Homeಕರ್ನಾಟಕ`ವೈರಸ್' ಕಾರಣಕ್ಕೆ ಹೊರಗಿಟ್ಟ ಸಾಬರನ್ನು ಬಿಟ್ಟು ಬದುಕೀತೇ ನಮ್ಮೂರು?

`ವೈರಸ್’ ಕಾರಣಕ್ಕೆ ಹೊರಗಿಟ್ಟ ಸಾಬರನ್ನು ಬಿಟ್ಟು ಬದುಕೀತೇ ನಮ್ಮೂರು?

- Advertisement -
- Advertisement -

ಈರುಳ್ಳಿ ಬೆಳೆಯುವ ಒಂದೂರ ಕಥೆ

ನನ್ನೂರು ತಾಳಿಕಟ್ಟೆ. ನಿಖರವಾಗಿ ಹೇಳಬೇಕೆಂದರೆ ಇಲ್ಲಿಂದ ಒಂದೂವರೆ ಮೈಲಿ ದೂರಕ್ಕೆ ಟಿಸಿಲೊಡೆದ ಪುಟ್ಟ ಕುಗ್ರಾಮ ನನ್ನೂರಾದರು, ನೂರಿಪ್ಪತ್ತು ಮನೆಗಳಿರುವ ನನ್ನ `ಕಾವಲು’ ತನ್ನ ಅಸ್ತಿತ್ವವನ್ನು ಗುರುತಿಸಿಕೊಳ್ಳೋದು ಹೆಚ್ಚೂಕಮ್ಮಿ ಸಾವಿರ ಮನೆಗಳಿರುವ ಇದೇ ತಾಳಿಕಟ್ಟೆಯ ಮೂಲಕ. ಈ ತಾಳಿಕಟ್ಟೆಯ ಬಗ್ಗೆ, ಈ ಊರಿನ ಸೌಹಾರ್ದ ಪರಂಪರೆಯ ಬಗ್ಗೆ ಇಲ್ಲಿಗೆ ಮೂವತ್ತು ವರ್ಷಗಳ ಹಿಂದೆಯೇ ಲಂಕೇಶ್ ಮೇಷ್ಟ್ರು ತಮ್ಮ ಮರೆಯುವ ಮುನ್ನ ಅಂಕಣದಲ್ಲಿ ಬರೆದಿದ್ದರು. ಕಾಕತಾಳೀಯವೊ ಏನೊ, ಮುಂದೆ ಲಂಕೇಶ್ ಅವರು ಕನ್ನಡದ ಜಾಣಜಾಣೆಯರನ್ನೆ ಮುಂದಿಟ್ಟುಕೊಂಡು `ಪ್ರಗತಿರಂಗ’ ಕಟ್ಟಿದಾಗ ಅದರ ಮೊದಲ ಸಭೆ ನಡೆಸಿದ್ದು ಕೂಡಾ ಇದೇ ತಾಳಿಕಟ್ಟೆಯಲ್ಲಿ. ಇಲ್ಲಿ ಸರ್ ಸೈಯದ್ ಮಹಮದ್ ಇಸ್ಮಾಯಿಲ್ ಖಾದ್ರಿ ಎಂಬ ಸೂಫಿ ಸಂತರ ದರ್ಗಾ ಇದೆ. ಆದರು ಈ ಊರಿನಲ್ಲಿ ಇವತ್ತಿಗು ಒಂದು ಮುಸ್ಲಿಂ ಕುಟುಂಬ ಬಿಟ್ಟರೆ ಎರಡನೆಯ ಮನೆಯಿಲ್ಲ. ಈ ದರ್ಗಾದ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳೋದು ಹಿಂದೂಗಳೆ. ವರ್ಷಕ್ಕೊಮ್ಮೆ ನಡೆಯುವ ಉರುಸಿನ ನೇತಾರಿಕೆ ಕೂಡಾ ಇಲ್ಲಿನ ಶೂದ್ರ ಸಮುದಾಯಗಳದ್ದೆ. ಬೇರೆ ಕಡೆಯಿಂದ ಉರುಸಿಗೆಂದು ಬರುವ ಮುಸ್ಲಿಂ ಜನರ ದೇಖರೇಖಿಯನ್ನು ಹಿಂದೂಗಳು ಮುತುವರ್ಜಿಯಿಂದ ನೋಡಿಕೊಳ್ಳುತ್ತಾರೆ.

