Homeಮುಖಪುಟತುಳಿತಕ್ಕೊಳಗಾದವರೆಲ್ಲರೂ ದಲಿತರೆ; ಆದರೆ ದಲಿತರೆಲ್ಲರೂ ಅಸ್ಪೃಶ್ಯರಲ್ಲ- ಡಾ.ಎಸ್.ಕೆ.ಮಂಜುನಾಥ್

ತುಳಿತಕ್ಕೊಳಗಾದವರೆಲ್ಲರೂ ದಲಿತರೆ; ಆದರೆ ದಲಿತರೆಲ್ಲರೂ ಅಸ್ಪೃಶ್ಯರಲ್ಲ- ಡಾ.ಎಸ್.ಕೆ.ಮಂಜುನಾಥ್

‘ದಲಿತರ ಸಾಂಸ್ಕೃತಿಕ ಪ್ರತಿರೋಧ’ ಮತ್ತು ‘ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ’ ಹೋರಾಟಗಳು ದಲಿತರ ಅಸ್ಮಿತೆ ಮತ್ತು ಹಸಿವಿನ ಚಳವಳಿಗಳಾಗಿವೆ.

- Advertisement -
- Advertisement -

2022 ಡಿಸೆಂಬರ್ 06 ಮತ್ತು 11 ನೇ ತಾರೀಖು ಕರ್ನಾಟಕದಲ್ಲಿ ಐತಿಹಾಸಿಕ ದಿನಗಳು. ದಲಿತರ ಅಸ್ಮಿತೆ ಮತ್ತು ಹಸಿವಿನ ಹೋರಾಟಗಳಾದ ‘ದಲಿತರ ಸಾಂಸ್ಕೃತಿಕ ಪ್ರತಿರೋಧ’ ಮತ್ತು ‘ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ’ ಎಂಬ ಎರಡು ಜನಚಳವಳಿಗಳು ಜರುಗುತ್ತಿವೆ. ದಲಿತ ಅಸ್ಮಿತೆಯನ್ನು ಕೇಂದ್ರವಾಗಿಟ್ಟುಕೊಂಡ ಕಾರ್ಯಕ್ರಮವು ಮೊದಲು ಒಳಗೊಳ್ಳುವಿಕೆಯ ಹಿನ್ನೆಲೆಯಲ್ಲಿ ಅನೇಕ ಪ್ರಶ್ನೆಗಳ, ಚರ್ಚೆಗಳ ನಡುವೆಯೂ ಅಭೂತಪೂರ್ವವಾಗಿ ಯಶಸ್ವಿಯಾಗಿದೆ. ಆಳುವ ಸರ್ಕಾರಗಳು ದಲಿತರನ್ನು ಒಡೆದು ರಾಜಕಾರಣ ಮಾಡಲು ಸದಾ ತುದಿಗಾಲಲ್ಲಿ ನಿಂತಿರುತ್ತದೆ. ಇಂತಹ ರಾಜಕಾರಣದ ಸುಳಿಗೆ ಸಿಕ್ಕಿದ ದಲಿತ ಚಳವಳಿ ವಿಘಟನೆಗೊಂಡದ್ದು ಇತಿಹಾಸ. ಆದರೆ ಅದರಿಂದ ಕಲಿತ ಪಾಠ ಬಹಳ.

ಕರ್ನಾಟಕದಲ್ಲಿ ಎಪ್ಪತ್ತರ ದಶಕದಲ್ಲಿ ಎಲ್ಲಾ ಜಾತಿಗಳ ಪ್ರಜ್ಞಾವಂತರು ದಲಿತರ ನೇತೃತ್ವದಲ್ಲಿ ದಮನಿತರ ಪರವಾಗಿ ಜೊತೆಯಾದರು. ತಮ್ಮ ಮೇಲಾಗುತ್ತಿರುವ ಅಸಮಾನತೆ, ದಬ್ಬಾಳಿಕೆ, ಅಸ್ಪೃಶ್ಯತೆ ಮುಂತಾದವುಗಳ ವಿರುದ್ಧ ಸಿಡಿದ ಕಾಲುದಾರಿಯ ಬಯಲ ಪಯಣಗಳು ಹೆದ್ದಾರಿಗೆ ಬಂದು ಸೇರಿ ಈ ನೆಲದಲ್ಲಿ ಸಾಮಾಜಿಕ ಕ್ರಾಂತಿಯನ್ನೇ ಮಾಡಲಾಯಿತು. ಅಷ್ಟೇ ಅವಸರದಲ್ಲೇ ಕವಲುದಾರಿಯಾಗಿ ಚದುರಿಹೋದವು. ಈಗ ತಮ್ಮ ಮೇಲಾಗುತ್ತಿರುವ ಸಾಂಸ್ಕೃತಿಕ ದಬ್ಬಾಳಿಕೆಯನ್ನು ಹಿಮ್ಮೆಟ್ಟಿಸಲು ಚದುರಿದ ಈ ದಾರಿಗಳು ಮತ್ತೊಮ್ಮೆ ಹೆದ್ದಾರಿಗೆ ಕೂಡುವಿಕೆಗಾಗಿ ಬಂದರೆ ಪರವಾಗಿಲ್ಲ; ಮತ್ತೆ ಚದುರಿದರೆ ಇದೊಂದು ಆತ್ಮಹತ್ಯೆಯ ದಾರಿಯಾಗುತ್ತದೆ. ಒಳಮೀಸಲಾತಿಯ ಚರ್ಚೆ ಮತ್ತೆಮತ್ತೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ; ಏಕೆಂದರೆ ಇದು ಒಡಲಿಗೆ ಸಂಬಂಧಿಸಿದ್ದಾರಿಂದ. ಇಂತಹ ಬಿಕ್ಕಟ್ಟಿನ ಹೊತ್ತಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿಯ ಒಂದಷ್ಟು ನೋಟಗಳು.

