ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಬುಧವಾರ (ಸೆಪ್ಟೆಂಬರ್ 17) “ಇದು ಮೇಲ್ನೋಟಕ್ಕೆ ವಿಚಾರಣೆಗೆ ಅರ್ಹವಾದ ಪ್ರಕರಣ” ಎಂದು ಮೌಖಿಕವಾಗಿ ಹೇಳಿದೆ.
2025ರ ಫೆಬ್ರವರಿ 28ರಂದು ವಿಚಾರಣಾ ನ್ಯಾಯಾಲಯವು ತನಗೆ ಸಮನ್ಸ್ ಜಾರಿ ಮಾಡಿದ್ದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಎರಡನೇ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿದೆ. ಪ್ರಕರಣದಲ್ಲಿ ದಾಖಲಿಸಲಾದ ಎಫ್‌ಐಆರ್ ಮತ್ತು ಸಲ್ಲಿಸಲಾದ ಚಾರ್ಜ್‌ಶೀಟ್ ಅನ್ನು ರದ್ದುಗೊಳಿಸುವಂತೆಯೂ ಯಡಿಯೂರಪ್ಪ ಕೋರಿದ್ದಾರೆ.
ಯಡಿಯೂರಪ್ಪ ಪರ ವಕೀಲರು ಮತ್ತು ರಾಜ್ಯ ಸರ್ಕಾರದ ವಾದವನ್ನು ದೀರ್ಘವಾಗಿ ಆಲಿಸಿದ ನಂತರ ನ್ಯಾಯಮೂರ್ತಿ ಎಂ.ಐ. ಅರುಣ್ ಅವರು “ಇದು ಮೇಲ್ನೋಟಕ್ಕೆ ವಿಚಾರಣೆಗೆ ಅರ್ಹವಾದ ಪ್ರಕರಣವಾಗಿದೆ. ಖಂಡಿತ ನಾನು ನಿಮ್ಮ ವಾದವನ್ನು ಆಲಿಸುತ್ತೇನೆ” ಎಂದು ಎಂದು ಯಡಿಯೂರಪ್ಪ ಪರ ವಕೀಲರಿಗೆ ಮೌಖಿಕವಾಗಿ ಹೇಳಿದ್ದಾರೆ.
ಮುಂದುವರಿದು, “ಯಡಿಯೂರಪ್ಪ ವಿರೋಧ ಪಕ್ಷದಲ್ಲಿದ್ದಾರೆ ಎಂಬುದು ಸತ್ಯ. ಅವರು ತನಗೆ ಅನಗತ್ಯವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಬಹುದು. ಈ ಕಿರುಕುಳವನ್ನು ತಡೆಗಟ್ಟಲು ಕೆಲವು ಅವಲೋಕನಗಳನ್ನು ಮಾಡಬಹುದು. ಸೆಕ್ಷನ್ 482 ನಿರ್ವಹಣೆಯ ಬಗ್ಗೆ ಸಾಮಾನ್ಯ ಅವಲೋಕನಗಳನ್ನು ಕೂಡ ಮಾಡಬಹುದು. “ಇದು ಮೇಲ್ನೋಟಕ್ಕೆ ವಿಚಾರಣೆಗೆ ಅರ್ಹವಾದ ಪ್ರಕರಣ ಎಂದಷ್ಟೇ ನಾನು ಹೇಳಬಲ್ಲೆ. ಇಲ್ಲದಿದ್ದರೆ, ಈ ವಿಷಯವನ್ನು ನಾನು ಒಂದು ವಾರಕ್ಕೂ ಹೆಚ್ಚು ಕಾಲ ಆಲಿಸಬೇಕಾಗುತ್ತದೆ” ಎಂದಿದ್ದಾರೆ.
“ಪೋಕ್ಸೊ ಕಾಯ್ದೆಯಡಿಯಲ್ಲಿ, ತಪ್ಪಿತಸ್ಥರನ್ನು ಶಿಕ್ಷಿಸಲು ಸಂತ್ರಸ್ತರ ಆರೋಪ ಮಾತ್ರವೇ ಸಾಕು. ಆದರೂ, ಸಂತ್ರಸ್ತರ ಹೇಳಿಕೆಯನ್ನು ಕಾನೂನಾತ್ಮಕವಾಗಿ ಪರಿಶೀಲನೆಗೆ ಒಳಪಡಿಸಬೇಕಿದೆ. ಈ ಪ್ರಕರಣದಲ್ಲಿ ಸಂತ್ರಸ್ತೆ ಮತ್ತು ಆಕೆಯ ತಾಯಿಯ ವಿರುದ್ಧ ಅರ್ಜಿದಾರ ಹನಿಟ್ರ್ಯಾಪ್ ಆರೋಪ ಮಾಡಬಹುದು. ಆದರೆ, ಅವೆಲ್ಲವೂ ವಿಚಾರಣೆಯ ವಿಷಯವಾಗುತ್ತವೆ” ಎಂದು ನ್ಯಾಯಾಲಯವು ಮೌಖಿಕವಾಗಿ ಹೇಳಿದೆ.
