Homeಅಂಕಣಗಳುಬಹುಜನ ಭಾರತ: ಲಾಭದ ಗುಲಾಮಗಿರಿಗೆ ಬಿದ್ದಿರುವ ಮಾಧ್ಯಮ! - ಡಿ.ಉಮಾಪತಿ

ಬಹುಜನ ಭಾರತ: ಲಾಭದ ಗುಲಾಮಗಿರಿಗೆ ಬಿದ್ದಿರುವ ಮಾಧ್ಯಮ! – ಡಿ.ಉಮಾಪತಿ

ಕೇವಲ ವ್ಯಕ್ತಿಗತ ಮಟ್ಟದಲ್ಲಿ ಪತ್ರಕರ್ತರ ಅಥವಾ ಒಂದು ನಿರ್ದಿಷ್ಟ ಸುದ್ದಿ ಸಂಸ್ಥೆಯ ದಿಟ್ಟತನವೊಂದರಿಂದಲೇ ಮುಕ್ತ ಮಾಧ್ಯಮ ಸಾಧ್ಯವಿಲ್ಲ. ಅದಕ್ಕೊಂದು ಪೂರಕ ವಾತಾವರಣವೇ ನಿರ್ಮಾಣ ಆಗಬೇಕು. ಕಾನೂನಿನ ರಕ್ಷಣೆ ಬೇಕು, ಕಸಬುದಾರಿಕೆಯ ಪತ್ರಿಕೋದ್ಯಮಕ್ಕೆ ಬದ್ಧತೆ ಉಳ್ಳ ಮಾಧ್ಯಮ ಸಂಸ್ಥೆಗಳು ಇರಬೇಕು. ಜೊತೆ ಜೊತೆಗೆ ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ದನಿ ಎತ್ತುವ ನಾಗರಿಕ ಸಮಾಜ ಬೇಕು.

- Advertisement -
- Advertisement -

ಮತ್ತೊಂದು ಪತ್ರಿಕಾ ದಿನಾಚರಣೆ ಸಮೀಪಿಸಿದೆ. ಸಭೆ ಸಮಾರಂಭಗಳು ನಡೆಯುತ್ತವೆ. ಮಾಧ್ಯಮಗಳ ಮಹತ್ವ ಕುರಿತು ಭರ್ಜರಿ ಭಾಷಣಗಳು ಕೇಳಿ ಬರಲಿವೆ. ಪತ್ರಿಕಾ ಸ್ವಾತಂತ್ರ್ಯ ಅಪಾಯದಲ್ಲಿದೆ ಎಂಬ ಮಾತು ಅದೆಷ್ಟೋ ಲಕ್ಷದ ಸಲ ಮತ್ತೊಮ್ಮೆ ಮೊಳಗುವುದು. ಪತ್ರಿಕೋದ್ಯಮ ಹಾದಿ ತಪ್ಪುತ್ತಿದೆ ಎಂದೂ, ಪತ್ರಕರ್ತರು ನೈತಿಕವಾಗಿ ಅಧಃಪತನ ಹೊಂದುತ್ತಿದ್ದಾರೆಂದೂ ರಾಜಕಾರಣಿಗಳು ಬುದ್ಧಿ ಹೇಳಲಿದ್ದಾರೆ. ಪತ್ರಿಕಾ ದಿನಾಚರಣೆ ತಮ್ಮದೇ ದಿನವೆಂದು, ಪತ್ರಕರ್ತರು ಅಂದು ಸುಳ್ಳೇ ಸಂಭ್ರಮಿಸಿ ಎದೆಯುಬ್ಬಿಸಿ ನಡೆಯುತ್ತಾರೆ. ಮರುದಿನದಿಂದ ಯಥಾಪ್ರಕಾರ ದೈನೇಸಿತನದಿಂದ ಸುದ್ದಿ ನೀಡುವವರ ಬಾಗಿಲು ಕಾಯುತ್ತಾರೆ. ಪತ್ರಿಕೆ-ಚಾನೆಲ್-ಅಂತರ್ಜಾಲತಾಣದ ಮಾಲೀಕರ ಮರ್ಜಿಗೆ ಅನುಗುಣವಾಗಿ ಸುದ್ದಿ ಹೊಸೆಯುತ್ತಾರೆ. ಈ ಮಾತಿಗೆ ಅಪವಾದ ಹುಡುಕುವುದು ದಿನದಿಂದ ದಿನಕ್ಕೆ ದುಸ್ಸಾಧ್ಯ ಆಗತೊಡಗಿದೆ. ಅಳಿದುಳಿದ ಸಾಚಾ ಪತ್ರಿಕೆಗಳೂ ಅಡ್ಡದಾರಿ ಹಿಡಿಯತೊಡಗಿರುವ ವರದಿಗಳಿವೆ.

