Homeರಂಜನೆಕ್ರೀಡೆಇಂದಿನಿಂದ ಕ್ವಾರ್ಟರ್ ಫೈನಲ್‌ ಹಣಾಹಣಿ: ಕುತೂಹಲ ಘಟ್ಟ ತಲುಪಿದ ಫಿಫಾ!

ಇಂದಿನಿಂದ ಕ್ವಾರ್ಟರ್ ಫೈನಲ್‌ ಹಣಾಹಣಿ: ಕುತೂಹಲ ಘಟ್ಟ ತಲುಪಿದ ಫಿಫಾ!

- Advertisement -
- Advertisement -

ಕಳೆದ ಎರಡು ವಾರಗಳಿಂದ ಫುಟ್‌ಬಾಲ್ ಪ್ರಿಯರ ಪಾಲಿಗೆ ರಸದೌತಣ ನೀಡುತ್ತಿರುವ ಫಿಫಾ ವಿಶ್ವಕಪ್-2022 ಪೂರ್ವ ಅಂತಿಮ ಘಟ್ಟ ತಲುಪಿದೆ. ಅಗ್ರ ಎಂಟು ತಂಡಗಳು ಈಗಾಗಲೇ ಕ್ವಾರ್ಟರ್ ಫೈನಲ್ ತಲುಪಿದ್ದು, ಇಂದಿನಿಂದ ರೋಚಕ ಹಣಾಹಣಿ ಆರಂಭವಾಗಲಿದೆ. ಈ ನಡುವೆ ಫಿಫಾ ಫುಟ್‌ಬಾಲ್ ವಿಶ್ವಕಪ್ ದಿನದಿಂದ ದಿನಕ್ಕೆ ರೋಚಕತೆಗೆ ಮತ್ತು ಅಪರೂಪದ ದಾಖಲೆಗಳಿಗೆ ಸಾಕ್ಷಿಯಾಗುತ್ತಿರುವುದು ಮತ್ತಷ್ಟು ವಿಶೇಷ.

ಡಿಸೆಂಬರ್ 3ರಂದು ನಡೆದ ಮೊದಲ ನಾಕ್‌ಔಟ್ ಪಂದ್ಯದಲ್ಲಿ ಯುಎಸ್‌ಎ ತಂಡಕ್ಕೆ ಆಘಾತ ನೀಡಿರುವ ನೆದರ್ಲೆಂಡ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮೊದಲ ತಂಡವೆನಿಸಿಕೊಂಡಿದ್ದರೆ, ಮತ್ತೊಂದೆಡೆ ತಮ್ಮ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿದ್ದ ಬಲಿಷ್ಠ ಬ್ರೆಜಿಲ್ ತಂಡ ಕೂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಇದಲ್ಲದೆ ಸೆನೆಗಲ್ ವಿರುದ್ಧ 3-0 ಗೋಲುಗಳಿಂದ ಭರ್ಜರಿ ಜಯ ಸಾಧಿಸಿರುವ ಇಂಗ್ಲೆಂಡ್, ಪೊಲೆಂಡ್ ವಿರುದ್ಧ ಗೆಲುವು ದಾಖಲಿಸಿರುವ ಹಾಲಿ ಚಾಂಪಿಯನ್ ಫ್ರಾನ್ಸ್, ಆಸ್ಟ್ರೇಲಿಯಾವನ್ನು ಮಣಿಸಿರುವ ಅರ್ಜೆಂಟೀನಾ, ಜಪಾನ್ ವಿರುದ್ಧ ರೋಚಕ ಗೆಲುವು ಸಾಧಿಸಿರುವ ಕಳೆದ ವಿಶ್ವಕಪ್ ರನ್ನರ್ ಅಪ್ ಕ್ರೊಯೇಶಿಯಾ, ಪೆನಾಲ್ಟಿ ಶೂಟೌಟ್‌ನಲ್ಲಿ ಬಲಿಷ್ಟ ಸ್ಪೇನ್ ಮಣಿಸಿದ ಮೊರಾಕ್ಕೊ, ಸ್ವಿಜರ್ಲೆಂಡ್ ಮಣಿಸಿದ ಪೋರ್ಚುಗಲ್ ಕ್ವಾರ್ಟರ್ ಫೈನಲ್‌ನಲ್ಲಿ ಸೆಣಸಲು ಸಜ್ಜಾಗಿವೆ.

