Homeಮುಖಪುಟಬರಗೂರು ರಾಮಚಂದ್ರಪ್ಪನವರ ’ಕಾಗೆ ಕಾರುಣ್ಯದ ಕಣ್ಣು’ ಬಿಡುಗಡೆಯಲ್ಲಿ ಕೆ.ವಿ. ನಾರಾಯಣ ಅವರ ಮಾತುಗಳು (ಭಾಗ-1)

ಬರಗೂರು ರಾಮಚಂದ್ರಪ್ಪನವರ ’ಕಾಗೆ ಕಾರುಣ್ಯದ ಕಣ್ಣು’ ಬಿಡುಗಡೆಯಲ್ಲಿ ಕೆ.ವಿ. ನಾರಾಯಣ ಅವರ ಮಾತುಗಳು (ಭಾಗ-1)

- Advertisement -
- Advertisement -

ಬರಗೂರು ಅವರು ಒಂದು ವರ್ಷ ಜೊತೆಯಲ್ಲಿ ಓದಿದವರು. ಅವರು ಸೀನಿಯರ್ ಎಂ.ಎ. ಮಾಡುತ್ತಿದ್ದಾಗ ನಾನು ಜೂನಿಯರ್ ಎಂ.ಎ. ಮಾಡುತ್ತಿದ್ದೆ. ನನ್ನ ಆಪ್ತ ಗೆಳೆಯರಾಗಿರುವವರಲ್ಲಿ ಅವರೂ ಒಬ್ಬರು. ಅವರು ಎಂ.ಎ. ಓದುತ್ತಿದ್ದಾಗ ಅವರಿನ್ನೂ ಬರಗೂರು ರಾಮಚಂದ್ರಪ್ಪ ಆಗಿರಲಿಲ್ಲ. ಬರೀ ಬಿ. ರಾಮಚಂದ್ರಪ್ಪ ಆಗಿದ್ದರು. ಆಗ ಒಂದು ಪ್ರವೃತ್ತಿ ಇತ್ತು. ಊರ ಹೆಸರನ್ನು ತಮ್ಮ ಹೆಸರಿಗೆ ಲಗತ್ತಿಸಿಕೊಳ್ಳುವಂತಹ ಪ್ರವೃತ್ತಿ. ಆಗ, ಒಂದೆರಡು ವಿಚಿತ್ರವಾದ ಪ್ರಸಂಗಗಳು ನಡೆದವು. ಅದು ಬರಗೂರು ಅವರಿಗೆ ನೆನಪಿದೆಯೊ ಇಲ್ಲವೊ. ಸುಮಾರು ಎಪ್ಪತ್ತೆರಡು ಎಪ್ಪತ್ತಮೂರರಲ್ಲಿ ಅನ್ನಿಸುತ್ತದೆ. ಶಿರಾ ಅಥವ ಮಧುಗಿರಿಯ ಸುತ್ತಮುತ್ತ ಇರಬಹುದು, ಅಲ್ಲಿ ಕಾಂಗ್ರೆಸ್ ಸಮಿತಿಯ ಸದಸ್ಯನೋ ಕಾರ್ಯದರ್ಶಿಯೋ ಬರಗೂರು ರಾಮಚಂದ್ರಪ್ಪ ಅನ್ನೋರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಅನ್ನುವ ವಾರ್ತೆ ಪ್ರಜಾವಾಣಿಯಲ್ಲಿ ಬಂದಿತ್ತು. ಆಗ ಬರಗೂರು ರಾಮಚಂದ್ರಪ್ಪನವರು ಪ್ರಜಾವಾಣಿಗೆ ಒಂದು ಪತ್ರ ಬರೆದರು. ಕಾಂಗ್ರೆಸ್ ಸಮಿತಿಗೆ ರಾಜೀನಾಮೆ ಕೊಟ್ಟಂತಹ ವ್ಯಕ್ತಿ ನಾನಲ್ಲ ಅಂತ ಹೇಳಿ, ಬರಗೂರು ರಾಮಚಂದ್ರಪ್ಪ ಅಂತ ಸಹಿ ಹಾಕಿದ್ದರು ಅಂತ ಕಾಣುತ್ತದೆ. ಆ ಪತ್ರವನ್ನು ವೈ.ಎನ್.ಕೆ. ಹಾಗೆಯೇ ಪ್ರಕಟಿಸಿದರು. ಅದಕ್ಕೆ ಶೀರ್ಷಿಕೆ ಕೊಟ್ಟಿದ್ದು ’ನಾನಲ್ಲ’ ಅಂತ. ಆಗ ತಾನೆ ಲಂಕೇಶರ ಹೊಸಾ ಕಥಾಸಂಕಲನ ’ನಾನಲ್ಲ’ ಬಂದಿತ್ತು. ಈ ರೀತಿಯ ವಿಚಿತ್ರವಾದ ಘಟನೆಗೆ ಕಾರಣವಾಗಿದ್ದು ಬರಗೂರು ರಾಮಚಂದ್ರಪ್ಪ.

