Homeವಿಶೇಷ ಬರಹಗಳುದೇಶ ವಿಭಜನೆಯ ವಾಸ್ತವ ಸತ್ಯಗಳು: ಭಾಗ- 2

ದೇಶ ವಿಭಜನೆಯ ವಾಸ್ತವ ಸತ್ಯಗಳು: ಭಾಗ- 2

- Advertisement -

1857ರ ದಂಗೆ

ಕಂಪೆನಿ ಸರ್ಕಾರದ ವಿರುದ್ಧ ಹಿಂದೂ-ಮುಸ್ಲಿಮರು ಒಟ್ಟಾಗಿ ಹೋರಾಡಿದ 1857ರ ದಂಗೆಯು ಹಿಂದೂ-ಮುಸ್ಲಿಂ ಐಕ್ಯತೆಯ ಮತ್ತೊಂದು ಉದಾಹರಣೆ. ರಾಣಿ ಲಕ್ಷ್ಮಿಬಾಯಿ, ನಾನಾಸಾಹೇಬ್ ಪೇಶ್ವೆ, ತಾತ್ಯಾ ಟೋಪೆ, ಬೇಗಂ ಹಜರತ್ ಮಹಲ್, ಕುವಾರ್ ಸಿಂಗ್, ಜನರಲ್ ಬಕ್ತ್‌ಖಾನ್‌ರಂತಹ ಹಲವಾರು ಹಿಂದೂ-ಮುಸ್ಲಿಂ ರಾಜರುಗಳು ಬಹದ್ದೂರ್ ಶಾ ಜಫರ್‌ನನ್ನು ತಮ್ಮ ದಂಡನಾಯಕನೆಂದು ಘೋಷಿಸಿ ಹೋರಾಡಿದರು. 1857ರ ದಂಗೆಯ ನಂತರ ಕಂಪೆನಿಯ ರಾಜ್ಯಾಧಿಕಾರ ಕೊನೆಗೊಂಡು ಬ್ರಿಟಿಷ್ ಸರ್ಕಾರದ ನೇರ ಆಳ್ವಿಕೆಯು ಪ್ರಾರಂಭವಾಯಿತು. ಆದರೆ ಈ ದಂಗೆ ಬಹುಮಟ್ಟಿಗೆ ಬ್ರಿಟಿಷರ ಜಂಘಾಬಲವನ್ನು ಉಡುಗಿಸಿತ್ತು. ಇಂತಹ ಕ್ರಾಂತಿಗಳು ಹೆಚ್ಚಿದರೆ ತಮ್ಮ ಆಳ್ವಿಕೆ ಬೇಗ ಕೊನೆಗೊಳ್ಳುತ್ತದೆ ಎಂದು ಅವರು ಹೆದರಿದರು. ಆದ್ದರಿಂದಲೇ ತಮ್ಮ ಒಡೆದು-ಆಳುವ-ನೀತಿಯನ್ನು ಜಾರಿಗೆ ತಂದರು. “ಮಾನವರೆಲ್ಲಾ ಸಮಾನ” ಎಂಬ ಅದ್ವೈತ ಪ್ರಜ್ಞೆಯು ಮೇಲ್ಪದರದ ಭಾರತೀಯರಲ್ಲಿ ಸದ್ದು ಮಾಡುತ್ತಿದ್ದ ಕಾಲವೂ ಅದಾಗಿತ್ತು. ಬ್ರಿಟಿಷರ ಒಡೆದು-ಆಳುವ-ನೀತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹೇಗೆ ಸ್ಥಾಪನೆಯಾಯಿತು ಎಂಬುದನ್ನು ಕೂಡ ಅರ್ಥಮಾಡಿಕೊಳ್ಳಬೇಕು.

