Homeಮುಖಪುಟಒಕ್ಕೂಟ ತತ್ವದ ಹಿನ್ನೆಲೆಯಲ್ಲಿ 2022-23 ಬಜೆಟ್ ಪೂರ್ವ ಚರ್ಚೆ

ಒಕ್ಕೂಟ ತತ್ವದ ಹಿನ್ನೆಲೆಯಲ್ಲಿ 2022-23 ಬಜೆಟ್ ಪೂರ್ವ ಚರ್ಚೆ

- Advertisement -
- Advertisement -

ನಮ್ಮ ಆರ್ಥಿಕತೆಯು 2013-14ರಿಂದ ಹಳಿ ತಪ್ಪಿದ ರೈಲಿನಂತೆ ಓಡುತ್ತಿದೆ. ಇದು 2020-21ರಲ್ಲಿ ಪ್ರಾರಂಭವಾದ ಕೋವಿಡ್‌ನಿಂದಾಗಿ ನಿಂತುಬಿಟ್ಟಿರುವಂತೆ ಕಾಣುತ್ತದೆ. ವಾಸ್ತವವಾಗಿ ನಮ್ಮ ಆರ್ಥಿಕತೆಯು ಕುಸಿತಕ್ಕೆ ಒಳಗಾಗಿದ್ದು 2017-18ರಲ್ಲಿ. ಹಲವು ಅಂಕಿಅಂಶಗಳು ಇದನ್ನು ನಿರೂಪಿಸುತ್ತವೆ. ನಮ್ಮ ಜಿಡಿಪಿ ಬೆಳವಣಿಗೆ ದರವು 2015-16ರಲ್ಲಿ ಶೇ.8.0ರಷ್ಟಿದ್ದುದು 2016-17ರಲ್ಲಿ ಶೇ.6.8, 2017-18ರಲ್ಲಿ ಶೇ.6.53 ಮತ್ತು 2018-19ರಲ್ಲಿ ಶೇ.4.04ರಷ್ಟಿತ್ತು. ಕೋವಿಡ್ ನಿಯಂತ್ರಿಸಲು ಮಾಡಿದ ಲಾಕ್‌ಡೌನ್‌ನಿಂದಾಗಿ 2019-20ರಲ್ಲಿ ಇದು ಶೇ(-)7.9ರಷ್ಟಕ್ಕೆ ಕುಸಿದಿದೆ. ಇದೇ ರೀತಿಯಲ್ಲಿ ಉಳಿತಾಯ ದರ 2013-14ರಲ್ಲಿ ಜಿಡಿಪಿಯ ಶೇ.30ರಷ್ಟಿದ್ದದು ಇದು ಶೇ.28ಕ್ಕಿಂತ ಕಡಿಮೆಯಾಗಿದೆ. ಈ ಎಲ್ಲ ಸೂಚಿಗಳು ಕೋವಿಡ್‌ನಿಂದಾಗಿ ಮತ್ತಷ್ಟು ಕುಸಿತಕ್ಕೆ ಒಳಗಾದವು. ನಮ್ಮ ಒಕ್ಕೂಟ ಸರ್ಕಾರಕ್ಕೆ ಇಂದು ನಿಶ್ಚಿತ ಆರ್ಥಿಕ ನೀತಿಯೆಂಬುದೇ ಇಲ್ಲ. ಖಾಸಗೀಕರಣವೇ ಅಭಿವೃದ್ಧಿ ಎನ್ನುವ ಸೂತ್ರದ ಮೇಲೆ ಸರ್ಕಾರ ನಡೆದಿದೆ.

ದೇಶದ ಅಮೂಲ್ಯ ಆಸ್ತಿಯನ್ನೆಲ್ಲ ಹಣಕಾಸು ಸಚಿವರು ಮಾರಾಟಕ್ಕಿಟ್ಟಿದ್ದಾರೆ. ಆರ್ಥಿಕತೆಯಲ್ಲಿ ಲಾಭ ತರುತ್ತಿರುವ, ಸರ್ಕಾರಕ್ಕೆ ಅಪಾರ ತೆರಿಗೆ ನೀಡುತ್ತಿರುವ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಇಂದು ಮಾರಾಟಕ್ಕಿಡಲಾಗಿದೆ. ಸಾರ್ವಜನಿಕ ಆಸ್ತಿಗಳಾದ ರೈಲುಗಳು ಮತ್ತು ರೈಲ್ವೆ ಆಸ್ತಿ, ಟೆಲಿಸಂಪರ್ಕ, ರಸ್ತೆಗಳು, ವಿಮಾನ ನಿಲ್ದಾಣಗಳು, ಕ್ರೀಡಾಂಗಣ ಮುಂತಾದವುಗಳನ್ನು ’ರಾಷ್ಟ್ರೀಯ ನಗದೀಕರಣ ವಾಹಿನಿ’ ಎಂಬ ಕಾರ್ಯಕ್ರಮದಡಿಯಲ್ಲಿ ಮಾರಾಟ ಮಾಡುವ – ಗುತ್ತಿಗೆ ನೀಡುವ ಕೆಲಸದಲ್ಲಿ ಸರ್ಕಾರ ನಿರತವಾಗಿದೆ. ನಮ್ಮ ಹಿರೀಕರು ಮಾಡಿಟ್ಟ ಆಸ್ತಿಯನ್ನು ಮಾರಾಟ ಮಾಡುವುದು ವಿವೇಕದ ಕೆಲಸವಲ್ಲ ಎಂಬ ಸಾಮಾನ್ಯ ಜ್ಞಾನವೂ ಸರ್ಕಾರಕ್ಕೆ ಇದ್ದಂತೆ ಕಾಣುತ್ತಿಲ್ಲ. ಉದಾ: ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ಸಂಸ್ಥೆಯನ್ನು ಖಾಸಗಿಗೆ ಮಾರಾಟ ಮಾಡಲು ಸರ್ಕಾರ ಸಿದ್ಧವಾಗಿದೆ. ಇದು ಸರ್ಕಾರಕ್ಕೆ, ದೇಶಕ್ಕೆ ಲಾಭ ತಂದುಕೊಡುತ್ತಿರುವ ಬೃಹತ್ ಉದ್ದಿಮೆಯಾಗಿದೆ ಎಂಬದನ್ನು ಪರಿಗಣಿಸದೆ ಹೋಗಿದ್ದಾರೆ. ಈ ಉದ್ದಿಮೆಯನ್ನು ಸರ್ಕಾರ 1976ರಲ್ಲಿ ರೂ.27.75 ಕೋಟಿಗೆ ಖರೀದಿಸಿತ್ತು. ಇಂದು ಇದರ ಮೌಲ್ಯ ರೂ. 1.15 ಲಕ್ಷ ಕೋಟಿಯಾಗಿದೆ. ಇದು ವಾರ್ಷಿಕ ರೂ. 25000 ಕೋಟಿ ತೆರಿಗೆ ಕಟ್ಟುತ್ತಿದೆ. ವಾರ್ಷಿಕ ರೂ. 15000 ಕೋಟಿಗೂ ಮೀರಿ ಲಾಭಾಂಶವನ್ನು ಒಕ್ಕೂಟ ಸರ್ಕಾರಕ್ಕೆ ನೀಡುತ್ತಿದೆ. ಇಂತಹ ಬಂಗಾರದ ಮೊಟ್ಟೆಯಿಡುವ ಉದ್ದಿಮೆಯನ್ನು ಮಾರಾಟ ಮಾಡುವ ಅಗತ್ಯವೇನಿದೆ? ಇದೇ ರೀತಿಯಲ್ಲಿ ರೂ. 5 ಕೋಟಿ ಬಂಡವಾಳದಲ್ಲಿ ಆರಂಭವಾದ ಜೀವ ವಿಮಾ ನಿಗಮದ ಮೌಲ್ಯ ಇಂದು ರೂ. 38 ಲಕ್ಷ ಕೋಟಿ ಮೀರಿದೆ. ದೇಶದ 140 ಕೋಟಿ ಜನರ ಆಸ್ತಿ ಇದಾಗಿದೆ. ಇದನ್ನು ಮಾರಾಟ ಮಾಡುವ ಅಗತ್ಯವೇನಿದೆ?