ಡಿಸೆಂಬರ್ 9ರಿಂದ ಕ್ವಾರ್ಟರ್ ಫೈನಲ್ ಪಂದ್ಯಗಳು ಆರಂಭವಾಗಲಿದ್ದು, ಎಂಟು ತಂಡಗಳು ಮುಂದಿನ ಹಂತಕ್ಕೆ ತಲುಪಲು ಆಡಲಿವೆ. ಹೀಗಾಗಿ ಗೆಲುವು ಯಾರಿಗೆ? ಸೆಮಿಫೈನಲ್ ತಲುಪಲಿರುವ ಆ ನಾಲ್ಕು ಬಲಿಷ್ಠ ತಂಡಗಳು ಯಾವುವು? ಎಂಬ ಲೆಕ್ಕಾಚಾರಗಳು ಈಗಾಗಲೇ ಆರಂಭವಾಗಿವೆ.

ಸೆಮಿಫೈನಲ್‌ಗೆ ಲಗ್ಗೆ ಇಡಬಹುದಾದ ತಂಡಗಳ್ಯಾವುದು?

ಶುಕ್ರವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಕ್ರೊಯೇಶಿಯಾ ಬಲಿಷ್ಠ ಬ್ರೆಜಿಲ್ ತಂಡವನ್ನು ಎದುರಿಸಲಿದೆ. ಮತ್ತೊಂದು ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಬ್ರೆಜಿಲ್ ಈ ಪಂದ್ಯವನ್ನು ಸುಲಭಕ್ಕೆ ಗೆಲ್ಲುವ ವಿಶ್ವಾಸದಲ್ಲಿದೆ. ಆದರೆ, ಬ್ರೆಜಿಲ್ ತಂಡದ ಸ್ಟಾರ್ ಆಟಗಾರ ನೇಯ್ಮರ್ ಈ ಮಹತ್ವದ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಏಕೆಂದರೆ ಕಳೆದ ಪಂದ್ಯದಲ್ಲಿ ನೇಯ್ಮರ್ ಅವರ ಹಿಮ್ಮಡಿಯ ಮೂಳೆಗೆ ಬಲವಾದ ಪೆಟ್ಟುಬಿದ್ದಿದೆ. ನೋವಿನ ತೀವ್ರತೆ ನಿರೀಕ್ಷೆಗಿಂತ ಅಧಿಕವಾಗಿದೆ ಎಂದು ಬ್ರೆಜಿಲ್ ತಂಡ ಈಗಾಗಲೇ ಪತ್ರಿಕಾ ಹೇಳಿಕೆಯನ್ನೂ ಬಿಡುಗಡೆ ಮಾಡಿದೆ.

ವೈದ್ಯರು ಮುಂದಿನ ಮೂರು ವಾರಗಳ ಕಾಲ ನೇಯ್ಮರ್‌ಗೆ ವಿಶ್ರಾಂತಿ ಸೂಚಿಸಿದ್ದು, ಮುಂದಿನ ಪಂದ್ಯದಲ್ಲಿ ನೇಯ್ಮರ್ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ. ಆದರೆ, ಬ್ರೆಜಿಲ್ ತಂಡ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ನೇಯ್ಮರ್ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ ಎಂದೇನೂ ಉಲ್ಲೇಖಿಸಿಲ್ಲ. ಹೀಗಾಗಿ ನೇಯ್ಮರ್ ಆಟ ನೋಡಲು ಅವರ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಮತ್ತೊಂದೆಡೆ ಕ್ರೊಯೇಶಿಯಾ ಸುಲಭಕ್ಕೆ ಮಣಿಯುವ ತಂಡವೇನಲ್ಲ. ಕಳೆದ ವಿಶ್ವಕಪ್ ರನ್ನರ್ ಅಪ್ ಆಗಿರುವ ಈ ತಂಡ, ಈ ಟೂರ್ನಿಯಲ್ಲೂ ಚಾಂಪಿಯನ್ ಆಟ ಪ್ರದರ್ಶಿಸುತ್ತಿದ್ದು, ಬ್ರೆಜಿಲ್ ಎದುರು ಗೆಲುವು ಸಾಧಿಸುವ ವಿಶ್ವಾಸ ಹೊಂದಿದೆ. ಹೀಗಾಗಿ ಈ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿರಲಿದೆ ಎನ್ನಲಡ್ಡಿಯಿಲ್ಲ.

