Homeಕರ್ನಾಟಕಬಿಜೆಪಿ ಕರ್ನಾಟಕವನ್ನು ಭಿಕ್ಷುಕ ರಾಜ್ಯವನ್ನಾಗಿ ಮಾಡಲು ಹೊರಟಿದೆ: ಸಿದ್ದರಾಮಯ್ಯ

ಬಿಜೆಪಿ ಕರ್ನಾಟಕವನ್ನು ಭಿಕ್ಷುಕ ರಾಜ್ಯವನ್ನಾಗಿ ಮಾಡಲು ಹೊರಟಿದೆ: ಸಿದ್ದರಾಮಯ್ಯ

ಕಾಂಗ್ರೆಸ್ ಮತ್ತು ಬಿಜೆಪಿಯ ತಲಾ ಐದು ವರ್ಷಗಳ ಆಡಳಿತಾವಧಿಯ ಹಣಕಾಸು ಸ್ಥಿತಿ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಏರ್ಪಡಿಸಿ ಸ್ಥಳ, ಸಮಯ ತಿಳಿಸಿದರೆ ನಾನು ಬಂದು ಅದರಲ್ಲಿ ಭಾಗವಹಿಸುತ್ತೇನೆ ಎಂದು ಸವಾಲು ಎಸೆದಿದ್ದಾರೆ.

- Advertisement -
- Advertisement -

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದ ಜನರ ತಲೆ ಮೇಲೆ ಸಾಲದ ಹೊರೆ ಹೊರಿಸಿದ್ದಾರೆ ಎಂಬ ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಿಜೆಪಿ ನಿರಾಧಾರವಾಗಿರುವ ಅಂಕಿ-ಅಂಶಗಳನ್ನು ಹುಟ್ಟುಹಾಕಿ ರಾಜ್ಯದ ಜನತೆಯ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಸತ್ಯ ಸಂಗತಿಯನ್ನು ಜನತೆಯ ಮುಂದಿಡುವುದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ ಎಂದು ಬಿಜೆಪಿ ವಿರುದ್ದ ಹಲವಾರು ವಿಷಯಗಳನ್ನು ಪಟ್ಟಿ ಮಾಡಿದ್ದಾರೆ.

ಬಿಜೆಪಿ ಮಾಡಿರುವ ಆರೋಪದ ಮೇಲೆ ಅಷ್ಟೊಂದು ವಿಶ್ವಾಸ ಇದ್ದರೆ ಕಾಂಗ್ರೆಸ್ ಮತ್ತು ಬಿಜೆಪಿಯ ತಲಾ ಐದು ವರ್ಷಗಳ ಆಡಳಿತಾವಧಿಯ ಹಣಕಾಸು ಸ್ಥಿತಿ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಏರ್ಪಡಿಸಿ ಸ್ಥಳ, ಸಮಯ ತಿಳಿಸಿದರೆ ನಾನು ಬಂದು ಅದರಲ್ಲಿ ಭಾಗವಹಿಸುತ್ತೇನೆ ಎಂದು ಸವಾಲು ಎಸೆದಿದ್ದಾರೆ.

ಇದನ್ನೂ ಓದಿ: ಕಟೀಲ್ ವಿರುದ್ಧ ಟೀಕಾಸ್ತ್ರ: ಸಿದ್ದರಾಮಯ್ಯ ಕಾಂಗ್ರೆಸ್ ’ವಿದೂಷಕ’ ಎಂದ ಬಿಜೆಪಿ!

“ಬಿಜೆಪಿ ತನ್ನ ನಾಯಕರಿಗೆ ದೇಶ, ಧರ್ಮ, ಸಮಾಜ ಒಡೆಯುವ ತರಬೇತಿಯನ್ನಷ್ಟೇ ನೀಡದೆ ಆಡಳಿತ ಮತ್ತು ಆರ್ಥಿಕ ನಿರ್ವಹಣೆ ಬಗ್ಗೆಯೂ ಪಾಠ ಮಾಡಿದ್ದರೆ ಅವರಿಂದ ಇಂತಹ ಅಜ್ಞಾನದ ಮುತ್ತುಗಳು ಉದುರಿ ಬೀಳುತ್ತಿರಲಿಲ್ಲ. ತರಬೇತಿದಾರರ ಕೊರತೆಯಿದ್ದರೆ ನಾನೇ ಬಂದು ಪಾಠ ಮಾಡ್ತೇನೆ” ಎಂದು ಅವರು ಹೇಳಿದ್ದಾರೆ.