ಒಕ್ಕೂಟ ಬಜೆಟ್ 2022-23: ನಿರೀಕ್ಷೆಗಳು!

ಇದೀಗ 2022-23ರ ಬಜೆಟ್ ಮಂಡಿಸುವ ಕಾಲ ಬಂದಿದೆ. ಒಕ್ಕೂಟ ಸರ್ಕಾರಕ್ಕೆ ಆರ್ಥಿಕ, ಹಣಕಾಸು, ಉದ್ದಿಮೆ ಮುಂತಾದ ವಿಷಯಗಳಲ್ಲಿ ಸಲಹೆ ನೀಡುವ ಆರ್ಥಿಕ ಸಲಹೆಗಾರರಾರೂ ಇಲ್ಲ. ಧಾರ್ಮಿಕ ಅಮಲನ್ನು ಮೈತುಂಬಾ ತುಂಬಿಕೊಂಡ ಈ ಸರ್ಕಾರ ಯಾವ ಬಗೆಯ ಬಜೆಟ್ ನೀಡಬಹುದು? ನಮ್ಮ ಆರ್ಥಿಕ ಮಂತ್ರಿಗೆ ಸರ್ಕಾರವೊಂದರ ರೆವಿನ್ಯೂ ಮೂಲ ತೆರಿಗೆ(ನೇರ-ಅಪ್ರತ್ಯಕ್ಷ) ಎನ್ನುವುದು ಕೂಡ ಗೊತ್ತಿರುವಂತೆ ಕಾಣುತ್ತಿಲ್ಲ. ಈ ಸರ್ಕಾರವು ತೆರಿಗೆ ಮಾರ್ಗವನ್ನು ಬಿಟ್ಟು ರೆವಿನ್ಯೂಗಾಗಿ ಮಾನಿಟೈಸೇಶನ್ ಆಫ್ ಅಸೆಟ್ಸ್, ಸಾರ್ವಜನಿಕ ಉದ್ದಿಮೆಗಳ ಮಾರಾಟ, ಡಿಸ್‌ಇನ್‌ವೆಸ್ಟ್‌ಮೆಂಟ್, ಸಾಲ ಎತ್ತುವುದು ಮುಂತಾದ ದಾರಿಯನ್ನು ಹಿಡಿದಿದೆ.