ಈ ಊರನ್ನ ತಮ್ಮ ಹೆಸರಿನ ಜೊತೆಗೆ ಸೇರಿಸಿಕೊಳ್ಳುವುದರ ಜೊತೆಗೆ, ಅವರು ಊರಿನ ಬಗ್ಗೆ ಅಪಾರವಾದ ಹೆಮ್ಮೆಯನ್ನು ಹೊಂದಿದ್ದಾರೆ ಕೂಡ. ಆ ಕಾಲದಲ್ಲಿ ಅಂದರೆ ನಮ್ಮ ಸಮಕಾಲೀನದಲ್ಲಿ ವಿಚಿತ್ರವಾದ ತುಯ್ತಗಳಿದ್ದವು. ಊರು ಅನ್ನುವುದು ನಮ್ಮ ಹೆಮ್ಮೆಯೂ ಆಗಿರಬೇಕು, ಊರು ಅನ್ನುವುದು ನಮ್ಮ ಕೊರತೆಯೂ ಆಗಿರಬೇಕು; ಹಾಗಿರುತ್ತತ್ತು. ನಮ್ಮಂತಹವರಿಗೆ ಎಷ್ಟೋ ಸಂದರ್ಭದಲ್ಲಿ ಊರು ಕೊರತೆಯಾಗಿ ಕಾಣಿಸ್ತಾ ಇತ್ತು. ನಮ್ಮ ಮನೆಯ ಕೊಟ್ಟಿಗೆ ಬಹಳ ಕೊಳಕಾಗಿದೆ, ಆದರೆ ಅಷ್ಟೆಲ್ಲಾ ಕೊಳಕಾಗಿರಬಾರದೆಂದು ನಮ್ಮ ಶಾಲೆಯಲ್ಲಿ ಕೊಳಕುತನದ ಬಗ್ಗೆ ಪಾಠ ಹೇಳ್ತಾರೆ; ಅದಲ್ಲದೆ, ಆಗ ಚಂದಮಾಮ ಕೂಡ ಓದ್ತಾ ಇದ್ದೆವು ನಾವು. ಅದರಲ್ಲಿ ಎಂಟಿವಿ ಆಚಾರ್ಯ ಅವರು ಮನೆಗಳು ಹೀಗಿರ್ತಾವೆ, ಬೀದಿಗಳು ಹೀಗಿರ್ತಾವೆ ಅಂತ ಚಿತ್ರಿಸುತ್ತಿದ್ದರು; ಆದರೆ ನಮ್ಮ ಊರು ಯಾಕೆ ಹಾಗಿಲ್ಲ ಎಂದು ಅನ್ನಿಸುತ್ತಿತ್ತು. ಶಾಲೆಯಲ್ಲಿ ನಾವು ಕಲಿಯುತ್ತಿದ್ದ ಆಧುನಿಕತೆಯ ಪಾಠಗಳಿಂದ, ನಿಜವಾಗಲೂ ನಮ್ಮೂರು ಹಾಗಿಲ್ಲವಲ್ಲ ಎನ್ನುವುದು ಒಂದು ಕೊರತೆಯಾಗಿ ಕಾಣಸ್ತಾ ಇತ್ತು. ಊರು ಒಂದು ಹೆಮ್ಮೆ ಕೂಡ ಆಗಿದ್ದಿರಬಹುದು. ಈ ಎರಡು ತುಯ್ತಗಳಲ್ಲಿ ನಮ್ಮ ತಲೆಮಾರು ಬೆಳೆದುಬಂದಿದೆ. ಬ್ರಿಟಿಷರ ಆಡಳಿತದಿಂದ ತಪ್ಪಿಸಿಕೊಂಡು ಸ್ಥಳೀಯ ಆಡಳಿತಕ್ಕೆ ಬಂದ ಜನರೇಶನ್, ವಯಸ್ಕರಾದಂತೆ ಈ ತುಯ್ತಕ್ಕೆ ಒಳಗಾಗುತ್ತಿದ್ದರು. ಬರಗೂರು ಅವರು ಆ ಊರನ್ನ ಹೆಮ್ಮೆ ಎಂದು ಪರಿಗಣಿಸುತ್ತಾರೆ. ಅದನ್ನ ಹೇಗೆ ಬದಲಾಯಿಸಬೇಕು, ಆಧುನೀಕರಿಸಬೇಕು ಎನ್ನುವುದರ ಬಗ್ಗೆ ಅವರು ಈ ಕಥನದಲ್ಲಿ ವಿವರಗಳನ್ನು ಕೊಟ್ಟಿದ್ದಾರೆ.

ಈ ಕೃತಿಯನ್ನ ಯಾಕೆ ಬರೆದರು? ಬರೆಯೋದಕ್ಕೆ ಅವರಿಗೆ ಹಕ್ಕಿದೆ, ಆ ಮಾತು ಬೇರೆ. ಅದರಲ್ಲಿ ಅವರಿಗೆ ಕೆಲವರು ಮಾಡಿದ ಒತ್ತಾಯಗಳೂ ಸೇರಿವೆ. ಆ ಒತ್ತಾಯಗಳನ್ನು ಮಾಡಿದವರ ಪಟ್ಟಿಯನ್ನು ಕೊಟ್ಟಿದ್ದಾರೆ. ಹಾಗೆ ಹೇಳಿದವರಲ್ಲಿ ನಾನೂ ಒಬ್ಬ. ಅದನ್ನು ಅವರು ಉಲ್ಲೇಖಿಸಿದ್ದಾರೆ; ಕೆ.ವಿ. ನಾರಾಯಣ್ ಹೇಳದ್ರು ಅಂತ. ಸಂಗಾತ ಪತ್ರಿಕೆಯಲ್ಲಿ ಅವರ ಆತ್ಮಕಥಾನಕ ಅಂತ ಹೇಳಬಹುದಾದ ರೀತಿಯ ಒಂದು ಚಿಕ್ಕ ಬರಹವನ್ನ ಬರೆದಿದ್ದರು. ಅದನ್ನು ಓದಿದಾಗ ನಾನು ಅವರಿಗೆ ಹೇಳಿದ್ದು ನಿಜ, ನೀವು ಇದನ್ನು ಬರೀಬೇಕು ಎಂದು. ಆಗ ಅವರೇನು ಹೇಳಿದರು, ನಾನೇನು ಹೇಳಿದೆ ಅನ್ನುವುದು ಇದರಲ್ಲಿ ಇದೆ. ಆಮೇಲೆ ನಮ್ಮ ಗೆಳೆಯ ರಾಘವೇಂದ್ರ ರಾವ್ ಇರಬಹುದು ಮತ್ತು ಇನ್ನಿತರರು ಒತ್ತಾಸೆಯಾಗಿ ನಿಂತಿದ್ದರಿಂದ ಈ ಬರಹವನ್ನು ಬರೆಯಬೇಕೆಂದು ತೀರ್ಮಾನ ಮಾಡ್ತಾರೆ. ಅದೂ ಅಲ್ಲದೇ ಅವರ ಆರೋಗ್ಯ ಸ್ವಲ್ಪ ಹಿಡಿತ ತಪ್ಪಿದ್ದರಿಂದ ಮನೆಯಲ್ಲಿಯೇ ಉಳಿಯಬೇಕಾದ ಸಂದರ್ಭದಲ್ಲಿ, ಹೆಚ್ಚು ಓಡಾಟ ಮಾಡುವುದಕ್ಕೆ ಅವಕಾಶವಿಲ್ಲದೇ ಇದ್ದ ಕಾರಣದಿಂದ ಈ ಬಿಡುವನ್ನು ಬಳಸಿಕೊಂಡು ಈ ರಚನೆಯನ್ನು ಅವರು ಮಾಡಿದ್ದಾರೆ. ಆದರೆ ಇದನ್ನ ಆಯ್ದ ಅನುಭವಗಳ ಕಥನ ಎಂದು ಕರೆದಿದ್ದಾರೆ ಅವರು. ಆಯ್ಕೆ ಅವರದ್ದು. ಯಾವ ಅನುಭವಗಳನ್ನು ಆಯ್ದುಕೊಳ್ಳಬೇಕು ಎನ್ನುವುದು ಅವರಿಗೆ ಬಿಟ್ಟದ್ದು. ಯಾವಯಾವದನ್ನು ನಿರೂಪಿಸಬೇಕು ಎಂದು ಅವರಿಗೆ ಅನ್ನಿಸಿತೊ ಅದನ್ನೇ ನಮ್ಮ ಮುಂದೆ ಇಟ್ಟಿದ್ದಾರೆ. ಆದರೆ ಸ್ವಂತದ್ದು ಎನ್ನುವಂತಹದು ಮೊದಲ ಭಾಗದಲ್ಲಿ ಹೆಚ್ಚು ಕಾಣಿಸುತ್ತದೆ. ಅದರ ನಂತರ ಅವರ ಸಾಮಾಜಿಕ ಜೀವನದ ಬಗೆಗಿನ ಅನುಭವ ಕಾಣಿಸಿಕೊಳ್ಳುತ್ತದೆ. ಅವರ ಬಾಲ್ಯದ ಮತ್ತು ಸ್ವಲ್ಪ ವಯಸ್ಸಾದಾಗಿನ ನೆನಪುಗಳನ್ನು ಆಧರಿಸಿ ಬರೆದಿದ್ದಾರೆ.