• ಸಾಮಾಜಿಕ ನ್ಯಾಯದ ಕಣ್ಣಿನ ಜೊತೆಗೆ ಅಂತಃಕರಣದ ಕಣ್ಣು ಬೇಕು

“ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಲ್ಲಿನ ಒಳಜಾತಿಗಳಿಗೆ ಒಳಮೀಸಲಾತಿ ನೀಡಲು ರಾಜ್ಯಗಳು ವ್ಯವಸ್ಥೆ ಮಾಡಿಕೊಳ್ಳಬಹುದು. ಒಳಮೀಸಲಾತಿ ನೀಡುವುದರಿಂದ, ಸಂವಿಧಾನದ 341 ಅಥವಾ 342ನೇ ವಿಧಿಯಲ್ಲಿನ ಪಟ್ಟಿಯನ್ನು ಯಾವುದೇ ರೀತಿಯಲ್ಲಿಯೂ ತಿರುಚಿದಂತೆ ಆಗುವುದಿಲ್ಲ” ಎಂಬುದಾಗಿ ದಿನಾಂಕ 27.08.2020ರಂದು ನ್ಯಾ.ಅರುಣ್‌ಮಿಶ್ರಾ ನೇತೃತ್ವದ ಸುಪ್ರೀಂಕೋರ್ಟಿನ ಪಂಚಪೀಠವು ಐತಿಹಾಸಿಕ ತೀರ್ಪು ನೀಡಿತು. ಈ ಹಿನ್ನೆಲೆಯಲ್ಲಿ ಸುಮಾರು ಮೂರು ದಶಕಗಳ ಒಳಮೀಸಲಾತಿ ಹೋರಾಟಕ್ಕೆ ಮರುಭೂಮಿಯಲ್ಲಿ ಓಯಸಿಸ್ಸು ಸಿಕ್ಕಂತಾಯಿತು. ಕರ್ನಾಟಕದ ರಾಜಕಾರಣ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿರುವ ಒಳಮೀಸಲಾತಿಯ ವಿಚಾರಕ್ಕೆ ಸುಪ್ರೀಂಕೋರ್ಟಿನ ಈ ತೀರ್ಪಿನ ಹಿನ್ನೆಲೆಯಲ್ಲಿ ವಾದ-ವಾಗ್ವಾದ-ಸಂವಾದಗಳು ಮತ್ತೆ ಮುನ್ನೆಲೆಗೆ ಬಂದಿರುವುದು ಆರೋಗ್ಯಕರ ಸಂಗತಿಯಾಗಿದೆ. ಹಾಗಾಗಿ ಅನೇಕ ಚಿಂತಕರು ಒಳಮೀಸಲಾತಿ ಕುರಿತು ತಮ್ಮ ಚಿಂತನೆಗಳನ್ನು ವ್ಯಕ್ತಪಡಿಸಿದ್ದಾರೆ. ನ್ಯಾ.ಎ.ಜೆ.ಸದಾಶಿವ ಆಯೋಗಯನ್ನು ‘ಸಾಮಾಜಿಕ ಹಗರಣ’ ಮತ್ತು ‘ಅವೈಜ್ಞಾನಿಕ’ ಎಂದೆಲ್ಲ ಕೆಲವರು ಬರೆದಿದ್ದಾರೆ. ಇಂತಹ ಹೇಳಿಕೆಗಳೇ ಅಸಂವಿಧಾನಿಕ ಹಾಗೂ ಅವೈಜ್ಞಾನಿಕ ತಿಳುವಳಿಕೆಯಿಂದ ಕೂಡಿರುವಂಥವು. ಸಾಮಾಜಿಕ ಅಸಮಾನತೆ ನಿವಾರಣೆಗೆ ಮೀಸಲಾತಿ ಒಪ್ಪುವ ಎಲ್ಲರೂ ಒಳಮೀಸಲಾತಿಯನ್ನು ಒಪ್ಪಲೇಬೇಕು. ಮೀಸಲಾತಿ ಸಂವಿಧಾನಬದ್ಧವಾದರೆ, ಹಂಚಿಕೊಂಡು ತಿನ್ನುವ ಒಳಮೀಸಲಾತಿಯೂ ಕೂಡ ಸಂವಿಧಾನಬದ್ಧವಾಗಿರುತ್ತದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರೇ ಈಗ ಇದ್ದಿದ್ದರೆ ಒಳಮೀಸಲಾತಿ ವಿರೋಧಿ ನಿಲುವುಗಳನ್ನು ಖಂಡಿತಾ ಒಪ್ಪುತ್ತಿರಲಿಲ್ಲ! ಮೀಸಲಾತಿಯ ಎಲ್ಲಾ ಸೌಲಭ್ಯವನ್ನು ಅನುಭವಿಸಿ ಒಳಮೀಸಲಾತಿಯನ್ನು ವಿರೋಧಿಸುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ನಿಲುವು ಹಾಗೂ ನೈತಿಕತೆ ಇಲ್ಲದ ಅರಿವು.

ಜಸ್ಟಿಸ್.ಎಚ್.ಎನ್.ನಾಗಮೋಹನದಾಸ್ ಅವರು ನ್ಯಾ.ಸದಾಶಿವ ಆಯೋಗವನ್ನು ಕುರಿತು- “ಸದಾಶಿವ ಆಯೋಗ ವರದಿಯನ್ನು ಕೆಲವರು ವಿರೋಧ ಮಾಡುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ, ತಿಳುವಳಿಕೆಯ ಕೊರತೆ; ಮತ್ತು ಕೆಲವರು ದುರುದ್ದೇಶದಿಂದ ವಿರೋಧ ಮಾಡುತ್ತಿದ್ದಾರೆ. ಇವೆರಡೂ ತಪ್ಪೆ. ನಿಷ್ಪಕ್ಷಪಾತವಾಗಿ ಈ ವರದಿಯ ಎಲ್ಲಾ ಆಯಾಮಗಳನ್ನು ತಿಳಿದುಕೊಂಡು ನೋಡಿ. ಕೆನೆಪದರಕ್ಕೂ ಒಳಮೀಸಲಾತಿಗೂ ಸಂಬಂಧವಿಲ್ಲ” ಎಂದು ದಿನಾಂಕ 11.09.2020 ರಂದು ನಡೆದ ವೆಬಿನಾರಿನಲ್ಲಿ ಸ್ವಷ್ಟವಾಗಿ ಖಚಿತವಾಗಿ ಹೇಳಿದ್ದಾರೆ. ಒಳಮೀಸಲಾತಿ ಯಾಕೆ ಬೇಕು? ಎಂಬುದನ್ನು ಮೀಸಲಾತಿಯ ಫಲಾನುಭವಿಗಳು ಒಮ್ಮೆ ಸಾಮಾಜಿಕ ನ್ಯಾಯದ ಕಣ್ಣಿನಿಂದ ನೋಡಬೇಕು. ಅಲೆಮಾರಿ, ಮೋಚಿ, ದಕ್ಕಲರು, ಸಮಗಾರ, ಡೋಹರ, ಪೌರಕಾರ್ಮಿಕರ ಮುಂತಾದವರ ಬದುಕನ್ನು ಅಂತಃಕರಣದ ಕಣ್ಣಿಂದ ನೋಡಿದಾಗ ಮಾತ್ರ ಅದು ತಿಳಿಯುತ್ತದೆ. ಇಲ್ಲದಿದ್ದರೆ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಎನ್ನುವ ಮಾತುಗಳು ಸವಕಲಾಗಿ ಬರೀ ವೇದಿಕೆಗೆ ಸೀಮಿತವಾಗಿರುತ್ತದೆಯಷ್ಟೆ.

• Homogeneous (ಏಕಸ್ವರೂಪ) ಮತ್ತು Heterogeneous (ಬಹುಸ್ವರೂಪ)