“ಪ್ರಾಯೋಗಿಕವಾಗಿ ನಿಮ್ಮ ಆತಂಕವೇನು? ಎಲ್ಲಿ ನೀವು ಕಿರುಕುಳಕ್ಕೊಳಗಾಗಬಹುದು ಎಂದು ಭಾವಿಸುತ್ತೀರಿ? ಅದಕ್ಕೆ ಸಂಬಂಧಿಸಿದಂತೆ ಯಾವ ಅವಲೋಕನವನ್ನು ನೀವು ಬಯಸುತ್ತೀರಿ? ಕಾರ್ಯವಿಧಾನದ ಕಿರುಕುಳ ಮತ್ತು ನ್ಯಾಯಯುತ ವಿಚಾರಣೆಗಾಗಿ ನೀವು ಸಲಹೆ ನೀಡಬಹುದು, ಮತ್ತು ನಾವು ವಿಚಾರಣಾ ನ್ಯಾಯಾಲಯಕ್ಕೆ ಈ ಪ್ರಕರಣವನ್ನು ನಿರ್ದಿಷ್ಟ ಸಮಯದಲ್ಲಿ ಇತ್ಯರ್ಥಗೊಳಿಸಲು ಸೂಚಿಸಬಹುದು” ಎಂದು ಯಡಿಯೂಪ್ಪ ಪರ ವಕೀಲರಿಗೆ ಪೀಠ ತಿಳಿಸಿದೆ.
ಆಗ, ಯಡಿಯೂರಪ್ಪ ಪರ ವಕೀಲ ಸಂದೀಪ್ ಪಾಟೀಲ್ ಅವರು “ನ್ಯಾಯಾಲಯದ ಅಭಿಪ್ರಾಯ ಏನಿದೆ ಎಂಬುದು ಅರ್ಥವಾಗುತ್ತದೆ. ಈ ಕುರಿತು ಚರ್ಚಿಸಿ, ವಿಚಾರ ತಿಳಿಸಲಾಗುವುದು” ಎಂದಿದ್ದಾರೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಶುಕ್ರವಾರಕ್ಕೆ (ಸೆ. 19) ನಿಗದಿ ಮಾಡಿದೆ.
ಪ್ರಕರಣದ ತನಿಖಾಧಿಕಾರಿಯು ಸಿಆರ್‌ಪಿಸಿ ಸೆಕ್ಷನ್ 161 ಅಡಿ ದಾಖಲಿಸಿಕೊಂಡಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರ 6 ಏಪ್ರಿಲ್ 2024 ಮತ್ತು 29 ಏಪ್ರಿಲ್ 2024ರ ಹೇಳಿಕೆಯನ್ನು ಮೆಮೊ ಜೊತೆಗೆ ರಾಜ್ಯ ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್ ಸಲ್ಲಿಸಿದ್ದಾರೆ. ಇದನ್ನು ನ್ಯಾಯಾಲಯ ದಾಖಲೆಯಲ್ಲಿ ಸ್ವೀಕರಿಸಿದೆ. ಇದಕ್ಕೂ ಮುನ್ನ, ಯಡಿಯೂರಪ್ಪ ಪರ ವಕೀಲರು ಆರೋಪ ಪಟ್ಟಿಯಲ್ಲಿ ತಗಡೂರು ಅವರ ಹೇಳಿಕೆಯನ್ನು ಕೈಬಿಡಲಾಗಿದೆ. ಇದನ್ನು ನ್ಯಾಯಾಲಯ ತರಿಸಿಕೊಳ್ಳಬೇಕು ಎಂದು ವಾದಿಸಿದ್ದರು.
ಮಹಿಳೆಯೊಬ್ಬರು ತನ್ನ 17 ವರ್ಷದ ಮಗಳಿಗೆ ಯಡಿಯೂರಪ್ಪ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ 2024ರ ಮಾರ್ಚ್ 14ರಂದು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಡಾಲರ್ಸ್ ಕಾಲೋನಿಯ ಮನೆಗೆ ತೆರಳಿ ಸಹಾಯ ಕೇಳಿದಾಗ ಯಡಿಯೂರಪ್ಪ ಅವರು ನನ್ನ ಮಗಳನ್ನು ಪ್ರತ್ಯೇಕ ಕೊಠಡಿಯೊಳಕ್ಕೆ ಕರೆದೊಯ್ದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ವಿಷಯವನ್ನು ಯಾರಿಗೂ ಹೇಳದಂತೆ ಒಂದಿಷ್ಟು ಹಣ ನೀಡಿದ್ದರು ಎಂದು ಸಂತ್ರಸ್ತ ಬಾಲಕಿಯ ತಾಯಿ ಆರೋಪಿಸಿದ್ದರು.
ಬಾಲಕಿಯ ತಾಯಿ ನೀಡಿದ ದೂರು ಆಧರಿಸಿ ಸದಾಶಿವನಗರ ಪೊಲೀಸರು ಯಡಿಯೂರಪ್ಪ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದರು. ನಂತರ ಸರ್ಕಾರ ಈ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಸಿಐಡಿಗೆ ವಹಿಸಿತ್ತು.
‘ಇಸ್ಲಾಮೋಫೋಬಿಕ್’ ವಿಡಿಯೋ ಹಂಚಿಕೊಂಡ ಅಸ್ಸಾಂ ಬಿಜೆಪಿ: ವ್ಯಾಪಕ ವಿರೋಧ, ದೂರು ದಾಖಲಿಸಲು ಮುಂದಾದ ಪ್ರತಿಪಕ್ಷಗಳು


