ಇಸ್ರೇಲ್‌ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಸಂಸತ್ತಾದ ನೆಸೆಟ್ ಅನ್ನು ಉದ್ದೇಶಿಸಿ ಮಾತನಾಡುವಾಗ ಗಾಝಾ ನರಮೇಧವನ್ನು ಉಲ್ಲೇಖಿಸಿ ನ್ಯಾಯಕ್ಕಾಗಿ ಆಗ್ರಹಿಸಬೇಕು ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬುಧವಾರ (ಫೆ.25) ಪೋಸ್ಟ್ ಹಾಕಿರುವ ಅವರು, “ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್ ಪ್ರವಾಸದ ವೇಳೆ ಅಲ್ಲಿನ ಸಂಸತ್ತನ್ನು ಉದ್ದೇಶಿಸಿ ಮಾತನಾಡುವಾಗ ಗಾಝಾದಲ್ಲಿ ನಡೆಸಿದ ಪುರುಷರು, ಮಹಿಳೆಯರು ಮತ್ತು ಮಕ್ಕಳ ಸೇರಿದಂತೆ ಸಾವಿರಾರು ಮುಗ್ಧ ಜನರ ನರಮೇಧವನ್ನು ಉಲ್ಲೇಖಿಸುತ್ತಾರೆ ಮತ್ತು ಅವರಿಗೆ ನ್ಯಾಯ ಕೋರುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
ಮುಂದುವರಿದು, “ಸ್ವತಂತ್ರ ರಾಷ್ಟ್ರವಾಗಿ ನಮ್ಮ ಇತಿಹಾಸದುದ್ದಕ್ಕೂ ಭಾರತ ಸತ್ಯದ ಪರ ನಿಂತಿದೆ. ನಾವು ಜಗತ್ತಿಗೆ ಸತ್ಯ, ಶಾಂತಿ ಮತ್ತು ನ್ಯಾಯದ ಬೆಳಕನ್ನು ತೋರಿಸುವುದನ್ನು ಮುಂದುವರಿಸಬೇಕು” ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಫೆ.25 ಮತ್ತು 26ರಂದು ಇಸ್ರೇಲ್‌ಗೆ ಎರಡು ದಿನಗಳ ಅಧಿಕೃತ ಭೇಟಿ ನೀಡುತ್ತಿದ್ದಾರೆ. ಇದು ಪ್ರಧಾನಿಯಾಗಿ ಮೋದಿಯವರ ಎರಡನೇ ಇಸ್ರೇಲ್ ಪ್ರವಾಸವಾಗಿದೆ.
ಈ ಸಂದರ್ಭದಲ್ಲಿ ಮೋದಿ ಅವರು ಇಸ್ರೇಲ್ ಸಂಸತ್ ಆದ ನೆಸೆಟ್ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೆ, ರಕ್ಷಣೆ, ಭದ್ರತೆ, ತಂತ್ರಜ್ಞಾನ (ಎಐ ಮತ್ತು ಸೈಬರ್ ಸೆಕ್ಯುರಿಟಿ), ಕೃಷಿ ಮತ್ತು ನೀರಿನ ನಿರ್ವಹಣೆಯ ಕ್ಷೇತ್ರಗಳಲ್ಲಿನ ಸಹಕಾರದ ಕುರಿತು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ.


