Homeಮುಖಪುಟಪೊಲೀಸ್ ಕಸ್ಟಡಿಗಳಲ್ಲಿ ಸಾವು; ವ್ಯವಸ್ಥೆ ಸುಧಾರಣೆಗೆ ತೆರೆದುಕೊಳ್ಳುವುದೆಂದು?

ಪೊಲೀಸ್ ಕಸ್ಟಡಿಗಳಲ್ಲಿ ಸಾವು; ವ್ಯವಸ್ಥೆ ಸುಧಾರಣೆಗೆ ತೆರೆದುಕೊಳ್ಳುವುದೆಂದು?

- Advertisement -
- Advertisement -

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವಗಳಲ್ಲಿ ಒಂದಾದ ಭಾರತದಲ್ಲಿ ವಿಚಾರಣಾಧೀನ ಖೈದಿಗಳ ಮರಣದ ಪ್ರಮಾಣ ಹುಬ್ಬೇರುವಂತೆ ಮಾಡಿದೆ.

ಕೊರೊನಾ ಸಾಂಕ್ರಾಮಿಕ ಕಾಡುತ್ತಿದ್ದಾಗ ಉತ್ತರ ಪ್ರದೇಶದಲ್ಲಿ ಕೋವಿಡ್ ಶಿಷ್ಟಾಚಾರ ಪಾಲಿಸಲಿಲ್ಲವೆಂದು ಅಪ್ರಾಪ್ತ ಬಾಲಕ ಫೈಸಲ್ ಹುಸೇನ್‌ನನ್ನು ದೈಹಿಕವಾಗಿ ಹಿಂಸೆ ನೀಡಿ ಜೀವ ತೆಗೆಯಲಾಗಿತ್ತು. ಫೈಸಲ್ ಹುಸೇನ್ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ನಿಂಬೆಹಣ್ಣು ಮಾರಾಟ ಮಾಡುವ ವ್ಯಾಪಾರಿ; ತನ್ನ ಕುಟುಂಬಕ್ಕೆ ದುಡಿಯಲು ಇದ್ದ ಏಕೈಕ ಆಸರೆ. ಇವರ ಸಹೋದರರು ಮಾನಸಿಕವಾಗಿ, ದೈಹಿಕವಾಗಿ ವಿಕಲಚೇತನರು. ಆತನನ್ನು ಬಂಧಿಸಿದ ಸ್ಥಳದಲ್ಲಿಯೇ ಪೊಲೀಸರು ಫೈಸಲ್‌ನನ್ನು ಬಡಿದಿದ್ದರು. ಪೊಲೀಸರ ಆಡುಭಾಷೆಯಲ್ಲಿ ಇದನ್ನು ’ಕೊತ್ವಾಲಿ’ ಎನ್ನುತ್ತಾರೆ.

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸತಾನ್‌ಕುಳಂ ಪೊಲೀಸ್ ಠಾಣೆಯಲ್ಲಿ ಜಯರಾಜ್ ಮತ್ತು ಅವರ ಮಗ ಬೆನ್ನಿಕ್ಸ್ ಮೊಬೈಲ್ ಅಂಗಡಿಯೊಂದನ್ನು ಇಟ್ಟಿದ್ದರು. ಕೊರೊನಾ ಲಾಕ್‌ಡೌನ್ ಇದ್ದಾಗ, ಅವಧಿ ಮೀರಿ ಅಂಗಡಿ ತೆರೆದ ಕಾರಣ ಜಯರಾಜ್ ಅವರನ್ನು ಅಂಗಡಿಯಿಂದ ಹೊರಗೆಳೆದು ಪೊಲೀಸರು ಬಡಿದಿದ್ದಾರೆ; ಬಿಡಿಸಿಕೊಳ್ಳಲು ಹೋದ ಮಗ ಬೆನ್ನಿಕ್ಸ್‌ನನ್ನು ಸೇರಿಸಿ ಠಾಣೆಗೆ ಎಳೆದೊಯ್ದಿದ್ದಾರೆ. ಅಲ್ಲಿ ಇಬ್ಬರಿಗೂ ಥಳಿಸಲಾಗಿದೆ. ಸಾಲದಕ್ಕೆ ಬೆನ್ನಿಕ್ಸ್ ಗುದದ್ವಾರಕ್ಕೆ ಲಾಠಿ ತುರುಕಿದ್ದಾರೆ. ಇದರಿಂದ ತೀವ್ರ ರಕ್ತಸ್ರಾವವಾಗಿದೆ. 60 ವರ್ಷದ ಜಯರಾಜ್ ಕೂಡ ಥಳಿತ ತಡೆಯದೆ ಬೆನ್ನಿಕ್ಸ್‌ನೊಂದಿಗೆ ಜೀವಬಿಟ್ಟಿದ್ದಾರೆ. ಇವರಿಬ್ಬರು ಜೀವಬಿಟ್ಟ 10 ಗಂಟೆಗಳ ತರುವಾಯ ಸಾವಿನ ಘೋಷಣೆ ಮಾಡಲಾಗಿದೆ. ಇದು ನಿಜಕ್ಕೂ ಕ್ರೌರ್ಯದ ಅತಿರೇಕ.

ಇತ್ತೀಚೆಗೆ ಬೆಳಗಾವಿಯಲ್ಲಿ ‘ಲಾಕಪ್ ಡೆತ್? ಸಿಐಡಿ ತನಿಖೆ’ ಎಂಬ ಶೀರ್ಷಿಕೆಯಡಿ ಬಂದ ಸುದ್ದಿ ತೀರಾ ಕಳವಳವನ್ನುಂಟು ಮಾಡಿತ್ತು. ಇಲ್ಲಿ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ನಿವಾಸಿ ಬಸನಗೌಡ ಪಾಟೀಲ ನಿಜಕ್ಕೂ ಗಾಂಜಾ ಪ್ರಕರಣದಲ್ಲಿ ಆಪಾದಿತನೇ? ಹೃದಯಾಘಾತದಿಂದ ಜೀವಬಿಟ್ಟಿದ್ದು ನಿಜವೇ? ಎಂಬುದು ಸಿಓಡಿ ತನಿಖೆಯಿಂದಷ್ಟೆ ಸತ್ಯ ಹೊರಬರಬೇಕಿದೆ.