ಈ ಸೌಹಾರ್ದತೆಯ ಬಗ್ಗೆ ಬರೆಯುತ್ತಾ ಲಂಕೇಶ್ ಮೇಷ್ಟ್ರು `ಜಾತಿ ಜಗಳದಲ್ಲಿ ಮನುಷ್ಯತ್ವವನ್ನೆ ಬಲಿತೆಗೆದುಕೊಳ್ಳುವ ನೀಚರೆಲ್ಲರು ಈ ಊರಿನ ಕುರುಬರಿಂದ ಕಲಿಯಬೇಕು ಎನ್ನುವುದೇ ನನ್ನ ಅನಿಸಿಕೆ’ ಎಂದು ಹೆಮ್ಮೆಯಿಂದ ದಾಖಲಿಸಿದ್ದರು. ಇಂಥಾ ಸೌಹಾರ್ದತೆಗೆ ಹೆಸರಾಗಿದ್ದ ಈ ಊರು, ಇವತ್ತು ದರ್ಗಾಕ್ಕೆ ಬರುವ ಮುಸ್ಲಿಂ ಭಕ್ತರ ಮಾತು ಒತ್ತಟ್ಟಿಗಿರಲಿ, ಮುಸಲ್ಮಾನ ವ್ಯಾಪಾರಿಗಳನ್ನೂ ತನ್ನೊಳಗೆ ಬಿಡಿಸಿಕೊಳ್ಳಬಾರದೆಂಬ ಅಲಿಖಿತ ಫರ್ಮಾನು ಧರಿಸಿಕೊಂಡು ಕೂತಿದೆ. ಮೂಲತಃ ಮನುಷ್ಯನೆ ಅಲ್ಲದ ಕ್ಷುದ್ರ ಕ್ರಿಮಿಯೊಂದು ತಂದೊಡ್ಡುವ ಕೊರೊನಾ ಎಂಬ ರೋಗದಲ್ಲು ಧರ್ಮದ ನಂಜು ಹುಡುಕಿ ಸಮಾಜವನ್ನೆ ಸೋಂಕುಗೊಳಿಸಿದ `ಪುಣ್ಯಾತ್ಮ?ರ ಪ್ರಭಾವಕ್ಕೆ ಈ ಊರಿನ ಸೌಹಾರ್ದತೆಯೂ ಬಲಿಯಾದುದರ ದ್ಯೋತಕ ಇದು.

ಈ ಕುರಿತಂತೆ ನನಗೆ ನನ್ನ ಜನರ ಬಗ್ಗೆ ಬೇಸರವಿಲ್ಲ, ಆಕ್ಷೇಪಗಳೂ ಇಲ್ಲ. ಯಾಕೆಂದರೆ ಈ ಒಂದು ಕಾರಣಕ್ಕೆ ನನ್ನ ಜನ ಸಂಪೂರ್ಣ ಕೋಮುವಾದಿಗಳಾಗಿಬಿಟ್ಟಿದ್ದಾರೆ, ಮೋದಿ ಭಜನಾ ಮಂಡಳಿ ಸೇರಿಕೊಂಡಿದ್ದಾರೆ, ಹೊಸದಾಗಿ ಅಜ್ಞಾನಿಗಳಾಗಿಬಿಟ್ಟಿದ್ದಾರೆ ಎಂದು ಆರೋಪಿಸಲಾರೆ. ಅಜ್ಞಾನ ಮತ್ತು ಮುಗ್ಧತೆ, ಇವೆರಡೂ ನಮ್ಮ ಜನರ ನಿತ್ಯಾಚರಣೆಗಳು. ಅವಕಾಶ ತಮ್ಮ ಕೈಯಲ್ಲಿದ್ದಾಗ ವಿವೇಕವನ್ನು ಜನರಿಗೆ ತಲುಪಿಸುವ ಹೊಣೆಯನ್ನು ಸಮರ್ಪಕವಾಗಿ ನಿಭಾಯಿಸಲಾಗದ ಈ ದೇಶದ ಜಾತ್ಯತೀತ ವಾರಸುದಾರರು ಇವತ್ತು ಇಂಥಾ ಘಟನೆಗಳನ್ನು ನೆಪ ಮಾಡಿಕೊಂಡು `ಜನ’ರನ್ನು ದೂಷಿಸುವುದರ ಬಗ್ಗೆ ನನಗೆ ಅನೇಕ ಆಕ್ಷೇಪಣೆಗಳಿವೆ. ವಾಸ್ತವಗಳನ್ನು ಧಿಕ್ಕರಿಸಿ ಆದರ್ಶಗಳನ್ನು ಕಟ್ಟಲಾಗುವುದಿಲ್ಲ!