ಸುಪ್ರೀಂಕೋರ್ಟಿನ ಪಂಚಪೀಠವು ಒಳಮೀಸಲಾತಿ ಕುರಿತು ನೀಡಿದ ಎರಡು ತೀರ್ಪುಗಳು ಪರಿಶಿಷ್ಟಜಾತಿಗಳ ಸ್ವರೂಪವನ್ನು ಭಿನ್ನ ನೆಲೆಯಲ್ಲಿ ಕಂಡುಕೊಂಡಿವೆ. ದಿನಾಂಕ 05.11.2004ರಂದು ಇ.ವಿ.ಚಿನ್ನಯ್ಯ ಪ್ರಕರಣದಲ್ಲಿ ನ್ಯಾ.ಸಂತೋಷ್ ಹೆಗಡೆ ನೇತೃತ್ವದ ಪೀಠವು Homogeneous ಎಂಬ ನೆಲೆಯಲ್ಲಿ ಪರಿಶಿಷ್ಟಜಾತಿಗಳನ್ನು ‘ಏಕಸ್ವರೂಪ ಜಾತಿಗಳು’ ಎಂದು ಪರಿಗಣಿಸಿ ಒಳಮೀಸಲಾತಿಯನ್ನು ಕೊಡಲು ನಿರಾಕರಿಸಿತು. ಅಂದರೆ ಪರಿಶಿಷ್ಟ ಜಾತಿಗಳೆಲ್ಲ ಒಂದೇ ಆಗಿದ್ದರೆ ಈ ಹೋರಾಟವೇ ಹುಟ್ಟುತ್ತಿರಲಿಲ್ಲ. ಈ ತೀರ್ಪು ಸಮುದ್ರದಲ್ಲಿದ್ದವನಿಗೆ ಬಾಯಾರಿದಂತೆ ವಾಸ್ತವಕ್ಕೆ ವ್ಯತಿರಿಕ್ತವಾದ ಅಂಶಗಳನ್ನು ಒಳಗೊಂಡಿತ್ತು. ಇದನ್ನು ಪ್ರಶ್ನಿಸಿ ಒಳಮೀಸಲಾತಿ ಹೋರಾಟಗಾರರು ಮೇಲ್ಮನವಿ ಸಲ್ಲಿಸಿ ವಾಸ್ತವಾಂಶವನ್ನು ಕೋರ್ಟಿಗೆ ಮನವರಿಕೆ ಮಾಡಿದರು. ಈ ಪ್ರಕರಣವನ್ನು ಪರಿಶೀಲಿಸಿ ದಿನಾಂಕ 27.08.2020ರಂದು ನ್ಯಾ.ಅರುಣ್ ಮಿಶ್ರಾ ನೇತೃತ್ವದ ಪೀಠವು Homogeneous ಎಂದು ಪರಿಗಣಿಸಲ್ಪಟ್ಟಿದ್ದ ಪರಿಶಿಷ್ಟಜಾತಿಗಳು ಏಕಸ್ವರೂಪದವು ಎಂಬುದನ್ನು ನಿರಾಕರಿಸಿ, ಪರಿಶಿಷ್ಟಜಾತಿಗಳು ಬಹುಸ್ವರೂಪ ಜಾತಿಗಳು Heterogeneous ಎಂಬ ವಾಸ್ತವಾಂಶವನ್ನು ಗಮನಿಸಿತು. “ಒಂದೇ ವರ್ಗ ಎಂಬ ಕಾರಣಕ್ಕೆ ಹಣ್ಣುಗಳ ಇಡೀ ಬುಟ್ಟಿಯನ್ನು ಬಲಶಾಲಿ ಜಾತಿಗೆ ಮಾತ್ರ ನೀಡಲಾಗದು. ಇದರಿಂದ ಇತರ ಜಾತಿಗಳಿಗೆ ಅನ್ಯಾಯ ಆಗುತ್ತದೆ” ಎಂದು ಆ ಪೀಠ ಅಭಿಪ್ರಾಯಪಟ್ಟಿದೆ. ಹಾಗಾದರೆ ಪರಿಶಿಷ್ಟಜಾತಿಗಳು ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಒಗ್ಗೂಡಿವೆಯೇ ಎಂದರೆ, ಖಂಡಿತವಾಗಿ ಇಲ್ಲ. ಸುಧಾ ಪೈ ಅವರು ಆDalit Assertion ಎಂಬ ಕೃತಿಯಲ್ಲಿ ‘ದಲಿತ ಸಮುದಾಯಗಳು ಬಹುಸ್ವರೂಪದಿಂದ ಕೂಡಿವೆ’ ಎಂದು ಹೇಳಿರುವುದನ್ನು ಗಮನಿಸಬಹುದು. ಈ ಕೃತಿಯನ್ನು Oxford University Press ಪ್ರಕಟಿಸಿದೆ.

• ನೂರೊಂದು ಪರಿಶಿಷ್ಟ ಜಾತಿಗಳು ಒಂದೇ ಅಲ್ಲ; ಅವೆಲ್ಲವೂ ಬಹುರೂಪಿ ಹಿನ್ನೆಲೆಯವು

ಶೋಷಣೆಗೊಳಪಟ್ಟ ಎಲ್ಲಾ ಜಾತಿಗಳು, ಸಮುದಾಯಗಳು ಸಮಾನ ಬದುಕಿಗಾಗಿ ಹೋರಾಡುವುದು ಅನಿವಾರ್ಯ ಮತ್ತು ಅಗತ್ಯವೂ ಹೌದು. ಆದರೆ, ಇಲ್ಲಿ ಜಾತಿಗಳ ಸಂಖ್ಯೆ ಹೆಚ್ಚಿತೇ ವಿನಃ ಮೀಸಲಾತಿಯ ಪ್ರಮಾಣದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಸಾಮಾಜಿಕವಾಗಿ ಮತ್ತು ಸಾಂವಿಧಾನಿಕವಾಗಿ ‘ಪರಿಶಿಷ್ಟಜಾತಿ’ಯ ಎಲ್ಲರೂ ಒಂದೇ ಆಗಿದ್ದರೆ ಯಾವ ಸಮಸ್ಯೆಯಿಲ್ಲ. ಸಾಂವಿಧಾನಿಕವಾಗಿ ಮಾತ್ರ ನಾವೆಲ್ಲರೂ ಒಂದು. ಆದರೆ, ಸಾಮಾಜಿಕವಾಗಿ ಇಲ್ಲಿ ‘ಸ್ಪೃಶ್ಯ’ ಮತ್ತು ‘ಅಸ್ಪೃಶ್ಯ’ರೆಂಬ ಸಣ್ಣ ಗೆರೆಯಿದೆ. ಸಾಮಾಜಿಕವಾಗಿ ಅಸ್ಪೃಶ್ಯ ಜಾತಿಯವರು ಮಾದಿಗಹೊಲೆಯ ಸಂಬಂಧಿತ ಜಾತಿಗಳು ಮಾತ್ರವೇ. ಪರಿಶಿಷ್ಟಜಾತಿಯಲ್ಲಿರುವ ಸ್ಪೃಶ್ಯ ಜಾತಿ-ಸಮುದಾಯಗಳು ‘ಸಾಂವಿಧಾನಿಕ’ವಾಗಿ ಮಾತ್ರ ಒಂದು. ಆದರೆ, ಸಾಮಾಜಿಕವಾಗಿ ಬೇರೆ ಬೇರೆಯಾದ ಚೌಕಟ್ಟಿನಲ್ಲಿ ಸಿಲುಕಿವೆ. ನೂರೊಂದು ಜಾತಿಗೂ ಒಂದೊಂದು ರೀತಿಯ ಆಚರಣೆ, ಸಂಪ್ರದಾಯ, ಆಹಾರಪದ್ಧತಿ, ಸಾಂಸ್ಕೃತಿಕ ಭಿನ್ನತೆಯ ಚರಿತ್ರೆಗಳಿವೆ. ಸಾಂಸ್ಕೃತಿಕವಾಗಿ ಶ್ರೀಮಂತ ಸಂಸ್ಕೃತಿಗಳನ್ನು ಒಳಗೊಂಡಿರುವ ಎಡಪಣಕಟ್ಟಿನ ಮಾದಿಗ ಸಮುದಾಯ ಹಾಗೂ ಹೊಲೆಯ, ಲಂಬಾಣಿ, ಭೋವಿ, ಕೊರಮ, ಕೊರಚ ಮುಂತಾದ ಈ ಎಲ್ಲಾ ಸಂಬಂಧಿತ ಜಾತಿಗಳು ಯಾವತ್ತು ಒಟ್ಟಾಗಿಲ್ಲ. ಪರಿಶಿಷ್ಟ ಜಾತಿಯ ‘ಸ್ಪೃಶ್ಯ’ ಮತ್ತು ‘ಅಸ್ಪೃಶ್ಯ’ ಸಮುದಾಯಗಳ ನಡುವೆ ಪ್ರೇಮವಿವಾಹಗಳನ್ನು ಬಿಟ್ಟರೆ, ಯಾವುದೇ ರೀತಿಯ ವೈವಾಹಿಕ ಸಂಬಂಧಗಳು ಏರ್ಪಟ್ಟಿಲ್ಲ. ಅದರಲ್ಲೂ ಅಸ್ಪೃಶ್ಯರಾದ ಮಾದಿಗ-ಹೊಲೆಯರಲ್ಲಿಯೂ ವೈವಾಹಿಕ ಸಂಬಂಧಗಳು ನಡೆದಿಲ್ಲ. ವೈವಾಹಿಕ ಸಂಬಂಧಗಳು ನಡೆದಿದ್ದರೆ ಅಲ್ಲೊಂದು ಕ್ರಾಂತಿಯೇ ನಡೆದಿರುತ್ತದೆ. ಹೊಲೆಯರು ಮಾದಿಗರನ್ನು, ಮಾದಿಗರು ಹೊಲೆಯರನ್ನು ಮನೆಯೊಳಕ್ಕೆ ಬಿಟ್ಟುಕೊಂಡಿಲ್ಲ. ಮಾದಿಗರು ದಕ್ಕಲರನ್ನು ಮನೆಯೊಳಗೆ ಬಿಟ್ಟುಕೊಂಡಿಲ್ಲ. ನಾವೆಲ್ಲರೂ ಅಣ್ಣತಮ್ಮಂದಿರು ಎಂದು ಹೇಳಿದ ಮಾತ್ರಕ್ಕೆ ವೈವಾಹಿಕ ಸಂಬಂಧಗಳಾಗಲೀ, ನೈಜ ಕೂಡು ಸಂಸ್ಕೃತಿಯಾಗಲೀ ಸಾಧ್ಯವಾಗಿಲ್ಲ. ಇಷ್ಟೆಲ್ಲ ಭಿನ್ನತೆಯಿದ್ದರೂ ಎಲ್ಲಾ ಜಾತಿಗಳು ಸೌಹಾರ್ದವಾಗಿ ಜೀವಿಸುತ್ತಿವೆ. ಈ ಸೌಹಾರ್ದತೆಯನ್ನೇ ಮುನ್ನೆಲೆಗೆ ತಂದು ಪರಿಶಿಷ್ಟಜಾತಿಗಳ ಸಾಮಾಜಿಕ ಅಸಮಾನತೆಯನ್ನು ಗ್ರಹಿಸಲು ಆಗುವುದಿಲ್ಲ. ಸಾಂಸ್ಕೃತಿಕವಾಗಿ ಭಿನ್ನವಾಗಿಯೇ ಜೀವಿಸುತ್ತಿರುವಾಗ 15% ಮೀಸಲಾತಿಯನ್ನು ಒಟ್ಟಾಗಿ ಪಡೆಯೋಣ ಎಂಬುದು ಸಾಮಾಜಿಕ ನ್ಯಾಯ ಹೇಗಾಗುತ್ತದೆ? ಹಾಗಾಗಿ ಎಲ್ಲಾ ಜಾತಿಗಳು ಸಮಾನವಾಗಿ ಚಲಿಸಬೇಕಾದರೆ ಅದಕ್ಕೆ ಜನಸಂಖ್ಯಾವಾರು ‘ಒಳಮೀಸಲಾತಿ’ ಬೇಕು.

