ಕಳೆದ ವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ್ದ “ಸ್ಪಿರಿಟ್ ಆಫ್ ಇಂಡಿಯಾ” ಟ್ವೀಟ್ ಕುರಿತು ಅಸ್ಸಾಂ ಬಿಜೆಪಿ ಮತ್ತು ಅದರ ವಿವಿಧ ಸಂಘಟನೆಗಳು ಸೋಮವಾರ ಒಂದು ಸಾವಿರ ಪೊಲೀಸ್ ದೂರುಗಳನ್ನು ದಾಖಲಿಸಿವೆ.
ವಯನಾಡ್ ಸಂಸದ ರಾಹುಲ್ ಗಾಂಧಿ ಅವರನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ “ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಮಗ ಎಂಬುದಕ್ಕೆ ಬಿಜೆಪಿ ಎಂದಾದರೂ ಪುರಾವೆ ಕೇಳಿದೆಯೇ..?” ಎಂದು ಅಸಂವಿಧಾನಿಕವಾಗಿ ನಿಂದಿಸಿದ್ದರು. ಇದರ ವಿರುದ್ಧ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ ಪ್ರತಿಭಟನೆಯನ್ನು ಆರಂಭಿಸಿತ್ತು.
ಜೊತೆಗೆ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ ಮತ್ತು ಯುವ ಘಟಕಗಳು ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ವಿರುದ್ಧ ವಿವಿಧ ರಾಜ್ಯಗಳಲ್ಲಿ ಹಲವಾರು ಎಫ್‌ಐಆರ್‌ಗಳನ್ನು ದಾಖಲಿಸಿವೆ.
ರಾಹುಲ್ ಟ್ವೀಟ್‌ನಲ್ಲಿ ಯಾವುದೇ ಈಶಾನ್ಯ ರಾಜ್ಯಗಳನ್ನು ಉಲ್ಲೇಖಿಸದೆ, ದೇಶದ ಇತರ ಭಾಗಗಳಿಂದ ಪ್ರತ್ಯೇಕಿಸಿ ಅಸಾಮರಸ್ಯವನ್ನು ಹರಡುತ್ತಿದ್ದಾರೆ ಎಂದು ಬಿಜೆಪಿ ಸದಸ್ಯರು ಆರೋಪಿಸಿದ್ದಾರೆ.
ಇದನ್ನೂ ಓದಿ: ಮೋದೀಜಿ, ಇದೇನಾ ಭಾರತೀಯ ಸಂಸ್ಕೃತಿ?: ಅಸ್ಸಾಂ ಸಿಎಂ ವಜಾಕ್ಕೆ ತೆಲಂಗಾಣ ಸಿಎಂ ಆಗ್ರಹ
There is strength in our Union.
Our Union of Cultures.
Our Union of Diversity.
Our Union of Languages.
Our Union of People.
Our Union of States.From Kashmir to Kerala. From Gujarat to West Bengal. India is beautiful in all its colours.
Don’t insult the spirit of India.
— Rahul Gandhi (@RahulGandhi) February 10, 2022
“ನಮ್ಮ ಒಕ್ಕೂಟದಲ್ಲಿ ಶಕ್ತಿ ಇದೆ. ನಮ್ಮ ಸಂಸ್ಕೃತಿಗಳ ಒಕ್ಕೂಟ. ನಮ್ಮ ವೈವಿಧ್ಯತೆಯ ಒಕ್ಕೂಟ. ನಮ್ಮ ಭಾಷೆಗಳ ಒಕ್ಕೂಟ. ನಮ್ಮ ಜನರ ಒಕ್ಕೂಟ. ನಮ್ಮ ರಾಜ್ಯಗಳ ಒಕ್ಕೂಟ. ಕಾಶ್ಮೀರದಿಂದ ಕೇರಳದವರೆಗೆ. ಗುಜರಾತ್‌ನಿಂದ ಪಶ್ಚಿಮ ಬಂಗಾಳಕ್ಕೆ. ಭಾರತವು ತನ್ನ ಎಲ್ಲಾ ಬಣ್ಣಗಳಲ್ಲಿ ಸುಂದರವಾಗಿದೆ. ಭಾರತದ ಚೈತನ್ಯವನ್ನು ಅವಮಾನಿಸಬೇಡಿ” ಎಂದು ಫೆಬ್ರವರಿ 10 ರಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.
