Homeಮುಖಪುಟಅಧ್ಯಾಪನದ ಧರ್ಮ

ಅಧ್ಯಾಪನದ ಧರ್ಮ

ಮತ್ತು ನಮ್ಮ ವಿವೇಕದ ಮೇಲೆ, ಧರ್ಮದ ಮರ್ಮದ ಮೇಲೆ ನಡೀತಿರೋ ದಾಳಿ

- Advertisement -
- Advertisement -

(ವಿಡಿಯೋಗಾಗಿ ಬರೆದುಕೊಂಡ ಲೇಖನ‌ ಇದು)

ನಮಸ್ಕಾರ.

ನಾನು ರಘುನಂದನ. ತುಂಬ ಖಿನ್ನತೆಯಿಂದ, ದುಃಖದಿಂದ ಮಾತಾಡ್ತಿದ್ದೇನೆ. ದುಃಖದಲ್ಲಿ ಎಚ್ಚರ ತಪ್ಪಿ ಮಾತಾಡಬಾರದು ಅಂತ, ನಾನು ಈಗ ಹೇಳಬೇಕಾಗಿರೋದನ್ನ ಬರಕೊಂಡು ನಿಮ್ಮ ಮುಂದೆ ಓದ್ತಿದ್ದೇನೆ. ಸ್ನೇಹಿತರೇ, ನಲವತ್ತಕ್ಕೂ ಹೆಚ್ಚು ವರ್ಷ ಆಯಿತು, ನನ್ನ ವೃತ್ತಿಜೀವನ ಶುರುವಾಗಿ. ಅದರ ಒಂದು ದೊಡ್ಡ ಪಾಲು ಅಧ್ಯಾಪನ ಮಾಡೋದು, ಪಾಠ ಮಾಡೋದು ಆಗಿದೆ. ಆದರೆ ಒಬ್ಬ ಅಧ್ಯಾಪಕನಾಗಿ ನಾನು ಈ ಹಿಂದೆ ಯಾವತ್ತೂ, ಈಗ ನನಗೆ ಆಗ್ತಿದೆಯಲ್ಲ, ಈ ಇಷ್ಟು ಖಿನ್ನತೆಗೆ ಒಳಗಾಗಿಲ್ಲ, ಇಷ್ಟು ದುಃಖ ಪಟ್ಟಿಲ್ಲ. ಆದ್ದರಿಂದ, ಈವತ್ತು ತುಂಬ ಮುಖ್ಯವಾಗಿ,  ನನ್ನ ಸಹೋದ್ಯೋಗಿಗಳನ್ನ, ಅಂದರೆ ಕರ್ನಾಟಕದ ಎಲ್ಲ ಅಧ್ಯಾಪಕರು, ಅಧ್ಯಾಪಿಕೆಯರನ್ನ ಉದ್ದೇಶಿಸಿ ಮಾತಾಡ್ತಿದ್ದೇನೆ.

ಸ್ನೇಹಿತರೇ, ನನ್ನನಿಮ್ಮಂಥವರು ಪಾಠ ಮಾಡೋದು ಎಲ್ಲೇ ಆಗಿರಲಿ, ಅದು ಬಾಲವಾಡಿ ಆಗಿರಲಿ, ಪ್ರಾಥಮಿಕ ಶಾಲೆ, ಮಾಧ್ಯಮಿಕ ಶಾಲೆ ಆಗಿರಲಿ, ಅಥವಾ ಪ್ರೌಢಶಾಲೇನೇ ಆಗಿರಲಿ, ಇಲ್ಲವೆ ಪದವಿಪೂರ್ವ ಕಾಲೇಜು, ಡಿಪ್ಲೊಮಾ ಶಿಕ್ಷಣದ ಸಂಸ್ಥೆ, ಪದವಿ ಕಾಲೇಜು, ವಿಶ್ವವಿದ್ಯಾಲಯ, ಅತ್ಯುನ್ನತವಾದ ವಿದ್ಯಾಸಂಸ್ಥೆ, ಅಥವಾ ಸಂಶೋಧನ ಸಂಸ್ಥೆಯೇ ಆಗಿರಲಿ — ಅದು ಸರ್ಕಾರೀ ಸಂಸ್ಥೆ ಆಗಿರಲಿ, ಖಾಸಗಿ ಸಂಸ್ಥೆ ಆಗಿರಲಿ ­— ಎಲ್ಲೇ ಆಗಲಿ ಪಾಠ ಮಾಡ್ತಿರೋವರಲ್ಲಿ ಪ್ರಾರ್ಥಿಸಿಕೊಳ್ತಿದ್ದೇನೆ; ಸದಾಗ್ರಹ ಮಾಡ್ತಿದ್ದೇನೆ.