ಪರಿಶಿಷ್ಟ ಜಾತಿಯಲ್ಲಿಯೂ ಕೂಡ ‘ಮರ್ಯಾದೆ ಹತ್ಯೆ’ ನಡೆದಿರುವ ಸುದ್ದಿ ಮಾನವಂತ ಸಮಾಜಕ್ಕೆ ಘಾಸಿಗೊಳಿಸಿದೆ. ದಲಿತರೆಲ್ಲ ಒಂದೇ ಆಗಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ದಿನಾಂಕ 06.11.2019ರ ಬುಧವಾರ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಲಕ್ಕಲಕಟ್ಟೆ ಊರಿನಲ್ಲಿ ಗಂಗಮ್ಮಲಮಾಣಿ ಮತ್ತು ರಮೇಶಮಾದರ ಎಂಬ ದಂಪತಿಯ ಮರ್ಯಾದೆಹತ್ಯೆ ಸುದ್ದಿ ವರದಿಯಾಗಿದೆ. ಇಂತಹ ‘ಪರಿಶಿಷ್ಟ ಜಾತಿ’ಯೊಳಗಿನ ದಲಿತ ಜಾತಿವಾದ ಅತ್ಯಂತ ಅಸಹ್ಯಕರವಾದುದು.

‘ತುಳಿತಕ್ಕೊಳಗಾದವರೆಲ್ಲರೂ ದಲಿತರೆ. ಆದರೆ ದಲಿತರೆಲ್ಲರೂ ಅಸ್ಪೃಶ್ಯರಲ್ಲ’ ಎಂಬುದು ಎಲ್ಲಾ ಕಾಲದ ದುರಂತಕ್ಕೆ ಸಾಕ್ಷಿಯಾಗಿ ಮೇಲಿನ ಘಟನೆಯೇ ಇದೆ. ಈಗಿರುವ ವಾಸ್ತವ ನೆಲೆಯಲ್ಲಿ ನೂರೊಂದು ಜಾತಿಗಳು ಒಂದೇ ಆಗಿ ಉಳಿದಿಲ್ಲ. ಹೀಗಾಗಿ ಅಸಮಾನತೆಯನ್ನು ನಿವಾರಿಸಲು ಹಾಗೂ ಅಶಕ್ತ ಜಾತಿಗಳಿಗೆ ಚಲಿಸುವ ಚೈತನ್ಯ ಬರಬೇಕಾದರೆ ‘ಒಳಮೀಸಲಾತಿ’ ಜಾರಿಯಾಗಲೇಬೇಕು.

• ಒಳಮೀಸಲಾತಿಯ ಕೂಗು

ಈ ಹಸಿವಿನ ಕೂಗು ಕೇವಲ ಕರ್ನಾಟಕದ್ದು ಮಾತ್ರವಲ್ಲ; ಭಾರತದ ಅನೇಕ ರಾಜ್ಯಗಳಲ್ಲೂ ಇದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ಪಂಜಾಬ್, ಬಿಹಾರದ ನಡುವೆ ಮೀಸಲಾತಿಯ ಅಸಮಾನ ಹಂಚಿಕೆಯ ಕುರಿತಾಗಿ ಸಂಘರ್ಷವು ಏರ್ಪಟ್ಟಿದೆ. 1975 ಮೇ 5ರಂದು ಪಂಜಾಬ್ ರಾಜ್ಯದಲ್ಲಿ ಮೊದಲ ಬಾರಿಗೆ ಒಳಮೀಸಲಾತಿ ಅನುಷ್ಠಾನಗೊಂಡಿತು. ನಂತರದಲ್ಲಿ ಹರಿಯಾಣ, ಆಂಧ್ರಪ್ರದೇಶ ರಾಜ್ಯಗಳು ಒಳಮೀಸಲಾತಿಯನ್ನು ಜಾರಿಗೆ ತಂದವು. ತಮಿಳುನಾಡು ಸರ್ಕಾರವು ಸಾಮಾನ್ಯ ಮೀಸಲಾತಿಯಲ್ಲಿ 3% ಒಳಮೀಸಲಾತಿಯನ್ನು ಅರುಂಧತಿಯಾರರಿಗೆ ನೀಡಿತು.

ಕರ್ನಾಟಕದಲ್ಲಿ ಅಂದಿನ ದಲಿತ ರಾಜಕಾರಣಿಗಳಾದ ಎನ್.ರಾಚಯ್ಯ ಮತ್ತು ಬಿ.ಬಸವಲಿಂಗಪ್ಪ ದಿನಾಂಕ 08.07.1969ರಲ್ಲಿಯೇ ಪರಿಶಿಷ್ಟಜಾತಿಯಲ್ಲೂ ಕೂಡ ಜನಸಂಖ್ಯಾವಾರು ಮೀಸಲಾತಿ ಹಂಚಿಕೆಗೆ ಆಗ್ರಹಿಸುತ್ತಾರೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಿಡುವುದಕ್ಕೆ ರಾಜ್ಯಾಂಗ ತಿದ್ದುಪಡಿ ಮಾಡಿಯಾದರೂ ಜಾರಿಗೆ ತರದಿದ್ದರೆ ಬೀದಿಗೆ ಇಳಿಯುತ್ತೇವೆ ಎಂದು ಎನ್.ರಾಚಯ್ಯನವರು ಎಚ್ಚರಿಕೆ ನೀಡಿದರು. ಆದರೆ ನಂತರ ನಡೆದ ಚುನಾವಣೆಯಲ್ಲಿ ಸೋಲನುಭವಿಸಿದರು. ಆದರೆ ಹಿಂದುಳಿದ ವರ್ಗಗಳಿಗೆ ಜಾರಿಯಾದ ಒಳಮೀಸಲು ಪರಿಶಿಷ್ಟಜಾತಿಗೆ ಜಾರಿಯಾಗಲಿಲ್ಲ. ಇಲ್ಲಿಂದಲೇ ಒಳಮೀಸಲಾತಿಯ ಬೀಜವು ಕರ್ನಾಟಕದಲ್ಲಿ ಮೊಳಕೆಯೊಡೆಯಿತು.

• ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ರಚನೆ

ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 11 ನವೆಂಬರ್ 2004ರಂದು ಸರ್ಕಾರ ನ್ಯಾಯಮೂರ್ತಿ ಹನುಮಂತಪ್ಪ ನೇತೃತ್ವದಲ್ಲಿ ಆಯೋಗವನ್ನು ರಚನೆ ಮಾಡಿತು. ಇವರು ಕೆಲಸ ಆರಂಭಿಸುವ ಮೊದಲೇ ಪಾರ್ಲಿಮೆಂಟಿನ ಸದಸ್ಯರಾದರು. ಹಾಗಾಗಿ ಇವರ ನಂತರ ಆಗಸ್ಟ್ 2004ರಲ್ಲಿ ನ್ಯಾಯಮೂರ್ತಿ ಬಾಲಕೃಷ್ಣ ಅವರನ್ನು ಆಯೋಗಕ್ಕೆ ನೇಮಕ ಮಾಡಲಾಯಿತು. ಇವರು ಆಯೋಗದ ಅಧಿಕಾರವನ್ನು ಸ್ವೀಕರಿಸುವ ಮೊದಲೇ 2005 ಆಗಸ್ಟಿನಲ್ಲಿ ಕಾಲವಾದರು. ಈ ಹೊತ್ತಿಗಾಗಲೇ ಚುನಾವಣೆ ನಡೆದು ಧರ್ಮಸಿಂಗ್ ಮುಖ್ಯಮಂತ್ರಿಯಾದರು. ಸೆಪ್ಟಂಬರ್ 2005ರಲ್ಲಿ ಧರ್ಮಸಿಂಗ್ ಸರ್ಕಾರವು ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರ ನೇತೃತ್ವದಲ್ಲಿ ಆಯೋಗವನ್ನು ನೇಮಿಸಿತು. ಸಂವಿಧಾನದ 15 ಮತ್ತು 16 ಅನುಚ್ಛೇಧಗಳ ಅನುಸಾರ ನೀಡಲಾದ ಮೀಸಲಾತಿಯ ಸವಲತ್ತುಗಳ ಹಂಚಿಕೆಯಲ್ಲಿ ಆಗಿರುವ ತಾರತಮ್ಯಗಳನ್ನು ಪರಿಶೀಲಿಸಿ ವರದಿ ನೀಡುವಂತೆ ನಿರ್ದೇಶಿಸಿತು. ಇದೇ ಅವಧಿಯಲ್ಲಿ ಮಧ್ಯಂತರ ಚುನಾವಣೆ ಘೋಷಣೆಯಾಯಿತು. ಆದರೆ ಹಣವಿಲ್ಲದೇ ಈ ನ್ಯಾ.ಸದಾಶಿವ ಆಯೋಗ ಕೆಲಸ ಮಾಡಲಿಲ್ಲ. ಮತ್ತೆ ಚುನಾವಣೆ ನಡೆದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ತುಮಕೂರಿನ ಸಮಾವೇಶದಲ್ಲಿ ಪಾಲ್ಗೊಂಡಿದ್ದಾಗ, ಪರಿಶಿಷ್ಟ ಜಾತಿಯ ಹೋರಾಟಗಾರರು ಮುಖ್ಯಮಂತ್ರಿಯವರಿಗೆ ಮುತ್ತಿಗೆ ಹಾಕಿ ಘೇರಾವ್ ಕೂಗಿ ಗಲಾಟೆ ಮಾಡಿದರು. ನಂತರ ಯಡಿಯೂರಪ್ಪನವರು ಹಣ ಬಿಡುಗಡೆ ಮಾಡಿ ನ್ಯಾ.ಸದಾಶಿವ ಆಯೋಗದ ವರದಿಯ ಕಾರ್ಯಕ್ಕೆ ಅನುವು ಮಾಡಿದರು. ಸುಮಾರು ಆರೂವರೆ ವರ್ಷಗಳ ಕಾಲ ಸಮೀಕ್ಷೆಯನ್ನು ನಡೆಸಿ ಅಂಕಿಅಂಶಗಳ ಮೂಲಕ ದಿನಾಂಕ 15.06.2012ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಸದಾನಂದಗೌಡರಿಗೆ ಸಲ್ಲಿಸಲಾಯಿತು. ವರದಿ ಸಲ್ಲಿಕೆಯಾಗಿ ಸುಮಾರು ಎಂಟು ವರ್ಷಗಳು ಕಳೆದರೂ ಕೂಡ ಇದುವರೆಗೂ ಸದನದಲ್ಲಿ ಮಂಡಿಸಿಲ್ಲ.

ಇದನ್ನೂ ಓದಿ: ಒಳ ಮೀಸಲಾತಿ: ಕಣ್ಣ ಗಾಯವನರಿಯುವ ಕ್ರಮ – ಹುಲಿಕುಂಟೆ ಮೂರ್ತಿ

• ಮಾದಿಗರ ನಾಯಕತ್ವ ಮತ್ತು ಒಳಮೀಸಲಾತಿ ಹೋರಾಟ

ಕರ್ನಾಟಕದಲ್ಲಿ 1990ರಲ್ಲಿ ಒಳಮೀಸಲಾತಿಯ ಹೋರಾಟದ ಕಾವು ತೀವ್ರತೆಯನ್ನು ಪಡೆದುಕೊಂಡಿತು. ಇದರ ಮುಂದಾಳತ್ವವನ್ನು ಮಾದಿಗ ಸಮುದಾಯವೇ ವಹಿಸಿಕೊಂಡಿತು; ಮೀಸಲಾತಿಯ ಅಸಮಾನ ಹಂಚಿಕೆಯ ವಿರುದ್ಧ ಹಸಿದ ಎಲ್ಲಾ ಸಮುದಾಯಗಳ ಪ್ರತಿನಿಧಿಯಾಗಿ ಅದು ಧ್ವನಿಯೆತ್ತಿತು. ಕರ್ನಾಟಕದಲ್ಲಿ ಒಳಮೀಸಲಾತಿಯ ಹೋರಾಟಕ್ಕೆ ಸುಮಾರು ಮೂರು ದಶಕಗಳ ಇತಿಹಾಸವಿದೆ. ಆದರೆ ದಲಿತ ಚಳವಳಿ ಈಗ ಒಡೆದ ಮನೆಯಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಹೇಳುವ- ‘ಗುಲಾಮನಿಗೆ ನೀನು ಗುಲಾಮ ಅಂತ ಹೇಳುವ ಬದಲು, ತನ್ನ ಗುಲಾಮತನದ ಅರಿವನ್ನು ನೀಡು. ಆಗ ಗುಲಾಮನೊಬ್ಬ ತಾನು ಅನುಭವಿಸಿದ ಗುಲಾಮಗಿರಿಯ ವಿರುದ್ಧ ಸಿಡಿದೇಳುತ್ತಾನೆ’ ಎಂಬ ಮಾತು ಮೌಲಿಕವಾದುದು. ಈ ಮಾತಿನಂತೆ ಮೀಸಲಾತಿಯಲ್ಲಿನ ಅಸಮಾನ ಹಂಚಿಕೆಯ ಬಗೆ ಹಸಿದವರ ಅರಿವಿಗೆ ಬಂದ ತಕ್ಷಣ, ಆ ಸಮುದಾಯ ಸಂವಿಧಾನದ ಆಶಯಕ್ಕೆ ಪೂರಕವಾಗಿಯೇ ಒಳಮೀಸಲಾತಿಯ ತನ್ನ ಹಕ್ಕನ್ನು ಕೇಳುತ್ತಿದೆ. ಮಾದಿಗ ಸಮುದಾಯದ ಅನೇಕ ಸಂಘಟನೆಗಳು ಅನೇಕ ರೀತಿಯಲ್ಲಿ ಹೋರಾಟಗಳನ್ನು ನಡೆಸಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ,

