ಶ್ರೀನಗರದ ಲಾಲ್ ಚೌಕ್‌ನಲ್ಲಿರುವ ಘಂಟಾ ಘರ್ (ಗಡಿಯಾರ ಗೋಪುರ) ಮೇಲೆ ರಾಷ್ಟ್ರಧ್ವಜ ಹಾರಿಸಲು ಯತ್ನಿಸುತ್ತಿದ್ದ ಮೂವರು ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾರ್ಯಕರ್ತರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.
‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಗಳನ್ನು ಕೂಗುತ್ತಾ, ನಗರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಬಿಜೆಪಿ ಕಾರ್ಯಕರ್ತರು ಪ್ರಯತ್ನಿಸಿದರು. ಜೊತೆಗೆ ಶ್ರೀನಗರದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಕಚೇರಿ ಮುಂದೆಯೂ ಬಿಜೆಪಿ ಕಾರ್ಯಕರ್ತರು ರಾಷ್ಟ್ರಧ್ವಜವನ್ನು ಹಾರಿಸುವ ಪ್ರಯತ್ನ ಮಾಡಿದ್ದಾರೆ.
#WATCH: Bharatiya Janata Party (BJP) workers hoist the national flag at Peoples Democratic Party (PDP) office in Jammu. #JammuAndKashmir pic.twitter.com/wCCYpzCDhA
— ANI (@ANI) October 26, 2020
ಅಕ್ಟೋಬರ್ 13 ರಂದು ಬಂಧನದಿಂದ ಬಿಡುಗಡೆಯಾದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಜಮ್ಮು ಮತ್ತು ಕಾಶ್ಮೀರದ ಧ್ವಜವನ್ನು ಪುನಃಸ್ಥಾಪಿಸುವವರೆಗೆ ತ್ರಿವರ್ಣಧ್ವಜ ಹಿಡಿಯುವುದಿಲ್ಲ ಎಂದು ಹೇಳಿದರು. ಇದನ್ನು ವಿರೋಧಿಸಿದ್ದ ಬಿಜೆಪಿ, ದೇಶದ್ರೋಹದ ಹೇಳಿಕೆ ನೀಡಿರುವ ಮುಫ್ತಿ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿತ್ತು.
ಇದನ್ನೂ ಓದಿ: ದೇಶ ನಡೆಯುತ್ತಿರುವುದು ಸಂವಿಧಾನದ ಮೇಲೆ; ಬಿಜೆಪಿ ಪ್ರಣಾಳಿಕೆಯ ಮೇಲಲ್ಲ: ಮೆಹಬೂಬಾ ಮುಫ್ತಿ
370 ನೇ ವಿಧಿಯನ್ನು ಪುನಃ ಸ್ಥಾಪಿಸುವವರೆಗೆ ಮತ್ತು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಪುನಃಸ್ಥಾಪಿಸುವವರೆಗೆ ತಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮುಫ್ತಿ ಘೋಷಿಸಿದ್ದಾರೆ. ಆರ್ಟಿಕಲ್ 370 ರ ಪುನಃಸ್ಥಾಪನೆಗಾಗಿ ಒಟ್ಟಾಗಿ ಹೋರಾಡಲು, ಪೀಪಲ್ಸ್ ಅಲಯನ್ಸ್ ಆಫ್ ಗುಪ್ಕರ್ ಡಿಕ್ಲರೇಷನ್ (PAGD) ಅಧ್ಯಕ್ಷರಾಗಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರನ್ನು ಆಯ್ಕೆ ಮಾಡಿದ ನಂತರ ಈ ಬೆಳವಣಿಗೆ ಕಂಡುಬಂದಿದೆ.
ಕಳೆದ ವಾರ ರಾಜ್ಯದ ಏಳು ಮುಖ್ಯ ರಾಜಕೀಯ ಪಕ್ಷಗಳು ಸೇರಿ PAGD ರಚಿಸಿ, 2019ರ ಆಗಸ್ಟ್ 5 ಕ್ಕಿಂತ ಮೊದಲು ಜಮ್ಮು ಕಾಶ್ಮೀರ ಮತ್ತು ಲಡಾಖ್ ಜನರು ಹೊಂದಿದ್ದ ಎಲ್ಲಾ ಹಕ್ಕುಗಳನ್ನು ಹಿಂದಿರುಗಿಸುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿತ್ತು. ಜೊತೆಗೆ ಈ ಅಲಯನ್ಸ್ ಬಿಜೆಪಿ ವಿರೋಧಿ ಆದರೆ ರಾಷ್ಟ್ರ ವಿರೋಧಿ ಅಲ್ಲ ಎಂದು ಹೇಳಿತ್ತು.
ಮೂವರು ಬಿಜೆಪಿ ಕಾರ್ಯಕರ್ತರ ಗುಂಪು ಘಂಟಾ ಘರ್ ಮೇಲೆ ರಾಷ್ಟ್ರಧ್ವಜ ಹಾರಿಸಲು ಮುಂದಾಗಿತ್ತು. ಕೂಡಲೇ ಅವರನ್ನು ತಡೆದ ಪೊಲೀಸರು ಬಂಧಿಸಿ ಕೋಟಿಬಾಗ್ ಠಾಣೆಗೆ ಕರೆದೊಯ್ದರು. ರಾಷ್ಟ್ರಧ್ವಜವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು ಎಂದು ಹೇಳಲಾಗಿದೆ.
ಈ ನಡುವೆ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಹೇಳಿಕೆ ಖಂಡಿಸಿ, ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಮೂವರು ಮುಖಂಡರಾದ ಟಿ.ಎಸ್.ಬಜ್ವಾ, ವೇದ ಮಹಾಜನ್ ಮತ್ತು ಹುಸೇನ್-ಎ-ವಾಫಾ ಪಿಡಿಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.


