ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಕಳೆದ 14 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಚಳಿ, ಮಳೆಯನ್ನೂ ಲೆಕ್ಕಿಸದ ರೈತರ ಬೆಂಬಲಕ್ಕೆ ಹಲವಾರು ಮಂದಿ ಸಹಾಯಹಸ್ತ ಚಾಚಿದ್ದಾರೆ. ಪಂಜಾಬ್‌ನ ಒಂದು ಕುಟುಂಬ ಇದಕ್ಕೂ ಮುಂದೆ ಹೋಗಿ, ಮದುವೆಯಲ್ಲಿ ಉಡುಗೊರೆಗಳ ಬದಲು ರೈತರಿಗಾಗಿ ದೇಣಿಗೆ ಸಂಗ್ರಹ ಮಾಡಿದೆ.
ಮದುವೆಗೆ ಬಂದ ಸಂಬಂಧಿಕರು, ಸ್ನೇಹಿತರು ಹಾಗೂ ಅತಿಥಿಗಳಿಂದ ವಿವಾಹದ ಉಡುಗೊರೆಗಳ ಬದಲಾಗಿ ಈ ದೇಣಿಗೆ ಹಣ ಸಂಗ್ರಹಕ್ಕೆ ಮುಂದಾಗಿದೆ. ವೇದಿಕೆಯ ಮುಂದೆಯೇ ವಿಶೇಷ ದೇಣಿಗೆ ಪೆಟ್ಟಿಗೆಯನ್ನು ಸ್ಥಾಪಿಸಿ, ಉದಾರವಾಗಿ ದೇಣಿಗೆ ನೀಡುವಂತೆ ಮನವಿ ಮಾಡಿದ್ದಾರೆ.
ಮದುವೆ ಸಮಾರಂಭದಲ್ಲಿ ಆಯೋಜಿಸಲಾಗಿದ್ದ ಡಿಜೆ ಸಂಗೀತ ಕಾರ್ಯಕ್ರಮದ ವೇದಿಕೆಯಿಂದ ವ್ಯಕ್ತಿಯೊಬ್ಬರು ’ “ದಂಪತಿಗಳಿಗೆ ‘ಶಾಗುನ್’ (ಮುಯ್ಯಿ) ಹಣವನ್ನು ನೀಡುವ ಬದಲು, ದಯವಿಟ್ಟು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗಾಗಿ ಹಣ ನೀಡಿ. ಈ ಹಣವನ್ನು ರೈತರಿಗೆ ಆಹಾರ, ಬೆಚ್ಚಗಿನ ಬಟ್ಟೆ ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸಲು ಬಳಸಲಾಗುತ್ತದೆ” ಎಂದು ತಿಳಿಸುತ್ತಿದ್ದಾರೆ.
ಇದನ್ನೂ ಓದಿ: ಭಾರತ್ ಬಂದ್: ಇದು ರೈತರು-ಕಾರ್ಪೋರೇಟ್ ಕಂಪನಿಗಳ ನಡುವಿನ ಹೋರಾಟ – AIKSCC
A Family Says No To Wedding Gifts, Keeps Donation Box For Farmers. #FarmersProtest2020#भारत_बंद_सफल_रहा #FarmBills pic.twitter.com/sT0dz0iQr8
— Dapinder Singh (@Dapindr) December 8, 2020
ಚಂಡಿಗಢದಿಂದ 250 ಕಿಲೋಮೀಟರ್ ದೂರದಲ್ಲಿರುವ ಪಂಜಾಬ್‌ನ ಮುಕ್ತ್ಸರ್ನಲ್ಲಿ ನಡೆದ ವಿವಾಹ ಸಮಾರಂಬದಲ್ಲಿ ಈ ವಿಶೇಷ ಘಟನೆ ನಡೆದಿದೆ.
ಇತ್ತಿಚೆಗೆ ಬಾಲಿವುಡ್ ನಟ, ಗಾಯಕ ದಿಲ್ಜಿತ್ ದೋಸಾಂಜ್, ಕೊರೆಯುವ ಚಳಿಯಲ್ಲೂ ಕೇಂದ್ರ ಸರ್ಕಾರದ ದೌರ್ಜನ್ಯಗಳಿಗೆ ಜಗ್ಗದೆ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಸ್ಪೆಟರ್, ಜ್ಯಾಕೆಟ್, ಹೊದಿಕೆ ಸೇರಿದಂತೆ ಬೆಚ್ಚಗಿನ ಬಟ್ಟೆಗಳನ್ನು ಕೊಳ್ಳಲು ಒಂದು ಕೋಟಿ ರೂಪಾಯಿ ಸಹಾಯ ಹಸ್ತ ಚಾಚಿದ್ದರು.
ಕೃಷಿ ಮಸೂದೆಗಳನ್ನು ವಿರೋಧಿಸಿರುವ ಪ್ರತಿಭಟನಾ ನಿರತ ರೈತರು ಮತ್ತು ಕೇಂದ್ರದ ನಡುವೆ ಹಲವಾರು ಸುತ್ತಿನ ಮಾತುಕತೆ ನಡೆದಿದೆ. ಆದರೆ, ಇಲ್ಲಿಯವರೆಗೆ ಕೇಂದ್ರ ಸಚಿವರು, ಕೃಷಿ ಮಸೂದೆಗಳು ರೈತರ ಪರವಾಗಿವೆ ಎಂದು ಸರ್ಮರ್ಥಿಸಲು ಸಫಲರಾಗಿಲ್ಲ.
ಸೆಪ್ಟೆಂಬರ್‌ನಲ್ಲಿ ಜಾರಿಗೆ ಬಂದ ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಪಡಿಸಲೇ ಬೇಕು ಎಂದು ಪ್ರತಿಭಟನಾ ನಿರತ ರೈತ ಸಂಘಟನೆಗಳು ಆಗ್ರಹಿಸಿವೆ.