“2008-09 ರಿಂದ 2013-14 ರ ವರೆಗಿನ ಬಿಜೆಪಿ ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಸಾಲದ ಪ್ರಮಾಣ ಶೇಕಡಾ 212 ರಷ್ಟು ಹೆಚ್ಚಿತ್ತು. 2013-14 ರಿಂದ 2018-19 ರ ನಮ್ಮ ಸರ್ಕಾರದ ಅವಧಿಯಲ್ಲಿ ಸಾಲದ ಪ್ರಮಾಣ ಹೆಚ್ಚಿದ್ದು ಕೇವಲ ಶೇಕಡಾ 65 ರಷ್ಟು ಮಾತ್ರ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಅವರು ಕೌರವರಾಗಲೂ ಅರ್ಹತೆಯಿಲ್ಲದ ದುಷ್ಟರು: ಸಿದ್ದರಾಮಯ್ಯ ತಿರುಗೇಟು

“ಹಿಂದಿನ ಅವಧಿಯ ಸಾಲವನ್ನು ಸೇರಿಸಿ ರಾಜ್ಯದ ಒಟ್ಟು ಸಾಲದ ಪ್ರಮಾಣ 2008-09 ರಿಂದ 2013-14 ರ ಅವಧಿಯಲ್ಲಿ ಶೇಕಡಾ 94.18 ರಷ್ಟು ಹೆಚ್ಚಿದ್ದರೆ, 2013-14 ರಿಂದ 2018-19 ರ ಅವಧಿಯಲ್ಲಿ ಒಟ್ಟು ಸಾಲದ ಪ್ರಮಾಣ ಹೆಚ್ಚಿದ್ದು ಕೇವಲ ಶೇಕಡಾ 78.19 ರಷ್ಟು ಮಾತ್ರ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಬೀದಿ ಅಲೆಯುತ್ತಿದ್ದವ ಬಿಜೆಪಿ ರಾಜ್ಯಾಧ್ಯಕ್ಷ- ಸಿದ್ದರಾಮಯ್ಯ ವ್ಯಂಗ್ಯ

“ಪ್ರಸಕ್ತ ಸಾಲಿನ ಬಜೆಟ್ ಅಂದಾಜಿನ ಪ್ರಕಾರ ರಾಜ್ಯದ ಸಾಲ ರೂ.53,000 ಕೋಟಿ. ಕೊರೊನಾದಿಂದಾಗಿ ಆಗಿರುವ ಆದಾಯ ಖೋತಾ ತುಂಬಲು ಹೆಚ್ಚುವರಿ ರೂ.33,000 ಕೋಟಿ ಸಾಲದ ಜೊತೆ, ಜಿಎಸ್‌ಟಿ ಪರಿಹಾರ ಭರಿಸಲು ಮತ್ತೆ ರೂ.12,000 ಕೋಟಿ ಸಾಲ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಒಂದೇ ವರ್ಷದಲ್ಲಿ ಸಾಲದ ಮೊತ್ತ ದುಪ್ಪಟ್ಟು ಮಾಡಿರುವುದು ಬಿಜೆಪಿಯ ಸಾಧನೆ” ಎಂದು ಹೇಳಿದ್ದಾರೆ.

“ಸಾಲದ ಹೊರೆಯ ಸುಳ್ಳು ಆರೋಪ ಮಾಡುವುದಕ್ಕಿಂತ ಮೊದಲು ರಾಜ್ಯದ ಬಿಜೆಪಿ ನಾಯಕರು ವಿತ್ತೀಯ ಹೊಣೆಗಾರಿಕೆ ಅಧಿನಿಯಮವನ್ನೊಮ್ಮೆ ಓದಿಕೊಳ್ಳಬೇಕಿತ್ತು. ಅದರ ಪ್ರಕಾರ ನಮ್ಮ ಸಾಲ ರಾಜ್ಯದ ಆಂತರಿಕ ಉತ್ಪನ್ನದ 25% ರ ಮಿತಿಯಲ್ಲಿರಬೇಕಾಗುತ್ತದೆ. ನನ್ನ ಕೊನೆಯ ಬಜೆಟ್‌ನಲ್ಲಿ ರಾಜ್ಯದ ಸಾಲ ಶೇಕಡಾ 20.36 ರ ಮಿತಿಯೊಳಗೆ ಇತ್ತು. ಈಗಿನ ಬಿಜೆಪಿ ಆಡಳಿತದಲ್ಲಿ ಅದು ಶೇಕಡಾ 33 ರ ಮಿತಿ ದಾಟಲಿದೆ” ಎಂದ ಭವಿಷ್ಯ ನುಡಿದಿದ್ದಾರೆ.