ಇನ್ನೂ 2014ರ ಮೇ 19ರಂದು ತಿರುವನಂತಪುರಂನ ಪರಸ್ಸಾಲ ಪೊಲೀಸರು ಮೊಬೈಲ್ ಫೋನ್ ಕಳ್ಳತನದ ಆಪಾದನೆ ಮೇಲೆ ಶ್ರೀಜೀವ ಎಂಬ ವಿದ್ಯಾರ್ಥಿಯನ್ನು ಬಂಧಿಸಿದ್ದರು. ಮರುದಿನ ಇವನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಮೇ 21ರಂದು ಆಸ್ಪತ್ರೆಯಲ್ಲಿ ಶ್ರೀಜೀವ ಜೀವಬಿಟ್ಟಿದ್ದ. ಇದಕ್ಕೆ, ಸೆಲ್‌ನಲ್ಲಿದ್ದಾಗ ವಿಷ ಸೇವಿಸಿ ಜೀವ ಬಿಟ್ಟಿದ್ದಾನೆಂದು ಪೊಲೀಸರು ಷರಾ ಬರೆದು ಕೂತರು. ಆದರೆ, ಪೊಲೀಸರೊಬ್ಬರಿಗೆ ಬೇಕಾದ ಯುವತಿಯೊಂದಿಗೆ ಸಂಬಂಧ ಇರಿಸಿಕೊಂಡಿದ್ದಕ್ಕಾಗಿ ‘ಸುಳ್ಳು ಪ್ರಕರಣ’ ದಾಖಲಿಸಲಾಗಿದೆ ಎಂದು ಶ್ರೀಜೀವ ಸಹೋದರ ಶ್ರೀಜಿತ್ ಆಪಾದಿಸಿದರು.

ಮತ್ತೊಂದು ಪ್ರಕರಣ 2019ರ ಜನವರಿ 16ರಂದು ಕರವಾಲ್‌ನಗರದಲ್ಲಿ ನಡೆದಿತ್ತು. ಇಲ್ಲಿ 19 ವರ್ಷದ ಯುವಕ ದೀಪಕ್ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಜೀವಬಿಟ್ಟಿದ್ದ. 17 ವರ್ಷದ ಬಾಲಕರಿಗೆ ಕಿರುಕುಳ ನೀಡಿದ ಆಪಾದನೆ ಮೇರೆಗೆ ಇವನನ್ನು ಬಂಧಿಸಲಾಗಿತ್ತು. ಬಂಧಿಸಿದ ಒಂದು ದಿನಕ್ಕೆ ಠಾಣೆಯಲ್ಲಿ ಸ್ಕಾರ್ಫ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ಷರಾ ಬರೆದಿದ್ದರು.

ನೆರೆಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ 25 ವರ್ಷದ ಯುವಕ ಅನಿಕೇತ್ ಕೊಥಲೆಯನ್ನು ಚಿತ್ರಹಿಂಸೆ ಕೊಟ್ಟು ಕೊಲ್ಲಲಾಗಿತ್ತು. ಬಂಧನದಲ್ಲಿದ್ದ ಅನಿಕೇತನಿಗೆ ಚಿತ್ರಹಿಂಸೆ ಕೊಟ್ಟು, ಜೀವ ತೆಗೆದು ಅರೆ-ಬರೆ ಸುಟ್ಟು ಬೆಟ್ಟದ ತಪ್ಪಲಿಗೆ ಎಸೆದಿದ್ದರು. ನಂತರ ಆಪಾದಿತ ಅನಿಕೇತ್ ತಪ್ಪಿಸಿಕೊಂಡು ಪರಾರಿಯಾಗಿರುವುದಾಗಿ ಪೊಲೀಸರು ಹೇಳಿದ್ದರು.

ಇದನ್ನೂ ಓದಿ: ದಲಿತ ಯುವಕನ ಸಾವಿಗೆ ನ್ಯಾಯಕ್ಕೆ ಆಗ್ರಹ: ಡಿ.12ರಂದು ಕೋಲಾರ ಚಲೋ ಹೋರಾಟ

ಹೀಗೆಯೇ 2005ರಲ್ಲಿ 28 ವರ್ಷದ ಗುಜರಿ ವ್ಯಾಪಾರಿ ಉದಯ್‌ಕುಮಾರ್‌ನನ್ನು ಕೇರಳ ಪೊಲೀಸರು ಬಂಧಿಸಿದ್ದರು. ಉದಯ್‌ಕುಮಾರ್ ನಿರಪರಾಧಿಯಾದ ಕಾರಣ ಬಿಡುಗಡೆಮಾಡಬೇಕಿತ್ತು. ಉದಯ್‌ಕುಮಾರ್ ತನ್ನಿಂದ ಸುಲಿಗೆ ಮಾಡಿರುವ ಹಣವನ್ನು ಹಿಂತಿರುಗಿಸಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದ. ಇದೇ ಪೊಲೀಸರಿಗೆ ಮಹಾಪರಾಧವಾಗಿ ಕಂಡು ಚಿತ್ರಹಿಂಸೆ ಕೊಟ್ಟಿದ್ದಾರೆ. 2005ರ ಸಂಪ್ಟೆಂಬರ್ 27ರಂದು ಉದಯ್‌ಕುಮಾರ್ ಸಾವಿಗೀಡಾಗಿದ್ದರು.

2017ರ ಜುಲೈ 6ರಂದು ಹಿಮಾಚಲ ಪ್ರದೇಶದ ಕೋಟ್‌ಖೈನಲ್ಲಿ ಹದಿಹರೆಯದ ವಿದ್ಯಾರ್ಥಿನಿಯೊಬ್ಬಳ ಮೇಲೆ ‘ಅತ್ಯಾಚಾರ’ ಎಸಗಲಾಗಿತ್ತು; ನಗ್ನ ದೇಹ ಹಲ್ಕೆಲಾ ಕಾಡಿನ ಬಳಿ ದೊರಕಿತ್ತು. ಆಗ ಅಲ್ಲಿ ಪ್ರತಿಭಟನೆಗಳು ಜರುಗಿದವು. 6 ಜನರ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. 6 ಜನರಲ್ಲಿ ಒಬ್ಬರಾದ ನೇಪಾಳಿ ಮೂಲದ ಸೂರಜ್‌ಸಿಂಗ್ ಜುಲೈ 18ರಂದು ಕಸ್ಟಡಿಯಲ್ಲಿದ್ದಾಗ ಜೀವಬಿಟ್ಟಿದ್ದ.

ನಮ್ಮಲ್ಲಿ ಬಡವರು, ದಲಿತರು, ಹಿಂದುಳಿದವರು, ಮಹಿಳೆಯರು ಹಸಿವು, ಬಡತನ, ಅವಮಾನ, ಅವಕಾಶ ವಂಚನೆಗಳಿಂದ ಜರ್ಜರಿತರಾಗಿರುತ್ತಾರೆ. ಇವರುಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆದರೆ, ಅದು ‘ಸತ್ತ ಕುದುರೆ’ಯನ್ನು ಚಾಟಿಯಿಂದ ಥಳಿಸಿದಂತೆ.

