Homeಮುಖಪುಟಜನವರಿ 31: ಮೋದಿ ರೈತ ದ್ರೋಹದ ವಿರುದ್ಧ ದೇಶಾದ್ಯಂತ ಸತ್ಯಾಗ್ರಹಕ್ಕೆ ಕರೆ

ಜನವರಿ 31: ಮೋದಿ ರೈತ ದ್ರೋಹದ ವಿರುದ್ಧ ದೇಶಾದ್ಯಂತ ಸತ್ಯಾಗ್ರಹಕ್ಕೆ ಕರೆ

- Advertisement -
- Advertisement -

ಕರ್ನಾಟಕದಲ್ಲಿ ಗುಂಡೂರಾವ್ ನೇತೃತ್ವದ ಸರ್ಕಾರ ಮಾತ್ರವೇ ಅಲ್ಲ, ಕಾಂಗ್ರೆಸ್ ಪಕ್ಷವನ್ನೇ ತೊಡೆದು ಹಾಕುವ ರೀತಿ ಅಂದು 1980ರ ರೈತ ಚಳುವಳಿ ಪರಿಣಾಮ ಬೀರಿದ ಬಗ್ಗೆ ನೆನಪಿಸಿಕೊಳ್ಳುತ್ತಿರುವಾಗಲೇ ಮೋದಿ ಮತ್ತು ಬಿಜೆಪಿಯನ್ನು ಸೋಲಿಸುವ ಪ್ರಯತ್ನ ಕೂಡ ಸಾಗಿದೆ.

2020-21ರ ಮಹಾನ್ ರೈತ ಸಂಘರ್ಷ ನಡೆದ ರಾಜ್ಯಗಳಲ್ಲಿ ಚುನಾವಣೆಗೆ ಅಣಿಯಾಗಿರುವ ಯುಪಿ, ಉತ್ತರಾಖಂಡ್ ಮತ್ತು ಪಂಜಾಬಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯುವ ಅಥವಾ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲು ಅವಕಾಶ ಕೊಡದೇ ಸೋಲಿಸಬೇಕೆಂದು ರೈತ ಚಳುವಳಿ ತೀರ್ಮಾನಿಸಿದೆ. ಮುಂದೆ ಇದು ಕೇಂದ್ರದಲ್ಲಿಯೂ ಮೋದಿ ಮತ್ತವರ ಬಿಜೆಪಿ ಅಧಿಕಾರಕ್ಕೆ ಬರಲಾಗದಂತೆ ತಡೆಯುವ ಮೊದಲ ಹೆಜ್ಜೆಯಾಗಲಿದೆ.

ಇದೇ 2022ರ ಜ. 31ನ್ನು ದೇಶಾದ್ಯಂತ ’ರೈತ ದ್ರೋಹದ ದಿನ’ವಾಗಿ ಎಲ್ಲ ಜಿಲ್ಲಾ, ತಾಲ್ಲೂಕು ಮಟ್ಟಗಳಲ್ಲಿ ಆಚರಿಸಬೇಕೆಂದು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ. ಯುಪಿ ಬಗ್ಗೆಯಂತೂ ’ಮಿಷನ್ ಯುಪಿ’ ಎಂಬ ದೃಢ ಘೋಷಣೆಯೊಂದಿಗೆ ಸಂಯುಕ್ತ ಕಿಸಾನ್ ಮೋರ್ಚಾ ಕೆಲಸ ಮಾಡುತ್ತಿದೆ. ಲಖೀಂಪುರ ರೈತ ಕೊಲೆಯ ಕ್ರೌರ್ಯದಲ್ಲಿ ನೇರವಾಗಿ ಕೇಂದ್ರದ ಗೃಹ ಇಲಾಖೆಯ ರಾಜ್ಯ ಸಚಿವನ ಮಗನ ಕೈವಾಡ ಇದೆ ಎಂದು ಸುಪ್ರೀಂ ಕೋರ್ಟ್ ನೇಮಿಸಿದ ತನಿಖಾ ಸಮಿತಿ ವರದಿ ಮಾಡಿದರೂ ಅವರು ಇನ್ನೂ ಕೇಂದ್ರ ಸಚಿವರಾಗಿಯೇ ಉಳಿದಿದ್ದಾರೆ. ಇದು ಮತ್ತು ಬೆಂಬಲ ಬೆಲೆ ಖಾತರಿ ಮಾಡದಿರುವುದು ಯುಪಿ ರೈತರು ಸಿಟ್ಟಾಗುವಂತೆ ಮಾಡಿದೆ.

