Homeದಲಿತ್ ಫೈಲ್ಸ್ಸ್ವಾತಂತ್ರ್ಯದ ಅಮೃತ ಮಹೋತ್ಸವ: ದಲಿತರ ಸ್ಥಿತಿಗತಿಗಳು

ಸ್ವಾತಂತ್ರ್ಯದ ಅಮೃತ ಮಹೋತ್ಸವ: ದಲಿತರ ಸ್ಥಿತಿಗತಿಗಳು

- Advertisement -
- Advertisement -

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದವು. ದಲಿತ ಚಳವಳಿಯ ಸ್ಥಿತಿಗತಿ ಮತ್ತು ದಲಿತರ ಪರ್ಯಾಯ ರಾಜಕೀಯ ನಿಲುವುಗಳನ್ನು ನಾವು ಮರುಅವಲೋಕಿಸಿಕೊಳ್ಳಲು ಇದು ಸಕಾಲ ಅನಿಸುತ್ತದೆ. ಭಾರತವೆಂಬ ಮುಚ್ಚಲ್ಪಟ್ಟ ಸಮಾಜದೊಳಗೆ ಸಾವಿರಾರು ವರ್ಷಗಳಿಂದ ಹಲವು ರೀತಿಯ ದಬ್ಬಾಳಿಕೆ, ತಾರತಮ್ಯ ಮತ್ತು ಶೋಷಣೆಗಳನ್ನು ಅನುಭವಿಸಿದ ಅಸ್ಪೃಶ್ಯ ಜಾತಿಗಳ ಸ್ಥಿತಿಗಳಲ್ಲಿ ಇಂದೇನಾದರೂ ಬದಲಾವಣೆ ಆಗಿದೆಯೇ ಎಂಬುದನ್ನು ಅವಲೋಕಿಸಿದರೆ, ದಬ್ಬಾಳಿಕೆ-ತಾರತಮ್ಯ-ಶೋಷಣೆಗಳ ಸ್ವರೂಪ ಬದಲಾಗಿದೆಯೇ ಹೊರತು ಸ್ಥಿತಿ-ಗತಿ ಹಾಗೆಯೇ ಇರುವುದನ್ನು ನಾವು ಗಮನಿಸಬಹುದು. ಜಾತಿ ವ್ಯವಸ್ಥೆ ತನ್ನ ಸ್ವರೂಪವನ್ನು ಸಮಯಕ್ಕೆ ತಕ್ಕಂತೆ ಬದಲಿಸಿಕೊಂಡು, ಇವತ್ತಿಗೂ ನಿರಂತರವಾಗಿ ಮುಂದುವರಿಯುತ್ತಿರುವುದನ್ನು ನಾವು ಕಾಣಬಹುದು. ಈ ಸಂದರ್ಭದಲ್ಲಿ ಶಿವರಾಮ ಕಾರಂತರ ಪ್ರಸಿದ್ಧ ಕಾದಂಬರಿಯಾದ ಚೋಮನ ದುಡಿಯಲ್ಲಿ ಬರುವ ದಲಿತರ ಬದುಕಿನ ಚಿತ್ರಣ ನೆನಪಿಗೆ ಬರುತ್ತಿದೆ. 1931ರಲ್ಲಿ ಪ್ರಕಟಗೊಂಡ ಈ ಕೃತಿ ಕನ್ನಡದಲ್ಲಿ ಬಹುಚರ್ಚಿತವಾದ ಕಾದಂಬರಿಯಾಗಿದ್ದು ಅಸ್ಪೃಶ್ಯ ಸಮುದಾಯದ ಚೋಮನನ್ನು ಕೇಂದ್ರಪಾತ್ರದಲ್ಲಿಟ್ಟು ನಿರೂಪಿಸಲ್ಪಟ್ಟಿರುವ ಕಥನವಿದೆ; ಈ ಕಥನದಲ್ಲಿ ಸ್ವಾತಂತ್ರ್ಯಪೂರ್ವದ ದಲಿತರ ದಾರುಣ ಬದುಕನ್ನು ಕಾಣಬಹುದಾಗಿದೆ. ಆ ನಿಟ್ಟಿನಲ್ಲಿ ನೋಡಿದರೆ ಚೋಮನದುಡಿ ಏಕಕಾಲದಲ್ಲಿ ಕಾದಂಬರಿಯೂ ಹೌದು, ಹಾಗೆಯೇ ಭಾರತೀಯ ಸಾಮಾಜಿಕ ಚರಿತ್ರೆಯು ಹೌದು; ಏಕೆಂದರೆ ಸ್ವಾತಂತ್ರ್ಯಪೂರ್ವದ ಅಸ್ಪೃಶ್ಯರ ಬದುಕನ್ನು ಕಾದಂಬರಿ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಚೋಮನ ಬದುಕೇ ಅಂದಿನ ನಿಜವಾದ ದಲಿತರ ಬದುಕಾಗಿತ್ತು ಎಂಬುದರಮಟ್ಟಿಗೆ ದಲಿತರ ಜೀವನ ಈ ಕಾದಂಬರಿಯಲ್ಲಿ ಅಭಿವ್ಯಕ್ತಗೊಂಡಿದೆ. ಚೋಮ ಒಂದು ತುಂಡು ಭೂಮಿಗಾಗಿ ತನ್ನ ದಣಿಯ ಮುಂದೆ ಎಷ್ಟೇ ಅಧೀರನಾಗಿ ಮತ್ತು ದೈನ್ಯತೆಯಿಂದ ಕೇಳಿಕೊಂಡರೂ ಅದು ಸಾಧ್ಯವಾಗದ ಸ್ಥಿತಿ ಒಂದೆಡೆಯಾದರೆ, ಹೀಗೆ ಭೂಮಿ ಇಲ್ಲದ ನೂರಾರು ಕುಟುಂಬಗಳು ಕೂಲಿ ಕಾರ್ಮಿಕರಾಗಿ ಕಾಫಿ ಎಸ್ಟೇಟ್‌ಗೆ ವಲಸೆ ಹೋಗಿ ಆಳುಗಳಾಗಿ ದುಡಿಯುವ ಮತ್ತೊಂದು ಚಿತ್ರಣ ಕೂಡ ಈ ಕಾದಂಬರಿಯಲ್ಲಿದೆ. ಚೋಮನ ಪಾತ್ರ ಪ್ರಮುಖವಾಗಿ ನಮ್ಮೆದುರಿಗೆ ನಿಂತರೂ ಅವನಂತೆ ಇರುವ ಸಾವಿರಾರು ಕುಟುಂಬಗಳ ಚಿತ್ರಣ ಚೋಮನ ಕುಟುಂಬದ ನೆರಳಿನಂತೆ ನಮಗೆ ಇಲ್ಲಿ ಭಾಸವಾಗುತ್ತದೆ. ಅದೇ ರೀತಿ ಚೋಮನ ಬದುಕು ಮತ್ತು ಅವನನ್ನು ಈ ಸಮಾಜ ನಡೆಸಿಕೊಳ್ಳುವ ಅಂಶವನ್ನು ಗಮನಿಸೋಣ; ಆಕಸ್ಮಿಕವಾಗಿ ಹೊಳೆಯಲ್ಲಿ ಕೊಚ್ಚಿಹೋಗುವ ಚೋಮನ ಕಿರಿಯ ಮಗನನ್ನು ರಕ್ಷಿಸಲು ಒಬ್ಬ ಬ್ರಾಹ್ಮಣ ಸಮುದಾಯದ ಯುವಕ ಮುಂದಾದಾಗ ಅಲ್ಲೇ ನಡೆದುಹೋಗುತ್ತಿದ್ದ ಮತ್ತೊಬ್ಬ ಬ್ರಾಹ್ಮಣ ಅವನನ್ನು ಮುಟ್ಟಬಾರದು, ಅವನು ಅಸ್ಪೃಶ್ಯ ಎನ್ನುತ್ತಾನೆ. ಆಗ ಆ ಯುವಕ ಬೆಚ್ಚಿದವನಂತೆ ನಿಂತು ಚೋಮನ ಮಗನನ್ನು ರಕ್ಷಿಸಲು ಹೋಗುವುದಿಲ್ಲ. ಎರಡನೆ ಘಟನೆ; ಚೋಮ ಗೇಣಿಗೆ ಭೂಮಿ ಕೊಡುವಂತೆ ತನ್ನ ದಣಿಗಳಲ್ಲಿ ವಿನಂತಿಸಿಕೊಂಡಾಗ ದಣಿ ಸಂಕಪ್ಪಯ್ಯನವರು ತಮ್ಮ ತಾಯಿಯವರ ಅಭಿಪ್ರಾಯವನ್ನು ಕೇಳುತ್ತಾರೆ. ಆಗ ಅವರ ತಾಯಿ ನೀಡುವ ಪ್ರತಿಕ್ರಿಯೆ: “ಏನು ಆ ಹೊಲೆಯನಿಗೆ ಅಷ್ಟು ಸೊಕ್ಕು ಬಂತೆ”, ಹೀಗೆ ಮಗನಿಗೆ ಹೇಳುತ್ತಾ, “ನೋಡು ಇದುವರೆಗೂ ಘಟ್ಟದ ಮೇಲೆ ಯಾರೂ ಅಸ್ಪೃಶ್ಯನಿಗೆ ಭೂಮಿ ಗೇಣಿಗೆ ಕೊಟ್ಟ ಉದಾಹರಣೆಗಳಿಲ್ಲ. ನೀನು ಅಸ್ಪೃಶ್ಯನಿಗೆ ಭೂಮಿಯನ್ನು ಗೇಣಿಗೆ ಕೊಟ್ಟೆ ಎಂಬ ಅಪಕೀರ್ತಿಗೆ ಒಳಗಾಗಬೇಡ” ಎಂದು ತಾಯಿ ಎಚ್ಚರಿಸುತ್ತಾಳೆ. ಈ ಮಾತನ್ನು ಕೇಳುವ ಸಂಕಪ್ಪಯ್ಯ, “ನೋಡು ಚೋಮ ನಮ್ಮ ತಾಯಿ ಇರುವದರೆಗೂ ನಿನಗೆ ಭೂಮಿ ಕೊಡಲು ಸಾಧ್ಯವಾಗುವುದಿಲ್ಲ” ಎನ್ನುತ್ತಾನೆ. ಸ್ವಾತಂತ್ರ್ಯಪೂರ್ವದ ಈ ಸ್ಥಿತಿ ಇಂದಿಗೂ ಬದಲಾಗದೆ ಇರುವುದು ದುರಂತ.

