ಇಸ್ರೇಲ್‌ನ ಪ್ರವಾಸದಲ್ಲಿದ್ದ ಯು.ಆರ್ ಅನಂತಮೂರ್ತಿ ಅವರು ಇಸ್ರೇಲ್‌ನ ರಾಜಧಾನಿಯ ಹೊಟೇಲ್‌ವೊಂದರಲ್ಲಿ ತಂಗಿದ್ದ ಸಂದರ್ಭ. ಸಂಜೆ ವೇಳೆಗೆ ಹೊಟೇಲ್‌ನ ಮುಂಭಾಗದ ರಸ್ತೆಯಲ್ಲಿ ಭಾರಿ ಸ್ಪೋಟವೊಂದು ನಡೆಯುತ್ತದೆ. ಇದರಿಂದ ಆತಂಕಗೊಂಡ ಅನಂತಮೂರ್ತಿ ಅವರು ತಕ್ಷಣವೆ ಬಹುಮಹಡಿಯ ತಮ್ಮ ಕೋಣೆಯಿಂದ ಹೊರಬಂದು ಮೆಟ್ಟಿಲಿಳಿಯಲು ದೌಡಾಯಿಸುತ್ತಿರುವಾಗ ಎದುರಿಗೆ ಬಂದ ಇಸ್ರೇಲ್‌ನ ಸರ್ವರ್ “ಸರ್ ಏನಾಗಿಲ್ಲ. ಗಾಬರಿ ಬೇಡ, ನೀವು ನಿರುಮ್ಮಳವಾಗಿರಿ” ಎಂದು ಹೇಳುತ್ತಾನೆ.

ಇಷ್ಟೊಂದು ದೊಡ್ಡ ಸದ್ದು ಆಗಿರುವಾಗ ಹೊಟೇಲ್‌ನ ಸರ್ವರ್, ಮ್ಯಾನೇಜರ್‌ಗಳು, ಹೊಟೇಲ್‌ನಲ್ಲಿದ್ದ ಇಸ್ರೇಲಿಗಳು ಏನೂ ಆಗೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿರುವುದು ಅನಂತಮೂರ್ತಿ ಅವರಿಗೆ ಆಶ್ಚರ್ಯ ಹುಟ್ಟಿಸುತ್ತದೆ. ಕೋಣೆಗೆ ಮರಳಿದ ಅನಂತಮೂರ್ತಿವರು ಕಿಟಿಕಿಯಿಂದ ಹೊರಗೆ ನೋಡಿದಾಗ ರಸ್ತೆಯಲ್ಲಿ ಇಸ್ರೇಲ್‌ನ ಪೊಲೀಸರು, ಆಂಬ್ಯುಲೆನ್ಸ್ ಗಳು ನಿಂತಿದ್ದು, ರಸ್ತೆ ತುಂಬಾ ಹರಿದಿದ್ದ ರಕ್ತವನ್ನು ಅಲ್ಲಿನ ಕಾರ್ಪೋರೇಷನ್ ಸಿಬ್ಬಂದಿಗಳು ತೊಳೆಯುತ್ತಿರುವುದು ಕಾಣಿಸುತ್ತದೆ. ಇಸ್ರೇಲ್ ಮತ್ತು ಪ್ಯಾಲೇಸ್ತೇನಿಗಳ ನಡುವಿನ ಸಂಘರ್ಷದ ಬಗ್ಗೆ ಮೊದಲೆ ತಿಳಿದಿದ್ದ ಅನಂತಮೂರ್ತಿ ಅವರಿಗೆ ಇದೇನು ಯುದ್ಧವೇ ನಡೆದು ಬಿಡುತ್ತದೆನೋ ಎಂಬ ಆತಂಕಕ್ಕೊಳಗಾಗುತ್ತಾರೆ.