ದೆಹಲಿ ರೈತ ಸಂಘರ್ಷವನ್ನು ಹಿಂತೆಗೆಯುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಲಿಖಿತವಾಗಿ ಕೊಟ್ಟ ಎರಡು ಮುಖ್ಯ ಆಶ್ವಾಸನೆಗಳನ್ನು ಜಾರಿ ಮಾಡುವ ಯಾವ ಸಣ್ಣ ಕ್ರಮವನ್ನೂ ಮೋದಿ ಸರ್ಕಾರ, ಅವರ ಗೃಹ ಮಂತ್ರಿ ಶಾ ಮತ್ತು ಕೃಷಿ ಮಂತ್ರಿ ತೋಮರ್ ಇಲ್ಲಿಯವರೆಗೆ ಕೈಗೊಂಡಿಲ್ಲ. ಒಂದು, ಬಹಳ ಮುಖ್ಯವಾದ ಬೆಂಬಲ ಬೆಲೆ ಖಾತರಿ ಕಾನೂನು ತರಲು ರೈತ ಚಳುವಳಿಯ ಪ್ರತಿನಿಧಿಗಳನ್ನೂ ಒಳಗೊಂಡಂತೆ ಸಮಿತಿಯೊಂದನ್ನು ರಚಿಸುವುದು. ನಿಗದಿತ ಸಮಯದಲ್ಲಿ ವರದಿ ನೀಡಲು ನಿರ್ದೇಶಿಸುವುದು. ಮತ್ತೊಂದು ಈ ಸಂಘರ್ಷದಲ್ಲಿ ರೈತರ ಮೇಲೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹಾಕಿದ ಕ್ರಿಮಿನಲ್ ಕೇಸುಗಳನ್ನು ವಾಪಸ್ ಪಡೆಯುವುದು ಮತ್ತು ಸಂಘರ್ಷದಲ್ಲಿ ಮೃತರಾದ 700 ರೈತರಿಗೆ ಪರಿಹಾರ ನೀಡುವುದು. ಈ ಎರಡೂ ಆಶ್ವಾಸನೆಗಳಿಗೆ ಸಂಬಂಧಿಸಿದಂತೆ ಒಂದು ಪತ್ರವನ್ನೂ ಕೇಂದ್ರ ಸರ್ಕಾರ ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿಲ್ಲ.

ಅಲ್ಲದೆ ತೋಮರ್‌ರವರು ಕೇಂದ್ರ ಸರ್ಕಾರದ ಈ ವಿನಾಶಕಾರಿ ಕೃಷಿ ಕಾನೂನುಗಳನ್ನು ಮತ್ತೆ ತರುತ್ತೇವೆಂದು ಹೇಳಿದ್ದಾರೆ. ಹಿಂಬಾಗಿಲಿನಿಂದ ಈ ಕಾನೂನುಗಳನ್ನು ಜಾರಿಗೆ ತರುವ ಪ್ರಯತ್ನಗಳನ್ನು ವಿವಿಧ ರೂಪದಲ್ಲಿ ನಡೆಸಲಾಗುತ್ತಿದೆ. ಅದರ ಒಂದು ಜ್ವಲಂತ ಉದಾಹರಣೆ ಅದಾನಿ ಕ್ಯಾಪಿಟಲ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಡುವೆ ಕೃಷಿ ಸಾಲ ನೀಡುವ ಜಂಟಿ ಒಪ್ಪಂದ.

ಕೃಷಿ ಸಾಲ ನೀಡುವ ಅದಾನಿ

ದೇಶದ ಅತಿ ದೊಡ್ಡ ಬ್ಯಾಂಕ್ ಆದ, ವಿಶ್ವದ ದೊಡ್ಡ ಬ್ಯಾಂಕುಗಳಲ್ಲೊಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜೊತೆ, ಮೋದಿ ಅಧಿಕಾರಕ್ಕೆ ಬಂದ ಮೇಲೆ ಅತಿ ದೊಡ್ಡ ಕಾರ್ಪೊರೇಟ್ ಧಣಿಯಾಗಿರುವ ಅದಾನಿಯ ಒಂದು ಕಂಪನಿಯ ಜೊತೆ ಒಪ್ಪಂದ ಆಗಿದೆ! ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಮ್ಮ ಮೈಸೂರು ಬ್ಯಾಂಕ್ ಸೇರಿದಂತೆ ಹಲವಾರು ಸ್ಟೇಟ್ ಬ್ಯಾಂಕ್‌ಗಳನ್ನು ನುಂಗಿ ನೀರು ಕುಡಿದು 22,000 ಶಾಖೆಗಳನ್ನು ಹೊಂದಿದೆ.