ಒ.ಇ.ಹ್ಯೂಮ್

ಒ.ಇ.ಹ್ಯೂಮ್ ಎಂಬ ಬ್ರಿಟಿಷ್ ಅಧಿಕಾರಿಯ ಒತ್ತಾಸೆಯಿಂದ ಕಾಂಗ್ರೆಸ್ ಸ್ಥಾಪನೆಯಾಯಿತು. ಬ್ರಿಟಿಷರು ಭಾರತೀಯರ ಮೇಲೆ ನಡೆಸುತ್ತಿದ್ದ ಶೋಷಣೆ ಮತ್ತು ಹಿಂಸಾಚಾರಗಳೇ 1857ರ ದಂಗೆಗಳಿಗೆ ಮೂಲಕಾರಣ ಎಂದು ಸರ್ಕಾರಿ ಅಧಿಕಾರಿಯಾಗಿ ನಿರ್ಭೀತ ವರದಿಯೊಂದನ್ನು ಅವನು ನೀಡಿದ್ದ. ಇದು ವೈಸ್‌ರಾಯ್ ವಿರುದ್ಧ ಅಧಿಕಾರಿಯೊಬ್ಬನು ನೇರವಾಗಿ ಮಾಡಿದ ಕಟು ಟೀಕೆಯಾಗಿತ್ತು. ಪರಿಣಾಮವಾಗಿ ಅವನನ್ನು ಪ್ರಸಕ್ತ ಶ್ರೇಣಿಯಿಂದ ಹಿಂಬಡ್ತಿ ಮಾಡಲಾಯಿತು. ಆಧ್ಯಾತ್ಮಿಕ ಒಲವುಳ್ಳ ವ್ಯಕ್ತಿಯಾಗಿದ್ದ ಹ್ಯೂಮ್ ಕೆಲಸಕ್ಕೆ ರಾಜೀನಾಮೆ ನೀಡಿದರು. ಆತ ಬರೆದ ಹಿರಿಯನೊಬ್ಬನ ಹಾರೈಕೆ (Old Man’s Hope) ಎಂಬ ಕವಿತೆಯಲ್ಲಿ ಭಾರತೀಯರು ತಮ್ಮದೇ ಸ್ವಂತ ದೇಶಕ್ಕಾಗಿ, ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕು (“Sons of Ind, be up and doing, Let your course by none be stayed; Lo! the Dawn is in the East; By themselves are nations made”) ಎಂದು ಹುರಿದುಂಬಿಸಿದ್ದ ಕೂಡ. ಕಾಂಗ್ರೆಸ್ ಭಾರತೀಯ ರಾಷ್ಟ್ರೀಯತೆಯ ಹೋರಾಟದ ಕೇಂದ್ರ ಸಂಘಟನೆಯಾಗಿ ಬೆಳೆಯಿತು. ಸುಶಿಕ್ಷಿತ ಭಾರತೀಯರಿಗೆ ಸರ್ಕಾರದ ನೇಮಕಾತಿಯಲ್ಲಿ ಹೆಚ್ಚಿನ ಆದ್ಯತೆ ನೀಡಬೇಕೆಂಬ ಬೇಡಿಕೆಯನ್ನು ಅದು ಸರ್ಕಾರದ ಮುಂದಿಟ್ಟಿತು. ಆಗ ವೈಸ್‌ರಾಯ್ ಆಗಿದ್ದ ಡಫ್‌ರಿನ್ ಪ್ರಥಮ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಾವೇಶಕ್ಕೆ ಅನುಮತಿಯನ್ನೇನೋ ನೀಡಿದ್ದ. ಆದರೆ ಪ್ರಾರಂಭದಲ್ಲಿ ಕಾಂಗ್ರೆಸ್ ಬಗ್ಗೆ ಅವನು ಹೆಚ್ಚು ವಿಚಲಿತನಾಗದಿದ್ದರೂ ಕ್ರಮೇಣ ಕಾಂಗ್ರೆಸ್‌ನ ಚಟುವಟಿಕೆಗಳು ಬ್ರಿಟಿಷ್ ಆಳ್ವಿಕೆಗೆ ಕಂಟಕಪ್ರಾಯವಾಗುತ್ತಿವೆ ಎಂಬುದನ್ನು ಮನಗಂಡು, ಕಾಂಗ್ರೆಸ್ ತನ್ನ ಸಭೆಗಳು ಹಾಗೂ ಅಧಿವೇಶನಗಳಲ್ಲಿ ರಾಜಕೀಯವನ್ನು ಹೊರತುಪಡಿಸಿ ಸಾಮಾಜಿಕ ಸುಧಾರಣೆಗಳತ್ತ ಗಮನಹರಿಸಬೇಕು ಎಂದು ಮನವಿ ಮಾಡಿದ.

