Homeಅಂಕಣಗಳುಬೆಂಕಿ ಬರಹಬೆಂಕಿ ಬರಹ-1: ಟಿಕ್‌ಟಾಕ್ v/s ಯೂಟ್ಯೂಬ್ - ಯುವಜನರ ಆನ್‌ಲೈನ್ ವರ್ಗ ಸಂಘರ್ಷ

ಬೆಂಕಿ ಬರಹ-1: ಟಿಕ್‌ಟಾಕ್ v/s ಯೂಟ್ಯೂಬ್ – ಯುವಜನರ ಆನ್‌ಲೈನ್ ವರ್ಗ ಸಂಘರ್ಷ

ಬಾಲಿವುಡ್‌ನ ನೆಪೋಟಿಸಮ್ ಕುರಿತು ನಡೆದ ಚರ್ಚೆಯಲ್ಲಿಯೂ ಸಹ ಕಂಗನಾ ರಣಾವತ್ ಮಾಡಿದ ವಿಡಿಯೋಗಿಂತ ಅಶ್ಲೀಲ ಪದಗಳನ್ನೇ ಮಾತನಾಡಿ ವಿಡಿಯೋ ಮಾಡಿದ ಬಿಹಾರದ ಮುಸುಕುಧಾರಿ ಮಹಿಳೆಯ ವಿಡಿಯೋನೇ ಹೆಚ್ಚು ವೈರಲ್ ಆಗಿದ್ದು ಆತಂಕಕಾರಿಯಾಗಿದೆ.

- Advertisement -
- Advertisement -

ಆನ್‌ಲೈನ್ ಈಗ ಕೇವಲ ಲೈಕ್, ಶೇರ್, ಕ್ಲಿಕ್, ವ್ಯೂಸ್ ಗಳಿಗೆ ಸೀಮಿತವಾಗಿಲ್ಲ. ಹೊಸ ರೀತಿಯ ರಾಜಕೀಯ, ಸಾಂಸ್ಕೃತಿಕ ವರ್ಗ ಸಂಘರ್ಷಕ್ಕೆ ವೇದಿಕೆಯಾಗಿದೆ. 2020 ರ ಮೇ ತಿಂಗಳಿನಲ್ಲಿ ನಡೆದ ಯೂಟ್ಯೂಬ್ ವರ್ಸಸ್ ಟಿಕ್‌ಟಾಕ್ ಯುವಜನರ ಸಮರವನ್ನು ‘ಕೆಲಸವಿಲ್ಲದ ಜನರ ಜಗಳ ಬಡಿ’ ಎಂದು ಲೈಟ್ ಆಗಿ ತಗೆದುಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ದಶಕಗಳಿಂದ ದಲಿತ ಚಳವಳಿ, ಟ್ರಾನ್ಸ್‌ಜೆಂಡರ್ ಮತ್ತು ಮಹಿಳಾ ಚಳವಳಿಗಳು ಕಟ್ಟಿಕೊಟ್ಟಿದ್ದ ಸಮಾನತೆ, ಸಹಿಷ್ಣುತೆಯ ಆಶಯಗಳನ್ನು ಗಾಳಿಗೆ ತೂರಿ, ದೇಶದ ದೊಡ್ಡ ಸಂಖ್ಯೆಯ ಯುವಜನರು ಜಾತಿ, ಲಿಂಗ, ಧರ್ಮ ಮತ್ತು ಬಡತನ ಕಾರಣಗಳಿಗೆ ಶೋಷಣೆ ಅನುಭವಿಸುತ್ತಿರುವ ಸಮುದಾಯದ ವಿರುದ್ಧವೇ ಹೊಸ ರೀತಿಯಲ್ಲಿ ದ್ವೇಷ ಅಸೂಯೆಗಳನ್ನು ಸೃಷ್ಟಿ ಮಾಡಿದ್ದಾರೆ! ದೇಶದ ರಾಜಕೀಯ, ಆರ್ಥಿಕ, ಶಿಕ್ಷಣ, ಉದ್ಯೋಗ ಇತ್ಯಾದಿ ಅಸಲಿ ವಿಷಯಗಳಿಗೆ ಸೂಕ್ಷ್ಮತೆಯನ್ನು ಮೈಗೂಡಿಸಿಕೊಂಡು ಪ್ರಶ್ನೆ ಮಾಡುವ ಯುವಜನರು ಹುಟ್ಟಿಕೊಳ್ಳುತ್ತಿರುವ ಹೊತ್ತಲ್ಲೇ ಇಂತಹ ಆತಂಕಕಾರಿ ಬೆಳವಣಿಗೆಯೂ ನಡೆಯುತ್ತಿದೆ.

ಏನಿದು ಯೂಟ್ಯೂಬ್ ವರ್ಸಸ್ ಟಿಕ್‌ಟಾಕ್ ಸಮರ?

ಎಲ್ವಿಶ್ ಯಾದವ್ ಎನ್ನುವ ಯೂಟ್ಯೂಬರ್ ತನ್ನ ಚಾನೆಲ್ ನಲ್ಲಿ ಟಿಕ್‌ಟಾಕ್ ಮಾಡುವವರನ್ನು ರೋಸ್ಟ್ (ವ್ಯಂಗ್ಯ ಮಾಡುವುದು) ಮಾಡಿದ್ದನು. ಈ ವಿಡಿಯೋದಲ್ಲಿ ಯೂಟ್ಯೂಬರ್ ಅನ್ನು ಯುವ ಪ್ರತಿಭೆ ಎಂದೂ ಟಿಕ್‌ಟಾಕರ್ಸ್ ಅನ್ನು ಚಿಂದಿ ಆಯುವವರೆಂದೂ ಹೋಲಿಕೆ ಮಾಡಿದ್ದನು. ಹೆಣ್ಣುಮಕ್ಕಳು ಬಳಸುವ ಮೇಕಪ್ ಅನ್ನು ಕೂಡು ಗುರಿಯಾಗಿಸಿ ಮಾತಾಡಿದ್ದ. ಇದೇ ದಾಟಿಯಲ್ಲಿ 21 ವರ್ಷದ ಯುವಕ ಕ್ಯಾರಿ ಮೆನಾಟಿ ಕೂಡ ಟಿಕ್‌ಟಾಕ್ ಮಾಡುವವರನ್ನು ರೋಸ್ಟ್ ಮಾಡಿದ್ದನು. ಇದಕ್ಕೆ ಉತ್ತರವಾಗಿ ಟಿಕ್‌ಟಾಕ್ ಅಲ್ಲಿ ಅಮೀರ್ ಸಿದ್ದಿಕಿ ಮತ್ತು ರೆವೋಲ್ವರ್ ರಾಣಿ ಎಂಬುವವರು ಯೂಟ್ಯೂಬರ್ಸ್ ಮಾತುಗಳು ಹೇಗೆ ಜಾತೀಯತೆಯಿಂದ ಕೂಡಿದೆ ಹಾಗೂ ಮಹಿಳಾ ವಿರೋಧಿಯಾಗಿದೆ ಎಂದು ವಿಡಿಯೋಗಳನ್ನು ಮಾಡಿದರು. ಹೀಗೆ ಶುರುವಾಗಿದ್ದು ಈ ಸಮರ.