ಅದಾನಿ ಕ್ಯಾಪಿಟಲ್ ಎಂಬ ಅದಾನಿ ಒಡೆತನದ ಸಂಸ್ಥೆಗೆ ಕೇವಲ 60 ಶಾಖೆಗಳು. ಈ ಎರಡರ ನಡುವೆ ಒಪ್ಪಂದವೆಂದರೆ ಏನರ್ಥ? ಇದಕ್ಕೆ ಬ್ಯಾಂಕ್ ಅಧಿಕಾರಿಗಳು ನೀಡುತ್ತಿರುವ ನೆಪ: ದೇಶದಲ್ಲಿ ಬ್ಯಾಂಕ್ ಸೇವೆ ಹೆಚ್ಚು ಲಭ್ಯವಾಗದ ರೈತ ಸಮುದಾಯದ ನಡುವೆ ಸೇವೆ ವಿಸ್ತರಿಸಲು ಮತ್ತು ದೇಶದ ಕೃಷಿ ಆರ್ಥಿಕತೆಯ ಬೆಳವಣಿಗೆಗೆ ಕೊಡುಗೆ ನೀಡಲು ಈ ಒಪ್ಪಂದ ಅವಶ್ಯಕ ಎಂದು.

ಒಂದು ಶತಮಾನಕ್ಕಿಂತ ಹೆಚ್ಚು ಕಾಲದಿಂದ ದೇಶದ ಎಲ್ಲ ರಾಜ್ಯಗಳಲ್ಲಿ ಬ್ಯಾಂಕಿಂಗ್ ಸೇವೆಯಲ್ಲಿರುವ, ಅನೇಕ ಪ್ರದೇಶಗಳಲ್ಲಿ ಮೊತ್ತಮೊದಲ ಬ್ಯಾಂಕಿಂಗ್ ಸಂಸ್ಥೆಯಾಗಿ ವಿಪುಲ ಅನುಭವವಿರುವ ದೇಶದ ಅತಿ ದೊಡ್ಡ ಬ್ಯಾಂಕ್‌ಗೆ ನಿನ್ನೆ ಮೊನ್ನೆಯ 60 ಶಾಖೆಗಳ ಈ ನಾನ್ ಬ್ಯಾಂಕಿಂಗ್ ಫೈನಾನ್ಷಿಯಲ್ ಕಂಪನಿ ಬಳಕೆದಾರರ ವಿಸ್ತರಣೆಗೆ, ಕೃಷಿ ಬೆಳವಣಿಗೆಗೆ ಅಗತ್ಯವೆನ್ನುವುದು ಕಾಗಕ್ಕ ಗೂಗಕ್ಕನ ಕತೆಯಲ್ಲದೆ ಇನ್ನೇನು?

ಸ್ಟೇಟ್ ಬ್ಯಾಂಕ್‌ನಲ್ಲಿ 1.4 ಕೋಟಿ ರೈತರ ಅಕೌಂಟ್‌ಗಳಿವೆ. 2 ಲಕ್ಷ ಕೋಟಿ ರೂನಷ್ಟು ಸಾಲ ನೀಡುತ್ತದೆ. ಅದಾನಿಯ ಬಳಿ ಕೇವಲ 28,000 ರೈತರ ಅಕೌಂಟ್. ಅವರಲ್ಲಿ ಕೂಡಾ ಬಹಳಷ್ಟು ಜನ ಈಗಾಗಲೇ ಸ್ಟೇಟ್ ಬ್ಯಾಂಕ್ ಅಕೌಂಟ್ ಉಳ್ಳವರು. ಇದರಿಂದ ಸ್ಟೇಟ್ ಬ್ಯಾಂಕ್ ವಿಸ್ತರಣೆಯಾಗುತ್ತಂತೆ! ಹೀಗಿದೆ ಮೋದಿ ಕಂತೆ ಪುರಾಣ.