ದ್ವಿ-ರಾಷ್ಟ್ರ ಸಿದ್ಧಾಂತದ ಹುಟ್ಟು

ಆದರೆ ಕಾಂಗ್ರೆಸ್ ಈ ಮನವಿಗೆ ಯಾವುದೇ ಮಹತ್ವ ನೀಡದ ಕಾರಣ ವೈಸ್‌ರಾಯ್ ಡಫ್‌ರಿನ್ ಕಸಿವಿಸಿಗೊಂಡು ಕಾಂಗ್ರೆಸ್‌ನ ಶಕ್ತಿ ಮತ್ತು ಪ್ರಭಾವವನ್ನು ಕುಗ್ಗಿಸಲು ಇತರೆ ಷಡ್ಯಂತ್ರಗಳಿಗೆ ಮೊರೆಹೋದ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಯಾವುದೇ ರೀತಿಯ ನೆರವನ್ನು ಮುಂದುವರೆಸದಂತೆ ಶ್ರೀಮಂತ ವರ್ಗವನ್ನು ವಿನಂತಿಸಿಕೊಂಡ. ಸರ್ಕಾರಿ ನೌಕರರ್‍ಯಾರೂ ಕಾಂಗ್ರೆಸ್ ಸಭೆಗಳಲ್ಲಿ ಭಾಗವಹಿಸಕೂಡದೆಂಬ ಆದೇಶ ಹೊರಡಿಸಿದ. ಬ್ರಿಟಿಷರ ಪರವಾಗಿದ್ದ ನಿಷ್ಠಾವಂತ ಬೆಂಬಲಿಗರ ನೆರವನ್ನು ಪಡೆಯಲು ಮುಂದಾದ. ಅಂಥವರಲ್ಲಿ ಶಿಕ್ಷಣತಜ್ಞನಾದ ಸೈಯದ್ ಅಹಮದ್ ಖಾನ್ ಮತ್ತು ಭಾಷಾತಜ್ಞ ರಾಜಾ ಶಿವಪ್ರಸಾದ್ ಪ್ರಮುಖರು. ಕಾಂಗ್ರೆಸ್-ವಿರೋಧಿ ಚಳವಳಿಯನ್ನು ಪ್ರಾರಂಭಿಸುವಂತೆ ವೈಸ್‌ರಾಯ್ ಡಫ್‌ರಿನ್ 1887ರ ಸುಮಾರಿಗೆ ಈ ಇಬ್ಬರನ್ನೂ ಉತ್ತೇಜಿಸಿದ. ಐಸಿಎಸ್ ಪರೀಕ್ಷೆಗಳನ್ನು ಭಾರತದಲ್ಲಿಯೇ ನಡೆಸಬೇಕೆಂಬ ಹಾಗೂ ಭಾರತೀಯರ ಉಪಸ್ಥಿತಿಯಲ್ಲಿ ಬ್ರಿಟಿಷ್ ಸರ್ಕಾರವು ಬಜೆಟ್ ರೂಪಿಸುವಂತಾಗಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಕಾಂಗ್ರೆಸ್ ಚಳವಳಿ ಪ್ರಾರಂಭಿಸಿತು. ಕಾಂಗ್ರೆಸ್ಸನ್ನು ಬಹಿರಂಗವಾಗಿ ವಿರೋಧಿಸಿ ಭಾಷಣಗಳನ್ನು ಮಾಡಲು ಶುರುಮಾಡಿದ್ದ ಸೈಯದ್ ಅಹಮದ್ ಖಾನ್ ಈ ಬೇಡಿಕೆಗಳನ್ನು ಖುಲ್ಲಂಖುಲ್ಲಾ ವಿರೋಧಿಸಿ ಜನರು ಕಾಂಗ್ರೆಸ್‌ನಿಂದ ದೂರವಿರಬೇಕೆಂದು ಕರೆ ನೀಡುತ್ತಿದ್ದರು. ಇದಕ್ಕಿಂತ ಮುಖ್ಯವಾಗಿ ಅವರು ದ್ವಿ-ರಾಷ್ಟ್ರ ಸಿದ್ಧಾಂತದ ಕರೆ ನೀಡಿದ್ದು: “ಮುಸ್ಲಿಮರು ಅಪಾಯದಲ್ಲಿದ್ದಾರೆ. ಬ್ರಿಟಿಷರ ನಿರ್ಗಮನದ ನಂತರ ಹಿಂದೂಗಳು ಮುಸ್ಲಿಮರನ್ನು ಮುಕ್ಕಿ ತಿಂದುಬಿಡುತ್ತಾರೆ. ಜೊತೆಗೆ, ಫ್ರೆಂಚ್, ಪೋರ್ಚುಗೀಸ್ ಮತ್ತು ಜರ್ಮನ್ ದೇಶಗಳು ಭಾರತದ ಮೇಲೆ ಆಕ್ರಮಣ ನಡೆಸಿ ಭಾರತೀಯರನ್ನು ಅತಂತ್ರಗೊಳಿಸಿಬಿಡುತ್ತಾರೆ. ಆದ್ದರಿಂದ ಮುಸ್ಲಿಮರು ಬ್ರಿಟಿಷರಿಗೆ ಮತ್ತು ಅವರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಬೇಕು” ಎಂದು ಅಬ್ಬರಿಸುತ್ತಾ ಮುಸ್ಲಿಮರಲ್ಲಿ ಆತಂಕವನ್ನು ಬಿತ್ತತೊಡಗಿದ್ದರು. ಮುಸ್ಲಿಮರ ಶೈಕ್ಷಣಿಕ
ಆಧುನೀಕರಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ, ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ಎಂದು ನಂತರ ಪ್ರಖ್ಯಾತಿ ಪಡೆದ ಕಾಲೇಜೊಂದನ್ನು 1875ರಲ್ಲಿ ಸ್ಥಾಪಿಸಿದರು ಎಂಬ ಖ್ಯಾತಿಗೆ ಪಾತ್ರರಾಗಿದ್ದರೂ ದ್ವಿ-ರಾಷ್ಟ್ರದ ಆಲೋಚನೆಯನ್ನು ಮುಸ್ಲಿಮರಲ್ಲಿ ಮೂಲತಃ ಬಿತ್ತಿದವರು ಅವರೇ.