ಸರಿ ಇವರುಗಳ ಮಧ್ಯೆ ನಡೆಯುತ್ತಿರುವ ಈ ಆನ್‌ಲೈನ್ ಸಮರವನ್ನು ನಾವೇಕೆ ಚರ್ಚೆ ಮಾಡಬೇಕು? ವಿಷಯವಿದೆ. ಇದು ಕೇವಲ ಯಾರೋ ನಾಲ್ಕೈದು ಜನರ ಮಧ್ಯೆ ನಡೆಯುತ್ತಿರುವ ಜಗಳವಲ್ಲ ದೇಶದ ಕೋಟ್ಯಾಂತರ ಯುವಜನರು ಇದರಲ್ಲಿ ಎಂಗೇಜ್ ಆಗಿದ್ದಾರೆ. ಕ್ಯಾರಿ ಮಿನಾಟಿಯ ವಿಡಿಯೋಗಳು ಜಾಗತಿಕ ಮಟ್ಟದ ದಾಖಲೆಗಳನ್ನು ಬರೆಯುತ್ತಿದೆ! ಸಧ್ಯ ಆತನಿಗೆ ಯೂಟ್ಯೂಬ್‌ನಲ್ಲಿ ಸುಮಾರು 2.3 ಕೋಟಿ ಫಾಲೋವರ್ಸ್ ಇದ್ದು ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ನಲ್ಲಿ 50 ಲಕ್ಷಕ್ಕೂ ಹೆಚ್ಚು ಜನ ಫಾಲೋವರ್ಸ್ ಇದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾರಿಯ ಹೆಸರಿನ ಹ್ಯಾಶ್‌ಟ್ಯಾಗ್ ದೇಶದ ಟ್ರೆಂಡ್ ಆಗುತ್ತಿದ್ದ ಕಾರಣಕ್ಕೆ ಆತನ ವಿಡಿಯೋ ನೋಡಲು ಯೂಟ್ಯೂಬ್ ತೆರೆದೆ.

ಆತನ 12 ನಿಮಿಷದ ವಿಡಿಯೋ ಒಂದನ್ನು 2 ನಿಮಿಷವೂ ನೋಡಲು ಸಾಧ್ಯವಾಗಲಿಲ್ಲ. ವಿಚಿತ್ರವಾಗಿ ಅರಚುತ್ತಾ ಮಾತನಾಡುವ ಈತನ ಶೈಲಿ ಯುವಜನರಿಗೆ ಇಷ್ಟವಾಗಿಬಿಟ್ಟಿದೆ! ಯಾವುದೇ ವಿಷಯವಿರದೇ ಟಿಕ್‌ಟಾಕ್ ಮಾಡುವವರ ವಿಡಿಯೋಗಳನ್ನು ಇಟ್ಟುಕೊಂಡು ಅವಾಚ್ಯ, ಅಶ್ಲೀಲ ಪದಗಳಿಂದ ಅವರನ್ನು ವ್ಯಂಗ್ಯ ಮಾಡುವುದು ಈ ಯೂಟ್ಯೂಬರ್‌ಗಳ ವಿಡಿಯೋದ ಉದ್ದೇಶ. ಆತಂಕಕಾರಿ ವಿಚಾರವೆಂದರೆ ಜಾತಿ, ಧರ್ಮ, ಬಣ್ಣ, ಮೈಕಟ್ಟು, ಉಡುಪು, ಬಡತನ ಇವುಗಳೇ ಇವರಿಗೆ ಹಾಸ್ಯದ ವಸ್ತುಗಳು. ಇನ್ನೂ ಪ್ರಧಾನವಾದ ಟಾರ್ಗೆಟ್ ಎಂದರೆ ಟ್ರಾನ್ಸ್‌ಜೆಂಡರ್ ಮತ್ತು ಮಹಿಳೆಯರು ‘ಗೇ, ಚಕ್ಕಾ ಮತ್ತು ಹೆಣ್ಣು’ ಅನ್ನುವ ಪದಗಳನ್ನು ಬೈಯ್ಯುವುದಕ್ಕೆ ಸಲೀಸಾಗಿ ಬಳಸಲಾಗುತ್ತಿದೆ.

