ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು 17 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ರೈತರ ಪ್ರತಿಭಟನೆ ನಡುವೆಯೂ ಕಾಯ್ದೆಗಳನ್ನು ಸಮರ್ಥಿಸಿಕೊಳ್ಳುತ್ತಿದೆ. ಪ್ರಧಾನಿ ಇಂದು ಮತ್ತೊಮ್ಮೆ ಈ ಕಾಯ್ದೆಗಳು ರೈತರಿಗೆ ಅನುಕೂಲವಾಗಲೆಂದೇ ರೂಪಿಸಲಾಗಿದೆ ಎಂದು ಮತ್ತೆ ಕಾಯ್ದೆಗಳ ಗುಣಗಾನ ಮಾಡಿದ್ದಾರೆ.
‘ಕೆಲವು ತಿಂಗಳ ಹಿಂದೆ ಕೇಂದ್ರ ಸರ್ಕಾರವು ಶಾಸನಬದ್ಧಗೊಳಿಸಿರುವ ಕೃಷಿ ಕಾನೂನುಗಳು, ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳ ನಡುವಿನ ಅಡೆತಡೆಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ. ರೈತರಿಗೆ ತಂತ್ರಜ್ಞಾನ ಲಭ್ಯವಾಗುವಂತೆ ಮಾಡಲಿವೆ. ರೈತರಿಗೆ ನೆರವಾಗುವಂತಹ ಹೂಡಿಕೆಗಳನ್ನು, ಮಾರುಕಟ್ಟೆಗಳನ್ನು ಸೃಷ್ಟಿಸುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (FICCI) ವಾರ್ಷಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ, “ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ತಡೆಗೋಡೆಗಳು ಹೆಚ್ಚಾಗಿದ್ದವು. ಈಗ ಕೃಷಿ ಮೂಲಸೌಕರ್ಯ, ಆಹಾರ ಸಂಸ್ಕರಣೆ, ಸಂಗ್ರಹಣೆ, ಶೀಥಲೀಕರಣಗಳಿಗೆ ಇದ್ದ ತಡೆಗೋಡೆಗಳನ್ನು ತೆರವುಗೊಳಿಸಲಾಗಿದೆ’ ಎಂದರು. ಈ ಸುಧಾರಣೆಗಳು ರೈತರಿಗೆ ಹೊಸ ಮಾರುಕಟ್ಟೆಗಳು, ತಂತ್ರಜ್ಞಾನದ ಅನುಕೂಲಗಳು ಮತ್ತು ಹೂಡಿಕೆಗಳನ್ನು ತರಲು ಸಹಾಯ ಮಾಡುತ್ತದೆ. ನನ್ನ ದೇಶದ ರೈತರು ಈ ಎಲ್ಲದರಿಂದ ಹೆಚ್ಚಿನ ಲಾಭ ಪಡೆಯುತ್ತಾರೆ “ಎಂದು ಮೋದಿ ಕೃಷಿ ಕಾಯ್ದೆಗಳ ಗುಣಗಾನ ಮಾಡಿದ್ದಾರೆ.
ಇದನ್ನೂ ಓದಿ: ನಿಲ್ಲದ ರೈತ ಹೋರಾಟ: 100 ಪತ್ರಿಕಾಗೋಷ್ಟಿ, 700 ಸಭೆಗಳ ಮೂಲಕ ಪ್ರಚಾರಕ್ಕೆ ಹೊರಟ ಬಿಜೆಪಿ!
ಸೆಪ್ಟೆಂಬರ್‌ನಲ್ಲಿ ಅಂಗೀಕರಿಸಲಾದ ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ದೇಶಾದ್ಯಂತ ಸಾವಿರಾರು ರೈತರು, ವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣದವರು ಕಳೆದ 17 ದಿನಗಳಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ರೈತರ ಪ್ರತಿಭಟನೆಗೆ ಅನೇಕ ರಾಜಕೀಯ ಪಕ್ಷಗಳು ಬೆಂಬಲ ನೀಡಿವೆ. ಮೂರು ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಪಟ್ಟು ರೈತರು ಹಿಡಿದಿದ್ದಾರೆ. ಈ ಕುರಿತು ಕೇಂದ್ರ ಸರ್ಕಾರದೊಂದಿಗಿನ ಅನೇಕ ಸುತ್ತಿನ ಮಾತುಕತೆಗಳು ರೈತರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ.
ಇಂತಹ ಸಂದರ್ಭದಲ್ಲಿ, ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿರುವ ಮಧ್ಯೆಯೇ ಪ್ರಧಾನಿಯವರು ಮತ್ತೆ ಕೃಷಿ ಕಾಯ್ದೆಗಳು ರೈತರಿಗೆ ಅನುಕೂಲ ಮಾಡಿಕೊಡಲಿವೆ ಎಂದಿದ್ದಾರೆ. ರೈತರೇ ಈ ಕಾಯ್ದೆಗಳ ಬಗ್ಗೆ ಆತಂಕ ವ್ಯಕ್ತಿಪಡಿಸುತ್ತಿದ್ದರೂ ಸರ್ಕಾರ ಮಾತ್ರ ಕಾಯ್ದೆಯನ್ನು ಪದೇ ಪದೇ ಸಮರ್ಥನೆ ಮಾಡಿಕೊಳ್ಳುತ್ತಿದೆ.