ಈ ಸರ್ಕಾರವು ಹಣಕಾಸು ವಿಷಯದಲ್ಲಿ ರಾಜ್ಯಗಳಿಗೆ ತೀವ್ರ ಅನ್ಯಾಯ ಮಾಡುತ್ತಿರುವುದು ಕೂಡ ಸಾಕಷ್ಟು ಬಾರಿ ಚರ್ಚೆಯಾಗಿ ಸಾಬೀತಾಗಿದೆ. ಇದು ನಮ್ಮ ಸಂವಿಧಾನಾತ್ಮಕ ಒಕ್ಕೂಟ ತತ್ವಕ್ಕೆ ಧಕ್ಕೆ ಒಡ್ಡುತ್ತಿದೆ. ಹಿಂದೆಂದೂ ಕಾಣದ ಪ್ರಮಾಣದಲ್ಲಿ ನಿರುದ್ಯೋಗ ನಮ್ಮ ಯುವ ಜನತೆಯನ್ನು ಕಾಡುತ್ತಿದೆ. ’ಸಮಗ್ರ ಬೇಡಿಕೆ’ ಎನ್ನುವುದನ್ನು ಅಭಿವೃದ್ಧಿಯ ಚಾಲಕ ಶಕ್ತಿ ಎಂದು ಜಾನ್ ಮನಿಯಾರ್ಡ್ ಕೀನ್ಸ್ ಕಾಲದಿಂದ(1930ರ ದಶಕ)ಗುರುತಿಸಿಕೊಂಡು ಬಂದಿದ್ದರೂ ಈಗ ಅದು ನಮ್ಮಲ್ಲಿ ನೆಲಕಚ್ಚಿದೆ. ಆರೋಗ್ಯ ಸೇವೆಯಂತೂ ಮೊದಲೆ ಅಸ್ವಸ್ಥ ಸ್ಥಿತಿಯಲ್ಲಿತ್ತು. ಕೋವಿಡ್‌ನಿಂದಾಗಿ ಅದು ತೀವ್ರ ಹದಗೆಟ್ಟಿದೆ. ಯಾವುದನ್ನು ’ಎಮ್‌ಎಸ್‌ಎಮ್‌ಇ’ ಎಂದು ಕರೆಯುತ್ತಿದ್ದೇವೆಯೋ ಅದು (ಸಣ್ಣ ಪ್ರಮಾಣದ ಉದ್ದಿಮೆ ರಂಗ) ನಿತ್ರಾಣಗೊಂಡಿದೆ. ಈ ವಲಯದಲ್ಲಿನ ಸುಮಾರು 11 ಕೋಟಿ ಕಾರ್ಮಿಕರ ಬದುಕು ಕೋವಿಡ್ ಪೆಂಡಮಿಕ್‌ನಿಂದ ಮೂರಾಬಟ್ಟೆಯಾಗಿದೆ. ಈ ವಲಯದಲ್ಲಿನ ಶೇ. 99ರಷ್ಟು ಘಟಕಗಳು ಓನ್ ಅಕೌಂಟ್ ಘಕಟಗಳಾಗಿವೆ. ಇವುಗಳಲ್ಲಿ ಸಾಕಷ್ಟು ಘಟಕಗಳು ಮುಚ್ಚಿಹೋಗಿವೆ.

ಈ ಹಿನ್ನೆಲೆಯಲ್ಲಿ 2022-23ನೇಯ ಸಾಲಿನ ಒಕ್ಕೂಟ ಬಜೆಟ್ಟಿನಿಂದ ಏನನ್ನು ನಿರೀಕ್ಷಿಸಬಹುದು?

(1) ಎಂಜಿಎನ್‌ಆರ್‌ಈಜಿಎ ರೀತಿಯ ಎಂಜಿಎನ್‌ಯುಈಜಿಎ ಬೇಕು!

ಅನೇಕ ತಜ್ಞರು, ಅಧ್ಯಯನ ಸಂಸ್ಥೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರು 2015ರಿಂದಲೂ ಗ್ರಾಮೀಣ ಪ್ರದೇಶದಲ್ಲಿ ಜಾರಿಯಲ್ಲಿರುವ ನರೇಗಾದಂತಹ (ಎಂಜಿಎನ್‌ಆರ್‌ಈಜಿಎ) ಉದ್ಯೋಗ ಖಾತ್ರಿ ಕಾರ್ಯಕ್ರಮವನ್ನು ನಗರ ಪ್ರದೇಶದಲ್ಲಿಯೂ (ಮಹಾತ್ಮಗಾಂಧಿ ರಾಷ್ಟ್ರೀಯ ನಗರ ಉದ್ಯೋಗ ಖಾತ್ರಿ ಕಾಯಿದೆ: ಎಂಜಿಎನ್‌ಯುಈಜಿಎ) ಆರಂಭಿಸಬೇಕು ಎಂದು ಒತ್ತಾಯಿಸತ್ತಿದ್ದಾರೆ (ನೋಡಿ:ಸ್ಟೇಟ್ ಆಫ್ ವರ್ಕಿಂಗ್ ಇಂಡಿಯ
ರಿಪೋರ್ಟ್ 2021. ಅಜೀಮ್ ಪ್ರೇಮ್‌ಜಿ ಯೂನಿವರ್ಸಿಟಿ. ಮತ್ತು ಜೀನ್ ಡ್ರೀಜ್ ಅವರ ಡಿಸೆಂಟ್ರಲೈಸ್ಡ್ ಅರ್ಬನ್ ಎಂಪ್ಲಾಯ್‌ಮೆಂಟ್ ಆಂಡ್ ಟ್ರೈನಿಂಗ್ ಯೋಜನೆ). ಕೋವಿಡ್ ಪೆಂಡಮಿಕ್ ಸಂದರ್ಭದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರಿಗೆ ಬದುಕನ್ನು ನೀಡಿದ ಕಾರ್ಯಕ್ರಮ ನರೇಗಾ. ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ಕಾರ್ಮಿಕರು ವಲಸೆ ಬರುವುದು ಇಂದು ಸಾಮಾನ್ಯವಾಗಿದೆ.

ಈ ಕಾರ್ಮಿಕರಿಗೆ ಕನಿಷ್ಟ ಕೂಲಿಯ ಉದ್ಯೋಗವನ್ನು ನೀಡುವುದಕ್ಕೆ ಪ್ರಸ್ತುತ ಬಜೆಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. ಇಂದಿನ ಒಕ್ಕೂಟ ಸರ್ಕಾರಕ್ಕೆ ಉದ್ಯೋಗ ಕಾರ್ಯಕ್ರಮಗಳ ಬಗ್ಗೆ ಒಲವಿಲ್ಲ. ಏಕೆಂದರೆ ಇದು ಬಡವರಿಗೆ ನೆರವು ನೀಡುವ ಕಾರ್ಯಕ್ರಮ ತಾನೆ? ಬಡವರಲ್ಲಿ ಪ.ಜಾ, ಪ.ಪಂ. ಒಬಿಸಿ ವರ್ಗದವರು ಹೆಚ್ಚಿರುತ್ತಾರೆ. ಈ ಸರ್ಕಾರವು 2019-20ರಲ್ಲಿ ನರೇಗಾಕ್ಕೆ ನೀಡಿದ್ದ ಅನುದಾನ ರೂ. 71636 ಕೋಟಿ. ಮುಂದೆ 2020-21ರಲ್ಲಿನ ಪರಿಷ್ಕೃತ ಬಜೆಟ್ಟಿನಲ್ಲಿ ನೀಡಿದ್ದ ಅನುದಾನ ರೂ. 1.11 ಲಕ್ಷ ಕೋಟಿ. ಆದರೆ
2021-22ರಲ್ಲಿ ನೀಡಿರುವ ಅನುದಾನ ರೂ. 73000 ಕೋಟಿ. ಇಂತಹ ಉದ್ಯೋಗ ವಿರೋಧಿ ಕ್ರಮಗಳನ್ನು ಸರ್ಕಾರ ಕೈಬಿಡಬೇಕು. ಈ ಬಜೆಟ್ಟಿನಲ್ಲಿ ಅಂದರೆ 2022-23ನೆಯ ಸಾಲಿಗೆ ನರೇಗಾಕ್ಕೆ ಕನಿಷ್ಟ ರೂ. 1.5 ಲಕ್ಷ ಕೋಟಿ ಅನುದಾನ ನೀಡಬೇಕು. ಇದೇ ರೀತಿಯಲ್ಲಿ ನಗರ ಪ್ರದೇಶದಲ್ಲಿ ಆರಂಭಿಸಬೇಕಾದ ಉದ್ಯೋಗ ಖಾತ್ರಿ ಕಾರ್ಯಕ್ರಮಕ್ಕೆ ರೂ. 1 ಲಕ್ಷ ಕೋಟಿ ಅನುದಾನ ನೀಡಬೇಕು.