ಮುಸ್ಲಿಂಲೀಗ್‌ನ ಹುಟ್ಟು

ಬ್ರಿಟಿಷ್ ಬೆಂಬಲಿಗರ ಕಾಂಗ್ರೆಸ್-ವಿರೋಧಿ ಚಳುವಳಿ ಮತ್ತು ಅವರು ಮಾಡುತ್ತಿದ್ದ ಪ್ರಚೋದನಾಕಾರಿ ಭಾಷಣಗಳು ಗಂಭೀರ ಸ್ವರೂಪದ ದುಷ್ಪರಿಣಾಮಗಳಿಗೆ ಕಾರಣವಾದವು. 1900ರ ಪ್ರಾರಂಭಿಕ ವರ್ಷಗಳ ಹೊತ್ತಿಗೆ ಶ್ರೀಮಂತ ಮುಸ್ಲಿಂವರ್ಗದ ಒಂದು ವಿಭಾಗದಲ್ಲಿ ದ್ವಿ-ರಾಷ್ಟ್ರ ಸಿದ್ಧಾಂತ ಬಲವಾಗಿ ಬೇರೂರಿಬಿಟ್ಟಿತ್ತು. 1906ರಲ್ಲಿ ಅಖಿಲ ಭಾರತ ಮುಸ್ಲಿಂಲೀಗ್‌ನ ಸ್ಥಾಪನೆಯಾದದ್ದು ಈ ಹಿನ್ನೆಲೆಯಿಂದಲೇ. ಒಡೆದು ಆಳುವ ನೀತಿಯನ್ನು ಪ್ರೋತ್ಸಾಹಿಸುವ ರಾಜಕಾರಣವನ್ನು ಮೈದುಂಬಿಕೊಂಡಿದ್ದ ಬ್ರಿಟಿಷರು ಅಖಿಲ ಭಾರತ ಮುಸ್ಲಿಂಲೀಗ್‌ನ ಸ್ಥಾಪನೆಯನ್ನೂ ಉತ್ತೇಜಿಸಿದರು. ಅಖಿಲ ಭಾರತ ಮುಸ್ಲಿಂಲೀಗ್ ಮುಸ್ಲಿಮರಿಗೆ ಪ್ರತ್ಯೇಕ ಮತದಾನ ಬೇಕೆಂಬ ಬೇಡಿಕೆಯನ್ನು ವೈಸ್‌ರಾಯ್ ಮಿಂಟೋರ ಮುಂದಿಟ್ಟಿತು. ಕಾಂಗ್ರೆಸ್ ಈ ಬೇಡಿಕೆಯನ್ನು ವಿರೋಧಿಸಿತು. ಆಗಿನ್ನೂ ಕಾಂಗ್ರೆಸ್‌ನ ಪ್ರಭಾವೀ ನಾಯಕರಲ್ಲೊಬ್ಬರಾಗಿದ್ದ ಜಿನ್ನಾ ಕೂಡಾ ಇದರಿಂದ ದೇಶವು ಇಬ್ಭಾಗವಾಗಬೇಕಾಗುತ್ತದೆಯೆಂದು ಪ್ರತ್ಯೇಕ ಮತದಾನದ ಬೇಡಿಕೆಯನ್ನು ಪ್ರಬಲವಾಗಿಯೇ ವಿರೋಧಿಸಿದರು. ಅವರ ನಿಲುವನ್ನು ಮೆಚ್ಚಿದ ಸರೋಜಿನಿನಾಯ್ಡುರಂತಹವರು ಜಿನ್ನಾರನ್ನು ಹಿಂದೂ-ಮುಸ್ಲಿಂ ಐಕ್ಯತೆಯ ರಾಯಭಾರಿ ಎಂದು ಶ್ಲಾಘಿಸಿದ್ದು ಈ ನಿರ್ಣಾಯಕ ಸನ್ನಿವೇಶದಲ್ಲಿಯೇ. ಆನಂತರದಲ್ಲಿ ಇದೇ ಜಿನ್ನಾ ದೇಶ ವಿಭಜನೆಗೆ ಸಂಪೂರ್ಣ ಬೆಂಬಲ ನೀಡಿ ಮುಸ್ಲಿಂಲೀಗ್‌ನೊಂದಿಗೆ ಗುರುತಿಸಿಕೊಂಡರು.

ಈ ಸನ್ನಿವೇಶದಲ್ಲಿ ಬ್ರಿಟಿಷರು ಪ್ರತ್ಯೇಕ ಮತದಾನ ವ್ಯವಸ್ಥೆಯನ್ನು ಅನುಮೋದಿಸುವ ಮೂಲಕ ಒಡೆದು ಆಳುವ ನೀತಿಯನ್ನು ಮತ್ತೊಮ್ಮೆ ಬಳಸುವ ಅವಕಾಶವನ್ನು ಉಪಯೋಗಿಸಿಕೊಂಡರು. ಇದರಡಿ ಮುಸ್ಲಿಮರಿಗೆ ಪ್ರತ್ಯೇಕ ಮತದಾನ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಪ್ರತ್ಯೇಕ ಮತದಾನ ವ್ಯವಸ್ಥೆ ಎಂದರೆ ಏನು? ಅವರಿಗಾಗಿ ನಿಗದಿಯಾಗುವ ಮೀಸಲು ಕ್ಷೇತ್ರದಲ್ಲಿ ಕೇವಲ ಮುಸ್ಲಿಂ ಅಭ್ಯರ್ಥಿಗಳು ಮಾತ್ರ ಸ್ಪರ್ಧಿಸುವ ಹಾಗೂ ಕೇವಲ ಮುಸ್ಲಿಮರು ಮಾತ್ರ ಮತ ಚಲಾಯಿಸುವ ವ್ಯವಸ್ಥೆ ಇದಾಗಿತ್ತು.

