಂದ ಆಗುತ್ತ ಬಂದಿರುವ ಹಲವು ಬಗೆಯ, ಹಲವು ಸ್ತರದ ದಾಳಿಗಳು ಕೇವಲ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳಲ್ಲ. ಇಂಥವೆಲ್ಲವೂ ದೇಶದಾದ್ಯಂತ, ಹತ್ತಾರು ಕೋಟಿ ಜನರ ಮನಸ್ಸಿನಲ್ಲಿ, ಅವರ ದಿನದಿನದ ನಡೆವಳಿಕೆಯಲ್ಲಿ ವ್ಯವಸ್ಥಿತವಾಗಿ ಬಿತ್ತಲಾಗಿರುವ ವಿಷಬೀಜವೊಂದರ ವೃಕ್ಷಗಳು. ಸ್ಪಷ್ಟವಾಗಿ, ಆ ವಿಷಬೀಜವೆಂದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು, ಬಿಜೆಪಿಯೂ ಸೇರಿದಂತೆ, ಅದರ ಪರಿವಾರ; ಹಾಗೂ ಆ ಪರಿವಾರದ ಸಿದ್ಧಾಂತ, ವಿಚಾರ ಹಾಗೂ ಕಾರ್ಯಪರಂಪರೆ. ಆ ವಿಚಾರ ಮತ್ತು ಕಾರ್ಯಪರಂಪರೆಯು  ಸಾಕಿಕೊಂಡಿರುವ, ಹಾಗೂ ಹುಟ್ಟುಹಾಕಿ ಬೆಳಸುತ್ತಿರುವ, ಹಲವು ಬಗೆಯ ಸಂಪರ್ಕ ಮತ್ತು ಸಮೂಹ ಮಾಧ್ಯಮಗಳು ಈ ವಿಷಕೃಷಿಯ ಮಾಲಿಗಳು, ಸೇರೆಗಾರರು. ಆ ಎಲ್ಲವುದರಿಂದಾಗಿ ಆಗುತ್ತ ಬಂದಿರುವ ಗುಂಪು ಕೊಲೆಗಳು, ಹಾದಿಬೀದಿಯಲ್ಲಿ ಹಾಡುಹಗಲೇ ನಡೆಯುವ ಹಿಂಸಾಚಾರಗಳು, ‘ಗೋಲಿ ಮಾರೋ ಸಾಲೋಂ ಕೋ’ ಎಂಬಂಥ  ಕೊಲೆಬೆದರಿಕೆಯ ಕರೆ, ಹಾಗೂ ಅಂಥರ ಪರಿಣಾಮವಾದ ಕಗ್ಗೊಲೆಗಳು, ಹಿರಣ್ಣಯ್ಯನವರ ಮಾತಿನ ವಿಷಯದಲ್ಲಿ ನಡೆದ ದಾಂಧಲೆಯಂತೆ, ಬಿಡಿ-ಅಲಾಯಿದವಾದ ಪ್ರಕರಣಗಳಲ್ಲ. ಇವು ಸುಮಾರು ನೂರು ವರ್ಷಗಳಿಂದ ರೂಪುಗೊಂಡು, ಕಾರ್ಯರೂಪಕ್ಕೆ ಬರುತ್ತಿರುವ ಮಹಾವ್ಯೂಹ, ಮಹಾಯೋಜನೆಯೊಂದರ ಫಲಗಳು. ಈ ಎಲ್ಲವೂ ಒಂದೇ ವಿಷ-ವಟವೃಕ್ಷದ ಫಲ; ಮಹಾ ಬಲೆಯೊಂದರ ಕಣ್ಣುಗಳಂತೆ ಒಂದೇ ನೇಯ್ಗೆಯ ಕುಶಲಕರ್ಮ ಇವು; ಸಾರಾಂಶದಲ್ಲಿ, ಫ್ಯಾಸಿಸ್ಟ್ ಶಕ್ತಿ ಮತ್ತು ಸಿದ್ಧಾಂತದ ಸಂತಾನ. 

ಮಾಸ್ಟರ್ ಹಿರಣ್ಣಯ್ಯ

ಬೆಳವಾಡಿಯವರ ಅಪತರ್ಕವೋ, ಕುತರ್ಕವೋ ಇರುವುದು ಇಲ್ಲಿ: ಕೇವಲ ಬಿಡಿ-ಆಲಾಯಿದವಾದ ಪುಂಡಾಟಿಕೆಯನ್ನು ಮತ್ತು ಅಪ್ಪಟ ಫ್ಯಾಸಿಸ್ಟ್ ಸಿದ್ಧಾಂತವೊಂದರ ಅತ್ಯಂತ ವ್ಯವಸ್ಥಿತ, ಮತ್ತು ಸರಕಾರೀ ಕೃಪಾಪೋಷಿತವಾದ, ಕಾಯಕ ಪರಂಪರೆಯನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದರಲ್ಲಿ. ತಕ್ಕಡಿಯ ಆ ತೂಗಿನಲ್ಲಿ, ‘ನೋಡಿ, ನನ್ನಲ್ಲಿ  ಪಕ್ಷಪಾತವಿಲ್ಲ,  ನನ್ನದು ತೆರೆದ ಮನಸ್ಸು’ ಎಂಬ ಸೋಗಿದೆ. ಇನ್ನು, ಅವರು ಸಿದ್ದರಾಮಯ್ಯನವರ ಟ್ವೀಟನ್ನು ಉಲ್ಲೇಖಿಸಿರುವುದು ಮತ್ತು ತಮ್ಮ ಲೇಖನದಲ್ಲಿ ಮೈಸೂರಿನ ಆ ಪ್ರಕರಣವನ್ನು ಕುರಿತ ಭಾಗವನ್ನು ಮುಗಿಸುತ್ತ, ‘ಅವರೇ ಬಾಯಿ ಮುಚ್ಚಿದ್ದೋ…’ ಎಂಬಲ್ಲಿಂದ ಶುರುವಾಗಿ ‘ನ್ಯಾಯಾಂಗ ವ್ಯವಸ್ಥೆಯೋ’ ಎಂಬಲ್ಲಿಯವರೆಗೆ ಎತ್ತಿರುವ ಪ್ರಶ್ನೆಗಳೆಲ್ಲವೂ ಆ ಸೋಗಿನ ಮುಖವರ್ಣಿಕೆ, ಅಷ್ಟೆ.

ಅಲ್ಲಿಂದ ಆಚೆಗೆ ಬೆಳವಾಡಿಯವರು ಮುನವ್ವರ್ ಫಾರೂಕಿ, ಸನ್ನಿ ಲಿಯೋನ್ ಹಾಗೂ ಎಂ. ಎಫ್ ಹುಸೇನ್ ಅವರಿಗೆ ಸಂಬಂಧಿಸಿದ ಕೆಲವು ಪ್ರಕರಣಗಳನ್ನು ಪ್ರಸ್ತಾವಿಸುತ್ತಾರೆ. ಹಾಗೆ ಮಾಡುವಾಗ,  ಹುಸೇನರನ್ನು ‘ಸ್ವರ್ಗೀಯ ಹುಸೇನ್ ಸಾಹೇಬರು’ ಎಂದು ಹೆಸರಿಸುತ್ತಾರೆ. ಅಲ್ಲಿ, ‘ಸಾಹೇಬರು’ ಎಂಬ ಮಾತನ್ನು ಬೆಳವಾಡಿಯವರು ಸಹಜ-ಮುಗ್ಧವಾಗಿಯೇನೂ ಆಡಿರಲಾರರು.  ಅವರು ಹಾಗೆ ಮಾಡಿರುವುದನ್ನು ಯಾರಾದರೂ ಎತ್ತಿ ತೋರಿದರೆ, ಅದಕ್ಕೆ ಅಡ್ಡಹಿಡಿಯಲು ಗುರಾಣಿಯಂತೆ ಇರಲೆಂದೇ  ‘ಸ್ವರ್ಗೀಯ’  ಎಂಬ ಮಾತನ್ನು ಕೂಡ ಸೇರಿಸಿದ್ದಾರೆ ಎಂದು ತೋರುತ್ತದೆ. ಪಂಜೆ ಮಂಗೇಶರಾಯರ ಮಕ್ಕಳ ಕವಿತೆಯ ಎರಡು ಮಾತಿಗೆ ಎರಡು ಮಾತು ಸೇರಿಸಬಹುದಾದರೆ, ‘ಬರಿಮೈ ತಣ್ಣಗೆ…ಎರಡೆಳೆ ನಾಲಗೆ’, ಕೊರೆಯಿನಿತಿಲ್ಲ ಮಾತಿನ ಜಾಣಿಗೆ ಅನ್ನಬೇಕು ಇದಕ್ಕೆ;  ಕವಿ ಅಡಿಗರ ಪದ್ಯವೊಂದರ ಮಾತಿನಲ್ಲಿ, ‘ ಅರ್ಥದ ಅಪಾರ್ಥದ ಗತ್ತು’ ಅನ್ನಬೇಕು. 