ಈವತ್ತು ನಮ್ಮ ನಾಡಿನ ಉದ್ದಗಲ ಹಲವು ಊರುಗಳಲ್ಲಿ, ಕಾಲೇಜುಗಳಲ್ಲಿ (ಅಲ್ಲದೆ ಬಹುಶಃ ಕೆಲವು ಶಾಲೆಗಳಲ್ಲಿ ಕೂಡ), ಕೆಲವು ವಿದ್ಯಾರ್ಥಿನಿಯರು ತಲೆಯ ಮೇಲೆ ಹೊದ್ದುಕೊಳ್ಳೋ ಯೂನಿಫಾರಂ ಬಟ್ಟೆಯ ವಿಷಯದಲ್ಲಿ ನಡೀತಿರೋ ದಾಳಿ ಇದೆಯಲ್ಲ, ಅದು ಒಂದು  ಸಂಘಟಿತ ದಾಳಿ, ಸಂಘಟಿತ ಹುನ್ನಾರ. ಆ ದಾಳಿಯ ಹಿನ್ನೆಲೆ ಏನು ಅಂತ ಇಲ್ಲಿ ವಿವರಿಸೋ ಅಗತ್ಯ ಇಲ್ಲ. ಎಲ್ಲರಿಗೂ ಗೊತ್ತಿರೋ ವಿಷಯ ಅದು.

ಮುಖ್ಯವಾದ ವಿಷಯ, ಇದು: ನನ್ನ-ನಿಮ್ಮ ವಿದ್ಯಾರ್ಥಿನಿಯರಲ್ಲಿ ಕೆಲವರು ಯಾವತ್ತಿನಿಂದಲೂ ಹಿಜಾಬ್ ಹೊದ್ದುಕೊಂಡು ಶಾಲಾಕಾಲೇಜುಗಳಿಗೆ ಬರ್ತಿದ್ದಾರೆ ತಾನೆ? ಆ ರಿವಾಜು ಹಿಂದೆ ಯಾವತ್ತೂ ಯಾರಿಗೂ ದೊಡ್ಡ ಸಮಸ್ಯೆಯಾಗಿ ಕಾಣಿಸಲಿಲ್ಲ, ಅಲ್ಲವೆ?

ಆದರೆ ಈವತ್ತು ಕೆಲವರು ಅದರಿಂದ ದೇಶಕ್ಕೇ ಗಂಡಾಂತರ ಒದಗಿದೆ ಅನ್ನೋ ಹಾಗೆ ಆ ಎಳೇ ಹೆಣ್ಣುಮಕ್ಕಳ ಮೇಲೆ ದಾಳಿ ಮಾಡ್ತಿದಾರಲ್ಲ!

ಅವರ ಮೇಲೆ ಹಾಗೆ ದಾಳಿ ಮಾಡ್ತಿರೋವರು ಕೂಡ ಬಹುತೇಕ ಎಳೆಯರೇ ಆಗಿದ್ದಾರೆ, ಆ ಹೆಣ್ಣುಮಕ್ಕಳ ವಯಸ್ಸಿನವರೇ ಆಗಿದ್ದಾರಲ್ಲ! ಚಿಕ್ಕವರು ಅವರು, ಅಮಾಯಕರು. ಅಂಥವರು ಕೇಸರಿ ಶಾಲು ತೊಟ್ಟುಕೊಂಡು ಆ ಥರ ಜುಲುಮೆ ಮಾಡೋ ಹಾಗೆ ಕೆಲವು ಶಕ್ತಿಗಳು ಅವರ ದಾರಿ ತಪ್ಪಿಸಿವೆಯಲ್ಲ!

ಅಷ್ಟರಮೇಲೆ, ಆ ಹೆಣ್ಣುಮಕ್ಕಳು ಹಿಜಾಬ್ ತೊಟ್ಟುಕೊಂಡು ಬಾರದಂತೆ ಕಾಲೇಜು ಆಡಳಿತದವರು, ಸರಕಾರದವರು ಕೂಡ ಅವರನ್ನ ಶಾಲೆ, ಕಾಲೇಜುಗಳ ಬಾಗಿಲಲ್ಲಿಯೆ ತಡೀತಿದ್ದಾರಲ್ಲ! ಶಾಲಾಶಿಕ್ಷಣ, ಕಾಲೇಜು ಶಿಕ್ಷಣದ ಅವರ ಹಕ್ಕನ್ನ ತುಳೀತಿದ್ದಾರಲ್ಲ!