ಕೊರೊನಾ ಮಹಾಮಾರಿಯ ನೆಪದಲ್ಲಿ ಶೇ.8ರಿಂದ ಶೇ.25ರಷ್ಟು ವೇತನ ಕಡಿತಗಳಾಗಿವೆ. ಪತ್ರಕರ್ತರನ್ನು ಬೇಕಾಬಿಟ್ಟಿ ಕೆಲಸದಿಂದ ಕಿತ್ತುಹಾಕಲಾಗುತ್ತಿದೆ. ಹೊಸ ನೇಮಕಗಳು ದೂರದ ಮಾತಾಗಿಯೂ ಉಳಿದಿಲ್ಲ. ಈ ರೀತಿ ಕೆಲಸ ಕಳೆದುಕೊಳ್ಳುತ್ತಿರುವವರು ಹೆಚ್ಚಾಗಿ ಬಹುಜನ ಸಮುದಾಯಗಳಿಗೆ ಸೇರಿದವರೇ ಎಂಬುದು ಆತಂಕದ ವಿದ್ಯಮಾನ. ಒಂದು ಕಾಲಕ್ಕೆ ನಿರ್ದಿಷ್ಟ ಜಾತಿಯ ಗುತ್ತಿಗೆಯಾಗಿ ಪರಿಣಮಿಸಿದ್ದ ಪತ್ರಿಕೋದ್ಯಮ ಕಾಲಕ್ರಮೇಣ ಒಲ್ಲದ ಮನಸಿನಿಂದ ಇತರರಿಗೂ ಅಷ್ಟಿಷ್ಟು ಬಾಗಿಲು ತೆಗೆದಿತ್ತು.

ಕರ್ನಾಟಕದ ಒಂದು ಪತ್ರಿಕಾ ಸಂಸ್ಥೆ ಮತ್ತು ಒಂದು ಚಾನೆಲ್ ವಿನಾ ಇತರೆ ಪತ್ರಿಕೆಗಳು-ಚಾನೆಲ್‍ಗಳು ವರದಿಗಾರ ವಿಭಾಗದ ಮುಖ್ಯಸ್ಥರನ್ನು, ಜಿಲ್ಲಾ ವರದಿಗಾರರ ಮೇಲೆ ಜಾಹೀರಾತು ಸಂಗ್ರಹಿಸಲು ಈ ಹಿಂದೆಯೇ ಒತ್ತಡ ಹೇರಿದ್ದುಂಟು. ಈಗ ಇಂತಿಂತಹ ಜಿಲ್ಲೆಗೆ ಇಂತಿಷ್ಟು ಲಕ್ಷ ರುಪಾಯಿ ಎಂದು ಮಾಸಿಕ ಜಾಹೀರಾತು ಮೊತ್ತವನ್ನು ನಿಗದಿ ಮಾಡಿರುವ ಪತ್ರಿಕೆಗಳೂ ಉಂಟು. ಜಾಹೀರಾತು ಸಂಗ್ರಹಿಸಿದರೆ ಮಾತ್ರ ಸಂಬಳ ಎಂಬ ಮಾನಸಿಕ ಹಿಂಸೆಗೆ ಪತ್ರಕರ್ತರು ಗುರಿಯಾಗಿದ್ದಾರೆ. ಜಾಹೀರಾತಿಗಾಗಿ ರಾಜಕಾರಣಿಗಳು- ಭೂಗಳ್ಳರು-ಸಮಾಜ ಕಂಟಕರ ಮುಂದೆ ಕೈಚಾಚಬೇಕಾಗಿ ಬಂದಿದೆ. ವಸ್ತುನಿಷ್ಠತೆ ಎಂಬುದು ಅಭಾವ ವಸ್ತುವಾಗಿ ಪರಿಣಮಿಸಿರುವ ದಿನಗಳಲ್ಲಿ ವರದಿಗಾರರನ್ನು ಜಾಹೀರಾತು ಸಂಗ್ರಹಕ್ಕೆ ಹಚ್ಚಿರುವ ನಡೆ ಮತ್ತಷ್ಟು ವಸ್ತುನಿಷ್ಠತೆಗೆ ಬಿದ್ದ ಮತ್ತೊಂದು ಕೊಡಲಿಯೇಟು. ಪ್ರಾಮಾಣಿಕ ಪತ್ರಕರ್ತರ ಆತ್ಮಾಭಿಮಾನಕ್ಕೆ ಒದಗಿರುವ ದೊಡ್ಡ ಧಕ್ಕೆ.