ಕೇವಲ 1300 ಕೋಟಿ ವ್ಯವಹಾರ ಉಳ್ಳ ಅದಾನಿ ಫೈನಾನ್ಷಿಯಲ್ ಕಂಪನಿಗೆ ಹತ್ತಾರು ಲಕ್ಷ ಕೋಟಿ ಡೆಪಾಸಿಟ್ ಇರುವ ಸ್ಟೇಟ್ ಬ್ಯಾಂಕ್‌ನ ಹಣ ಸುರಿದು ಅದನ್ನು ದೊಡ್ಡ ಕಂಪನಿ ಮಾಡಲು ಮತ್ತು ಅದಾನಿಯನ್ನು ವಿಶ್ವದಲ್ಲೇ ಅತಿ ದೊಡ್ಡ ಶ್ರೀಮಂತನನ್ನಾಗಿ ಮಾಡಲು ನಡೆಸಿರುವ ದುಷ್ಟ ಯೋಜನೆಯಲ್ಲದೆ ಇನ್ನೇನು?

ಸ್ಟೇಟ್ ಬ್ಯಾಂಕ್ ಅದಾನಿ ಕಂಪನಿಗೆ ಕೊಡುವ ದುಡ್ಡಿನಿಂದ ಅದಾನಿ ಕಂಪನಿ ರೈತರಿಗೆ ಸಾಲ ಕೊಡುತ್ತಂತೆ. ಅದರಲ್ಲಿ ಸ್ಟೇಟ್ ಬ್ಯಾಂಕ್‌ನ ಪಾಲು ಶೇ.80, ಅದಾನಿಯ ಪಾಲು ಶೇ.20. ಯಾವ ರೈತರಿಗೆ, ಯಾತಕ್ಕಾಗಿ ಸಾಲ ಎಂಬುದನ್ನು ತೀರ್ಮಾನ ಮಾಡುವುದು ಅದಾನಿ ಕಂಪನಿ. ರೈತರು ಸಾಲ ವಾಪಸ್ ಮಾಡದಿದ್ದರೆ ಮುಳುಗುವುದು ಸ್ಟೇಟ್ ಬ್ಯಾಂಕ್ ಹಣ.

ಅದಾನಿ ಎಂತಹಾ ರೈತರಿಗೆ ಸಾಲ ಕೊಡಬಹುದು? ಹಳ್ಳಿಗಾಡಿನ ಸಣ್ಣ, ಮಧ್ಯಮ ರೈತರು ಅವರ ಬಳಿ ಸುಳಿಯಲು ಸಾಧ್ಯವೇ? ಅಕಸ್ಮಾತ್ ಅದಾನಿಯ ಫಾರ್ಚ್ಯೂನ್ ಬ್ರಾಂಡ್ ಕೃಷಿ ಫಸಲುಗಳ ಮಾರಾಟಕ್ಕೆ, ರಪ್ತು ಮಾಡುವುದಕ್ಕೆ ಅಗತ್ಯವಿರುವ ಬೆಳೆಗಳಿಗೆಂದು ಮಧ್ಯಮ ವರ್ಗದ ರೈತರಿಗೆ ಸಾಲ ನೀಡಿದರೂ, ಅದು ಈಗ ಮೋದಿ ರೈತರ ಸಂಘರ್ಷಕ್ಕೆ ಮಣಿದು ವಾಪಸ್ ತೆಗೆದುಕೊಂಡ ಕೃಷಿ ಕಾನೂನುಗಳನ್ನು ಹಿಂಬಾಗಿಲಿನಿಂದ ರೈತರ ಮೇಲೆ ಹೇರಿದಂತಲ್ಲವೇ? ಮೂರು ಕೃಷಿ ವಿನಾಶ ಕಾನೂನುಗಳ ಹೂರಣವೇ ದೊಡ್ಡ ಕಾರ್ಪೊರೇಟ್‌ಗಳ ಕೈಯಲ್ಲಿ ನೇರವಾಗಿ ಅಥವಾ ಕಂಟ್ರಾಕ್ಟ್ ಕೃಷಿಯ ಮೂಲಕ ಅಪ್ರತ್ಯಕ್ಷವಾಗಿ ರೈತನ ಭೂಮಿಯ ಹಿಡಿತವನ್ನು ನೀಡುವುದು. ಯಾವ ಬೆಳೆ, ಯಾವ ತಳಿ ಬೆಳೆಯಬೇಕು ಎಂಬುದನ್ನು ನಿರ್ಧರಿಸುವ ರೈತನ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದು. ರೈತನ ಕುಟುಂಬ ಹಾಗೂ ಅವನ ಹಳ್ಳಿಯ ಅಗತ್ಯಗಳಾದ ಆಹಾರ ಧಾನ್ಯ, ಬೇಳೆಕಾಳು, ಎಣ್ಣೆ ಬೀಜಗಳಿಗೆ ಬದಲಾಗಿ ವಿದೇಶಕ್ಕೆ ರಫ್ತು ಮಾಡಲಾಗುವ ಬೆಳೆ ಬೆಳೆಯುವುದು. ನಮ್ಮ ದೇಶದ ಭೂಮಿ, ನೀರು, ರೈತರ ಶ್ರಮ ನಮ್ಮ ದೇಶದ ಬಡವರಿಗೆ ದಕ್ಕದಂತೆ ವಿದೇಶದ ಪಾಲು ಮಾಡುವುದು. ಕೊನೆಗೆ ಕೃಷಿ ಬೆಂಬಲ ಬೆಲೆ ನಿರಾಕರಣೆ.