ಕ್ಯಾರಿ ಮೆನಾಟಿ

ಇದೆಲ್ಲಕ್ಕಿಂತ ಭಯಾನಕವಾದ ವಿಚಾರವೆಂದರೆ ಕ್ಯಾರಿ ಮೆನಾಟಿಯ ಈ ವಿಡಿಯೋ ಅಪ್ಲೋಡ್ ಮಾಡುತ್ತಿದ್ದಂತೆಯೇ 7.8 ಕೋಟಿ ಜನರು ವೀಕ್ಷಣೆ ಮಾಡಿದ್ದು ಅಲ್ಲದೆ ದೇಶದಲ್ಲಿ ಅತ್ಯಂತ ಹೆಚ್ಚು ಜನ ಲೈಕ್ ಮಾಡಿದ ಪಟ್ಟಿಗೆ ಸೇರಿದೆ. ಅದನ್ನು ಇದೀಗ ಯೂಟ್ಯೂಬ್ ಡಿಲೀಟ್ ಮಾಡಿದೆ. ಆದರೆ ಆ ವಿಡಿಯೋದ ವೇಗ ಎಷ್ಟಿತ್ತು ಎಂದರೆ 10 ಕೋಟಿ ದಾಟುವುದರಲ್ಲಿ ಯಾವುದೇ ಅನುಮಾನ ಇರಲಿಲ್ಲ. ಆತನ ಬೇರೆ ವಿಡಿಯೋಗಳು 10 ಕೋಟಿ ವೀಕ್ಷಣೆ ದಾಟಿವೆ.

2020 ಇಸವಿಯ ಈ ಕಾಲದಲ್ಲಿಯೂ ಜಾತಿ, ಧರ್ಮ, ಲಿಂಗದ ಆಧಾರದ ಮೇಲೆ ಬೇಧಬಾವ ಮಾಡುವುದು ಹಾಗಿರಲಿ ನೇರವಾಗಿ ವ್ಯಂಗ್ಯ ಮಾಡಲಾಗುತ್ತಿದೆ. ಹೀಗೆ ಹೇಳುವುದರಲ್ಲಿ ತಪ್ಪೇನಿದೆ ಎಂದೂ ಪ್ರಶ್ನೆ ಮಾಡುತ್ತಾರೆ ಮತ್ತು ಅದನ್ನು ಕೋಟ್ಯಾಂತರ ಜನರು ದಾಖಲೆ ಸೃಷ್ಟಿಯಾಗುವಂತೆ ಲೈಕ್ ಮಾಡಿ ಹಂಚಿಕೊಳ್ಳುತ್ತಿದ್ದಾರೆ. (ಅತ್ಯಂತ ಹೆಚ್ಚು ಲೈಕ್ ಪಡೆದ ನಾನ್ ಮ್ಯೂಸಿಕಲ್ ವಿಡಿಯೋ ಈಗ ಕ್ಯಾರಿ ಹೆಸರಲ್ಲಿದೆ!) ಇನ್ನೂ ವಿಚಿತ್ರವೆಂದರೆ ಮಹಿಳಾ ವಿರೋಧಿ, ಬಡತನವನ್ನು ವ್ಯಂಗ್ಯ ಮಾಡುವ ಇಂತಹ ವಿಡಿಯೋಗಳ ವಿರುದ್ಧ ಮಾತನಾಡಿದವರ ವಿಡಿಯೋಗಳಿಗೆ ದಾಳಿ ಇಟ್ಟು ಕೋಟ್ಯಾಂತರ ಡಿಸ್‌ಲೈಕ್ ಅನ್ನು ಮಾಡಲಾಗಿದೆ! ದಲಿತರು ಸತ್ತ ಪ್ರಾಣಿ ತಿಂದರು ಎನ್ನುವ ಕಾರಣಕ್ಕೆ, ಪ್ರೀತಿಸಿದ ಕಾರಣಕ್ಕೆ, ಅಂಬೇಡ್ಕರ್ ಅವರ ರಿಂಗ್ ಟೋನ್ ಇಟ್ಟುಕೊಂಡ ಕಾರಣಕ್ಕೆ ಮಾಬ್‌ಲಿಂಚಿಂಗ್ ನಡೆದು ಅವುಗಳನ್ನು ವಿಡಿಯೋ ಮಾಡಿ ಹಾಕುತ್ತಾ ಹಿಂಸೆಯನ್ನು ನಾರ್ಮಲೈಸ್ ಮಾಡುವ ಟ್ರೆಂಡ್‌ನ ಜೊತೆಗೆ ಇದೀಗ ಬಡ ಕೂಲಿ ಕಾರ್ಮಿಕರು, ದಲಿತರಿಗೆ ಸುಲಭಕ್ಕೆ ಸಿಗುತ್ತಿರುವ ವೇದಿಕೆಯಾಗಿರುವ ಟಿಕ್‌ಟಾಕ್ ವಿಡಿಯೋಗಳ ಮೇಲೆ ಮೇಲ್ವರ್ಗ ಮತ್ತು ಮಧ್ಯಮ ಮೇಲ್ವರ್ಗದ ಜನರು ಕೆಟ್ಟ ರೀತಿಯಲ್ಲಿ ದಾಳಿಗೆ ಇಳಿದಿದ್ದಾರೆ.