ಇಷ್ಟೆಲ್ಲ ಬದಲಾದ ನಮ್ಮ ಜನ ಮುಂದಿನ ವರ್ಷದಿಂದ ಉರುಸ್ ನಿಲ್ಲಿಸಿಬಿಡುತ್ತಾರೆಯೇ? ಖಂಡಿತ ಇಲ್ಲ. ಯಾಕೆಂದರೆ ಪ್ರತಿವರ್ಷ ತಾವು ಆಚರಿಸುವ ಗುಳ್ಳಮ್ಮ, ಬೀರಪ್ಪ ದೇವರುಗಳ ಉತ್ಸವದಷ್ಟೆ ಕಟಿಬದ್ಧರಾಗಿ ಆ ಉರುಸ್ ನಡೆಸುತ್ತಾರೆ. ಅದು ಅವರಿಗೆ ತಮ್ಮದೇ ಎನ್ನುವಷ್ಟು ಸಹಜವಾಗಿ ಒಗ್ಗಿಹೋಗಿದೆ. ಆದರು ಸಂದರ್ಭ ಮತ್ತು ಸಮೂಹಸನ್ನಿಗೆ ದನಿಗೂಡಿಸುವ ದೌರ್ಬಲ್ಯಕ್ಕೆ ಜನ ಮಾರುಹೋಗಿದ್ದಾರೆ. ನಾವಿಲ್ಲಿ ದೂಷಿಸಲೇಬೇಕೆಂದಿದ್ದರೆ ಅದು ಜನರನ್ನಲ್ಲ, ಸ್ವತಃ ಸೌಹಾರ್ದತೆ ಸ್ವಭಾವದ ನಮ್ಮ ಜನರನ್ನು ಅದಕ್ಕೆ ಕಮಿಟ್ ಮಾಡಿಸುವಲ್ಲಿ ಸೋತುಹೋದ ಇಷ್ಟುದಿನಗಳ ಅಧಿಕಾರಸ್ಥ-ಹೋರಾಟನಿರತ ಜಾತ್ಯತೀತ ವಾರಸುದಾರರನ್ನು ಮತ್ತು ಈ ವಾರಸುದಾರರ ಲೋಪಗಳ ಲಾಭ ಪಡೆದು ಕೋಮುಸನ್ನಿಗಳನ್ನು ಹುಟ್ಟುಹಾಕುತ್ತಿರುವ ಮನುಷ್ಯ ಕ್ರಿಮಿಗಳನ್ನು.