ಪತ್ರಿಕಾ

ಮಾಧ್ಯಮ ವ್ಯವಹಾರವೂ ಅಪ್ಪಟ ಲಾಭ ನಷ್ಟದ ವ್ಯಾಪಾರವೇ. ಈ ಮಾತನ್ನು ಅಲ್ಲಗಳೆಯುವುದು ಆತ್ಮದ್ರೋಹದ ಅಥವಾ ಆಷಾಢಭೂತಿತನದ ಮಾತು. ಪತ್ರಿಕಾ ಸ್ವಾತಂತ್ರ್ಯವು ಅಸಲು ಪತ್ರಿಕಾ ಮಾಲೀಕರ ಸ್ವಾತಂತ್ರ್ಯ ಎಂಬ ಮಾತು ಚಾಲ್ತಿಗೆ ಬಂದು ದಶಕಗಳೇ ಉರುಳಿವೆ. ಮಾಧ್ಯಮ ವಹಿವಾಟು ದಾನಧರ್ಮದ ರೂಪು ತಳೆಯಬೇಕು, ಕಾಸಿಲ್ಲದೆ ಪತ್ರಿಕೆಗಳು ಓದಲು ಸಿಗಬೇಕು ಎಂಬ ನಿರೀಕ್ಷೆಯಲ್ಲೇ ದೊಡ್ಡ ನ್ಯೂನತೆ ಅಡಗಿದೆ. ಈಗ ನಾವೆಲ್ಲ ಓದುತ್ತಿರುವ ಮುಖ್ಯಧಾರೆಯ ಬಹುತೇಕ ಎಲ್ಲ ಪತ್ರಿಕೆಗಳು, ಟೀವಿ ಚಾನೆಲ್ಲುಗಳು ನಡೆಯುತ್ತಿರುವುದು ಓದುಗ ಅಥವಾ ನೋಡುಗ ನೀಡುತ್ತಿರುವ ಚಂದಾ ಹಣದಿಂದ ಅಲ್ಲವೇ ಅಲ್ಲ. ಈಗಿನ ಸ್ವರೂಪದ ಮಾಧ್ಯಮ ಸಂಸ್ಥೆಗಳ ಬಕಾಸುರ ವೆಚ್ಚಕ್ಕೆ ಹೋಲಿಸಿದರೆ ಓದುಗರು ನೀಡುವ ಚಂದಾ ಹಣ ಜುಜುಬಿಯೇ. ಮಾಧ್ಯಮ ಸಂಸ್ಥೆಗಳ ನಿಜವಾದ ಆದಾಯ ಜಾಹೀರಾತುಗಳು. ಪುಟವೊಂದಕ್ಕೆ ಹತ್ತಾರು ಲಕ್ಷ ರುಪಾಯಿ ದರ ತೆರುವ ಜಾಹೀರಾತುದಾರರು ತಾವು ಉತ್ಪಾದಿಸುವ ಸರಕು ಸರಂಜಾಮುಗಳಿಗೆ ಮಾರುಕಟ್ಟೆಯನ್ನು ಅರಸುವವರು. ಮಾರುಕಟ್ಟೆ ಪತ್ರಿಕೆಗಳ ಪುಟಗಳಲ್ಲಿ ಇಲ್ಲ. ಆದರೆ ಪತ್ರಿಕೆಗಳನ್ನು ಓದುವ ಜನರಿದ್ದಾರೆ. ಜಾಹೀರಾತು ಏಜೆನ್ಸಿಗಳಿಗೆ ಹಣ ನೀಡಿ ಆಕರ್ಷಕ ಜಾಹೀರಾತು ರೂಪಿಸಿ ಪತ್ರಿಕೆಗಳಲ್ಲಿ ಅಚ್ಚು ಮಾಡಿ, ಚಾನೆಲ್ಲುಗಳಲ್ಲಿ ಪ್ರದರ್ಶಿಸಿ ಓದುಗರು- ನೋಡುಗರನ್ನು ತಮ್ಮ ಸರಕುಗಳತ್ತ ಸೆಳೆಯುವುದು, ಅವರ ಅಭಿಪ್ರಾಯ ರೂಪಿಸುವುದು ಜಾಹೀರಾತು ನೀಡುವ ಕಂಪನಿಗಳ ಉದ್ದೇಶ. ಜನ ಖರೀದಿಸುವ ಪ್ರತಿಯೊಂದು ಸರಕು ಸರಂಜಾಮಿನ ದರದಲ್ಲಿ ಆಯಾ ಉತ್ಪನ್ನದ ಜಾಹೀರಾತಿಗೆ ಮಾಡಲಾಗಿರುವ ಖರ್ಚುವೆಚ್ಚವೂ ಸೇರಿರುತ್ತದೆ.

