ಎಲೆ ಮರೆ – 3
| ಅರುಣ್ ಜೋಳದಕೂಡ್ಲಿಗಿ |
ಮಸ್ಕಿ ತಾಲೂಕಿನ ಮಲ್ಕಾಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಷ್ಟ್ರು ರವಿಚಂದ್ರ.ಡಿ (ರವಿರಾಜ್ ಸಾಗರ್) ಅವರು `ನಮ್ಮೂರ ಜಾನಪದ ಅನುಸಂಧಾನ’ ಎನ್ನುವ ವಿಶಿಷ್ಠ ಕೃತಿ ರಚಿಸಿದ್ದಾರೆ. ಇಲ್ಲಿ ಊರಿನ ಜನಪದರು, ಅವರ ಮೌಖಿಕ ಸಾಹಿತ್ಯವನ್ನು ಸಂಗ್ರಹಿಸಿದ ಶಾಲಾ ಮಕ್ಕಳು ಮತ್ತು ಶಿಕ್ಷಕರು, ಇದೇ ಮೌಖಿಕ ಲಯ ಬಳಸಿ ಮಕ್ಕಳ ಕಲಿಕೆಗೆ ನೆರವಾಗುವಂತೆ ರವಿಚಂದ್ರ ಅವರು ರಚಿಸಿದ ಪದ್ಯಗಳಿವೆ. ಇಲ್ಲಿ ಈ ಮೂರೂ ಸಂಗತಿಗಳ ಮುಖಾಮುಖಿಯಾಗಿದೆ. ವಿಶೇಷವೆಂದರೆ ಜಾನಪದದ ಸಂಗ್ರಹ ಮತ್ತು ಅದರ ಅನ್ವಯಿಕತೆ ಎರಡೂ ಜೊತೆಜೊತೆಗೆ ನಡೆದಿದೆ. ಇದು ಈ ಕೃತಿಯ ವಿಶಿಷ್ಟ ಸಂಗತಿ.
ಇರುವ ಜಾನಪದವನ್ನೆಲ್ಲಾ ಮೋಹಿಸಬೇಕಿಲ್ಲ. ಜಾನಪದದಲ್ಲಿ ನಾಶಮಾಡಬೇಕಾದ್ದು, ಸಂಗ್ರಹಕ್ಕೆ ಯೋಗ್ಯವಲ್ಲದ್ದು ಹೆಚ್ಚಿದೆ. ಜಾತಿ, ಲಿಂಗ, ಬಣ್ಣ, ಪ್ರದೇಶ, ಒಡೆಯ, ಆಳು ಇಂತಹ ಬೇಧಗಳ ಗಟ್ಟಿಗೊಳಿಸಿ ಯಥಾಸ್ಥಿತಿಯನ್ನು ಉಳಿಸುವ ರಚನೆಗಳ ಸಂಖ್ಯೆ ದೊಡ್ಡದಿದೆ. ಅಂತಹ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ರಚನೆಗಳನ್ನು ಮುಂದಿನ ತಲೆಮಾರಿಗೆ ಕಾಪಿಡುವ ಅಗತ್ಯವಿಲ್ಲ. ಪ್ರತಿ ಜಾನಪದ ಸಂಗ್ರಾಹಕರು ಇದನ್ನು ಗಮನಿಸಬೇಕಿದೆ. ರವಿರಾಜ್ ಅವರು ಈ ಸಂಗ್ರಹದಲ್ಲಿ ಅಂತಹ ಸೂಕ್ಷ್ಮತೆಯನ್ನು ಕಾಯ್ದುಕೊಂಡಿದ್ದಾರೆ. ಈ ಕೃತಿಯಲ್ಲಿ ಶಿಕ್ಷಕರಾದ ರವಿಚಂದ್ರ ಅವರು ಜಾನಪದ ಲಯ ಬಳಸಿ ಬರೆದ ಹಾಡುಗಳಲ್ಲಿ ಜೀವಪರವಾದ ಆಯಾಮವಿದೆ. ಇಲ್ಲಿ ಸಂವಿಧಾನಿಕ ಆಶಯಗಳನ್ನು ಬಲಪಡಿಸುವ ಜಾಗೃತಿ ಮೂಡಿಸುವ ಸದಾಶಯವಿದೆ.
ಸೂವ್ವೀ ಸೂವಮ್ಮಾ ಶಾಲಿಗೆ ಹೋಗಮ್ಮಾ
ಸೂವ್ವೀ ಸೂವ್ವೀ ಸೂವಮ್ಮಾ ||
ಓಣ್ಯಾಗ ಅಡಬ್ಯಾಡ ಶಾಲೀಗೇ ಹೋಗಮ್ಮಾ.