ಇತ್ತೀಚಿಗೆ ಕೋಲಾರ ಜಿಲ್ಲೆಯ ಟೇಕಲ್ ಹೋಬಳಿಯ ಹುಳ್ಳೇರಹಳ್ಳಿ ಗ್ರಾಮದಲ್ಲಿ ಒಬ್ಬ ದಲಿತ ಬಾಲಕ ದೇವರ ಕೋಲನ್ನು ಮುಟ್ಟಿದ ಎಂಬ ಕಾರಣಕ್ಕೆ ಆ ಬಾಲಕನ ಕುಟುಂಬಕ್ಕೆ ಬಹಿಷ್ಕಾರ ಹಾಕಿ, ದಂಡ ವಿಧಿಸಲಾಯಿತು; ಈ ಮನಸ್ಥಿತಿಗೂ ಚೋಮನ ಮಗ ನೀರಿನಲ್ಲಿ ಕೊಚ್ಚಿ ಹೋಗುವಾಗ ಅವನು ಅಸ್ಪೃಶ್ಯ, ಅವನನ್ನು ಮುಟ್ಟಬಾರದು ಎಂದು ಆ ಮಗುವಿನ ಸಾವಿಗೆ ಕಾರಣವಾದ ಮನಸ್ಥಿತಿಗೂ ಅಂತಹ ಯಾವ ವ್ಯತ್ಯಾಸಗಳೂ ಇಲ್ಲ. ಇನ್ನು ಭೂಮಿಯ ಪ್ರಶ್ನೆ ಬಂದಾಗ ಚೋಮನಂತೆ ಇವತ್ತಿಗೂ ಗೇಣು ಭೂಮಿಗಾಗಿ ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಪರದಾಡುತ್ತಿರುವ ಕೋಟ್ಯಂತರ ಚೋಮರನ್ನು ಕಾಣಬಹುದು. ಪ್ರಜಾಪ್ರಭುತ್ವ ವ್ಯವಸ್ಥೆ ಬಂದು ಏಳು ದಶಕಗಳೇ ಕಳೆದುಹೋದರೂ ಅಸ್ಪೃಶ್ಯ ಜನಾಂಗಗಳ ಬದುಕುಗಳಲ್ಲಿ ಯಾವ ಮಟ್ಟದ ಸುಧಾರಣೆಗಳು ಸಾಧ್ಯವಾಗಿವೆ ಎಂಬುದು ಇವತ್ತಿಗೂ ಪ್ರಶ್ನೆಗಳಾಗಿಯೇ ಉಳಿದಿವೆ.