(2) ಸಾರ್ವಜನಿಕ ವೆಚ್ಚವನ್ನು ತೀವ್ರ ಏರಿಸಬೇಕು

ಬಜೆಟ್ಟಿನ ಯಶಸ್ಸಿನ ಸೂಚಿಯೆಂದರೆ ಸಾರ್ವಜನಿಕ ವೆಚ್ಚ. ಒಕ್ಕೂಟ ಸರ್ಕಾರ 2019-20ರಲ್ಲಿನ ಸಾರ್ವಜನಿಕ ವೆಚ್ಚ ರೂ. 26.86 ಲಕ್ಷ ಕೋಟಿ. ಇದು 2020-21ರಲ್ಲಿ ರೂ. 34.50 ಲಕ್ಷ ಕೋಟಿಗೇರಿತ್ತು. ಇಲ್ಲಿನ ಏರಿಕೆ ಪ್ರಮಾಣ ಶೇ.28.44. ಆದರೆ 2021-22ರಲ್ಲಿನ ಸಾರ್ವಜನಿಕ ವೆಚ್ಚ ರೂ. 34.83 ಲಕ್ಷ ಕೋಟಿ. ಇಲ್ಲಿನ ಏರಿಕೆ ಕೇವಲ ಶೇ.0.96. ಒಕ್ಕೂಟ ಸರ್ಕಾರದ 2020-21ರ ಒಟ್ಟು ಸಾರ್ವಜನಿಕ ವೆಚ್ಚವು 2020-21ರ ಜಿಡಿಪಿಯ ಶೇ.17.70 ರಷ್ಟಿತ್ತು. ಆದರೆ 2021-22ನೆಯ ಸಾಲಿನ ಸಾರ್ವಜನಿಕ ವೆಚ್ಚವು 2021-22ರ ಜಿಡಿಪಿಯ ಶೇ.15.62 ರಷ್ಟಾಗಿದೆ. ಪ್ರಸ್ತುತ ಬಜೆಟ್ಟಿನಲ್ಲಿ ಸಾರ್ವಜನಿಕ ವೆಚ್ಚವನ್ನು ರೂ. 40 ಲಕ್ಷ ಕೋಟಿಗೇರಿಸಬೇಕು. ಇದರಿಂದ ಮಾತ್ರ ನಾವು ಇಂದು ಎದುರಿಸುತ್ತಿರುವ ಆರ್ಥಿಕ ಕುಸಿತವನ್ನು ನಿರ್ವಹಿಸಬಹುದು.