ಸ್ನೇಹಿತರೇ, ಧೀಮಂತಿಕೆಯನ್ನ ಬೆಳಗಿಸಬೇಕಾದ ಶಾಲೆ, ಕಾಲೇಜುಗಳಲ್ಲಿ, ಈವತ್ತು ಧೀಶಕ್ತಿಯ ಕೊಲೆ ಆಗ್ತಿದೆ. ದ್ವೇಷದ ವಿಷ ಶಾಲೆ, ಕಾಲೇಜುಗಳನ್ನೂ ತಲುಪಿದೆ. ಇದು ಕೇವಲ ಕೆಲವು ವಿದ್ಯಾರ್ಥಿನಿಯರ ಮೇಲೆ ನಡೀತಿರೋ ದಾಳಿ ಅಲ್ಲ; ಕೇವಲ ಮುಸಲ್ಮಾನರ ಮೇಲೆ ನಡೀತಿರೋ ದಾಳಿ ಅಲ್ಲ. ಇದು ನಮ್ಮ ವಿದ್ಯಾಭ್ಯಾಸದ ಮೇಲೆ, ನಮ್ಮ ವಿವೇಕದ ಮೇಲೆ, ಎಲ್ಲ ವಿದ್ಯಾನಿಲಯಗಳ ಮೇಲೆ, ಅಧ್ಯಾಪನದ ಮೇಲೆ, ಅಧ್ಯಾಪಕ ವೃತ್ತಿಯ ಮೇಲೆ, ಧರ್ಮದ ಮರ್ಮದ ಮೇಲೆ ನಡೀತಿರೋ ದಾಳಿ.

ಅಧ್ಯಾಪಕರೇ, ಅಧ್ಯಾಪಿಕೆಯರೇ, ಇದು ನನ್ನ ಮೇಲೆ, ನಿಮ್ಮ ಮೇಲೆ, ನಮ್ಮ ಪ್ರತಿಯೊಬ್ಬರ ಮೇಲೆ, ನಮ್ಮ ವೃತ್ತಿಯ ಮೇಲೆ, ವೃತ್ತಿಸಂಸ್ಥೆಗಳ ಮೇಲೆ, ವೃತ್ತಿಧರ್ಮದ ಮೇಲೆ ನಡೀತಿರೋ ದಾಳಿ. ತಾಯಿ ಭಾರತಿ (ಅಂದರೆ ಸರಸ್ವತಿಯ ಮೇಲೆ, ಆಕೆಯ ವೀಣೆಯ ಮೇಲೆ) ನಡೀತಿರೋ ದಾಳಿ. ವಿದ್ಯಾಗಣಪತಿಯ ಮೇಲೆ ನಡೀತಿರೋ ದಾಳಿ. ನಿಜವಾದ ಅರ್ಥದಲ್ಲಿ ಸನಾತನವಾದ ಸದ್ಧರ್ಮದ ಮೇಲೆ, ನಮ್ಮ ದೇಶದ ಮೇಲೆ, ದೇಶದ ವಿವೇಕದ ಮೇಲೆ ನಡೀತಿರೋ ದಾಳಿ.[*]

ಇದಕ್ಕೆ ನಮ್ಮ ನಿಮ್ಮ ವಿದ್ಯಾರ್ಥಿಗಳೇ ದಾಳವಾಗಿರೋದು, ಅವರೇ ಸೇನಾಪಡೆಗಳು, ಬಲಿಪಶುಗಳು –  ಎರಡೂ ಆಗಿರೋದು ತುಂಬ ದುಃಖದ ವಿಷಯ.

ಸ್ನೇಹಿತರೇ, ನಾವು ನಿಜವಾದ ಅಧ್ಯಾಪಕರು, ಅಧ್ಯಾಪಿಕೆಯರು ಆಗಿದ್ದರೆ, ಈಗ ಈ ದಾಳಿಯನ್ನ ಖಡಾಖಂಡಿತವಾಗಿ ಎದುರಿಸಬೇಕು, ಸಂಘಟಿತರಾಗಿ ಖಂಡಿಸಬೇಕು.

