ಜಾರ್ಖಂಡ್‌ನ ರಾಂಚಿ ಜಿಲ್ಲೆಯ ಸಿರ್ಕಾ ಗ್ರಾಮದಲ್ಲಿ ಬೈಕ್‌ನ ಬ್ಯಾಟರಿ ಮತ್ತು ಚಕ್ರವನ್ನು ಕದ್ದಿದ್ದಾನೆ ಎಂದು ಆರೋಪಿಸಿ 26 ವರ್ಷದ ಯುವಕನನ್ನು ಗ್ರಾಮಸ್ಥರು ವಿದ್ಯುತ್ ಕಂಬಕ್ಕೆ ಕಟ್ಟಿ ಗುಂಪು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿ ಮಹೇಶಪುರ ಗ್ರಾಮದ ನಿವಾಸಿ ಮುಬಾರಕ್ ಖಾನ್ ಎಂಬವರು ನೆರೆಯ ಸಿರ್ಕಾ ಗ್ರಾಮಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟ ವ್ಯಕ್ತಿಯು ಬೈಕ್‌ನ ಚಕ್ರ ಮತ್ತು ಬ್ಯಾಟರಿಯನ್ನು ಕದಿಯುತ್ತಿದ್ದು, ಸ್ಥಳದಿಂದ ಕಾರಿನ ಚಕ್ರ ಮತ್ತು ಜ್ಯಾಕ್ ಪತ್ತೆಯಾಗಿದೆ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಗ್ರಾಮಸ್ಥರು ಯುವಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಕ್ರೂರವಾಗಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯ ಮಾಹಿತಿ ಪಡೆದ ನಂತರ ಪೊಲೀಸರು ಭಾನುವಾರ ಮುಂಜಾನೆ 3 ಗಂಟೆ ಸುಮಾರಿಗೆ ಸ್ಥಳಕ್ಕೆ ಧಾವಿಸಿದ್ದು, ಅಷ್ಟೊತ್ತಿಗೆ ಮುಬಾರಕ್ ಮೃತಪಟ್ಟಿದ್ದರು. ಇದರ ನಂತರ ಯುವಕನ ಶವವನ್ನು ಪೊಲೀಸ್ ಠಾಣೆಗೆ ತರಲಾಯಿತು ಎನ್ನಲಾಗಿದೆ.
ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಸಿಂಘು ಗಡಿಯ ಒಂದು ಭಾಗದಲ್ಲಿ ದಾಂಧಲೆ ಮಾಡಿದ್ದು ಸ್ಥಳೀಯರಲ್ಲ ಬಿಜೆಪಿ ಕಾರ್ಯಕರ್ತರು!
ಮುಬಾರಕ್ ಅವರ ಹಿರಿಯ ಸಹೋದರ ತಬರಕ್ ಖಾನ್ ಅಂಗಾರ ಪೊಲೀಸ್ ಠಾಣೆಯಲ್ಲಿ 19 ಹೆಸರಿಸಿದ ವ್ಯಕ್ತಿಗಳು ಮತ್ತು 15-25 ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ದೂರು ದಾಖಲಿಸಿದ್ದಾರೆ.
“ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಬಗ್ಗೆ ತನಿಖೆ ಆರಂಭಿಸಿದ್ದೇವೆ. ಪ್ರಕರಣದ ಬಗ್ಗೆ ಈಗಾಗಲೇ ಕೆಲವು ಜನರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ” ಎಂದು ರಾಂಚಿಯ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ನೌಶಾದ್ ಆಲಂ ಹೇಳಿದ್ದಾರೆ.
“ಮೇಲ್ನೋಟಕ್ಕೆ ಇದು ಕಳ್ಳತನದ ಪ್ರಕರಣವೆಂದು ತೋರುತ್ತಿಲ್ಲ, ಯಾವುದೊ ವಿವಾದವಿದೆ. ಸ್ಥಳೀಯರು ಬೈಕ್‌ನ ಚಕ್ರ ಮತ್ತು ಬ್ಯಾಟರಿಯನ್ನು ಕಳವು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ ಈ ಹೇಳಿಕೆ ಅನುಮಾನದಿಂದ ಕೂಡಿದೆ. ಪಕ್ಕದ ಹಳ್ಳಿಯಿಂದ ಮತ್ತೊಂದು ಬೈಕ್‌ನ ಚಕ್ರ ಮತ್ತು ಬ್ಯಾಟರಿಯನ್ನು ಕದಿಯಲು ಯಾರಾದರೂ ಬೈಕ್‌ನಲ್ಲಿ ಬರುತ್ತಾರೆಯೇ? ಮತ್ತೊಬ್ಬರ ಮನೆಯಲ್ಲಿ ಚಕ್ರ ಮತ್ತು ಬ್ಯಾಟರಿಯನ್ನು ಕದ್ದು, ಅಪಾಯವನ್ನು ಯಾಕೆ ಮೈಗೆಳೆಯುತ್ತಿದ್ದನು? ಅವನು ಕಳ್ಳನಾಗಿದ್ದರೆ, ಅನ್‌ಲಾಕ್ ಆಗಿದ್ದ ಬೈಕನ್ನೇ ಕದ್ದುಕೊಂಡು ಹೋಗುತ್ತಿದ್ದನು” ಎಂದು ಆಲಂ ಹೇಳಿದ್ದಾರೆ.