ನಿತ್ಯ ಓದುಗರ ಕೈ ಸೇರುವ ಪತ್ರಿಕೆಯೊಂದರ ಉತ್ಪಾದನಾ ವೆಚ್ಚ ಹೆಚ್ಚು ಕಡಿಮೆ 30 ರುಪಾಯಿ ಎಂದಿಟ್ಟುಕೊಳ್ಳೋಣ. ಓದುಗರು ತೆರುವ ದರ ಹೆಚ್ಚೆಂದರೆ ಐದಾರು ರುಪಾಯಿ. ಹಾಗೆಯೇ ಛಾನೆಲ್ಲುಗಳು ಕೂಡ. ಉತ್ಪಾದನಾ ವೆಚ್ಚ-ಲಾಭ ಮತ್ತು ಓದುಗರ ತೆರುವ ದರದ ನಡುವಣ ಸುಮಾರು 25 ರುಪಾಯಿಯ ಅಂತರವನ್ನು ತುಂಬುವವರು ಜಾಹೀರಾತುದಾರರು. ಅವರಾದರೂ ಯಾಕೆ ಹಣ ತೆತ್ತು ಜಾಹೀರಾತು ನೀಡಬೇಕು. ಪತ್ರಿಕೆಗಳು ಮತ್ತು ಛಾನೆಲ್ಲುಗಳು ಜಾಹೀರಾತು ಶುಲ್ಕ ಪಡೆದು ಜಾಹೀರಾತುದಾರರಿಗೆ ತಮ್ಮ ಓದುಗರ ಕಣ್ಣಾಲಿಗಳನ್ನು ನೀಡುತ್ತವೆ. ಈ ಕ್ರಿಯೆ ಕೇವಲ ಸಮೂಹ ಮಾಧ್ಯಮ ಸಂಸ್ಥೆಗಳು ಸುದ್ದಿಯನ್ನು ಓದುಗರಿಗೆ -ನೋಡುಗರಿಗೆ ತಲುಪಿಸುವುದಕ್ಕೆ ಸೀಮಿತ ಅಲ್ಲ. ಅದಕ್ಕಿಂತ ಹೆಚ್ಚಾಗಿ ಸಮೂಹ ಮಾಧ್ಯಮ ಸಂಸ್ಥೆಗಳು ಕೂಡ ಜಾಹೀರಾತುದಾರರಿಗೆ ಉತ್ಪನ್ನವೊಂದನ್ನು ಮಾರಾಟ ಮಾಡುತ್ತವೆ. ಆ ಉತ್ಪನ್ನವೇ ಓದುಗರು. ಓದುಗರು ತಮ್ಮ ಅರಿವಿಗೇ ಬಾರದಂತೆ ಉತ್ಪನ್ನವಾಗಿ ಮಾರಾಟವಾಗುವ ಪರಿಯಿದು. ಪತ್ರಿಕೆಯೊಂದು ಅಥವಾ ಚಾನೆಲ್ಲೊಂದರ ಮೊದಲ ನಿಷ್ಠೆ ಜಾಹೀರಾತುದಾರರಿಗೇ ವಿನಾ ಓದುಗರು ಅಥವಾ ನೋಡುಗರಿಗೆ ಅಲ್ಲ. ಆದರೆ ಓದುಗರು ಮತ್ತು ನೋಡುಗರೇ ತನ್ನ ದೈವ ಎಂದು ಪೋಸು ಕೊಡುತ್ತದೆ ಇಂದಿನ ಮಾಧ್ಯಮ.