ಹುಸೇನ್ ಅವರು ತನ್ನನ್ನು ತಾನು ‘ಮುಸಲ್ಮಾನ’ ಎಂದು ಯಾವತ್ತೂ ಗುರುತಿಸಿಕೊಳ್ಳಲಿಲ್ಲ. ಅವರ ಹೆಸರು ಸೆಮೆಟಿಕ್ ಭಾಷೆಯೊಂದರ ಪದಗಳಿಂದ ಆದದ್ದು, ಲೋಕದ ಜನರು ಮುಸಲ್ಮಾನರವು ಎಂದು ತಿಳಿಯುವ ಹೆಸರುಗಳಲ್ಲೊಂದು ಅನ್ನುವುದನ್ನು ಬಿಟ್ಟರೆ, ಅವರಲ್ಲಿ ಯಾವ ‘ಮುಸಲ್ಮಾನ’ತನವೂ ಇರಲಿಲ್ಲ. ಭಾರತದ ಬಹುದೊಡ್ಡ ಕಲಾವಿದರಾಗಿದ್ದರು ಅವರು; ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸ ಮತ್ತು ಸಂಸ್ಕೃತಿಯನ್ನು ತಮ್ಮ ವರ್ಣಚಿತ್ರಗಳಲ್ಲಿ ಉತ್ಕಟವಾಗಿ ಚಿತ್ರಿಸಿದರು; ಜಾಗತಿಕ ಮಟ್ಟದಲ್ಲಿ ನಮ್ಮ ದೇಶದ ಅತಿಪ್ರಸಿದ್ಧ ಕಲಾವಿದರಾಗಿದ್ದರು.  ಎಂ.ಎಫ್. ಹುಸೇನ್ ಅಂದರೆ, ಇಷ್ಟೆ: ಆಧುನಿಕ ಭಾರತದ ಒಬ್ಬ ವರ್ಣಚಿತ್ರಕಾರ. ಮುಗಿಯಿತು.

ಬೆಳವಾಡಿಯವರು ಫಾರೂಕೀ, ಲಿಯೋನ್ ಮತ್ತು ಹುಸೇನರಿಗೆ ಸಂಬಂಧಿಸಿದ ಪ್ರಕರಣಗಳನ್ನು ಕುರಿತು ಒಂದಷ್ಟು ಹೇಳಿಯಾದಮೇಲೆ, ತಮ್ಮ ಲೇಖನದ ಆ ಭಾಗವನ್ನು ಮುಗಿಸುವಾಗ, ಅಂಥವರ ಕಲೆಗಾರಿಕೆಯ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟರೆ, ‘ನೊಂದವರ ಪ್ರತಿಭಟನೆಗೂ ಅವಕಾಶ ನೀಡಬೇಕು’ ಅನ್ನುತ್ತಾರೆ. ಆ ‘ನೊಂದವರು’ ಯಾರು, ಅವರಲ್ಲಿ ಆ ‘ನೋವು’ ತಾನೇತಾನಾಗಿ ಹುಟ್ಟಿಕೊಳ್ಳುತ್ತದೆಯೋ ಅಥವಾ ತಮಗೆ ನೋವಾಗಿದೆ ಎಂದು ಅವರು ತಿಳಿದುಕೊಳ್ಳಬೇಕು ಮತ್ತು ಹಾಗೆಂದು ಜೋರಾಗಿ ಹೇಳಬೇಕು ಎಂದು ಹೇಳಿಕೊಡಲಾಗುತ್ತದೆಯೋ? ಅದೆಲ್ಲ, ನೊಂದವರು ತಾವು ಎನ್ನುವವರಿಗೆ ಹೇಳಿಕೊಟ್ಟದ್ದು, ಅರೋಪಿತವಾದ್ದು, ಅವರು ಆರೋಪಿಸಿಕೊಂಡದ್ದು ಎಂದಾದರೆ ಅಂಥದಕ್ಕೆ ಕಾರಣವಾಗಿರುವುದು ಯಾವ ಶಕ್ತಿ, ಯಾವ ವಿಚಾರ ಹಾಗೂ ಯಾವ ರಾಜಕೀಯ ಕಾರ್ಯಪರಂಪರೆ? ಅಲ್ಲದೆ, ನಾವೆಲ್ಲರೂ ಕಣ್ಣಾರೆ ಕಾಣುತ್ತ ಬಂದಿರುವಂತೆ, ಆ ಪ್ರತಿಭಟನೆಗಳು ಕೇವಲ ಶಾಂತ-ನಾಗರಿಕವಾಗಿರುತ್ತವೆಯೋ ಅಥವಾ, ಕೊಲೆಯ ಬೆದರಿಕೆ ಮತ್ತು ಕೃತ್ಯಗಳೂ ಸೇರಿದಂತೆ, ಹಿಂಸಾತ್ಮಕ ದಾಳಿ ಆಗಿರುವುದೇ ಹೆಚ್ಚೋ?

ಅಸಲು, ಒಂದು ಕಲಾಕೃತಿಯ ವಿರುದ್ಧ ‘ಪ್ರತಿಭಟಿಸುವುದು’ ಅಂದರೆ ಏನು? ನಮಗೆ  ಅಪಥ್ಯವಾದ ಕಲೆಗಾರಿಕೆಯನ್ನು, ಕಲೆಯ ಮೂಲಕವಾದ ಸಂವಾದ, ವಾಗ್ವಾದ, ಪ್ರತಿವಾದ, ಪ್ರತಿಸೃಷ್ಟಿ, ಅಥವಾ ನಿರಾಕರಣೆಯಿಂದ ಉತ್ತರಿಸಬೇಕಲ್ಲದೆ, ಅದರ ವಿರುದ್ಧ ‘ಪ್ರತಿಭಟನೆ’ ಮಾಡುವುದರಿಂದ ಅದನ್ನು ನಿವಾರಿಸುವುದು, ಉತ್ತರಿಸುವುದು ಸಾಧ್ಯವೇ, ಸಾಧುವೇ? ಬೆಳವಾಡಿಯವರು ಇಂಥ   ಪ್ರಶ್ನೆಗಳನ್ನು ಎಂದೂ ಎತ್ತಿರುವುದು ಕಾಣೆ.

ಇಷ್ಟರಮೇಲೆ, ಹುಸೇನ್ ಅವರ ವರ್ಣಚಿತ್ರಗಳನ್ನು ಕುರಿತು ಹೇಳುವಾಗ, ಬೆಳವಾಡಿ ಅವರು ‘ಆರ್ಟ್’ ಎಂಬ ಆ ಪದದ ಆಚೆ, ಈಚೆ ಉಲ್ಲೇಖನ ಚಿಹ್ನೆಗಳನ್ನು ಕೊಟ್ಟಿರುವುದರಲ್ಲಿಯೇ ಹುಸೇನರು ಮತ್ತು ಅವರ ಕಲೆಗಾರಿಕೆಯ ವಿಷಯದಲ್ಲಿ ಅವರಿಗಿರುವ ತಿರಸ್ಕಾರದ ಭಾವನೆ ಎದ್ದು ಕಾಣುತ್ತದೆ. ಬಹುಶಃ ಹಾಗಾಗಿಯೆ, ಹಿರಣ್ಣಯ್ಯನವರಿಗೆ ಒದಗಿದ ಅದೊಂದು ಸಂಕಟದ ಪ್ರಕರಣವನ್ನು ದೀರ್ಘವಾಗಿ ಕಥಿಸುವ ಬೆಳವಾಡಿಯವರು, ಹುಸೇನರ ಬದುಕು ಮತ್ತು ಅವರ ಕಲೆಯ ಕಾಯಕದ ಮೇಲೆ ಹಲವು ವರ್ಷಗಳ ಕಾಲ ನಿರಂತರವಾಗಿ ನಡೆದ ದಾಳಿಯನ್ನು ಕುರಿತು ಒಂದೇ ಒಂದು ಮಾತಾಡುವುದಿಲ್ಲ.

ಬೆಳವಾಡಿಯವರಾಗಲಿ ಇನ್ನು ಯಾರೇ ಆಗಲಿ ಹುಸೇನರ ಕಲೆಯನ್ನು ಮೆಚ್ಚಲೇ ಬೇಕು ಎಂದೇನೂ ಇಲ್ಲ. ಹುಸೇನರ ಕೆಲವು ಕೃತಿಗಳಲ್ಲಿ ಕಲೆಗಾರಿಕೆ ಅನ್ನುವುದಿಲ್ಲ ಎಂದು ಅವರಿಗೆ ಅನ್ನಿಸಿದರೆ, ಅಂಥ ಕೃತಿಗಳನ್ನು ಕಟುವಾಗಿ ಟೀಕಿಸಲು ಅವರು ಖಂಡಿತವಾಗಿಯೂ ಸ್ವತಂತ್ರರು. ಅಥವಾ, ಹುಸೇನರ ಒಟ್ಟೂ ಕಲೆಯನ್ನು ಕಂಡು ಮೂಗು ಮುರಿಯಲು ಕೂಡ ಅವರು ಸ್ವತಂತ್ರರು. ಇಲ್ಲಿ ನನ್ನ ಆಕ್ಷೇಪ ಇರುವುದು ಆ ಚಿತ್ರಕಾರರು ಹಿಂಸಾತ್ಮಕ ದಾಳಿಗಳಿಂದ ಪಟ್ಟ ಬವಣೆಯನ್ನು ಕುರಿತು ಬೆಳವಾಡಿಯವರು ಏನೂ ಹೇಳಲಿಲ್ಲ ಅನ್ನುವುದರ ಬಗ್ಗೆ.  