(3) ಸೆಸ್ ಮತ್ತು ಸರ್‌ಚಾರ್ಚ್‌ಗಳನ್ನು ರಾಜ್ಯಗಳ ನಡುವೆ ಹಂಚಿಕೊಳ್ಳಬೇಕು

ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿನ ರೆವಿನ್ಯೂ ಸಂಗ್ರಹದ ಸಾಮರ್ಥ್ಯ ಅಸಮಾನತೆಯಿಂದ ಕೂಡಿದೆ. ಒಕ್ಕೂಟ ಸರ್ಕಾರದ್ದು ಅಧಿಕವಾಗಿದ್ದರೆ ರಾಜ್ಯಗಳ ಸಾಮರ್ಥ್ಯ ಕಿಂಚಿತ್ತಾಗಿದೆ. ಹದಿನೈದನೆಯ ಹಣಕಾಸು ಆಯೋಗದ ಪ್ರಕಾರ ಆರ್ಥಿಕತೆಯ ಒಟ್ಟು ರೆವಿನ್ಯೂ ಸಂಗ್ರಹದ ಸಾಮರ್ಥ್ಯ ಒಕ್ಕೂಟ ಸರ್ಕಾರದ್ದು ಶೇ.63ರಷ್ಟಿದ್ದರೆ ರಾಜ್ಯಗಳದ್ದು ಶೇ.37ರಷ್ಟಿದೆ. ಆದರೆ ವೆಚ್ಚವನ್ನು ಭರಿಸುವ ಒಕ್ಕೂಟದ ಸಾಮರ್ಥ್ಯ ಶೇ.38 ರಷ್ಟಿದ್ದರೆ ರಾಜ್ಯಗಳದ್ದು ಶೇ.62 ರಷ್ಟಿದೆ. ಈ ಹಿನ್ನೆಲೆಯಲ್ಲಿ 14 ಮತ್ತು 15 ನೆಯ ಹಣಕಾಸು ಆಯೋಗಗಳು ಒಕ್ಕೂಟ ವಿಧಿಸುತ್ತಿರುವ ಸೆಸ್ (ಮೇಲು ತೆರಿಗೆ) ಮತ್ತು ಸರ್‌ಚಾರ್ಚ್‌ಗಳ (ಉಪತೆರಿಗೆ) ಬಾಬ್ತು ರೆವಿನ್ಯೂವನ್ನು ರಾಜ್ಯಗಳ ಜೊತೆ ಹಂಚಿಕೊಳ್ಳಬೇಕು ಎಂದು ಶಿಫಾರಸ್ಸು ಮಾಡಿವೆ. ಏಕೆಂದರೆ ಪರಿಚ್ಛೇದ 270ರ ಪ್ರಕಾರ ಇವನ್ನು ಒಕ್ಕೂಟ ಸರ್ಕಾರ ರಾಜ್ಯಗಳ ಜೊತೆ ಹಂಚಿಕೊಳ್ಳುವ ಅಗತ್ಯವಿಲ್ಲ. ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಒಕ್ಕೂಟ ಸರ್ಕಾರ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ. ಉದಾ: 2011-12ರಲ್ಲಿ ಈ ತೆರಿಗೆಗಳ ಮೂಲಕ ಒಕ್ಕೂಟ ಸರ್ಕಾರಕ್ಕೆ ಬಂದ ರೆವಿನ್ಯೂ ರೂ. 49628 ಕೋಟಿ. ಆದರೆ 2020-21ರಲ್ಲಿನ ಸದರಿ ತೆರಿಗೆಗಳ ರೆವಿನ್ಯೂ ರೂ.3.74 ಲಕ್ಷ ಕೋಟಿ. ಒಟ್ಟು ಒಕ್ಕೂಟದ ತೆರಿಗೆ ರಾಶಿಯಲ್ಲಿ ಇದರ ಪ್ರಮಾಣ 2011-12ರಲ್ಲಿ ಶೇ.10 ರಷ್ಟಿದ್ದುದು 2020-21ರಲ್ಲಿ ಶೇ.20 ರಷ್ಟಾಗಿದೆ. ಇದನ್ನು ಹಣಕಾಸು ಆಯೋಗದ ಸೂತ್ರದ ಪ್ರಕಾರ ರಾಜ್ಯಗಳ ಜೊತೆ ಹಂಚಿಕೊಂಡರೆ (ಶೇ.41) ರಾಜ್ಯಗಳಿಗೆ ರೂ. 1.53 ಲಕ್ಷ ಕೋಟಿ ಹೆಚ್ಚುವರಿ ರೆವಿನ್ಯೂ ಲಭ್ಯವಾಗುತ್ತದೆ. ಆದ್ದರಿಂದ ಹಣಕಾಸು ಮಂತ್ರಿ 2022-23ರ ಬಜೆಟ್ಟಿನಲ್ಲಿ ಸೆಸ್ ಮತ್ತು ಸರ್‌ಚಾರ್ಚ್‌ಗಳನ್ನು ಒಟ್ಟು ಹಂಚಿಕೊಳ್ಳುವ ತೆರಿಗೆ ರಾಶಿಯ ಭಾಗವಾಗುವಂತೆ ಕ್ರಮ ತೆಗೆದುಕೊಳ್ಳಬೇಕು. ಈ ಮೂಲಕ ಒಕ್ಕೂಟ ತತ್ವಕ್ಕೆ ಮನ್ನಣೆ ನೀಡಬೇಕು. ಇದಲ್ಲದೆ ಒಕ್ಕೂಟ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್‌ಗಳ ಮೇಲೆ ವಿಧಿಸುವ ತೆರಿಗೆಯಲ್ಲಿಯೂ ರಾಜ್ಯಗಳಿಗೆ ಹಂಚಿಕೆಯಾಗುವುದಿಲ್ಲ. ನಮ್ಮ ತೆರಿಗೆ ವ್ಯವಸ್ಥೆಯಲ್ಲಿನ ದೋಷಗಳನ್ನು ಸರಿಪಡಿಸಬೇಕು. ಮೊದಲು ಹಣಕಾಸು ಮಂತ್ರಿ ಜಿಎಸ್‌ಟಿ ವ್ಯಸನದಿಂದ ಹೊರಬರಬೇಕು.