1. ಸದನಕ್ಕೆ ನುಗ್ಗಿದ್ದು: ಮಾದಿಗ ದಂಡೋರಾದ ಲಕ್ಷ್ಮಿದೇವಮ್ಮ, ರೇಣುಕಮ್ಮ, ರಂಜಿತ್‌ಕುಮಾರ್, ಡಿ.ಜಿ.ಸಾಗರ್, ಚಕ್ರಧರ ಮುಂತಾದವರು 2005ರಲ್ಲಿ ವಿಧಾನಸೌಧದಲ್ಲಿ ಸದನ ನಡೆಯುವಾಗ ಒಳನುಗ್ಗಿ ಕಪ್ಪುಬಾವುಟ ಹಾರಿಸಿದ್ದು.
2. ಮೈಮೇಲೆ ಮಲ ಸುರಿದುಕೊಂಡಿದ್ದು: ಹಾವೇರಿಯ ಶಿಗ್ಗಾಂವ್‌ನಲ್ಲಿ 2006ರಲ್ಲಿ ಅಕ್ಕಮ್ಮ ಮನೆಯವರು ಸೇರಿ ಒಳಮೀಸಲಾತಿಗಾಗಿ ಮಲ ಸುರಕೊಂಡು ಪ್ರತಿಭಟಿಸಿದರು.
3. ದಿನಾಂಕ 11.12.2015ರಂದು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಸುವರ್ಣಸೌಧ ಮುತ್ತಿಗೆಯಲ್ಲಿ ಲಾಠಿಚಾರ್ಜ್ ಮಾಡಿಸಿಕೊಂಡಿದ್ದು.
4. ದಿನಾಂಕ 11.12.2016ರಲ್ಲಿ ಹುಬ್ಬಳ್ಳಿ ಸಮಾವೇಶಕ್ಕಾಗಿ ಬರುವಾಗ ಬಿಜಾಪುರದ ಎಂಟು ಜನರ ದುರ್ಮರಣವಾದದ್ದು.
5. ಐತಿಹಾಸಿಕ ಕಾಲ್ನಡಿಗೆ ಜಾಥಾ: 02.11.2017ರಲ್ಲಿ ಕೂಡಲಸಂಗಮದಿಂದ ಹೊರಟು 22.12.2017ಕ್ಕೆ ಬೆಂಗಳೂರಿನವರೆಗೆ ನಡೆದದ್ದು.
6. ಇದಲ್ಲದೇ ಅಸಂಖ್ಯ ಜನರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಹೋರಾಟ ಮಾಡಿದ್ದಾರೆ.

ಹೀಗೆ ಅನೇಕ ರೀತಿಯಲ್ಲಿ ಒಳಮೀಸಲಾತಿ ಜಾರಿಗಾಗಿ ಹೋರಾಟಗಳು ನಡೆದಿವೆ. ಆದರೆ ಇದಕ್ಕೆ ಬಹುಸಂಖ್ಯಾತರ ಬೆಂಬಲ ನಿರೀಕ್ಷಿತ ಮಟ್ಟದಲ್ಲಿ ಸಿಗಲಿಲ್ಲ. ಇಲ್ಲಿ ಒಳಮೀಸಲಾತಿಯ ಹೋರಾಟವನ್ನು ಮಾದಿಗರ ಹೋರಾಟವೆಂದೇ ಬಿಂಬಿಸಲಾಗಿದೆ. ‘ಮಾದಿಗರ ಮಹಾಯುದ್ಧ’ ಎಂಬ ಶೀರ್ಷಿಕೆಯಲ್ಲಿ ಹೋರಾಟಕ್ಕೆ ಮುಂದಾಗಿದ್ದು ಕೂಡ ಇತರ ಸಮುದಾಯಗಳು ಅನುಮಾನದಿಂದ ನೋಡುವಂತಾಗಿದೆ. ಒಳಮೀಸಲಾತಿಯ ಹೋರಾಟಗಾರರು ತಮ್ಮ ಹಾಗೂ ತಮ್ಮಂತಹ ಜನಸಮುದಾಯಗಳ ಹಸಿವಿನ ನೋವನ್ನು ಸಮಾಜಕ್ಕೆ ಅರ್ಥ ಮಾಡಿಸಲಿಲ್ಲ. ಇದು ಒಂದು ಸಮುದಾಯದ ಹೋರಾಟವಲ್ಲ; ಬದಲಾಗಿ ಹಸಿದ ಸಮುದಾಯಗಳ ಪರವಾದ ಹೋರಾಟ ಎಂಬುದನ್ನು ಸಮಾಜಕ್ಕೆ ಅರ್ಥ ಮಾಡಿಸುವಲ್ಲಿ ವಿಫಲರಾದರು. ಆದರೆ ತಮಿಳುನಾಡಿನಲ್ಲಿ ಎಲ್ಲಾ ಪ್ರಗತಿಪರರು, ಕಮ್ಯುನಿಸ್ಟರು ಒಳಮೀಸಲಾತಿಯ ಹೋರಾಟದಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ದುಡಿದರು. ಈಗ ಆಗಿರುವ ದೋಷಗಳನ್ನು ಸರಿಮಾಡಿಕೊಂಡು ಕರ್ನಾಟಕದಲ್ಲಿ ನೂರಾರು ಸಂಘಟನೆಗಳಾಗಿ ಹರಿದು ಹಂಚಿಹೋಗಿರುವ ಒಳಮೀಸಲಾತಿ ಹೋರಾಟಗಾರರೆಲ್ಲರೂ ಒಂದೇ ವೇದಿಕೆಯ ಅಡಿಯಲ್ಲಿ ಸಾಂಘಿಕವಾಗಿ ಸೇರಬೇಕಾಗಿದೆ. ಇತರ ಸಮುದಾಯಗಳನ್ನು ಒಳಗೊಂಡು ಯುವತಲೆಮಾರಿನ ಹೊಸ ಚೈತನ್ಯದೊಂದಿಗೆ ಹೋರಾಟ ರೂಪಿಸಬೇಕಾದ ಅಗತ್ಯವಿದೆ.

• ಒಳಮೀಸಲಾತಿ ಕುರಿತ ಅಪವ್ಯಾಖ್ಯಾನಗಳು

ಕರ್ನಾಟಕದಲ್ಲಿ ಒಳಮೀಸಲಾತಿ ಕುರಿತು ಅಪವ್ಯಾಖ್ಯಾನಗಳನ್ನು ಜಾತಿವಾದಿ ಮನಸ್ಥಿತಿಯವರು ತೇಲಿಬಿಟ್ಟರು. ಅಂತಃಕರಣವಿಲ್ಲದ ಅಂತಹ ಹೇಳೀಕೆಗಳೆಂದರೆ,
1. ದಲಿತರ ಒಗ್ಗಟ್ಟನ್ನು ಒಡೆಯುತ್ತದೆ.
2. ಒಂದೇ ಸಮುದಾಯದ ಹೋರಾಟ.
3. ಮೀಸಲಾತಿಗೇ ಸಂಚಕಾರ ಬಂದಿದೆ. ಹಾಗಾಗಿ ಮೊದಲು ಮೀಸಲಾತಿ ಬಗ್ಗೆ ಯೋಚಿಸಬೇಕು.
4. ಸ್ಪೃಶ್ಯರನ್ನು ಪರಿಶಿಷ್ಟಜಾತಿಯಿಂದ ಹೊರಹಾಕಲಾಗುತ್ತದೆ.
5. ಒಳಮೀಸಲಾತಿಗಿಂತ ಮೀಸಲಾತಿ ಹೆಚ್ಚಳಕ್ಕೆ ಹೋರಾಟ ಮಾಡಬೇಕು.
6. ಖಾಸಗೀ ಮೀಸಲಾತಿ ಮತ್ತು 10% ಇಡಬ್ಲೂಎಸ್ ಮೀಸಲಾತಿ ಬಗ್ಗೆ ಹೋರಾಟ ಮಾಡಬೇಕು.
7. ದೊಡ್ಡ ಸಮುದಾಯವೊಂದು ಅಹಿಂದದಿಂದ ದೂರ ಸರಿಯುತ್ತಿದೆ