ಹುಸೇನರು ತಮ್ಮ ವರ್ಣಚಿತ್ರಗಳನ್ನು ಜನರಿಗೆ ತೋರಿಸಲೆಂದೇ ಅಹಮದಾಬಾದಿನಲ್ಲಿ ಕಟ್ಟಿರುವ ಅಮ್ದಾವಾದ್ ನಿ ಗುಫಾ ಎಂಬ ಕಲಾ ಗ್ಯಾಲರಿಯ ಮೇಲೆ ಹಿಂದೂತ್ವವಾದೀ ಗುಂಪುಗಳು ಒಂದಲ್ಲ ಮೂರು ಸಲ (ಕ್ರಮವಾಗಿ 1996, 2006 ಹಾಗೂ 2013ರಲ್ಲಿ) ದಾಳಿ ಮಾಡಿ, ದಾಂಧಲೆ ಎಬ್ಬಿಸಿ, ಅಲ್ಲಿನ ಹಲವು ಕಲಾಕೃತಿಗಳನ್ನು ಹಾಳುಗೈದವು. ಅಲ್ಲದೆ, 2008ರಲ್ಲಿ ದೆಹಲಿಯ ಸಂವಿಧಾನ ಕ್ಲಬ್‍ನಲ್ಲಿ ನಡೆಯುತ್ತಿದ್ದ ಪ್ರದರ್ಶನದ ಮೇಲೆಯೂ ದಾಳಿಮಾಡಿ, ಅವರ ಕಲಾಕೃತಿಗಳನ್ನು ಹಾಳುಗೆಡವಿದವು. ಜೊತೆಗೆ, ಹಿಂದೂತ್ವವಾದದ ಹಲವು ಗುಂಪುಗಳು ಹುಸೇನ್ ಅವರ ಮೇಲೆ ಅನೇಕ ನ್ಯಾಯಾಲಯಗಳಲ್ಲಿ ಅನೇಕ ದಾವೆಗಳನ್ನು ಕೂಡ ಹೂಡಿ, ಬಹಳ ಕಿರುಕುಳ ಕೊಟ್ಟವು. 

ಮುನವ್ವರ್ ಫಾರೂಕಿ

ಅದೆಲ್ಲ ಅಲ್ಲದೆ, 2004ರಲ್ಲಿ, ತಮ್ಮ ಎಂಬತ್ತೊಂಬತ್ತನೆಯ ವಯಸ್ಸಿನಲ್ಲಿ ಹುಸೇನ್ ಅವರು ಪರಿಕಲ್ಪಿಸಿ, ತಮ್ಮ ಮಗನೊಂದಿಗೆ ಚಿತ್ರಕಥೆ ಬರೆದು, ನಿರ್ದೇಶಿಸಿದ  Meenaxi: Tale of Three Cities ಎಂಬ ಸಿನಿಮಾದ ಒಂದು ಹಾಡಿನ ವಿರುದ್ಧ ಮುಸಲ್ಮಾನರ ಕೆಲವು ಸಂಘಟನೆ ಮತ್ತು ಸಂಸ್ಥೆಗಳು ಕಟುವಾಗಿ ಪ್ರತಿಭಟಿಸಿದವು. ಆ ಹಾಡಿನ ಸಾಹಿತ್ಯದಲ್ಲಿ ಕುರ್‍-ಆನ್‍ನಿಂದ ತೆಗೆದುಕೊಂಡ ಮಾತುಗಳಿವೆ, ಹಾಗೆ ಮಾಡುವುದು ಪಾಖಂಡಿತನ ಅನ್ನುವುದು ಆ ಮತಾಂಧ ಸಂಸ್ಥೆಗಳ ದೂರಾಗಿತ್ತು! ಹುಸೇನರಿಗೆ ಬಹಳ ಬೇಸರವಾಯಿತು ಅದರಿಂದ, ಬಹಳ ಸಿಟ್ಟು ಬಂತು. ಅವರೇನೋ ಸೆಟೆದು ನಿಲ್ಲಲು ತಯಾರಿದ್ದರು. ಆದರೆ ಆ ಚಲನಚಿತ್ರದ ಹಂಚಿಕೆದಾರರಾದ ಯಶ್‍ ಚೋಪ್ರಾ ಅವರು ಕೈಚೆಲ್ಲಿ ಬಿಟ್ಟದ್ದರಿಂದ, ಹುಸೇನ್ ಅವರು, ಅನಿವಾರ್ಯವಾಗಿ, ಅದರ ಸಾರ್ವಜನಿಕ ಆಟಗಳನ್ನು ನಿಲ್ಲಿಸಬೇಕಾಯಿತು.

ಅದೆಲ್ಲವುದಕ್ಕೆ ಮಿಗಿಲಾಗಿ, ತಾವು ಹಿಂದೂತ್ವವಾದಿಯಾದವು ಎಂದು ಹೇಳಿಕೊಳ್ಳುವ ಹಲವು ಗುಂಪುಗಳು ಹುಸೇನ್ ಅವರಿಗೆ,  ಒಂದಲ್ಲ ಹಲವು ಬಾರಿ, ಕೊಲೆ ಬೆದರಿಕೆಯನ್ನು ಒಡ್ಡಿದವು. ಒಂದು ಸಂಸ್ಥೆಯವರು, ಅವರನ್ನು ಕೊಲೆ ಮಾಡಿದವರಿಗೆ ಹಲವು ಹತ್ತು ಲಕ್ಷ ಡಾಲರಿನ ಇನಾಮು ಕೊಡುವುದಾಗಿ ಘೋಷಿಸಿದರು. (ನೋಡಿ: https://economictimes.indiatimes.com/news/politics-and-nation/mf-husain-passes-away-in-london/articleshow/8786146.cms?from=mdr).

ಇದೆಲ್ಲವುದರಿಂದ ಬಹಳವಾಗಿ ನೊಂದ ತೊಂಬತ್ತು ವರ್ಷದ ಆ ವೃದ್ಧ ಕಲಾವಿದರು, ತಾನು ಅಸೀಮವಾಗಿ ಪ್ರೀತಿಸುತ್ತಿದ್ದ ತನ್ನ ಈ ದೇಶವನ್ನು ತೊರೆದು ಕ಼ತಾರ್ ದೇಶಕ್ಕೆ ಹೋಗಿ ನೆಲೆಸಿದರು; ಅಲ್ಲಿನ ಪ್ರಜೆ ಆದರು; ಅಲ್ಲಿ, ತನ್ನ ತಾಯ್ನಾಡಿಗಾಗಿ ನಿರಂತರ ಹಂಬಲಿಸುತ್ತಲೇ ತನ್ನುಳಿದ ಕಾಲದ ಸವೆಸಿ , ತಮ್ಮ ತೊಂಬತ್ತೈದನೆಯ ವಯಸ್ಸಿನಲ್ಲಿ ಲಂಡನ್ನಿನಲ್ಲಿ ತೀರಿಕೊಂಡರು.

ಇದೆಲ್ಲ ಬೆಳವಾಡಿಯವರಿಗೆ ಗೊತ್ತಿಲ್ಲ ಎಂದಲ್ಲ. ಪ್ರಜಾವಾಣಿಯ ತಮ್ಮ ಲೇಖನದಲ್ಲಿ  ಅವರು ಇಷ್ಟೆಲ್ಲವನ್ನೂ ಬರೆಯಬೇಕಿತ್ತು ಎಂದೂ ಅಲ್ಲ. ಆದರೆ, ಅವರ ಮನಸ್ಸು ಸ್ವಚ್ಛವಾದದ್ದಾದರೆ, ಹುಸೇನರನ್ನು ಕುರಿತು ಬರೆಯುವಾಗ ಅವರು ಇಲ್ಲಿ ಈಗಾಗಲೆ ಎತ್ತಿ ತೋರಿಸಿರುವ ಅಗ್ಗದ, ಕುಹಕದ ಧೋರಣೆಯನ್ನು ತಾಳುತ್ತಿರಲಿಲ್ಲ ಅಷ್ಟೇ ಅಲ್ಲ, ಹುಸೇನ್ ಅವರು ಹಿರಣ್ಣಯ್ಯನವರಿಗಿಂತ ಅದೆಷ್ಟೋ ಪಾಲು ಹೆಚ್ಚು ಭಯಾನಕವಾದ ನೋವಿಗೆ ತುತ್ತಾದರು ಎಂದು ಒಂದೆರಡೇ ಮಾತಿನಲ್ಲಾದರೂ ಗುರುತಿಸುತ್ತಿದ್ದರು ಎಂದಂತೂ ಹೇಳಲೇಬೇಕು.