ಮಿಂಟೊ-ಮೊರ್‍ಲೆ ಸುಧಾರಣೆಗಳು ಎಂದು ಕರೆಯುವ ಇದನ್ನು ಬ್ರಿಟಿಷ್ ಸರ್ಕಾರವು 1909ರ ಇಂಡಿಯಾ ಕೌನ್ಸಿಲ್ ಕಾಯಿದೆಯ ಮೂಲಕ ಅನುಮೋದಿಸಿತು. ನಂತರದಲ್ಲಿ ಸಿಖ್ಖರು, ಯೂರೋಪಿಯನ್ನರು ಮತ್ತು
ಆಂಗ್ಲೊ-ಇಂಡಿಯನ್ನರಿಗೆ ಅದೇ ರೀತಿಯ ಪ್ರಾತಿನಿಧ್ಯವನ್ನು ಇದರಲ್ಲಿ ಕಲ್ಪಿಸಲಾಯಿತು. ಅವರ ಒಡೆದು-ಆಳುವ-ನೀತಿಯು ರೆಕ್ಕೆ ಬೆಳೆಸಿಕೊಂಡು ಮೆರೆದಾಡುತ್ತಿತ್ತು.

ಹಿಂದೂ ಸನಾತನಿಗಳ ಪ್ರತಿಕ್ರಿಯೆ

ಇಂಥ ಒಡಕಿನ ವಿಚಾರಗಳು ಇತರ ಧರ್ಮೀಯರಲ್ಲೂ ಮೂಡಲಾರಂಭಿಸಿದವು. ತಮ್ಮನ್ನು ಮತ್ತು ತಮ್ಮ ಹಿತಾಸಕ್ತಿಯನ್ನು ಸರ್ಕಾರವು ಕಡೆಗಣಿಸುತ್ತಿದೆ ಎನ್ನುವ ಸಂಶಯ ಹಿಂದೂಗಳ ಒಂದು ಸಣ್ಣ ವಿಭಾಗದಲ್ಲಿಯೂ ಬಲಿತು ಅಖಿಲ ಭಾರತ ಮುಸ್ಲಿಂಲೀಗ್ ಮಾದರಿಯಲ್ಲೇ ಅಖಿಲ ಭಾರತೀಯ ಹಿಂದೂ ಮಹಾಸಭಾ ಎಂಬ ಹೆಸರಿನ ಹಿಂದೂಲೀಗ್ ಮದನ್ ಮೋಹನ್ ಮಾಳವೀಯರ ನಾಯಕತ್ವದಲ್ಲಿ ಹುಟ್ಟಿಕೊಂಡಿತು. ಇದಾದಬಳಿಕ 1925ರಲ್ಲಿ ಕೇಶವ್ ಬಲರಾಮ್ ಹೆಡ್ಗೇವಾರ್ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಎಂಬ ಮತ್ತೊಂದು ಹಿಂದೂ ಸಂಘಟನೆಯನ್ನು ಪ್ರಾರಂಭಿಸಿದರು. ಕೆಲವು ಮುಸ್ಲಿಮರು “ಮುಸ್ಲಿಮರು ಅಪಾಯದಲ್ಲಿದ್ದಾರೆ” ಎಂಬ ಕಥಾ ವ್ಯಾಖ್ಯಾನಗಳನ್ನೂ ಕೆಲವು ಹಿಂದೂಗಳು “ಹಿಂದೂಗಳು ಅಪಾಯದಲ್ಲಿದ್ದಾರೆ” ಎಂಬ ಕಥಾ ವ್ಯಾಖ್ಯಾನಗಳನ್ನೂ ನಂಬುವಂತೆ ಬಲವಾಗಿ ಪ್ರಚಾರ ಮಾಡಲಾಯಿತು. ಬ್ರಿಟಿಷರು ಶಾಲೆಗಳಲ್ಲಿ ಬೋಧಿಸುತ್ತಿದ್ದ ಇತಿಹಾಸವು ಕೂಡ ಇದ್ದಕ್ಕಿದ್ದ ಪ್ರಮುಖ ಕಾರಣಗಳಲ್ಲಿ ಒಂದು. ಹಿಂದೂಗಳು ಹೇಗೆ ಮುಸ್ಲಿಂ ರಾಜರುಗಳನ್ನು ವಿರೋಧಿಸುತ್ತಿದ್ದರು ಎಂದು ವಿರೂಪಗೊಳಿಸಿದ ಇತಿಹಾಸವನ್ನು ಬ್ರಿಟಿಷರು ಜನತೆಯಲ್ಲಿ ಕೂಡ ಪ್ರಚುರಪಡಿಸಿದರು.