ರಾಹುಲ್ ಗಾಂಧಿಯವರ ಟ್ವೀಟ್ ರಾಜ್ಯದ ವಿರುದ್ಧ ಸಮರ ಸಾರಿದೆ ಎಂದು ಬಿಜೆಪಿ ದೂರಿದೆ. ಅವರು ದೇಶದ ಪ್ರಾದೇಶಿಕ ಗಡಿಯಲ್ಲಿ ಚೀನಾದ ಅಜೆಂಡಾಕ್ಕೆ ಸೇರಿದ್ದಾರೆ. ತಮ್ಮ ಟ್ವೀಟ್‌ನಲ್ಲಿ ಭಾರತವನ್ನು ವಿವರಿಸುವಾಗ ಈಶಾನ್ಯ ಪ್ರದೇಶವನ್ನು ಹೊರಗಿಟ್ಟಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
“ಕಾಶ್ಮೀರದಿಂದ ಕೇರಳದವರೆಗೆ ಮತ್ತು ಗುಜರಾತ್‌ನಿಂದ ಪಶ್ಚಿಮ ಬಂಗಾಳದವರೆಗೆ ಭಾರತ ವ್ಯಾಪಿಸಿದೆ ಎಂದು ರಾಹುಲ್ ಗಾಂಧಿ ಉಲ್ಲೇಖಿಸಿದ್ದಾರೆ. ಆ ಮೂಲಕ ಭಾರತದಿಂದ ಈಶಾನ್ಯ ರಾಜ್ಯಗಳನ್ನು ತೆಗೆದಿದ್ದಾರೆ. ಇದು ಭಾರತದ ಭೌಗೋಳಿಕ ಸಮಗ್ರತೆ ಮತ್ತು ಭದ್ರತೆಗೆ ಅಪಾಯವನ್ನುಂಟುಮಾಡುತ್ತದೆ” ಎಂದು ಅಸ್ಸಾಂ ಭಾರತೀಯ ಜನತಾ ಯುವ ಮೋರ್ಚಾದ (BJYM) ಮಾಧ್ಯಮ ಸಂಚಾಲಕ ಬಿಸ್ವಜಿತ್ ಖೌಂಡ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಸ್ಸಾಂ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 1,000 ಕ್ಕೂ ಹೆಚ್ಚು ದೂರುಗಳನ್ನು ದಾಖಲಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಭಾರತಕ್ಕೆ ದುರದೃಷ್ಟಕರ ಮತ್ತು ರಾಹುಲ್ ಗಾಂಧಿಯೇ ಭಾರತದ ಸಮಸ್ಯೆ” ಎಂದು ಹೇಳಿದ್ದಾರೆ.
ಆದರೆ, ಈ ದೂರುಗಳನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಯಾವುದೇ ಪ್ರಕರಣ ದಾಖಲಾಗಿದೆಯೇ ಎಂಬುದು ತಕ್ಷಣವೇ ತಿಳಿದಿಲ್ಲ.
ಇನ್ನು, ಫೆಬ್ರವರಿ 11ರಂದು ಉತ್ತರಾಖಂಡ್‌ನಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ್ದ ಹಿಮಂತ್ ಬಿಸ್ವಾ ಶರ್ಮಾ ಅವರು ರಾಹುಲ್ ಗಾಂಧಿಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸೆಪ್ಟೆಂಬರ್ 2016ರ ಸರ್ಜಿಕಲ್ ಸ್ಟ್ರೈಕ್‌ನ ಪುರಾವೆಯನ್ನು ಕೋರಿದ್ದಕ್ಕಾಗಿ ಮತ್ತು ಕೋವಿಡ್ ಲಸಿಕೆಗಳ ಪರಿಣಾಮಕಾರಿವನ್ನು ಪ್ರಶ್ನಿಸಿದ್ದಕ್ಕಾಗಿ ರಾಹುಲ್ ಅವರನ್ನು ಅಸಂವಿಧಾನಿಕವಾಗಿ ನಿಂದಿಸಿದ್ದರು. “ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಮಗ ಎಂಬುದಕ್ಕೆ ಬಿಜೆಪಿ ಎಂದಾದರೂ ಪುರಾವೆ ಕೇಳಿದೆಯೇ?” ಎಂದು ಶರ್ಮಾ ಕೇಳಿದ್ದರು.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ ಜೊತೆಯಲ್ಲಿ ದಿಟ್ಟ ಹುಡುಗಿ ಮುಸ್ಕಾನ್ ಫೋಟೋ ತೆಗೆದುಕೊಂಡಿದ್ದರೆ?