(4) ತೆರಿಗೆ ನೀತಿಯಲ್ಲಿ ಬದಲಾವಣೆ

ಸಾರ್ವಜನಿಕ ಹಣಕಾಸು ಶಾಸ್ತ್ರದ ಮೊದಲ ಪಾಠವೆಂದರೆ, ನೇರ ತೆರಿಗೆಗಳು ಹೆಚ್ಚು ಭಾರವನ್ನು ಉಳ್ಳವರ ಮೇಲೆ ಹೇರುತ್ತವೆ ಮತ್ತು ಪರೋಕ್ಷ ತೆರಿಗೆಗಳು ಎಲ್ಲರ ಮೇಲೂ ಸಮಾನವಾಗಿ ಹೊರೆ ಹಾಕುತ್ತವಾದರೂ, ಇದರ ಹೊರೆ ಉಳ್ಳವರಿಗಿಂತ ಉಳಿದವರ ಮೇಲೆ ಹೆಚ್ಚಿರುತ್ತದೆ ಎಂಬುದಾಗಿದೆ. ಒಕ್ಕೂಟ ಸರ್ಕಾರದ ಒಟ್ಟು ತೆರಿಗೆ ರಾಶಿಯಲ್ಲಿ 2017-18ರಲ್ಲಿ ನೇರ ತೆರಿಗೆಗಳ ಪಾಲು ಶೇ.52 ರಷ್ಟಿದ್ದುದು 2021-22ರಲ್ಲಿ ಇದು ಶೇ.49ಕ್ಕಿಳಿದಿದೆ. ಇದೇ ಅವಧಿಯಲ್ಲಿ ಪರೋಕ್ಷ ತೆರಿಗೆಗಳ ಪಾಲು ಶೇ.48ರಿಂದ ಶೇ. 51ಕ್ಕೇರಿದೆ. ಒಟ್ಟು ತೆರಿಗೆ ರಾಶಿಯಲ್ಲಿ ಕಾರ್ಪೊರೆಟ್ ತೆರಿಗೆ ಪಾಲು 2017-18ರಲ್ಲಿ ಶೇ.32 ರಷ್ಟಿದ್ದುದು 2020-21ರಲ್ಲಿ ಶೇ.25ಕ್ಕಿಳಿದಿದೆ. ನೇರ ತೆರಿಗೆಗಳು 2020-21ರ ಜಿಡಿಪಿಯಲ್ಲಿ ಶೇ.4.7 ರಷ್ಟಿದ್ದರೆ ಪರೋಕ್ಷ ತೆರಿಗೆಗಳ ಪಾಲು ಶೇ.5.4. ಈ ಎಲ್ಲ ಸೂಚಿಗಳ ತಾತ್ಪರ್ಯವೇನು? ನಮ್ಮ ತೆರಿಗೆ ವ್ಯವಸ್ಥೆಯು ’ಪ್ರತಿಗಾಮಿ’ಯಾಗಿದೆ. ನೇರ ತೆರಿಗೆಗಳ ಮೊತ್ತ 2018-19ರಿಂದ 2020-21ರ ನಡುವೆ ರೂ. 11.36 ಲಕ್ಷ ಕೋಟಿಯಿಂದ ರೂ.9.45 ಲಕ್ಷ ಕೋಟಿಗಿಳಿದಿದ್ದರೆ, ಪರೋಕ್ಷ ತೆರಿಗೆಗಳ ಮೊತ್ತ ಇದೇ ಅವಧಿಯಲ್ಲಿ ರೂ. 9.38 ಲಕ್ಷ ಕೋಟಿಯಿಂದ ರೂ. 10.71 ಲಕ್ಷ ಕೋಟಿಗೇರಿದೆ. ಅಂದರೆ ನೇರ ತೆರಿಗೆಗಳಲ್ಲಿ ಶೇ.16.01ರಷ್ಟು ಕಡಿತವಾಗಿದ್ದರೆ ಪರೋಕ್ಷ ತೆರಿಗೆಗಳಲ್ಲಿ ಶೇ.14.18ರಷ್ಟು ಏರಿಕೆಯಾಗಿದೆ. ಆದ್ದರಿಂದ ಹಣಕಾಸು ಸಚಿವರು 2022-23ರ ಬಜೆಟ್ಟಿನಲ್ಲಿ ನೇರ ತೆರಿಗೆಗಳಿಗೆ ನೀಡುತ್ತಿರುವ ವಿನಾಯಿತಿ ಮತ್ತು ಕಡಿತಗಳನ್ನು ಕೈಬಿಡಬೇಕು. ಜಿಎಸ್‌ಟಿ ದರಗಳನ್ನು ಕನಿಷ್ಟ ಶೇ.5ರಷ್ಟಕ್ಕೆ ಮಿತಿಗೊಳಿಸಬೇಕು. ಜಿಎಸ್‌ಟಿ ಮೇಲೆ ಇಂದಿನ ಸರ್ಕಾರ ಅವಲಂಬಿಸಿರುವಂತೆ ಕಾಣುತ್ತದೆ. ಇದು ಪ್ರಗತಿಪರ ತೆರಿಗೆ ನೀತಿಯಲ್ಲ. ಸರ್ಕಾರ ನೇರ ತೆರಿಗೆಗಳನ್ನು ಹೆಚ್ಚು ಮಾಡಬೇಕು.ನಮ್ಮ ದೇಶದಲ್ಲಿ ಉಳ್ಳವರ ವರಮಾನ ನಾಗಾಲೋಟದಲ್ಲಿ ಏರಿಕೆಯಾಗುತ್ತಿದೆ. ಪ್ರತಿಯೊಂದ ಕಾರ್ಪೊರೆಟ್‌ನ ವರಮಾನ ಪೆಂಡಮಿಕ್ ನಡುವೆಯೂ ತೀವ್ರಗತಿಯಲ್ಲಿ ಎರಿಕೆಯಾಗುತ್ತಿದೆ. ಆದರೆ
ಕಾರ್ಮಿಕರ, ರೈತರ, ’ಎಮ್‌ಎಸ್‌ಎಮ್‌ಇ’ಗಳ ವರಮಾನ ನೆಲಕಚ್ಚಿದೆ. ಈ ಹಿನ್ನೆಲೆಯಲ್ಲಿ 2022-23ರ ಬಜೆಟ್ಟು ಉಳ್ಳವರ ಬಜೆಟ್ಟಾಗುವುದಕ್ಕೆ ಬದಲಾಗಿ ಉಳಿದವರ ಬಜೆಟ್ಟಾಗಬೇಕು ಎಂಬುದು ನಮ್ಮ ಆಶಯ.

(5) ಸಂವಿಧಾನಾತ್ಮ ಒಕ್ಕೂಟ ತತ್ವಕ್ಕೆ ಅನ್ಯಾಯ

ಇಂದಿನ ಸರ್ಕಾರವು 2013-14ರಿಂದ ಸಂವಿಧಾನದ ಮೂಲ ತತ್ವಗಳನ್ನು ನಿಯತ್ತಿನಿಂದ ಪಾಲಿಸುತ್ತಿಲ್ಲ. ರಾಜ್ಯಗಳಿಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ಹರಣ ಮಾಡಲಾಗುತ್ತಿದೆ. ಉದಾ: 15ನೆಯ ಹಣಕಾಸು ಆಯೋಗವು ಸಂಪನ್ಮೂಲಗಳ ವರ್ಗಾವಣೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿರುವುದನ್ನು ಗಮನಿಸಿ 2020-21ನೆಯ ಸಾಲಿಗೆ ವಿಶೇಷ ಅನುದಾನವಾಗಿ ರೂ. 5495 ಕೋಟಿಯನ್ನು ಶಿಫಾರಸ್ಸು ಮಾಡಿತ್ತು. ಆದರೆ ಕರ್ನಾಟಕವನ್ನು ಪ್ರತಿನಿಧಿಸುವ ಒಕ್ಕೂಟ ಹಣಕಾಸು ಮಂತ್ರಿ ಇದನ್ನು ನಿರಾಕರಿಸಿದ್ದಾರೆ. ಹಣಕಾಸು ಆಯೋಗವು ಒಂದು ಸಂವಿಧಾನಾತ್ಮಕ ಸಂಸ್ಥೆ. ಇದಕ್ಕೆ ಒಕ್ಕೂಟ ಸರ್ಕಾರ ಗೌರವ ನೀಡುತ್ತಿಲ್ಲ. ಇಂತಹ ಅನೇಕ ನಿದರ್ಶನಗಳಿವೆ. ಸಂವಿಧಾನದಲ್ಲಿ ಕೃಷಿ ರಾಜ್ಯಪಟ್ಟಿಯಲ್ಲಿದೆ.

