ಪಂಜಾಬ್‌ನಲ್ಲಿ ಭಾರೀ ಪ್ರವಾಹದಿಂದ ಇದುವರೆಗೆ 37 ಜನರು ಪ್ರಾಣ ಕಳೆದುಕೊಂಡಿದ್ದು, 23 ಜಿಲ್ಲೆಗಳಲ್ಲಿ ಜನ ಜೀವನ ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿದೆ. ವರದಿಗಳ ಪ್ರಕಾರ, 1988ರ ನಂತರ ರಾಜ್ಯ ಎದುರಿಸಿದ ಅತ್ಯಂತ ಭೀಕರ ಪ್ರವಾಹ ಇದಾಗಿದೆ. ನಿರಂತರ ಸುರಿಯುತ್ತಿರುವ ಮಳೆ ಪರಿಸ್ಥಿತಿಯನ್ನು ಇನ್ನಷ್ಟು ಹದೆಗೆಡಿಸಿದೆ.
ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರದ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಸಟ್ಲೆಜ್, ಬಿಯಾಸ್ ಮತ್ತು ರಾವಿ ನದಿಗಳು ಮತ್ತು ಕಾಲೋಚಿತ ಹೊಳೆಗಳು ಉಕ್ಕಿ ಹರಿದಿವೆ. ಇದರಿಂದ ಭೀಕರ ಪ್ರವಾಹ ಉಂಟಾಗಿದೆ.
ಗುರುದಾಸ್ಪುರ, ಪಠಾಣ್‌ಕೋಟ್ ಫಝಿಲ್ಕಾ, ಕಪುರ್ಥಲಾ, ತರಣ್ ತರಣ್, ಫಿರೋಝ್‌ಪುರ, ಹೋಶಿಯಾರ್‌ಪುರ್ ಮತ್ತು ಅಮೃತಸರ ಜಿಲ್ಲೆಗಳಲ್ಲಿ ಹಲವು ಗ್ರಾಮಗಳು ಮುಳುಗಡೆಯಾಗಿವೆ.
ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಸುರಕ್ಷತೆ ದೃಷ್ಠಿಯಿಂದ ಸರ್ಕಾರಿ, ಅನುದಾನಿತ, ಮತ್ತು ಖಾಸಗಿ ಶಾಲಾ- ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಪಾಲಿಟೆಕ್ನಿಕ್ ಸಂಸ್ಥೆಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಸೆಪ್ಟೆಂಬರ್ 7 ರವರೆಗೆ ಮುಚ್ಚಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಪಂಜಾಬ್ ಸಚಿವ ಸಂಪುಟದ ಸಚಿವರು, ಆಮ್ ಆದ್ಮಿ ಪಕ್ಷದ (ಎಎಪಿ) ಹಿರಿಯ ನಾಯಕ ಹಾಗೂ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರೊಂದಿಗೆ ತರಣ್ ತರಣ್ ಜಿಲ್ಲೆಯಲ್ಲಿ ಬಿಯಾಸ್ ನದಿ ತೀರದ ಹಳ್ಳಿಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಪರಿಹಾರ ಕಾರ್ಯಗಳ ಕುರಿತು ಸ್ಥಳೀಯ ಜನರೊಂದಿಗೆ ಸಂಪುಟ ಸಚಿವರು ಮತ್ತು ಎಎಪಿ ನಾಯಕರು ಚರ್ಚೆ ನಡೆಸಿದ್ದಾರೆ.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಗುರುವಾರ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಸಚಿವರು ಅಮೃತಸರ, ಗುರುದಾಸ್ಪುರ ಮತ್ತು ಕಪುರ್ಥಲಾ ಜಿಲ್ಲೆಗಳ ಹಳ್ಳಿಗಳಿಗೆ ಭೇಟಿ ನೀಡಿ ಸಂತ್ರಸ್ತ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.
वाहेगुरु जी मदद करें 🙏🏻
Disheartening to see the devastating floods in Punjab which have brought immense loss and pain to countless families 💔🌊
My prayers are with those affected and everyone helping in relief and support to the affected communities 🙏
Together, with… pic.twitter.com/c1CiOhxK0j
— Sonal Goel IAS 🇮🇳 (@sonalgoelias) September 1, 2025
ಸಚಿವ ಚೌಹಾಣ್ ಅವರು ರಾಜ್ಯದ ಅಧಿಕಾರಿಗಳೊಂದಿಗೆ ಬೆಳೆ ಹಾನಿಯ ಪ್ರಮಾಣವನ್ನು ಪರಿಶೀಲಿಸಲಿದ್ದಾರೆ ಮತ್ತು ರೈತರಿಗೆ ನೆರವು ನೀಡಲು ಕ್ರಮಗಳನ್ನು ರೂಪಿಸಲಿದ್ದಾರೆ ಎಂದು ವರದಿಗಳು ವಿವರಿಸಿವೆ.