ಆದರೆ ಹೊರಗೆ ನಡೆದ ಘಟನೆ ಬಗ್ಗೆ ಸ್ಪಷ್ಟ ಮಾಹಿತಿ ಆ ಕ್ಷಣಕ್ಕೆ ಯಾರೂ ಹೇಳದಂತಾಗಿದ್ದರು. ತಮ್ಮ ಕೋಣೆಯಲ್ಲಿದ್ದ ಟಿವಿಯ ನ್ಯೂಸ್ ಚಾನಲ್‌ಗಳನ್ನೆಲ್ಲಾ ತಡಕಾಡಿದರೂ ಹೊರಗೆ ನಡೆದ ಘಟನೆ ಬಗ್ಗೆ ಯಾವುದೇ ಸಣ್ಣ ಬ್ರೇಕಿಂಗ್ ಸುದ್ದಿಯೂ ಕಾಣಸಿಗಲಿಲ್ಲ. ಏನೋ ಒಂದು ಬಾರೀ ಅನಾಹುತವೇ ನಡೆದಿದ್ದರೂ ಅಲ್ಲಿನ ಸುದ್ದಿ ಮಾಧ್ಯಮಗಳು ಏನೂ ಆಗಿಲ್ಲವೇನೊ ಎಂಬಂತೆ ಇರುವುದು ಅನಂತಮೂರ್ತಿ ಅವರಿಗೆ ಆಶ್ಚರ್ಯ ತರುತ್ತದೆ. ಹೊಟೇಲ್‌ನ ಸಿಬ್ಬಂದಿಗಳ ಮೂಲಕ ಪ್ಯಾಲೇಸ್ತೇನಿ ಉಗ್ರರು ದಾಳಿ ನಡೆಸಿದ್ದು ನಾಲ್ಕಾರು ಜನ ಇಸ್ರೇಲಿಗಳು ಸಾವು ಕಂಡಿದ್ದಾರೆ. ಉಗ್ರರರನ್ನು ಇಸ್ರೇಲ್ ಸೇನೆ ಬೇಟೆಯಾಡಿದೆ ಎಂಬ ಸಣ್ಣ ಮಾಹಿತಿ ಸಿಗುತ್ತದೆ. ಆದರೆ ಅದರ ಪೂರ್ಣ ವಿವರದ ಕುತೂಹಲ ಮಾತ್ರ ಅನಂತಮೂರ್ತಿ ಅವರನ್ನು ಕಾಡುತ್ತಲೆ ಇರುತ್ತದೆ.

ಇದೇ ಯೋಚನೆಯಲ್ಲಿ ರಾತ್ರಿ ಕಳೆದ ಅವರು, ಬೆಳಗ್ಗೆನೆ ಲಘುಬಗೆಯಿಂದ ಇಸ್ರೇಲ್‌ನ ನ್ಯೂಸ್ ಪೇಪರ್ ಗಳನ್ನೆಲ್ಲಾ ಜಾಲಾಡುತ್ತಾರೆ. ಟಿವಿ ಚಾನಲ್‌ಗಳನ್ನೂ ಹುಡುಕಾಡುತ್ತಾರೆ. ಆದರೆ ಯಾವ ಪತ್ರಿಕೆಯಲ್ಲೂ/ ಚಾನಲ್ ಗಳಲ್ಲೂ ಹಿಂದಿನ ದಿನದ ಸುದ್ದಿ ಇರುವುದು ಕಾಣುವುದಿಲ್ಲ. ಯಾವ ಟಿವಿಗಳಲ್ಲೂ ಚರ್ಚೆಗಳಿರುವುದಿಲ್ಲ. ಆ ದೇಶದ ಅಗ್ರಶ್ರೇಣಿಯ ಪತ್ರಿಕೆಯೊಂದು ತನ್ನ ಮುಖಪುಟದಲ್ಲಿ ಇಸ್ರೇಲ್ ನ ಬರಡು ನೆಲದಲ್ಲಿ ರೈತನೋರ್ವ ಕೃಷಿ ಮಾಡಿ ಭರ್ಜರಿ ಫಸಲು ಬೆಳೆದ ಸುದ್ದಿಯೊಂದು ರಾರಾಜಿಸುತ್ತಿರುತ್ತದೆ. ಆ ಪತ್ರಿಕೆಯಷ್ಟೇ ಅಲ್ಲ ಇಸ್ರೇಲ್ ನ ಅನೇಕ ಮುಖ್ಯವಾಹಿನಿಯ ಪತ್ರಿಕೆಗಳು ಅನ್ಯ ಸುದ್ದಿಗಳನ್ನೆ ಮುಖ್ಯಸುದ್ದಿಗಳನ್ನಾಗಿ ಪ್ರಕಟಿಸಿ ಉಗ್ರರ ದಾಳಿ, ನಾಗರೀಕರ ಸಾವನ್ನು ಹತ್ತಾರು ಸಾಲುಗಳ ಸುದ್ದಿಯಾಗಿ ಕೊನೆಯ ಪುಟಗಳ ಮೂಲೆಯಲ್ಲಿ ಪ್ರಕಟಿಸಿರುತ್ತವೆ. ಟಿವಿ ಚಾನಲ್ ಗಳು ಒಂದು ಸಾಲಿನ ಸುದ್ದಿಯಾಗಿ ಪ್ರಸಾರ ಮಾಡಿ ಸುಮ್ಮನಾಗಿರುತ್ತವೆ. ಒಂದು ರಾಷ್ಟ್ರದ ಸಾರ್ವಭೌಮತೆಯ ಮೇಲೆ ನಡೆದ ದಾಳಿಯನ್ನೇ ಅಲ್ಲಿನ ಮಾಧ್ಯಮಗಳು ಎದುರುಗೊಂಡ ಪರಿ ಅನಂತಮೂರ್ತಿ ಅವರಿಗೆ ಸೋಜಿಗವೆನಿಸುತ್ತದೆ.

