Homeಮುಖಪುಟದೇಶ ವಿಭಜನೆಯ ವಾಸ್ತವ ಸತ್ಯಗಳು: ಭಾಗ- 3

ದೇಶ ವಿಭಜನೆಯ ವಾಸ್ತವ ಸತ್ಯಗಳು: ಭಾಗ- 3

- Advertisement -

ದೇಶ ವಿಭಜನೆ-1947 ಸಾವರ್ಕರ್ ಮತ್ತು ಸುಭಾಷ್‌ಚಂದ್ರ ಬೋಸ್

ಭಾರತ ಮತ್ತು ಪಾಕಿಸ್ತಾನಗಳು ಎರಡು ರಾಷ್ಟ್ರಗಳಾಗಿ ವಿಭಜನೆಗೊಂಡದ್ದರ ಹಿಂದಿರುವ ಸತ್ಯಾಂಶಗಳೇನು? 1920ರ ನಂತರ ಹಿಂದೂ ಮತ್ತು ಮುಸ್ಲಿಮರ ನಡುವಿನ ಬಿರುಕು ಹೆಚ್ಚುತ್ತಲೇ ಇರುವುದಕ್ಕೆ ಕಾರಣಗಳೇನು? ದೇಶ ವಿಭಜನೆಯಲ್ಲಿ ಸಾವರ್ಕರ್, ಜಿನ್ನಾ, ನೇತಾಜಿ ಸುಭಾಷ್‌ಚಂದ್ರ ಬೋಸ್ ಮತ್ತು ಮಹಾತ್ಮ ಗಾಂಧಿಯವರ ಪಾತ್ರವೇನು? ಇವುಗಳ ಆಂತರ್ಯದಲ್ಲಿರುವ ಸತ್ಯಾಂಶವನ್ನು ತಿಳಿದುಕೊಳ್ಳಬೇಕು.

ಪ್ರವೇಶಿಕೆ

ಭಾರತವು ನೂತನವಾಗಿ ಉದಯವಾದ ಸ್ವತಂತ್ರ ದೇಶ ಮಾತ್ರವೇ ಆಗಿರದೆ, ವಿಶ್ವದಲ್ಲೇ ಎರಡನೇ ಅತ್ಯಂತ ದೊಡ್ಡ ಜನಸಂಖ್ಯೆಯುಳ್ಳ ರಾಷ್ಟ್ರ ಮಾತ್ರವಷ್ಟೇ ಆಗಿರದೆ, ಮಧ್ಯಪ್ರಾಚ್ಯ ದೇಶಗಳಿಗೆ ನೇತೃತ್ವ ನೀಡಬಲ್ಲ ಸಾಮರ್ಥ್ಯವುಳ್ಳ ನೂತನ ದೇಶವಾಗಿ ಕೂಡಾ ಉದಯವಾಗಿತ್ತು. ಎರಡು ನೂರು ವರ್ಷಗಳ ಕಾಲ ನಮ್ಮನ್ನಾಳಿದ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಅಪಾರ ಸಾವುನೋವುಗಳನ್ನು ಅನುಭವಿಸಿ ಸುದೀರ್ಘ ಕಾಲ ನಡೆಸಿದ ಹೋರಾಟಗಳ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯವು ಲಭಿಸಿತ್ತು. ಬ್ರಿಟಿಷರ ನಿರ್ಗಮನವು ನಮಗೆ ಸಂತೋಷವನ್ನು ತಂದಿತ್ತಾದರೂ ದೇಶ ವಿಭಜನೆಯ ಭೀಕರತೆಯು ನಮ್ಮನ್ನು ಎದುರುಗೊಳ್ಳಲಿತ್ತು.

ಹಿಂದೂ ರಾಷ್ಟ್ರೀಯತೆಯ ಉದಯ

1920ರಿಂದ 1947ರ ಕಾಲಾವಧಿಯಲ್ಲಾದ ಬೆಳವಣಿಗೆಗಳ ಮೇಲೆ ನಾನು ನಿಮ್ಮ ಗಮನವನ್ನು ಸೆಳೆಯಲು ಪ್ರಯತ್ನಿಸುತ್ತೇನೆ. ಭಾಗ-ಒಂದು ಮತ್ತು ಎರಡರಲ್ಲಿ ಗಮನಿಸಿದಂತೆ, ಭಾರತದಲ್ಲಿ 1920ರ ದಶಕಕ್ಕೂ ಮುಂಚೆ ಧರ್ಮದ ಹೆಸರಿನಲ್ಲಿ ಹಿಂಸಾಚಾರಗಳು ಸಾಮಾನ್ಯ ಸಂಗತಿಗಳೇನೂ ಆಗಿರಲಿಲ್ಲ. ಆದರೆ 1920ರ ದಶಕದ ಹೊತ್ತಿಗೆ ಹಿಂದೂ ಮುಸ್ಲಿಂ ಹಿಂಸಾಚಾರಗಳು ಸಾಮಾನ್ಯ ಸಂಗತಿಗಳೆನಿಸಿ ಮುಸ್ಲಿಮರಲ್ಲಿ ಭೀತಿಗೆ ಕಾರಣವಾಗತೊಡಗಿದ್ದವು. ಕೆಲವೊಂದು ಮುಸ್ಲಿಂ ಗುಂಪುಗಳಲ್ಲಿ ಇಸ್ಲಾಂ ರಾಷ್ಟ್ರೀಯತೆಯ ಭಾವನೆಯು ಬೇರೂರಲು ತೊಡಗಿದ್ದು ಇದೇ ಅವಧಿಯಲ್ಲಿಯೇ. ಹಾಗೆಯೇ ಕೆಲವೊಂದು ಹಿಂದೂ ಗುಂಪುಗಳಲ್ಲಿ ಹಿಂದೂಗಳು ಅಪಾಯದಲ್ಲಿದ್ದಾರೆ ಎಂಬ ಭಾವನೆಯು ಮೊಳಕೆಯೊಡೆದು ಹಿಂದೂ ರಾಷ್ಟ್ರೀಯತೆಯ ಭಾವನೆಯೂ ಬೇರೂರತೊಡಗಿತು.

ವಿನಾಯಕ ದಾಮೋದರ ಸಾವರ್ಕರ್ ಹಿಂದೂ ರಾಷ್ಟ್ರೀಯತೆ ಎಂಬ ಪರಿಕಲ್ಪನೆಯನ್ನು ಮುನ್ನೆಲೆಯಲ್ಲಿ ಬಳಕೆಗೆ ತಂದ ಪ್ರಮುಖ ವ್ಯಕ್ತಿ. ಅವರನ್ನು ಅತಿಯಾಗಿ ಪ್ರೀತಿಸುವವರೂ ಇದ್ದಾರೆ; ಅತಿಯಾಗಿ ದ್ವೇಷಿಸುವವರೂ ಇದ್ದಾರೆ. ಅವರ ಜೀವನದ ಯಾವ ಹಂತವನ್ನು ಕುರಿತು ಆಲೋಚಿಸುತ್ತೇವೆ ಎಂಬುದರ ಮೇಲೆ ನಾವು ಬೆಳೆಸಿಕೊಂಡಿರುವ ಸೀಮಿತ ದೃಷ್ಟಿಯ ಗೋಜಲನ್ನು ಮೀರಿದ ವಾಸ್ತವಾಂಶ ಹೊರಹೊಮ್ಮುತ್ತದೆ.