ವರ್ಚುವಲ್ ಡಾಮಿನೆನ್ಸ್

ಭಾರತದಂತಹ ದೇಶದಲ್ಲಿ ಶಿಕ್ಷಣದಿಂದ ಹಿಡಿದು ಮೂಲಭೂತ ಹಕ್ಕುಗಳೆಲ್ಲವೂ ಜಾತಿಯ ಅಧಾರದ ಮೇಲೆಯೇ ಅವಲಂಬಿತವಾಗಿತ್ತು. ತಳ ಸಮುದಾಯ-ವರ್ಗದ ಜನರ ಏಳಿಗೆಯನ್ನು ಬ್ರಾಹ್ಮಣಶಾಹಿ ವ್ಯವಸ್ಥೆ ಸಹಿಸಿದ್ದೇ ಇಲ್ಲ. ಇದೀಗ ಈ ಆನ್‌ಲೈನ್ ಸಮರದ ಮುಖಾಂತರ ಇದು ಮತ್ತೊಮ್ಮೆ ಸಾಬೀತಾಗಿದೆ. ಯೂಟ್ಯೂಬ್ ವಿಡಿಯೋಗಳನ್ನು ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ, ಕ್ಯಾಮೆರ ಲೈಟ್ಸ್, ಲೊಕೇಷನ್ ಇತ್ಯಾದಿಗಳಿಗೆ ಒಂದಷ್ಟು ಹಣ ಕೂಡ ಬೇಕಾಗುತ್ತದೆ. ಅಲ್ಲದೆ ಕೆಲವು ಸಾಫ್ಟ್ವೇರ್, ವಿಡಿಯೋ ಎಡಿಟಿಂಗ್ ಮಾಹಿತಿಗಳು ತಿಳಿದಿರಬೇಕಾಗುತ್ತದೆ. ಆದರೆ ದಿನಗೂಲಿ ಮಾಡುವ ಕೆಳವರ್ಗದ ಜನರ ಬಳಿ ಅಷ್ಟು ಸಮಯ, ಹಣ, ಸಾಫ್ಟ್ವೇರ್‌ನ ಅರಿವು ಇರುವುದು ತೀರ ಅಪರೂಪ. ಹಾಗಾಗಿ ಟಿಕ್‌ಟಾಕ್ ಅಂತ ಮಾಧ್ಯಮ ಇಂತಹ ವರ್ಗದ ಜನರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಒಂದು ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ತರಕಾರಿ ಮಾರುವವರು, ಬಣ್ಣ ಬಳಿಯುವವರು, ಗಾರೆ ಕೆಲಸದವರು, ಇವರುಗಳ ವಿಡಿಯೋ ರಾತ್ರಿ ಕಳೆಯುದರಲ್ಲಿ ವೈರಲ್ ಆಗಿಬಿಡುತ್ತದೆ. ಲಕ್ಷಾಂತರ ಜನರು ಫಾಲೋ ಮಾಡಲು ಶುರು ಮಾಡಿಬಿಡುತ್ತಾರೆ. ಮಧ್ಯಮ, ಮೇಲ್ಮಧ್ಯಮ ವರ್ಗ ಹಾಗೂ ನಗರ ಪ್ರದೇಶದವರೆ ಹಿಡಿತ ಸಾಧಿಸಿರುವ ಇನ್ಸ್ಟಾಗ್ರಾಮ್ ಯೂಟ್ಯೂಬ್ ನಂತಹ ಆಪ್‌ಗಳಿಂದ ಏಕಸ್ವಾಮ್ಯ ಮುರಿದ ಟಿಕ್‌ಟಾಕ್ ಗ್ರಾಮೀಣ ಪ್ರದೇಶದ ತಳಸಮುದಾಯದ ಜನರು ಸ್ಟಾರ್ ಆಗುವಂತೆ ಮಾಡಿತು. ಆ ನಿಟ್ಟಿನಲ್ಲಿ ಇದೊಂದು ವರ್ಗ ಸಂಘರ್ಷದ ರೂಪಕವೂ ಆಗಿದೆ. ಹಾಗಾಗಿ ಮೇಲು ವರ್ಗದ ಜನ ತಳಸಮುದಾಯಗಳಿಗೆ ಸಿಗುತ್ತಿರುವ ಈ ವೇದಿಕೆಯನ್ನು ನಗಣ್ಯ ಮಾಡಿ ತಮ್ಮ ಅಧಿಪತ್ಯವನ್ನು ಉಳಿಸಿಕೊಳ್ಳುವ ವರ್ಚುವಲ್ ಪ್ರಯತ್ನ ಈ ಆನ್‌ಲೈನ್ ಸಮರ.