“ಪ್ರಕರಣದಲ್ಲಿ ಯಾವುದೋ ಆಂತರಿಕ ವಿವಾದ ಇದೆ ಎಂದು ನಾವು ಅನುಮಾನಿಸುತ್ತೇವೆ. ಆದರೂ ತನಿಖೆ ಪೂರ್ಣಗೊಂಡ ನಂತರವೇ ಈ ಬಗ್ಗೆ ಸ್ಪಷ್ಟವಾಗಿ ಹೇಳಬಹುದು” ಎಂದು ಎಸ್ಪಿ ಆಲಂ ತಿಳಿಸಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಹಿಂದಿ ಹೇರಿಕೆ ವಿರೋಧಿ ಚಿತ್ರಗಳನ್ನು ರೈತರ ಅರಾಜಕತೆ ಎಂದು ಪೋಸ್ಟ್ ಮಾಡಿದ ಬಿಜೆಪಿಗರು!
ಈ ಮಧ್ಯೆ, ಹತ್ಯೆಯ ಹಿಂದಿನ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಅಂಗಾರ ಪೊಲೀಸ್ ಠಾಣೆಗೆ ಘೇರಾವ್ ಹಾಕಿದ್ದು, ಮುಬಾರಕ್ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಿಲ್ಲಿ ಪ್ರದೇಶದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಕ್ರಿಸ್ಟೋಫರ್ ಕೆರ್ಕೆಟ್ಟಾ, “ಮುಬಾರಕ್ ಅವರಿಗೆ ಇಬ್ಬರು ಮಕ್ಕಳು ಇದ್ದು, ಅವರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ವಿರುದ್ದ ಯಾವುದೆ ಕ್ರಿಮಿನಲ್ ಪ್ರಕರಣದ ದಾಖಲೆ ಕಂಡು ಬಂದಿಲ್ಲ” ಎಂದು ಹೇಳಿದ್ದಾರೆ.
ಒಂದೇ ವಾರದಲ್ಲಿ ರಾಂಚಿ ಜಿಲ್ಲೆಯಲ್ಲಿ ನಡೆಯುತ್ತಿರುವ ಎರಡನೇ ಹಲ್ಲೆ ಘಟನೆಯಾಗಿದೆ ಇದು. ರಾಂಚಿಯ ಸಗಟು ಮಾರುಕಟ್ಟೆಯೊಂದರಲ್ಲಿ ಮಿನಿ ಟ್ರಕ್ ಅನ್ನು ಕದಿಯುತ್ತಿದ್ದನೆಂದು ಆರೋಪಿಸಿ 22 ವರ್ಷದ ಸಚಿನ್ ವರ್ಮಾ ಎಂಬ ಯುವಕನ ಮೇಲೆ ಮಾರ್ಚ್ 8 ರಂದು ಅಲ್ಲಿನ ಕಾರ್ಮಿಕರು ಹಲ್ಲೆ ನಡೆಸಿದ್ದರು.
ಜಾರ್ಖಂಡ್‌ನಲ್ಲಿ ಗುಂಪು ಹತ್ಯೆ ಘಟನೆಗಳು ಹಲವಾರು ಬಾರಿ ನಡೆದಿದ್ದು, ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. 2016 ರ ಮಾರ್ಚ್‌ನಿಂದ 2020 ರ ಸೆಪ್ಟೆಂಬರ್‌ವರೆಗೆ ಜಾರ್ಖಂಡ್‌ನಲ್ಲಿ ಒಟ್ಟು 29 ಜನರನ್ನು ಗುಂಪು ಹತ್ಯೆ ಮಾಡಲಾಗಿದೆ ಎಂದು ಜಾರ್ಖಂಡ್ ಜನಾಧಿಕರ್ ಮಹಾಸಭಾ (ಜೆಜೆಎಂ) ಹೇಳಿದೆ.
ಇದನ್ನೂ ಓದಿ: ಪ್ರಧಾನಿ ಬಿಜೆಪಿ ಕಾರ್ಯಕರ್ತರ ಭೇಟಿ ಮಾಡಿದ್ದನ್ನು, ರೈತರೊಂದಿಗಿನ ಭೇಟಿಯೆಂದ ಮಾಧ್ಯಮಗಳು!