ಅಂದ ಮಾತ್ರಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಶೋಷಿತ ಸಮುದಾಯಗಳ ಬದುಕಿಗೆ ಆಸರೆಯಾಗಿಲ್ಲವೇ ಎಂಬ ಪ್ರಶ್ನೆಯು ಬರುತ್ತದೆ; ಸಂವಿಧಾನ ಮತ್ತು ಪ್ರಜಾಪ್ರಭುತ್ವ ಈ ಸ್ಥಗಿತ ಸಮಾಜವು ಚಲನೆಗೊಳ್ಳಲು ನೆರವಾಗಿವೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ದಲಿತರ ಮೇಲೆ ದಾಖಲಾಗುತ್ತಿರುವ ದೌರ್ಜನ್ಯ ಪ್ರಕರಣಗಳು ಮಾತ್ರ ದಿನೇದಿನೇ ಹೆಚ್ಚಾಗುತ್ತಲೇ ಇವೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ ದಲಿತ ಸಮುದಾಯಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ಆದ ಪ್ರಮಾಣ ಅತ್ಯಂತ ಕಡಿಮೆ ಎಂಬುದು ದುರಂತ ಸಂಗತಿ. ಇವತ್ತಿಗೂ ಪತ್ರಿಕೆಗಳಲ್ಲಿ ಮತ್ತು ಇತರ ಸುದ್ದಿ ಮಾಧ್ಯಮಗಳಲ್ಲಿ ದಿನಕ್ಕೊಂದಾದರು ದಲಿತರ ಮೇಲಿನ ದೌರ್ಜನ್ಯ, ಬಹಿಷ್ಕಾರ, ದಲಿತ ಹೆಣ್ಣು ಮಕ್ಕಳನ್ನು ಮೇಲೆ ಅತ್ಯಾಚಾರ ಮುಂತಾದ ಸುದ್ದಿಗಳು ಇದ್ದೇ ಇರುತ್ತವೆ. ದಲಿತ ಸಮುದಾಯಗಳ ವ್ಯಕ್ತಿಗಳ ಮೇಲಿನ ಈ ದೌರ್ಜನ್ಯ, ಶೋಷಣೆ ಮತ್ತು ದಬ್ಬಾಳಿಕೆಗಳನ್ನು ತಡೆಯುವಲ್ಲಿ ಸರ್ಕಾರಗಳಿಗಾಗಲೀ, ದಲಿತ ಚಳವಳಿಗಳಿಗಾಗಲೀ ಏಕೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ನಾವೆಲ್ಲರೂ ಅವಲೋಕನ ಮಾಡಿಕೊಳ್ಳಬೇಕಾಗಿದೆ.

ಇದನ್ನೂ ಓದಿ: ಮಾತು ಮರೆತ ಭಾರತ-29; ಲಾಕ್‌ಡೌನ್ ಫೈಲ್ಸ್: ಕ್ವಾರಂಟೈನ್ ಅಲ್ಲೂ ದಲಿತರಿಗೆ ಇಲ್ಲದಾದ ರಕ್ಷಣೆ