ಇಷ್ಟಾಗಿ, ಬೆಳವಾಡಿಯವರು ಹುಸೇನರ ಬಗ್ಗೆ ಬರೆಯುತ್ತ, ‘‘ಹಿಂದೂ ದೇವತೆಗಳ ಬೆತ್ತಲೆ ‘ಆರ್ಟ್’…’’ ಎಂದಿರುವುದರ ಮರ್ಮವೇನಿರಬಹುದು, ನೋಡೋಣ.  ಹುಸೇನರನ್ನು  ಸಾಹೇಬರು ಎಂದು ಕರೆದು, ‘ಆರ್ಟ್’ ಅನ್ನುವುದನ್ನು ಉಲ್ಲೇಖನ ಚಿಹ್ನೆಗಳ ನಡುವೆ ಬರೆದಿರುವ ಬೆಳವಾಡಿಯವರು, ಹುಸೇನರು (ಸಾಹೇಬರು) ಹಿಂದೂ ದೇವತೆಗಳನ್ನು ಬೆತ್ತಲೆ (ಮಾಡಿ) ತೋರಿಸಿದ್ದಾರೆ ಎಂದು ಧ್ವನಿಸಿರುವಲ್ಲಿನ ಕುಹಕ, ಅಣಕ ನೋಡಿ.  ಹುಸೇನರು ಮಾಡಬಾರದ್ದನ್ನು ಮಾಡಿದ್ದಾರೆ, ಈ ಹಿಂದೆ ಯಾರೂ ಯಾವತ್ತೂ ಎಲ್ಲಿಯೂ ಮಾಡದೇ ಇರುವುದನ್ನು ಮಾಡಿದ್ದಾರೆ ಎಂಬ ಧ್ವನಿಯಿದೆ ಅಲ್ಲಿ.

ಆದರೆ ಬೆಳವಾಡಿಯವರಿಗೆ ಗೊತ್ತೇ ಇರುತ್ತದೆ, ನಾವೀಗ ‘ಹಿಂದೂ’ ಎಂದು ಗುರುತಿಸುವ ಪರಂಪರೆಗಳಿಗೆ ಸೇರಿದ ಗುಡಿಗುಂಡಾರಗಳಲ್ಲಿನ ಗರ್ಭಗುಡಿಗಳಲ್ಲಿ ದೇವತಾಮೂರ್ತಿಗಳು ಬಹುತೇಕ ಅರೆಬೆತ್ತಲೆ ಇರುತ್ತವೆ. ಎಷ್ಟೋ ಕಡೆ, ಅವುಗಳಿಗೆ ಮರ್ಮಾಂಗವನ್ನು ಕಟೆಯದೆಯೇ, ಒಟ್ಟಂದದಲ್ಲಿ (ದೇವತಾ) ಮನುಷ್ಯ ಸ್ವರೂಪವೊಂದನ್ನು ಕಟೆದು, ಅಲ್ಲಲ್ಲಿನ ಅಗತ್ಯಕ್ಕೆ ತಕ್ಕಂತೆ ಮೊಲೆ ಮುಂತಾದುವುವನ್ನು ಮೂಡಿಸಿ ಹೆಣ್ಣುದೇವತೆ ಎಂದೋ ಅಥವಾ, ತಕ್ಕ ಮಾಂಸಖಂಡಗಳನ್ನು ಮೂಡಿಸುವುದರ ಮೂಲಕ ಗಂಡುದೇವತೆ ಎಂದೋ ಕಾಣಿಸಿರುವುದೂ ಇರುತ್ತದೆ. ಆದರೆ ಆ ಮೂರ್ತಿಗಳಿಗೆ ಮರ್ಮಾಂಗವಿಲ್ಲದಿರುವುದು ನಮಗೆ ಗೊತ್ತಾಗುವುದಿಲ್ಲ. ಹೆಚ್ಚಿನ ಎಡೆ, ಆ ದೇವತೆಗಳಿಗೆ ಬೆಳ್ಳಿ, ಚಿನ್ನ ತರಹದ ಲೋಹವೊಂದರ ಮುಖವಾಡ ತೊಡಿಸಿರುತ್ತಾರೆ; ಮತ್ತು ಸೀರೆ, ರವಿಕೆ ಇಲ್ಲವೆ ಪಂಚೆ, ಶಲ್ಯಗಳನ್ನೂ, ಹಾಗೂ ಒಡವೆಯನ್ನೂ ಉಡಿಸಿ, ತೊಡಿಸಿ, ಅವುಗಳ ಆಕೃತಿಯ ರೇಖೆಗಳು ಸಂಪೂರ್ಣ ಮುಚ್ಚಿಹೋಗುವಂತೆ ಹೇರಳ ಹೂವಿನ ಅಲಂಕಾರ ಮಾಡಿರುತ್ತಾರೆ. ಅಂಥದ್ದರಲ್ಲಿ  ಒಂದು ಸೊಬಗಿದೆಯಾದರೂ, ಆ ಮೂರ್ತಿಗಳು ಮೂಲಭೂತವಾಗಿ ಬೆತ್ತಲೆ, ಅರೆಬೆತ್ತಲೆಯಾದುವೇ ಹೌದಲ್ಲವೆ?

ಇನ್ನು ಆ ಮುಖ್ಯಮೂರ್ತಿಗಳನ್ನು ಹೊರತುಪಡಿಸಿ, ದೇವಸ್ಥಾನಗಳ ಗೋಪುರ, ಪ್ರಾಕಾರ, ಕಂಬ, ಗೋಡೆ, ವೇದಿಕೆಗಳ ಪಕ್ಕೆಗಳ ಮೇಲೆ ಇರುವ ಮೂರ್ತಿಗಳ ಕೆತ್ತನೆಗಳೆಲ್ಲ ಅರೆಬೆತ್ತಲೆ ಇಲ್ಲವೆ ಪೂರ್ತಿ ಬೆತ್ತಲೆ ಇರುವುದೇ ಕಾಣುತ್ತದೆ. ಆ ನೋಟವೂ ಬಹಳ ಚೆಲುವಾದದ್ದು, ನಮಗೆ ಯಾವ ರೀತಿಯಲ್ಲಿಯೂ ಇರಿಸುಮುರಿಸು ಉಂಟುಮಾಡದಿರುವಂಥದು, ಅಲ್ಲವೆ? ಅದೂ ಅಲ್ಲದೆ ನಮ್ಮ ದೇಶದ ಹಲವು ದೇವಸ್ಥಾನಗಳಲ್ಲಿ ಮಿಥುನ ಶಿಲ್ಪಗಳೂ ಇವೆ, ಅಲ್ಲವೆ? 

ಇನ್ನು, ಕಾಳಿದಾಸನ ಕುಮಾರಸಂಭವ, ಶಂಕರಚಾರ್ಯರದ್ದು ಎಂದು ಹೇಳಲಾಗುವ ಸೌಂದರ್ಯಲಹರಿ, ಜಯದೇವನ ಗೀತಗೋವಿಂದ, ಆಂಡಾಳ್ ತಿರುಪ್ಪಾವೈ, ವಿದ್ಯಾಪತಿಯ ಕವಿತೆಗಳು ಇಂಥವುಗಳಲ್ಲಿ ದೇವತಾ ಸ್ವರೂಪದ ಗುಪ್ತಾಂಗದ ಚಿತ್ರಣವಿದೆ, ಅಥವಾ ಗಾಢವಾದ ಸಂಭೋಗ ಶೃಂಗಾರದ ವರ್ಣನೆ ಇದೆಯಲ್ಲ?! ಅದರಿಂದಾಗಿ ನಾವು ಅವುಗಳನ್ನು ‘ಪಾಖಂಡಿಗಳ ರಚನೆಗಳು’ ಎಂದು ಬಹಿಷ್ಕರಿಸಿದ್ದೇವೆಯೇ? ಅವುಗಳನ್ನು ಪಠಿಸುವವರ ತಲೆ ತೆಗೆಯಲು ಹೊರಡುತ್ತೇವೆಯೇ?