ಶಾಲೀಗಾ ಹೋಗಿ ನೀನಾರು ಕಲಿಯಮ್ಮಾ |
ಸುವ್ವೀ ಸುವ್ವೀ|
ಮಾಸ್ತಾರು ಬಡಿತಾರಂತ ಅಂಜಿಕೆ ಬ್ಯಾಡಮ್ಮಾ
ಮಾಸ್ತಾರು ಹೇಳಿದ್ದಾ ಕೇಳಿ ಶಾಣ್ಯಾಕಿ ಆಗಮ್ಮಾ
ಕಲಿತ ನಾರಿ ಸುಖಿ ಕುಟುಂಬಕ ದಾರಿ |ಸುವ್ವೀ ಸುವ್ವೀ|
ನಿಮ್ಮಪ್ಪಗಾ ಹೆದರಾಬ್ಯಾಡ ಹೊಲಕಾ ನೀ ಬರಬ್ಯಾಡ
ಎಲ್ಲಾ ದಗುದಾವಾ ನಾನೇ ಮಾಡುವೇ
ನೀ ಬೇಸು ಓದಮ್ಮಾ |ಸುವ್ವೀ ಸುವ್ವೀ|
ನಂಗೂನು ಕಲೀಬೇಕಂತಾ ತುಂಬಾ ಆಸೆಯಿತ್ತಮ್ಮಾ
ನೀನಾರು ನಾಕಕ್ಷರ ಕಲಿತು ಆಪೀಸರ್ ಆಗಮ್ಮಾ
ನಮ್ಮೂರಿಗ ಹೆಸರಾ ತಾರಮ್ಮಾ |ಸುವ್ವೀ ಸುವ್ವೀ| (ಪುಟ:6)
ಈ ರಚನೆಯಲ್ಲಿ ಹೆಣ್ಣು ಶಾಲೆಗೆ ಹೋಗಿ ಕಲಿಯುವ ಆಶಯವಿದೆ. ಜಾನಪದ ಸಾಹಿತ್ಯದ ತಾಯಿ ಗಂಡ ಬೈದರೂ ಎದುರಾಡದೆ ಬಾಳು ಎಂದರೆ ಆಧುನಿಕ ತಾಯಿ `ನಿಮ್ಮಪ್ಪಗಾ ಹೆದರಬೇಡ ಹೊಲಕ ನೀ ಬರಬ್ಯಾಡ, ಸಾಲಿ ಓದಿ ಆಫಿಸರ್ ಆಗಮ್ಮಾ’ ಎಂದು ಹಾರೈಸುತ್ತಾಳೆ. ಬಹುಶಃ ಜಾನಪದ ಲಯ ಬಳಸಿ ಆಧುನಿಕ ವೈಚಾರಿಕತೆಯನ್ನು ಮೂಡಿಸುವ ಪ್ರಯತ್ನವೆಂದರೆ ಇದು. ರವಿಚಂದ್ರರ ರಚನೆಯ ಮತ್ತೊಂದು ಹಾಡು `ಜಾಗೃತಿ ಜನಪದ’ ಹೀಗಿದೆ:
ಕುಂತಂತ ಮೇಲ್ಜಾತಿ ನಿಂತಂತ ಕೆಳಜಾತಿ
ಅಣ್ಣಾ ಅಕ್ಕಂದಿರೆ ಕೇಳಿರಿ
ಮನುಷ ಕುಲವೆಲ್ಲ ಒಂದೇ
ಎನ್ನುವ ನಿಸರ್ಗ ಸತ್ಯವಾ ತಿಳಿಯಿರಿ ||
ಈ ಪದದಲ್ಲಿ ಜಾತಿಪದ್ಧತಿಯ ಲೋಪದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಆಯಾಮವಿದೆ. ಮತ್ತೊಂದು ಜಲಪದ ಹಾಡಿನಲ್ಲಿ ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶವಿದೆ. ಬಹುಶಃ ರವಿಚಂದ್ರ ಅವರ ಎಲ್ಲಾ ರಚನೆಗಳಲ್ಲಿಯೂ ಈ ಆಯಾಮವಿರುವುದು ಆಶಾದಾಯಕ ಬೆಳವಣಿಗೆ. ಜೀವಪ್ರಪಂಚ, ನಿಸರ್ಗ ಸೋಜಿಗ, ಶಾಲೆ ಹಬ್ಬ, ನೀರಿಗೋಗೋನು ಬಾ, ಮಳೆಹಾಡು, ಬನ್ನಿಮಕ್ಕಳೆ ನಮ್ಮೂರ ಶಾಲೆಗೆ, ಮುಂತಾದ ಹಾಡುಗಳಲ್ಲಿ ಸಮತೆಯ ನಿಸರ್ಗ ವಿವೇಕವನ್ನು ವಿಸ್ತರಿಸಲು ಪ್ರಯತ್ನಿಸಿದ್ದಾರೆ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಮೈಲಾರ ಮಹಾದೇವ, ಕುವೆಂಪು, ನಾ.ಡಿಸೋಜ, ರಾಜಕುಮಾರ್ ತರಹದವರ ಗುಣಲಕ್ಷಣಗಳನ್ನೇ ಒಗಟಾಗಿಸಿ ಉತ್ತರವಾಗಿ ಇವರುಗಳ ಹೆಸರು ತಂದಿರುವುದು ಪ್ರಯೋಗಶೀಲವಾಗಿದೆ.