ಇದೀಗ ಭಾರತದಲ್ಲಿ ಬ್ಯಾನ್ ಆಗಿರುವ ಟಿಕ್‌ಟಾಕ್ ಹೆಚ್ಚು ಅಡ್ಡಪರಿಣಾಮಗಳಿಂದಲೇ ಕೂಡಿದೆ. ತಜ್ಞರ ಪ್ರಕಾರ ಇದು ಅಡಿಕ್ಟಿವ್ ಆಗಿದೆ ಮತ್ತು ಮುನುಷ್ಯರು ಈಗಾಗಲೇ ಗಮನ ಕೇಂದ್ರಿಕರಿಸುವ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ ಇದಕ್ಕೆ ಟಿಕ್‌ಟಾಕ್ ಮತ್ತಷ್ಟು ಅಪಾಯಕಾರಿಯಾಗಿ ಕೆಲಸಮಾಡುತ್ತದೆ. ಅಲ್ಲದೆ ಇದು ಅಷ್ಟು ಗಂಭೀರವಾದ ವೇದಿಕೆ ಅಲ್ಲ ಹಾಗೂ ಇಲ್ಲಿ ಜ್ಞಾನ ಸಂಪಾದನೆಗೂ ಅವಕಾಶಗಳಿಲ್ಲ. ವೈಯಕ್ತಿವಾಗಿ ನಾನು ಟಿಕ್‌ಟಾಕ್ ಅನ್ನು ಶಿಫಾರಸ್ಸು ಮಾಡುವುದಿಲ್ಲ ಕೂಡ.

ಆದರೆ ಈ ಸಂಘರ್ಷದಲ್ಲಿ ತಾನು ಹೇಳಲು ಆಗದೇ ಇರುವುದನ್ನು ಕ್ಯಾರಿಮೆನಾಟಿ ಅಂಥವರು ಹೇಳುತ್ತಿದ್ದಾರೆ ಎಂದು ಭಾವಿಸಿ ಖುಷಿಯಿಂದ ಇಂತಹ ವಿಡಿಯೋಗಳಿಗೆ ಹೆಚ್ಚು ಪ್ರಚಾರ ಕೊಡುತ್ತಿರುವ ಕೋಟ್ಯಾಂತರ ಯುವಜನರು ತಮಗೆ ಅರಿವಿಲ್ಲದೇ (ಅರಿವಿದ್ದೂ?) ಜಾತೀಯತೆಯನ್ನು, ವರ್ಣಭೇದವನ್ನು, ಪುರುಷಾಧಿಪತ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಹಿಂಸೆಯನ್ನು ಸಾಮಾನ್ಯೀಕರಿಸುತ್ತದ್ದಾರೆ. ಇದು ನಿಧಾನಕ್ಕೆ ನ್ಯೂ ನಾರ್ಮಲ್ ಆಗುವ ಅಪಾಯವೂ ಇದೆ. ಬಾಲಿವುಡ್‌ನ ನೆಪೋಟಿಸಮ್ ಕುರಿತು ನಡೆದ ಚರ್ಚೆಯಲ್ಲಿಯೂ ಸಹ ಕಂಗನಾ ರಣಾವತ್ ಮಾಡಿದ ವಿಡಿಯೋಗಿಂತ ಅಶ್ಲೀಲ ಪದಗಳನ್ನೇ ಮಾತನಾಡಿ ವಿಡಿಯೋ ಮಾಡಿದ ಬಿಹಾರದ ಮುಸುಕುಧಾರಿ ಮಹಿಳೆಯ ವಿಡಿಯೋನೇ ಹೆಚ್ಚು ವೈರಲ್ ಆಗಿದ್ದು ಆತಂಕಕಾರಿಯಾಗಿದೆ.