ಕೇವಲ ವಿಚಾರವಂತಿಕೆಗಷ್ಟೆ ಅಲ್ಲ, ಆರ್ಥಿಕತೆಯಲ್ಲು ನಮ್ಮ ಜನ ಇಂಥಾ ಸನ್ನಿಗಳಿಂದಾಗಿ ದೊಡ್ಡ ಗೊಂದಲಕ್ಕೆ ಬಿದ್ದಿದ್ದಾರೆ. ಫಲವತ್ತಾದ ಕಪ್ಪುಮಣ್ಣು ಹೊಂದಿರುವ ನಮ್ಮ ಜನರಿಗೆ ಈರುಳ್ಳಿಯೆ ಪ್ರಧಾನ ಆರ್ಥಿಕ ಬೆಳೆ. ಹೊಲಗಳನ್ನು ಅಣಿಗೊಳಿಸಿಕೊಂಡು ಕೂತಿರುವ ಜನ, ಒಂದೆರಡು ಮಳೆ ಬಿದ್ದು ನೆಲ ಹಸನಾದರೆ ಬಿತ್ತನೆಗೆ ದಿನ ಎಣಿಸುತ್ತಿದ್ದಾರೆ. ಸಾಬರ ಮೇಲಿನ ಈ ಅಘೋಷಿತ ಸಮೂಹಸನ್ನಿಯಂತಹ ಗ್ರಾಮೀಣ ನಿಷೇಧ ಈಗ ಅವರನ್ನು ದೊಡ್ಡ ಸಂಕಟಕ್ಕೆ ತಳ್ಳಿದೆ. ಬೆಳೆದ ಈರುಳ್ಳಿಯನ್ನು ಬೆಂಗಳೂರಿಗೊ, ಹಾಸನಕ್ಕೊ ತಂದು ಮಾರಾಟ ಮಾಡುವ ಪರಿಪಾಟ ಇದೆಯಾದರು, ಈರುಳ್ಳಿ ರೇಟು ಕುಸಿದಂತಹ ಸಂದರ್ಭದಲ್ಲಿ ನಮ್ಮೂರಿನ ರೈತರಿಗೆ ಆಸರೆಯಾಗಿ ನಿಲ್ಲೋದು `ಈರುಳ್ಳಿ ಸಾಬರು’. ಹತ್ತಿರದ ಪಟ್ಟಣಗಳ ಮುಸ್ಲಿಂ ವರ್ತಕರು ಮನೆ ಬಾಗಿಲಿಗೇ ಬಂದು ಒಂದಷ್ಟು ಚೌಕಾಸಿ ನಡೆಸಿ, ಚೂರು ಲಾಭವನ್ನೂ ಇಟ್ಟುಕೊಂಡು ಲೋಡುಗಟ್ಟಲೆ ಈರುಳ್ಳಿ ಖರೀದಿಸಿ ಒಯ್ಯುತ್ತಾರೆ. ಮೊದಲೇ ರೇಟು ಕಡಿಮೆ ಇರುವಾಗ ಖಾಲಿ ಚೀಲ, ಹಮಾಲಿ ಮತ್ತು ಲಾರಿ ಬಾಡಿಗೆಯಂತಹ ಹೆಚ್ಚಿನ ಹೊರೆ ತಪ್ಪಿಸಿಕೊಳ್ಳಲು ಜನ ಈರುಳ್ಳಿ ಸಾಬರಿಗೇ ತಮ್ಮ ಬೆಳೆ ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಾರೆ.

ಆದರೆ ಈ ಸಲ ಕೊರೊನಾ ಕಾಯಿಲೆ ಯಾವಾಗ ಸಂಪೂರ್ಣ ಸಮಾಪ್ತಿಯಾಗುತ್ತೆ ಎಂಬ ಖಾತ್ರಿಯಿಲ್ಲ. ಕಳೆದ ಸಲವೇ ಆರಂಭದಲ್ಲಿ ಒಳ್ಳೆಯ ಬೆಲೆ ಸಿಕ್ಕರು, ಆಮೇಲೆ ಏಕಾಏಕಿ ರೇಟು ಕುಸಿದು ಕಣ್ಣೀರಿಟ್ಟ ರೈತರು ಸಾಕಷ್ಟಿದ್ದಾರೆ. ಕೊರೊನಾ ಕಾರಣದಿಂದ ಹೊರ ದೇಶಕ್ಕೆ ಈರುಳ್ಳಿ ಎಕ್ಸ್ಪೋರ್ಟ್ ಅನುಮತಿ ಸಿಗದೆ ಹೋದರೆ ರೇಟು ಕೈಗತ್ತುವುದಿಲ್ಲ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಅಂಥಾ ಹೊತ್ತಲ್ಲಿ ಸಾಬರಿಗು ನಾವು ಹೀಗೆ ನಿಷೇಧ ಹೇರಿಕೊಂಡು ಕೂತರೆ ಈರುಳ್ಳಿಯ ಗತಿಯೇನು? ಎಂಬ ಚಿಂತೆಯೂ ಇದೇ ಜನರನ್ನು ಕಾಡುತ್ತಿದೆ. ಬೇರೆ ಬೆಳೆಗಳಂತೆ ಈರುಳ್ಳಿಯನ್ನು ದಾಸ್ತಾನು ಇಡಲಾಗದು.