ಹುಸೇನರ ಆ ಕಲಾಕೃತಿಗಳಲ್ಲಿ  ಬೆಳವಾಡಿಯವರು ಕಲೆ ಕಂಡಂತಿಲ್ಲ, ತೊಂದರೆಯಿಲ್ಲ. ತೊಂದರೆಯಿರುವುದು ಇಲ್ಲಿ: ಆ ಕಲಾವಿದರು ಅವುಗಳಲ್ಲಿ  ದೇವತೆಗಳನ್ನು ಚಿತ್ರಿಸಿದ್ದಾರೆ ಅನ್ನುವುದಕ್ಕಿಂತ ತಥಾಕಥಿತ ಹಿಂದೂ ದೇವತೆಗಳನ್ನು ಚಿತ್ರಿಸಿರುವುದು ಅವರಿಗೆ ದೊಡ್ಡದಾಗಿ ಕಂಡಿದೆ ಅನ್ನುವುದರಲ್ಲಿ. ಬೆಳವಾಡಿಯವರ ಆ ಕೆಲವು ಮಾತಿನಲ್ಲಿ ಒತ್ತಿರುವುದು ಹಿಂದೂ, ಬೆತ್ತಲೆ ಮತ್ತು ಆರ್ಟ್ ಎಂಬ ಪದಗಳ ಮೇಲೆ ಅನ್ನುವುದು ನಿಚ್ಚಳವಾಗಿದೆ. ಹುಸೇನರ ಹಿಂದೂ ದೇವತೆಗಳನ್ನು ಬೆತ್ತಲೆ ಕಾಣಿಸಿದ್ದಾರೆ, ಆದ್ದರಿಂದ ಅವರ ಆ ಕಲಾಕೃತಿಗಳು ಆರ್ಟ್ ಅಲ್ಲ ಅನ್ನುವ ಧ್ವನಿ ಇದೆ ಅಲ್ಲಿ. ಆ ಧ್ವನಿಯಿಂದಾಗಿ, ಬೆಳವಾಡಿಯವರ ನೋಟದ ನೆಲೆ ಎಂಥದು ಎಂದು ಗೊತ್ತಾಗುತ್ತದೆ. ಅದರಿಂದಲೂ ತೊಂದರೆ ಏನೂ ಇಲ್ಲ. ತೊಂದರೆ ಇರುವುದು ಹಿಂದೂತ್ವ ಪಡೆಗಳು ಹುಸೇನರ ಕಲಾಗ್ಯಾಲರಿಗಳ ಮೇಲೆ ದಾಳಿಮಾಡಿ  ಅವರ ಕಲಾಕೃತಿಗಳನ್ನು ಹಾಳುಗೆಡವಿದವು, ಅವರಿಗೆ ಮೇಲಿಂದಮೇಲೆ ಕೊಲೆ ಬೆದರಿಕೆ ಒಡ್ಡಿದವು ಅನ್ನುವುದನ್ನು ಬೆಳವಾಡಿಯವರು ಲೆಕ್ಕಿಸಿಲ್ಲ ಅನ್ನುವುದರಲ್ಲಿ.

ಸಾರಾಂಶದಲ್ಲಿ, ಬೆಳವಾಡಿಯವರಿಗೆ ಇಲ್ಲಿ ಹುಸೇನರು ವರ್ಣಚಿತ್ರಕಾರರಾಗಿ ಕಂಡಿಲ್ಲ; ಕೇವಲ ಕೆಟ್ಟ ವರ್ಣಚಿತ್ರಕಾರರಾಗಿ, ಕೆಟ್ಟ ಕಲಾವಿದರಾಗಿಯೂ ಕಂಡಿಲ್ಲ. ಬದಲಿಗೆ, ಮುಸಲ್ಮಾನರಾಗಿ ಕಂಡಿದ್ದಾರೆ. ಅವರ ಚಿತ್ರಗಳು ಕೇವಲ ಚಿತ್ರಗಳಾಗಿ ಕಂಡಿಲ್ಲ;, ಪುರಾಣ ಕಲ್ಪನೆಯ ಚಿತ್ರಗಳಾಗಿ ಕಂಡಿಲ್ಲ; ದೇವತೆಗಳ ಚಿತ್ರಗಳಾಗಿ ಕಂಡಿಲ್ಲ; ರೂಪಕಗಳಾಗಿಯಂತೂ ಕಂಡೇ ಇಲ್ಲ. ಬದಲಿಗೆ, ಮುಸಲ್ಮಾನರೊಬ್ಬರು ತಥಾಕಥಿತ ಹಿಂದೂ ದೇವತೆಗಳನ್ನು ತಮ್ಮ ಚಿತ್ರಗಳಲ್ಲಿ ಬೆತ್ತಲೆಯಾಗಿ ಕಾಣಿಸಿರುವುದು ಕಂಡಿದೆ. ಅದರಿಂದಾಗಿ, ಅವರಿಗೆ ಒದಗಿದ ಜೀವಭಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕಿಲ್ಲ ಅನ್ನುವುದೆ ಬೆಳವಾಡಿಯವರು ನಿಲುವೆಂದು ತೋರುತ್ತದೆ.

ಎಂ.ಎಫ್ ಹುಸೇನ್

ಹಿರಣ್ಣಯ್ಯನವರು ರಂಗಭೂಮಿಯನ್ನು ತೊರೆಯಬೇಕಾಯಿತು. ಅದು ದುಃಖದ ವಿಷಯವೇ ಅಗಿದೆ, ಹೌದು. ಆದರೆ ಹುಸೇನರು ತನ್ನ ಈ ದೇಶವನ್ನೇ ತೊರೆದುಹೋಗಿ, ಹೊರದೇಶದಲ್ಲಿ ನವೆಯುತ್ತ ಸಾಯಬೇಕಾಯಿತಲ್ಲ! ಅದು ಕೂಡ ಬೆಳವಾಡಿಯವರನ್ನು  ಬಾಧಿಸಬೇಕು; ಬಹುಶಃ, ಹಿರಣ್ಣಯ್ಯನವರಿಗೆ ಆದ ಅನ್ಯಾಯದ ಪ್ರಕರಣಕವು ಬಾಧಿಸಿದ್ದಕ್ಕಿಂತ ಹೆಚ್ಚು ಬಾಧಿಸಬೇಕು, ಅಲ್ಲವೇ?

ಲೇಖನದ ‘ಕಡೆಯ ಮಾತು’ ಎಂಬಲ್ಲಿ ಬೆಳವಾಡಿಯವರು 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿಗೆ ಆದದ್ದರ ವಿಷಯ ಪ್ರಸ್ತಾವಿಸುತ್ತ, ಕರಸೇವಕರು ಮಸೀದಿಗೆ ‘ಮುತ್ತಿಗೆ ಹಾಕಿದಾಗ’ ಅನ್ನುತ್ತಾರೆ. ಆ ಕರಸೇವಕರು ಮತ್ತು ಹಿಂದೂತ್ವ ಪಡೆಗಳು ಮಸೀದಿಗೆ ಕೇವಲ ಮುತ್ತಿಗೆ ಹಾಕಿದರೋ, ಅಥವಾ ಸಂಘ ಪರಿವಾರವು ಆ ಸಂಬಂಧದಲ್ಲಿ ಹೊಸೆದ ಪೂರ್ವಯೋಜನೆ, ಕೊಟ್ಟ ತರಬೇತಿ ಮತ್ತು ನಿಷ್ಕೃಷ್ಟವಾದ ತಾಲೀಮಿನಂತೆ ವ್ಯವಸ್ಥಿತವಾಗಿ  ಕೆಡವಿ, ಧ್ವಂಸಮಾಡಿದರೋ?! ಅಷ್ಟಾದಮೇಲೆ, ಅದೆಲ್ಲವೂ ಅಲ್ಲಿಗೇ ನಿಂತಿತೋ? ಆಮೇಲೆ, ಅದರಿಂದ ಇಂದಿನವರೆಗೆ ಆಗುತ್ತ ಬಂದಿರುವ ಅನಾಹುತಗಳೇನು, ಸಾವುನೋವುಗಳೇನು, ದೇಶದ ಆತ್ಮಕ್ಕೆ ಆಗುತ್ತ ಬಂದಿರುವ ಹಾನಿ ಏನು? ಹೀಗೆಲ್ಲ ಆದದ್ದು, ಆಗುತ್ತಿರುವುದು ಯಾಕೆ? ಆ ಮಸೀದಿಯನ್ನು ಧ್ವಂಸಮಾಡುವುದಕ್ಕೆ ಮೊದಲು ಏನೆಲ್ಲ ಜರುಗಿತು ಮತ್ತು ಯಾವ, ಎಂಥ ರಥಯಾತ್ರೆ ಮುಂತಾದ್ದು ಆಯಿತು? 

ಬೆಳವಾಡಿಯವರಿಗೆ, ತಮ್ಮ ಆ ಲೇಖನದಲ್ಲಿ ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳಲು ತಾವಿರಲಿಲ್ಲ ಅನ್ನುವುದು ಹೌದಾದರೂ, ಈ ಪ್ರಶ್ನೆಗಳು ಮತ್ತು ಇಂಥ ಬೇರೆಯವುಗಳ ಒಂದು ಶ್ರುತಿ,  ಒಂದು ಒಳಮಿಡಿತವಾದರೂ ಅವರ ಆ ‘ಕಡೆಯ ಮಾತು’ ಎಂಬಲ್ಲಿ ಇಲ್ಲ. ಅದು ಇರುವುದು ಸಾಧ್ಯವೂ ಇಲ್ಲ ಯಾಕೆಂದರೆ, ಬೆಳವಾಡಿಯವರು, ಆ ದಿನ ಬೆಳಗ್ಗೆ ‘ದೇಶದ ಜನ ಮನೆಯಲ್ಲಿಯೇ ಭಜಿಸಬೇಕು ಎಂದು ಎಲ್. ಕೆ. ಅಡ್ವಾಣಿಯವರು ಕರೆಕೊಟ್ಟಿದ್ದರು’ ಅಂದಾಗ, ಬಾಬರಿ ಮಸೀದಿಯು ನೆಲಸಮವಾದದ್ದರಲ್ಲಿ ಅಡ್ವಾಣಿಯವರ ಪಾತ್ರವು ಸಾತ್ತ್ವಿಕ ಭಜನ ಚಳವಳಿಯ ನಿರುಪದ್ರವಿ ನಾಯಕನದ್ದು ಮಾತ್ರವೇ ಆಗಿತ್ತು ಎಂದು ಬಣ್ಣಿಸುವ ಯುಕ್ತಿ ಕಾಣುತ್ತದೆ.  