ಹೋರಾಟ ಪ್ರತಿಭಟನೆಗಳು ನೂರಾರು ಜನರನ್ನು ತಲುಪಲು ಕಷ್ಟವಾಗುತ್ತಿರುವ ಈ ಕಾಲದಲ್ಲಿ ಕೋಟ್ಯಾಂತರ ಜನರನ್ನು ಹಿಂಸೆಯನ್ನು ಸಮರ್ಥಿಸುವ ಕೆಲಸದಲ್ಲಿ ಈ ಮಾಧ್ಯಮ ಹಾಗೂ ಕೆಲವು ವ್ಯಕ್ತಿಗಳು ಮಾಡಿದ್ದಾರೆ. ನಾವು ಗಮನಿಸಬೇಕಾದ ಬಹುಮುಖ್ಯ ಅಂಶವೆಂದರೆ ಯುವಜನರ ಅಗಾಧವಾದ ಸಾಮರ್ಥ್ಯ. ಹೆಸರೇ ಗೊತ್ತಿಲ್ಲದ 20ರ ಹರೆಯದ ಹುಡುಗನನ್ನು ದೇಶದ ಸುದ್ಧಿಯನ್ನಾಗಿ ಮಾಡಿದ್ದು ಇದೇ ಯುವಜನರು. ಸಾಮಾನ್ಯ ಜನರನ್ನು ವ್ಯಂಗ್ಯ ಮಾಡಬೇಡಿ ನಮ್ಮನ್ನು ಮೋಸಗೊಳಿಸುತ್ತಿರುವ ರಾಜಕಾರಣಿಗಳನ್ನ ವ್ಯಂಗ್ಯ ಮಾಡಿ ಎಂದ ವ್ಯಕ್ತಿಯ ಮೇಲೆ ಮೆನಾಟಿಯ ಅಭಿಮಾನಿಗಳು ಮುಗಿಬಿದ್ದರು. ಟಿಕ್‌ಟಾಕ್‌ನ ರೇಟಿಂಗ್ ಅನ್ನು 2ಕ್ಕೆ ಇಳಿಸಿಬಿಟ್ಟಿದ್ದರು. ಇದಕ್ಕಾಗಿ ‘ಸಂಘಟಿತ’ ದಾಳಿ ಮಾಡಿದ್ದರು. ಪ್ರತಿಗಾಮಿ ವಿಚಾರಕ್ಕೆ ಪ್ರೇರೇಪಿತರಾಗಿರುವ ಈ ಶಕ್ತಿಯ ಮಧ್ಯೆ ಪ್ರೀತಿ ಸಮಾನತೆಯನ್ನು ವೈರಲ್ ಮಾಡುವ ಬಹುದೊಡ್ಡ ಸವಾಲು ನಮ್ಮ ಮುಂದಿದೆ.


ಇದನ್ನೂ ಓದಿ: ಬೆಂಗಳೂರು ಭೇಲ್1: ಸಿಲಿಕಾನ್ ಸಿಟಿಯಲ್ಲಿ ಡಿಜಿಟಲ್ ಡಿವೈಡ್  

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...