ಒಂದು ಪ್ರಶ್ನೆ ಕೇಳಿಕೊಳ್ತಿದ್ದೇನೆ, ನಿಮ್ಮನ್ನೂ ಕೇಳ್ತಿದ್ದೇನೆ. ನಮ್ಮ ಶಾಲಾ ಶಿಕ್ಷಕರ ಸಂಘಗಳಿವೆ, ಕಾಲೇಜು ಅಧ್ಯಾಪಕರ ಸಂಘಗಳಿವೆ, ಆ ಸಂಘಗಳ ಅಖಿಲ ಕರ್ನಾಟಕ ಒಕ್ಕೂಟಗಳಿವೆ, ವಿಶ್ವವಿದ್ಯಾಲಯದ ಅಧ್ಯಾಪಕ-ಪ್ರಾಧ್ಯಾಪಕರ ಸಂಘಗಳಿವೆ. ನಮ್ಮ ತಪೋಭೂಮಿ-ಕರ್ಮಭೂಮಿಯ ಮೇಲೆ, ನಮ್ಮ ಮಕ್ಕಳಮೇಲೆ ದಾಳಿ ಆಗ್ತಿರೋವಾಗ ಅವೆಲ್ಲಾ ಏನು ಮಾಡ್ತಿವೆ? ಯಾಕೆ  ಸುಮ್ಮನಿವೆ?  ವಿಶ್ವವಿದ್ಯಾಲಯಗಳಿಗೆ ಕುಲಪತಿಗಳು, ಕುಲಸಚಿವರು ಇದ್ದಾರೆ. ಅವರು ಏನು ಮಾಡ್ತಿದ್ದಾರೆ? ಯಾಕೆ ಸುಮ್ಮನಿದ್ದಾರೆ? ಕೇಡಿನ ಈ ನಡೆಯನ್ನ ನಮ್ಮ ಆ ಸಂಘಗಳು, ಅಧ್ಯಾಪಕರು, ಪ್ರಾಧ್ಯಾಪಕರು, ಕುಲಪತಿಗಳು, ಕುಲಸಚಿವರು ತುಂಬ ಅಧಿಕೃತವಾಗಿ, ನೇರವಾಗಿ ಖಂಡಿಸಬೇಕಲ್ಲವೇ?  ಇದೆಲ್ಲ ಕೂಡದು ಅಂತ ನಾವೆಲ್ಲ ಒಟ್ಟಾಗಿ ಸತ್ಯಾಗ್ರಹ ಮಾಡಬೇಕು, ಧರಣಿ ಹೂಡಬೇಕಲ್ಲವೇ? ನಿಜವಾದ ವಿವೇಕದ ನಡೆ ಯಾವುದು ಅಂತ ನಮ್ಮ ವಿದ್ಯಾರ್ಥಿಗಳಿಗೆ, ಅವರ ತಂದೆತಾಯಂದಿರಿಗೆ, ವಿಶಾಲ ಸಮಾಜಕ್ಕೆ ತಿಳಿಹೇಳಬೇಕಲ್ಲವೆ?

ತಿಳಿಹೇಳುವ ಈ ಕೆಲಸದಲ್ಲಿ ನಿವೃತ್ತ ಶಿಕ್ಷಕರು, ಶಿಕ್ಷಕಿಯರು, ಅಧ್ಯಾಪಕರು, ಅಧ್ಯಾಪಿಕೆಯರು, ಪ್ರಾಧ್ಯಾಪಕರು, ಪ್ರಾಧ್ಯಾಪಿಕೆಯರು, ಕುಲಪತಿಗಳು, ಕುಲಸಚಿವರು ಕೂಡ — ಅವರು ನಿವೃತ್ತರಾಗಿದ್ದರು ಕೂಡ — ಕಯ್ಯಿ, ಕೊರಳು, ಮನಸ್ಸು ಜೋಡಿಸಬೇಕು,  ಅಲ್ಲವೆ? ಹಾಗೆ ಮಾಡೋದು ನಮ್ಮ ಪವಿತ್ರ ಕರ್ತವ್ಯವಲ್ಲವೇ?

ಆ ಕರ್ತವ್ಯ ನಾವು ಪಾಲಿಸ್ತಿಲ್ಲ, ಯಾಕೆ? ದಯವಿಟ್ಟು ಯೋಚಿಸಿ: ಅದನ್ನ ನಾವು ಈಗಲಾದರೂ ಮಾಡದಿದ್ದರೆ, ಈಗಿಂದೀಗ ಮಾಡದಿದ್ದರೆ, ನಮ್ಮ ಮುಖಕ್ಕೆ ನಾವೇ ಮಸಿ ಬಳಿದುಕೊಂಡಂತೆ; ಅಧ್ಯಾಪಕರು, ಆಧ್ಯಾಪಿಕೆಯರು ಅನ್ನಿಸಿಕೊಳ್ಳೋಕೆ ನಾವು ನಾಲಾಯಕ್ಕಾದಂತೆ.