ಸಾವರ್ಕರ್ ಮತ್ತು ಜಿನ್ನಾ ಇಬ್ಬರೂ ದೇಶಪ್ರೇಮಿಗಳೇ ಆಗಿದ್ದರು. ಸಾವರ್ಕರ್ ಅವರು ತಮ್ಮ ಸಹೋದರ ಗಣೇಶ್ ಸಾವರ್ಕರ್ ಜೊತೆ ಸೇರಿ ’ಅಭಿನವ್ ಭಾರತ್ ಸೊಸೈಟಿ’ಯನ್ನು ಪ್ರಾರಂಭಿಸಿದ್ದರಷ್ಟೇ ಅಲ್ಲದೆ 1857ರ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಬಣ್ಣಿಸಿ ಒಂದು ಪುಸ್ತಕವನ್ನೂ ರಚಿಸಿದ್ದರು. ಅವರು ಇಟಲಿಯ ಕ್ರಾಂತಿಕಾರಿ ಮಝಿನಿಯ ಕೆಲವು ಬರಹಗಳನ್ನೂ ಅನುವಾದಿಸಿದ್ದರು; ರಷ್ಯಾದ ಮಾರ್ಕ್ಸ್‌ವಾದಿ ಕ್ರಾಂತಿಕಾರಿ ಲೆನಿನ್‌ರನ್ನೂ ಭೇಟಿ ಮಾಡಿದ್ದರು. ಜಿನ್ನಾರಂತೆಯೇ ಅವರು ಕೂಡಾ ಮುಸ್ಲಿಮರಿಗೆ ಕೋಮು ಆಧಾರಿತ ಪ್ರತ್ಯೇಕ ಮತದಾನ ವ್ಯವಸ್ಥೆಯನ್ನು ಶಿಫಾರಸು ಮಾಡಿದ ಮಿಂಟೋ-ಮಾರ್ಲೆಸುಧಾರಣೆಯನ್ನು ವಿರೋಧಿಸಿದ್ದರು. ಆದರೆ ಅವರದ್ದು ಹಿಂಸಾಮಾರ್ಗದ ಪ್ರತಿರೋಧವಾಗಿತ್ತು. ಬ್ರಿಟಿಷ್ ಅಧಿಕಾರಿ ವಿಲಿಯಂ ಕರ್ಜನ್ ವೈಲೆಯನ್ನು ಹತ್ಯೆಗೈಯ್ಯುವಂತೆ ಅವರು ಮದನ್‌ಲಾಲ್ ಡಿಂಗ್ರಾರನ್ನು ಪ್ರಚೋದಿಸಿದ್ದರು. ಹಾಗೆಯೇ ಒಮ್ಮೆ ಅನಂತ್ ಲಕ್ಷಣ್ ಖರ್‌ಖರೆ ಎಂಬುವರಿಗೆ ಪಿಸ್ತೂಲನ್ನು ಒದಗಿಸಿ, ನಾಸಿಕ್‌ನ ಕಲೆಕ್ಟರ್ ಎ.ಎಂ.ಟಿ.ಜಾಕ್ಸನ್‌ನ ಹತ್ಯೆಗೈಯ್ಯುವಂತೆ ಪ್ರಚೋದಿಸಿದ್ದರು. ಈ ಪ್ರಯತ್ನವು ವಿಫಲಗೊಂಡು ಅವರನ್ನು ಸೆರೆಹಿಡಿಯಲಾಯಿತು. ಹಿಂಸಾತ್ಮಕ ಕಾರ್ಯಾಚರಣೆಗಳ ಅಪರಾಧದ ಮೇಲೆ ಬಂಧಿಸಲಾದ ಸಾವರ್ಕರ್‌ರನ್ನು ಅವರ ಸಮಕಾಲೀನ ಕ್ರಾಂತಿಕಾರಿಗಳಂತೆಯೇ ಕಾಲಾಪಾನಿ ಶಿಕ್ಷೆಗೆ ತಳ್ಳಲಾಯಿತು. ಈ ಎರಡು ಅಪರಾಧ ಪ್ರಕರಣಗಳಿಗಾಗಿ ಅವರಿಗೆ ಎರಡು ಅವಧಿಯ ಜೀವಾವಧಿ ಶಿಕ್ಷೆಗಳನ್ನು ವಿಧಿಸಲಾಗಿತ್ತು. ಸಾವರ್ಕರ್‌ಗೆ ಜೈಲು ಶಿಕ್ಷೆಯೇನೋ ಆಯಿತು. ಆದರೆ ಸೆರೆಮನೆಯ ಕಠೋರ ಶಿಕ್ಷೆಯಿಂದ ಎದೆಗುಂದಿದ ಅವರು ಕೆಲವು ತಿಂಗಳುಗಳ ನಂತರ ಕ್ಷಮಾದಾನ ಯಾಚಿಸಿ ಬ್ರಿಟಿಷ್ ಸರ್ಕಾರಕ್ಕೆ ಮೊದಲ ವಿಜ್ಞಾಪನಾ ಪತ್ರ ಕಳುಹಿಸಿದರು. ನಂತರದ ಹತ್ತು ವರ್ಷಗಳಲ್ಲಿ ಅವರು ಕ್ಷಮಾದಾನ ಯಾಚಿಸಿ ಸ್ವತಃ ಬರೆದ ವಿಜ್ಞಾಪನಾ ಪತ್ರಗಳ ಸಂಖ್ಯೆ ಆರು. ಸಾವರ್ಕರ್‌ರ ಕ್ಷಮಾದಾನ ಯಾಚಿಸಿ ಅವರ ಕುಟುಂಬದವರು ಬರೆದ ವಿಜ್ಞಾಪನ ಪತ್ರಗಳು ಎರಡು.

