ಅಸ್ಸಾಮಿನ ಪ್ರಮುಖ ರೈತ ಸಂಘಟನೆಯಾದ ಕೃಷಿಕ್ ಮುಕ್ತಿ ಸಂಗ್ರಾಮ್ ಸಮಿತಿಯ ನಾಯಕರಾದ ಅಖಿಲ್ ಗೊಗೋಯ್ ಅವರ ಭಿತ್ತಿಚಿತ್ರವನ್ನು ಚಿತ್ರಿಸಿದ್ದಕ್ಕಾಗಿ ಗುವಾಹಟಿ ಮೂಲದ ನಾಲ್ವರು ಕಲಾವಿದರ ಗುಂಪನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕಲಾವಿದರನ್ನು ಛತ್ರ ಮುಕ್ತಿ ಸಂಗ್ರಾಮ್ ಸಮಿತಿ (SMS) ಮುಖಂಡ ಪ್ರಂಜಲ್ ಕಾಳಿತಾ ಅವರೊಂದಿಗೆ ಬಸಿಸ್ಥಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.
ಅಖಿಲ್ ಗೊಗೋಯ್ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಅಸ್ಸಾಂನಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಇವರನನ್ನು ಬಂಧಿಸಲಾಗಿತ್ತು. ದೇಶದ್ರೋಹ ಸೇರಿದಂತೆ ಗೊಗೊಯ್ ಅವರನ್ನು ಹಲವಾರು ಅಪರಾಧಗಳ ಆರೋಪದಲ್ಲಿ ಜೈಲಿನಲ್ಲಿ ಇರಿಸಲಾಗಿದೆ.
ಗುವಾಹಟಿಯ ಅಂಗ ಆರ್ಟ್ ಗುಂಪಿಗೆ ಸೇರಿದ ನಾಲ್ವರು ಕಲಾವಿದರು, ಬಸಿಸ್ಥಾದ ಸಿಟಿ ಬ್ರಿಡ್ಜ್‌ನ ಸಾರ್ವಜನಿಕ ಗೋಡೆಯ ಮೇಲೆ ರೈತ ನಾಯಕ ಅಖಿಲ್ ಗೊಗೋಯ್ ಅವರನ್ನು ಪೊಲೀಸರು ಎಳೆದೊಯ್ಯುತ್ತಿರುವ ವರ್ಣಚಿತ್ರವನ್ನು ಕಲಾವಿದರು ಚಿತ್ರಿಸಿದ್ದರು. ಭಿತ್ತಿ ಚಿತ್ರವನ್ನು ನಂತರ ಪೊಲೀಸರು ಅಳಿಸಿದ್ದಾರೆ.
ಸ್ಥಳೀಯ ಮಾಧ್ಯಮಗಳು ಪೊಲೀಸರ ಕ್ರಮವನ್ನು ‘ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ’ ಎಂದು ಕರೆದಿವೆ.
ಇದನ್ನೂ ಓದಿ: ಪರಿಸರ ಚಳವಳಿ, ಸಿಎಎ ವಿರೋಧಿ ಹೋರಾಟಗಳ ಗಟ್ಟಿ ದನಿ ಅಖಿಲ್ ಗೊಗೋಯ್

ಗೌಹಟಿ ಹೈಕೋರ್ಟ್ ಗೊಗೋಯ್ ಅವರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸುತ್ತಿದ್ದ ದಿನವೇ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಭಿತ್ತಿಚಿತ್ರ ವೈರಲ್ ಆಗಿತ್ತು. ಕಲಾವಿದರು ಬುಧವಾರವೇ ಚಿತ್ರ ರಚಿಸಲು ಪ್ರಾರಂಭಿಸಿದ್ದರು. ಆದರೇ ಆ ದಿನ ಪೊಲೀಸರು ಅದನ್ನು ಗಮನಿಸಿರಲಿಲ್ಲ ಎಂದು ಕಲಾವಿದರು ತಿಳಿಸಿದ್ದಾರೆ.
ನಾಲ್ವರು ಕಲಾವಿದರಲ್ಲಿ ಒಬ್ಬರಾದ ಧ್ರುಬಾ ಶರ್ಮಾ ದಿ ವೈರ್‌ಗೆ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು,“ಇದು ತುಂಬಾ ವಿಚಿತ್ರವಾಗಿದೆ. ನಾವು ಸರ್ಕಾರಿ ಆಸ್ತಿಗೆ ಹಾನಿ ಮಾಡುತ್ತಿದ್ದೇವೆ ಎಂಬ ಆರೋಪದ ಮೇಲೆ ನಮಗೆ ಚಿತ್ರ ಬಿಡಿಸಲು ಯಾವುದೇ ಅನುಮತಿ ನೀಡಿಲ್ಲ ಎಂದು ಪೊಲೀಸರು ಹೇಳಿದಾಗ ನಾವಾಗಲೇ ಅರ್ಧದಷ್ಟು ಚಿತ್ರ ಪೂರ್ಣಗೊಳಿಸಿದ್ದೇವು” ಎಂದಿದ್ದಾರೆ.
ನಮ್ಮನ್ನು ವಶಕ್ಕೆ ಪಡೆದ ಪೊಲೀಸರು, ನಾವು ಅಖಿಲ್ ಗೊಗೋಯ್ ಅವರನ್ನು ದೇವರ ರೀತಿಯಲ್ಲಿ ಏಕೆ ಚಿತ್ರಿಸುತ್ತಿದ್ದೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ ಎಂದು ಕಲಾವಿದ ಧ್ರುಬಾ ಶರ್ಮಾ ಹೇಳಿದ್ದಾರೆ. ಜೊತೆಗೆ ಕೆಲವು ಪೊಲೀಸರು, ತಾವು ರಚಿಸಿದ ಭಿತ್ತಿಚಿತ್ರವನ್ನು ಇಷ್ಟಪಟ್ಟಿದ್ದಾರೆ ಎಂದಿದ್ದಾರೆ.
ಅಂಗಾ ಆರ್ಟ್ ಗುಂಪು 2010 ರಲ್ಲಿ ಭಿತ್ತಿಚಿತ್ರಗಳನ್ನು ರಾಜಕೀಯ ಅಭಿವ್ಯಕ್ತಿಯ ರೂಪವಾಗಿ ಚಿತ್ರಿಸಲು ಪ್ರಾರಂಭಿಸಿತು. 2019 ರ ಕೊನೆಯಿಂದ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ಗುರಿಯಾಗಿಟ್ಟುಕೊಂಡು ‘ದ್ವೇಷದ ವಿರುದ್ಧ ಕಲೆ’ ಎಂಬ ಶೀರ್ಷಿಕೆಯಲ್ಲಿ ಕಲಾತ್ಮಕವಾಗಿ ಅನಿಸಿಕೆಗಳನ್ನು ಚಿತ್ರಿಸಲು ಪ್ರಾರಂಭಿಸಿತು.