ನೆನಪುಗಳು ಅನ್ನುವುದು ಬಹಳ ವಿಚಿತ್ರವಾದದ್ದು. ಮನುಷ್ಯರಿಗೆ ನೆನಪುಗಳನ್ನು ನಿಜವಾಗಲೂ ಕಳಚಿಕೊಳ್ಳಬೇಕಾಗಿರುತ್ತದೆ, ಉಳಿಸಿಕೊಳ್ಳಬೇಕಾಗಿರುವುದಿಲ್ಲ. ಹಾವು ಹೇಗೆ ತನ್ನೆ ಪೊರೆಯನ್ನು ಕಳಚಿಕೊಂಡು ಫ್ರೆಶ್ ಆಗಿಬಿಡುತ್ತದೆಯೋ ಆ ರೀತಿ. ಅಂತಹ ಅವಕಾಶ ಇಲ್ಲ ನಮಗೆ. ಆದರೆ ನೆನಪುಗಳನ್ನ ಮರುಕಳಿಸಿಕೊಂಡು ಇನ್ನೊಬ್ಬರಿಗೆ ದಾಟಿಸಬೇಕಾದಂತಹ ಪ್ರಸಂಗ ಬರುತ್ತದಲ್ಲ ಅದು ವಿಚಿತ್ರವಾದಂತಹ ಪ್ರಸಂಗ. ಆಗ ನಿಜವಾಗಿ ಆ ನೆನಪುಗಳನ್ನ ಮತ್ತು ಅನುಭವಗಳನ್ನು ಯಾವ ರೀತಿ ಗ್ರಹಿಸುತ್ತೀವಿ? ಅದು ಸಂಭವಿಸಿದ ರೀತಿಯಲ್ಲಿಯೇ ಗ್ರಹಿಸುತ್ತೀವೋ, ಅಥವ ಅದು ಹೀಗೆ ಸಂಭವಿಸಿರಬೇಕು ಅಂತ ಅಂದುಕೊಂಡು ಗ್ರಹಿಸುತ್ತೀವೋ? ಇದು ಬಹಳ ಇಕ್ಕಟ್ಟಿನ ಪ್ರಸಂಗ. ನೀವು ಕುವೆಂಪು ಅವರ ’ನೆನಪಿನ ದೋಣಿಯಲ್ಲಿ’ (ಆತ್ಮಕಥೆ) ಓದುತ್ತಾ ಹೋದರೆ, ಅದಕ್ಕೆ ಅವರು ಬೇರೆಯ ಮಾರ್ಗವನ್ನು ಅನುಸರಿಸಿಬಿಡುತ್ತಾರೆ. ಅವರು ನೆನಪುಗಳಿಗೆ ಹೋಗ್ತಾರೆ ಅನ್ನುವುದಕ್ಕಿಂತ ಹೆಚ್ಚಾಗಿ ಅವರು ದಾಖಲೆಗಳಲ್ಲೇ ನಿರೂಪಿಸಿಬಿಡುತ್ತಾರೆ. 1923ನೇ ಇಸವಿಯಲ್ಲಿ ಹೇಗೆ ನಡೆಯಿತೋ ಹಾಗೆಯೇ ಇಟ್ಟುಬಿಡುತ್ತಾರೆ. ಅವತ್ತೇ ಬರೆದಿದ್ದು ಅದು; ನೆನಪು ಮಾಡಿಕೊಳ್ಳುವಂತಹ ಪ್ರಸಂಗ ಬಂದಾಗ ನಿರೂಪಣೆ ಬೇರೆಯಾಗುತ್ತದೆ. ಹೇಗೆ ನಡೀತು ಅನ್ನುವ ವಾಸ್ತವಾಂಶಗಳಿಗಿಂತ, ಹೇಗೆ ನಡೀತು ಅನ್ನುವುದನ್ನು ನಿರೂಪಿಸುವ ಮುಖಾಂತರ ಬೇರೆ ಯಾವುದೊ ದೃಷ್ಟಿಕೋನದಿಂದ ಹೊರಗೆಡಹುತ್ತಾರೆ.