ಎಲ್ಲಾ ಪೊಲೀಸರನ್ನು ತಪ್ಪಾಗಿ ಪರಿಭಾವಿಸುವುದು ಸೂಕ್ತವಲ್ಲ ಎಂಬ ಅರಿವು ನನಗಿದೆ. ಅಪರಾಧ ಮತ್ತು ಕಾನೂನುಬಾಹಿರತೆ ಹೆಚ್ಚಾದಂತೆ ಪೊಲೀಸರ ಮೇಲೆ ಒತ್ತಡವೂ ಹೆಚ್ಚಾಗುತ್ತದೆ. ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾರ್ವಜನಿಕರ ಒತ್ತಡ ಸಾಮಾನ್ಯವಾಗಿ ಇರುತ್ತದೆ. ಇಷ್ಟಕ್ಕೂ ‘ಲಾಕಪ್ ಡೆತ್’ ಪ್ರಕರಣಗಳು ಇತ್ತೀಚೆಗೆ ಕಂಡುಬಂದವಲ್ಲ. ಪೊಲೀಸ್ ಕಸ್ಟಡಿಯಲ್ಲಿ ಶಂಕಿತರಿಗೆ ಚಿತ್ರಹಿಂಸೆ ಕೊಟ್ಟು ಬಾಯ್ಬಿಡಿಸುವ ಪರಿಪಾಠ ಅನಾದಿಕಾಲದಿಂದಲೂ ಇದೆ. 1850ರ ಟಾರ್ಚರ್ ಕಮಿಷನ್ ಅಂದರೆ ಚಿತ್ರಹಿಂಸೆ ಆಯೋಗ ಮದ್ರಾಸ್ ಪ್ರೆಸಿಡೆನ್ಸಿಯ ಪೊಲೀಸ್ ಠಾಣೆಗಳಲ್ಲಿ ನಡೆದಿದ್ದ ವ್ಯಾಪಕ ಚಿತ್ರಹಿಂಸೆಯನ್ನು ಎತ್ತಿತೋರಿಸಿತ್ತು. ಭಾರತೀಯ ಪೊಲೀಸ್ ಆಯೋಗ ಕೂಡ 1902-03ರಲ್ಲಿ ಪೊಲೀಸ್ ಠಾಣೆಯಲ್ಲಿ ನಡೆಯುವ ಚಿತ್ರಹಿಂಸೆ ಮತ್ತು ಮರಣಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತ್ತು.

ಉನ್ನಾವೋ ಜಿಲ್ಲೆಯ ಭತಾಪುರಿ ಗ್ರಾಮದ ವಾಸಿ ಫೈಸಲ್ ಹುಸೇನ್ ಹತ್ಯೆ ಸಂಬಂಧ ತನಿಖೆ ನಡೆಸಲು ಸಮಾಜವಾದಿ ಪಕ್ಷ 5 ಜನ ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು. ಸಮಿತಿ ಫೈಸಲ್‌ನ ತಂದೆ ಇಸ್ಲಾಂ ಹುಸೇನ್, ಸಹೋದರ ಮಹಮದ್ ಸೂಫಿಯನ್, ಸೋದರ ಸಂಬಂಧಿ ಸಲ್ಮಾನ್ ಹುಸೇನ್ ಅವರುಗಳನ್ನು ಸಂದರ್ಶಿಸಿ ಘಟನಾವಳಿಯ ವಿವರಗಳನ್ನು ಸಂಗ್ರಹಿಸಿತ್ತು. ಅಂದು ಮಧ್ಯಾಹ್ನ 2 ಘಂಟೆಯ ಸುಮಾರಿಗೆ ಫೈಸಲ್ 10 ಜನರೊಂದಿಗೆ ಕೂಡಿಕೊಂಡು ರಸ್ತೆ ಬದಿಯಲ್ಲಿ ಮಳಿಗೆ ಹಾಕಿಕೊಂಡು ತಾಜಾ ಉತ್ಪನ್ನಗಳನ್ನು ಮಾರುತ್ತಿದ್ದ. ಆಗ ರೋಷಾವೇಷದಿಂದ ಬಂದ ಪೊಲೀಸ್ ಅಧಿಕಾರಿ ’ಅಂಗಡಿ ಮುಚ್ಚಬೇಕಿದ್ದರೂ ಇನ್ನೂ ಏಕೆ ಮುಚ್ಚಲಿಲ್ಲವೆಂದು’ ಬಡಿದು, ಪೊಲೀಸ್ ಠಾಣೆಯಲ್ಲಿ ಹೇಳುತ್ತೇನೆ ‘ಬಾ’ ಎಂದು ಧಮಕಿ ಹಾಕಿದ್ದಾರೆ. ವಿಷಯ ಗೊತ್ತಾದೊಡನೆ ಫೈಸಲ್‌ನ ಅಣ್ಣ ಮಹಮದ್ ಸೂಫಿಯಾನ್ ಠಾಣೆಗೆ ಓಡಿದ್ದಾನೆ. ಅಲ್ಲಿ ಯಾವುದೇ ಚಲನೆ ಇಲ್ಲದೆ ನೆಲದ ಮೇಲೆ ಬಿದ್ದಿರುವ ಫೈಸಲ್‌ನನ್ನು ಕಂಡಿದ್ದಾನೆ.

ಫೈಸಲ್‌ನನ್ನು ನಂತರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದೆ. ಅಲ್ಲಿ ವೈದ್ಯರು ಫೈಸಲ್ ಜೀವಬಿಟ್ಟಿದ್ದಾನೆಂದು ಘೋಷಿಸಿದ್ದಾರೆ. ಆದರೂ ಚಿಕಿತ್ಸೆ ನೀಡುವಂತೆ ಪೊಲೀಸರು ವೈದ್ಯರ ಮೇಲೆ ಒತ್ತಡ ಹೇರಿದ್ದಾರೆ. ನಂತರ ಉನಾವೋದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಜನರ ಗುಂಪು ಹೆಚ್ಚಾಗಿ, ನಿಯಂತ್ರಿಸಲು ಆಗದೆಂದು ಪೊಲೀಸರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಫೈಸಲ್ ಹುಸೇನ್

ಇದೇ ರಾತ್ರಿ 8:30ರ ಹೊತ್ತಿಗೆ ಎಫ್‌ಐಆರ್ ದಾಖಲಿಸಿಕೊಂಡು, ದೇಹವನ್ನು ಹಸ್ತಾಂತರಿಸಿದ್ದಾರೆ. 3 ಜನ ಕಾನೂನುಜಾರಿ ಸಿಬ್ಬಂದಿಯನ್ನು ಅಮಾನತುಗೊಳಿಸಲಾಯಿತಾದರೂ, ಅವರುಗಳು ಓಡಿಹೋಗಿ ತಲೆಮರೆಸಿಕೊಂಡರು.