ಭಾರತೀಯ ಸೇನೆಯಲ್ಲಿ ವೈದ್ಯಾಧಿಕಾರಿಯಾಗಿದ್ದ ಲೆಫ್ಟಿನೆಂಟ್ ಕರ್ನಲ್ ಯು.ಎನ್. ಮುಖರ್ಜಿ ಎಂಬುವರು 1909ರಲ್ಲಿ ಕೊಲ್ಲತ್ತಾ ನಗರದ ದಿನಪತ್ರಿಕೆಯೊಂದರಲ್ಲಿ “ಹಿಂದೂಗಳು ಅವನತಿ ಹೊಂದುತ್ತಿರುವ ಜನಾಂಗ” ಎಂಬ ಶೀರ್ಷಿಕೆಯಡಿ ಕೆಲವು ಪತ್ರಗಳನ್ನು ಬರೆದರು. ಅವುಗಳಲ್ಲಿ ಅವರು ಹಿಂದೂಗಳು ಹೇಗೆ ಅಪಾಯದ ಸ್ಥಿತಿಯನ್ನು ತಲುಪಿದ್ದಾರೆ, ಮುಸ್ಲಿಮರ ಜನಸಂಖ್ಯೆಯು ಹೇಗೆ ಶೀಘ್ರಗತಿಯಲ್ಲಿ ಹೆಚ್ಚಳವಾಗುತ್ತಿದೆ ಮತ್ತು ಕೆಲವೇ ವರ್ಷಗಳಲ್ಲಿ ಹಿಂದೂಗಳ ಸಂಖ್ಯೆಯು ಗಣನೀಯವಾಗಿ ಕ್ಷೀಣಿಸಿ ಅವನತಿ ಹೊಂದುತ್ತಿರುವ ಜನಾಂಗವಾಗುತ್ತದೆ ಎಂದು ತಮ್ಮ ಆತಂಕವನ್ನು ಕುರಿತು ಬರೆದರು.

ಹೀಗೆ ಹಿಂದೂಗಳ ದೇಶವನ್ನು ಕೆಲವೇ ವರ್ಷಗಳಲ್ಲಿ ಮುಸ್ಲಿಮರು ಸಂಪೂರ್ಣವಾಗಿ ಆವರಿಸಿಕೊಂಡುಬಿಡುತ್ತಾರೆ ಎಂಬ ಭೀತಿಯನ್ನು ನೂರಾರು ವರ್ಷಗಳಿಂದ ಹಿಂದೂಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದರೆ, ಹಿಂದೂಗಳು ಸಂಪೂರ್ಣವಾಗಿ ದೇಶವನ್ನು ಆವರಿಸಿಕೊಂಡುಬಿಡುತ್ತಾರೆ ಎಂಬ ಭೀತಿಯನ್ನು ಮುಸ್ಲಿಮರಲ್ಲಿ ವ್ಯಾಪಕವಾಗಿ ಹರಡಲಾಗುತ್ತಿದೆ. ಈ ಭೀತಿಯ ಕಾರಣದಿಂದಾಗಿಯೇ 1920ರ ದಶಕಕ್ಕೂ ಮುಂಚೆ ಸಾಮಾನ್ಯವೆನಿಸದ ಹಿಂದೂ-ಮುಸ್ಲಿಂ ಗಲಭೆಗಳು ಮುಂಚೂಣಿಗೆ ಬಂದವು. ಈ ಲೇಖನದಲ್ಲಿ ಭಾರತೀಯರಲ್ಲಿ ಒಡಕು ಮೂಡಿಸುವ ಈ ಪ್ರಕ್ರಿಯೆ ಎಲ್ಲಿಂದ ಪ್ರಾರಂಭವಾಯಿತು ಮತ್ತು ದೇಶ ವಿಭಜನೆಗೆ ಇದ್ದ ಮೂಲ ಕಾರಣಗಳೇನು ಎಂಬುದನ್ನು ಪರಿಶೀಲಿಸಿದೆವು.