ಇಂತಹ ಕುತಂತ್ರಕ್ಕೆ ರಿಸರ್ವ್ ಬ್ಯಾಂಕ್ ಹೇಗೆ ಸಮ್ಮತಿ ನೀಡಿತು? ಸ್ಟೇಟ್ ಬ್ಯಾಂಕ್ ಮತ್ತು ರಿಸರ್ವ್ ಬ್ಯಾಂಕ್‌ಗಳ ಬೆನ್ನು ಮೂಳೆ ಮುರಿದು ಹಾಕಿರುವ ಪ್ರಸಂಗ ಇದು.

ಮೋದಿ ಅದಾನಿ ಕಂಪನಿಗೆ ರೈತರ, ದೇಶದ ಜನರೆಲ್ಲರ ರಕ್ತ ಬಸಿಯುವ ಅವಕಾಶ ನೀಡುವ ದೇಣಿಗೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ. ಅದಾನಿ ಆರ್ಥಿಕ ಸಾಮ್ರಾಜ್ಯದ ವಿಸ್ತಾರವನ್ನು, ಇತ್ತೀಚೆಗೆ ರಾಕೆಟ್ ವೇಗದಲ್ಲಿ ಅದು ಮೇಲಕ್ಕೇರುತ್ತಿರುವುದನ್ನು ಗಮನಿಸಿದರೆ ಇದು ತಂತಾನೆ ಗೋಚರವಾಗುತ್ತದೆ.

ಅದಾನಿ ಸಾಮ್ರಾಜ್ಯದಲ್ಲಿ ಕೃಷಿ

ಅದಾನಿ ಮಲೇಷಿಯಾ, ಇಂಡೋನೇಷಿಯಾಗಳಲ್ಲಿ ಪ್ರಾಬಲ್ಯ ಹೊಂದಿದ ವಿಲ್ಮಾರ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಸ್ಥಾಪಿಸಿದ ಜಂಟಿ ಕಂಪನಿ ದೇಶದ ಲಕ್ಷಾಂತರ ರೈತರ ಜೀವನಕ್ಕೆ ಹಾಗೂ ಕೆಲವರ ಜೀವಕ್ಕೆ ಎರವಾಗಿದೆ. ವಿಲ್ಮಾರ್ ಕಂಪನಿ ಜಗತ್ತಿನ ದೊಡ್ಡ ಪಾಮ್ ಆಯಿಲ್ ಉತ್ಪಾದಕ ಕಂಪನಿಗಳಲ್ಲೊಂದು. ಜೊತೆಗೆ ಸಕ್ಕರೆ ಉತ್ಪಾದಕ ಕೂಡಾ. ಕೇವಲ ಐದು ಲಕ್ಷ ಎಕರೆಗಳಷ್ಟು ಭೂಮಿಯಲ್ಲಿ ಪಾಮ್, ಕಬ್ಬಿನ ಬೆಳೆ ಮತ್ತು ಇತರ ಬೆಳೆಗಳನ್ನು ಹೊಂದಿದೆ. ಈ ದೇಶಗಳ ಬೇರೆ ಕಂಪನಿಗಳ ಮತ್ತು ಪಾಮ್ ಬೆಳೆಗಾರರ ಪಾಮ್ ಆಯಿಲ್ ಕೊಂಡು ರಫ್ತು ಮಾಡುತ್ತದೆ.