ಬಿದ್ದ ಆರ್ಥಿಕತೆ, ಕುಂಠಿತಗೊಂಡ ಕೃಷಿ ಚಟುವಟಿಕೆಯಿಂದಾಗಿ ಈರುಳ್ಳಿ ಬೀಜಗಳು ಹಿಂದೆಂದು ಕಂಡರಿಯದಷ್ಟು ದುಬಾರಿಯಾಗಿವೆ. ಪ್ರತಿ ಸೇರಿಗೆ ಏಳುನೂರರಿಂದ ಎಂಟುನೂರು ರೂಪಾಯಿ ಇರುತ್ತಿದ್ದ ಬೀಜ, ಈಗಾಗಲೆ ಒಂದು ಸಾವಿರದ ಮುನ್ನೂರರಿಂದ ಒಂದೂವರೆ ಸಾವಿರ ರೂಪಾಯಿಯಾಗಿದೆ. ಬಿತ್ತನೆ ಕಾಲ ಸಮೀಪಿಸಿದಂತೆ ಅದು ಮತ್ತಷ್ಟು ಹೆಚ್ಚಾಗುವ ಸಂಭವವಿದೆ. ಈ ಸಲ ಕೃಷಿ ಚಟುವಟಿಕೆಯ ಇನ್ನಿತರೆ ಖರ್ಚೂ ದುಬಾರಿಯಾಗುವ ಸಾಧ್ಯತೆ ಇದೆ. ಹೀಗೆ ಎಕರೆಗೆ ಮೂವತ್ತರಿಂದ ನಲವತ್ತು ಸಾವಿರ ಖರ್ಚು ಮಾಡಿ ಕೊಳ್ಳುವವರೇ ಇಲ್ಲವಾದರೆ ಏನು ಗತಿ? ಎಂಬ ಆತಂಕವೂ ಇದೇ ಜನರನ್ನು ಕಾಡುತ್ತಿದೆ.

ಇದು ಕೇವಲ ಒಂದು ಊರಿನ ಕಥೆಯಲ್ಲ. ಹಿಂದೂಗಳು ಮಾತ್ರವಲ್ಲದೇ ಮುಸಲ್ಮಾನರು, ಸಿಖ್ಖರು, ಪಾರಸಿಗಳು, ಜೈನರು, ಬೌದ್ಧರು, ಕಿರಸ್ತಾನರು ಹೀಗೆ ಎಲ್ಲಾ ಧರ್ಮ ವರ್ಗಗಳನ್ನು ತನ್ನವರೆಂದು ಭಾವಿಸಿರುವ ಈ ನಮ್ಮ ದೇಶ ಈ ಎಲ್ಲರ ಆರ್ಥಿಕ ಪಾಲುದಾರಿಕೆಯಿಂದ ತನ್ನ ಆರ್ಥಿಕಶಕ್ತಿಯನ್ನು ಅರ್ಥಾತ್ ಜಿಡಿಪಿಯನ್ನು ಸೃಷ್ಟಿಸಿಕೊಂಡಿದೆ. ಇದೊಂಥರ ಆರ್ಥಿಕ ಸರಪಳಿಯಿದ್ದಂತೆ. ಯಾವುದೊ ರಾಜಕೀಯ ಅಥವಾ ಸೈದ್ದಾಂತಿಕ ದುರುದ್ದೇಶಕ್ಕಾಗಿ ಇವರಲ್ಲಿ ಒಬ್ಬರನ್ನು ಹೊರಗಿಡುವ ಹುನ್ನಾರ ನಡೆಸಿದರು, ಇಡೀ ಆರ್ಥಿಕ ಚಕ್ರವೆ ಕೊಂಡಿ ಕಳಚಿಕೊಂಡ ಸರಪಳಿಯಂತೆ ಅಸ್ತವ್ಯಸ್ತವಾಗಿ ಬಿದ್ದುಹೋಗುತ್ತೆ. ನನ್ನೂರು ಅನುಭವಿಸುತ್ತಿರುವ ಗೊಂದಲ ಇದಕ್ಕೊಂದು ನಿದರ್ಶನವಷ್ಟೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. This is baseless. You haven’t addressed other problems happening around us. Our country remains secular only till Hindu’s are in majority. Please look at what happened in Pak and Bangladesh or even in West Bengal.