ಇದನ್ನೂ ಓದಿ: ’ದ ಇಂಡಿಯನ್ಸ್- ಹಿಸ್ಟರೀಸ್ ಆಫ್ ಸಿವಿಲೈಸೇಶನ್’ ಪುಸ್ತಕದ ಪರಿಚಯ ಪ್ರಬಂಧದ ಆಯ್ದ ಭಾಗ

ಈ ನೆನಪುಗಳು ಹಲವು ತರಹದಲ್ಲಿರುತ್ತವೆ. ವ್ಯಕ್ತಿಗತವಾಗಿ ಇರುತ್ತವೆ, ಸಾಮುದಾಯಿಕವಾದ ನೆನಪು ಇರುತ್ತದೆ, ಚಾರಿತ್ರಿಕವಾದ, ಸಾಂಸ್ಕೃತಿಕವಾದ ನೆನಪುಗಳು ಇರುತ್ತವೆ. ಈ ನೆನಪುಗಳ ಬಗ್ಗೆ ವಿಚಿತ್ರವಾದ ಹೇಳಿಕೆಗಳನ್ನು ನಾವು ಬಹಳ ಕೇಳಿದ್ದೀವಿ. Those who forget history they are condemned to repeat it ಅನ್ನೋ ಮಾತನ್ನು ನಾವು ಕೇಳಿದ್ದೀವಿ. ಬಹಳ ಹೆಸರುವಾಸಿಯಾದ ಹೇಳಿಕೆ ಇದು. ಆದರೆ ಇಪ್ಪತ್ತನೇ ಶತಮಾನದ ಕೊನೆಯ ಮತ್ತು ಇಪ್ಪ್ಪತ್ತೊಂದನೆ ಶತಮಾನದ ಈ ಕಾಲ ಇದಕ್ಕೆ ಪರ್ಯಾಯವಾದ ಹೇಳಿಕೆಯೊಂದನ್ನು ನಮಗಿಟ್ಟಿದೆ. ಅದೇನು ಅಂತಂದ್ರೆ, Those who remebmer history are compelled to repeat it ಅಂತ. ತಕ್ಷಣಕ್ಕೆ ಹೊಳೆಯಬಹುದಾದಂತಹ ಒಂದು ಉದಾಹರಣೆ ಅಂತಂದ್ರೆ, ಯಹೂದಿಗಳು ಮತ್ತು ಪ್ಯಾಲೆಸ್ಟೀನ್‌ಗಳ ನಡುವಿನ ಸಂಘರ್ಷಗಳು. ನೆನಪುಗಳನ್ನು ಕಳೆದುಕೊಳ್ಳುವುದಕ್ಕೆ ಸಾಧ್ಯವಿಲ್ಲದೇ ಇರುವುದರಿಂದ They are compelled to repeat it. ನಮ್ಮ ಕಾಲದಲ್ಲೂ ನಿಜ ಅನಿಸತ್ತೆ. ಆದರೆ, ಎಲ್ಲೋ ಒಂದುಕಡೆ ನೆನಪುಗಳನ್ನು ಕಳೆದುಕೊಳ್ಳಬೇಕಾದಂತಹ ಪರಿಸ್ಥಿತಿ ಬರುತ್ತದೆ. ವ್ಯಕ್ತಿಗತವಾದ ನೆನಪುಗಳಲ್ಲದೇ ಇದ್ದರೂನೂ, ಸಾಮುದಾಯಿಕವಾದ ನೆನಪುಗಳನ್ನು, ಅಥವ ಆ ನೆನಪುಗಳು ಇವೆ ಎಂದು ಕಟ್ಟಿಕೊಟ್ಟ ಬಗೆಯನ್ನ; ನಮ್ಮ ನೆನಪುಗಳು ಯಾವುದು ಎನ್ನುವುದನ್ನು ನಾವು ಕಟ್ಟಿಕೊಳ್ಳುವುದಿಲ್ಲ, ನಮಗೋಸ್ಕರ ಕಟ್ಟಿಕೊಡಲಾಗುತ್ತದೆ. ಒಂದು constructed memoryಯನ್ನ ನಮಗೆ ಕೊಡಲಾಗುತ್ತದೆ. ಅವುಗಳನ್ನು ಕಳಚಿಕೊಳ್ಳದ ಹೊರತು, ಎಷ್ಟೋ ಸಲ ನಾವು ಮುಂದುವರಿಯೋದಕ್ಕೆ ಆಗೋದೇ ಇಲ್ಲ. ಇದು ಇಪ್ಪತ್ತೊಂದನೇ ಶತಮಾನದ ದೊಡ್ಡ ಸವಾಲು ಅಂತ ನಾನು ಅಂದುಕೊಂಡಿದ್ದೇನೆ. ಇದು ಬೇರೆ ವಿಚಾರ ಆಯಿತು.