ಆದರೆ ಒಕ್ಕೂಟ ಸರ್ಕಾರ ಸಂವಿಧಾನದ ತತ್ವವನ್ನು ಉಲ್ಲಂಘಿಸಿ ಲೋಕಸಭೆಯಲ್ಲಿ ಬಹುಮತವಿದೆ ಎನ್ನುವ ಕಾರಣಕ್ಕೆ ಕೃಷಿಗೆ ಸಂಬಂಧಿಸಿದಂತೆ ಮೂರು ಶಾಸನಗಳನ್ನು 2020ರಲ್ಲಿ ಜಾರಿ ಮಾಡಿತ್ತು (ಈಗ ಅವುಗಳನ್ನು ರದ್ದುಪಡಿಸಲಾಗಿದೆ ಎಂಬುದು ಬೇರೆ ವಿಷಯ). ನೀಟ್ (ನ್ಯಾಷಿನಲ್ ಎಲಿಜಬಿಲಿಟಿ ಕಂ ಎಂಟ್ರೆನ್ಸ್ ಟೆಸ್ಟ್) ಎಂಬ ವ್ಯವಸ್ಥೆಯನ್ನು ಜಾರಿಗೊಳಿಸಿ ರಾಷ್ಟ್ರಮಟ್ಟದಲ್ಲಿ ವೈದ್ಯಕೀಯ ಪ್ರವೇಶಕ್ಕೆ ಕ್ರಮ ತೆಗೆದುಕೊಂಡಿದೆ. ಇದರಿಂದ ರಾಜ್ಯಗಳಿಗೆ, ರಾಜ್ಯ ಭಾಷೆಗಳಲ್ಲಿ ಅಧ್ಯಯನ ಮಾಡಿದ ಮಕ್ಕಳಿಗೆ ಅನ್ಯಾಯವಾಗುತ್ತಿದೆ.

ಭಾಷಾ ನೀತಿಯ ಬಗ್ಗೆಯಂತೂ ಇಂದಿನ ಒಕ್ಕೂಟ ಸರ್ಕಾರ ರಾಜ್ಯಗಳ ಹಿತವನ್ನು ನಾಶ ಮಾಡುತ್ತಿದೆ. ಉದಾ: ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಆದರೆ ಒಕ್ಕೂಟ ಸರ್ಕಾರ ಮತ್ತು ರಾಜ್ಯದ ಡಬಲ್ ಎಂಜಿನ್ ಸರ್ಕಾರ ಪ್ರಜ್ಞಾಪೂರ್ವಕವಾಗಿ ಕನ್ನಡವನ್ನು ಮೂಲೆಗೆ ತಳ್ಳಿ ಸಂಸ್ಕೃತಕ್ಕೆ ಮತ್ತು ಹಿಂದಿ ಭಾಷೆಗಳಿಗೆ ಮಣೆ ಹಾಕುವ ಕೆಲಸ ಮಾಡುತ್ತಿದೆ. ಇದಕ್ಕೂ ಬಜೆಟ್ಟಿಗೂ ಏನು ಸಂಬಂಧ ಎಂದು ಯಾರಾದರೂ ಕೇಳಬಹುದು. ಅಭಿವೃದ್ಧಿ ಎನ್ನುವುದು ಕೇವಲ ವರಮಾನ, ತೆರಿಗೆ, ವೆಚ್ಚ, ಉಳಿತಾಯ, ಬಂಡವಾಳಗಳಿಗೆ ಮಾತ್ರ ಸಂಬಂಧಿಸಿದ ಸಂಗತಿಯಲ್ಲ. ಅಭಿವೃದ್ಧಿ ಭಾಷೆಗೂ, ಉದ್ಯೋಗ, ಉನ್ನತ ಶಿಕ್ಷಣಗಳಿಗೂ ಸಂಬಂಧವಿದೆ.

ನಮ್ಮ ಆರ್ಥಿಕತೆಯಲ್ಲಿ ರಾಜ್ಯಗಳು ಸಮೃದ್ಧ ಅಭಿವೃದ್ಧಿ ಸಾಧಿಸಿಕೊಳ್ಳದಿದ್ದರೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಈ ದಿಸೆಯಲ್ಲಿ ಒಕ್ಕೂಟ ಸರ್ಕಾರ ದಕ್ಷಿಣ ಭಾರತದ ರಾಜ್ಯಗಳಿಗೆ ಪ್ರಜ್ಞಾಪೂರ್ವಕವಾಗಿ ಅನ್ಯಾಯ ಮಾಡುತ್ತಿದೆ. ಇದು ಸಂವಿಧಾನಾತ್ಮಕ ಹಕ್ಕುಗಳ ಉಲ್ಲಂಘನೆಯಾಗಿದೆ. ಇಲ್ಲಿದೆ ಒಂದು ಪಕ್ಕಾ ಉದಾಹರಣೆ.

