ಹೊಸದಾಗಿ ನಿರ್ಮಿಸಲಾಗುತ್ತಿರುವ ಸಂಸತ್ ಭವನಕ್ಕೆ ಡಿಸೆಂಬರ್ 10ಕ್ಕೆ ಪ್ರಧಾನಿ ನರೇಂದ್ರ ಮೋದಿ ಅಡಿಪಾಯ ಹಾಕುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ನೇತೃತ್ವದಲ್ಲಿ 861.90 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹೊಸ ಸಂಸತ್ತಿನ ಕಟ್ಟಡ ನಿರ್ಮಿಸಲಾಗುತ್ತಿದೆ.
ಸಂಸತ್ತಿನ ಸಂಕೀರ್ಣದಲ್ಲಿರುವ ಮಹಾತ್ಮ ಗಾಂಧಿ ಮತ್ತು ಭೀಮ್ ರಾವ್ ಅಂಬೇಡ್ಕರ್ ಸೇರಿದಂತೆ ಸುಮಾರು ಐದು ಪ್ರತಿಮೆಗಳನ್ನು ನಿರ್ಮಾಣ ಕಾರ್ಯದಿಂದಾಗಿ ತಾತ್ಕಾಲಿಕವಾಗಿ ಸ್ಥಳಾಂತರಿಸುವ ಸಾಧ್ಯತೆಯಿದೆ. ಯೋಜನೆ ಪೂರ್ಣಗೊಂಡ ನಂತರ ಹೊಸ ಸಂಸತ್ ಭವನ ಆವರಣದ ಪ್ರಮುಖ ತಾಣಗಳಲ್ಲಿ ಈ ಪುತ್ಥಳಿಗಳನ್ನು ಮರು ಸ್ಥಾಪಿಸಲಾಗುತ್ತದೆ ಎಂದು ಹೇಳಲಾಗಿದೆ.
ಹೊಸ ಸಂಸತ್ತಿನ ಕಟ್ಟಡಕ್ಕೆ ಶಂಕುಸ್ಥಾಪನೆ ದಿನಾಂಕ ಡಿಸೆಂಬರ್ 10ರ ಆಸುಪಾಸಿನಲ್ಲಿ ನಿಗದಿಯಾಗುವ ಸೂಚನೆಗಳಿದ್ದರೂ, ಪ್ರಧಾನಿ ಮೋದಿಯವರ ಲಭ್ಯತೆ ಆಧರಿಸಿ ದಿನಾಂಕವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ದೆಹಲಿ ಚಲೋಗೆ ಮುನ್ನ ಡಜನ್‌ಗಟ್ಟಲೇ ರೈತ ಮುಖಂಡರ ಬಂಧನ: ಯೋಗೇಂದ್ರ ಯಾದವ್ ಆರೋಪ
ಸೆಂಟ್ರಲ್ ವಿಸ್ತಾ ಪುನರಾಭಿವೃದ್ಧಿ ಯೋಜನೆಯಡಿ ಹೊಸ ಕಟ್ಟಡವನ್ನು ಈಗಿರುವ ಕಟ್ಟಡದ ಸಮೀಪದಲ್ಲಿ ಹೊಸಕಟ್ಟಡ ನಿರ್ಮಿಸಲಾಗುವುದು ಮತ್ತು ನಿರ್ಮಾಣ ಕಾರ್ಯಗಳು ಪ್ರಾರಂಭವಾದಾಗಿನಿಂದ 21 ತಿಂಗಳಲ್ಲಿ ಪೂರ್ಣಗೊಳಿಸುವ ನಿರೀಕ್ಷೆಯಿದೆ.
ತ್ರಿಕೋನ ಆಕಾರದಲ್ಲಿ ನಿರ್ಮಾಣವಾಗಲಿರುವ ಸಂಸತ್ ಭವನದ ಜತೆಗೆ ಕೇಂದ್ರೀಯ ಸಚಿವಾಲಯಗಳ ಮತ್ತು ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ 3 ಕಿ.ಮೀ ಉದ್ದದ ರಾಜ್‌ಪತ್ ಮಾರ್ಗವನ್ನು ಪುನರುಜ್ಜೀವನಗೊಳಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಯೋಜನೆಯ ಪ್ರಕಾರ, ಎಲ್ಲಾ ಸಂಸದರಿಗೆ ಪ್ರತ್ಯೇಕ ಕಚೇರಿಗಳನ್ನು ಹೊಂದಿರುವ ಹೊಸ ಸಂಸತ್ತಿನ ಕಟ್ಟಡವು ಇತ್ತೀಚಿನ ಡಿಜಿಟಲ್ ಸಂಪರ್ಕಸಾಧನಗಳನ್ನು ಹೊಂದಲಿದೆ. ಭವ್ಯವಾದ ಸಂವಿಧಾನ ಭವನ, ಸಂಸತ್ತಿನ ಸದಸ್ಯರಿಗೆ ವಿಶ್ರಾಂತಿ ಕೋಣೆ, ಗ್ರಂಥಾಲಯ, ಬಹು ಸಮಿತಿ ಕೊಠಡಿಗಳು, ಊಟದ ಪ್ರದೇಶಗಳು ಮತ್ತು ಸಾಕಷ್ಟು ಪಾರ್ಕಿಂಗ್ ಸ್ಥಳವನ್ನು ಹೊಂದಿರಲಿದೆ.
ಈಗಿರುವ ಸಂಸತ್ ಭವನಕ್ಕೆ ಫೆಬ್ರವರಿ 12, 1921 ರಂದು ಅಡಿಪಾಯ ಹಾಕಲಾಗಿತ್ತು. ಭವನ ನಿರ್ಮಾಣಕ್ಕೆ 83 ಲಕ್ಷ ರೂಪಾಯಿ ವೆಚ್ಚವಾಗಿತ್ತು, ಸಂಸತ್ ಭವನ ಪೂರ್ಣಗೊಳ್ಳಲು ಆರು ವರ್ಷಗಳನ್ನು ತೆಗೆದುಕೊಂಡಿತು. ಜನವರಿ 18, 1927 ರಂದು ಅಂದಿನ ಭಾರತದ ಗವರ್ನರ್ ಜನರಲ್ ಲಾರ್ಡ್ ಇರ್ವಿನ್ ಉದ್ಘಾಟನೆ ಮಾಡಿದ್ದರು. ಈಗಿನ ಸೆಂಟ್ರಲ್ ವಿಸ್ತಾಗೆ 861 ಕೋಟಿ ರೂ ವೆಚ್ಚ ಮಾಡುವ ಅಗತ್ಯವಿದೆಯೇ ಎಂಬ ಪ್ರಶ್ನೆಗಳು ಸಹ ಎದ್ದಿವೆ.