ಈ ರೀತಿಯಾಗಿ ಮೂರುವರೆ ದಶಕಗಳ ಹೋರಾಟವನ್ನು ಅಪವ್ಯಾಖ್ಯಾನಿಸಲಾಗಿದೆ. ಹಸಿವಿಗಾಗಿ ಹೋರಾಟ ಮಾಡುವಾಗ ಜೊತೆಯಾಗದವರು, ತನ್ನ ಒಡಲನ ಹಸಿವು ನೀಗಿಸುವ ನಿಟ್ಟಿನಲ್ಲಿ ಇನ್ನೊಬ್ಬರ ಸಹಾಯ ಕೇಳಿದಾಗ ಇಡೀ ಸಮುದಾಯವನ್ನು ನಿಂದಿಸುವ ನೈತಿಕ ಹಕ್ಕು ಯಾರಿಗೂ ಇಲ್ಲ. ಮಾದಿಗ ಸಮುದಾಯ ಯಾರ ಗುತ್ತಿಗೆಗೂ ಒಳಪಟ್ಟಿಲ್ಲ. ಹಸಿದವನು ತನಗೆ ಸಿಕ್ಕ ಅನ್ನವು ಸ್ಮಶಾನದ್ದೋ ಮಸಣದ್ದೊ ಎಂದು ಯೋಚಿಸಲಾರ; ತನ್ನ ಒಡಲ ಬೇನೆ ನೀಗದರೆ ಸಾಕು ಎಂದಷ್ಟೇ ಚಡಪಡಿಸುತ್ತಾನೆ. ಹೊಟ್ಟೆ ತುಂಬಿದಾಗ ಮಾತ್ರ ತತ್ವ-ಸಿದ್ಧಾಂತ ಕುರಿತು ಚಿಂತಿಸಬಹುದು. ಇದು ತಪ್ಪೆಂದು ಹೇಳುತ್ತಿಲ್ಲ. ಆದರೆ ಈ ಮಾತುಗಳನ್ನು ‘ಒಳಮೀಸಲಾತಿ’ ಜೊತೆಗಿಟ್ಟು ನೋಡುವ ಕ್ರಮವೇ ಹಸಿದವರನ್ನು ಅಣಕಿಸುವಂತಿದೆ. ಹಾಗಾಗಿ ಇಂತಹ ಮಾತುಗಳು ಮೂರು ದಶಕಗಳ ಸುದೀರ್ಘವಾದ ಹೋರಾಟವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು. ಅದರ ಬದಲು ಪ್ರತ್ಯೇಕವಾಗಿ ಚರ್ಚಿಸುವ ಅಗತ್ಯವಿದೆ. ಈ ತರದ ಮಾತುಗಳನ್ನು ಇನ್ನೂ ಮೀಸಲಾತಿಯ ಅರಿವೇ ಇಲ್ಲದ ಮತ್ತು ಮೀಸಲಾತಿಯನ್ನೇ ಕಾಣದ ಜನಸಮುದಾಯಗಳು ಹೇಗೆ ಯೋಚಿಸಲು ಸಾಧ್ಯ? ನೀವೇ ಆಲೋಚಿಸಿ.

• ಒಳಮೀಸಲಾತಿ ಮತ್ತು ರಾಜಕಾರಣ

‘ನ್ಯಾ.ಎ.ಜೆ.ಸದಾಶಿವ ಆಯೋಗ’ ಎಂಬ ಅಸ್ತ್ರ ರಾಜಕೀಯ ಪಕ್ಷಗಳಿಗೆ ಸಿಕ್ಕಿ ಎಡಬಲದ ಕಂದರವನ್ನು ಹಾಗೆ ಬಿಟ್ಟಿವೆ. ಇದೊಂದು ಬಗೆಹರಿಯದ ಸಮಸ್ಯೆಯೇನೂ ಅಲ್ಲ. ಆದರೆ ಬಗೆಹರಿಯದ ಸಮಸ್ಯೆಯಾಗಿಯೇ ಉಳಿಸಲಾಗಿದೆ. ‘ಒಳಮೀಸಲಾತಿ’ ಎಂಬುದು ರಾಜಕೀಯ ಪಕ್ಷಗಳ ಚದುರಂಗದಾಟವಾಗಿದೆ. ಸಮಾಜವಾದಿ ಹಿನ್ನೆಲೆಯಿಂದ ಬಂದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೇವಲ ಆರು ತಿಂಗಳಲ್ಲಿ ‘ಲಿಂಗಾಯಿತ ಧರ್ಮ’ವನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತಾರೆ. ಒಡಲ ಸಂಕಟಕ್ಕಿಂತ ಧರ್ಮ ಸಂಕಟಕ್ಕೆ ಒತ್ತು ನೀಡುತ್ತಾರೆ. ಆದರೆ ಸುಮಾರು ಮೂರು ದಶಕಗಳ ಹೋರಾಟದ ತಾರ್ಕಿಕವಾದ ನ್ಯಾ.ಎ.ಜೆ.ಸದಾಶಿವ ವರದಿಯನ್ನು ಹಾಗೆಯೇ ಉಳಿಸಿಬಿಡುತ್ತಾರೆ. ಸಾಮಾಜಿನ್ಯಾಯ ಒದಗಿಸುವ ನಿಟ್ಟಿನಲ್ಲಿ ಜಾತಿಗಣತಿಯನ್ನು ಮಾಡಲು ಸುಮಾರು 158 ಕೋಟಿ ರೂಪಾಯಿ ಸಾರ್ವಜನಿಕ ಹಣವನ್ನು ಉಪಯೋಗಿಸಲಾಗಿದೆ. ಇದುವರೆಗೂ ಜಾತಿಗಣತಿಯನ್ನು ಬಿಡುಗಡೆ ಮಾಡುವ ಬದ್ಧತೆಯನ್ನು ಯಾವ ಸರ್ಕಾರಗಳು ತೋರಲಿಲ್ಲ. ವರದಿಗಳನ್ನು ಅನುಷ್ಠಾನಗೊಳಿಸಲು ಆಗದಿದ್ದರೆ, ಇಂತಹ ವರದಿಗಳ ನೇಮಕವಾದರೂ ಏಕೆ? ಎಂಬ ಅನುಮಾನ ಆಳುವವರ ಮೇಲೆ ಮೂಡುತ್ತಿದೆ. ಈಗ ಸೈದ್ಧಾಂತಿಕತೆ ಎಂಬುದು ನಂಬಲಾಗದ ಸ್ಥಿತಿಗೆ ಬಂದು ತಲುಪಿದೆ. ರಾಜಕಾರಣದಲ್ಲಿ ಇರುವವರು ತನ್ನ ಸುತ್ತಲಿನ ಒಡ್ಡೋಲಗದಲ್ಲಿರುವ ಹೊಗಳುಭಟ್ಟರಿಂದ ಎಚ್ಚರ ವಹಿಸದಿದ್ದರೆ, ಹಸಿದ ಜನರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ. ಹಸಿದವನಿಗೆ ಅಕ್ಕಿ ಕೊಡುವ ಬದಲು ಭತ್ತ ಬೆಳೆಯುವ ಗದ್ದೆಯನ್ನು ನೀಡಿದರೆ ಸ್ವಾವಲಂಬಿಯಾಗಿ ಬದುಕುತ್ತಾನೆ. ಹಾಗಾಗಿ ‘ಒಳಮೀಸಲಾತಿ’ ಭತ್ತ ಬೆಳೆಯುವ ಗದ್ದೆಯಾಗಿ ಜನರ ಹಸಿವನ್ನು ನೀಗಿಸುವ ಕೆಲಸವಾಗಬೇಕಿದೆ. ಆದರೆ ಅಧಿಕಾರದಲ್ಲಿದ್ದಾಗ ಸಬೂಬು ಹೇಳಿ, ಅಧಿಕಾರವಿಲ್ಲದಿದ್ದಾಗ ಧ್ವನಿ ಎತ್ತುವ ನಾಟಕೀಯ ಬೆಳವಣಿಗೆಯನ್ನು ಇದುವರೆಗಿನ ಎಲ್ಲಾ ಮುಖ್ಯಮಂತ್ರಿಗಳು ಮಾಡಿಕೊಂಡು ಬಂದಿದ್ದಾರೆ. ಇಂತಹ ಇಕ್ಕಟ್ಟಿನಿಂದ ಅಸ್ಪೃಶ್ಯರು ಬೇಗ ಆಚೆ ಬರದಿದ್ದರೆ ತಮ್ಮ ಕಾಲಿನ ಮೇಲೆ ತಾವೇ ಚಪ್ಪಡಿಕಲ್ಲು ಎತ್ತಿಹಾಕಿಕೊಂಡಂತೆ. ಇಂತಹ ನೆಲೆಯಲ್ಲಿ ‘ದಲಿತ ರಾಜಕಾರಣ’ವು ಅಸ್ಪೃಶ್ಯರ ಅಸ್ಮಿತೆಯನ್ನು ಕಳೆದ ಚುನಾವಣೆಯಲ್ಲಿ ಕಳೆದುಕೊಂಡಿತು. ಕೆ.ಎಚ್.ಮುನಿಯಪ್ಪ ಸೋತರೆಂದು ಹೊಲೆಯರು, ಮಲ್ಲಿಕಾರ್ಜುನ ಖರ್ಗೆ ಸೋತರೆಂದು ಮಾದಿಗರು ಸಂಭ್ರಮ ಪಡುತ್ತ ಕಾಲಕಳೆಯಬಹುದು. ಆದರೆ ಆಗಿರುವ ನಷ್ಟವನ್ನು ತುಂಬಲಾಗದು. ದಲಿತರನ್ನು ಒಳಗೊಳ್ಳುವ ಬಹುದೊಡ್ಡ ಅವಕಾಶವನ್ನು ಕಾಂಗ್ರೆಸ್ ಕೈಚೆಲ್ಲಿತು. ಇದರ ಲಾಭವನ್ನು ಬಿಜೆಪಿಯು ಅನಾಯಾಸವಾಗಿ ಪಡೆದುಕೊಂಡಿತು. ಇನ್ನು ಮುಂದೆಯೂ ದಲಿತ ರಾಜಕಾರಣವು ಇರುತ್ತದೆ. ಆದರೆ ಅಸ್ಪೃಶ್ಯರು ತನ್ನ ಪ್ರಾತಿನಿಧ್ಯವನ್ನು ಕಳೆದುಕೊಳ್ಳುವ ಸ್ಥಿತಿಯು ಎದುರಿಸಬೇಕಾಗುತ್ತದೆ. ಹೊಸ ತಲೆಮಾರಿನ ಯುವಕರು ತುಂಬಾ ಸಂಯಮದಿಂದ ಎಚ್ಚರದಿಂದ ನಡೆ-ನುಡಿಯಲ್ಲಿ ಗಮನಹರಿಸಬೇಕಾಗಿದೆ.