ಈ ಪಾಮ್ ಆಯಿಲ್ ನಮ್ಮ ದೇಶಕ್ಕೆ ಬಹು ದೊಡ್ಡ ಪ್ರಮಾಣದಲ್ಲಿ ಆಮದಾಗುವ ಮೂಲಕ ಇಲ್ಲಿ ಬೆಳೆಯಲಾಗುತ್ತಿದ್ದ ಎಣ್ಣೆಕಾಳುಗಳಾದ ಸೂರ್ಯಕಾಂತಿ ಕಾಣದಾಗಿದೆ. ಕಡಲೇಕಾಯಿ ಅಥವಾ ಶೇಂಗಾ ಬೆಳೆಗಾರರು ಕುಗ್ಗುವಂತೆ ಮಾಡಿದೆ. ಈ ಬೆಳೆಗಳನ್ನು ಬೆಳೆಯುತ್ತಿದ್ದವರು ನಷ್ಟ ಹೊಂದಿ ಬೆಳೆಗಳನ್ನು ಕೈಬಿಡುವಂತೆ ಮಾಡಿದೆ. ಶಿರಾದಲ್ಲಿ ನಡೆದ ಗೋಲಿಬಾರ್‌ನಲ್ಲಿ ರೈತರ ಜೊತೆಗೆ ಒಬ್ಬ ಪೋಲೀಸ್ ಅಧಿಕಾರಿ ಕೂಡಾ ಸತ್ತ ಘಟನೆ ನೆನಪಿನಲ್ಲಿರಬಹುದು. ಎಣ್ಣೆ ಗಾಣಗಳು, ಆಯಿಲ್ ಮಿಲ್‌ಗಳು ಮುಚ್ಚುವಂತಾಗಿದೆ.

ಈ ಸಹಯೋಗದಿಂದ ಅದಾನಿ ಕಂಪನಿ ಫಾರ್ಚೂನ್ ಬ್ರಾಂಡಿನ ಸಕ್ಕರೆ, ಪಾಮ್ ಆಯಿಲ್ ಮಾತ್ರವಲ್ಲದೆ ಹಲವಾರು ಆಹಾರ ವಸ್ತುಗಳನ್ನು ಮಾರುವ ದೊಡ್ಡ ವ್ಯವಹಾರ ನಡೆಸುತ್ತಿದೆ. ವಿದೇಶಗಳಿಗೆ ರಫ್ತು ಕೂಡಾ ಮಾಡುತ್ತದೆ.

ನಮ್ಮ ದೇಶದ ಅತಿ ದೊಡ್ಡ ಆಹಾರ ದೈತ್ಯ, ರೈತರ ಆಹಾರ ಧಾನ್ಯಗಳನ್ನು ಕೊಳ್ಳುವ, ಬೃಹತ್ ಉಗ್ರಾಣಗಳಲ್ಲಿ ಹತ್ತಾರು ಲಕ್ಷ ಪ್ರಮಾಣದಲ್ಲಿ ದಾಸ್ತಾನಿಡುವ ಮತ್ತು ದೇಶದೆಲ್ಲೆಡೆ ಪಡಿತರ ವ್ಯವಸ್ಥೆಗೆ ಆಹಾರ ಸರಬರಾಜು ಮಾಡುವ ಭಾರತ ಆಹಾರ ನಿಗಮಕ್ಕೂ ಅದಾನಿಗೂ ಒಪ್ಪಂದವಂತೆ! ಆಹಾರ ನಿಗಮದ ಹಲವು ದೊಡ್ಡ ಉಗ್ರಾಣಗಳು ಅದಾನಿಯ ವಶಕ್ಕೆ ಹೋಗಿದೆ. ಅವುಗಳಲ್ಲಿ ಬಹು ದೊಡ್ಡ ಆಧುನಿಕ ಸೈಲೋಗಳನ್ನು ಅದಾನಿ ನಿರ್ಮಿಸಿದ್ದಾರೆ. ಹೆಚ್ಚಾಗಿ ಪಂಜಾಬಿನಲ್ಲಿ. ಈ ಬೃಹತ್ ಸೈಲೋಗಳಿಗೆ ಆಹಾರ ಧಾನ್ಯಗಳನ್ನು ಸಾಗಿಸಲು ರೈಲು ಮಾರ್ಗ ಕೂಡಾ ಅದಾನಿಯದೇ. ಹೇಗಿದೆ ನಾಯಿ ಬಾಲವನ್ನಾಡಿಸುವ ಬದಲು ಬಾಲ ನಾಯಿಯ ಮೇಲೆ ಅಧಿಪತ್ಯ ಸಾಧಿಸುವುದು.