ನೆನಪುಗಳಿಗೆ ಯಾವಾಗಲೂ ಕೂಡ ಒಂದು ಪ್ರಕಿಯೆ ಇರುತ್ತದೆ, product ಇರುತ್ತದೆ. ಯಾವುದನ್ನು ನೆನಪು ಮಾಡಿಕೊಳ್ಳಬೇಕು ನಾವು, ಒಂದು ಪ್ರಕ್ರಿಯೆಯನ್ನು ನೆನಪು ಮಾಡಿಕೊಳ್ಳಬೇಕೊ? ಇಲ್ಲ ಒಂದು product ಅನ್ನು ನೆನಪು ಮಾಡಿಕೊಳ್ಳಬೇಕೊ? ಈ ಅನುಭವ ಕಥನಗಳಲ್ಲಿ ಈ ಪ್ರಶ್ನೆಗಳು ಕಾಣಿಸಿಕೊಳ್ಳುತ್ತವೆ. ಬಹಳ ಮುಖ್ಯವಾಗಿ ನಾನು ಅವರ ಬಾಲ್ಯದ ಮೂರು ಚಿತ್ರಣಗಳನ್ನು ಹೇಳೋದಕ್ಕೆ ಇಷ್ಟ ಪಡುತ್ತೇನೆ. ನಾವು ನೋಡುತ್ತಾ ಇರತಕ್ಕಂತಹ ಬರಗೂರು ಅವರ ಒಂದು ರೂಪವನ್ನ, aspectಅನ್ನ ಈ ಮೂರು ನೆನಪುಗಳು ಕಟ್ಟಿಕೊಡುತ್ತವೆ ಅಂತ ನಾನು ಅಂದುಕೊಂಡಿದ್ದೇನೆ. ಮೊದಲನೆಯದಾಗಿ ಪ್ರಾರಂಭವಾಗುವ, ಮೊದಲನೆಯ ಪ್ಯಾರದಲ್ಲೇನೆ, ಮರದಡಿಯಲ್ಲಿಯೇ ಅಳುತ್ತಾ ಕುಳಿತಿರುವ ಮಗು ಮತ್ತು ಅದನ್ನು ಸಮಾಧಾನ ಮಾಡುತ್ತಿರುವ ತಾಯಿ ಕೆಂಚಮ್ಮ. ಆ ಮಗು ಅಳುತ್ತದೆ ಎಂದು ತಿಳಿದು ಆ ಅಳುವ ಮಗುವಿಗೆ ಎಲ್ಲರೂ ರೇಗಿಸುತ್ತಿರುತ್ತಾರೆ; ಇದನ್ನು ನೋಡಿರ್ತೀರಿ ಹಳ್ಳಿಗಳಲ್ಲಿ, ಒಬ್ಬನು ಅಳುತ್ತಾನೆ, ಅಳುಮುಂಜಿ ಅಂತಂದ್ರೆ ಎಲ್ಲರೂ ಅವನನ್ನ ಇನ್ನಷ್ಟು ಅಳುವ ಹಾಗೆ ಮಾಡ್ತಾ ಇರ್ತಾರೆ ಅನ್ನೋದನ್ನ. ಆ ಬಾಲಕ ಯಾರು ಅಳಿಸೋಕೆ ಪ್ರಯತ್ನಪಟ್ರೂ ನಾನು ಅಳೋದಿಲ್ಲ ಅನ್ನೋ ಒಂದು ತೀರ್ಮಾನ ಮಾಡ್ತಾನೆ. ಇದು ಒಂದು ಚಿತ್ರ. ಎರಡನೆಯದು ಶಾಲೆಯಲ್ಲಿ ಓದ್ತಾ ಇರಬೇಕಾದ್ರೆ ಬಳಪದಿಂದ ಪೆನ್ಸಿಲ್ಲಿಗೆ ಶಿಫ್ಟ್ ಆಗ್ತಾರೆ; ಪೆನ್ಸಿಲ್ಲಿನಿಂದ ಪೆನ್ನಿಗೆ. ಈ ಕಾಲದಲ್ಲಿ ಅಲ್ಲ; ನಮ್ಮ ಕಾಲದಲ್ಲಿ. ಸ್ಲೇಟಿನಿಂದ ಪುಸ್ತಕಕ್ಕೆ ಶಿಫ್ಟ್ ಆದ ಕಾಲ. ಪೆನ್ನಿನವೇ ದೊಡ್ಡ ಕತೆಗಳಿರ್ತಾವೆ, ಇಂಕಿನದು, ಇಂಕಿನ ಹಂಚಿಕೆ, ಇಂಕು ತೀರೋದ್ರೆ ಪಕ್ಕದೋನಿಂದ ಎರಡು ಹನಿ ಹಾಕೊಳ್ಳೋದು; ಈಗಿನೋರಿಗೆಲ್ಲಾ ಅದು ಗೊತ್ತಿಲ್ಲಾ, ಈಗೆಲ್ಲಾ ಬಾಲ್ ಪಾಯಿಂಟ್ ಪೆನ್ನುಗಳು. ಯೂಸ್ ಅಂಡ್ ಥ್ರೋ ಕಾಲ ಬಂದಿದೆ. ಇರಲಿ. ಒಂದು ಸಾರ್ತಿ ಮಸಿಕುಡಿಕೆಯಿಂದ ಪೆನ್ನಿಗೆ ಇಂಕ್ ಹಾಕ್ಕೊಳ್ತಿದ್ದ ಸಮಯದಲ್ಲಿ ಇಂಕು ಇವರ ಬಟ್ಟೆ ಮೇಲೆ ಚೆಲ್ಲಿ ಕಲೆ ಆಗತ್ತೆ. ಆದರೆ ಅವರಿಗೆ ಅದನ್ನು ಮುಚ್ಚಿಡಬೇಕು, ಇಲ್ಲ ಒಗೆದು ಅದನ್ನ ಹೋಗಸ್ಬೇಕು ಅಂತ ಅನ್ಸಲ್ಲ; ಅದೇ ಅಂಗಿ ಹಾಕ್ಕೊಂಡು ಊರೆಲ್ಲಾ ಸುತ್ತುತ್ತಾ ಇರ್ತಾರೆ. ಅದಕ್ಕೆ ಅವರನ್ನ ಕೇಳ್ದಾಗ, ಅವರು ಹೇಳಿದ್ದು: ಪೆನ್ಸಿಲ್ಲಿನಿಂದ ಪೆನ್ನಿಗೆ ಬಂದ್ವಲ್ಲ ಅದಕ್ಕೆ ಹೀಗೆ ಆಗಿರೋದು ಅಂತ. ಮೂರನೆಯ ಘಟನೆ ಅವರ ಮನೆಯಲ್ಲಿ ಹಿರಿಯರು ತಂದಿಟ್ಟುಕೊಂಡಿದ್ದ ಒಂದು ಜೈಮಿನಿ ಭಾರತದ ಪ್ರತಿ ಇರತ್ತೆ, ಅದಂತೂ ಒಂದು ದೊಡ್ಡ ಗ್ರಂಥ, ಓದಿ ಅರ್ಥ ಮಾಡಿಕೊಳ್ಳಲು ಆಗದೇ ಇದ್ದಂತಹ ಒಂದು ಪುಸ್ತಕ. ಅದು ಹೇಗೋ ಅವರಿಗೆ ಆ ಗ್ರಂಥ ಒಂದು ಆಸ್ತಿ ಅಂತ ಅನಿಸತ್ತೆ. ಬರಗೂರರವರು ಅದನ್ನ ಕಂಕಳಲ್ಲಿ ಇಟ್ಟುಕೊಂಡು ಊರೆಲ್ಲಾ ಸುತ್ತುತ್ತಾ ಇರ್ತಾರೆ. ಆಗ ಅವರನ್ನು ಊರೋರೆಲ್ಲಾ ಚಂದ್ರ ಚಂದ್ರಣ್ಣ ಅಂತ ಕರೀತಾ ಇರ್ತಾರೆ; ಅವರು ಯಾಕೊ ಚಂದ್ರ ಈ ಪುಸ್ತಕ ಹೊತ್ಕೊಂಡು ತಿರುಗ್ತಾ ಇದೀಯ ಅಂತ ಕೇಳ್ತಾರೆ. ಆ ಪುಸ್ತಕದ ಬಗ್ಗೆ ಇವರು ಒಂದು ಪ್ರಸಂಗವನ್ನು ಮಾಡ್ತಾರೆ. ಇದು ಎಂತಹ ಮಹತ್ವದ ಪುಸ್ತಕ, ಕವಿ ಯಾರು, ಅಂತೆಲ್ಲಾ ತಾವು ಕಲಿತ ಪಾಠವನ್ನು ಹೇಳ್ತಾರೆ. ಊರಿನವರೆಲ್ಲಾ ಏ ಚಂದ್ರ ಬಹಳ ಜಾಣ ಅಂತಾರೆ. ಈ ಮೂರು ಘಟನೆಗಳು ನನಗೆ ಬಹಳ ಮುಖ್ಯ ಅನ್ನಿಸಿತು. ನನ್ನ ಪ್ರಕಾರ ಇಬ್ಬರು ಬರಗೂರರು ಇದ್ದಾರೆ. ಒಬ್ಬ ಬರಗೂರರನ್ನ ನಾವು ಕಲ್ಪಿಸಿಕೊಂಡ್ವಿ, ಇನ್ನೊಬ್ಬರು ಬರಗೂರರು ಯಾರು ಅನ್ನುವುದನ್ನು ನಂತರ ಹೇಳ್ತೀನಿ.