ಬಾಬರಿ ಮಸೀದಿಯನ್ನು ಸಂಘ ಪರಿವಾರದವರು ಧ್ವಂಸ ಮಾಡಿದ ದಿನ (ಬೆಳವಾಡಿಯವರ ಪ್ರಕಾರ ‘ಮುತ್ತಿಗೆ ಹಾಕಿದಾಗ’) ಅಡ್ವಾಣಿಯವರು ದೇಶದ ಮನೆಮನೆಯಲ್ಲಿ ಭಜನೆ ನಡೆಯಬೇಕು ಎಂದು ಕರೆಕೊಟ್ಟಿದ್ದರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಬೆಂಗಳೂರಿನ ಕಲಾಕ್ಷೇತ್ರದ ಆವರಣದಲ್ಲಿ ಮತ್ತು ಅದರ ಎದುರಿನಲ್ಲಿ ಆ ಘಟನೆಯ ಸಂಬಂಧ ಪ್ರತಿಭಟನೆ ಮತ್ತು ಪ್ರತಿ ಪ್ರತಿಭಟನೆ ನಡೆದದ್ದು ಡಿಸೆಂಬರ್ 7ರಂದೇ ಹೊರತು ಬೆಳವಾಡಿಯವರು ಸೂಚಿಸಿರುವಂತೆ ಡಿಸೆಂಬರ್ 6ರಂದು ಅಲ್ಲ. 

ಆ ದಿನ, ಬಾಬರಿ ಮಸೀದಿಯನ್ನು ಕೆಡವಿದ್ದರ ವಿರುದ್ಧ ಪ್ರತಿಭಟಿಸಿದ ಸಾಹಿತಿ ಮತ್ತು ಕಲಾವಿದರ ಪೈಕಿ, ಎಲ್ಲರಿಗಿಂತ ಮೊದಲು ಕಲಾಕ್ಷೇತ್ರಕ್ಕೆ ಹೋಗಿ ಅದರ ಮೆಟ್ಟಿಲಮೇಲೆ ಕೂತದ್ದು ವಯೋವೃದ್ಧ ಕವಿ ಪುತಿನ ಅವರು. ಪ್ರತಿಭಟನೆಗಾಗಿ ಸೇರಬೇಕೆಂದು ಗೊತ್ತುಮಾಡಿದ್ದ ಸಮಯಕ್ಕೆ ಬಹಳ  ಮೊದಲೇ ಅಲ್ಲಿಗೆ ಹೋಗಿ ಕೂತರು ಅವರು. ಅವರ ಅಂದಿನ ಆ ಶ್ರದ್ಧೆ ಮತ್ತು ಅಂತಃಶುದ್ಧತೆ ಒಂದು ಸಣ್ಣ ದಂತಕಥೆಯೇ ಆಗಿ ಈವತ್ತಿಗೂ ಕಥನಗೊಳ್ಳುತ್ತಿರುತ್ತದೆ. ಆಗ ಅಲ್ಲಿ ಸೇರಿದ್ದ ಅಂಥ ಸಾತ್ತ್ವಿಕರ ವಿರುದ್ಧ ನಿಂತು, ಸಂಫ ಪರಿವಾರದ ಕೆಲಸದಲ್ಲಿ ಸಂಭ್ರಮಿಸಿದವರ ನೇತೃತ್ವವಹಿಸಿದ್ದು ಸಿ. ಅಶ್ವತ್ಥ್ ಮತ್ತು ಟಿ. ಎಸ್. ನಾಗಾಭರಣ ಅವರು.

ನಾನು ಆಗ ಮೈಸೂರಿನಲ್ಲಿದ್ದೆ. ಹಾಗಾಗಿ ಇದೆಲ್ಲವನ್ನೂ ಅಂದು ಕಲಾಕ್ಷೇತ್ರಕ್ಕೆ ಹೋಗಿದ್ದವರಿಂದ ಕೇಳಿ, ತಿಳಿದುಕೊಂಡಿದ್ದೇನೆ. ಆದರೆ, ಅಂದು ತಾನು ಅಲ್ಲಿಗೆ ‘ಪತ್ರಕರ್ತನಾಗಿ ಹೋಗಿದ್ದೆ’ ಎನ್ನುವ ಬೆಳವಾಡಿಯವರು ಅಶ್ವತ್ಥ್ ಅವರು ಹೆಸರನ್ನು ಹೇಳಿ, ನಾಗಾಭರಣರ ಹೆಸರನ್ನು ಹೇಳದಿರುವುದು, ಸಹಜವಾದ ಮರೆವಿನಿಂದ ಆದದ್ದು ಎಂದು ನಂಬುವುದು ಕಷ್ಟವೇ.  

ಅದಕ್ಕೂ ಮಿಗಿಲಾದ ವರಸೆ ಕಾಣುವುದು ಬೆಳವಾಡಿಯವರು ಅಲ್ಲಿಂದ ಮುಂದಕ್ಕೆ ಹೇಳಿರುವುದರಲ್ಲಿ. ‘ಎರಡೂ ಕಡೆಯವರು ತಮ್ಮ ಭಾವನೆ ವ್ಯಕ್ತಪಡಿಸಲು ಅಂದಿನ ಆಡಳಿತ ವ್ಯವಸ್ಥೆಮಾಡಿಕೊಟ್ಟಿತ್ತು’ ಎನ್ನುವ ಷರಾದೊಂದಿಗೆ ತಮ್ಮ ಕಥನದ ಆ ಭಾಗವನ್ನು ಮುಗಿಸುವ ಬೆಳವಾಡಿಯವರು ಸಂಘ ಪರಿವಾರವು ಅಂದು ಎಸಗಿದ ಆ ರಾಕ್ಷಸ ಕೃತ್ಯವನ್ನು, ಆ ಕೃತ್ಯದ  ಹಿಂದುಮುಂದಿನ ಇತಿಹಾಸವನ್ನು, ಅದರಿಂದಾಗಿ ದೇಶವು ಇಂದಿಗೂ ಪಡುತ್ತಿರುವ ಹೇಳತೀರದ ಬವಣೆಯನ್ನು ಕೇವಲ ಘೋಷಣೆಗಳ ಮೂಲಕ ಪರ, ವಿರೋಧದ ‘ಭಾವನೆ ವ್ಯಕ್ತಪಡಿಸಲು’ ಬೇಕಾದ ‘ಆಡಳಿತ ವ್ಯವಸ್ಥೆ’ ಎಂಬ ಸ್ಥಳೀಯ, ಸರಳ ವಿದ್ಯಮಾನವೆಂಬಷ್ಟಕ್ಕೆ ಇಳಿಸಿಬಿಡುತ್ತಾರೆ. ಮಾತುಗಾರಿಕೆಯಿಂದ ವಾಗ್ದೇವಿ ಸರಸ್ವತಿಯನ್ನೇ ದಿಕ್ಕೆಡಿಸಬಲ್ಲೆ ಎಂಬ ಭಂಡತನ ಇದು.  