ಈ ಘಟನೆಯನ್ನು ಸಮಾರಂಭವೊಂದರಲ್ಲಿ ಹೇಳಿದ ಅನಂತಮೂರ್ತಿ ಅವರು ಇದೇ ಘಟನೆ ಭಾರತದಲ್ಲಿ ನಡೆದಿದ್ದರೆ ಭಾರತದ ಮಾಧ್ಯಮಗಳು ಹೇಗೆ ವರ್ತಿಸುತ್ತಿದ್ದವು ಎಂದು ಪ್ರಶ್ನಿಸುತ್ತಾರೆ. ಅನಂತಮೂರ್ತಿ ಅವರು ಪ್ರಶ್ನೆಗೆ ಉತ್ತರ ಹುಡುಕಾಡುತ್ತಿರುವ ಹೊತ್ತಿನಲ್ಲೇ ದೇವರ ಕುರಿತು ಅವರದ್ದೇ ಮಾತುಗಳನ್ನು ಉದಾಹರಿಸಿದ ಕಲ್ಬುರ್ಗಿ ಅವರ ಹತ್ಯೆ ನಡೆದು ಹೋಗಿಬಿಡುತ್ತದೆ. ಕಲ್ಬುರ್ಗಿ ಹತ್ಯೆಗೆ ಭೂಮಿಕೆಯನ್ನು ಒದಗಿಸಿಕೊಟ್ಟ ಸಾರ್ಥಕತೆ(?) ಮಾಧ್ಯಮಗಳದ್ದೇ ಆಗಿತ್ತು ಎಂಬುದು ಮರೆಯಲಾರದ ಸತ್ಯ. ಇಂತಹ ವಿಕೃತ ಅಭಿಪ್ರಾಯ ಉತ್ಪಾದನೆಯ ಕೆಲಸವನ್ನು ಭಾರತದ ಅದರಲ್ಲೂ ಕನ್ನಡದ ನ್ಯೂಸ್ ಚಾನಲ್ ಗಳಲ್ಲಿ ಮುಂದುವರೆದಿದೆ….

ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ವಲಸೆ ಹೊರಟ ಸಾವಿರಾರು ಕೂಲಿ ಕಾರ್ಮಿಕರ ಬದುಕಿನ ಬರ್ಬರತೆಗಿಂತಲೂ ಐಟಿ.ಬಿಟಿ ಟೆಕ್ಕಿಗಳ ಬದುಕಿನ ಬಗ್ಗೆ ಮಾಧ್ಯಮಗಳು ಚಿಂತಾಕ್ರಾಂತವಾಗಿದ್ದವು. ಅಂಗಾಲಿನ ಚರ್ಮಕಿತ್ತು ನೆತ್ತರು ತೊಟ್ಟಿಕ್ಕುವಂತೆ ನಡೆಯುತ್ತಾ ಸಾಗಿದ ಬಡ ಜನಸಮುದಾಯಕ್ಕೆ ಊರು ಸೇರಲು ವ್ಯವಸ್ಥೆ ಮಾಡಲಾರದ ಸರ್ಕಾರಗಳು ಬದುಕಿದ್ದು ಸತ್ತಂತೆ ಎಂಬ ಪ್ರಶ್ನೆಯನ್ನೆ ಎಸೆಯದ ಮಾಧ್ಯಮಗಳು ಸ್ಪೆಷಲ್ ಪ್ಲೈಟ್ ನಲ್ಲಿ ಬರುವ ವಿಐಪಿ ಸಂತತಿಗಳ ರಕ್ಷಣೆಯೇ ದೊಡ್ಡ ಕ್ರಮವೆಂದು ಭಜನೆಯಲ್ಲಿ ತೊಡಗಿದ್ದವು. ಈ ದೃಶ್ಯ ನೋಡಿದಾಗ, ಇಂತಹ ಹೊತ್ತಿನಲ್ಲಿ ಮಾಧ್ಯಮಗಳು ನಡೆದುಕೊಂಡ ರೀತಿ ಗಮನಿಸಿದಾಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1930ರ ಸಂದರ್ಭದಲ್ಲಿ ಹೇಳಿದ ‘ಭಾರತದಲ್ಲಿ ದಲಿತ, ದಮನಿತರಿಗೆ ಪತ್ರಿಕೆಗಳಿಲ್ಲ’ ಎಂಬ ಮಾತು ನೆನಪಾಯಿತು.

ಇಂದು ಮಾಧ್ಯಮಗಳು ಟೀಕೆಗೆ ಅತೀತವಾಗಿಲ್ಲ ಎಂಬ ಸನ್ನಿವೇಶ ದಿನೇ ದಿನೇ ಸ್ಪಷ್ಟವಾಗುತ್ತಿದೆ. ಕೊರೊನಾ ಸೋಂಕಿನ ವಿರುದ್ದ ಹೋರಾಟದ ಈ ಸಂದರ್ಭದಲ್ಲಿ ಅನೇಕ್ ಟ್ರೋಲ್ ಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ. ‘ಇಡೀ ದೇಶ ಮಹಾಮಾರಿ ಕೊರೊನಾ ವಿರುದ್ದ ಹೋರಾಡುತ್ತಿದ್ದರೆ ನ್ಯೂಸ್ ಚಾನಲ್ ಗಳು ಮುಸ್ಲಿಮರ ವಿರುದ್ದ ಹೋರಾಡುತ್ತಿವೆ’ ಎಂಬ ಸಾಲವೊಂದು ಕಾಣಿಸಿತು. ಇದು ನಿಜವೂ ಕೂಡ. ಕೊರೊನಾ ಎಂಬ ಸೋಂಕು ಜಾತಿ, ಧರ್ಮ, ವರ್ಗಗಳ ಬೇಧವಿಲ್ಲದೆ ತಗುಲುತ್ತಿರುವಾಗ ಈ ಸೋಂಕನ್ನು ಒಂದು ಧರ್ಮದ ತಲೆಗೆ ಕಟ್ಟಿ ಜನರಲ್ಲಿ ಕೊರೊನಾಗಿಂತಲೂ ಭೀಕರವಾದ ಕೋಮು ಸೋಂಕನ್ನು ಬಿತ್ತುವ ಕೆಲಸ ನಿರಂತರವಾಗಿ ನಡೆದಿದೆ. ಇದು ಈ ಕಾಲದ ಬಹುದೊಡ್ಡ ಬಿಕ್ಕಟ್ಟು. ಇದರ ಕುರಿತು ಪ್ರಧಾನ ಮಂತ್ರಿಗಳು ಟ್ವೀಟ್ ಮಾಡಿದ್ದಾರೆ.