ಕ್ಷಮಾದಾನ ಯಾಚಿಸಿ ಬರೆದ ವಿಜ್ಞಾಪನಾ ಪತ್ರದಲ್ಲಿ ಸಾವರ್ಕರ್, “ತಾನು ಬ್ರಿಟಿಷ್ ಸರ್ಕಾರದ [’ಪೋಷಕರ’] ಬಾಗಿಲು ತಟ್ಟುತ್ತಿರುವ ಕಂದನೆಂದು ತನ್ನನ್ನು ಭಾವಿಸಬೇಕೆಂದೂ, ಬ್ರಿಟಿಷ್ ಸರ್ಕಾರದ ವಿರುದ್ಧದ ತನ್ನೆಲ್ಲಾ ಚಟುವಟಿಕೆಗಳನ್ನೂ ನಿಲ್ಲಿಸುವೆ”ನೆಂದೂ ವಾಗ್ದಾನ ಮಾಡಿದರು. ಕ್ಷಮಾದಾನ ಯಾಚಿಸಿ ಬರೆದ ವಿಜ್ಞಾಪನಾ ಪತ್ರಗಳ ನಂತರ ಅವರನ್ನೂ ಅವರ ಸಹೋದರನನ್ನೂ ಕಾಲಾಪಾನಿ ಜೈಲು ಶಿಕ್ಷೆಯಿಂದ ಬಿಡುಗಡೆಗೊಳಿಸಿ 1921ರಲ್ಲಿ ರತ್ನಗಿರಿ ಕಾರಾಗೃಹದಲ್ಲಿ ಬಂಧನದಲ್ಲಿಡಲಾಯಿತು. 1924ರವರೆಗೆ ಅವರು ಅಲ್ಲಿದ್ದರು. ಆ ಬಳಿಕ ಅವರನ್ನು ಅಲ್ಲಿಂದಲೂ ಬಿಡುಗಡೆ ಮಾಡಲಾಯಿತು.

ಸಾವರ್ಕರ್ “ಎಂದೆಂದಿಗೂ ಬ್ರಿಟಿಷ್ ಸರ್ಕಾರದ ವಿರುದ್ಧ ಚಟುವಟಿಕೆಯನ್ನು ಮುಂದುವರಿಸುವುದಿಲ್ಲ” ಎಂಬ ವಾಗ್ದಾನದ ಮೇಲೆ ಕ್ಷಮಾದಾನ ಕೋರಿ ವಿಜ್ಞಾಪನಾ ಪತ್ರಗಳನ್ನು ಬರೆದದ್ದು, ಬಂಧನಮುಕ್ತರಾಗಿ ಬ್ರಿಟಿಷರ ವಿರುದ್ಧ ತಮ್ಮ ಚಟುವಟಿಕೆಯನ್ನು ಮುಂದುವರಿಸಲು ಹೂಡಿದ ತಂತ್ರವಾಗಿತ್ತು ಎಂಬುದು ಕೆಲವರ ನಂಬಿಕೆ.

ಹಿಂದುತ್ವದ ಅಂತರಂಗ

ಒಬ್ಬ ಸ್ವಯಂಘೋಷಿತ ನಾಸ್ತಿಕನಾಗಿದ್ದ ಸಾವರ್ಕರ್‌ಗೆ ಹಿಂದುತ್ವ ಎಂಬುದು ಒಂದು ರಾಜಕೀಯ ಸಿದ್ಧಾಂತವಾಗಿತ್ತೇ ಹೊರತು ಧರ್ಮವಾಗಿರಲಿಲ್ಲ. ಅವರು ಶುದ್ಧ-ಆರ್ಯನ್-ರಕ್ತ ಎಂಬ ಜನಾಂಗೀಯ ನಾಜಿ ಸಿದ್ಧಾಂತದಲ್ಲಿ ನಂಬಿಕೆ ಹೊಂದಿದ್ದ ಹಿಟ್ಲರನ ಅಭಿಮಾನಿಯಾಗಿದ್ದರು. ಅವನಂತೆಯೇ ಶುದ್ಧ-ಹಿಂದೂ-ರಕ್ತ ಎಂಬ ಸಿದ್ಧಾಂತದಲ್ಲಿ ಸಾವರ್ಕರ್‌ಗೆ ಅಚಲ ನಂಬಿಕೆಯಿತ್ತು. ಸಿಖ್ಖರು, ಜೈನರು ಮತ್ತು ಬೌದ್ಧರನ್ನು ಹಿಂದೂಗಳೆಂದೂ ವಿಧರ್ಮೀಯರಾದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಹೊರಗಿನವರೆಂದೂ ಅವರು ವ್ಯಾಖ್ಯಾನಿಸುತ್ತಿದ್ದರು.

ಹಾಗಾದರೆ ಹಿಂದುತ್ವದ ಬಗ್ಗೆ ಅವರ ಖಚಿತ ಅಭಿಪ್ರಾಯ ಏನಾಗಿತ್ತು? ಅದು ಅವರಿಗೆ ಒಂದು ರಾಜಕೀಯ ಸಿದ್ಧಾಂತವೇ ಹೊರತು ’ಧರ್ಮ’ವಾಗಿರಲಿಲ್ಲ ಎಂದು ಮಾತನಾಡುವಾಗ, ಈ ಹಂತದಲ್ಲಿ ಹಿಂದೂ ರಾಷ್ಟ್ರೀಯತೆ ಮುಸ್ಲಿಂ ರಾಷ್ಟ್ರೀಯತೆ ಮತ್ತು ಭಾರತೀಯ ರಾಷ್ಟ್ರೀಯತೆಗಳಿಗೆ ಇರುವ ವ್ಯತ್ಯಾಸವನ್ನು ಗಮನಿಸಬೇಕು.

ಬಾಲಗಂಗಾಧರ ತಿಲಕ್

ಒಂದು ಕಡೆ ಹಿಂದುತ್ವ ರಾಜಕೀಯ ಸಿದ್ಧಾಂತದಲ್ಲಿ ನಂಬಿಕೆಯಿಟ್ಟ ಸಾವರ್ಕರ್‌ರಂತಹವರಿದ್ದರೆ ಮತ್ತೊಂದು ಕಡೆ ಇದಕ್ಕೆ ತದ್ವಿರುದ್ಧವೆಂಬಂತೆ ಬಾಲಗಂಗಾಧರ ತಿಲಕ್‌ರಂತಹ ದೇಶಾಭಿಮಾನಿ ಕಟ್ಟಾಳುಗಳು ಇದ್ದರು. ತಿಲಕರು ಕೂಡಾ ಹಿಂದೂಗಳೇ ಆಗಿದ್ದರು. ಸಾಮಾಜಿಕವಾಗಿ ಅವರದು ಕಡು ಸಂಪ್ರದಾಯಸ್ಥ ನಿಲುವು. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದನ್ನು ಅವರು ಕಟುವಾಗಿ ವಿರೋಧಿಸುತ್ತಿದ್ದರು. “ಮಹಿಳೆಯರಿಗೆ ಮತ್ತು ಬ್ರಾಹ್ಮಣರಲ್ಲದವರಿಗೆ ಶಿಕ್ಷಣ ನೀಡಿದರೆ ರಾಷ್ಟ್ರೀಯತೆಗೆ ಧಕ್ಕೆಯುಂಟಾಗುತ್ತದೆ” ಎಂದೇ ಅವರು ಹೇಳುತ್ತಿದ್ದುದುಂಟು. ಅಲ್ಲದೆ ಹೆಣ್ಣು ಮಕ್ಕಳ ವಿವಾಹದ ವಯೋಮಿತಿಯನ್ನು 10ರಿಂದ 12ಕ್ಕೇರಿಸಬೇಕು ಎಂಬಂತಹ ಹಲವಾರು ವಿಷಯಗಳಲ್ಲಿ ಅವರು ನಿಜಕ್ಕೂ ಕಡು ಸಂಪ್ರದಾಯಸ್ಥ ದೃಷ್ಟಿಕೋನ ಉಳ್ಳವರಾಗಿದ್ದರು. ಹೀಗಿದ್ದರೂ ಅವರ ರಾಷ್ಟ್ರೀಯತೆಯ ಸಿದ್ಧಾಂತವು ದೇಶದ ಸಮಸ್ತರನ್ನೂ ಒಳಗೊಳ್ಳುವ ಸಿದ್ಧಾಂತವಾಗಿತ್ತು.

ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಎಲ್ಲರನ್ನೂ ಒಳಗೊಳ್ಳುವ ಇರಾದೆ ಅವರದಾಗಿತ್ತು. “ನಮ್ಮ ಧರ್ಮವು ಬೇರೆ ಬೇರೆಯಾಗಿರಬಹುದು. ವಿಧರ್ಮೀಯ ಎಂದ ಮಾತ್ರಕ್ಕೆ ಯಾರೂ ಹೊರಗಿನವರಾಗಿಬಿಡುವುದಿಲ್ಲ. ಉದಾಹರಣೆಗೆ, ಅಹಮದ್‌ನಗರದ ಸುಲ್ತಾನನು ಹೊರಗಿನಿಂದ ಬಂದು ಈ ದೇಶದಲ್ಲಿ ನೆಲೆಸಿದ್ದಾನೆ. ಸ್ಥಳೀಯ ಉದ್ಯಮಗಳನ್ನು ಕಟ್ಟಿ ಬೆಳೆಸಬೇಕೆಂಬುದರಲ್ಲಿ ಆಸಕ್ತಿ ತೋರುತ್ತಿದ್ದಾನೆ. ಅವನ ಬಣ್ಣ ಚೆಂದವಿರಬಹುದು ಅಥವಾ ಇಲ್ಲದಿರಬಹುದು. ಅದು ಮುಖ್ಯವಲ್ಲ. ಅವನು ಮುಸ್ಲಿಮನೋ ಅಥವಾ ಇಂಗ್ಲೆಂಡಿನವನೋ ಆಗಿರಬಹುದು. ನಮ್ಮ ದೇಶದ ಜನತೆಯ ಒಳಿತಿಗಾಗಿ ಕೆಲಸ ಮಾಡುವಂತಹವನಾದರೆ ಅವನು ಹೊರಗಿನವನಾಗುವುದಿಲ್ಲ. ಬಹುಶಃ ಅವನು ಪ್ರಾರ್ಥನೆ ಸಲ್ಲಿಸಲು ನಾವು ಹೋಗುವ ಸ್ಥಳಕ್ಕೆ ಹೋಗದಿರಬಹುದು. ನಮ್ಮ ಮತ್ತು ಅವರ ನಡುವೆ ಅಂತರ್-ವಿವಾಹ ಅಥವಾ ಸಹ-ಭೋಜನ ವ್ಯವಸ್ಥೆ ಇಲ್ಲದಿರಬಹುದು. ಅದು ಅನಗತ್ಯ. ಅವನು ಎಲ್ಲಿಯವರೆಗೆ ಭಾರತ ದೇಶದ ಪರವಾಗಿ ನಿಲ್ಲುತ್ತಾನೋ ಅಲ್ಲಿಯವರೆಗೆ ಅವನು ಹೊರಗಿನವನಾಗುವುದಿಲ್ಲ. ನಮಗೆ ಹೊರಗಿನವನಾರು ಗೊತ್ತೇ? ಈ ಸರ್ಕಾರ”. ಹೀಗಿತ್ತು ಅವರ ವಾದಸರಣಿ.

ಜಿನ್ನಾ, ಬಾಲಗಂಗಾಧರ ತಿಲಕ್‌ರ ಅತ್ಯಂತ ಸಮೀಪವರ್ತಿಗಳಲ್ಲಿ ಒಬ್ಬರಾಗಿದ್ದರು. ಹಲವಾರು ರಾಜದ್ರೋಹದ ಆರೋಪ ಪ್ರಕರಣಗಳಲ್ಲಿ ಅವರು ತಿಲಕರ ಬಿಡುಗಡೆಗೆ ಸಹಾಯ ಮಾಡಿದ್ದರು ಕೂಡಾ. ಬ್ರಿಟಿಷರ ವಿರುದ್ಧ ನಡೆದ ಭಾರತೀಯ ರಾಷ್ಟ್ರೀಯ ಚಳವಳಿಯನ್ನು ಮುನ್ನಡೆಸಿದ ಖ್ಯಾತಿಯು ಮಹಾತ್ಮ ಗಾಂಧಿಯವರಿಗೆ ಸಲ್ಲುತ್ತದೆಯಾದರೂ ವಾಸ್ತವದಲ್ಲಿ ಅವರಿಗೂ ಮುಂಚೆಯೇ ತಿಲಕ್ ಭಾರತೀಯ ರಾಷ್ಟ್ರೀಯ ಚಳವಳಿಯನ್ನು ಪ್ರಾರಂಭಿಸಿದ್ದರು. ಆ ಕಾರಣಕ್ಕಾಗಿಯೇ ಅವರನ್ನು ’ಭಾರತೀಯ ಕ್ಷೆಭೆಯ ಜನಕ’ಎಂದು ಕರೆಯಲಾಗುತ್ತದೆ. 1905ರಲ್ಲಿ ಸ್ವದೇಶಿ ಚಳವಳಿಯನ್ನು ಪ್ರಾರಂಭಿಸಿದ ತಿಲಕ್ ಬಂಗಾಳ ವಿಭಜನೆಯನ್ನು ವಿರೋಧಿಸಿ ಜನಾಂದೋಲನವನ್ನು ಪ್ರಾರಂಭಿಸಿದ್ದರು.

