ಕಾಂಗ್ರೆಸ್ ಪಕ್ಷದ ಲೋಕಸಭೆ ಚುನಾವಣೆ ಪ್ರಣಾಳಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ‘ಮುಸ್ಲಿಂ ಲೀಗ್’ ಟೀಕೆಗೆ ತಿರುಗೇಟು ಕೊಟ್ಟಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಬಿಜೆಪಿ ನಾಯಕರು ಮೊದಲು ತಮ್ಮ ಪಕ್ಷದ ಇತಿಹಾಸವನ್ನು ನೋಡಬೇಕು; ಅದು ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
“ಅವರು ಸ್ವತಃ ಮುಸ್ಲಿಂ ಲೀಗ್ ಜೊತೆಗಿದ್ದರು; ಅವರ ಸಿದ್ಧಾಂತವು ಬಂಗಾಳದಲ್ಲಿ ಮುಸ್ಲಿಂ ಲೀಗ್‌ನೊಂದಿಗೆ ಸರ್ಕಾರವನ್ನು ರಚಿಸಿತು… ಅವರು ತಮ್ಮದೇ ಆದ ಇತಿಹಾಸವನ್ನು ಓದಬೇಕು …” ಎಂದು ಖರ್ಗೆ ಹೇಳಿದ್ದಾರೆ.
“ಪಿಎಂ ಮೋದಿ ಮನಸ್ಸಿನಲ್ಲಿ ಹಿಂದೂ-ಮುಸ್ಲಿಂ… ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯುವ, ಸಮಾಜ ಒಡೆಯುವ ಉದ್ದೇಶ ಇದೆ. ಅವರು ನಮ್ಮ ಪ್ರಣಾಳಿಕೆಯನ್ನು ಸರಿಯಾಗಿ ಓದಿಲ್ಲ. ಯುವಕರಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದೇವೆ. ಮಹಿಳೆಯರಿಗೆ ವಾರ್ಷಿಕ ₹1 ಲಕ್ಷದ ಜೊತೆಗೆ, ರೈತರಿಗೆ ಎಂಎಸ್‌ಪಿ ಗ್ಯಾರಂಟಿ ಕೊಡುತ್ತೇವೆ” ಎಂದು ಖರ್ಗೆ ಹೇಳಿದರು.
ಕಾಂಗ್ರೆಸ್ ಪ್ರಣಾಳಿಕೆಯು ಮುಸ್ಲಿಂ ಲೀಗ್‌ನ ಸಿದ್ಧಾಂತದ ಮುದ್ರೆಯನ್ನು ಹೊಂದಿದೆ ಎಂದು ಪ್ರಧಾನಿ ತಮ್ಮ ಲೋಕಸಭೆಯ ಪ್ರಚಾರ ಭಾಷಣಗಳಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಎಂಎಸ್‌ಪಿಗೆ ಕಾನೂನು ಖಾತರಿ, ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇಕಡಾ 50 ಮೀಸಲಾತಿ, ಅಗ್ನಿಪಥ್ ಯೋಜನೆ ರದ್ದು, ಮುಂದಿನ ಹತ್ತು ವರ್ಷಗಳಲ್ಲಿ ಜಿಡಿಪಿ ದ್ವಿಗುಣಗೊಳಿಸುವುದು, ಪಕ್ಷಾಂತರ ವಿರೋಧಿ ಕಾನೂನನ್ನು ಬಲಪಡಿಸುವುದು, ಚೀನಾದೊಂದಿಗೆ ಹಿಂದಿನ ಯಥಾಸ್ಥಿತಿಯನ್ನು ಮರುಸ್ಥಾಪಿಸುವುದು ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿದೆ.
ಇದನ್ನೂ ಓದಿ; ‘ನಕಲಿ ಎನ್ನುವುದಕ್ಕೆ ಅದು ನಿಮ್ಮ ಡಿಗ್ರಿ ಅಲ್ಲ..; ಶಿವಸೇನೆ ಕುರಿತ ಮೋದಿ ಟೀಕೆಗೆ ಉದ್ಧವ್ ತಿರುಗೇಟು