ದಕ್ಷಿಣ ಭಾರತದ ಐದು ರಾಜ್ಯಗಳ ಪಾಲು ಒಟ್ಟು ತೆರಿಗೆ ರಾಶಿಯಲ್ಲಿ ಶೇ.16.02ರಷ್ಟಾದರೆ ಉತ್ತರ ಭಾರತದ ಐದು ಹಿಂದಿ ಬೆಲ್ಟ್ ರಾಜ್ಯಗಳ ಪಾಲು ಶೇ.45.17. 15ನೆಯ ಹಣಕಾಸು ಆಯೋಗ ವರ್ಗಾವಣೆ ಮಾಡಿದ ಒಟ್ಟು ತೆರಿಗೆ ರಾಶಿಯ ಮೊತ್ತ ರೂ. 85.51 ಲಕ್ಷ ಕೋಟಿ. ಇದರಲ್ಲಿ ದ. ಭಾ. ರಾಜ್ಯಗಳ ಪಾಲು ರೂ. 13.71 ಲಕ್ಷ ಕೋಟಿಯಾದರೆ ಉ. ಭಾ. ರಾಜ್ಯಗಳ ಪಾಲು ರೂ. 38.63 ಲಕ್ಷ ಕೋಟಿ. ಈ ಬಗೆಯ ಒಕ್ಕೂಟ-ರಾಜ್ಯಗಳ ನಡುವಿನ ಹಣಕಾಸು ಹಂಚಿಕೆಯಲ್ಲಿನ ಅಸಮಾನತೆಯ ತೀವ್ರ ಪರಿಣಾಮಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಉ.ಭಾ. ರಾಜ್ಯಗಳು ದೇಶದ ಜನಸಂಖ್ಯೆಯಲ್ಲಿ ಶೇ.39.48 ಪಾಲು ಪಡೆದಿವೆ. ಆದರೆ ದೇಶದ ಜಿಡಿಪಿಗೆ ಅವುಗಳ ಕಾಣಿಕೆ 2018-19ರಲ್ಲಿ ಶೇ.22.55. ಆದರೆ ದ.ಭಾ. ರಾಜ್ಯಗಳು ದೇಶದ ಜನಸಂಖ್ಯೆಯಲ್ಲಿ ಶೇ.20.74 ಪಾಲು ಪಡೆದಿದ್ದರೆ ಜಿಡಿಪಿಯಲ್ಲಿ ಅವುಗಳ ಪಾಲು ಶೇ.30.24. ದ.ಭಾ. ರಾಜ್ಯಗಳಿಗೆ ಹೀಗೆ ಹಣಕಾಸು ವರ್ಗಾವಣೆಯಲ್ಲಿ ಅನ್ಯಾಯ ಮಾಡುತ್ತಿದ್ದರೆ ಅವುಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಇದರಿಂದ ದೇಶದ ಜಿಡಿಪಿಗೆ ಹೊಡೆತ ಬೀಳುತ್ತದೆ (ವಿವರಗಳಿಗೆ ನೋಡಿ: ಆರ್ಥಿಕ ಸಮೀಕ್ಷೆ 2020-21. ಸ್ಟ್ಯಾಟಿಸ್ಟಿಕಲ್ ಅಪೆಂಡಿಕ್ಸ್. ಪುಟಗಳು: ಎ: 27-28, ಎ: 166-167).

ಈ ಎಲ್ಲ ಸಂಗತಿಗಳನ್ನು ವಿತ್ತ ಮಂತ್ರಿ ಗಮನದಲ್ಲಿಟ್ಟುಕೊಂಡು 2022-23ನೆಯ ಸಾಲಿನ ಬಜೆಟ್ ಮಂಡನೆ ಮಾಡಬೇಕು. ಕರ್ನಾಟಕಕ್ಕೆ ಮತ್ತು ಒಟ್ಟಾರೆ ದ.ಭಾ. ರಾಜ್ಯಗಳಿಗೆ ಮಾಡಿರುವ ಅನ್ಯಾಯವನ್ನು ಗಮನದಲ್ಲಿಟ್ಟುಕೊಂಡು ಇದನ್ನು ಸರಿಪಡಿಸುವ ಕೆಲಸವನ್ನು ವಿತ್ತ ಮಂತ್ರಿ ಮಾಡಬೇಕು. ಇಲ್ಲದಿದ್ದರೆ ಇದು ಅನೇಕ ರಾಜಕೀಯ, ರಾಷ್ಟ್ರೀಯ, ಆರ್ಥಿಕ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ. ಇವುಗಳ ದೀರ್ಘಾವಧಿ ಪರಿಣಾಮಗಳನ್ನು ಗಮನಿಸುವ ಅಗತ್ಯವಿದೆ.

ಡಾ. ಟಿ. ಆರ್. ಚಂದ್ರಶೇಖರ

ಡಾ. ಟಿ. ಆರ್. ಚಂದ್ರಶೇಖರ
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿ.ಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತಪಡಿಸುತ್ತಿರುವ ಮುಂಚೂಣಿ ಚಿಂತಕರು


ಇದನ್ನೂ ಓದಿ: ಇಸ್ರೇಲ್‌ನಿಂದ ಪೆಗಾಸಸ್‌ ಖರೀದಿಸಿದ್ದ ವರದಿ ಬಹಿರಂಗ; ಮೋದಿ ಸರ್ಕಾರದ ವಿರುದ್ದ ವಿಪಕ್ಷಗಳ ಕಿಡಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಂಸತ್ತು ಅಂಗೀಕರಿಸಿರುವ ಹೊಸ ಕ್ರಿಮಿನಲ್ ಕಾನೂನುಗಳ ವಿರುದ್ಧದ ಅರ್ಜಿ: ಸುಪ್ರೀಂ ಕೋರ್ಟಿನಲ್ಲಿ ನಾಳೆ ವಿಚಾರಣೆ

0
"ಹಲವು ದೋಷಗಳು ಮತ್ತು ವ್ಯತ್ಯಾಸಗಳಿವೆ" ಎಂದು, ಭಾರತ ದಂಡ ಸಂಹಿತೆಗಳನ್ನು (ಐಪಿಸಿ) ಕೂಲಂಕಷವಾಗಿ ಪರಿಶೀಲಿಸುವ ಮೂರು ಹೊಸ ಕಾನೂನುಗಳ ಜಾರಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೆ ನಿಗದಿಪಡಿಸಿದೆ. ನ್ಯಾಯಮೂರ್ತಿಗಳಾದ ಬೇಲಾ...