ಇನ್ನೂ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದ ಬಂಧಿತ ಆರೋಪಿ ಬಸನಗೌಡ ಪಾಟೀಲ ಅಸ್ವಸ್ಥಗೊಂಡು ಮೃತಪಟ್ಟಿದ್ದಾನೆ; ವೈದ್ಯರು ಇದನ್ನು ಹೃದಯಾಘಾತ ಎಂದಿದ್ದಾರೆ; ತಾಂತ್ರಿಕವಾಗಿ ಕಸ್ಟೋಡಿಯಲ್ ಡೆತ್ ಎಂದು ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ನಿಷ್ಪ್ಪಕ್ಷಪಾತ ತನಿಖೆ ನಡೆಯಲಿದೆ. ಯಾವುದೇ ತಪ್ಪು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.

ಡಾ. ಬೋರಲಿಂಗಯ್ಯ ಅವರ ಹೇಳಿಕೆ ಸರ್ ರಾಬರ್ಟ್ ಮಾರ್ಕ್ ಅವರನ್ನು ನೆನಪಿಸುತ್ತದೆ. ಇಂಗ್ಲೆಂಡ್ ಮೂಲದ ರಾಬರ್ಟ್ ಮಾರ್ಕ್ ಪೊಲೀಸ್ ವ್ಯವಸ್ಥೆಯೊಳಗಿದ್ದ ‘ಭ್ರಷ್ಟಾಚಾರ’ವನ್ನು ಸ್ವಚ್ಛಗೊಳಿಸಲು ಪ್ರಯತ್ನಿಸಿದವರು.

ರಾಬರ್ಟ್ ಮಾರ್ಕ್ ಒಮ್ಮೆ ಇಟಲಿ ಮೂಲದ ‘ಮಾಣಿ’ಯೊಬ್ಬನಿಗೆ ಬಂಧನ ಆದೇಶ ನೀಡಬೇಕಿತ್ತು. ‘ಮಾಣಿ’ಯ ಅಮಾಯಕತೆ ಕಂಡು, ಅವನೊಬ್ಬ ನಿರುಪ್ರದವಿ ಎಂದು ವರದಿ ಮಾಡಿದ್ದರು. ಆದರೂ ಬ್ರಿಟನ್ ಸರ್ಕಾರ ‘ಮಾಣಿ’ಯ ವಲಸೆಯ ಮೂಲ ಕಂಡುಕೊಂಡು ಗಡೀಪಾರು ಆದೇಶ ಹೊರಡಿಸಿತು. ಗಡೀಪಾರು ಶಿಕ್ಷೆಗೆ ಸಿಕ್ಕ ‘ಮಾಣಿ’ ಹಡಗಿನಲ್ಲಿ ಪಯಣಿಸುವಾಗ ದಾರಿ ಮಧ್ಯೆ ಜೀವಬಿಟ್ಟ. ಇದು ಪೊಲೀಸ್ ವ್ಯವಸ್ಥೆಯೊಳಗಿನ ಅವ್ಯವಸ್ಥೆ, ಅಸಡ್ಡೆಯನ್ನು ತೋರುತ್ತದೆ ಎಂದು ರಾಬರ್ಟ್ ಮಾರ್ಕ್ ಪತ್ರ ಬರೆದು ಖಂಡಿಸಿದ್ದರು. ಇಂತಹ ಅನುಪಮ ಸೇವೆಯಿಂದಾಗಿ ’ನೈಟ್’ ಪದವಿ ಮಾರ್ಕ್ ಮುಡಿಗೇರಿತ್ತು.

ಇನ್ನೂ ಶ್ರೀಜೀವ ಪ್ರಕರಣ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಶ್ರೀಜಿತ್ 782 ದಿನಗಳ ಕಾಲ ‘ಉಪವಾಸ ಸತ್ಯಾಗ್ರಹ’ ನಡೆಸಿದರು. ಬೆದರಿದ ಆಡಳಿತಾಂಗ ಶ್ರೀಜೀವನ ಪ್ರಕರಣವನ್ನು ಸಿಬಿಐ ಮಡಿಲಿಗೆ ಹಾಕಿತ್ತು. ಹಾಗೆಯೇ 19 ವರ್ಷದ ದೀಪಕ್ ಬಳಿ ಯಾವುದೇ ಸ್ಕಾರ್ಫ್ ಇರಲಿಲ್ಲ. ಇದೊಂದು ಕೊಲೆ ಎಂದು ಮೃತನ ಕುಟುಂಬಸ್ಥರು ಆಪಾದಿಸಿದ್ದರು. ಆಗ ಠಾಣಾಧಿಕಾರಿಯನ್ನು ವಶಕ್ಕೆ ಪಡೆಯಲಾಯಿತು. ನೆರವು ನೀಡಿದ 4 ಜನ ಪೊಲೀಸರನ್ನು ಅಮಾನತುಗೊಳಿಸಲಾಗಿತ್ತು. ನೇಪಾಳಿ ಮೂಲದ ಸೂರಜ್‌ಸಿಂಗ್ ಕಸ್ಟಡಿ ಸಾವು ಮತ್ತು ಕೋಟ್‌ಖೈನಲ್ಲಿ ನಡೆದಿದ್ದ ವಿದ್ಯಾರ್ಥಿನಿಯೊಬ್ಬಳ ‘ಅತ್ಯಾಚಾರ’ ಪ್ರಕರಣಗಳನ್ನು 2017ರ ಜುಲೈ 22ರಂದು ಸಿಬಿಐ ವಶಕ್ಕೆ ನೀಡಲಾಗಿತ್ತು. ‘ಹತ್ಯೆ’ ಕುರಿತು ತನಿಖೆಗೆ ನೇಮಕಗೊಂಡಿದ್ದ ಸಿಬಿಐ ವಿಶೇಷ ತನಿಖಾ ತಂಡ, ಐಜಿಪಿ ಜಹುರ್ ಹೈದರ್ ಜೈದಿ ಸೇರಿದಂತೆ 8 ಜನ ಪೊಲೀಸರ ಮೇಲೆ ಪ್ರಕರಣ ದಾಖಲಿಸಿಕೊಂಡು ಬಂಧಿssಸಿತ್ತು. ಜೊತೆಗೆ ನಿವೃತ್ತಗೊಂಡಿದ್ದ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರನ್ನು ಕೂಡ ವಶಕ್ಕೆ ಪಡೆಯಲಾಗಿತ್ತು.

ಸಾಂಗ್ಲಿ ಠಾಣಾ ವ್ಯಾಪ್ತಿಯ ಅನಿಕೇತನ್ ಕೊಥಲೆ ಪ್ರಕರಣದಲ್ಲಿ ಸಬ್ ಇನ್ಸ್‌ಪೆಕ್ಟರ್ ಯುವರಾಜ್ ಕಾಮ್ಟೆ ಮತ್ತು 4 ಜನ ಪೊಲೀಸರ ಬಂಧನವಾಯಿತು. ಸಾಂಗ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಮತ್ತು ಉಪ ಪೊಲೀಸ್ ಅಧೀಕ್ಷಕರಿಗೆ ‘ವರ್ಗಾವಣೆ’ ಶಿಕ್ಷೆ ಕೊಡಲಾಗಿತ್ತು.

ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ: ದಲಿತರ ಸ್ಥಿತಿಗತಿಗಳು

ಕೇರಳದ ಗುಜರಿ ವ್ಯಾಪಾರಿ ಉದಯ್‌ಕುಮಾರ್ ಕಸ್ಟಡಿ ಸಾವಿನ ಕುರಿತು 67 ವರ್ಷದ ಪ್ರಭಾವತಿ 13 ವರ್ಷಗಳ ಕಾಲ ಧೈರ್ಯದಿಂದ ಹೋರಾಟ ನಡೆಸಿದರು. ಅಂತಿಮವಾಗಿ ಪ್ರಭಾವತಿ ಕಾನೂನಿನ ಹೋರಾಟದಲ್ಲಿ ಗೆದ್ದರು. ಉದಯ್‌ಕುಮಾರ್ ಜೀವ ತೆಗೆದ ಪೊಲೀಸ್ ಅಧಿಕಾರಿಗಳಿಗೆ ಮರಣದಂಡನೆಯ ಜೊತೆಗೆ 2 ಲಕ್ಷ ದಂಡದ ಶಿಕ್ಷೆಯೂ ಬಿತ್ತು. ಮೃಗೀಯ ರೀತಿಯಲ್ಲಿ ವರ್ತಿಸಿದ ಪೊಲೀಸರಿಗೆ ಮರಣದ ದಂಡನೆ ವಿಧಿಸಿದ ಪ್ರಕರಣ ಇದೇ ಮೊದಲಲ್ಲ. ಇದಕ್ಕೂ ಮೊದಲು ಸುಲಿಗೆ ಹಣ ನೀಡಲಿಲ್ಲವೆಂದು ಉದ್ಯಮಿಯೊಬ್ಬರನ್ನು ಸಬ್ ಇನ್ಸ್‌ಪೆಕ್ಟರ್ ದರ್ಜೆಯ ಅಧಿಕಾರಿಯೊಬ್ಬರು ಗುಂಡಿಕ್ಕಿ ಕೊಂದಿದ್ದರು. ಕೆಳ ನ್ಯಾಯಾಲಯ ಸಬ್ ಇನ್ಸ್‌ಪೆಕ್ಟರ್‌ಗೆ ಮರಣದಂಡನೆ ನೀಡಿತ್ತು. ಆದರೆ, ಉಚ್ಚ ನ್ಯಾಯಾಲಯ ‘ಮರಣದಂಡನೆ’ ಶಿಕ್ಷೆಯನ್ನು ‘ಜೀವಾವಧಿ’ ಶಿಕ್ಷೆಯನ್ನಾಗಿ ಪರಿವರ್ತಿಸಿತ್ತು.

ಹಿಂಸೆ ನೀಡುವುದೇ ‘ತನಿಖೆ’ಯ ಪ್ರಮುಖ ಸಾಧನವೆಂದು ಕೆಲವು ಪೊಲೀಸರು ಭಾವಿಸಿಬಿಟ್ಟಿದ್ದಾರೆ. ‘ಶಂಕಿತ’ರು ಪೊಲೀಸರ ಅಧೀನದಲ್ಲಿದ್ದಾಗ ಶಿಕ್ಷಿಸುವುದರಲ್ಲಿ ಯಾವುದೇ ತಪ್ಪಿಲ್ಲವೆಂಬ ನಂಬಿಕೆಯಿಂದ ಇವರು ಸೇವೆ ಸಲ್ಲಿಸುತ್ತಲೇ ಇದ್ದಾರೆ. ಹೀಗಾಗಿಯೇ ನಮ್ಮ ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಿರಂತರವಾಗಿ ನಡೆಯುತ್ತಿದೆ. ಯಾವುದೇ ಆಧಾರವಿಲ್ಲದೆ ಅನುಮಾನದ ಆಧಾರದ ಮೇಲೆ ಬಂಧಿಸುವುದು ಕೂಡ ಮಾನವ ಹಕ್ಕುಗಳ ಉಲ್ಲಂಘನೆ.

ಪ್ರಭಾವತಿ

ಅನಿಕೇತ್ ಕೊಥಲೆ ಪ್ರಕರಣದಲ್ಲಿ ನಡೆದಿರುವ ನಿಯಮಾವಳಿಗಳ ಉಲ್ಲಂಘನೆ ನಮ್ಮ ನ್ಯಾಯಿಕ ವ್ಯವಸ್ಥೆಯನ್ನು ಅಣುಕಿಸುತ್ತದೆ. ಪೊಲೀಸರ ಅಧೀನದಲ್ಲಿರುವ ವ್ಯಕ್ತಿ ಜೀವಬಿಟ್ಟಾಗ, ಠಾಣಾಧಿಕಾರಿ ಕೂಡಲೆ ವಿಳಂಬವಿಲ್ಲದೆ ತನ್ನ ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮಾಹಿತಿ ಪಡೆದ ಅಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಗಮನಕ್ಕೆ ಕಡ್ಡಾಯವಾಗಿ ತರಬೇಕು. ಮಾಹಿತಿ ಸಿಕ್ಕ ಪೊಲೀಸ್ ವರಿಷ್ಠಾಧಿಕಾರಿ ಸರ್ಕಾರದ ಸಕ್ಷಮ ವೈದ್ಯಾಧಿಕಾರಿಯಿಂದ ಮರಣೋತ್ತರ ಪರೀಕ್ಷೆ ಮಾಡಿಸಬೇಕು. ಮರಣೋತ್ತರ ಪರೀಕ್ಷೆಯನಂತರ 24 ಗಂಟೆಗಳ ಒಳಗಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ವಿವರಗಳನ್ನು ಕಳುಹಿಸಿಕೊಡಬೇಕು. ಮುಖ್ಯವಾಗಿ ಸಂಬಂಧಪಟ್ಟ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅವರಿಂದ ಮಹಜರು ಮಾಡಿಸಬೇಕು. ಇಂತಹ ಪ್ರಕರಣಗಳನ್ನು ಕೂಡಲೇ ಸಿಐಡಿ ತನಿಖೆಗೆ ಕೊಟ್ಟು ವಿಚಾರಣೆ ಮಾಡಿಸಬೇಕು.

1986 ಮತ್ತು 2015ರ ಮಧ್ಯದಲ್ಲಿ ಡಿ.ಕೆ. ಬಸು V/s. ಪಶ್ಚಿಮ ಬಂಗಾಳ ಪ್ರಕರಣದಲ್ಲಿ ವಕೀಲ ಅಭಿಷೇಕ್ ಮನುಸಿಂಘ್ವಿ ಅಮಿಕಸ್ ಕ್ಯೂರಿಯಾಗಿದ್ದರು. ಇದರಲ್ಲಿ ಕಸ್ಟಡಿ ಸಾವು ಮತ್ತು ಚಿತ್ರಹಿಂಸೆಯನ್ನು ಕಡಿಮೆ ಮಾಡಲು ಹಲವು ನಿಯಮಗಳನ್ನು ರಚಿಸಲಾಗಿತ್ತು.