ಎರಡನೇ ಪಂದ್ಯದಲ್ಲಿ ಜನಪ್ರಿಯ ಆಟಗಾರ ಲಿಯೋನಲ್ ಮೆಸ್ಸಿ ನೇತೃತ್ವದ ಮತ್ತೊಂದು ಬಲಿಷ್ಠ ತಂಡ ಅರ್ಜೆಂಟೀನಾ ನೆದರ್ಲೆಂಡ್ ವಿರುದ್ಧ ಸೆಣಸಲಿದೆ. ಮೇಲ್ನೋಟಕ್ಕೆ ಅರ್ಜೆಂಟೀನಾ ಬಲಿಷ್ಠ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ನೆದರ್ಲೆಂಡ್ ತಂಡವನ್ನೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ ಕಳೆದ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ ಈ ತಂಡ ನೀಡಿದ ಪ್ರದರ್ಶನ ಫುಟ್‌ಬಾಲ್‌ಪ್ರಿಯರನ್ನು ಬೆರಗುಗೊಳಿಸಿತ್ತು.

ಆ ಪಂದ್ಯದ ಆರಂಭದಿಂದಲೇ ನೆದರ್ಲೆಂಡ್ ಅಬ್ಬರಿಸಿತ್ತು. ಪಂದ್ಯದ 10ನೇ ನಿಮಿಷದಲ್ಲೇ ಮೆಂಫಿಸ್ ಡೆಪೇ ಗೋಲು ಸಿಡಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. 46ನೇ ನಿಮಿಷದಲ್ಲಿ ಮತ್ತೋರ್ವ ಆಟಗಾರ ಡ್ಯಾಲಿ ಬ್ಲಿಂಡ್ ಮತ್ತೊಂದು ಗೋಲು ಗಳಿಸುವ ಮೂಲಕ ಗೆಲುವನ್ನು ಖಚಿತಪಡಿಸಿದ್ದರು. ನಂತರ ಪಂದ್ಯದ 81ನೇ ನಿಮಿಷದಲ್ಲಿ ಡಮ್ಫ್ರೈಸ್ ಮೂರನೇ ಗೋಲು ಗಳಿಸುವ ಮೂಲಕ ಯುಎಸ್‌ಎ ತಂಡದ ಪಾಲಿಗೆ ನುಂಗಲಾರದ ತುತ್ತಾದರು. ಹೀಗಾಗಿ ಈ ತಂಡ ಬಲಿಷ್ಠ ಅರ್ಜೆಂಟೀನಾ ವಿರುದ್ಧ ಅಷ್ಟು ಸುಲಭಕ್ಕೆ ಸೋಲೊಪ್ಪಲಾರದು ಎಂಬುದರಲ್ಲೂ ಎರಡು ಮಾತಿಲ್ಲ.