ಅಧಿಕಾರದ ಮೇಲೆ ಮತ್ತು ಅಧಿಕಾರ ನಡೆಸುವವರ ಮೇಲೆ ಸಮೂಹ ಮಾಧ್ಯಮಗಳು ನಿಯಂತ್ರಣ ಸಾಧಿಸುತ್ತವೆ ಎಂಬುದು ಹಳೆಯ ಮಿಥ್ಯೆ. ಸರ್ಕಾರಗಳು, ಭಾರೀ ಸಂಸ್ಥೆಗಳು, ಕಾರ್ಪೊರೇಟುಗಳು ಮೀಡಿಯಾ ಆಟವನ್ನು ಆಡುವುದು ಹೇಗೆಂದು ಚೆನ್ನಾಗಿ ಬಲ್ಲವು. ಸುದ್ದಿ ನಿರೂಪಣೆಯ ಕಥಾನಕವನ್ನು ಹೇಗೆಲ್ಲ ಪ್ರಭಾವಿಸಬಹುದು ಎಂಬ ಒಳದಾರಿಗಳು ಅವುಗಳಿಗೆ ಕರತಲಾಮಲಕ. ಅಧಿಕಾರಸ್ಥರು ಮತ್ತು ಸುದ್ದಿಗಾಗಿ ಅವರನ್ನು ಅವಲಂಬಿಸುವವರು ಪರಸ್ಪರ ಅವಲಂಬಿತರು. ಅಧಿಕಾರಕ್ಕೆ ಸವಾಲೆಸೆಯುವ ಮಾಧ್ಯಮಗಳನ್ನು ಮೂಲೆಪಾಲು ಮಾಡಲಾಗುತ್ತದೆ. ಸಂವಾದದ ದಿಕ್ಕು ತಪ್ಪಿಸಲಾಗುತ್ತದೆ.

ಅಧಿಕಾರಸ್ಥರು ಮತ್ತು ಕಾರ್ಪೊರೇಟುಗಳು ಸೇರಿ ತಮಗೆ ಬೇಕಿರುವ ಅಭಿಪ್ರಾಯವನ್ನು ರೂಪಿಸಲು ಸಮೂಹಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಲಾಭವೊಂದನ್ನೇ ಅಂತಿಮ ಗುರಿಯಾಗಿಸಿಕೊಂಡಿರುವ ಸಮೂಹಮಾಧ್ಯಮಗಳಿಗೆ ಜನಹಿತ- ಸಾಮಾಜಿಕ ಹಿತ ಕಟ್ಟಕಡೆಯ ಆದ್ಯತೆ.