ಆಗ ಬಂದರು ಗಾಂಧಿ

1916ರಲ್ಲಿ ಭಾರತಕ್ಕೆ ವಾಪಸಾದ ಗಾಂಧಿ ಭಾರತದ ಸ್ವಾತಂತ್ರ್ಯ ಚಳವಳಿಯನ್ನು ಪ್ರವೇಶಿಸಿದರು. ಆ ಹೊತ್ತಿಗೆ ತಿಲಕರಿಗೆ ಸುಮಾರು 60ರ ವಯಸ್ಸು ದಾಟಿತ್ತು. ಹೀಗಾಗಿ ಗಾಂಧಿ ಭಾರತೀಯ ರಾಷ್ಟ್ರೀಯತೆಯ ಹೊಸ ಮುಖವಾಗಿ ಕಾಣಿಸಿಕೊಳ್ಳುವಂತಾಗಿತ್ತು. ಜವಾಹರ್‌ಲಾಲ್ ನೆಹರೂ, ಸರ್ದಾರ್ ಪಟೇಲ್, ಮೌಲಾನಾ ಆಜ಼ಾದ್, ಸುಭಾಷ್‌ಚಂದ್ರ ಬೋಸ್, ಲಾಲ್‌ಬಹದ್ದೂರ್ ಶಾಸ್ತ್ರಿ, ಸಿ.ರಾಜಗೋಪಾಲಾಚಾರಿ, ಜಯಪ್ರಕಾಶ್ ನಾರಾಯಣ್ ಮತ್ತು ಭಗತ್‌ಸಿಂಗ್ ಈ ಹೋರಾಟದಲ್ಲಿ ಸೇರ್ಪಡೆಯಾದರು. ಹಲವಾರು ವಿಚಾರಗಳಲ್ಲಿ ಇವರುಗಳ ನಡುವೆ ಸೈದ್ಧಾಂತಿಕವಾದ ಭಿನ್ನ ಅಭಿಪ್ರಾಯಗಳಿದ್ದವು. ಆದರೆ
ಧರ್ಮದ ಹೆಸರಿನಲ್ಲಿ ದೇಶದ ಜನತೆಯನ್ನು ವಿಭಜಿಸುವ ಸಿದ್ಧಾಂತದಲ್ಲಿ ಇವರ್‍ಯಾರಿಗೂ ಸುತರಾಂ ನಂಬಿಕೆಯಿರಲಿಲ್ಲ ಎಂಬುದು ಇವರೆಲ್ಲರಲ್ಲಿ ಸಾಮಾನ್ಯವಾಗಿದ್ದ ಅಂಶವಾಗಿತ್ತು. ಇವರೆಲ್ಲರೂ ದೇಶವಾಸಿಗಳೆಲ್ಲರನ್ನೂ ಒಳಗೊಳ್ಳುವ ಐಕ್ಯತೆಯ ಸಿದ್ಧಾಂತದಲ್ಲಿ ಅಚಲ ನಂಬಿಕೆಯುಳ್ಳವರಾಗಿದ್ದರು.

ಸುಭಾಷ್‌ಚಂದ್ರ ಬೋಸ್ ಕಾಂಗ್ರೆಸ್‌ನ ಅಧ್ಯಕ್ಷರಾದಾಗ ಹಿಂದೂಮಹಾಸಭಾ ಅಥವಾ ಮುಸ್ಲಿಂಲೀಗ್‌ನ ಸದಸ್ಯತ್ವ ಹೊಂದಿರುವ ಯಾವುದೇ ವ್ಯಕ್ತಿಗೆ ಕಾಂಗ್ರ್ರೆಸ್ ಸದಸ್ಯತ್ವ ನೀಡಬಾರದು ಎಂಬ ನಿರ್ಬಂಧವನ್ನು ಹೇರಿದರು. ಭಗತ್‌ಸಿಂಗ್ ಕೂಡಾ ತಮ್ಮ ’ನವ್‌ಜವಾನ್ ಭಾರತ್ ಸಭಾ’ದ ಪ್ರಣಾಳಿಕೆಯಲ್ಲಿ ಇದೇ ನಿರ್ಬಂಧವನ್ನು ಹೇರಿದರು. ಕೋಮುವಾದಿ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಯಾವುದೇ ವ್ಯಕ್ತಿ ಕಾಂಗ್ರೆಸ್ ಅಥವಾ ’ನವ್‌ಜವಾನ್ ಭಾರತ್ ಸಭಾ’ದ ಸದಸ್ಯನಾಗುವುದು ಸಾಧ್ಯವಿರಲಿಲ್ಲ. ಭಗತ್‌ಸಿಂಗ್‌ನಂತೆಯೇ ರಾಮ್ ಪ್ರಸಾದ್ ಬಿಸ್ಮಿಲ್ಲಾ, ಅಶಫುಲ್ಲಾ ಖಾನ್, ಚಂದ್ರಶೇಖರ್ ಆಜಾದ್ ಎಲ್ಲರೂ ಭಾರತೀಯ ರಾಷ್ಟ್ರವಾದಿಗಳಾಗಿದ್ದರೇ ಹೊರತು ಹಿಂದೂ ರಾಷ್ಟ್ರವಾದಿಗಳಾಗಲೀ ಮುಸ್ಲಿಂ ರಾಷ್ಟ್ರವಾದಿಗಳಾಗಲೀ ಆಗಿರಲಿಲ್ಲ. ಭಗತ್‌ಸಿಂಗ್ ಒಬ್ಬ ಶುದ್ಧ ನಾಸ್ತಿಕನಾಗಿದ್ದ ಎಂಬುದು ನಮಗೆಲ್ಲಾ ತಿಳಿದಿರುವ ವಿಷಯವೇ ಆಗಿದೆ. ಆದರೆ ತಿಲಕ್, ಗಾಂಧಿ ಮತ್ತು ಸುಭಾಷ್‌ಚಂದ್ರ ಬೋಸ್ ಆಸ್ತಿಕರಾಗಿದ್ದರು. ದೇಶದ ಹಿತದೃಷ್ಟಿಯಿಂದ ಇವರುಗಳ ನಡುವೆ ಇದ್ದ ಸಂಬಂಧ ಆಶ್ಚರ್ಯ ಹುಟ್ಟಿಸುವಂತಹದ್ದು. ಇವರೆಲ್ಲರೂ ತಮ್ಮನ್ನು ಹಿಂದೂಗಳಾಗಿಯೂ ಭಾರತೀಯ ರಾಷ್ಟ್ರವಾದಿಗಳಾಗಿಯೂ ಪರಿಗಣಿಸಿದ್ದರು. ಹಾಗಾದರೆ ಇವರು ಹಿಂದೂ ರಾಷ್ಟ್ರವಾದಿಗಳಾಗಿರಲಿಲ್ಲವೇ?