ರೋಗವೆಂಬುದು ಜಾತಿ, ಧರ್ಮ, ಲಿಂಗವಿಲ್ಲದೆ ಬರುತ್ತದೆ ಅದರ ವಿರುದ್ದ ಎಲ್ಲರೂ ಒಟ್ಟಾಗಿ ಹೋರಾಡಬೇಕಾದ ಕಾಲವಿದು ಎಂದು ಕರೆ ನೀಡುತ್ತಾರೆ. ಆದರೆ ನಮ್ಮ ಮಾಧ್ಯಮಗಳು ಮಾತ್ರ ಒಂದು ನಿರ್ಧಿಷ್ಟ ಸಮುದಾಯವನ್ನು ಗುರಿ ಮಾಡುತ್ತಾ ಸಮಾಜ ಒಡೆಯುವ ಕೃತ್ಯದಲ್ಲಿ ತೊಡಗುತ್ತಲೆ ಇವೆ. ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಎಂಬ ಪ್ರಧಾನಿಗಳ ಮನವಿಯನ್ನು ವೇದವಾಕ್ಯದಂತೆ ಕೊಂಡಾಡುವ ಮಾಧ್ಯಮಗಳು ಅದೇ ಪ್ರಧಾನಿಯ ಟ್ವೀಟ್ ಅನ್ನು ಪ್ರಧಾನಧಾರೆಯಲ್ಲಿ ಜನರಿಗೆ ತಲುಪಿಸುವಲ್ಲಿ ಆಸಕ್ತಿ ಕಳೆದುಕೊಳ್ಳುತ್ತವೆ. ಬಹುಶಃ ಪ್ರಧಾನಿಯ ಸಕಾರಾತ್ಮಕ ಮಾತುಗಳು ಮಾಧ್ಯಮಗಳಿಗೆ ರುಚಿಸುವುದಿಲ್ಲವೇನೋ?

ಪಾದಾರಾಯನಪುರದಲ್ಲಿ ಕೊರೊನಾ ವಾರಿಯರ್‍ಸ್‌ ವಿರುದ್ಧದ ದಾಂಧಲೆ ಅಕ್ಷಮ್ಯ ಅಪರಾಧ, ಅದನ್ನು ಯಾರೊಬ್ಬರು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಕಾರಣರಾದವರನ್ನು ಕಠಿಣವಾಗಿ ಶಿಕ್ಷಿಸಬೇಕು. ಅದೇ ರೀತಿಯ ಎಲ್ಲಾ ಘಟನೆಗಳನ್ನು ಮನುಷ್ಯರಾದವರು ಸಮರ್ಥಿಸಿಕೊಳ್ಳಲಾರರು. ಆದರೆ ಈ ಘಟನೆಯನ್ನು ಸುದ್ದಿ ವಾಹಿನಿಗಳು ವಿಶ್ಲೇಷಿಸುತ್ತಿರುವ ರೀತಿ ಮಾತ್ರ ಅಪಾಯಕಾರಿಯಾದದ್ದು. ರಿಪಬ್ಲಿಕ್ ಆಪ್ ಪಾದರಾಯನಪುರ, ರೌಡಿ ರಾಯನಪುರ.. ಇಂತಹ ಟೈಟಲ್ ಗಳನ್ನು ಕೊಟ್ಟುಕೊಂಡು ತಮ್ಮ ಪ್ರಖಾಂಡ ಪಾಂಡಿತ್ಯವನ್ನೆಲ್ಲಾ ಬಳಸಿ ನಿರೂಪಿಸಲಾಗುತ್ತಿದೆ. ಪುಂಡರು ನಡೆಸಿದ ಒಂದು ಘಟನೆಯಿಂದ ಇಡೀ ಪಾದಾರಾಯನಪುರದ ಸಾಮಾಜಿಕ ಅಸ್ಮಿತೆಯನ್ನೇ ಗೌಣಗೊಳಿಸುವ ಕೃತ್ಯ ಇದೆಲ್ಲವೆ?, ಕ್ಯಾಮರ ಮುಂದೆ ಕುಳಿತ ಸುದ್ದಿ ನಿರೂಪಕ ಪೊಲೀಸ್ ಆಗಿ, ವಕೀಲನಾಗಿ, ಜಡ್ಜ್ ಆಗಿಯೂ ಏಕಪಾತ್ರಾಭಿನಯದಂತೆ ವರ್ತಿಸಿ ಅಂತಿಮವಾಗಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳನ್ನು ನಿರ್ದೇಶಿಸುವ ಅವತಾರ ಪುರುಷನ ವಿಶ್ವರೂಪದಂತ ಆರ್ಭಟಿಸುತ್ತಾನೆ. ಮನೆ -ಮಠವಿಲ್ಲದೆ ಬೀದಿಗಿಳಿದ ಜನರ ಪಾಡು ಗ್ರಹಿಸದ ಶೀತಲ ಕೊಠಡಿಯಲ್ಲಿ ಕುಳಿತ ಪ್ರಭೂತಿ ಪತ್ರಕರ್ತನೊಬ್ಬ ಜನರು ಆತ್ಮಹತ್ಯೆ ಮಾಡಿಕೊಳ್ಳಲಿ ಎಂದು ವಿಕ್ಷಿಪ್ತ ಆಸೆಯನ್ನು ವ್ಯಕ್ತಪಡಿಸುತ್ತಾನೆ. ಗುಂಡಿಟ್ಟು ಕೊಂದು ಬಿಡಿ, ನಾಶ ಮಾಡಿಬಿಡಿ, ತಕ್ಕ ಪಾಠ ಕಲಿಸಿ, ಸರ್ಕಾರ ಏನು ಕತ್ತೆ ಕಾಯ್ತಿದೆಯಾ, ಈ ಸಮುದಾಯಕ್ಕೆ ಕೊಟ್ಟ ಸಲಿಗೆ ಜಾಸ್ತಿಯಾಯಿತು, ಅವರೆಲ್ಲಾ ರಾಕ್ಷಸರು, …… ಹೀಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ವೇಚ್ಛಾಚಾರದ ಪ್ರದರ್ಶನ ಬಹುಶಃ ಇಲ್ಲಿ ಮಾತ್ರ ಸಾಧ್ಯ.

