ವಿಶ್ವದಾದ್ಯಂತ ಎಲ್ಲೆಡೆ ಇರುವ ಮುಸ್ಲಿಂ ಬಾಂಧವರು ಸಡಗರ ಮತ್ತು ಸಂಭ್ರಮದಿಂದ ಆಚರಿಸುವ ಪವಿತ್ರ ರಂಜಾನ್ ಹಬ್ಬ ಭಾರತದಲ್ಲಿ ನಾಳೆಯಿಂದ ಆರಂಭವಾಗಲಿದೆ. ಮುಸ್ಲಿಂ ಸಂಪ್ರದಾಯದ ಪ್ರಕಾರ ರಂಜಾನ್ ತಿಂಗಳನ್ನು ಪವಿತ್ರ ತಿಂಗಳು ಎಂದು ಪರಿಗಣಿಸಲಾಗಿದ್ದು, ಈ ವರ್ಷದ ಹಿಜರಿ ಕ್ಯಾಲೆಂಡರ್ ಪ್ರಕಾರ 9ನೇ ತಿಂಗಳು ಅಂದರೆ ಇದೇ ಏಪ್ರಿಲ್‌ನಲ್ಲಿ ಇದನ್ನು ಆಚರಿಸಲಾಗುತ್ತದೆ.
ಭಾರತದಲ್ಲಿ ಎಂದಿನಿಂದ ಆಚರಿಸಲಾಗುತ್ತದೆ?
ಸಂಪ್ರದಾಯದಂತೆ ಅರ್ಧ ಚಂದ್ರಾಕೃತಿಯನ್ನು ಆಧರಿಸಿ ಎಲ್ಲೆಡೆ ರಂಜಾನ್ ಆಚರಿಸಲಾಗುತ್ತದೆ. ಹೀಗಾಗಿ ಒಂದೊಂದು ದೇಶದಲ್ಲಿ ಆಚರಣೆಯ ದಿನ ಒಂದೆರಡು ದಿನ ಏರುಪೇರಾಗುತ್ತದೆ. ಹೀಗಾಗಿ ಚಂದ್ರಾಕೃತಿಯನ್ನು ಆಧರಿಸಿ ಭಾರತದಲ್ಲಿ ಪವಿತ್ರ ರಂಜಾನ್ 2020 ಏಪ್ರಿಲ್ 24 ರಿಂದ ಪ್ರಾರಂಭವಾಗುವ ಸಾಧ್ಯತೆಯಿದೆ. ಹೀಗೆ ಆರಂಭವಾಗುವ ರಂಜಾನ್ ಅನ್ನು ನಾಲ್ಕು ವಾರಗಳವರೆಗೆ ಆಚರಿಸಲಾಗುತ್ತದೆ.
ಈ ರಂಜಾನ್ ತಿಂಗಳಲ್ಲಿ ಮುಸ್ಲಿಮರು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸ ಆಚರಿಸುತ್ತಾರೆ. ಸೂರ್ಯಾಸ್ತಮನದ ನಂತರ ಸಂಜೆ ವೇಳೆಗೆ ಎಲ್ಲರೂ ಒಟ್ಟಾಗಿ ಅವರ ಕುಟುಂಬ ಮತ್ತು ಸ್ನೇಹಿತರೊಂದಿಗೆ ಇಫ್ತಾರ್ ಎಂದೂ ಕರೆಯಲ್ಪಡುವ ಆಹಾರವನ್ನು ಸೇವಿಸುವ ಮೂಲಕ ಉಪವಾಸವನ್ನು ಮುರಿಯುತ್ತಾರೆ.