ಈಗ, ಹಿಜಾಬ್ ತೊಟ್ಟು ಶಾಲೆಗೆ ಬರ್ತಿದ್ದಾರಲ್ಲ ವಿದ್ಯಾರ್ಥಿನಿಯರು, ಅವರು ನನ್ನ ಮಗಳಿಗೆ ಸಮಾನರಾದವರು. ಅವರಿಗೆ ಕಕುಲಾತಿಯ ಚಿಕ್ಕದೊಂದು ಕಿವಿ ಮಾತು. ಮಕ್ಕಳೇ, ಹಿಜಾಬ್ ಹಾಕಿಕೊಂಡು ಬರಕೂಡದು ಅಂತ ನಿಮ್ಮ ಮೇಲೆ ಒತ್ತಡ ಹೇರೋದಿದೆಯಲ್ಲ, ಅದು ಖಂಡಿತವಾಗಿಯೂ ಅಧರ್ಮದ ನಡೆ, ಕೇಡು ಮತ್ತು ಅವಿವೇಕದ ಕೆಲಸ. ಹಾಗೇನೇ, ನೀವು ಹಿಜಾಬ್ ಧರಿಸಲೇ ಬೇಕು, ಬುರ್ಖಾ ಧರಿಸಲೇ ಬೇಕು ಅಂತ ನಿಮ್ಮ ಮೇಲೆ ಒತ್ತಡ ಹೇರೋದು ಕೂಡ ಅಷ್ಟೇ ಅಧರ್ಮದ ನಡೆ, ಕೇಡು ಮತ್ತು ಅವಿವೇಕದ ಕೆಲಸ.

ಯೋಚಿಸಿ, ನೀವು ಈಗ ಚಿಕ್ಕವರು. ನಿಮಗೆ ರೂಢಿಗತವಾದ ಕೆಲವು ತಪ್ಪು ನಡೆಗಳನ್ನ ಸಂಪೂರ್ಣ ಧಿಕ್ಕರಿಸೋ ಸ್ವಾತಂತ್ರ್ಯ ಈಗ ಇಲ್ಲದಿರಬಹುದು. ಆದರೆ ನಾಳೆ ನೀವೇ ತಾಯಂದಿರಾಗ್ತೀರಿ. ನಿಮ್ಮಲ್ಲಿ ಕೆಲವರು ಅಧ್ಯಾಪಿಕೆಯರೂ ಆಗಬಹುದು. ಆಗ, ದಯವಿಟ್ಟು, ನೀವಂತೂ ನಿಮ್ಮ ಮಕ್ಕಳ ಮೇಲೆ ಯಾವುದೇ ತರಹದ ಕೇಡಿನ ರೂಢಿಗತತೆಯ ಒತ್ತಡ ಹೇರಬೇಡಿ, ಸಂಪ್ರದಾಯದ ಹೆಸರಿನಲ್ಲಿ ತಪ್ಪು ನಡೆಯ ಒತ್ತಡ ಹೇರಬೇಡಿ. ನಿಮ್ಮ ಮಕ್ಕಳು ಧೀಮಂತರಾಗಿ, ಬಿಡುಗಡೆಯ ಭಾವದಿಂದ ಬಾಳೋ ಹಾಗಾಗಲಿ. ನೀವೂ ತುಂಬ ಬೇಗ ಹಾಗೆ ಸ್ವತಂತ್ರವಾಗಿ ಬಾಳೋ ಹಾಗಾಗಲಿ.

ಗಂಡು ಮಕ್ಕಳೇ, ಹಾಗೆ ಆಗೋ ಹಾಗೆ ನೋಡಿಕೊಳ್ಳೋದರಲ್ಲಿ ನಿಮ್ಮ ಜವಾಬ್ದಾರಿ ಕೂಡ ದೊಡ್ಡದು, ಬಹಳ ದೊಡ್ಡದು.

ಇನ್ನು, ಹಿಜಾಬ್ ತೊಡೋ ಆ ಹೆಣ್ಣುಮಕ್ಕಳನ್ನ ಹಂಗಿಸಿ, ಅವರ ಮೇಲೆ ದಾಳಿ ಮಾಡ್ತಿದ್ದಾರಲ್ಲ, ಕೇಸರಿ ಶಾಲಿನ ಹುಡುಗರು, ಹುಡುಗಿಯರು, ಅವರಿಗೆ ಒಂದು ಕಿವಿಮಾತು. ನೋಡಿ ವಿದ್ಯಾರ್ಥಿಗಳೇ, ದೇಶದ ಉದ್ದಗಲ ದ್ವೇಷದ ಬೀಜ ಬಿತ್ತಿ ಬೆಳೆ ಕೊಯ್ಯುತ್ತಿರೋ ಪರಿವಾರದವರಿದ್ದಾರಲ್ಲ, ಅವರ ತಲವಾರು, ತ್ರಿಶೂಲಕ್ಕೆ ನಿಮ್ಮ ಮನಸ್ಸು, ಧೀಶಕ್ತಿ ಒಡ್ಡಬೇಡಿ, ಬಲಿ ಕೊಡಬೇಡಿ; ಬಲಿಯಾಗಬೇಡಿ. ಹಿಂಸಾಚಾರದ ಕವಾಯತು ನಡೆಸೋ ಪರಿವಾರ ಅದು; ನಮ್ಮ ದೇಶದ, ನಿಜವಾದ ಸನಾತನ ಸದ್ಧರ್ಮದ ಕಡುವೈರಿ.  ಅದರಿಂದ ದೂರ ಇರಿ.