ಕರ್ನಾಟಕದ ದಲಿತ ಚಳವಳಿಗಳು ಇಲ್ಲಿನ ದಮನಿತ ಜನಸಮುದಾಯಗಳಲ್ಲಿ ಜಾಗೃತಿಯನ್ನು ಮೂಡಿಸಿರುವುದು ನಿಜವೇ ಆದರೂ ದಲಿತರನ್ನು ರಾಜಕೀಯವಾಗಿ ಪ್ರಬಲಗೊಳಿಸುವಲ್ಲಿ ಯಶಸ್ವಿಯಾಗಿಲ್ಲ. ಇದಕ್ಕಿಂತ ಮುಖ್ಯವಾದ ಸಂಗತಿ, ದಲಿತ ಚಳವಳಿ ಬದಲಾದ ಕಾಲಘಟ್ಟಕ್ಕೆ ಬೇಕಿರುವ ಹೊಸ ನಾಯಕತ್ವವನ್ನು ಬೆಳೆಸದಿರುವುದರ ಜೊತೆಗೆ ಚಳವಳಿಯಲ್ಲಿ ಬೆಳೆದ ನಾಯಕತ್ವದ ಬಿಕ್ಕಟ್ಟು ಮತ್ತು ಉಪಜಾತಿಗಳ ಸಂಘರ್ಷಗಳು ಈ ಚಳವಳಿಯ ಪರಿಣಾಮವನ್ನು ಕುಂಠಿಸುವುದಕ್ಕೆ ಕಾರಣವಾದವು. ಇವೆಲ್ಲವುದರಿಂದ ದಲಿತರ ಬಗೆಗಿನ ನೈಜ ಕಾಳಜಿ ಹಿನ್ನೆಲೆಗೆ ಸರಿದಿರುವುದು ನಮ್ಮೆಲ್ಲರಿಗೂ ತಿಳಿಯದಿರುವ ವಿಚಾರವೇನಲ್ಲ.

ಇವೆಲ್ಲವೂ ಚಳವಳಿಯ ಧ್ವನಿ ಕಡಿಮೆಯಾಗಲು ಮುಖ್ಯ ಕಾರಣವಾಗಿದ್ದರೆ, ಇದರ ದುಷ್ಪರಿಣಾಮಗಳು ನೇರವಾಗಿ ದಲಿತ ಸಮುದಾಯದ ಮೇಲೆ ಆಗುತ್ತಿದ್ದು, ದೌರ್ಜನ್ಯಗಳು ಹೆಚ್ಚಾಗಲೂ ಕಾರಣವಾಗುತ್ತಿದೆ. ಈ ಸಂಗತಿಗಳನ್ನು ಗಂಭೀರವಾಗಿ ತೆಗೆದುಕೊಂಡು ದಲಿತ ಚಳವಳಿ ಕಾಲಕ್ಕೆ ತಕ್ಕಂತೆ ತನ್ನ ಸ್ವರೂಪವನ್ನು ಬದಲಿಸಿಕೊಂಡು ಮರುರೂಪುಗೊಳ್ಳಬೇಕಿದೆ ಹಾಗೂ ಅದರ ಜೊತೆಗೆ ಪರ್ಯಾಯ ರಾಜಕೀಯ ಶಕ್ತಿಯಾಗಿ ಪ್ರಬಲಗೊಳ್ಳಬೇಕಾದ ಅನಿವಾರ್ಯತೆಯ ಕಾಲದಲ್ಲಿ ನಾವಿದ್ದೇವೆ. ಇಲ್ಲದಿದ್ದರೆ ದಲಿತರ ಅಮೂಲ್ಯವಾದ ಮತಗಳು ಎಂದಿನಂತೆ ಉಳ್ಳವರ ಸರಕಾಗಿ ದಲಿತರ ಶತಮಾನಗಳ ಸ್ಥಿತಿ-ಗತಿ ಯಥಾಸ್ಥಿತಿಯಾಗಿಯೇ ಉಳಿದುಕೊಳ್ಳಲಿದೆ.

ಡಾ. ನಾರಾಯಣ್ ಕ್ಯಾಸಂಬಳ್ಳಿ

ಡಾ. ನಾರಾಯಣ್ ಕ್ಯಾಸಂಬಳ್ಳಿ
ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರು. ಹಲವು ಚಳವಳಿ ಮತ್ತು ಹೋರಾಟಗಳ ಸಂಗಾತಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...