ಬಂಧನಕ್ಕೆ ಹೋಗುವಾಗ ಪೊಲೀಸ್ ಅಧಿಕಾರಿಗಳು ತಮ್ಮ ಹೆಸರಿನ ಟ್ಯಾಗ್‌ಗಳೊಂದಿಗೆ ಹೋಗಬೇಕು. ಬಂಧನದ ಜ್ಞಾಪಕ ಪತ್ರಗಳನ್ನು ಕುಟುಂಬದ ಸದಸ್ಯರ ಅಥವಾ ಸ್ಥಳೀಯ ಗಣ್ಯರ ಬಳಿ ನೀಡಬೇಕು. ಯಾವ ರಾಜ್ಯದಲ್ಲಿ ಮಾನವ ಹಕ್ಕುಗಳ ಆಯೋಗ ರಚನೆಯಾಗಿಲ್ಲ, ಅಲ್ಲಿ ರಚಿಸಬೇಕು. ಹಾಗೆಯೇ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸಬೇಕು. ಜೊತೆಗೆ ಮಾನವ ಹಕ್ಕುಗಳ ಕಾಯ್ದೆಯಡಿ ‘ಮಾನವ ಹಕ್ಕುಗಳ ನ್ಯಾಯಾಲಯ’ವನ್ನು ಸ್ಥಾಪಿಸಬೇಕು.

ಇಷ್ಟೆಲ್ಲಾ ನೀತಿ-ನಿಯಮಾವಳಿಗಳಿದ್ದರೂ ಪೊಲೀಸ್ ಕಸ್ಟಡಿಯಲ್ಲಿ ‘ಮರಣ’ ಅವ್ಯಾಹತವಾಗಿ ಮುಂದುವರಿದುಕೊಂಡು ಬರುತ್ತಿದೆ. ಇದಕ್ಕಿರುವ ಕಾರಣಗಳನ್ನು ಹುಡುಕಿ ಮದ್ದು ನೀಡುವ ಅಗತ್ಯವಿದೆ. ಇದು ಪೊಲೀಸರ ಮನಸ್ಥಿತಿಯ ವಿಕೃತಿಯೇ ಅಥವಾ ವ್ಯವಸ್ಥೆಯ ಅಸ್ವಸ್ಥತೆಯೇ? ಶೋಧಿಸಬೇಕಿದೆ.

ನಮ್ಮ ದೇಶದಲ್ಲಿ ಪೊಲೀಸ್ ದೌರ್ಜನ್ಯದ ಸುದೀರ್ಘ ಇತಿಹಾಸದ ಅರಿವಿಲ್ಲದವರಿಗೆ ಇವನ್ನು ಓದಿದಾಗ ನಿಜಕ್ಕೂ ದಿಗ್ಭ್ರಮೆ ಹುಟ್ಟಿಸದೆ ಇರದು. ದಿನನಿತ್ಯ ಪತ್ರಿಕೆ ಓದುವ ಕಡೆ ಗಮನ ಕೊಟ್ಟರೆ, ಪೊಲೀಸ್ ಹಿಂಸಾಚಾರ ನಡೆಯದ ದಿನವೇ ಇಲ್ಲವೆನ್ನಬಹುದಾಗಿದೆ. ಇವು ಮೇಲೆ ಪ್ರಸ್ತಾಪಿಸಿರುವ ಲಾಕಪ್‌ಡೆತ್ ಪ್ರಕರಣಗಳಂತೆ ಇಲ್ಲದಿರಬಹುದು. ಆದರೆ, ದಾಖಲಾಗದೆ, ಸುದ್ದಿಯಾಗದೆ ಹಿಂಸಾಚಾರ, ಅತ್ಯಾಚಾರ ದಿನನಿತ್ಯ ಆಗಿಹೋಗಿರುತ್ತದೆ. ಉದಾಹರಣೆಗೆ ಉತ್ತರ ಪ್ರದೇಶದ ಘಟನೆಯನ್ನು ತೆಗೆದುಕೊಳ್ಳಬಹುದು. ಇಲ್ಲಿ ದೂರು ದಾಖಲಿಸಲು ಬಂದ ಮಹಿಳೆಯ ಮುಂದೆಯೇ ಠಾಣಾಧಿಕಾರಿ ಹಸ್ತಮೈಥುನ ಮಾಡಿಕೊಂಡಿದ್ದ. ಕೊನೆಗಿದು ಸುದ್ದಿಯಾಗುತ್ತಿದ್ದಂತೆ, ಭಟ್ನಿ ಪೊಲೀಸ್ ಠಾಣೆಯ ಠಾಣಾಧಿಕಾರಿಯನ್ನು ಅಮಾನತು ಮಾಡಲಾಗಿದೆ. ಜೊತೆಗೆ ಎಫ್‌ಐಆರ್ ದಾಖಲಿಸಲಾಗಿದೆ.

ವಿಚಾರಣಾಧೀನ ಖೈದಿಗಳ ಸಾವಿಗೆ ಸಂಬಂಧಿಸಿದ ಅಧ್ಯಯನವೊಂದರಂತೆ, ಶೇ.65ರಷ್ಟು ಮರಣಗಳು ಆತ್ಮಹತ್ಯೆಯಿಂದ ಕೂಡಿದ್ದರೆ, ಶೇ.25ರಷ್ಟು ಆಘಾತದಿಂದ ಉಂಟಾಗಿರುತ್ತದೆ. ಶೇ.5ರಷ್ಟು ಮಾತ್ರ ಪೊಲೀಸರ ಕಿರುಕುಳದಿಂದ ಸಂಭವಿಸಿರುತ್ತವೆ.

ಇದರ ಬಗ್ಗೆ ರಾಷ್ಟ್ರೀಯ ಪೊಲೀಸ್ ಆಯೋಗ 8 ರಾಜ್ಯಗಳಲ್ಲಿ ಪೊಲೀಸ್ ಚಿತ್ರಹಿಂಸೆ ಮತ್ತು ಕಸ್ಟಡಿ ಸಾವು ಕುರಿತ ದೂರುಗಳನ್ನು ವಿಶ್ಲೇಷಿಸಿದೆ. ಹೆಚ್ಚಿನ ಪ್ರಕರಣಗಳಲ್ಲಿ ಪೊಲೀಸ್ ಸಿಬ್ಬಂದಿ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗಿರುವುದಿಲ್ಲ ಎಂಬುದನ್ನು ಪತ್ತೆಹಚ್ಚಿದೆ. ಕೆಲವು ನ್ಯಾಯಾಂಗ ವಿಚಾರಣೆ ಪ್ರಕರಣಗಳಲ್ಲಿ ಮಾತ್ರ ಪೊಲೀಸರು ತಪ್ಪಿತಸ್ಥರೆಂದು ಕಂಡುಬಂದರೂ, ಇಲಾಖಾ ವಿಚಾರಣೆಗಳಲ್ಲಿ ಹಗ್ಗಜಗ್ಗಾಟದಂತೆ ಸಾಗುತ್ತಿದೆ. ಅಂತಿಮವಾಗಿ ಸಾಕ್ಷ್ಯಾಧಾರದ ಕೊರತೆಯ ಮೇರೆಗೆ ಪ್ರಕರಣ ಬಿದ್ದುಹೋಗುವ ಸಂಭವಗಳು ಹೆಚ್ಚಿರುತ್ತವೆ.