“ರಾಜ್ಯದ ವಿತ್ತೀಯ ಕೊರತೆ ನಮ್ಮ ಆಂತರಿಕ ಉತ್ಪನ್ನದ(GSDP) ಶೇಕಡಾ ಮೂರನ್ನು ಮೀರಬಾರದು ಎಂದು ವಿತ್ತೀಯ ಹೊಣೆಗಾರಿಕೆ ಅಧಿನಿಯಮ ಹೇಳಿದೆ. ಮುಖ್ಯಮಂತ್ರಿಯಾಗಿ ನಾನು ಮಂಡಿಸಿದ್ದ ಆರು ಆಯವ್ಯಯಪತ್ರಗಳಲ್ಲಿ ವಿತ್ತೀಯ ಕೊರತೆ ಎಂದೂ ಶೇಕಡಾ ಮೂರರ ಮಿತಿಯನ್ನು ಮೀರಿರಲಿಲ್ಲ. ನನ್ನ ಕೊನೆಯ ಬಜೆಟ್ ನಲ್ಲಿ ಈ ಮಿತಿ ಶೇಕಡಾ 2.49 ರಷ್ಟಿತ್ತು” ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಜನರಿಗೆ ಪಾಠ ಹೇಳುವ ಮೊದಲು ಮೋದಿ ಆತ್ಮಾವಲೋಕನ ಮಾಡಿಕೊಳ್ಳಲಿ: ಸಿದ್ದರಾಮಯ್ಯ

ಸಿದ್ದರಾಮಯ್ಯ

“ರಾಜ್ಯದ ಬಿಜೆಪಿ ಸರ್ಕಾರ ವಿತ್ತೀಯ ಕೊರತೆಯ ಮಿತಿಯನ್ನು 3% ಇಂದ 5% ಗೆ ಏರಿಕೆ ಮಾಡುವ ಅಪಾಯಕಾರಿ ನಿಲುವು ತೆಗೆದುಕೊಂಡಿದೆ. 5% ಗೆ ಏರಿಕೆಯಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಲಿದೆ ಹೆಚ್ಚೆಂದರೆ 3.5 ಕ್ಕೆ ಏರಿಕೆ ಮಾಡಿ, ಮುಂದಿನ ದಿನಗಳಲ್ಲಿ ಮತ್ತೆ ಇಳಿಕೆ ಮಾಡಬಹುದಿತ್ತು. ಈ ಕಿವುಡು ಸರ್ಕಾರಕ್ಕೆ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ” ಎಂದು ಅವರು ಅಸಮಧಾನ ವ್ಯಕ್ತಪಡಿಸಿದ್ದಾರೆ.

“2020-21 ರ ಆಯವ್ಯಯದಲ್ಲಿ ನಮ್ಮ ಒಟ್ಟು ಆಂತರಿಕ ಉತ್ಪನ್ನ 18 ಲಕ್ಷ ಕೋಟಿ ಎಂದು ಅಂದಾಜು ಮಾಡಲಾಗಿದೆ. ಆದರೆ ಕೊರೊನಾ ಹಾವಳಿ ಮತ್ತು ರಾಜ್ಯ ಸರ್ಕಾರದ ಆರ್ಥಿಕ ಎಡವಟ್ಟುಗಳ ಕಾರಣದಿಂದ ಅದು 12 ಲಕ್ಷ ಕೋಟಿಗಿಂತಲೂ ಕೆಳಗಿಳಿಯಬಹುದು. ಆಗ ನಮ್ಮ ಸಾಲದ ಸಾಮರ್ಥ್ಯ ಕೂಡಾ ಕಡಿಮೆಯಾಗಲಿದೆ” ಎಂದು ಹೇಳಿದ್ದಾರೆ.

“ಸಂವಿಧಾನದ 101 ನೇ ತಿದ್ದುಪಡಿ ಮೂಲಕ ಕಾರ್ಯರೂಪಕ್ಕೆ ಬಂದಿರುವ ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 18 ರ ಪ್ರಕಾರ 5 ವರ್ಷಗಳ ಕಾಲ ಜಿಎಸ್‌ಟಿ ಪರಿಹಾರ ನೀಡಬೇಕಾಗಿರುವುದು ಸಂವಿಧಾನಾತ್ಮಕ ಕರ್ತವ್ಯ. 2020-2021 ರ ಆರ್ಥಿಕ ವರ್ಷದ ಅಂತ್ಯಕ್ಕೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಜಿಎಸ್ ಟಿ ಪರಿಹಾರವಾಗಿ 30,000 ಕೋಟಿ ನೀಡಬೇಕಾಗುತ್ತದೆ ಈ ಪರಿಹಾರದ ನಿರಾಕರಣೆ ನಮ್ಮ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗಿದೆ” ಎಂದು ಅವರು ಹೇಳಿದ್ದಾರೆ.