ಈ ಪುಸ್ತಕಕ್ಕೆ ಯಾಕೆ ’ಕಾಗೆ ಕಾರುಣ್ಯದ ಕಣ್ಣು’ ಅಂತ ಹೆಸರಿಟ್ಟರು ಎಂದು ಡಾಕ್ಟರ್ ಪರಮೇಶ್ವರ್ ಅವರು ವಿವರವಾಗಿಯೇ ಹೇಳಿದ್ದಾರೆ. ಕಾಗೆ, ಅದರ lore ಬಹಳ ದೊಡ್ಡದು, ಕನ್ನಡದಲ್ಲಂತೂ ಅದು ತುಂಬಾ ದೊಡ್ಡದು. ಫೋಕ್‌ಲೋರ್ ತರ. ಆದರೆ ಈ ಕಾಗೆಯನ್ನು ಯಾಕೆ ಆಯ್ಕೆ ಮಾಡ್ಕೊಂಡ್ರು, ಕುವೆಂಪು ಅವರು ಗೊಬ್ಬರದ ಮೇಲೆ ಬರೆದರೆ, ಪೊರಕೆ ಮೇಲೆ ಯಾಕೆ ಬರೀಬಾರ್ದು, ಅಂತ ಬರೆದಿದ್ದು ಇತ್ಯಾದಿ ಎಲ್ಲವನ್ನೂ ಅವರು ಇದರಲ್ಲಿ ನಿರೂಪಣೆ ಮಾಡಿದ್ದಾರೆ. ಕ್ಷುಲ್ಲಕವಾದದ್ದು, ಕ್ಷುದ್ರವಾದದ್ದು ಅಂತ ಯಾವುದನ್ನು ನಾವು ತಿಳಿದಿರ್ತೀವಿ ಅದಕ್ಕೆ ಅದರದೇ ಆದ ಮಹತ್ವ ಆ ಸಂಸ್ಕೃತಿಯೊಳಗಡೆ, ಆ ಪರಿಸರದೊಳಗಡೆ ಇರುತ್ತದೆ. ಅದರ ಬಂಧುತ್ವ ಬಳಗದ ಗುಣ ಇರಬಹುದು, ಅನ್ಯರನ್ನು ಪೊರೆಯುವ ಗುಣ ಇರಬಹುದು, ಇದನ್ನ ’ಕಾಗೆ ಕಾರುಣ್ಯದ ಕಣ್ಣು’ ಎಂದು ಕರೆದರು. ಮತ್ತು ಅವರಿಗೆ ಇನ್ನೊಂದು ಏನಾಗಿರತ್ತೆ ಅಂದರೆ, ಮಲೆನಾಡಿನಲ್ಲಿ ಆ ಕವಿಗಳೆಲ್ಲಾ ಕೋಗಿಲೆಗಳು, ಕಾಜಾಣಗಳು, ಪಿಕರಾಳಗಳನ್ನ, ಈ ಕರಾವಳಿಯವರು ಸಮುದ್ರವನ್ನು ವರ್ಣಿಸುತ್ತಾರೆ; ಆದರೆ ನಮಗೆ ಬಯಲು ಸೀಮೆಯಲ್ಲಿ ಏನೂ ಇಲ್ವಲ್ಲ. ಇಲ್ಲಿ ಇರುವುದೇ ಮಹತ್ವದ್ದು, ನನಗೆ ಕಣ್ಣಿಗೆ ಕಾಣಿಸುವ ಕಾಗೆಯೇ ಮಹತ್ವದ್ದು ಅಂತ ತಿಳಿದು ಅವರು ಕಾಗೆಯನ್ನು ತಗೊಳ್ತಾರೆ. ತಗೊಂಡು ಅದನ್ನ ಇಲ್ಲಿ ಚಿತ್ರಣ ಮಾಡ್ತಾರೆ ಅಂತ ಇಟ್ಕೊಳೋಣ. ಕಾಗೆ ಕಾರುಣ್ಯ, ಆ ಕಾರುಣ್ಯ ಅನ್ನೊ ಮಾತಿದೆಯಲ್ಲ ಅದು ಬಹಳ ಇಂಪಾರ್ಟೆಂಟು, ಕರುಣೆ ಅನ್ನೋದಕ್ಕಿಂತ ಕಾರುಣ್ಯ ಅನ್ನುವ ಪದವನ್ನು ಯಾಕೆ ಬಳಕೆ ಮಾಡಿದ್ರು ಅನ್ನೋದನ್ನ ನಾನು ಯೋಚನೆ ಮಾಡಿದೆ. ಎಲ್ಲೋ ಮಾತಾಡ್ತಾ ಇರೊವಾಗ ಡಾಕ್ಟರ್ ಪರಮೇಶ್ವರ್ ಅವರು ಒಂದು ಸೂಚನೆಯನ್ನು ಕೊಟ್ಟರು, ಪ್ರಜಾಪ್ರಭುತ್ವ ಅನ್ನೋದು ಅದರ ಆಚರಣೆಯಲ್ಲಿ ಏನಾಗ್ತಾ ಇದೆ ಅನ್ನುವುದರ ಬಗ್ಗೆ ಮಾತನಾಡ್ತಾ ಇದ್ರು. ಅಂದ್ರೆ ನಾವು ಆಯ್ಕೆ ಮಾಡಿಕೊಂಡಂತಹ ಈ ಆಡಳಿತ ವ್ಯವಸ್ಥೆ, ಬದುಕುವ ಕ್ರಮ ಇದೆಯಲ್ಲಾ ಅದು ಸ್ಪರ್ಧೆಗೆ ಒತ್ತಾಸೆ ಕೊಡುವಂಥದ್ದು. ಸ್ಪಧೆಯನ್ನು ಯಾರೂ ಕೂಡ ಅನೈತಿಕ ಎಂದು ಪರಿಗಣಿಸುವುದಿಲ್ಲ ನಮ್ಮ ಕಾಲದಲ್ಲಿ. ಸ್ಪರ್ಧೆ ಯಾವಾಗಲೂ ಕೂಡ ಕಂಪ್ಯಾಶನ್‌ಅನ್ನು ಕಡಿಮೆ ಮಾಡುತ್ತದೆ, ಇನ್ನೊಬ್ಬರನ್ನು ನಾನು ಹತ್ತಿಕ್ಕುವ ಕೆಲಸ ಮಾಡ್ಬೇಕಾಗತ್ತೆ. ಶಾಲೆಯಲ್ಲಿ ಹೆಚ್ಚು ಅಂಕಗಳನ್ನು ಪಡೆಯಬೇಕೆಂಬ ವಿದ್ಯಾರ್ಥಿಯಿಂದ ಹಿಡಿದು, ಎಲ್ಲಾ ಹಂತದಲ್ಲೂ ಕೂಡ ಸ್ಪರ್ಧೆಯನ್ನ ನಮ್ಮ ವ್ಯವಸ್ಥೆ ಹೆಚ್ಚುಹೆಚ್ಚು