• ಒಡಲಾಳದ ಹಸಿವಿನ ಕೂಗು

ಹಸಿವು ಮನುಷ್ಯನ ಕ್ರಿಯಾಶೀಲ ಗುಣವನ್ನು ಚಲನಶೀಲಗೊಳಿಸಿದೆ. ಇಂತಹ ಹಸಿವನ್ನು ನೀಗಿಸಿಕೊಂಡು ಘನತೆಯಿಂದ ಬದುಕಲು ‘ಎಲ್ಲರೂ ಹಂಚಿಕೊಂಡು ತಿನ್ನೋಣ’ ಎಂಬ ಸದಾಶಯವುಳ್ಳ ಒಳಮೀಸಲಾತಿಯ ಜೀವಕ್ಕೆ ಕರ್ನಾಟಕದಲ್ಲಿ ಮೂರು ದಶಕಗಳು ಕಳೆಯುತ್ತಿವೆ. ಅಂದಿನಿಂದಲೂ ತನ್ನ ಒಡಲಾಳದ ಹಸಿವಿನ ಸಂಕಟಗಳನ್ನು ತನ್ನೆದುರಿನ ಸಮಾಜಕ್ಕೆ ಮತ್ತು ಆಳುವ ಸರ್ಕಾರಕ್ಕೆ ಕೂಗಿಕೂಗಿ ಹೇಳುತ್ತಿದೆ. ಆದರೆ, ಯಾವ ಸರ್ಕಾರಗಳಿಗೂ ಈ ನೋವಿನ ಕೂಗು ಕೇಳಿಸಲೇ ಇಲ್ಲ. ಕಣ್ಣು ಕಿವಿ ಮೂಗು ನಾಲಿಗೆ ಇಲ್ಲದವರ ಮುಂದೆ ಹಸಿದವರ ಪಾಡು ಹೇಳಿದಂತಾಗಿದೆ. ಸಂವಿಧಾನ ಜಾರಿಯಾಗಿ ಏಳು ದಶಕಗಳೇ ಕಳೆದರೂ ಹಸಿದವರ ಈ ಆರ್ತನಾದಕ್ಕೆ ಮಿಡಿವ ಜೀವಗಳು ಇಲ್ಲದ ಈ ಸಮಾಜ ಜೀವಂತ ಶವವಾಗಿದೆ. ಹಸಿದವರ ತಾಳ್ಮೆಯನ್ನು ಪರೀಕ್ಷಿಸದೇ ಒಡಲಾಳದ ಒಡಲಾಗ್ನಿ ಸ್ಫೋಟಗೊಳ್ಳುವ ಮೊದಲೇ, ಇನ್ನು ಮುಂದಾದರೂ ಆಳುವ ಸರ್ಕಾರಗಳು ನ್ಯಾ.ಎ.ಜೆ.ಸದಾಶಿವ ಆಯೋಗವನ್ನು ಸದನದಲ್ಲಿ ಮಂಡಿಸಿಬೇಕು. ಸುಪ್ರೀಂಕೋರ್ಟಿನ ತೀರ್ಪಿನನ್ವಯ ಹಸಿದವರ ಹಿತದೃಷ್ಟಿಯಿಂದ ಸಾಮಾಜಿಕ ನ್ಯಾಯಕ್ಕಾಗಿ ತಕ್ಷಣವೇ ನ್ಯಾ.ಸದಾಶಿವ ಆಯೋಗದ ವರದಿಯನ್ನು ಆಳುವ ಸರ್ಕಾರ ಯಥಾವತ್ತಾಗಿ ಜಾರಿಗೊಳಿಸುವ ಮೂಲಕ ತನ್ನ ಬದ್ಧತೆಯನ್ನು ತೋರಬೇಕು.

  • ಡಾ.ಎಸ್.ಕೆ ಮಂಜುನಾಥ್

ಯುವ ಬರಹಗಾರರಾದ ಡಾ.ಎಸ್.ಕೆ ಮಂಜುನಾಥ್ ತಿಪಟೂರಿನವರು. ಸಂಶೋಧನೆ ಮತ್ತು ಸಾಂಸ್ಕೃತಿಕ ಅಧ್ಯಯನ ಆಸಕ್ತಿಯ ಕ್ಷೇತ್ರ. ‘ಎದೆಗಿಲಕಿ’ ಕವನ ಸಂಕಲನ ಮತ್ತು ಪ್ರೊ.ಕೆ.ಬಿ ಸಿದ್ಧಯ್ಯನವರ ಬದುಕು ಬರಹ ಕುರಿತ ‘ಕಡಿದಷ್ಟು ಕುಡಿಯೊಡೆವೆ’ ಕೃತಿ ಸಂಪಾದಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...