ಇದನ್ನೂ ಓದಿ: ಮಾನವ ಹಕ್ಕುಗಳ ಉಲ್ಲಂಘನೆ ಆರೋಪಗಳ ನಡುವೆಯೇ ಏರುತ್ತಿರುವ ಫಿಫಾ ಫೀವರ್

ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಹಾಲಿ ಚಾಂಪಿಯನ್ ಫ್ರಾನ್ಸ್ ಮುಖಾಮುಖಿಯಾಗಲಿವೆ. ಈ ಎರಡೂ ತಂಡಗಳು ಆಕ್ರಮಣಾಕಾರಿ ಆಟಕ್ಕೆ ಹೆಸರುವಾಸಿಯಾದಂತಹ ತಂಡಗಳೇ. ಹಾಲಿ ಚಾಂಪಿಯನ್ ಫ್ರಾನ್ಸ್ ಈ ಬಾರಿಯೂ ಪ್ರಬಲವಾಗಿದೆ. ಅಗ್ರ ಶ್ರೇಯಾಂಕಿತರಾದ ಕರೀಮ್ ಬೆಂಜೆಮಾ, ಕೈಲಿಯನ್ ಎಂಬಾಪೆ ಮತ್ತು ಉಸ್ಮಾನೆ ಡೆಂಬೆಲೆ ಅವರಂತಹ ಆಕ್ರಮಣಕಾರಿ ಆಟಗಾರರು ತಂಡದಲ್ಲಿರುವುದು ಇತರೆ ಆಟಗಾರರಿಗೆ ಮಾನಸಿಕವಾಗಿಯೂ ಬಲ ತುಂಬಲಿದೆ. ಇದಲ್ಲದೆ, ಕ್ರಿಸ್ಟೋಫರ್ ಕುಂಕು, ಆಂಟೊಯಿನ್ ಗ್ರೀಜ್ಮನ್, ಒಲಿವಿಯರ್ ಗೆರಾರ್ಡ್ ಮತ್ತು ಕಿಂಗ್ಸ್ಲೆ ಕೊಮನ್ ಸೇರಿದಂತೆ ತರಬೇತುದಾರ ಡಿಡಿಯರ್ ಡ್ಯಾಶ್ಚಾಂಪ್ಸ್ ಎದುರು ಸಾಕಷ್ಟು ಉತ್ತಮ ಆಯ್ಕೆಗಳಿವೆ. ಹೀಗಾಗಿ ಈ ತಂಡ ಎರಡನೇ ಬಾರಿ ವಿಶ್ವಕಪ್ ಮುಡಿಗೇರಿಸಿಕೊಂಡರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಇನ್ನು ನಾಯಕ ಗ್ಯಾರೆತ್ ಸೌತ್‌ಗೇಟ್ ನೇತೃತ್ವದ ಇಂಗ್ಲೆಂಡ್ ಫುಟ್‌ಬಾಲ್ ತಂಡ ಸಾಕಷ್ಟು ಆಕ್ರಮಣಕಾರಿ ಆಟಗಾರರನ್ನು ಹೊಂದಿದೆ. ಹ್ಯಾರಿ ಕೇನ್, ಫಿಲ್ ಫೋಡೆನ್, ರಹೀಮ್ ಸ್ಟರ್ಲಿಂಗ್, ಮೇಸನ್ ಮೌಂಟ್, ಜ್ಯಾಕ್ ಗ್ರೀಲಿಶ್ ಮತ್ತು ಬುಕಾಯೊ ಸಕಾ ಅವರಂತಹ ಆಟಗಾರರು ಎಂತಹ ಎದುರಾಳಿಗೂ ನೀರು ಕುಡಿಸಬಲ್ಲರು. ಹ್ಯಾರಿ ಕೇನ್ ವಿಶ್ವದ ಅತ್ಯುತ್ತಮ ಸ್ಟ್ರೈಕರ್‌ಗಳಲ್ಲಿ ಒಬ್ಬರಾಗಿದ್ದು, ಇದೀಗ ಅವರು ಉತ್ತಮ ಫಾರ್ಮ್‌ನಲ್ಲಿರುವುದು ಇಂಗ್ಲೆಂಡ್ ಪಾಲಿಗೆ ಪ್ಲಸ್ ಪಾಯಿಂಟ್. ಹೀಗಾಗಿ ಕ್ವಾರ್ಟರ್ ಫೈನಲ್ ಪಂದ್ಯಗಳ ಪೈಕಿ ಈ ಪಂದ್ಯ ಅಭಿಮಾನಿಗಳಿಂದ ಅತಿಹೆಚ್ಚು ಗಮನ ಸೆಳೆಯುತ್ತಿದೆ.