ಆದರೆ, ಈ ಎಲ್ಲದರಲ್ಲಿ, ಈ ಸದ್ಯ ನಾವು ಅಧ್ಯಾಪಕರು ಹೊರಬೇಕಾದ ಜವಾಬ್ದಾರಿಯೇ ತುಂಬ ದೊಡ್ಡದು. ಆದ್ದರಿಂದ ನನ್ನ ಆ ಸಹೋದ್ಯೋಗಿಗಳಿಗೊಂದು ಕಟ್ಟಕಡೇ ಮಾತು.

ಅಧ್ಯಾಪಕರ ಸಂಘಗಳ ಮುಂದಾಳುಗಳೇ, ಪದಾಧಿಕಾರಿಗಳೇ, ಪ್ರೊಫೆಸರುಗಳೇ, ಡಿಪಾರ್ಟ್‍ಮೆಂಟ್ ಮುಖ್ಯಸ್ಥರೇ, ಕುಲಪತಿ, ಕುಲಸಚಿವರೇ, ಕೈಮುಗಿದು ಕೇಳಿಕೊಳ್ತಿದ್ದೇನೆ. ನಮ್ಮ ವಿದ್ಯಾರ್ಥಿಗಳ ದಾರಿ ತಪ್ಪಿಸಿ, ಅವರ ಕೊರಳಿಗೆ ಕೇಸರಿ ಶಾಲು ಹಾಕಿವೆಯಲ್ಲ ದುಷ್ಟಶಕ್ತಿಗಳು, ಅವರ ಮನಸ್ಸುಗಳ ಬಲಿ ತೊಗೊಳ್ತಿವೆಯಲ್ಲ, ಆ ಶಕ್ತಿಗಳಿಗೆ ಛೀಮಾರಿ ಹಾಕೋಣ, ಎಲ್ಲರೂ ಒಟ್ಟಾಗಿ ಅವುಗಳನ್ನ ವಿರೋಧಿಸೋಣ.

ಅಧ್ಯಾಪನ ಧರ್ಮದ ಮಾರ್ಗದಲ್ಲಿ ನಡೆಯೋಣ, ಸ್ನೇಹಿತರೇ, ಸರಸ್ವತಿಯ  ಒಕ್ಕಲು ನಾವು ಅನ್ನಿಸಿಕೊಳ್ಳೋದಕ್ಕೆ ಲಾಯಕ್ಕಾಗೋಣ.

ಈಗ, ಕಡೆಗೆ, ಕವಿ ರವೀಂದ್ರನಾಥ ಠಾಕೂರರ ಒಂದು ಇಂಗ್ಲಿಶ್ ಕವನದ ಭಾವಾನುವಾದ.

ಎಲ್ಲಿ ಮನ ಅಳುಕದೆ ಅಂಜದೆ

ಎಲ್ಲಿ ಮನ ಅಳುಕದೆ ಅಂ
ಜದೆಯಿರಬಹುದೋ ಎಲ್ಲಿ ತಲೆ
ಎತ್ತಿ ನಡೆಯಬಹುದೋ

ಎಲ್ಲಿ ಅರಿವು ನಿಸ್ಸೂರು ಬೆಳಗಬಹುದೋ
ಎಲ್ಲಿ ಲೋಕ ಇಕ್ಕಟ್ಟು ನನ್ನದಿದುನನ್ನ
ದದುನಿನ್ನದೆಂಬೋಣಿಗೋಡೆಗಳಿಂದ ನೂ

ರ್ಚೂರು-ಹೋಳಾಗಿರುವುದಿಲ್ಲವೋ ಎಲ್ಲಿ
ಎಲ್ಲ ಮಾತು ಸತ್ಯದಾಳದಿಂದ ಬರುವುದೋ
ಎಲ್ಲಿ ದಣಿವರಿಯದಾ ತುಡಿತ-ದುಡಿತ ಕುಂ                   

ದಿಲ್ಲದೊಳಿತಿನಿಡಿಯತ್ತ ತೋಳ್ ಚಾಚು
ತ್ತಲೆಯಿರುವುದೋ ಎಲ್ಲಿ ಧೀಮಂತಿಕೆಯಾ
ತಿಳಿಹೊಳೆಯು ಬೇತಾಳಬಳಬಳಕೆಯಾ ಬೆಂ