ಬೆಳವಾಡಿಯವರ ಕಡೆಯ ಮಾತಿನ ಕಡೆಯ ಪ್ಯಾರಾಕ್ಕೆ ಬರೋಣ.  ಅಲ್ಲಿ ಲಂಕೇಶ್ ಮತ್ತು ಲಂಕೇಶ್ ಪತ್ರಿಕೆಯ ಹೆಸರನ್ನು ಬೆಳವಾಡಿಯವರು ಅದೊಂದು ತಾಯಿತ ಎಂಬಂತೆ ತೊಟ್ಟಿದ್ದಾರೆ ಅನ್ನಿಸುತ್ತದೆ. ದೇಶದ ಈಗಿನ ರಾಜಕೀಯದಲ್ಲಿ ಅವರು ತಮ್ಮನ್ನು ಸಂಘ ಪರಿವಾರ ಮತ್ತು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ ತಾನೆ? ಅದನ್ನು ಕುರಿತ ಟೀಕೆ ಬಂದರೆ, ‘ನೋಡಿ, ನಾನು ಲಂಕೇಶ್ ಜೊತೆಗೂ ಇದ್ದವನು; ಹಾಗಾಗಿ ನಿಷ್ಪಕ್ಷಪಾತಿ’ ಎಂದು ಬಾಯಿಬಿಟ್ಟು ಹೇಳದೆ ಹೇಳಲು ಅವರಿಗೆ ಲಂಕೇಶ್ ಹೆಸರು ಬೇಕಾಗಿದೆಯೇನೋ! ಅಲ್ಲಿ, ಅವರು ಬರಿದೇ ‘ಲಂಕೇಶ್ ಸುತ್ತ ಕುಳಿತಿರಬೇಕಾದರೆ’ ಅನ್ನದೆ ‘ಮೇಷ್ಟ್ರ (ಲಂಕೇಶ್) ಸುತ್ತ ಕುಳಿತಿರಬೇಕಾದರೆ’ ಎಂದಿರುವುದರ ಮರ್ಮವೂ ಅದೇ ಇರಬೇಕು. ಜೊತೆಗೆ, ಆಗ, ಬಾಬರಿ ಮಸೀದಿಯನ್ನು ಕೆಡವಿದ ಸುದ್ದಿ ಬಂದು, ‘ರಾಮಚಂದ್ರ ಶರ್ಮರ ಕಣ್ಣಲ್ಲಿ ನೀರು ಬಂತು’ ಎನ್ನುವಾಗ, ಬೆಳವಾಡಿಯವರು, ಲಂಕೇಶರ ಹೆಸರನ್ನು ಬಳಸಿದಂತೆಯೇ, ಶರ್ಮರ ಹೆಸರನ್ನು ಮತ್ತು ಅವರ ಕಣ್ಣಲ್ಲಿ ನೀರು ಬಂತು ಎಂದು ತಾನು ಹೇಳುತ್ತಿದ್ದೇನೆ ಎಂಬ ವಿವರವನ್ನು ಕೂಡ ಒಂದು ತಾಯಿತದಂತೆ ಬಳಸುತ್ತಿದ್ದಾರೆ ಅನ್ನಬೇಕು.

ಇದೆಲ್ಲ ತೀರ ಕಟುವಾದ ಮಾತು, ಅನಗತ್ಯ ಸಂಶಯದ ನಿಲವಿನಿಂದ ಬಂದದ್ದು ಅನ್ನಿಸಬಹುದು. ಆದರೆ ಅಂದು ಶರ್ಮರ ಕಣ್ಣಲ್ಲಿ (ಮತ್ತು ಅವರಂಥ ಲಕ್ಷಾಂತರ ಜನರ ಕಣ್ಣಲ್ಲಿ) ನೀರು ಬಂದದ್ದಕ್ಕೆ ಹೊಣೆ ಹೊರಬೇಕಾದದ್ದು ‘ಅಂದಿನ ಪ್ರಧಾನಿಯೋ…’ ಎಂದು ಆರಂಭಿಸಿ, ‘ನ್ಯಾಯಾಂಗ ವ್ಯವಸ್ಥೆಯೋ’ ಎಂದು ಕೊನೆಗೊಳಿಸುವುದರವರೆಗೆ ಅಲಾಯಿದವಾಗಿ ಒಂದಷ್ಟು ವ್ಯಕ್ತಿ, ಹುದ್ದೆ, ಹಾಗೂ ಸಂಸ್ಥೆಗಳನ್ನು ಹೆಸರಿಸುವ ಬೆಳವಾಡಿಯವರು ಮುಖ್ಯ, ಮೂಲಭೂತ ಹೊಣೆ ಹೊರಬೇಕಾದ ಶಕ್ತಿ ಮತ್ತು ಸಿದ್ಧಾಂತಗಳನ್ನು ಹೆಸರಿಸುವುದಿಲ್ಲ. ಅಂದಿನಿಂದ ಇಂದಿನವರೆಗೆ, ದೇಶದ ಅನೇಕ ಜನರ ಮನಸ್ಸು ಮತ್ತು ಆತ್ಮಗಳಲ್ಲಿ ಹಾಲಾಹಲದಂಥ ನಂಜು ಹರಡಿರುವುದಕ್ಕೆ, ಅದರಿಂದ ಸಾವಿರಾರು ಜನರು ಸಾವುನೋವಿಗೆ ತುತ್ತಾದದ್ದಕ್ಕೆ, ದೇಶದ ಇಂದಿನ ಅತಿದಾರುಣ ಪರಿಸ್ಥಿತಿಗೆ, ಭಾರತೀಯ ಸಂಸ್ಕೃತಿ ಎಂದು ಕರೆಯಲಾಗುವುದರ ಅತಿವಿಕೃತ ರೂಪಕ್ಕೆ, ಮುಖ್ಯ, ಮೂಲಭೂತ ಹೊಣೆ ಹೊರಬೇಕಾದದ್ದು ಸಂಘ ಪರಿವಾರ, ಅದರ ಸಿದ್ಧಾಂತ, ಅದರ ಕೆಲಸಕಾರ್ಯ ಮತ್ತು ಬಿಜೆಪಿಯೇ ಅಲ್ಲವೇ?  ಬೆಳವಾಡಿಯವರು ಅದೊಂದನ್ನು ಹೇಳದೆ, ಬೇರೆಲ್ಲವನ್ನು ಗಳಹಿ ಓದುಗರನ್ನು ಏಮಾರಿಸುವ ಪ್ರಯತ್ನಮಾಡುತ್ತಾರೆ. ಹಾಗಾಗಿಯೆ ಅವರನ್ನು ಕುರಿತು ಇಷ್ಟು ಕಟುವಾದ ಮಾತು, ಇಷ್ಟು ಸಂಶಯದ ನಿಲವು.


ಆ ಮಾತು, ನಿಲವು, ಮತ್ತು ಈ ಬರಹದ ಹಿಂದೆ ಇರುವುದು ತೀವ್ರವಾದೊಂದು ದುಃಖ.

ಮಾತು ಜ್ಯೋತಿರ್ಲಿಂಗ. ಬೆಳವಾಡಿ ಮತ್ತು ಅವರ ಸ್ನೇಹಿತರಂತೆ ಗಳಹುವವರು, ಸಾಹಿತ್ಯಕ-ಸಾಂಸ್ಕೃತಿಕ ವೇದಿಕೆಗಳಮೇಲಿನ ತಮ್ಮ ಪ್ರಲಾಪ, ತಮ್ಮ ವಿಡಿಯೋ-ಆಡಿಯೋ ಭಾಷಣ ಮತ್ತು ಚರ್ಚೆ, ಹಾಗೂ ಬರಹಗಳಿಂದ, ಮಾತಿಗಿರುವ ಪಾವಿತ್ರ್ಯವನ್ನೇ ನಾಶಮಾಡುತ್ತಾರೆ. ಹದಿನಾಲ್ಕು ಲೋಕಗಳ ಸದ್ದರ್ಶನ ಮಾಡಿಸಬೇಕಾದ ಜ್ಯೋತಿರ್ಲಿಂಗ ಇವರ  ಕೈಯಲ್ಲಿ  ಬಗ್ಗಡಗೊಂಡು ನೂರು ಚೂರು; ವಾಗ್ದೇವಿ, ಸದರ, ಹಾದರದ ವಸ್ತು.

ದುಃಖ, ಅದರಿಂದ.

ಇಂಥ ದುಃಖದಲ್ಲಿ, ಜರ್ಮನ್ ಕಾದಂಬರಿಯೊಂದರ ನೆನಪಾಗುತ್ತದೆ.  ಆ ಕಾದಂಬರಿಯ ಹೆಸರು ಮೆಫಿಸ್ಟೊ (Mephisto). ಅದನ್ನು ಬರೆದವನು ಮಹಾನ್ ಕಾದಂಬರಿಕಾರ ಥಾಮಸ್‍ ಮನ್‍ನ ಮಗ ಕ್ಲಾಸ್ ಮನ್ (Klaus Mann). ಕ್ಲಾಸ್ ಮನ್‍ನ ಆ ಕಾದಂಬರಿ 1936 ಪ್ರಕಟವಾಗಿ, ಸಾಕಷ್ಟು ಪ್ರಸಿದ್ಧವಾಯಿತು. ಬಳಿಕ, 1981ರಲ್ಲಿ ಇಸ್ತ್ವಾನ್ ಜಾ಼ಬೋ (Istvan Szabo) ಎಂಬಾತನ ನಿರ್ದೇಶನದಲ್ಲಿ ಚಲನಚಿತ್ರವಾಗಿ ಮತ್ತಷ್ಟು ಪ್ರಸಿದ್ಧವಾಯಿತು. ಆ ಕಾದಂಬರಿಯ ಮುಖ್ಯಪಾತ್ರವು ನಾಟ್‍ಜಿ಼ ಜರ್ಮನಿಯ ರಂಗಭೂಮಿಯಲ್ಲಿನ ತಾರಾನಟನೊಬ್ಬನದ್ದು.

