ಕೇಂದ್ರ ಸರ್ಕಾರ ಐದು ವರ್ಷಗಳ ಹಿಂದೆ ಪ್ರಾರಂಭಿಸಿದ ‘ಡಿಜಿಟಲ್ ಇಂಡಿಯಾ’ ಮಿಷನ್ ಅನ್ನು ಸರ್ಕಾರದ ಯೋಜನೆಯಾಗಿ ನೋಡಲಾಗುತ್ತಿಲ್ಲ ಇದು ಜೀವನದ ವಿಧಾನವಾಗಿ ಮಾರ್ಪಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಬೆಂಗಳೂರು ಟೆಕ್ ಸಮ್ಮಿಟ್-2020ಗೆ ಚಾಲನೆ ನೀಡಿ ಮಾತನಾಡಿದ್ದಾರೆ.
ಇಂದಿನಿಂದ ನ. 21ರವರೆಗೆ ಮೂರು ದಿನಗಳ ಕಾಲ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ 23ನೇ ಆವೃತ್ತಿಯ ಬೆಂಗಳೂರು ಟೆಕ್ ಸಮ್ಮಿಟ್-2020 ನಡೆಯಲಿದೆ. ಟೆಕ್ ಸಮ್ಮಿಟ್‌ಗೆ ಪ್ರಧಾನಿ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಿಸಿಎಂ ಅಶ್ವತ್ಥ್ ನಾರಾಯಣ್ ಸೇರಿದಂತೆ ಅನೇಕ ಗಣ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
“ಡಿಜಿಟಲ್ ಇಂಡಿಯಾಕ್ಕೆ ಧನ್ಯವಾದಗಳು, ನಮ್ಮ ರಾಷ್ಟ್ರವು ಅಭಿವೃದ್ಧಿಗೆ ಹೆಚ್ಚು ಮಾನವ ಕೇಂದ್ರಿತ ವಿಧಾನವನ್ನು ನೋಡಿದೆ. ತಂತ್ರಜ್ಞಾನವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಬಳಸುವುದರಿಂದ ನಮ್ಮ ಜನರ ಹಲವಾರು ಜೀವನ ಶೈಲಿಯಲ್ಲಿ ಬದಲಾವಣೆಗಳು ಬಂದಿವೆ” ಎಂದು ಪ್ರಧಾನಿ ಹೇಳಿದರು.
ಇದನ್ನೂ ಓದಿ: ’ಸಾಲ್ ಮುಬಾರಕ್’ ಪದ ಬಳಕೆಗೆ ಆಕ್ಷೇಪ: ಟ್ರೋಲ್‌ಗೊಳಗಾದ ಮೋದಿ ಸಮರ್ಥಕ ಮೋಹನ್‌ದಾಸ್ ಪೈ!
ಡಿಜಿಟಲ್ ಮತ್ತು ಟೆಕ್ ಪರಿಹಾರಗಳಿಗಾಗಿ ಸರ್ಕಾರ ಯಶಸ್ವಿಯಾಗಿ ಮಾರುಕಟ್ಟೆಯನ್ನು ಸೃಷ್ಟಿಸಿದೆ, ಇದು ತಂತ್ರಜ್ಞಾನವನ್ನು ಎಲ್ಲಾ ಯೋಜನೆಗಳ ಪ್ರಮುಖ ಭಾಗವನ್ನಾಗಿ ಮಾಡಿದೆ. “ನಮ್ಮ ಆಡಳಿತ ಮಾದರಿಯೇ ಟೆಕ್ನಾಲಜಿ ಫಸ್ಟ್ ” ಎಂದು ಪ್ರಧಾನಿ ಮೋದಿ ಹೇಳಿದರು.
ಕೈಗಾರಿಕೆಯಿಂದ ಮಾಹಿತಿ ಯುಗಕ್ಕೆ ಪರಿವರ್ತನೆಯ ಬಗ್ಗೆ ಮಾತನಾಡಿದ ಮೋದಿ, “ಕೈಗಾರಿಕಾ ಯುಗದ ಸಾಧನೆಗಳು ಹಿಂದಿನ ನೋಟ ಕನ್ನಡಿಯಲ್ಲಿವೆ, ಈಗ ನಾವು ಮಾಹಿತಿ ಯುಗದ ಮಧ್ಯದಲ್ಲಿದ್ದೇವೆ. ಭವಿಷ್ಯವು ನಿರೀಕ್ಷೆಗಿಂತ ಬೇಗ ಬರಲಿದೆ ಎಂದು ಮೋದಿ ಹೇಳಿದರು.
ಬೆಂಗಳೂರು ಟೆಕ್ ಸಮ್ಮಿಟ್-2020 ರಲ್ಲಿ 25ಕ್ಕೂ ಹೆಚ್ಚು ದೇಶಗಳು ಭಾಗಿಯಾಗಿವೆ. ಸಮ್ಮಿಟ್ನಲ್ಲಿ ಕೃಷಿ, ಸಂಶೋಧನೆ ಮತ್ತು ಅಭಿವೃದ್ಧಿ, ಸ್ಟಾರ್ಟ್ ಅಪ್ ಪಾಲುದಾರಿಕೆ ವಲಯಗಳಲ್ಲಿ 7 ಒಪ್ಪಂದಗಳಿಗೆ ಸಹಿ ಹಾಕಲಾಗುತ್ತದೆ. ಜಾಗತಿಕ ಆವಿಷ್ಕಾರ ಮೈತ್ರಿಗೆ ಸಂಬಂಧಿಸಿದಂತೆ 15 ಅಧಿವೇಶನಗಳು ನಡೆಯಲಿವೆ. 60ಕ್ಕೂ ಹೆಚ್ಚು ಭಾಷಣಕಾರರು ಉಪನ್ಯಾಸ ನೀಡಲಿದ್ದಾರೆ. ಆನ್‌ಲೈನ್ ಮೂಲಕ ಸಾರ್ವಜನಿಕರು ಕೂಡ ಸಮ್ಮಿಟ್ನಲ್ಲಿ ಭಾಗವಹಿಸಬಹುದು.