ನಾಲ್ಕನೇ ಪಂದ್ಯದಲ್ಲಿ ಮೊರಾಕ್ಕೊ ಮತ್ತು ಪೂರ್ಚುಗಲ್ ತಂಡಗಳು ಸೆಣಸಲಿವೆ.

ಹೊಸ ದಾಖಲೆ ಬರೆದ ಕ್ಯಾಮರೂನ್

ಆಫ್ರಿಕಾ ಖಂಡದ ಪುಟ್ಟ ರಾಷ್ಟ್ರವಾದ ರಿಪಬ್ಲಿಕ್ ಆಫ್ ಕ್ಯಾಮರೂನ್ ಫಿಫಾ ವಿಶ್ವಕಪ್ ಟೂರ್ನಿಯಿಂದ ಹೊರಬೀಳುವ ಮುನ್ನ ಬಲಿಷ್ಠ ಬ್ರೆಜಿಲ್ ತಂಡವನ್ನು ಸೋಲಿಸಿ ಸ್ಮರಣೀಯ ಗೆಲುವು ದಾಖಲಿಸಿದ ಹಿರಿಮೆಗೆ ಪಾತ್ರವಾಗಿದೆ.

ವಿನ್ಸೆಂಟ್ ಅಬೂಬಕ್ಕರ್ ಗಳಿಸಿದ ಗೋಲಿನಿಂದ ಕ್ಯಾಮರೂನ್ ಬ್ರೆಜಿಲ್ ತಂಡವನ್ನು 1-0 ಅಂತರದಲ್ಲಿ ಪರಾಭವಗೊಳಿಸಿತು. ಈ ಮೂಲಕ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಈ ಸಾಧನೆ ಮಾಡಿದ (ಬ್ರೆಜಿಲ್ ಮಣಿಸಿದ) ಆಫ್ರಿಕಾದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಕ್ಯಾಮರೂನ್ ಪಾತ್ರವಾಗಿದೆ.

ಲುಸೈಲ್ ಕ್ರೀಡಾಂಗಣದಲ್ಲಿ ಶುಕ್ರವಾರ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ನಿಗದಿತ ಅವಧಿಯವರೆಗೆ ಯಾವುದೇ ಗೋಲು ದಾಖಲಾಗಲಿಲ್ಲ. ಇಂಜುರಿ ಅವಧಿಯಲ್ಲಿ (ಹೆಚ್ಚುವರಿ 92ನೇ ನಿಮಿಷ) ಸಬ್‌ಸ್ಟಿಟ್ಯೂಟ್ ಆಟಗಾರ ಜೆರೋಮ್ ಎನ್ಗೊಮ್ ಎಂಬೆಕೆಲಿ ನೀಡಿದ ಕ್ರಾಸ್‌ನಲ್ಲಿ ವಿನ್ಸೆಂಟ್ ಅಬೂಬಕ್ಕರ್ ಚೆಂದದ ಹೆಡರ್ ಮಾಡಿದರು. ಚೆಂಡು ಗೋಲ್ ಪೋಸ್ಟ್‌ನೊಳಗೆ ಸೇರುತ್ತಿದ್ದಂತೆ ಕ್ಯಾಮರೂನ್ ಆಟಗಾರರು ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.