ನಾಟ್‍ಜಿ಼ಗಳು  ಅಧಿಕಾರಕ್ಕೆ ಬರುವ ಮುನ್ನ ಎಡಪಂಥೀಯನಾಗಿದ್ದ ಆ ನಟ, ಅವರು ಅಧಿಕಾರಕ್ಕೆ ಬಂದಮೇಲೆ ಅವರ ಜೊತೆ ಹೊಂದಾಣಿಕೆ ಮಾಡಿಕೊಂಡು ತನ್ನ ವೃತ್ತಿಜೀವನದಲ್ಲಿ ಬಹಳ ಯಶಸ್ಸು ಗಳಿಸುತ್ತಾನೆ; ನಾಟ್‍ಜೀ಼ಗಳಿಂದ ತಾನು ಭಿನ್ನ ಎಂದು (ತಾನು ತನಗೇ ಆದರೂ) ಋಜುಮಾಡಿಕೊಳ್ಳಲು ಅರೆಮನಸ್ಸಿನ, ದುರ್ಬಲ ಪ್ರಯತ್ನ ಮಾಡುತ್ತಾನೆಯಾದರೂ ಅವರ ರಾಜ್ಯಭಾರದಲ್ಲಿ ತನ್ನ ಯಶಸ್ಸಿಗೆ ಎಂದೂ ಕುಂದಾಗದಂತೆ ಎಚ್ಚರವಹಿಸಿ, ಅವರೊಂದಿಗೆ ಶಾಮೀಲಾಗಿ, ಅವರ ವಕ್ತಾರನೇ ಆಗುತ್ತಾನೆ.

ಅವನು ತನ್ನ ಆ ಯಶಸ್ಸಿನ ಉತ್ತುಂಗಕ್ಕೇರುವುದು ಮಹಾಕವಿ ವೊಲ್ಫಗ್ಯಾಂಗ್ ಗಯಟೆಯ ಫೌಸ್ಟ್ (Faust) ಎಂಬ ದುರಂತ ನಾಟಕದಲ್ಲಿ ಮೆಫಿಸ್ಟೋ ಎಂಬ ಪಾತ್ರವನ್ನು ವಹಿಸುವುದರಿಂದಾಗಿ. ಆ ನಾಟಕದಲ್ಲಿ, ಫೌಸ್ಟ್ ಎಂಬ ವಿದ್ವಾಂಸ, ಜಗತ್ತಿನ ಎಲ್ಲ ಜ್ಞಾನವೂ, ಪ್ರಕೃತಿಯ ಎಲ್ಲ ಶಕ್ತಿಗಳೂ ತನ್ನ ವಶವಾಗಬೇಕು ಎಂಬ ದುರಾಕಾಂಕ್ಷೆಯಿಂದ, ಅವೆಲ್ಲವನ್ನೂ ತನಗೆ ಕೊಡಿಸುವುದಾಗಿ ನಂಬಿಸುವ ಶೈತಾನನ ಜೊತೆ (ಮೆಫಿಸ್ಟೊಫಿಲೀಸ್, ಮೆಫಿಸ್ಟೊನ ಜೊತೆ) ಒಪ್ಪಂದ ಮಾಡಿಕೊಂಡು, ಆ ಒಪ್ಪಂದದಂತೆ ತನ್ನ ಆತ್ಮವನ್ನು ಶೈತಾನನಿಗೆ ಮಾರಿಕೊಳ್ಳುತ್ತಾನೆ, ಅಥವಾ ಅಡವಿಡುತ್ತಾನೆ. ಗಯಟೆ ತನ್ನ ನಾಟಕ ಬರೆಯುವುದಕ್ಕೆ ಮುಂಚಿನಿಂದಲೂ, ಈಗ್ಗೆ ಐನೂರಕ್ಕೂ ಹೆಚ್ಚಿನ ವರ್ಷಗಳಿಂದಲೂ, ಫೌಸ್ಟ್‍ನ ಆ ಕಥೆಯು ಯೂರೋಪಿನಲ್ಲಿ, ಮತ್ತೀಗ ಅಧುನಿಕ  ಜಗತ್ತಿನಲ್ಲಿ, ಆತ್ಮದ ಒತ್ತೆಯ, ಅದರ ನಾಶದ ಒಂದು ಮಹಾರೂಪಕವಾಗಿ ನಿಂತಿದೆ. ಹೀಗೆ ಹೇಳುವಾಗ, ಮೆಫಿಸ್ಟೊಪಿಲೀಸ್ ಅನ್ನುವುದು ಸ್ಟಾಲಿನ್‍ವಾದ, ಮಾವೋವಾದ, ಇಸ್ಲಾಮವಾದ, ಜ಼ಯೋನ್‍ವಾದ, ಹಿಂದೂತ್ವವಾದ, ಮತ್ತು ಅವುಗಳಂಥ ಯಾವುದೇ ವಾದ ಆಗಬಹುದು ಎಂಬ ಅರಿವು ನನಗಿದೆ.

ಕ್ಲಾಸ್‍ ಮನ್‍ನ ಕಾದಂಬರಿಯ ನಾಯಕ ಆ ಪಾತ್ರವಹಿಸಿ ತನಗೆ ಎಂದೂ ಇಲ್ಲದಿದ್ದಷ್ಟು ವರ್ಚಸ್ಸು ಗಳಿಸುತ್ತಹೋದಂತೆ ಕಂಡುಕೊಳ್ಳುತ್ತಾನೆ, ನಿಜಕ್ಕೂ ತಾನೇ ಫೌಸ್ಟ್‍ನ ಪ್ರತಿರೂಪವಾಗಿದ್ದು, ಶೈತಾನನ ಪ್ರತಿರೂಪವಾದ ನಾಟ್‍ಜೀ಼ ದೊರೆಗಳಿಗೆ ತನ್ನ ಆತ್ಮವನ್ನು ಮಾರಿಕೊಂಡಿದ್ದೇನೆ ಎಂದು.

ಅಂದಹಾಗೆ, ಇದೆಲ್ಲ ಕತೆ, ಕಾದಂಬರಿಗಳ ಲೋಕದಲ್ಲಿ ಮಾತ್ರ ನಡೆಯುಂಥದು ಎಂದು ತಿಳಿಯಬಾರದು. ಕ್ಲಾಸ್‍ ಮನ್ Mephistoವನ್ನು ಬರೆದದ್ದು ತನ್ನದೇ ಸೋದರ ಸಂಬಂಧಿಯಾದ ಗುಸ್ಟಾಫ್ ಗ್ರುಂಡ್‍ಜೆನ್ಸ್ (Gustaf Grundgens) ಎಂಬಾತ ನಾಟ್‍ಜೀ಼ಗಳ ಜೊತೆ ಕೈಗೂಡಿಸಿ ರಂಗನಟನೆಯ ತನ್ನ ವೃತ್ತಿಯಲ್ಲಿ ಅಪಾರ ಅಧಿಕಾರ ಮತ್ತು ಯಶಸ್ಸು ಗಳಿಸಿದ್ದನ್ನು ಕಂಡು.

ಇನ್ನು ಹೆಚ್ಚೇನೂ ಹೇಳಬೇಕಿಲ್ಲ.

ಮಾರಿಕೊಂಡವರ ತಂಬೂರಿ ಸ್ವರ ಶಿಶುನಾಳಾಧೀಶ ಮೆಚ್ಚ.

(ನ್ಯಾಯಪಥ ಪತ್ರಿಕೆಯಲ್ಲಿ ಅಚ್ಚಾದ ಲೇಖನವನ್ನು ಇಲ್ಲಿ ತುಸು ತಿದ್ದಿ, ಬೆಳೆಸಿದೆ).

ರಘುನಂದನ

ರಘುನಂದನ


ಕವಿ, ನಾಟಕಕಾರ ರಘುನಂದನ ಖ್ಯಾತ ರಂಗಭೂಮಿ ನಿರ್ದೇಶಕರು. ದೇಶದಲ್ಲಿ ಹೆಚ್ಚುತ್ತಿರುವ ಅಸಹನೆ ಮತ್ತು ಕೋಮು ದ್ವೇಷದ ವಿದ್ಯಮಾನವನ್ನು ವಿರೋಧಿಸಿ 2018ರಲ್ಲಿ ಅವರಿಗೆ ನೀಡಲಾಗಿದ್ದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸದೆ ಹಿಂದೆ ಸರಿದಿದ್ದರು. ‘ಎತ್ತ ಹಾರಿದೆ ಹಂಸ…’ ಅವರ ಪ್ರಕಟಿತ ನಾಟಕಗಳಲ್ಲಿ ಒಂದು.


ಇದನ್ನೂ ಓದಿ: ಬಾಬರಿ ತೀರ್ಪಿತ್ತ ದಿನ ಇತರ ನ್ಯಾಯಮೂರ್ತಿ‌ಗಳನ್ನು ಡಿನ್ನರ್‌ಗೆ ಕರೆದೊಯ್ದು, ಉತ್ತಮ ವೈನ್‌ ಕೊಡಿಸಿದ್ದೆ: ನಿವೃತ್ತ ಸಿಜೆಐ ರಂಜನ್ ಗೊಗೊಯ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...