LEAVE A REPLY

Please enter your comment!
Please enter your name here

- Advertisment -

ನಂದಿಗ್ರಾಮದ ಬೆನ್ನಲ್ಲೇ ರೆಜಿನಗರ ಅಭ್ಯರ್ಥಿಯಿಂದಲೂ ನಾಮಪತ್ರ ವಾಪಸ್ : ಬಂಗಾಳ ಉಪ ಚುನಾವಣೆ ಕಣದಲ್ಲಿ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಹಿನ್ನಡೆ

ಪಶ್ಚಿಮ ಬಂಗಾಳದ ಉಪಚುನಾವಣಾ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ನಂದಿಗ್ರಾಮದ ಬಳಿಕ ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ತನ್ನ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ...

ಅಮಾನವೀಯ ಕೃತ್ಯ : ಮಹಿಳೆಗೆ ಥಳಿಸಿ, ಕೂದಲು ಹಿಡಿದು ಎಳೆದೊಯ್ದ ಪೊಲೀಸ್ ಸಿಬ್ಬಂದಿ

ತೆಲಂಗಾಣದ ಹಫೀಝ್‌ಪೇಟ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಗೆ ಥಳಿಸಿ, ಆಕೆಯ ತಲೆಕೂದಲು ಹಿಡಿದು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುಕ್ರವಾರ (ಸೆ.18) ರಾತ್ರಿ ರೈಲ್ವೆ...

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...

‘ವೆಟ್ಟುವಂ’ ಪಾ.ರಂಜಿತ್ ಅವರ ಅದ್ಭುತ ಅಪೋಕಲಿಪ್ಟಿಕ್ ಆಕ್ಷನ್ ಸಿನಿಮಾ: ರಂಗನಾಥ್ ಆರ್. ವಿ

ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವೆಟ್ಟುವಂ' ಚಿತ್ರವನ್ನು 'ಲರ್ನ್ ಆಂಡ್ ಟೀಚ್ ಪ್ರೊಡಕ್ಷನ್' ಸಂಸ್ಥೆಯ ಸಹಯೋಗದೊಂದಿಗೆ, ಪಾ.ರಂಜಿತ್ ಅವರ 'ನೀಲಂ ಪ್ರೊಡಕ್ಷನ್ಸ್' ನಿರ್ಮಿಸಿದೆ. ಈ ಚಿತ್ರದ ಜಗತ್ತನ್ನು ಪರಿಚಯಿಸುವ...

SIR ಮೋಸ: ಅಗತ್ಯಬಿದ್ದರೆ ಕಾಂಗ್ರೆಸ್‌ನಿಂದ ಕಾನೂನು ಹೋರಾಟ ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ 2026ರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ತಾಂತ್ರಿಕ ಲೋಪಗಳು, ಅಂಕಿಅಂಶಗಳ ವ್ಯತ್ಯಾಸ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ಪಷ್ಟತೆಯ ಕೊರತೆ ಎದ್ದುಕಾಣುತ್ತಿದೆ ಎಂದು...