ಗಾಡವೊಣಬಣಗುಮರಳಲ್ಲಿ ಬಟ್ಟೆ    
ಗೆಟ್ಟಿರುವುದಿಲ್ಲವೋ ಎಲ್ಲಿ ಕೊನೆಯೇ                                        
ಯಿಲ್ಲದೆ ತೆರೆದುಕೊಳ್ವ ವಿಶಾಲ ವಿ

ಚಾರ ಕಾಯಕದಲ್ಲಿ ಎನ್ನ ಮನವ ನೀ
ಮುನ್ನಡಸುವೆಯೋ ಆs  ಬಿಡುಗಡೆಯಾ
ನಾಕಕ್ಕೆ ಎಲೆಯೆನ್ನ ತಾಯ್ । ತಂದೆಯೇ

ಈ ನನ್ನ ನಾಡು ತನ್ನ ಕಣ್ ತೆರೆದುಕೊಳ್ಳುತ್ತಲಿರಲಿ


[*] ಮೂಲತಃ ಸನಾ ಅನ್ನೋ ಸಂಸ್ಕೃತ ಪದದ ಅರ್ಥ ‘ನಿತ್ಯ, ಶಾಶ್ವತ, ಹಿಂದೆಯೂ ಇಂದೂ ಮತ್ತು ಮುಂದೆಯೂ – ಯಾವಾಗಲೂ – ಇರೋ ಅಂಥದು’. ಸನಾತನ ಅಂದರೆ, ಮೂಲದಲ್ಲಿ, ‘ನಿತ್ಯವೂ ಇರುವ, ಶಾಶ್ವತವಾಗಿರುವ, ಯಾವಾಗಲೂ ಇರುವ’. ಇಂಗ್ಲಿಶಿನಲ್ಲಿ, perennial, eternal, perpetual, everlasting.

ಆ ಅರ್ಥವಲ್ಲದೆ, ಅದಕ್ಕೆ ‘ಪುರಾತನ, ಹಳೆಯ, ಹಿಂದಿನಿಂದ ಬಂದದ್ದು, ಪರಂಪರೆಯಿಂದ ಬಂದದ್ದು’ ಅನ್ನೋ ಅರ್ಥವೂ ಇವೆ. ಈ ಎರಡನೆಯ ಅರ್ಥದಲ್ಲಿ ‘ಶಾಶ್ವತ, ಮತ್ತು ಇಂದು ಹಾಗೂ ಮುಂದೆಯೂ ಇರೋ ಅಂಥದು’ ಅನ್ನೋದರ ಧ್ವನಿ ಇಲ್ಲವಾಗಿ, ಅಥವಾ ಮಸುಳಾಗಿ, ‘ಪುರಾತನ, ಪರಂಪರಾನುಗತ’ ಅನ್ನೋ ಧ್ವನಿಯಷ್ಟೇ ಮುನ್ನೆಲೆಗೆ ಬಂದುಬಿಡುತ್ತೆ. ಅಷ್ಟು ಮಾತ್ರವಲ್ಲದೆ, ಆಮೇಲಾಮೇಲೆ, ಆ ಮಾತಿಗೆ ‘ವಿಷ್ಣು, ಪರಮೇಶ್ವರ, ಚತುರ್ಮುಖ ಬ್ರಹ್ಮ’ ಅನ್ನೋ ಅರ್ಥಗಳೂ ಲಗತ್ತಾಗಿಬಿಟ್ಟಿವೆ. ಅದರಿಂದಾಗಿ, ‘ಸನಾತನ, ಸನಾತನ ಧರ್ಮ’ ಅನ್ನೋ ಮಾತುಗಳು ಮತ್ತು ಅವುಗಳ ಹಿಂದೆಯಿರುವ ಪರಿಕಲ್ಪನೆಯ ವಿಷಯದಲ್ಲಿ ಬಹಳ ಜನರಿಗೆ ತಪ್ಪು ತಿಳಿವಳಿಕೆ ಇದೆ. ಅವರು ಅವುಗಳನ್ನ ವೈದಿಕ ಮತದ ಜೊತೆ, ಶೋಷಕವಾದ ಬ್ರಾಹ್ಮಣ್ಯ ಮತ್ತು ವರ್ಣಾಶ್ರಮ ಪದ್ಧತಿ ಹಾಗೂ ಧರ್ಮದ ಜೊತೆ, ಜಾತಿಯ ಶ್ರೇಣೀಕರಣವೇ ಪ್ರಧಾನವಾದ ಸಮಾಜದ ಕಡುಕೇಡಿನ ಜೊತೆ ಸಮೀಕರಿಸುತ್ತಾರೆ. ಸಂಘ ಪರಿವಾರದವರು ಮತ್ತು ‘ಹಿಂದೂ’ ಅನ್ನೋ ಜನಸಮೂಹಗಳ ಪಟ್ಟಭದ್ರರು ಆ ಮಾತುಗಳನ್ನಅದೇ ಅರ್ಥದಲ್ಲಿ ಬಳಸಿ, ಬಳಸಿ  ಇನ್ನಷ್ಟು ಗೊಂದಲ, ಇನ್ನಷ್ಟು ಕೇಡು ಮಾಡಿಟ್ಟಿದ್ದಾರೆ.