ದೇಶ ವಿಭಜನೆಯಲ್ಲಿ ಸಾವರ್ಕರ್ ಮತ್ತು ಅವರ ಹಿಂದುತ್ವದ ಪಾತ್ರ ಏನಾಗಿತ್ತು? ಜಿನ್ನಾ ಏಕೆ ಮತ್ತು ಹೇಗೆ ತಮ್ಮ ನಿಲುವನ್ನು ತದ್ವಿರುದ್ಧ ದಿಕ್ಕಿಗೆ ಬದಲಾಯಿಸಿಕೊಂಡರು? ಅಂತಿಮವಾಗಿ ವಿಭಜನೆಗೆ ಇದ್ದ ಕಾರಣಗಳೇನು? ಈ ಪ್ರಶ್ನೆಗಳನ್ನು ಮುಂದಿನ ಭಾಗದಲ್ಲಿ ಚರ್ಚಿಸೋಣ.

(ನಾಲ್ಕು ಭಾಗಗಳ ಬರಹದ ಎರಡನೇ ಭಾಗ ಇದು. ಮುಂದಿನ ಭಾಗದಲ್ಲಿ: ದೇಶ ವಿಭಜನೆ-1947: ಸಾವರ್ಕರ್ ಮತ್ತು ಸುಭಾಷ್‌ಚಂದ್ರ ಬೋಸ್, ಹಿಂದೂ ರಾಷ್ಟ್ರೀಯತೆಯ ಉದಯ, ಹಿಂದೂತ್ವದ ಅಂತರಂಗ, ಬಾಲಗಂಗಾಧರ ತಿಲಕ್, ಆಗ ಬಂದರು ಗಾಂಧಿ)

ಹಿಂದಿ ಮೂಲ: ಧ್ರುವ್ ರಾಥಿ (ಯುಟ್ಯೂಬ್)
(ಕನ್ನಡಕ್ಕೆ): ಪ್ರೊ. ಬಿ ಗಂಗಾಧರಮೂರ್ತಿ

ಧ್ರುವ್ ರಾಥಿ
ಭಾರತದ ಖ್ಯಾತ ಯುಟ್ಯೂಬರ್‌ಗಳಲ್ಲಿ ಒಬ್ಬರು. ಆರ್ಥಿಕತೆ, ಪರಿಸರ, ರಾಜಕೀಯ ವಿದ್ಯಮಾನಗಳು ಸೇರಿದಂತೆ ಹಲವು ವಿಷಯಗಳ ಮೇಲೆ ಇವರು ಮಾಡುವ ವಿಡಿಯೋಗಳು ಅಪಾರ ಜನಪ್ರಿಯತೆ ಗಳಿಸಿವೆ. ದೇಶವಿಭಜನೆಯ ಬಗ್ಗೆ ಇವರ ಹಿಂದಿ ವಿಡಿಯೋ ಪ್ರಸ್ತುತಿಗೆ ಪ್ರೊ. ಬಿ ಗಂಗಾಧರಮೂರ್ತಿ ಕನ್ನಡ ಬರಹ ರೂಪ ನೀಡಿದ್ದಾರೆ.


ಇದನ್ನೂ ಓದಿ: ದೇಶ ವಿಭಜನೆಯ ವಾಸ್ತವ ಸತ್ಯಗಳು: ಭಾಗ-ಒಂದು

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

ಯಾವುದೇ ಭಾಷೆಯ ಮೂಲ ಉದ್ದೇಶ ಸಂವಹನ. ಸಂವಹನದ ಉದ್ದೇಶದಿಂದ ಬಳಸಲಾಗುವ ಯಾವುದೇ ಭಾಷೆಗಳಲ್ಲಿ ಮೇಲು ಕೀಳು ಎಂಬ ಭಾವವೇ ನಿಕೃಷ್ಟವಾದದ್ದು. ಜಗತ್ತಿನ ಮೂಲೆ ಮೂಲೆಗಳಲ್ಲಿ ಮನುಷ್ಯರು ಬಳಸುವ ಎಲ್ಲಾ ಭಾಷೆಗಳಿಗೂ ತನ್ನದೇ ಆದ...
Wordpress Social Share Plugin powered by Ultimatelysocial