ಹಿಂದೂ ರಾಷ್ಟ್ರವಾದಿಗಳು vs ಮುಸ್ಲಿಂ ರಾಷ್ಟ್ರವಾದಿಗಳು

ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮುಂಚೆ ನಾವು ಹಿಂದೂ ರಾಷ್ಟ್ರೀಯವಾದಿಗಳ ಹಾಗೂ ಭಾರತೀಯ ರಾಷ್ಟ್ರೀಯವಾದಿಗಳ ನಡುವೆ ಇರುವ ವ್ಯತ್ಯಾಸವನ್ನು ಗುರುತಿಸುವ ಅಗತ್ಯವಿದೆ. ಹಿಂದೂ ರಾಷ್ಟ್ರೀಯವಾದಿಗಳು ಹಿಂದೂರಾಷ್ಟ್ರ ನಿರ್ಮಾಣಕ್ಕೆ ಪ್ರಾತಿನಿಧ್ಯ ನೀಡುವ ಮತ್ತು ಇತರ ಧರ್ಮಗಳನ್ನು ಒಳಗೊಳ್ಳದಿರುವ ಪ್ರತ್ಯೇಕವಾದಿ ಸಿದ್ಧಾಂತದಲ್ಲಿ ನಂಬಿಕೆಯಿಟ್ಟವರು. ಈ ಸಿದ್ಧಾಂತದ ರೂವಾರಿ ಮತ್ತು ಪ್ರತಿನಿಧಿ ಸಾವರ್ಕರ್. ಮತ್ತೊಂದೆಡೆ ತಿಲಕ್, ಗಾಂಧಿ ಮತ್ತು ಬೋಸ್‌ರಂತಹ ಭಾರತೀಯ ರಾಷ್ಟ್ರವಾದಿ ಹಿಂದೂಗಳು ಭಾರತದ ರಾಷ್ಟ್ರೀಯತೆಯಲ್ಲಿ ನಂಬಿಕೆಯಿಟ್ಟು ಇತರೆ ಧರ್ಮಗಳನ್ನು ಅನ್ಯರೆಂದು ಭಾವಿಸದೆ ಎಲ್ಲರನ್ನೂ ಒಳಗೊಳ್ಳುವ ಹಿಂದೂಗಳು. ಧರ್ಮಗಳ ನಡುವೆ ಒಡಕುಂಟುಮಾಡಲು ಬಯಸದ ಈ ರಾಷ್ಟ್ರೀಯವಾದಿಗಳಿಗೆ ’ಹಿಂದೂ’ ಎಂದರೆ ಏಕತೆ, ಸಹಿಷ್ಣುತೆ ಮತ್ತು ಭ್ರಾತೃತ್ವವಾಗಿತ್ತು. ಈ ಸಂಗತಿ ಮೇಲ್ನೋಟಕ್ಕೆ ಸ್ವಲ್ಪ ವಿಚಿತ್ರವೆಂಬಂತೆ ತೋರಬಹುದು. ಇದು ಭಾರತಕ್ಕಷ್ಟೇ ಸೀಮಿತವಾದ್ದಲ್ಲ. ಯಹೂದಿ ರಾಷ್ಟ್ರವಾದಿಗಳ ಬಗೆಗೆನ ಪತ್ರಿಕಾ ವರದಿಗಳ ಪ್ರಕಾರ ಅವರು ರಾಷ್ಟ್ರಕ್ಕಿಂತ ಧರ್ಮವನ್ನೇ ಆದ್ಯತೆಯ ವಿಷಯವಾಗಿ ಪರಿಗಣಿಸುತ್ತಾರೆ. ರಾಷ್ಟ್ರವನ್ನು ಧರ್ಮದಿಂದಲೇ ಗುರುತಿಸಬೇಕು ಎಂಬ ನಂಬಿಕೆ ಜಗತ್ತಿನ ಇನ್ನೂ ಕೆಲವೊಂದು ದೇಶಗಳಲ್ಲಿ ಕಂಡುಬರುತ್ತದೆ.

ಮುಸ್ಲಿಂ ರಾಷ್ಟ್ರವಾದಿಗಳ ವಿಚಾರದಲ್ಲೂ ಇದ್ದದ್ದು ಇದೇ ಸ್ಥಿತಿ. ಸ್ವಾತಂತ್ರ್ಯ-ಪೂರ್ವದಲ್ಲಿ (1930ರ ದಶಕದಲ್ಲಿ) ರಹಮತ್ ಅಲಿ, ಸುಹಾವರ್ದಿಯಂತಹ ಮುಸ್ಲಿಂ ರಾಷ್ಟ್ರವಾದಿಗಳನ್ನು ಮುಸ್ಲಿಂ ಲೀಗ್ ಹೊಂದಿತ್ತು. 1930ರ ನಂತರ ಜಿನ್ನಾ ಕೂಡಾ ಮುಸ್ಲಿಂ ರಾಷ್ಟ್ರವಾದಿಯಾಗಿ ಬದಲಾಗಿಬಿಟ್ಟರು. ಮತ್ತೊಂದು ಕಡೆ, ಧರ್ಮಕ್ಕೂ ಮೊದಲು ರಾಷ್ಟ್ರ ಮತ್ತು ಧರ್ಮದ ಆಧಾರದ ಮೇಲೆ ಪ್ರತ್ಯೇಕ ರಾಷ್ಟ್ರ ನಿರ್ಮಾಣದ ಅಗತ್ಯವಿಲ್ಲ ಎಂದು ನಂಬಿದ್ದ ಮೌಲಾನಾ ಆಜಾದ್ ಮತ್ತು ಖಾನ್ ಅಬ್ದುಲ್ ಗಫಾರ್ ಖಾನ್‌ರಂತಹ ರಾಷ್ಟ್ರೀಯವಾದಿ ಮುಸ್ಲಿಮರಿದ್ದರು. ’ಅಖಿಲ ಭಾರತ ಸ್ವತಂತ್ರಮುಸ್ಲಿಂ ಸಮಾವೇಶ’ದಡಿ ಹಲವಾರು ರಾಷ್ಟ್ರೀಯವಾದಿ ಮುಸ್ಲಿಂ ಸಂಘಟನೆಗಳು ಒಗ್ಗೂಡಿದವು. “ನಾವು ಭಾರತೀಯರು ಮತ್ತು ಭಾರತ ನಮ್ಮ ಮನೆ” ಎಂಬುದು ಅವರ ಘೋಷಣೆಯಾಗಿತ್ತು. ಧರ್ಮದ ಆಧಾರದ ಮೇಲೆ ಪ್ರತ್ಯೇಕ ರಾಷ್ಟ್ರ ನಿರ್ಮಾಣವಾಗುವುದು ಅವರಿಗೆ ಬೇಕಿರಲಿಲ್ಲ. ಹೀಗಾಗಿ ಅವರೆಲ್ಲರೂ ಭಾರತ ವಿಭಜನೆಯಾಗುವುದನ್ನು ವಿರೋಧಿಸಿದರು. ಇವರ ಬಹು ದೊಡ್ಡ ವಿರೋಧಿಗಳಾಗಿ ನಿಂತುಕೊಂಡವರು ಮುಸ್ಲಿಂಲೀಗ್‌ನಂಥ ಪ್ರತ್ಯೇಕತಾವಾದಿಗಳು. 1930ರ ದಶಕದವರೆಗೆ ಭಾರತದಲ್ಲಿ ಹಿಂದೂ ರಾಷ್ಟ್ರವಾದ ಮುಸ್ಲಿಂ ರಾಷ್ಟ್ರವಾದ ಮತ್ತು ಭಾರತೀಯ ರಾಷ್ಟ್ರೀಯತೆ ಎಂಬ ಮೂರು ಭಿನ್ನ ಸೈದ್ಧಾಂತಿಕ ಅಲೆಗಳಿದ್ದವು ಎಂಬುದು ನಮ್ಮೆಲ್ಲರಿಗೂ ಸ್ಪಷ್ಟವಾಗುತ್ತದೆ. ಆನಂತರದಲ್ಲಿ ಸಂಭವಿಸಿದ ದೇಶ ವಿಭಜನೆಯು ಮೂಲತಃ ಈ ಮೂರು ಸಿದ್ಧಾಂತಗಳ ನಡುವಿನ ಹೋರಾಟದ ಕತೆಯೇ ಆಗಿದೆ.