“14 ನೇ ಹಣಕಾಸು ಆಯೋಗದಲ್ಲಿ 4.71% ಇದ್ದ ರಾಜ್ಯದ ಪಾಲನ್ನು 15 ನೇ ಹಣಕಾಸು ಆಯೋಗದಲ್ಲಿ 3.64% ಗೆ ಇಳಿಸಲಾಗಿದೆ. ಇದರಿಂದ ರಾಜ್ಯಕ್ಕೆ ರೂ.12 ಸಾವಿರ ಕೋಟಿ ನಷ್ಟವಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಆಯೋಗ ಶಿಫಾರಸು ಮಾಡಿದ್ದ ರೂ.5495 ಕೋಟಿ ವಿಶೇಷ ಅನುದಾನವನ್ನು ಹಣಕಾಸು ಸಚಿವೆ ತಿರಸ್ಕರಿಸಿ ರಾಜ್ಯಕ್ಕೆ ದ್ರೋಹ ಬಗೆದಿದ್ದಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸ್ನೇಹಕ್ಕಾಗಿ ಪಕ್ಷನಿಷ್ಠೆ, ತತ್ವನಿಷ್ಠೆ ಬಿಡುವುದಿಲ್ಲ: ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ

“ಈಗಿನ ಆರ್ಥಿಕ ಸಂಕಷ್ಟದಿಂದ ಪಾರಾಗಬೇಕಾದರೆ ರಾಜ್ಯ ಸರ್ಕಾರ ಬದ್ಧತಾ ವೆಚ್ಚಕ್ಕೆ ಕಡಿವಾಣ ಹಾಕಬೇಕಾಗಿದೆ. ದುಂದು ವೆಚ್ಚಗಳನ್ನು ನಿಲ್ಲಿಸಬೇಕು ಅನಗತ್ಯ ಹುದ್ದೆಗಳನ್ನು ರದ್ದುಮಾಡಬೇಕು, ತೆರಿಗೆಯೇತರ ಆದಾಯವನ್ನು ಹೆಚ್ಚಿಸಬೇಕು. ಆರ್ಥಿಕ ಶಿಸ್ತನ್ನು ಪಾಲಿಸಬೇಕು” ಎಂದು ಹೇಳಿದ್ದಾರೆ.

“ರಾಜ್ಯ ಸರ್ಕಾರ ಒಂದು ಲಕ್ಷ ಕೋಟಿ ರೂಪಾಯಿ ಸಾಲ ಎತ್ತಲು ಹೊರಟರೂ ಪ್ರವಾಹದಿಂದ ಬದುಕು ಕಳೆದುಕೊಂಡು ಬೀದಿಗೆ ಬಿದ್ದಿರುವ ಜನರಿಗೆ ಪರಿಹಾರ ಕೊಡಲು ರಾಜ್ಯ ಸರ್ಕಾರದಲ್ಲಿ ದುಡ್ಡಿಲ್ಲ, ಕೊರೊನಾ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯವಾಗಿಲ್ಲ. ಜನರ ತೆರಿಗೆಯ ದುಡ್ಡಿನ ಜೊತೆ ಸಾಲದ ದುಡ್ಡು ಕೂಡಾ ಯಾರ ಜೇಬಿಗೆ ಹೋಗಿದೆ ಎನ್ನುವುದನ್ನು ಮುಖ್ಯಮಂತ್ರಿಗಳು ತಿಳಿಸಬೇಕು” ಎಂದು ಅವರು ಹೇಳಿದ್ದಾರೆ.

“ಬಿಜೆಪಿ ಆಡಳಿತದ ಹಿಂದಿನ ಅವಧಿಯಲ್ಲಿ ದೇಶದ ಅತ್ಯಂತ ಭ್ರಷ್ಟ ಸರ್ಕಾರ ಕರ್ನಾಟಕದ್ದು ಎಂದು ಮಾಧ್ಯಮಗಳು ತುಚ್ಚೀಕರಿಸುತ್ತಿತ್ತು. ನಮ್ಮ ಆಡಳಿತದ ಕಾಲದಲ್ಲಿ ಅತ್ಯಂತ ಸಮರ್ಥವಾಗಿ ಹಣಕಾಸನ್ನು ನಿರ್ವಹಿಸಿದ ರಾಜ್ಯ ಕರ್ನಾಟಕವೆಂದು ದೇಶ ಕೊಂಡಾಡುತ್ತಿತ್ತು. ಇಂತಹ ಕರ್ನಾಟಕವನ್ನು ಭಾರತೀಯ ಜನತಾ ಪಕ್ಷದ ಸರ್ಕಾರ ಮತ್ತೆ ಭಿಕ್ಷುಕ ರಾಜ್ಯವನ್ನಾಗಿ ಮಾಡಲು ಹೊರಟಿದೆ” ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಉಪಚುನಾವಣೆ ಭ್ರಷ್ಟ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಆಗಬೇಕು – ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...