ಈಗ ವಿದ್ಯುತ್ ಮಸೂದೆಯೊಂದು ಲೋಕಸಭೆಯ ಮುಂದಿದೆ. ರೈತ ಸಂಘರ್ಷದ ಒಂದು ಮುಖ್ಯ ಒತ್ತಾಯ ಈ ಮಸೂದೆಯನ್ನು ಹಿಂತೆಗೆದುಕೊಳ್ಳಬೇಕು ಎಂದು. ಈ ಮಸೂದೆಯನ್ನು ಮಂಡಿಸುವ ಮೊದಲು ರೈತ ಚಳುವಳಿಯ ಜೊತೆ ಅದನ್ನು ಚರ್ಚಿಸುತ್ತೇನೆಂದು ಮೋದಿ ಸರ್ಕಾರ ಭರವಸೆ ನೀಡಿತ್ತು. ಈ ಮಸೂದೆ ಮಾಡಹೊರಟಿದ್ದೇ ಅದಾನಿಯಂತವರಿಗಾಗಿ. ಏಕೆಂದರೆ ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಚತ್ತೀಸಘಡ, ಝಾಖಂಡ್ ಮೊದಲಾದ ರಾಜ್ಯಗಳಲ್ಲಿ ದೊಡ್ಡ ವಿದ್ಯುತ್ ಉತ್ಪಾದನೆ ಘಟಕಗಳು ಮಾತ್ರವೇ ಅಲ್ಲ ಅದನ್ನು ಸಾಗಿಸುವ ಹಲವಾರು ನೂರು ಕಿಮೀಗಟ್ಟಲೆಯ ವಿದ್ಯುತ್ ತಂತಿಗಳು ಅದಾನಿ ಒಡೆತನದಲ್ಲಿವೆ. ಈ ವಿದ್ಯುತ್ ಉತ್ಪಾದನೆಗಾಗಿ, ಈ ರಾಜ್ಯಗಳಲ್ಲಿ ಕಲ್ಲಿದ್ದಲ ಗಣಿ ಮಾಡಲು ಲಕ್ಷಾಂತರ ಎಕರೆ ಕಾಡನ್ನು ಅವರ ವಶಕ್ಕೆ ನೀಡಿ ಆಗಿದೆ. ಆಸ್ಟ್ರೇಲಿಯಾ ದೇಶದಲ್ಲಿಯೂ ಕಲ್ಲಿದ್ದಲು ಗಣಿ ಮಾಡಲು ಸ್ವತಃ ಮೋದಿಯವರೇ ತಮ್ಮ ಆಸ್ಟ್ರೇಲಿಯಾ ಭೇಟಿ ಸಂದರ್ಭದಲ್ಲಿ ಒಪ್ಪಂದ ಏರ್ಪಡಿಸಿ ಅದಕ್ಕಾಗಿ ಸ್ಟೇಟ್ ಬ್ಯಾಂಕಿನಿಂದ ಹತ್ತಾರು ಸಾವಿರ ಕೋಟಿ ರೂಗಳ ದೊಡ್ಡ ಸಾಲ ಕೊಡಿಸಿದ್ದಾರೆ.