ಆದರೆ, ಅಧ್ಯಾಪನದ ಧರ್ಮ ಅನ್ನೋ  ಈ ಲೇಖನ ಮತ್ತು ಆ ಲೇಖನದ ಓದಿನ ಹಿಂದೆ ಇರೋದು ‘ಸನಾತನ, ಸನಾತನ ಧರ್ಮ’ ಅನ್ನೋ  ಮಾತುಗಳ ಮೂಲ ಅರ್ಥವೇ ಹೊರತು ಕೇಡಿನ ಅರ್ಥವಲ್ಲ. ಲಾವೋ ತ್ಸೂನ ದಾವ್ ದ ಜಿಂಗ್, ಬುದ್ಧನ ಪ್ರತೀತ್ಯಸಮುತ್ಪಾದ ತತ್ತ್ವ, ಆತನ  ದಮ್ಮಪದ ಹೇಳೋ ಎಂಟು ತತ್ತ್ವಗಳು ಮತ್ತು ಆತನ ಧರ್ಮಚಕ್ರವು ಪ್ರತಿನಿಧಿಸೋ ಮಾರ್ಗ,  ಏಸು ಬೋಧೆಯ ಅತ್ಯುತ್ತಮ ನೀತಿತತ್ತ್ವಗಳು, ಸಂತರಾದ ಅಲ್‍-ಹಲ್ಲಜ್, ಕಬೀರ, ಬುಲ್ಲೇಹ್ ಷಾಹ್, ಮತ್ತು ಜಲಾಲುದ್ದೀನ್ ರೂಮಿ ಹಾಗೂ ಗುರು ನಾನಕರ ಬೋಧೆ, ಇಂದಿನ ಸಾಮಾಜಿಕ ಸಮಾನತೆಯ ಚಳವಳಿಗಳು, ಹಾಗೂ ಪರಿಸರ ಪ್ರಜ್ಞೆ ಹಾಗೂ ಅದಕ್ಕೆ ಹೊಂದಿಕೊಂಡ ಚಳವಳಿಗಳ ಬೋಧೆ, ಮತ್ತು ವಿಶ್ವ ಋತದ ತತ್ತ್ವ — ಇಂಥ ಎಲ್ಲವೂ ಎತ್ತಿ ಹಿಡಿಯೋದು ಆ ಸನಾತನ ಧರ್ಮವನ್ನೇ. ಆ ಎಲ್ಲದರ ಪೈಕಿ ನನಗೆ ಹೆಚ್ಚು ನಚ್ಚಿರೋದು ದಾವ್ ದ ಜಿಂಗ್ ನ ಬೋಧೆಯೇ.  ಈಗ ಈ ಲೇಖನ ಮತ್ತು ಅದರ ಓದಿನಲ್ಲಿ, ‘ಸನಾತನ, ಸನಾತನ ಸದ್ಧರ್ಮ’ ಅನ್ನೋ ಮಾತುಗಳಿಗೆ ಇರೋದು ದಾವ್‍ ನಲ್ಲಿ ಇರೋ ಅರ್ಥ ಮತ್ತು ಅದಕ್ಕೆ ಹೊಂದಿಕೊಂಡಂತೆ ಇಲ್ಲಿ ಹೇಳಿರೋ ಉಳಿದೆಲ್ಲ  ಬೋಧೆಗಳೇ ಹೊರತು ಬೇರೆಯಲ್ಲ.

  • ರಘುನಂದನ

(ಲೇಖಕರು, ಕವಿ, ರಂಗನಿರ್ದೇಶಕರು, ಬೆಂಗಳೂರು)


ಇದನ್ನೂ ಓದಿ: ‘ಹಿಜಾಬ್ ಹಿಜಾಬ್ ಹಿಜಾಬ್!’: ವಿದ್ಯಾರ್ಥಿನಿಯರ ಮೂಲಭೂತ ಹಕ್ಕಿನ ಹೋರಾಟವೇ ಈ ವಾರದ ಟಾಪ್‌‌ 10 ಸುದ್ದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...