ನೈತಿಕಗೊಳಿಸುತ್ತಿದೆ. ಅದು ಆರ್ಥಿಕವಾಗಿರಬಹುದು, ಸಾಮಾಜಿಕವಾಗಿರಬಹುದು, ಬೌದ್ಧಿಕವಾಗಿರಬಹುದು, ಎಲ್ಲ ಕಡೆಯಲ್ಲೂ ನಾನು ಮೇಲೆ ಹೋಗ್ಬೇಕು, ಮುಂದೆ ಹೋಗ್ಬೇಕು, ಇನ್ನೊಬ್ಬರನ್ನು ಹತ್ತಿಕ್ಕಿಕೊಂಡು ಹೋಗ್ಬೇಕು, ಅನ್ನೋದನ್ನ ನಾವು ಯಾರೂ ಕೂಡ ತಪ್ಪು, ಅನೈತಿಕ ಎಂದು ಪರಿಗಣಿಸುವುದಿಲ್ಲ. ಆದರೆ ಏನನ್ನು ಕಳ್ಕೊಳ್ತಿರ್ತೀವಿ ಆವಾಗ ಅಂತಂದರೆ ಕಂಪ್ಯಾಶನ್ ಅನ್ನ, ಕಾರುಣ್ಯವನ್ನ ಕಳಕೊಳ್ತಾ ಇರ್ತೀವಿ. ಈ ಕಾರುಣ್ಯ ಅನ್ನುವ ಮಾತು, ಬುದ್ಧನಲ್ಲಿ ಬರುವ ಕರುಣೆ, ಮೈತ್ರಿ ಮಾತುಗಳಿವೆಯಲ್ಲಾ, ವಾಸ್ತವವಾಗಿ ಅದೇನೆ. ಇನ್ಕ್ಲೂಸಿವ್‌ನೆಸ್. ನನ್ನ ಜೊತೆಗೆ ನೀನು ಬಾ ಅನ್ನೋದು ಒಂದು, ನಿನ್ನ ಜೊತೆಗೆ ನಾನು ಬರ್ತೀನಿ ಅನ್ನೋದು ಇನ್ನೊಂದು. ನಾನು ಇನ್ಕ್ಲೂಡ್ ಮಾಡಿಕೊಂಡು ಬರ್ತೀನಿ ಅಂದಾಗ ನಿನ್ನ ಜೊತೆಗೆ ಹೆಗಲ ಮೇಲೆ ಕೈ ಹಾಕೊಂಡು ಬರ್ತೀನಿ ಅಂತಲ್ಲ, ನನ್ನ ಹೆಗಲ ಮೇಲೆ ನೀನು ಕೈ ಹಾಕೋದಕ್ಕೂ ಅವಕಾಶ ಕೊಡಬೇಕಾಗುತ್ತದೆ. ಆ ಇನ್ಕ್ಲೂಸಿವ್‌ನೆಸ್, ಅದು ಬುದ್ಧ ಹೇಳಿದ್ದ ಕರುಣೆ. ಸೊ, ಕಾಗೆಗೆ ಕಾರುಣ್ಯದ ಕಣ್ಣು ಅಂತ ಹೇಳುವಾಗ ಈ ಅಂಶವನ್ನ ಅದರೊಳಗಡೆ ಹೇಳಲು ಪ್ರಯತ್ನ ಪಡುತ್ತಾರೆ. ಕಾಗೆಯ ಬಗೆಗೆ ಬಹಳ ದೊಡ್ಡ ರಿಸರ್ಚ್‌ಗಳೆಲ್ಲಾ ನಡೆದಿವೆ. ಕೋತಿಯನ್ನು ಬಿಟ್ಟರೆ ಪ್ರಾಣಿಪಕ್ಷಿಗಳಲ್ಲಿ ಸ್ವ ಅರಿವು ಇರುವ ಪಕ್ಷಿ ಎಂದರೆ ಕಾಗೆ. ಕೋತಿಗೆ ಕನ್ನಡಿಯಲ್ಲಿ ನೋಡಿದರೆ ಅದು ತನದೇ ಬಿಂಬ ಎಂದು ಗೊತ್ತಾಗತ್ತೆ. ಆ ರೀತಿಯಲ್ಲಿ ಗೊತ್ತಾಗುವ ಇನ್ನೊಂದು ಪ್ರಾಣಿಯೆಂದರೆ ಕಾಗೆ. ಕಾಗೆ ತುಂಬಾ ಜನಕ್ಕೆ ಬಹಳ ಪ್ರಿಯವಾದ ಪಕ್ಷಿ ಕೂಡ. ಮಾರ್ಕ್ ಟ್ವೇನ್‌ಗೆ ಬಹಳ ಪ್ರಿಯವಾದ ಪಕ್ಷಿ ಅದು. ಆರ್.ಕೆ. ಲಕ್ಷ್ಮಣ್ ಅವರಗೆ ಕೂಡ ಕಾಗೆ ಬಹಳ ಪ್ರಿಯವಾದ ಪಕ್ಷಿ. ಅವರು ಬಹಳ ಕಾಗೆಯ ಚಿತ್ರಗಳನ್ನು ಬರೆದಿದ್ದಾರೆ. ಡಾಕ್ಟರ್ ಹೆಚ್. ಕೆ.ರಂಗನಾಥ್ ಅವರು ಲಕ್ಷ್ಮಣ್ ಅವರನ್ನು ಸಂದರ್ಶನ ಮಾಡ್ತಾ, ಯಾಕೆ ನಿಮಗೆ ಕಾಗೆ ಅಂದರೆ ಅಷ್ಟೊಂದು ಪ್ರೀತಿ ಅಂತ ಕೇಳ್ತಾರೆ. ಅದಕ್ಕೆ ಅವರು ಹೇಳ್ತಾರೆ, ಅದು most intelligent ಅಂತಾರೆ. ಇಂಟಲಿಜೆಂಟ್ ಆಗಿಯೂ ಕೂಡ ಕಾರುಣ್ಯವನ್ನು ಕಾಯ್ಕೊಳೋದು ಇದೆಯಲ್ಲಾ ಅದು ಬಹಳ ಕಷ್ಟ. ನೀವು ಇಂಟಿಲಿಜೆಂಟ್ ಆದಾಗ ಇನ್ನೊಬ್ಬರನ್ನು ಬಿಟ್ಟು ಮುಂದಕ್ಕೆ ಹೊರಟೋಗ್ತಾ ಇರ್ತೀರಿ. ಇನ್ನೊಬ್ಬರನ್ನ ತೊರೆದು ಹೋಗ್ತಾ ಇರ್ತೀವಿ. ಹಾಗಿದ್ದೂ ಕೂಡ ಕಾರುಣ್ಯವನ್ನ, ಕಂಪ್ಯಾಶನ್‌ನ ಕಾಯ್ಕೊಳೋದು ಇದೆಯಲ್ಲ ಅದು ಬಹಳ ಮುಖ್ಯ. ಆ ಕಂಪ್ಯಾಶನ್ ಬಗ್ಗೆ ಮತ್ತೆ ಬರ್ತೀವಿ.