ಪಾಕಿಸ್ತಾನ ನಿರ್ಮಾಣಕ್ಕಾಗಿ ರಹಮತ್ ಅಲಿ ಕರೆ

ರಹಮತ್ ಅಲಿ ಜನವರಿ 1933ರಲ್ಲಿ ಪಾಕಿಸ್ತಾನ ನಿರ್ಮಾಣದ ಬೇಡಿಕೆಯನ್ನು ತೀವ್ರಗೊಳಿಸಿದರು; ’ಮುಸ್ಲಿಮರು ಅಪಾಯದಲ್ಲಿದ್ದಾರೆ’, ’ಇಂದು ಇಲ್ಲವೇ ಎಂದೆಂದಿಗೂ ಇಲ್ಲ, ಬದುಕು ಇಲ್ಲವೇ ಸಾವು’ ಇಂತಹ ಶೀರ್ಷಿಕೆಗಳಡಿ ಕರಪತ್ರಗಳನ್ನು ಪ್ರಕಟಿಸಿದರು. ಭಾರತ ಒಕ್ಕೂಟದ ಐದು ಪ್ರಾಂತ್ಯಗಳಾಗಿದ್ದ ಪಂಜಾಬ್, ಆಫ್ಘನ್, ಸಿಂಧ್, ಬಲೂಚಿಸ್ತಾನ್ ಮತ್ತು ಕಾಶ್ಮೀರಗಳನ್ನು ಮುಸ್ಲಿಂರಾಷ್ಟದಲ್ಲಿ ವಿಲೀನಗೊಳಿಸಿ ಪ್ರತ್ಯೇಕ ಮುಸ್ಲಿಂ ರಾಷ್ಟ್ರೀಯತೆಯ ಸ್ವತಂತ್ರ ದೇಶವನ್ನು ಸೃಷ್ಟಿಸಿಕೊಳ್ಳಬೇಕೆಂಬ ಉಮೇದು ಅವರದಾಗಿತ್ತು.

ಹಿಂದೂ ಮಹಾಸಭಾದಿಂದ ದ್ವಿ-ರಾಷ್ಟ್ರ ನಿರ್ಣಯ ಸ್ವೀಕಾರ

ಮತ್ತೊಂದೆಡೆ, 1937ರಲ್ಲಿ ಹಿಂದೂಮಹಾಸಭಾ ತನ್ನ ಅಹಮದಾಬಾದ್ ಅಧಿವೇಶನದಲ್ಲಿ ದ್ವಿ-ರಾಷ್ಟ್ರ ನಿರ್ಣಯವನ್ನು ಸ್ವೀಕರಿಸಿತು. ದ್ವಿ-ರಾಷ್ಟ್ರ ಪರಿಕಲ್ಪನೆಯು ಆಗ ದಿಢೀರನೆ ಕಾಣಿಸಿಕೊಂಡದ್ದೇನೂ ಆಗಿರಲಿಲ್ಲ. 1923ರಷ್ಟು ಮುಂಚೆಯೇ ಸಾವರ್ಕರ್ ಎಸೆನ್ಷಿಯಲ್ಸ್ ಆಫ್ ಹಿಂದುತ್ವ ಪುಸ್ತಕದಲ್ಲಿ “ಭಾರತದಲ್ಲಿ ವಾಸ್ತವವಾಗಿ ಎರಡು ಪರಸ್ಪರ ವಿರುದ್ಧವಾದ ರಾಷ್ಟ್ರೀಯತೆಗಳಿವೆ. ಅವೇನೋ ಅಕ್ಕಪಕ್ಕವೆಂದು ಜೀವಿಸುತ್ತಿವೆ. ಆದರೆ ಕೆಲವು ರಾಜಕಾರಣಿಗಳು ಇದನ್ನೇ ಮುಂದಿಟ್ಟುಕೊಂಡು ಭಾರತವು ಸಾಮರಸ್ಯದ ರಾಷ್ಟ್ರ ಎಂದು ವರ್ಣಿಸುತ್ತಾರೆ. ಆದರೆ ವಾಸ್ತವವಾಗಿ ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಂ ಎಂಬ ಎರಡು ಪ್ರತ್ಯೇಕ ರಾಷ್ಟ್ರಗಳು ಅಸ್ತಿತ್ವದಲ್ಲಿವೆ” ಎಂದು ಬರೆದು ಈ ಪರಿಕಲ್ಪನೆಯನ್ನು ಬಿತ್ತಿದ್ದರು.

ಸಾವರ್ಕರ್ ಅವರನ್ನು ಬೆಂಬಲಿಸುವ ಜನ ಆ ಪುಸ್ತಕದಲ್ಲಿ ಅವರು ಎರಡು ಪ್ರತ್ಯೇಕ ರಾಷ್ಟ್ರಗಳ ಸೃಷ್ಟಿಗೆ ಒತ್ತಾಯಿಸಲಿಲ್ಲ ಎಂದು ಹೇಳಿಬಿಡುತ್ತಾರೆ. ಆದರೆ ಎರಡು ರಾಷ್ಟ್ರಗಳ ಅಸ್ತಿತ್ವ ಕುರಿತು ಮಾತನಾಡುವಾಗ ಅವರು ಏನು ಹೇಳುತ್ತಿದ್ದಾರೆ ಎಂಬುದೇ ಇಲ್ಲಿನ ಪ್ರಶ್ನೆಯಾಗಿದೆ. ಸೀಮಿತ ಹಕ್ಕುಗಳೊಂದಿಗೆ ದ್ವಿತೀಯ ದರ್ಜೆ ನಾಗರಿಕರಾಗಿ ಮುಸ್ಲಿಮರು ಬದುಕುವ ಒಂದು ರಾಷ್ಟ್ರವನ್ನು ಅವರು ನೋಡಲು ಬಯಸಿದ್ದರೇ? ಅಥವಾ ಪ್ರತ್ಯೇಕ ಆಡಳಿತ ಮತ್ತು ನಿಯಮಗಳ ವ್ಯವಸ್ಥೆಯ ಎರಡು ಪ್ರಭುತ್ವಗಳಿರುವ ರಾಷ್ಟ್ರವನ್ನು ನೋಡಲು ಬಯಸಿದ್ದರೇ? ಹಲವು ಹಿಂದೂರಾಷ್ಟ್ರವಾದಿ ಸಂಘಟನೆಗಳ ಬಳಿ ಇಂದಿಗೂ ಈ ಪ್ರಶ್ನೆಗೆ ಸ್ಪಷ್ಟವಾದ ಉತ್ತರವಿಲ್ಲ.