ಜಿ ಗುಂಪಿನ ಹಣಾಹಣಿಯಲ್ಲಿ ಸೋತರೂ ಬ್ರೆಜಿಲ್ ತಂಡವು ಆಗಾಗಲೇ 16ರ ಘಟ್ಟಕ್ಕೆ ಅರ್ಹತೆ ಗಳಿಸಿದ್ದರಿಂದ ಫಲಿತಾಂಶ ಯಾವುದೇ ಪರಿಣಾಮ ಬೀರಲಿಲ್ಲ. 1998ರ ಬಳಿಕ ಗುಂಪು ಹಂತದಲ್ಲಿ ಬ್ರೆಜಿಲ್ ಸೋತಿದ್ದು ಇದೇ ಮೊದಲು. ಆ ವರ್ಷ ನಾರ್ವೆ ತಂಡಕ್ಕೆ ಬ್ರೆಜಿಲ್ ಮಣಿದಿತ್ತು. ಈ ಪಂದ್ಯದಲ್ಲಿ ಬ್ರೆಜಿಲ್ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿದ್ದ ಕಾರಣ ಕ್ಯಾಮರೂನ್ ಪಾಲಿಗೆ ಗೆಲುವು ಸುಲಭದ್ದಾಗಿತ್ತು.

ಕತಾರ್‌ಗೆ ಮತ್ತೊಂದು ಮುಖಭಂಗ

ಕತಾರ್‌ನಲ್ಲಿ ವಿಶ್ವಕಪ್ ಆಯೋಜನೆಯ ಅವಕಾಶ ನೀಡಿದ್ದಕ್ಕೆ ಅನೇಕ ಮಾನವ ಹಕ್ಕುಗಳ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಅಲ್ಲದೆ, #ಬಾಯ್ಕಾಟ್‌ಕತಾರ್ ಎಂಬ ಹ್ಯಾಷ್‌ಟ್ಯಾಗ್ ಟ್ವಿಟ್ಟರ್ ಮತ್ತಿತರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುವ ಮೂಲಕ ಕತಾರ್ ತೀವ್ರ ಮುಖಭಂಗಕ್ಕೆ ಒಳಗಾಗಿತ್ತು. ಈ ನಡುವೆ ಇದೀಗ ಕತಾರ್ ಮತ್ತೊಂದು ಮುಖಭಂಗವನ್ನು ಅನುಭವಿಸಿದೆ.

ಫಿಫಾ ಆಯೋಜಿಸಿದ ಮೊದಲ ಅರಬ್ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೂ, ಫುಟ್‌ಬಾಲ್ ವಿಶ್ವಕಪ್ ಇತಿಹಾಸದಲ್ಲೇ, ದಕ್ಷಿಣ ಆಫ್ರಿಕಾ ಆಯೋಜಿಸಿದ್ದ ಫಿಫಾ ಬಳಿಕ ಗುಂಪು ಹಂತದಲ್ಲಿಯೇ ಹೊರಹಾಕಲ್ಪಟ್ಟ ಎರಡನೇ ಅತಿಥೇಯ ದೇಶ ಎಂಬ ಕುಖ್ಯಾತಿಗೆ ಇದೀಗ ಕತಾರ್ ಪಾತ್ರವಾಗಿದೆ. ಕತಾರ್ ತಾನಾಡಿದ ಮೂರು ಪಂದ್ಯಗಳಲ್ಲೂ ಹೀನಾಯ ಸೋಲನುಭವಿಸಿದೆ. ದಕ್ಷಿಣ ಆಫ್ರಿಕಾ 2010ರ ವಿಶ್ವಕಪ್‌ನಲ್ಲಿ ಗುಂಪು ಹಂತದ ಪಂದ್ಯಗಳ ಮೂರನೇ ಸುತ್ತಿನಲ್ಲಿ ಹೊರಬಿದ್ದಿತ್ತು. ಇದು ಈವರೆಗೆ ಅತಿಥೇಯ ತಂಡವೊಂದರ ಕಳಪೆ ಪ್ರದರ್ಶನವಾಗಿತ್ತು.

ದಂತಕಥೆ ಪೀಲೆ ದಾಖಲೆ ಮುರಿಯುವರೇ ನೇಯ್ಮರ್?