ಬಹುತೇಕ ಜನಪರ ಮಾಧ್ಯಮ ಮುಖ್ಯಧಾರೆಯಲ್ಲಿ ದಿವಂಗತವಾಗಿ ಬಹಳ ಕಾಲ ಉರುಳಿತು. ಲಾಭ ತರುವಂತಹ ಸಾಮಗ್ರಿಯನ್ನು ತುರುಕಲು ಇಂದಿನ ಮಾಧ್ಯಮಗಳು ಹಿಂಜರಿಯುವುದಿಲ್ಲ. ವಿಮರ್ಶಾತ್ಮಕ ಪತ್ರಿಕೋದ್ಯಮ ಬಲಿಗೊಟ್ಟಾದರೂ ಸರಿ ಲಾಭ ಮಾಡಬೇಕು.

ಬಹುತೇಕ ಮೀಡಿಯಾ ಇಂದು ಲಾಭಬಡುಕ ಕಾರ್ಪೊರೇಟುಗಳು ಮತ್ತು ಅಧಿಕಾರದ ಹಪಾಹಪಿಯ ರಾಜಕೀಯ ಹಿತಾಸಕ್ತ ಶಕ್ತಿಗಳ ಕೈಯಲ್ಲಿನ ಅಸ್ತ್ರವಾಗತೊಡಗಿದೆ. ಅಧಿಕಾರಸ್ಥರನ್ನು ಬಲಿಪಶುವಿನಂತೆ ಚಿತ್ರಿಸಲಾಗುತ್ತಿದೆ. ಮುಖ್ಯಧಾರೆಯ ಹಲವು ಸುದ್ದಿವಾಹಿನಿಗಳು ದೇಶದ ಬಹುದೊಡ್ಡ ಕಾರ್ಪೊರೇಟ್ ಕಂಪನಿಗಳಿಂದ, ಇಲ್ಲವೇ ಅವುಗಳ ಪಾಲುದಾರರಿಂದ ಸಾಲರೂಪದ ಆರ್ಥಿಕ ನೆರವು ಪಡೆದಿರುವ ವರದಿಗಳಿವೆ. ಬಹುತೇಕ ಸಮೂಹ ಮಾಧ್ಯಮಗಳು ಸರ್ಕಾರ ಮತ್ತು ಆಡಳಿತ ಪಕ್ಷವನ್ನು ಪ್ರಶ್ನಿಸುವ ಬದಲು ಪ್ರತಿಪಕ್ಷಗಳ ಬೇಟೆಯಾಡುವ ಮತ್ತು ಆಳುವ ಪಕ್ಷದ ಭಜನೆ ಮಾಡುವ ವಿಪರ್ಯಾಸ ಜರುಗಿದೆ.

ದೈನಂದಿನ ವರದಿಗಾರಿಕೆಯ ಪತ್ರಿಕೋದ್ಯಮ ನಡೆಯುತ್ತಿದೆ. ಆದರೆ ಮಹತ್ವದ ಸಂಗತಿಗಳ ಕುರಿತು ವಿಚಿತ್ರ ಮೌನ ದೇಶದ ಉದ್ದಗಲಕ್ಕೆ ನೆಲೆಸಿದೆ. ಎರಗಬಹುದಾದ ತೊಡಕು-ತೊಂದರೆಗಳನ್ನು ಮುಂದಾಗಿಯೇ ಊಹಿಸಿ ಅವುಗಳಿಂದ ತಪ್ಪಿಸಿಕೊಳ್ಳಲು ಆಳುವ ಶಕ್ತಿಗಳ ಮತ್ತು ತೋಳು ತಿರುಚುವ ಶಕ್ತಿಗಳ ಮುಂದೆ ವಿಧೇಯತೆಯಿಂದ ತಾವಾಗಿಯೇ ಮಂಡಿ ಊರುವ ಮತ್ತು ತಮ್ಮ ಮೇಲೆ ತಾವೇ ಸೆನ್ಸಾರ್ಶಿಪ್ ವಿಧಿಸಿಕೊಳ್ಳುವ ವ್ಯಾಧಿ ಒಳಗೊಳಗೇ ವ್ಯಾಪಿಸುತ್ತಿದೆ.