ರಾಜಕೀಯ ಪಕ್ಷವೊಂದರ ಕೋಮು ಧ್ರುವೀಕರಣ ರಾಜಕಾರಣದ ಪ್ರಯೋಗ ಈಗ ಭರ್ಜರಿ ಫಸಲನ್ನೆ ಕೊಟ್ಟಿದೆ. ಆ ಪ್ರಯೋಗ ಒಂದು ಯಶಸ್ವಿ ಫಾರ್ಮೂಲದಂತೆ ಅದಕ್ಕೆ ಬೇಕಾದ ಪ್ರೋಪೇಷೇನೆಟ್ ಗಳನ್ನು ಆಯಾ ಕಾಲಕ್ಕೆ ತಕ್ಕಂತೆ ಅದು ಸೇರಿಸಿಕೊಳ್ಳಲಾಗುತ್ತಿದೆ. ಕೋಮುಧ್ರುವೀಕರಣದ ಪ್ರಯೋಗದ ಉನ್ನತೀಕರಣದ ಸಂಯೋಜಿತ ಸರಕಾಗಿ ಈಗ ಮಾಧ್ಯಮಗಳು ಯಶಸ್ವಿಯಾಗಿ ಬಳಕೆಯಾಗುತ್ತಿವೆ. ಅದೆಷ್ಟರಮಟ್ಟಿಗೆ ಎಂದರೆ ಕೊರೊನಾ ವೈರಸ್ ನ್ನು ಜಾತಿ, ಧರ್ಮಗಳಿಗೆ ವಿಂಗಡಿಸಿ ಬೆಳೆ ಕೂಯ್ದುಕೊಳ್ಳಲು ದಾರಿ ಬಗೆಯುತ್ತಿವೆ.

ಮುಂದಿನ ಸರದಿ ದಲಿತರು, ದಮನಿತರದ್ದೆ. ಮುಂಬೈ, ಕೊಲ್ಕೊತ್ತಾ, ಉತ್ತರ ಪ್ರದೇಶದಲ್ಲಿನ ಬೃಹತ್ ಸ್ಲಂ ಗಳಲ್ಲಿನ ಕೊರೊನಾ ಸಾವು, ಸಂಕಟಗಳಿಗೆ ಬಲಿಯಾಗುವ ಬಡವರೇ ಭವ್ಯ ಭಾರತಕ್ಕೆ ಮಾರಕ ಎಂಬಂತೆ ಅರಚಲು ಮಾಧ್ಯಮಗಳು ಅಣಿಯಾಗುತ್ತಿವೆ. ವ್ಯಕ್ತಿಗತ ತಪ್ಪುಗಳನ್ನು ಸಮುದಾಯದ ತಪ್ಪುಗಳಂತೆ ದಾಳಿನಡೆಸುವ ಪರಂಪರೆ ಈ ದೇಶದಲ್ಲಿ ಮುಂದುವರೆದಿದೆ. ಅದಕ್ಕೆ ದುರ್ಬಲ ಜಾತಿ- ಸಮಯದಾಯಗಳೆ ಗುರಿ. ಕೇವಲ ಮತದಾರನ ಮೆದುಳಿನಲ್ಲಿ ಮಾತ್ರ ಈ ಕೋಮುದ್ವೇಷದ ಸೋಂಕು ಬಿತ್ತಲ್ಪಟ್ಟಿಲ್ಲ. ಮಾಧ್ಯಮಗಳ ಮೆದುಳಲ್ಲೂ ಬೇರು ಬಿಟ್ಟಿರುವುದು ಭಾರತದ ದೌರ್ಭಾಗ್ಯ.