ಕೆಲವು ಪ್ರಕರಣಗಳಲ್ಲಿ ಹಿಂಸಾಚಾರ ಎಸಗುವ ಕಿರಿಯ ಪೊಲೀಸ್ ಅಧಿಕಾರಿಗಳನ್ನು ಮೇಲ್ವಿಚಾರಣೆ ಮಾಡಲು ಸಹ ಹಿರಿಯ ಅಧಿಕಾರಿಗಳು ಹೆದರುತ್ತಾರೆ. ‘ಸತ್ಯ’ ಮತ್ತು ‘ಸಂವಿಧಾನ’ ಎತ್ತಿಹಿಡಿಯುವ ಪೊಲೀಸರ ಪ್ರತಿಜ್ಞೆಯ ಧ್ವನಿ ಪೊಲೀಸ್ ಸಮಾಜದ ಐಕ್ಯತೆಯ ಮುಂದೆ ಕೀರಲಾಗುತ್ತದೆ. ಹೀಗಾಗಿ ಕಸ್ಟಡಿಯಲ್ಲಿದ್ದಾಗ ಚಿತ್ರಹಿಂಸೆ ನೀಡುವುದು ಕಾನೂನುಬಾಹಿರ ಎಂಬುದನ್ನು ಕೆಳಹಂತದ ಅಧಿಕಾರಿಗಳಲ್ಲಿ ಬಿತ್ತನೆ ಮಾಡಬೇಕು. ಹಿರಿಯ ಅಧಿಕಾರಿಗಳು ಸತತ ಕಣ್ಗಾವಲು ವಹಿಸಬೇಕು. ಜೊತೆಗೆ ನಿರಂತರವಾಗಿ ಇದರ ಬಗ್ಗೆ ತಿಳಿವನ್ನು ಹೆಚ್ಚಿಸಬೇಕು.

ಇದನ್ನೇಕೆ ಹೇಳುತ್ತಿರುವೆನೆಂದರೆ, ಹಲವು ಪ್ರಕರಣಗಳಲ್ಲಿ ಅಪರಾಧಿಗಳು ಪೊಲೀಸರಾಗಿರುವುದರಿಂದ ಇವರುಗಳ ಮೇಲೆ ಎಫ್‌ಐಆರ್ ದಾಖಲಾಗುವುದು ಅತಿವಿರಳ. ತಮ್ಮವರು ಎಸಗುವ ಅಪರಾಧಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸುವುದಿಲ್ಲ. ಪೊಲೀಸರ ಕರ್ತವ್ಯನಿರ್ವಹಣೆಯಲ್ಲಿ ಲೋಪ ಕಂಡುಬಂದಾಗ ಕಿರಿಯ ಪೊಲೀಸರ ಮೇಲೆ ಮಾತ್ರ ಕ್ರಮಗಳಾಗುತ್ತಿವೆ. ತಪ್ಪಿತಸ್ಥ ಪೊಲೀಸರೊಂದಿಗೆ, ಪೊಲೀಸ್ ವರಿಷ್ಠಾಧಿಕಾರಿಗಳು ಶಾಮೀಲಾಗಿದ್ದರೆ ಅಥವಾ ಲಾಕಪ್ ಡೆತ್‌ಗಳನ್ನು ತಡೆಯಲು ನಿರ್ಲಕ್ಷ್ಯ ವಹಿಸಿದ್ದರೆ ಅವರ ಮೇಲೆಯೂ ಕ್ರಮವಾಗಬೇಕು.

1993ರಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಪೊಲೀಸರ ಕಸ್ಟಡಿಯಲ್ಲಿ ಜೀವಬಿಟ್ಟ ಪ್ರಕರಣಗಳನ್ನು 24 ತಾಸಿನೊಳಗಡೆ ವರದಿ ಮಾಡಬೇಕೆಂದು ನಿರ್ದೇಶನ ನೀಡಿತ್ತು. ವರದಿ ಮಾಡದಿದ್ದಲ್ಲಿ ಜಿಲ್ಲಾ ಎಸ್‌ಪಿ ಮತ್ತು ಡಿಸಿ ಕ್ರಮ ಎದುರಿಸಬೇಕಾಗುತ್ತದೆ ಎಂಬ ಸೂಚನೆಯನ್ನು ನೀಡಿತ್ತು. 1993ರಿಂದ 2013ರ ನಡುವಿನ 20 ವರ್ಷಗಳಲ್ಲಿ ಸುಮಾರು 2,860 ಜನ ಪೊಲೀಸ್ ಕಸ್ಟಡಿಯಲ್ಲಿ ಮೃತರಾಗಿದ್ದಾರೆಂದು ಮಾನವ ಹಕ್ಕುಗಳ ಆಯೋಗದ ಮೂಲಗಳು ಹೇಳುತ್ತವೆ. ಇದರಂತೆ ಪ್ರತಿ ವರ್ಷ 135 ಜನ ವಿಚಾರಣೆ ಎದುರಿಸುವಾಗ ಜೀವಬಿಟ್ಟಿದ್ದಾರೆ. ಇನ್ನೂ 2001ರಿಂದ 2013ರ ವರೆಗೆ ಪೊಲೀಸ್ ಕಸ್ಟಡಿಯಲ್ಲಿ 1,275 ಜನ ಜೀವಬಿಟ್ಟಿದ್ದಾರೆ. 2001ರಿಂದ 2010ರವರೆಗೆ ನ್ಯಾಯಾಂಗ ಬಂಧನದಲ್ಲಿ 12,727 ಜನ ಜೀವಬಿಟ್ಟಿದ್ದಾರೆ. 2010ರಲ್ಲಿ 70 ಜನ, 2005ರಲ್ಲಿ 128 ಜನ ಕಸ್ಟಡಿಯಲ್ಲಿ ಕೊನೆಯುಸಿರೆಳೆದಿದ್ದಾರೆ. 2021-22ರಲ್ಲಿ 155 ಜನ ಪೊಲೀಸ್ ಕಸ್ಟಡಿಯಲ್ಲಿ, 2,125 ಜನ ನ್ಯಾಯಾಂಗ ಬಂಧನದಲ್ಲಿ, 2019ರಲ್ಲಿ 125 ಜನ ಪೊಲೀಸ್ ಕಸ್ಟಡಿಯಲ್ಲಿ, 2152 ಜನ ನ್ಯಾಯಾಂಗ ಬಂಧನದಲ್ಲಿ ಜೀವ ಕಳೆದುಕೊಂಡಿರುತ್ತಾರೆ. ಇಷ್ಟಾದರೂ ಪೊಲೀಸರಿಗೆ ಆಗಿರುವ ಶಿಕ್ಷೆಯ ಪ್ರಮಾಣ ತೀರಾ ಕಡಿಮೆ. ಬಹುತೇಕ 100 ಕಸ್ಟಡಿ ಸಾವುಗಳಲ್ಲಿ 2 ಪೊಲೀಸರಿಗೆ ಶಿಕ್ಷೆಯಾಗಿದೆ.