ರವಿರಾಜ್ ಅವರು ಶಿವಮೊಗ್ಗದ ಸಾಗರ ತಾಲೂಕಿನ ಮಂಡಗಳಲೆಯವರು. ಕಳೆದ ಹತ್ತು ವರ್ಷದಿಂದ ರಾಯಚೂರಿನ ಮಸ್ಕಿ ತಾಲೂಕಿನ ಮಲ್ಕಾಪುರದಲ್ಲಿ ಶಿಕ್ಷಕರಾಗಿದ್ದಾರೆ. `ಮಂದಾರ ಕನ್ನಡ’ ಎನ್ನುವ ಶಾಲಾಮಕ್ಕಳ ಪತ್ರಿಕೆಯನ್ನು ಕಳೆದ ಏಳೆಂಟು ವರ್ಷದಿಂದ ತರುತ್ತಿದ್ದಾರೆ. ಈ ತನಕ `ನರಲೀಲೆ’ `ನಮ್ಮೂರ ಜಾನಪದ ಸಿರಿ’ `ಮಂದಾರಮಾಲೆ-1’ `ಮಂದಾರ ಮಾಲೆ-2’ ಮಕ್ಕಳ ಬರಹಗಳನ್ನು ಸಂಪಾದಿಸಿದ್ದಾರೆ. `ಕಲಿತವರು’ `ಮೇ-10’ `ವಿಶ್ವಾಪುರದ ವೀರಮಕ್ಕಳು’ ಮಕ್ಕಳ ನಾಟಕಗಳು ಪ್ರದರ್ಶನ ಕಂಡಿವೆ. ಮಕ್ಕಳು ಮತ್ತು ಸಾಹಿತ್ಯಿಕ ಸಂಘಟನೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರವಿರಾಜ್ ಅವರ ಕ್ರಿಯಾಶೀಲ ತೊಡಗುವಿಕೆಯ ಕಾರಣ ಮಲ್ಕಾಪುರದ ಸರಕಾರಿ ಶಾಲೆ ನಿಜಕ್ಕೂ ಸೃಜನಶೀಲತೆಯಲ್ಲಿ ಜೀವಂತಿಕೆಯ ತಾಣವಾಗಿದೆ.
ಕರ್ನಾಟಕದ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ಕೆಲವರು ವಿಶ್ವವಿದ್ಯಾಲಯಗಳ ಬಹುಪಾಲು ಅಧ್ಯಾಪಕರಿಗಿಂತ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಈಗ ಬರೆಯುತ್ತಿರುವ ಅತ್ಯುತ್ತಮ ಕವಿಗಳು ಶಾಲಾ ಮಾಸ್ತರರು. ಉಳಿದಂತೆ ಸರಕಾರಿ ಶಾಲೆ ಉಳಿಸುವ ಪ್ರಯೋಗದಲ್ಲಿಯೂ ಗಮನ ಸೆಳೆಯುತ್ತಿದ್ದಾರೆ. ಇದೊಂದು ಆಶಾದಾಯಕ ಬೆಳವಣಿಗೆ. ಹಿಂದೆ ಲಕ್ಷ್ಮಣ ಬದಾಮಿ ಅವರು ಮಕ್ಕಳಿಂದ ಜಾನಪದ ಸಂಗ್ರಹಿಸಿ ಪುಸ್ತಕ ಮಾಡಿದ್ದಾರೆ. ಇದೊಂದು ಜಾನಪದ ಸಂಗ್ರಹಕ್ಕೆ ಬಳಸುವ ವಿಶಿಷ್ಟ ದಾರಿ. ಆದರೆ ಜಾನಪದ ಮೌಲ್ಯಗಳನ್ನು ಮುರಿದುಕಟ್ಟುವ ರವಿಚಂದ್ರ ಅವರಂತಹ ಗೀತೆಗಳ ರಚನೆಯನ್ನು ಎಲ್ಲಾ ಶಿಕ್ಷಕರು ಮಾಡಬೇಕಿದೆ. ಇದನ್ನು ಉಪಪಠ್ಯವಾಗಿ ಮಕ್ಕಳಿಗೆ ಕಲಿಸಬೇಕಿದೆ. ಬಹುಶಃ ಈ ಪುಸ್ತಕದ ಮೂಲಕ ರವಾನೆಯಾಗಬೇಕಿರುವ ಸಂದೇಶವೂ ಇದೆ.



Tq Ur support.