ವಿಚಾರಣೆಯಿಲ್ಲದೆ ಆರು ವರ್ಷ ಜೈಲುವಾಸ: ಉಮರ್ ಖಾಲಿದ್ ಹೋರಾಟದ ಹಾದಿ

ಸೆಪ್ಟೆಂಬರ್ 13, 2020 ರಂದು, ಮಾನವ ಹಕ್ಕುಗಳ ಯುವ ಕಾರ್ಯಕರ್ತ ಉಮರ್ ಖಾಲಿದ್ ಅವರನ್ನು ದೇಶದ ರಾಜಧಾನಿಯಲ್ಲಿ ಗುರಿಯಾಗಿಸಿಕೊಳ್ಳಲಾಯಿತು. ವಿಚಾರಣೆಯೇ ಇಲ್ಲದೆ ಅವರು ಜೈಲಿನಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಸರ್ಕಾರದ ವಿರುದ್ಧದ ರಾಜಕೀಯ...

ಕನ್ವರ್ ಯಾತ್ರೆ ವೇಳೆ 18 ದ್ವೇಷ ಘಟನೆಗಳು: ಮುಸ್ಲಿಮರು, ಅವರ ವ್ಯಾಪಾರಗಳನ್ನು ಗುರಿಯಾಗಿಸಿಕೊಂಡ ಪ್ರಕರಣಗಳೇ ಹೆಚ್ಚು; APCR ವರದಿ

ನವದೆಹಲಿ: 2026ರ ಕನ್ವರ್ ಯಾತ್ರೆಯ 13 ದಿನಗಳ ಅವಧಿಯಲ್ಲಿ ಹಿಂಸಾಚಾರ, ಬಲವಂತ, ತಾರತಮ್ಯ, ಆರ್ಥಿಕ ಬಹಿಷ್ಕಾರ ಹಾಗೂ ಸಾರ್ವಜನಿಕ ಅಶ್ಲೀಲ ವರ್ತನೆಗೆ ಸಂಬಂಧಿಸಿದ ಕನಿಷ್ಠ 18 ಘಟನೆಗಳು ವರದಿಯಾಗಿವೆ ಎಂದು ನಾಗರಿಕ ಹಕ್ಕುಗಳ...

ಸಿಐಟಿಯು ಕಾನೂನು ಹೋರಾಟಕ್ಕೆ ಮೊದಲ ಜಯ: ಕನಿಷ್ಠ ವೇತನ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ತಡೆ

ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಹೊಸ ಕನಿಷ್ಠ ವೇತನವನ್ನು ತಡೆಹಿಡಿದಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೊಸ ವೇತನ ನೀಡುವುದನ್ನು ಅಮಾನತಿನಲ್ಲಿಟ್ಟಿದ್ದ ಸರ್ಕಾರದ ಮೂರು...

ಟಿಎಂಸಿ ಹೆಸರು, ಚಿಹ್ನೆ ಫ್ರೀಜ್: ಮಮತಾ ಬ್ಯಾನರ್ಜಿಗೆ ‘ಫುಟ್‌ಬಾಲ್ ಪ್ಲೇಯರ್’, ಬಂಡಾಯ ಬಣಕ್ಕೆ ‘ಲಕೋಟೆ’ ಚಿಹ್ನೆ ನೀಡಿದ ಚುನಾವಣಾ ಆಯೋಗ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಹೂವು-ಹುಲ್ಲು' ಚಿಹ್ನೆಯನ್ನು ಮುಟ್ಟುಗೋಲು (ಫ್ರೀಜ್) ಹಾಕಿದ ನಂತರ, ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಎರಡೂ ಎದುರಾಳಿ ಬಣಗಳಿಗೆ ಪ್ರತ್ಯೇಕ ಮಧ್ಯಂತರ ಹೆಸರು...