ವಿಶ್ವಕಪ್ 16ರ ಘಟ್ಟದ ಪಂದ್ಯದಲ್ಲಿ ಬ್ರೆಜಿಲ್ ದಕ್ಷಿಣ ಕೊರಿಯಾ ತಂಡವನ್ನು 4-1 ಅಂತರದಲ್ಲಿ ಸೋಲಿಸುವ ಮೂಲಕ ಕ್ವಾರ್ಟರ್ ಫೈನಲ್ ತಲುಪಿತ್ತು. ಈ ಪಂದ್ಯದ 7ನೇ ನಿಮಿಷದಲ್ಲೇ ನೇಯ್ಮರ್ ಜೂನಿಯರ್ ತಮ್ಮ ವೃತ್ತಿ ಜೀವನದ 76ನೇ ಅಂತಾರಾಷ್ಟ್ರೀಯ ಗೋಲು ಗಳಿಸಿ ಮತ್ತೊಂದು ದಾಖಲೆ ಬರೆದರು.

ಫುಟ್‌ಬಾಲ್‌ನ ದಂತಕಥೆ ಪೀಲೆ ಅವರ ಅಂತಾರಾಷ್ಟ್ರೀಯ ಗೋಲುಗಳ ಸಂಖ್ಯೆ 77. ಈ ದಾಖಲೆಯನ್ನು ಸರಿಗಟ್ಟಲು ನೇಯ್ಮರ್ ಜೂನಿಯರ್‌ಗೆ ಇನ್ನು ಕೇವಲ ಒಂದು ಗೋಲು ಮಾತ್ರ ಬಾಕಿ ಇದೆ. ಮುಂದಿನ ಪಂದ್ಯದಲ್ಲಿ ಆ ಅಪರೂಪದ ಗಳಿಗೆಯನ್ನು ಕಣ್ತುಂಬಿಕೊಳ್ಳಲು ಫುಟ್‌ಬಾಲ್ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಆದರೆ, ಗಾಯಾಳುವಾಗಿರುವ ನೇಯ್ಮರ್ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದೇ ಅನುಮಾನವಾಗಿದ್ದು, ಅಭಿಮಾನಿಗಳ ನಿರಾಸೆಗೂ ಕಾರಣವಾಗಿದೆ. ಒಂದು ವೇಳೆ ನೇಯ್ಮರ್ ಕಣಕ್ಕಿಳಿದರೆ ಫಿಫಾ ವಿಶ್ವಕಪ್ 2022 ಮತ್ತೊಂದು ಹೊಸ ಇತಿಹಾಸಕ್ಕೆ ಸಾಕ್ಷಿಯಾಗುವ ಸಾಧ್ಯತೆ ದಟ್ಟವಾಗಿದೆ.

ಅಶೋಕ್ ಕುಮಾರ್

ಅಶೋಕ್ ಕುಮಾರ್
ಮೂಲತಃ ಭದ್ರಾವತಿಯವರಾದ ಅಶೋಕ್, ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವಿ ಯುವ ಪತ್ರಕರ್ತರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಾವಣಗೆರೆ ಲೋಕಸಭಾ ಕ್ಷೇತ್ರ: ಚುನಾವಣಾ ಕಣದಲ್ಲಿ ’ಜಿ.ಮಲ್ಲಿಕಾರ್ಜುನಪ್ಪ- ಶಾಮನೂರು ಶಿವಶಂಕರಪ್ಪ’ ಕುಟುಂಬದ ಮಹಿಳಾ ಅಭ್ಯರ್ಥಿಗಳು;...

1991ರವರೆಗೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ನಂತರ ಬಿಜೆಪಿ ಅಲ್ಲಿ ನೆಲೆಯೂರಿ ಹಿಡಿತ ಸಾಧಿಸಿದೆ. 1996ರ ಸಾರ್ವತ್ರಿಕ ಚುನಾವಣೆಯ ನಂತರ ಕೇಸರಿ ಪಕ್ಷವು ಇಲ್ಲಿನ ತನ್ನ ಬಿಗಿ ಹಿಡಿತವನ್ನು ಸಡಿಲಗೊಳಿಸಿಲ್ಲ. ಮಾಜಿ...