ಒಬ್ಬ ವ್ಯಕ್ತಿ ದಿನವಿಡೀ ಆಹಾರ ಮತ್ತು ನೀರಿನಿಂದ ದೂರವಿರುವುದರಿಂದ ಆತ ಜನರ ನೋವು ಮತ್ತು ಸಂಕಟಗಳನ್ನು ಅರ್ಥಮಾಡಿಕೊಳ್ಳುತ್ತಾನೆ. ಅಲ್ಲದೆ ದೇವರಿಗೆ (ಅಲ್ಲಾಹ್) ಹತ್ತಿರವಾಗುತ್ತಾನೆ ಎಂದು ಇಸ್ಲಾಂ ಧರ್ಮದಲ್ಲಿ ನಂಬಲಾಗಿದೆ.
ಇಸ್ಲಾಂ ಧರ್ಮದ ಪ್ರಮುಖ 5 ನಂಬಿಕೆ ಅಥವಾ ಆಚರಣೆಯಲ್ಲಿ ಈ ಸಮಯದ ಉಪಾವಾಸವನ್ನೂ ಒಂದು ಎಂದು ಪರಿಗಣಿಸಲಾಗಿದೆ. ಇದಲ್ಲದೆ, ದೇವರಲ್ಲಿ ನಂಬಿಕೆ, ದೈನಂದಿನ ಪ್ರಾರ್ಥನೆ, ದಾನ ಮತ್ತು ಬದುಕಿನಲ್ಲಿ ಒಮ್ಮೆ ಮೆಕ್ಕಾಗೆ ಹಜೆ ಯಾತ್ರೆ ಕೈಗೊಳ್ಳುವುದು ಇಸ್ಲಾಂ ಧರ್ಮದ ಉಳಿದ ಪ್ರಮುಖ ನಾಲ್ಕು ನಂಬಿಕೆಗಳಾಗಿವೆ.
ಲಾಕ್‌ಡೌನ್ ಎಫೆಕ್ಟ್?
ಈ ಬಾರಿ ಹಬ್ಬ ಆರಂಭವಾಗುತ್ತಿದ್ದರೂ ಲಾಕ್‌ಡೌನ್ ಹಬ್ಬದ ವಾತವಾರಣವನ್ನು ಮಂಕುಗೊಳಿಸಿದೆ. ಕೋವಿಡ್ ಸಾಂಕ್ರಮಿಕದ ಕಾರಣಕ್ಕಾಗಿ ಸರಳವಾಗಿ ಹಬ್ಬ ನಡೆಯುವ ಸಾಧ್ಯತೆಯಿದೆ. ಸಾಮೂಹಿಕ ಪ್ರಾರ್ಥನೆ ಇಲ್ಲದೇ ಮನೆಯಲ್ಲಿಯೇ ಪ್ರಾರ್ಥನೆಗೆ ಎಲ್ಲೆಡೆ ಮಾನಸಿಕವಾಗಿ ಸಿದ್ದಗೊಂಡಿದ್ದಾರೆ.
ಈ ನಡುವೆ ಈ ಹಬ್ಬದ ತಿಂಗಳಲ್ಲಿ ಎಲ್ಲಾ ಮುಸ್ಲಿಮರೂ ಲಾಕ್‌ಡೌನ್ ನಿಯಮಗಳನ್ನು ಮುರಿಯದೆ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಲು ಮತ್ತು ಇತರೆ ಧಾರ್ಮಿಕ ಆಚರಣೆಗಳಲ್ಲಿ ತೊಡಗಲು ಎಲ್ಲಾ ವಕ್ಫ್ ಮಂಡಳಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕೇಂದ್ರ ಸರ್ಕಾರದ ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವ ಮತ್ತು ಕೇಂದ್ರ ವಕ್ಫ್ ಕೌನ್ಸಿಲ್ ಅಧ್ಯಕ್ಷ ಮುಖ್ತಾರ್ ಅಬ್ಬಾಸ್ ನಖ್ವಿ ಸೂಚಿಸಿದ್ದಾರೆ.
ಇದನ್ನೂ ಓದಿ: `ವೈರಸ್’ ಕಾರಣಕ್ಕೆ ಹೊರಗಿಟ್ಟ ಸಾಬರನ್ನು ಬಿಟ್ಟು ಬದುಕೀತೇ ನಮ್ಮೂರು?