ಅಕ್ಷರ ರೂಪಕ್ಕೆ: ಕೆ. ಶ್ರೀನಾಥ್

(ಉಳಿದ ಭಾಗ ಮುಂದಿನ ವಾರ..)

23.07.23ರಂದು ಬೆಂಗಳೂರಿನಲ್ಲಿ ಬಿಡುಗಡೆಯಾದ ಹಿರಿಯ ಸಾಹಿತಿ-ಚಿಂತಕ ಬರಗೂರು ರಾಮಚಂದ್ರಪ್ಪ ಅವರ ಆಯ್ದ ಅನುಭವಗಳ ಕಥನ ’ಕಾಗೆ ಕಾರುಣ್ಯದ ಕಣ್ಣು’ ಪುಸ್ತಕದ ಬಿಡುಗಡೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಿಮರ್ಶಕ ಪ್ರೊ. ಕೆ.ವಿ. ನಾರಾಯಣ ಅವರ ಮಾತುಗಳ ಅಕ್ಷರ ರೂಪವಿದು. ಆ ಕಾರ್ಯಕ್ರಮದಲ್ಲಿ ಕರ್ನಾಟಕದ ಗೃಹ ಸಚಿವ ಡಾ| ಜಿ. ಪರಮೇಶ್ವರ್ ಕೂಡ ಭಾಗವಹಿಸಿದ್ದರು. ಆದುದರಿಂದ ಅವರ ಉಲ್ಲೇಖ ಈ ಮಾತುಗಳಲ್ಲಿ ಕಾಣುತ್ತದೆ.

ಕೆ ವಿ ನಾರಾಯಣ

ಕೆ ವಿ ನಾರಾಯಣ
ಭಾಷಾಶಾಸ್ತ್ರಜ್ಞ, ವಿಮರ್ಶಕ. ’ತೊಂಡುಮೇವು’ ಕೆವಿಎನ್ ಅವರ ಬರಹಗಳನ್ನು ಸಂಕಲಿಸಿದ ಸಂಪುಟ ಸರಣಿ. ಇತ್ತೀಚಿಗೆ ಸಾರ್ತ್ರನ ’ಬುದ್ಧಿಜೀವಿಗಳ ಬಿಕ್ಕಟ್ಟು’ ಪುಸ್ತಕವನ್ನು ಕನ್ನಡದಲ್ಲಿ ನಿರೂಪಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...