ಪ್ರವಾಹದಿಂದ 1.48 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಭೂಮಿಯ ಬೆಳೆಗಳು ನಾಶವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇನಾ ತಂಡಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿವೆ. ಹಳ್ಳಿಗಳಿಗೆ ಆಹಾರ, ಮೇವನ್ನು ಸಾಗಿಸುವ ಮತ್ತು ಮತ್ತಷ್ಟು ಪ್ರವಾಹವನ್ನು ತಡೆಗಟ್ಟಲು ಪ್ರಮುಖ ನೀರಿನ ಕಾಲುವೆಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತವಾಗಿವೆ.
ಅಂಗೋಸ್ ಮತ್ತು ಸಿಖ್ ಸಂಘಟನೆಗಳು ಅಕ್ಕಿ, ಬೇಳೆಕಾಳುಗಳು, ಸಾಸಿವೆ ಎಣ್ಣೆ, ಬಿಸ್ಕತ್ತುಗಳು, ಗೋಧಿ ಹಿಟ್ಟು, ಔಷಧಿ ಮತ್ತು ಜಾನುವಾರು ಮೇವು ಸೇರಿದಂತೆ ಒಣ ಪಡಿತರವನ್ನು ಒದಗಿಸುತ್ತಿವೆ.
ಜಿಲ್ಲಾಡಳಿತಗಳು ಸಂತ್ರಸ್ತರಿಗಾಗಿ ಪರಿಹಾರ ಶಿಬಿರಗಳನ್ನು ಸ್ಥಾಪಿಸಿದ್ದರೂ, ಅನೇಕ ಗ್ರಾಮಸ್ಥರು ತಮ್ಮ ಮನೆಗಳಲ್ಲಿಯೇ ಉಳಿಯುವ ನಿರ್ಧಾರ ಮಾಡಿಕೊಂಡಿದ್ದಾರೆ. ಜಾನುವಾರು ಆಶ್ರಯಗಳು ಪ್ರವಾಹಕ್ಕೆ ಸಿಲುಕಿರುವ ಪ್ರದೇಶಗಳಲ್ಲಿ ಜನರು ತಮ್ಮ ಮನೆಗಳ ಛಾವಣಿ ಸೇರಿದಂತೆ ಎತ್ತರದ ಪ್ರದೇಶಗಳಿಗೆ ಜಾನುವಾರುಗಳನ್ನು ಸ್ಥಳಾಂತರಿಸಿದ್ದಾರೆ.
ಪಂಜಾಬ್ ಸರ್ಕಾರವು ಹಾನಿಯನ್ನು ನಿರ್ಣಯಿಸಲು ವಿಶೇಷ ‘ಗಿರ್ದಾವರಿ’ (ನಷ್ಟದ ಮೌಲ್ಯಮಾಪನ) ಅನ್ನು ಪ್ರಾರಂಭಿಸಿದೆ ಮತ್ತು ಪ್ರತೀ ಹಾನಿಗೂ ನಷ್ಟ ಪರಿಹಾರ ನೀಡುವುದಾಗಿ ಹೇಳಿದೆ.
“ದೇಶವು ಬಿಕ್ಕಟ್ಟನ್ನು ಎದುರಿಸಿದಾಗಲೆಲ್ಲಾ, ಪಂಜಾಬ್ ದೇಶದ ಜೊತೆ ನಿಂತಿದೆ. ಅದು ಹಸಿರು ಕ್ರಾಂತಿಯ ಸಮಯವಾಗಿರಬಹುದು ಅಥವಾ ಸ್ವಾತಂತ್ರ್ಯ ಹೋರಾಟದ ಸಮಯವಾಗಿರಬಹುದು. ನಾವು ಗರಿಷ್ಠ ತ್ಯಾಗಗಳನ್ನು ಮಾಡಿದ್ದೇವೆ. ಇಂದು, ಪಂಜಾಬ್ ಬಿಕ್ಕಟ್ಟಿನಲ್ಲಿದೆ, ದೇಶವು ನಮ್ಮ ಬೆಂಬಲಕ್ಕೆ ನಿಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಫಿರೋಜ್‌ಪುರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದ್ದಾರೆ.
ಉತ್ತರಾಖಂಡ: ಮಳೆಯಿಂದ 5,000 ಕೋಟಿ ರೂ. ನಷ್ಟ, ಕೇದಾರನಾಥ ದುರಂತದ ನಂತರದ ಅತಿ ದೊಡ್ಡ ಆರ್ಥಿಕ ಹಿನ್ನಡೆ