ರೈತರ ಕೃಷಿ ವಿದ್ಯುತ್ ಬಳಕೆಗಾಗಿ ಉಚಿತ ಅಥವಾ ಅಗ್ಗದ ವಿದ್ಯುತ್ ನೀಡಿಕೆಯನ್ನು ಕಿತ್ತೆಸೆಯುವ, ಗ್ರಾಮೀಣ ವಿದ್ಯುತ್ ದರಗಳ ಏರಿಕೆ ಮಾಡುವ ಈ ಮಸೂದೆ ಈ ಖಾಸಗಿ ವಿದ್ಯುತ್ ತಯಾರಿಕರಾದ ಅದಾನಿಯಂತಹವರ ತುರ್ತಾಗಿದೆ.

ಇಷ್ಟೇ ಅಲ್ಲದೆ ದೇಶದ ಹಲವಾರು ಬಂದರುಗಳನ್ನು ಅದಾನಿಯ ವಶಕ್ಕೆ ನೀಡಲಾಗಿದೆ. ಅವರದೇ ಆದ ಒಂದು ದೊಡ್ಡ ಬಂದರು ಗುಜರಾತಿನಲ್ಲಿದೆ. ಇವುಗಳಿಗೆ ವಸ್ತುಗಳನ್ನು ಸಾಗಿಸುವ ಹಡಗುಗಳ ಜಾಲವೂ ಇದೆ. ಈಗ್ಗೆ ಕೆಲ ವರ್ಷಗಳ ಹಿಂದೆ ತೊಗರಿ ಬೆಲೆ 180-200 ರೂ ಏರಿದ್ದರಲ್ಲಿ ಈ ಆಮದು, ಬಂದರುಗಳ ಮೇಲಿನ ಹಿಡಿತ ಕಾರಣವಾಗಿದೆ. ಇಡೀ ದೇಶದ ತೊಗರಿ ಬೆಳೆಗಾರ ರೈತರನ್ನು ಒಂದು ಕಡೆ, ಹಾಗೆಯೇ ಬಳಕೆದಾರರನ್ನು ಮತ್ತೊಂದು ಕಡೆ ಸುಲಿದು ಹಲವು ಹತ್ತು ಸಾವಿರ ಕೋಟಿ ರೂಗಳ ಲಾಭ ಮಾಡಿಕೊಂಡ ಪ್ರಸಂಗ ಇದು.

ಅದಾನಿಯ ಆರ್ಥಿಕ ಸಾಮ್ರಾಜ್ಯ ಇನ್ನೂ ಬಹಳ ದೊಡ್ಡದಾಗಿದೆ. ಅದರಲ್ಲಿ ರೈತರಿಗೆ ಹಾನಿ ಮಾಡುವ ಕೆಲ ಮುಖ್ಯ ಅಂಶಗಳನ್ನಷ್ಟೇ ಇಲ್ಲಿ ನಿಮ್ಮಗಮನಕ್ಕೆ ತರಲಾಗಿದೆ. ಇಂತಹ ಸಮಯದಲ್ಲಿ ಅದಾನಿ ಕಂಪನಿಗಳ ಜತೆಗೆ ಸರ್ಕಾರದ ಯಾವುದೇ ಒಪ್ಪಂದಗಳನ್ನು ಪ್ರಶ್ನಿಸುವ ಅವಶ್ಯಕತೆ ಎದುರಾಗಿದೆ.

ಜಿ. ಎನ್. ನಾಗರಾಜ್

ಜಿ. ಎನ್. ನಾಗರಾಜ್
ಸರ್ಕಾರಿ ಅಧಿಕಾರಿಯಾಗಿದ್ದ ಜಿ. ಎನ್. ನಾಗರಾಜ್ 80ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣಾವಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಚಾರ ಮಂಡಿಸುವವರು.


ಇದನ್ನೂ ಓದಿ: ಕರ್ನಾಟಕವನ್ನಾವರಿಸಿದ ರೈತ ಚಳುವಳಿ; ಮತ್ತಷ್ಟು ಸಂಗತಿಗಳು ಮತ್ತು ನೆನಪುಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌ | Naanu Gauri

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌

0
ದೇಶದ ತುಂಬ ಹರಡಿರುವ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ ಎಂದು ಸ್ವರಾಜ್ ಪಕ್ಷದ ಮುಖ್ಯಸ್ಥ, ರೈತ ಹೋರಾಟಗಾರ ಯೋಗೇಂದ್ರ ಯಾದವ್‌ ಬುಧವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ. ಅವರು ‘ಕರ್ನಾಟಕದ ಜನ ಯಾಕೆ...