1939ರಲ್ಲಿ ಇಂಗ್ಲೆಂಡ್ ಜರ್ಮನಿಯ ವಿರುದ್ಧ ಯುದ್ಧ ಘೋಷಿಸಿದ್ದರಿಂದಾಗಿ ಎರಡನೇ ವಿಶ್ವ ಮಹಾಯುದ್ಧ ಆರಂಭವಾಯಿತು. ನಿರ್ಣಾಯಕ ಕ್ಷಣವಾದ 11 ಗಂಟೆ ಹೊಡೆದರೂ ಹಿಟ್ಲರ್ ಬ್ರಿಟನ್ನಿನ ಈ ಅಂತಿಮ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದರಿಂದ ಬ್ರಿಟನ್ ಮತ್ತು ಜರ್ಮನಿಗಳ ನಡುವಿನ ಯುದ್ಧವು ಮತ್ತೊಮ್ಮೆ ತೀವ್ರಗೊಂಡಿತು. ಭಾರತದ ವೈಸ್‌ರಾಯರಾಗಿದ್ದ ಲಿನ್‌ಲಿತ್‌ಗೊ ಜರ್ಮನಿಯ ವಿರುದ್ಧ ಭಾರತ ಕೂಡ ಹೋರಾಡಲಿದೆ ಎಂದು ಘೋಷಿಸಿದರು. ಆದರೆ ಕಾಂಗ್ರೆಸ್ ತಕರಾರು ಎತ್ತಿ, (1) ಬ್ರಿಟನ್ ಯುದ್ಧ ಮುಗಿದ ಬಳಿಕ ಭಾರತಕ್ಕೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯವನ್ನು ನೀಡುವುದಾದರೆ ಮತ್ತು (2) ತಕ್ಷಣ ಕೇಂದ್ರದಲ್ಲಿ ಹಂಗಾಮಿ ಸರ್ಕಾರ ರಚನೆಗೆ ಒಪ್ಪಿಗೆ ನೀಡುವುದಾದರೆ ಮಾತ್ರ ಭಾರತವು ಯುದ್ಧದಲ್ಲಿ ಬ್ರಿಟಿಷರಿಗೆ ಸಹಕಾರ ನೀಡಲು ಸಿದ್ಧವಿದೆ ಎಂಬ ಎರಡು ಷರತ್ತುಗಳನ್ನು ಮುಂದಿಟ್ಟಿತು. ಆದರೆ ಲಿನ್‌ಲಿತ್‌ಗೊ ಈ ಬೇಡಿಕೆಗಳನ್ನು ತಿರಸ್ಕರಿಸಿದರು.

(ನಾಲ್ಕು ಭಾಗಗಳ ಬರಹದ ಮೂರನೇ ಕಂತು ಇದು. ಮುಂದಿನ ವಾರ ಕೊನೆಯ ಭಾಗದಲ್ಲಿ: ಬ್ರಿಟಿಷರಿಗೆ ಸಾವರ್ಕರ್ ಬೆಂಬಲ, ಬ್ರಿಟಿಷರಿಗೆ ಬೆಂಬಲ ಘೋಷಿಸಿದ ಜಿನ್ನಾ, ಸುಭಾಷ್‌ಚಂದ್ರ ಬೋಸರನ್ನು ಹಿಂದಿನಿಂದ ಇರಿದ ಸಾವರ್ಕರ್, ಜಿನ್ನಾ ಮತ್ತು ಚರ್ಚಿಲ್, ಕ್ಯಾಬಿನೆಟ್ ಮಿಷನ್ ಪರಾಜಯ)

ಹಿಂದಿ ಮೂಲ: ಧ್ರುವ್ ರಾಥಿ (ಯುಟ್ಯೂಬ್)
(ಕನ್ನಡಕ್ಕೆ): ಪ್ರೊ. ಬಿ ಗಂಗಾಧರಮೂರ್ತಿ

ಧ್ರುವ್ ರಾಥಿ
ಭಾರತದ ಖ್ಯಾತ ಯುಟ್ಯೂಬರ್‌ಗಳಲ್ಲಿ ಒಬ್ಬರು. ಆರ್ಥಿಕತೆ, ಪರಿಸರ, ರಾಜಕೀಯ ವಿದ್ಯಮಾನಗಳು ಸೇರಿದಂತೆ ಹಲವು ವಿಷಯಗಳ ಮೇಲೆ ಇವರು ಮಾಡುವ ವಿಡಿಯೋಗಳು ಅಪಾರ ಜನಪ್ರಿಯತೆ ಗಳಿಸಿವೆ. ದೇಶವಿಭಜನೆಯ ಬಗ್ಗೆ ಇವರ ಹಿಂದಿ ವಿಡಿಯೋ ಪ್ರಸ್ತುತಿಗೆ ಪ್ರೊ. ಬಿ ಗಂಗಾಧರಮೂರ್ತಿ ಕನ್ನಡ ಬರಹ ರೂಪ ನೀಡಿದ್ದಾರೆ.


ಇದನ್ನೂ ಓದಿ: ದೇಶ ವಿಭಜನೆಯ ವಾಸ್ತವ ಸತ್ಯಗಳು: ಭಾಗ- 2

ಇದನ್ನೂ ಓದಿ: ದೇಶ ವಿಭಜನೆಯ ವಾಸ್ತವ ಸತ್ಯಗಳು: ಭಾಗ-ಒಂದು

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

ಯಾವುದೇ ಭಾಷೆಯ ಮೂಲ ಉದ್ದೇಶ ಸಂವಹನ. ಸಂವಹನದ ಉದ್ದೇಶದಿಂದ ಬಳಸಲಾಗುವ ಯಾವುದೇ ಭಾಷೆಗಳಲ್ಲಿ ಮೇಲು ಕೀಳು ಎಂಬ ಭಾವವೇ ನಿಕೃಷ್ಟವಾದದ್ದು. ಜಗತ್ತಿನ ಮೂಲೆ ಮೂಲೆಗಳಲ್ಲಿ ಮನುಷ್ಯರು ಬಳಸುವ ಎಲ್ಲಾ ಭಾಷೆಗಳಿಗೂ ತನ್ನದೇ ಆದ...
Wordpress Social Share Plugin powered by Ultimatelysocial