‘ಹೊಣೆಗಾರಿಕೆ’ ಎಂಬುದು ಪೊಲೀಸರನ್ನು ಮಾತ್ರ ಗುರಿಗೊಳಿಸಿ ಸೀಮಿತಗೊಳಿಸುತ್ತಿಲ್ಲ. ಪೊಲೀಸರೊಂದಿಗೆ ವೈದ್ಯರ ಪಾತ್ರವೂ ಇರುತ್ತದೆ. ಬಂಧಿತ ‘ಆತ್ಮಹತ್ಯೆ’ಗೆ ಒಳಗಾದ ಅಥವಾ ಸಹಜ ಸಾವು ಸೇರಿದಂತೆ ಹಲವು ರೋಗಗಳನ್ನು ಹೆಸರಿಸಿ ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ. ಇದಕ್ಕೆ ವೈದ್ಯರು ನೀಡುವ ‘ಮರಣೋತ್ತರ ಪರೀಕ್ಷೆ’ಯನ್ನು ಮುಂದಿಟ್ಟು ಉಲ್ಲೇಖಿಸುತ್ತಾರೆ. ಇಂತಹ ವೈದ್ಯಕೀಯ ವರದಿಗಳನ್ನು ಬೆದರಿಕೆ, ಲಂಚ ಅಥವಾ ಒತ್ತಡಕ್ಕೆ ಒಳಗಾಗಿ ನೀಡಿರುವ ಸಂಭವಗಳನ್ನು ತಳ್ಳಿಹಾಕುವಂತಿಲ್ಲ. ಇಂತಹ ವೈದ್ಯರನ್ನು ಪತ್ತೆಹಚ್ಚಿ, ವೈದ್ಯಕೀಯ ವರದಿ ಬರೆಯುವ ಕಾರ್ಯದಿಂದ ದೂರ ಇಡಬೇಕಿದೆ.

ಇವಲ್ಲದೆ, ಪೊಲೀಸರು ಹಣಕಾಸಿನ ಕೊರತೆ, ತರಬೇತಿಯ ಕೊರತೆ, ಸುಧಾರಣೆಗಳ ಅನುಷ್ಠಾನದ ಕೊರತೆಗಳಿಂದಲೂ ಬಳಲುತ್ತಿದ್ದಾರೆ. ಇದರ ಬಗ್ಗೆ ಕೂಡ ಆಡಳಿತ ಪಕ್ಷ, ವಿರೋಧ ಪಕ್ಷ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಪೊಲೀಸರ ಅತಿರೇಕ ವರ್ತನೆ ಮತ್ತು ಭ್ರಷ್ಟಾಚಾರ ತಡೆಯುವುದು ಸುಲಭಕ್ಕೆ ಸಾಧ್ಯವಿಲ್ಲ.

’ನನ್ನ ಮಗ ಮುಸಲ್ಮಾನ ಆಗಿದ್ದರಿಂದಲೇ ಅವನ ಜೀವ ಪಡೆಯಲಾಗಿದೆ. ತರಕಾರಿ ಮಾರುವುದೇ ಅಪರಾಧವೇ? ನಮ್ಮಂತೆಯೇ 50 ಮಳಿಗೆಗಳು ತೆರೆದಿದ್ದರೂ, ನಮಗೆ ಮಾತ್ರ ಶಿಕ್ಷೆ ಏಕೆಂದು’ ಫೈಸಲ್ ತಂದೆ ಇಸ್ಲಾಂ ಹುಸೇನ್ ಪ್ರಶ್ನಿಸಿದ್ದರು. ಫೈಸಲ್ ಇಲ್ಲದ ಕುಟುಂಬದ ಬದುಕಿನ ಬಂಡಿ ಹೇಗೆ ಸಾಗುತ್ತಿರಬಹುದೆಂದು ಊಹಿಸಿದರೆ ಯಾತನೆಯಾಗುತ್ತದೆ.

ಇದೇನೇ ಇರಲಿ, ನೊಂದಿರುವ ಬಸನಗೌಡ ಪಾಟೀಲ ಪುತ್ರಿ ರೋಹಿಣಿ ಪಾಟಿಲ ಅವರಿಗೆ ಸರ್ಕಾರ ನ್ಯಾಯ ಒದಗಿಸಿಕೊಡಬೇಕು. ಈಕೆಯನ್ನು ಸಂತೈಸಿ, ಭವಿಷ್ಯದಲ್ಲಿ ಮುಂದೆಂದೂ ಇಂತಹ ಘಟನೆ ಮರುಕಳಿಸದಂತೆ ಕ್ರಮ ವಹಿಸಬೇಕಿದೆ. ಪೊಲೀಸರ ಕೆಲಸ ಜೀವ ತೆಗೆಯುವುದಲ್ಲ ಎಂಬುದನ್ನು ನಿರೂಪಿಸಲು ತ್ವರಿತವಾದ, ಸಂಪೂರ್ಣವಾದ, ಪೂರ್ಣ ಮಟ್ಟದ ತನಿಖೆಯಾಗಬೇಕು. ಇದುವೇ ರಾಜ್ಯ ಸರ್ಕಾರ ಸಂತ್ರಸ್ತರಿಗೆ ಮಾಡಬಹುದಾದ ಉಪಕಾರವಾಗಿದೆ. ಅಮಾಯಕರು, ದೇಶಭಕ್ತರು, ಭ್ರಮನಿರಸಗೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ.

ಡಾ. ಎಂ.ಎಸ್. ಮಣಿ

ಡಾ. ಎಂ.ಎಸ್. ಮಣಿ
ಸಾಮಾಜಿಕ ಮತ್ತು ಸಂಶೋಧನಾತ್ಮಕ ಲೇಖನಗಳನ್ನು ಬರೆಯುವ ಡಾ.ಎಂ.ಎಸ್.ಮಣಿ ಅವರು ಪತ್ರಕರ್ತರ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ತಲ್ಲಣ, ಹರಿವು, ಒಡಲಾಗ್ನಿ, ಭಾವಭಿತ್ತಿ, ಮನುಭಾರತ ಪುಸ್ತಕಗಳು ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...