ಕೇವಲ ವ್ಯಕ್ತಿಗತ ಮಟ್ಟದಲ್ಲಿ ಪತ್ರಕರ್ತರ ಅಥವಾ ಒಂದು ನಿರ್ದಿಷ್ಟ ಸುದ್ದಿ ಸಂಸ್ಥೆಯ ದಿಟ್ಟತನವೊಂದರಿಂದಲೇ ಮುಕ್ತ ಮಾಧ್ಯಮ ಸಾಧ್ಯವಿಲ್ಲ. ಅದಕ್ಕೊಂದು ಪೂರಕ ವಾತಾವರಣವೇ ನಿರ್ಮಾಣ ಆಗಬೇಕು. ಕಾನೂನಿನ ರಕ್ಷಣೆ ಬೇಕು, ಕಸಬುದಾರಿಕೆಯ ಪತ್ರಿಕೋದ್ಯಮಕ್ಕೆ ಬದ್ಧತೆ ಉಳ್ಳ ಮಾಧ್ಯಮ ಸಂಸ್ಥೆಗಳು ಇರಬೇಕು. ಜೊತೆ ಜೊತೆಗೆ ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ದನಿ ಎತ್ತುವ ನಾಗರಿಕ ಸಮಾಜ ಬೇಕು.

ಗುಣಮಟ್ಟದ ಪತ್ರಿಕೋದ್ಯಮವನ್ನು ನೀಡಬಲ್ಲ ಸಶಕ್ತ ಮತ್ತು ಉತ್ತರದಾಯಿ ಮಾಧ್ಯಮ ಹೊಂದಬೇಕಿದ್ದರೆ ಟಿ.ಆರ್.ಪಿ. ಅಥವಾ ಜಾಹೀರಾತು ಅವಲಂಬಿತ ಮಾದರಿಯ ಪತ್ರಿಕೋದ್ಯಮ ಸಾಯಬೇಕು. ಹಣ ಸಂದಾಯ ಮಾಡಿ ಸೇವೆಗಳನ್ನು ಪಡೆಯುವ ಮಾದರಿಯಲ್ಲಿ ಓದುಗರು ಕಾಸು ತೆತ್ತು ಸುದ್ದಿ ಓದುವ ಕಾಲ ಬರಬೇಕು.

ಆದರೆ ಓದುಗರು ನಿತ್ಯ ಮೂವತ್ತು ರೂಪಾಯಿ ತೆತ್ತು ಪತ್ರಿಕೆಯೊಂದನ್ನು ಓದುವುದು ಸಾಧ್ಯವಿದೆಯೇ? ಕಾರ್ಯಸಾಧ್ಯವಿರುವ ಮಧ್ಯಮ ಮಾರ್ಗವೊಂದು ಇದೆಯೇ? ಜನರ ಪರವಾಗಿ ನಿಂತೂ ಬದುಕಿ ಬಾಳಬಲ್ಲ ಮಾಧ್ಯಮವೊಂದರ ಆಯ-ವ್ಯಯದ ಮಾದರಿ ಹೇಗಿರಬೇಕು? ಈ ಪ್ರಶ್ನೆಗಳಿಗೆ ಸಿದ್ಧಮಾದರಿಯ ಸರಳ ಉತ್ತರಗಳಿಲ್ಲ.


ಇದನ್ನು ಓದಿ: ತಮಿಳುನಾಡು ಲಾಕಪ್‌ ಡೆತ್: ಪೊಲೀಸ್ ದೌರ್ಜನ್ಯಕ್ಕೆ ಕೊನೆಯೆಂದು? ಮಾತು ಸೋತ ಭಾರತ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...