ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವ ಈಶ್ವರ ಖಂಡ್ರೆ ಅವರ ಬಣ್ಣದ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಮಾಜಿ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ತೀರ್ಥಹಳ್ಳಿಯಲ್ಲಿ ದೂರು ದಾಖಲಾಗಿದೆ.
ಆ ಭಾಗದವರು ಸುಟ್ಟು ಕರಕಲಾಗಿರುತ್ತಾರೆ, ಖರ್ಗೆ ಅವರನ್ನು ನೋಡಿದರೆ ಅಲ್ಲಿನವರ ಸ್ಥಿತಿ ಗೊತ್ತಾಗುತ್ತದೆ ಎಂದು ನಾಲಿಗೆ ಹರಿಬಿಟ್ಟಿದ್ದ ಆರಗ ಜ್ಞಾನೇಂದ್ರ ವಿರುದ್ಧ ತೀರ್ಥಹಳ್ಳಿಯ ದಲಿತ ಮುಖಂಡರಾದ ಪಡುವಳ್ಳಿ ಹರ್ಷೇಂದ್ರ ಕುಮಾರ್ ಎನ್ನುವವರು ದೂರು ನೀಡಿದ್ದಾರೆ.
“ರಾಷ್ಟ್ರೀಯ ಪಕ್ಷವೊಂದರ ನಾಯಕರ ಮೈಬಣ್ಣದ ಬಗ್ಗೆ ಕೀಳಾಗಿ ಮಾತನಾಡಿದ ಜ್ಞಾನೇಂದ್ರರ ಹೇಳಿಕೆಯಿಂದ ನನ್ನ ಮನಸ್ಸಿಗೆ ನೋವಾಗಿದೆ. ನನ್ನ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ, ಪರಿಶಿಷ್ಟ ಜಾತಿ ದೌರ್ಜನ್ಯ ಕಾಯ್ದೆಯನ್ವಯ ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆ ಮಾಡಿರುವುದು ಶಿಕ್ಷಾರ್ಹ ಅಪರಾಧವಾಗಿದೆ. ಕೂಡಲೇ ಶಾಸಕರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.
“ಅವರಿಗೆ ಮರ-ಗಿಡ ಎನ್ನುವುದರ ಬಗ್ಗೆ ಗೊತ್ತಿಲ್ಲ. ಮರದ ನೆರಳಿನ ಮಹತ್ವ ಗೊತ್ತಿಲ್ಲ. ಸುಟ್ಟು ಕರಕಲಾದಂತೆ ಇರ್ತಾರೆ…, ನಮ್ಮ ಖರ್ಗೆಯವರನ್ನ ನೋಡಿದ್ರೇ ಗೊತ್ತಾಗುತ್ತೆ. ಪಾಪ.., ತಲೆ ಕೂದಲು ಮುಚ್ಚಿಕೊಂಡಿದ್ದಕ್ಕೆ ಸ್ವಲ್ಪ ಉಳಿದುಕೊಂಡಿದ್ದಾರೆ. ಅದೇ ನೆರಳು ಅವರಿಗೆ. ಮಲೆನಾಡು ಮತ್ತು ಪಶ್ಚಿಮಘಟ್ಟದ ಬದುಕು ಅವರಿಗೆ ಗೊತ್ತಿಲ್ಲ..” ಎಂದು ಭಾಷಣವೊಂದರಲ್ಲಿ ವರ್ಣ ಭೇದದ ಮಾತನಾಡಿದ ಆರಗ ಜ್ಞಾನೇಂದ್ರ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.
ಕ್ಷಮೆ ಯಾಚಿಸಿದ ಆರಗ ಜ್ಞಾನೇಂದ್ರ
“ನನ್ನನ್ನು ಯಾರೂ ತಪ್ಪು ತಿಳಿಯಬಾರದು. ನಾನು ಮಲೆನಾಡಿನ ಪಾಲಿಗೆ ಮರಣ ಶಾಸನವಾಗಿರುವಕಸ್ತೂರಿ ರಂಗನ್ ವರದಿಯನ್ನು ಟೀಕಿಸುತ್ತಾ, ಅರಣ್ಯ ಸಚಿವ ಈಶ್ವರ್ ಖಂಡಿಸುವ ಭರದಲ್ಲಿ ಖರ್ಗೆಯವರ ಹೆಸರನ್ನು ಹೇಳಿದೆ. ಈ ಕುರಿತು ನಡೆದ ತಪ್ಪಿಗೆ ನಾನು ಖರ್ಗೆಯವರ ಕ್ಷಮೆಯಾಚಿಸುತ್ತೇನೆ” ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಮಾತಾಡುವ ಭರದಲ್ಲಿ ಆರಗ ಜ್ಞಾನೇಂದ್ರ ಬಣ್ಣದ ಬಗ್ಗೆ ಮಾತನಾಡಿದ್ದಾರೆ. ಹಾಗಾಗಿ ಬಿಜೆಪಿ ಪಕ್ಷದ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ಕಾಂಗ್ರೆಸ್ ಈ ವಿಷಯವನ್ನು ದೊಡ್ಡದು ಮಾಡಬಾರದು ಎಂದು ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಆರಗ ಜ್ಞಾನೇಂದ್ರ ಹೇಳಿಕೆಯನ್ನು ಬಿಜೆಪಿ ನಾಯಕರು ಖಂಡಿಸಿಲ್ಲವೇಕೆ? – ಕಿಮ್ಮನೆ ರತ್ನಾಕರ್ ಪ್ರಶ್ನೆ