ಹೊಸ ತಲೆಮಾರಿನ ಯುವ ಪತ್ರಕರ್ತರಿಗೆ ಇಂದು ಆದರ್ಶವಾಗಬಲ್ಲ, ಮಾದರಿಯಾಗಬಲ್ಲ ಮಾಧ್ಯಮ/ಪತ್ರಕರ್ತರು ಬೇಕಾಗಿದ್ದಾರೆ. ಅದರ ಕೊರತೆ ಎದ್ದು ಕಾಣುತ್ತಿರುವುದು ಗೋಚರಿಸುತ್ತಿದೆ. ತರಗತಿಗಳಲ್ಲಿ ಕಲಿತು ಹೊರ ಬರುವ ಹೊಸತಲೆಮಾರಿನ ಪತ್ರಕರ್ತರು ಈಗ ಅತಿರಂಜಕ ಸುಳ್ಳು, ನಟನೆ, ವಿತಂಡವಾದ, ಕಿರುಚಾಟ, ಸಮುದಾಯ ಒಡೆಯುವ ತಂತ್ರಗಳನ್ನು ಕಲಿಯಬೇಕಿದೆ. ಇದಕ್ಕಾಗಿ ಮತ್ತೆ ವಿಶ್ವವಿದ್ಯಾಲಯಗಳ ಮೊರೆ ಹೋಗಬೇಕಿಲ್ಲ. ಈಗಿರುವ ಈ ಎಲ್ಲಾ ಕೌಶಲ್ಯ ಹೊಂದಿರುವ ಪತ್ರಕರ್ತ(?) ರನ್ನೆ ಮಾದರಿಯಾಗಿಸಿಕೊಳ್ಳುವ ಅಪಾಯ ನಮ್ಮೆದುರಿಗಿದೆ. ಇದೇ ಪತ್ರಿಕೋದ್ಯಮ ಅಥವಾ ಪತ್ರಕರ್ತನ ಗುಣಲಕ್ಷಣಗಳು ಎಂದು ನಂಬುವಂತಾಗಿದೆ. ಇದರಿಂದ ಈ ಹೊಸತಲೆಮಾರನ್ನು ಕಾಪಾಡಬೇಕಾದ ಹೊಣೆಗಾರಿಕೆಯೂ ನೈಜ ಪತ್ರಕರ್ತರ ಮೇಲಿದೆ.

ದುರಾದೃಷ್ಟವೆಂದರೆ ಕನ್ನಡದ ನ್ಯೂಸ್ ಚಾನಲ್‌ಗಳಲ್ಲಿ ಸುದ್ದಿ ನಿರೂಪಿಸುವವರಿಗೆ ಈ ಮೇಲಿನ ಗುಣಲಕ್ಷಣಗಳು ಇರದೇ ಹೋದರೆ ಅಲ್ಲಿ ಜಾಗವಿಲ್ಲ. ಈಶ್ವರ ದೈತೋಟ, ಅನಂತ ಚಿನಿವಾರ, ಸಮೀವುಲ್ಲಾ ಬೆಲಗೂರು, ಲಕ್ಷ್ಮಣ ಹೂಗಾರ, ಮಂಜುಳಾ ಮಾಸ್ತಿಕಟ್ಟೆ ಯಂತಹ ಸಂವೇದನಾಶೀಲ, ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಗೊಳಪಟ್ಟ ಪತ್ರಕರ್ತರು ಅಪಥ್ಯದಂತೆ ಕಾಣುತ್ತಾರೆ.

