ಪತ್ರಕರ್ತರು, ಸಾಮಾಜಿಕ ಹೋರಾಟಗಾರರು, ರಾಜಕಾರಣಿಗಳು ಸೇರಿ ದೇಶದ 300 ಕ್ಕೂ ಹೆಚ್ಚು ಜನರನ್ನು ಇಸ್ರೇಲಿ ಸ್ಪೈವೇರ್ ಪೆಗಾಸಸ್ ಅನ್ನು ಬಳಸಿ ಸರ್ಕಾರಿ ಸಂಸ್ಥೆಗಳು ಬೇಹುಗಾರಿಕೆ ನಡೆಸಿದ್ದಾರೆ ಎಂಬ ಆರೋಪದ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಈ ಕುರಿತು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ವಕೀಲ ಎಂ.ಎಲ್.ಶರ್ಮಾ, ’ಪೆಗಾಸಸ್ ಹಗರಣವು ಭಾರೀ ಗಂಭೀರ ವಿಷಯವಾಗಿದೆ. ಭಾರತದ ಪ್ರಜಾಪ್ರಭುತ್ವ, ನ್ಯಾಯಾಂಗ ಮತ್ತು ದೇಶದ ಭದ್ರತೆಯ ಮೇಲೆ ನಡೆದಿರುವ ಗಂಭೀರ ದಾಳಿ’ ಎಂದು ಹೇಳಿದ್ದಾರೆ.
“ಖಾಸಗಿತನ ಎಂದರೆ ಮರೆಮಾಚುವ ಬಯಕೆಯಲ್ಲ, ಇದು ನಮ್ಮ ಆಲೋಚನೆಗಳು ಮತ್ತು ಅಸ್ತಿತ್ವವನ್ನು ಇಟ್ಟುಕೊಳ್ಳುವ ಒಂದು ಸ್ಥಳಾವಕಾಶ. ಇದು ಬೇರೊಬ್ಬರ ಉದ್ದೇಶಗಳ ಸಾಧನವಾಗಬಾರದು. ಇದು ಘನತೆಯ ಅತ್ಯಗತ್ಯ ಅಂಶವಾಗಿದೆ” ಎಂದು ವಕೀಲರ ಅರ್ಜಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಪೆಗಾಸಸ್ ಫೋನ್ ಹ್ಯಾಕ್‌ಗೆ ಒಳಗಾದವರು ಯಾರು ಯಾರು? ಪ್ರಮುಖ 30 ಜನರ ಪಟ್ಟಿ ಇಲ್ಲಿದೆ
ಪೆಗಾಸಸ್ ಸ್ಪೈವೇರ್ ಕೇವಲ ಸಂಭಾಷಣೆಗಳನ್ನು ಕೇಳುವುದಕ್ಕೆ ಬಳಸಲಾಗುವುದಿಲ್ಲ. ಒಬ್ಬ ವ್ಯಕ್ತಿಯ ಜೀವನದ ಸಂಪೂರ್ಣ ಮಾಹಿತಿ ಪಡೆಯಲು ಇದನ್ನು ಬಳಸಬಹುದು. ಏಕೆಂದರೆ ಇದು ಫೋನ್ ಹ್ಯಾಕ್ ಮಾಡಿದ ವ್ಯಕ್ತಿಯಲ್ಲದೇ, ಆತನ ಸಂಪರ್ಕದಲ್ಲಿರುವ ಪ್ರತಿಯೊಬ್ಬರನ್ನು ಅಸಹಾಯಕರನ್ನಾಗಿ ಮಾಡುತ್ತದೆ ಎಂದು ಹೇಳಲಾಗಿದೆ.
ಪೆಗಾಸಸ್ ಸ್ಪೈವೇರ್ ಕಣ್ಗಾವಲು ತಂತ್ರಜ್ಞಾನವಷ್ಟೇ ಅಲ್ಲದೆ, ಜಾಗತಿಕ ಭದ್ರತೆ, ಮಾನವ ಹಕ್ಕುಗಳು ಮತ್ತು ರಾಷ್ಟ್ರೀಯ ಭದ್ರತಾ ಪರಿಣಾಮಗಳ ಮೇಲೆ ಸೈಬರ್ ಆಯುಧವಾಗಿ ಕೆಲಸ ಮಾಡುತ್ತದೆ ಎನ್ನಲಾಗಿದೆ.
ಫಾರ್ಬಿಡನ್ ಸ್ಟೋರಿಸ್ ಬಿಡುಗಡೆ ಮಾಡಿರುವ ತನಿಖಾ ವರದಿ ‘ಪೆಗಾಸಸ್ ಪ್ರಾಜೆಕ್ಟ್’ ಜಗತ್ತಿನಾದ್ಯಂತ ಸುದ್ದಿಯಾಗುತ್ತಿದೆ. 2016 ರಿಂದ ವಿಶ್ವದಾದ್ಯಂತ 50,000 ಫೋನ್‌ಗಳನ್ನು ಪೆಗಾಸಸ್ ತಂತ್ರಾಂಶವು ಟ್ಯಾಪ್ ಮಾಡಿದೆ ಎನ್ನಲಾಗಿದ್ದು, ಇದರಲ್ಲಿ ನಮ್ಮ ದೇಶದ 300 ಕ್ಕೂ ಹೆಚ್ಚು ಜನರನ್ನು ಗುರಿಮಾಡಲಾಗಿದೆ ಎಂದು ವರದಿಯಾಗಿದೆ.
ಪೆಗಾಸಸ್ ಹಗರಣದ ಬಗ್ಗೆ ಸುಮೋಟೊ ಕೇಸ್ ದಾಖಲಿಸಿಕೊಂಡು ಸ್ವತಂತ್ರ ತನಿಖಾ ಸಮಿತಿಯನ್ನು ರಚಿಸುವಂತೆ ಸುಪ್ರೀಂ ಕೋರ್ಟ್‌ಗೆ ಶಿವಸೇನೆ ಬುಧವಾರ ಮನವಿ ಮಾಡಿತ್ತು. ದೇಶಾದ್ಯಂತ ಕಾಂಗ್ರೆಸ್ ಪೆಗಾಸಸ್ ಹಗರಣದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.
ಇದನ್ನೂ ಓದಿ: ಪೆಗಾಸಸ್ ಹಗರಣ: ಒಕ್ಕೂಟ ಸರ್ಕಾರದ ವಿರುದ್ಧ ಟಿಎಂಸಿ, ಶಿವಸೇನೆ ವಾಗ್ದಾಳಿ