ಮೆಕ್ ಲೂಹನ್ ಹೇಳುವಂತೆ ಮಾಧ್ಯಮಗಳು ಜನರ ಸಂದೇಶದ (ಜನರೆಂದರೆ ಸರ್ಕಾರವೂ ಕೂಡ) ವಾಹಕವೇ ವಿನಃ ಮಾಧ್ಯಮವೆ ಸಂದೇಶವಲ್ಲ. ಆದರೆ ಇಂದು ‘ಮಾಧ್ಯಮವೇ ಸಂದೇಶ’ ವಾಗಿದೆ. ಇದು ಅಪಾಯಕಾರಿಯಾದದ್ದು. ಇದು ಮುಂದುವರೆದು ಮಾಧ್ಯಮಗಳು ಇಂದು ಶಾಸಕಾಂಗದಂತೆಯೂ, ಕಾರ್ಯಾಂಗದಂತೆಯೂ, ನ್ಯಾಯಾಂಗದಂತೆಯೂ ವರ್ತಿಸುತ್ತಿವೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಪಷ್ಟ ದುರುಪಯೋಗ. ಮಾಧ್ಯಮಗಳಿಗೆ ಸಂವಿಧಾನದತ್ತ ವಿಶೇಷ ಅಧಿಕಾರವಿಲ್ಲ. ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಇರುವ ಮಿತಿಗೊಳಪಟ್ಟಿದೆ ಎಂಬ ಅರಿವು ಮರೆತಂತೆ ಮೆರೆಯುತ್ತಿರುವ ಮಾಧ್ಯಮಗಳದ್ದು ನಾಗರೀಕ ದ್ರೋಹ. ಭಾವನಾತ್ಮಕವಾಗಿ ಜನರ ಮನಸ್ಸುಗಳನ್ನು ಕೆದಕುವುದು ಅಪಾಯಕಾರಿ. ಸಂವಿಧಾನದ ಮೂಲತತ್ವಗಳಾದ ಸ್ವಾತಂತ್ರ, ಸಮಾನತೆ,ಸೌಹಾರ್ದತೆ, ಧರ್ಮ ನಿರಪೇಕ್ಷತೆ ಅರ್ಥವತ್ತಾಗಿರುವಂತೆ ನೋಡಿಕೊಳ್ಳುವುದು ಮಾಧ್ಯಮಗಳ ಜವಾಬ್ದಾರಿ. ಜನರ ದನಿಯಾಗಬೇಕಾದ ಮಾಧ್ಯಮಗಳೇ ತಮ್ಮ ದನಿಯನ್ನು ಜನರ ದನಿಯೆಂದು ನಂಬಿಸುವ ಅತಿರೇಕತನಕ್ಕಿಳಿದಿವೆ. ತಾವು ಪ್ರಕಟಿಸಿದ ಬದ್ಧತೆಯನ್ನು ಮೀರಿ ನಡೆವ ಆತ್ಮವಂಚನೆ ಇದಾಗಿರುತ್ತದೆ.

ಇವತ್ತಿನ ಮಾಧ್ಯಮಗಳ ಕುರಿತು ಮಾತನಾಡುವಾಗ ಕಾರ್ಲ್‌ಮಾರ್ಕ್ಸ ನ ಈ ಮಾತು ನೆನಪಾಗುತ್ತದೆ. “ಬರಹಗಾರನು (ಪತ್ರಕರ್ತ) ಬದುಕಬೇಕಾದರೂ ಬರೆಯಬೇಕಾದರೂ ಅಗತ್ಯವಿರುವುದನ್ನು ಸಂಪಾದಿಸಲೇಬೇಕಾಗುತ್ತದೆ, ನಿಜ, ಆದರೆ ಸಂಪಾದನೆ ಮಾಡುವುದಕ್ಕಾಗಿಯೇ ಬದುಕುವ ಮತ್ತು ಬರೆಯುವ ಸಂಪಾದನೆ ಅವಸ್ಥೆ ಅವನದ್ದಾಗಬಾರದು.”

ಇವತ್ತು ಏನಾಗಿದೆ ಎಂಬುದು ನಿಮ್ಮ ಊಹೆಗೆ ಬಿಟ್ಟಿದ್ದು.


ಇದನ್ನೂ ಓದಿ: ಪಾದರಾಯನಪುರ-ಬೆಳೆಸಲಾಗುತ್ತಿರುವ ಬಿಕ್ಕಟ್ಟು: ಅಧಿಕಾರಿಗಳಿಗೆ ಒತ್ತಡ? ಕಾಣದ ಕೈಗಳೇಕೆ ಕೆಲಸ ಮಾಡುತ್ತಿವೆ? 

LEAVE A REPLY

Please enter your comment!
Please enter your name here